ಲೆಕ್ಕಕ್ಕೊಂದು ಸೇರ್ಪಡೆ

ಲೇಖನ

ಲೆಕ್ಕಕ್ಕೊಂದು ಸೇರ್ಪಡೆ

ಶಾಂತಿ ವಾಸು

Relatives wearing personal protective equipment (PPE) prepare for cremation of a man who died of COVID19 at a crematorium in New Delhi on August 17. According to Union Health Ministry’s report, 2 people died of coronavirus every 3 minutes in the country in a span of 24 hours between August 16 and August 17. (Adnan Abidi / Reuters)

ಚೀನಿಯರ ಕೆಟ್ಟ ಮನಸ್ಥಿತಿಯ ಕನ್ನಡಿ ಕೊರೊನ, ಭಾರತವನ್ನು ಪ್ರವೇಶಿಸುವ ಮೊದಲೇ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ, ಸಂಪೂರ್ಣ ದೇಹವನ್ನು ಅದೇನೋ ಹೊಸತರಹದ ದಿರಿಸಿನಿಂದ ಮುಖಸಹಿತ ಮುಚ್ಚಿಕೊಂಡ ಜನರು ಪ್ಲಾಸ್ಟಿಕ್ ಚೀಲದಲ್ಲಿ ಬಿಗಿಯಾಗಿ ಸುತ್ತಿದ ನೂರಾರು ಜನರ ಮೃತದೇಹಗಳನ್ನು ಒಟ್ಟೊಟ್ಟಿಗೇ, ಆಳವಾದ ಒಂದೇ ಹಳ್ಳದಲ್ಲಿ ಹಾಕಿ ಮಣ್ಣು ಮುಚ್ಚುವುದು ಹಾಗೂ ಪೆಟ್ರೋಲ್ ಸುರಿದು ಸಾಮೂಹಿಕವಾಗಿ ಸುಡುವುದನ್ನು ನೋಡಿಯೇ ಪ್ರಪಂಚವು ನಡುಗಿಹೋಗಿತ್ತು. ಇದೇನು?? ಹೊಸದಾಗಿ ನಡೆದದ್ದೇ? ಅಥವಾ ಯಾವುದಾದರೂ ಸಿನಿಮಾಗಾಗಿ ಇರಬಹುದೇನೋ ಎಂದು ಗೊಂದಲಗೊಂಡ ಕೋಟ್ಯಂತರ ಭಾರತೀಯರಲ್ಲಿ ನಾನೂ ಒಬ್ಬಳು. ನಂತರದ ದಿನಗಳಲ್ಲಿ ಗುಂಪುಗುಂಪಾಗಿ ಚೀನೀ ಜನರು ನಿಂತಲ್ಲಿಯೇ ಹುಳುಗಳಂತೆ ಮುದುರಿ ಬೀಳುವ ದೃಶ್ಯವನ್ನು ಮಾಧ್ಯಮಗಳಲ್ಲಿ ತೋರಿಸಲಾಯಿತು. ಇದನ್ನು ಕಂಡ ನಮ್ಮನ್ನು ಹೆಚ್ಚಾಗಿ ಕಾಡಿದ್ದೆಂದರೆ, ಬಿದ್ದವರನ್ನು ಗಮನಿಸುವುದಾಗಲೀ ಏನಾಯಿತೆಂದು ತಿರುಗಿಯೂ ನೋಡುವ ವ್ಯವಧಾನವೋ ಕರುಣೆಯೋ ಇಲ್ಲದವರಂತೆ ಭಾವನಾರಹಿತರಾಗಿ ಓಡಾಡುತ್ತಿದ್ದ ಮಾಸ್ಕ್ ಧರಿಸಿದ ಚೀನಾ ಜನರ ಹೃದಯಹೀನತೆ. ಆಸ್ಪತ್ರೆಯ ದೃಶ್ಯಗಳಲ್ಲಿ ವೆಂಟಿಲೇಟರ್ ಹಾಕಿದ್ದರೂ ಉಸಿರಾಡಲು ಕಷ್ಟಪಡುವ ರೋಗಿಗಳ ನರಳಾಟ ಎಂಥಹವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಕೊರೊನ ಎಂಬ ಹೊಸ ಖಾಯಿಲೆಯಿಂದ ಸಾವಿರಾರು ಸಂಖ್ಯೆಯ ಜನರು ಬೀದಿ ಹೆಣಗಳಾಗುತ್ತಿದ್ದಾರೆಂದೂ ಅವರನ್ನೆಲ್ಲಾ ಸಾಮೂಹಿಕವಾಗಿ ಹೂಳುತ್ತಿದ್ದಾರೆಂಬುದನ್ನೂ ನಾವೆಲ್ಲಾ ಅರಗಿಸಿಕೊಳ್ಳುವಷ್ಟರಲ್ಲಿ ನಮ್ಮೆಲ್ಲರ ಮಧ್ಯೆ ತನ್ನ ಕದಂಬಬಾಹುಗಳನ್ನು ಚಾಚಲು ಪ್ರಾರಂಭಿಸಿಯೇ ಬಿಟ್ಟಿತ್ತು ಅದೇ ಚೀನಾದ ಅನಾಮಿಕ ವೈರಸ್.. ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯರ ಜೀವನದಲ್ಲೂ ಪ್ರಬಲ ಬದಲಾವಣೆ ತಂದ ಈ ವೈರಸ್ ಇಲ್ಲಿಯ ತನಕ ಲಕ್ಷಾಂತರ ಮಂದಿಯ ಪ್ರಾಣವನ್ನು ಬಲಿ ಪಡೆದಿದೆ. ಹಾಗೂ ಇನ್ನೂ ಮುಂದುವರೆಯುವ ಲಕ್ಷಣಗಳು ನಿಚ್ಚಳವಾಗಿವೆ..

ಪ್ರತಿ ಧರ್ಮದವರೂ ಅವರವರದೇ ರೀತಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಿ ಮೃತರ ಆತ್ಮವನ್ನು ಅಂತರಾತ್ಮನಲ್ಲಿ ವಿಲೀನಗೊಳಿಸುವ ಶ್ರೇಷ್ಠಪದ್ಧತಿಯನ್ನು ರೂಢಿಸಿಕೊಂಡು ಬಂದ ನಮ್ಮ ಭಾರತದಂತಹ ಪುಣ್ಯಭೂಮಿಯಲ್ಲಿ ಬದುಕಿದ ಮನುಷ್ಯರು ಬೀದಿ ಹೆಣಗಳಾಗಿಸುವುದನ್ನೂ, ಸತ್ತವರನ್ನು ದರದರನೇ ಎಳೆದೊಯ್ದು ಎತ್ತಿ ಹಳ್ಳಕ್ಕೆ ಬಿಸಾಡುವುದನ್ನು ಎಂದಿಗೂ ಯಾರೂ ಕಲ್ಪಿಸಿಯೂ ಇರಲಾರರು. ನಮ್ಮ ಸಂಸ್ಕೃತಿಯಲ್ಲಿಲ್ಲದ ಅನೇಕ ವಿಷಯಗಳಲ್ಲಿ ಅನ್ಯರನ್ನು ಅನುಸರಿಸುತ್ತಿರುವ ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನುಷ್ಯರ ಸಂಸ್ಕಾರವನ್ನೂ ಅಮಾನುಷ್ಯವಾಗಿ ನಡೆಸಿಬಿಟ್ಟೆವು. ತನ್ನ ದೇಹಕ್ಕೆಂಥಹ ಅವಮಾನವಾಗುತ್ತಿದೆ ಎಂದು ಮೃತರಿಗೆ ತಿಳಿಯುವುದಿಲ್ಲವಾಗಲೀ, ಹತ್ತಿರ ಸುಳಿಯಲು ಅವಕಾಶವಿಲ್ಲದೆ ದೂರದಲ್ಲಿ ನಿಂತು ನೋಡುತ್ತಿರುವ ಸಂಬಂಧಿಕರು ಅಥವಾ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದ ಸಾರ್ವಜನಿಕರಲ್ಲಿ ಎಂಥ ಭಾವನೆ ಹಾಗೂ ಭಯ ಹುಟ್ಟಿಸುತ್ತಿವೆ ಎಂದು ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ.

ಮೋದಿ ಬೇಕಾ ಮನಮೋಹನ್ ಸಿಂಗ್ ಬೇಕಾ ಎಂದು ಕೇಳಿ, ಒಂದನ್ನು ಒತ್ತಿ ಎರಡನ್ನು ಒತ್ತಿ ಎನ್ನುತ್ತಾ, ಮುಂದಿನ ಪ್ರಧಾನಿ ಯಾರೆಂಬ ದೊಡ್ಡ ಸಮೀಕ್ಷೆಯನ್ನು ಸರಳವಾಗಿ ಸದ್ದಿಲ್ಲದೇ ನಡೆಸಿ ನಿಂತಗಳಿಗೆಯಲ್ಲಿಯೇ ಮುಂದಿನ ಪ್ರಧಾನಿ ಯಾರೆಂದು ನಿಖರತೆ ಸಾರುವ ಆಪ್ಗಳು(app), ಕೇವಲ ಒಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳು ಉಳಿದಿವೆ, ಕೋವಿಡೇತರ ರೋಗಿಗಳು ಯಾವ ಆಸ್ಪತ್ರೆಯನ್ನು ಎಡತಾಕಬೇಕು ಎಂಬ ವಿವರ ಒದಗಿಸುವುದನ್ನು ನಿರಾಕರಿಸುತ್ತಿವೆ ಏಕೆ?? ಪ್ರಮಾದಗಳನ್ನು ತಡೆಯಲಾಗದ ಇಚ್ಚಾಶಕ್ತಿಯ ಕೊರತೆ, ಕೊರೊನಾದಿಂದ ಧಿಡೀರನೆ ವ್ಯಕ್ತಿಯನ್ನು ಕಳೆದುಕೊಂಡ ದುಃಖ, ಮುಂದೇನು ಎಂದು ದಿಕ್ಕುತೋರದೆ ಚಿಂತೆಗೊಳಗಾದ ಕುಟುಂಬಸ್ಥರಿಗೆ, ಕೊನೆಪಕ್ಷ ಮೃತರ “ಮರ್ಯಾದಾ ಶವಸಂಸ್ಕಾರ”ದ ಭರವಸೆ ನೀಡುವಲ್ಲಿ ವಿಫಲವಾಯಿತು.

ಸಾರ್ವಜನಿಕರಾದ ನಾವು ಅರಿತಿರಲೇಬೇಕಾದ ವಿಷಯವೆಂದರೆ ಯಾವುದೇ ಪಕ್ಷವಾಗಲಿ ಪ್ರಜಾಪ್ರಭುತ್ವದಲ್ಲಿ ಹಲವರು ಆಶಿಸಿದಂತೆ ಆಳಲು ಬರುವ ಜನನಾಯಕರ ಪ್ರಭುತ್ವವನ್ನೇ, ಆಯ್ಕೆ ಮಾಡದವರೂ ಸಹಾ ಒಪ್ಪಿಕೊಳ್ಳಬೇಕಾಗುತ್ತದೆ. ನಾವು ಆರಿಸಿದ ವ್ಯಕ್ತಿಯು ನಮ್ಮನ್ನು ಅವರಾಯ್ಕೆಯ ಹಲವರ ಅಧೀನಕ್ಕೆ ತಳ್ಳಿಬಿಡುವ ಸತ್ಯವನ್ನು ನಾವು ಅರಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಕೊರೊನಾದಂತಹ ಲೋಕವ್ಯಾಪಿ ಸಮಸ್ಯೆಯ ಸನ್ನಿವೇಶವನ್ನೆದುರಿಸಿದ ಯಾವುದೇ ಜನರು ನಮ್ಮ ಮಧ್ಯೆ ಇಲ್ಲ. ನಮ್ಮ ದೇಶದ್ದಲ್ಲದ ಹಂತಕ ವೈರಸ್ಸಿನ ದಮನ ಮಾಡುವ ಔಷಧ ಬರುವ ತನಕ ಸಾರ್ವಜನಿಕರಾದ ನಮ್ಮ ಜವಾಬ್ದಾರಿಯೂ ದೊಡ್ಡದಿದೆ. ಆದರೆ ಅದನ್ನು ಸರಳಗೊಳಿಸಿಕೊಂಡು,ಆದಷ್ಟು ಮನೆಯಲ್ಲಿರುವುದು, ಹೊರಹೋಗುವಾಗ ಮೂಗುಬಾಯಿ ಮುಚ್ಚುವ ಮಾಸ್ಕ್ ಧರಿಸುವುದು, ಸೋಪಿನಿಂದ ಆಗಾಗ ಕೈಗಳನ್ನು ತೊಳೆಯುವುದರಿಂದ ಕೊರೊನ ತಡೆಯಬಹುದೆಂದಾದರೆ, ಇವೆಲ್ಲವನ್ನು ಅನುಸರಿಸಿ ಹೊಸ ಔಷದಕ್ಕೆ ಪ್ರಯೋಗ ಶಿಶುವಾಗುವುದನ್ನು ಹಾಗೂ ಸರ್ಕಾರೀ ಲೆಕ್ಕ ಪುಸ್ತಕದ ಖಾಯಿಲೆಗೋ ಅಥವಾ ಸಾವಿಗೋ ನಾವು ಒಂದು ಸಂಖ್ಯೆಯಾಗುವುದನ್ನು ತಪ್ಪಿಸಬಹುದು.

***********************

Leave a Reply

Back To Top