ಗಾಂಧಿ ವಿಶೇಷ

ಹೇ ರಾಮ್ !!

ಸಣಕಲು ಕಡ್ಡಿ
ರಪ್ಪನೆ ಕಣ್ಣಿಗೆ ರಾಚುವ ಎಲುಬಿನ ಹಂದರ
ಸದಾ ನೆತ್ತಿಗೆ ಹತ್ತಿದ ಶಾಂತಿ ಮಂತ್ರ; ಸತ್ಯದ
ಅಮಲು
ಕೈಯಲ್ಲೊಂದು ಊರುಗೋಲು
ಬೆನ್ನು ಎದೆ ಸುತ್ತಿದೊಂದು ಬಿಳಿ ಶಾಲು
ಕಣ್ಣಿಗಂಟಿದ ಚಷ್ಮ
ಮೊಣಕಾಲ ಮೇಲೆ ಪಂಚೆ
ಸುತ್ತ ನೆರೆದ ಒಂದಷ್ಟು ಜನರ ಸಂತೆ !
ನನ್ನೀ ವೇಷಕ್ಕೆ ಆತ ಗುರಿಯಿಟ್ಟು ಹೊಡೆದ !
ಸತ್ಯಕ್ಕಲ್ಲ; ಶಾಂತಿಗಲ್ಲ !
ಹೋಗಲಿ ಬೇಕಾಗಿದ್ದೇನೆಂದು
ಆತ ತೂರಿದ ಗುಂಡಿಗೂ ಅರಿವಿಲ್ಲ !
ಅದು ನನ್ನ ಗುಂಡಿಗೆಗೂ ಇನ್ನೂ ದಕ್ಕಿಲ್ಲ !
ನನ್ನ ಕೊಂದದ್ದಷ್ಟೆ –
ಆತ ತಿರುಗಿ ನೋಡಲಿಲ್ಲ !
ನಿರ್ಭಾವುಕನಾದನೇ, ಗಳಗಳ ಅತ್ತನೇ
ತಪ್ಪಿತಸ್ಥ ಮನೋಭಾವವಿತ್ತೇ
ಅಥವಾ ಸೆಟೆದು ನಿಂತನೇ
ನಾನು ಗಮನಿಸಲಿಲ್ಲ !!

ಪ್ರಾಣ ಹೋದದ್ದಷ್ಟೆ !
ಹೋಗುವಾಗ ಆ ಕ್ಷಣ ಹೊರಬಿತ್ತಲ್ಲ ಅದೇ
“ಹೇ ರಾಮ್” !!
ಬಾಯಿಂದ ಬಂದ ಮೂರಕ್ಷರದ ಈ
ಪದದಲ್ಲಿ
ಗುಂಡು ಎದೆಗೆ ಕಚ್ಚಿಕೊಂಡ
ಆ ಕ್ಷಣಗಳನು ನಾನು ಮರೆಯಲು ಯತ್ನಿಸಿದಂತೆಲ್ಲ
ದೇಶದ ಮೂಲೆ ಮೂಲೆಯಲ್ಲೂ
ರಾಜಕೀಯದ ಬೇಳೆ ಬೇಯಿಸಲು
ನನ್ನ ಹೆಸರ ಬಳಸಿಯೇ ತಯಾರಾಗುತ್ತದೆ
ಮೋಸದ ಅಡುಗೆ !
ನನ್ನ ಈ ಸತ್ತ
ಮೂಗಿಗೂ ರಪ್ ಎಂದು ರಾಚುತ್ತದೆ
ಕಮಟು ವಾಸನೆ !
ಗುಂಡು ತೂರಿದವನಿಗೂ ಇಲ್ಲಿ ಸಾವಿಲ್ಲ !
ತೂರಿಸಿಕೊಂಡ ನನಗೂ !!
ಗೋ ಹತ್ಯೆಗೆ ನನ್ನ ಹೆಸರು
ಹೆಂಡಕ್ಕೆ, ಸತ್ಯಕ್ಕೆ ಶಾಂತಿಗೆ ಅಹಿಂಸೆಗೂ ನನ್ನ
ಹೆಸರಿನ ತಳುಕು !
ಅನುಷ್ಠಾನಕ್ಕಿಲ್ಲದ ಉಪದೇಶಕ್ಕಷ್ಟೇ
ಸೀಮಿತವಾದ
ನನ್ನೀ ಹೆಸರಿಗಂಟಿದ ಇಂಥ ಪದಗಳ
ಚಲಾವಣೆಯಲ್ಲಿ
ಬಿಳಿ ಟೋಪಿ ಹಾಕಿದ ಮಂದಿಯ ಜೇಬಲ್ಲಿ
ಝಣಝಣ ಕಾಂಚಾಣ !
ಜನರ ತಲೆ ಸವರಿ ಕಟ್ಟಿದ ಗಗನಚುಂಬೀ ಭವನಗಳೇ
ಇವರ ವಾಸಸ್ಥಾನ !
ಗಾಂಧಿ ಜನಿಸಿದ ನಾಡಲ್ಲೇ ಗಳಿಗೆಗೊಂದು
ಕ್ಷಣಕ್ಕೊಂದು ಹಿಂಸೆ, ಅನಾಚಾರ, ಅತ್ಯಾಚಾರಗಳ
ಸರಣಿ ಸರಣಿ ದೃಷ್ಟಾಂತ !
ದೇಶದ ರಾಜಕೀಯದ ಪಡಸಾಲೆಯಲ್ಲಿ ನನ್ನ ಅಂತೆ
ನನಗೆ ಗುಂಡಿಕ್ಕಿದವನದೇ ಮಂತ್ರ !!
ನಮ್ಮಿಬ್ಬರನೂ ಇಲ್ಲಿ ಇಡಲಾಗುತ್ತದೆ ಸದಾ
ಜೀವಂತ !
ಮತ್ತೆ ಮತ್ತೆ ಹುಟ್ಟುತ್ತೇವೆ, ಸಾಯುತ್ತೇವೆ –
ಮುಕ್ತಿಯಿರಲಿ;ನೆಮ್ಮದಿಯೂ ಇಲ್ಲದೇ ಅತಂತ್ರ !!
ಸತ್ಯ ಶಾಂತಿ ಅಹಿಂಸೆಯ ಎನ್ನ ಕನಸುಗಳೆಲ್ಲ
ಆಗುವುದೆಂದು ಊರ್ಜಿತ !?
ಹೇ ರಾಮ್ ! ಹೇ ರಾಮ್ !
ಆಗುವುದೆಂದು ಊರ್ಜಿತ ?!

******************************************

ಸುಜಾತಾ ಲಕ್ಮನೆ

6 thoughts on “

  1. ಗಾಂಧಿ ಮತ್ತು ಅವರ ವಿಚಾರಗಳು ಕಣ್ಮುಂದೆ ಬಂದವು.ಧ್ವನಿಪೂರ್ಣ,ತೀಕ್ಷ್ಣ ವಾದ ಕವಿತೆ.

  2. ಖುಷಿ ಕೊಟ್ಟ ಗಾಂಧೀಜಿ ಮನನ… ನಾವು ಧೈರ್ಯಗೆಡದೆ, ಅಂಜದೆ ಮಾಡಲೇ ಬೇಕಾದ ಅಗತ್ಯ ಜತನ

Leave a Reply

Back To Top