ಬೊಗಸೆ ತುಂಬಾ ಕನಸು

ಪುಸ್ತಕ ಪರಿಚಯ

ಬೊಗಸೆ ತುಂಬಾ ಕನಸು

ಬೊಗಸೆ ತುಂಬಾ ಕನಸು
ಲೇಖಕರು: ಡಾ. ಬಿ. ಪ್ರಭಾಕರ ಶಿಶಿಲ ಸುಳ್ಯ)
ಪ್ರಕಾಶಕರು: ರಾಜ್ ಪ್ರಕಾಶನ, ಮೈಸೂರು
ಪುಟಗಳು: 688
ಬೆಲೆ: 650 ರೂಪಾಯಿಗಳು

ಸ್ವಾತಂತ್ರ್ಯ ಎಂಬುದು ದೇವರಿಗಿಂತ ದೊಡ್ಡ ಮೌಲ್ಯ! – 

ಡಾ| ಪ್ರಭಾಕರ ಶಿಶಿಲ

ಒಂದಾನೊಂದು ಕಾಲದಲ್ಲಿ ಚಂದ್ರಾವತಿ. ಬಿ ಆಗಿ ಬದುಕುತ್ತಿದ್ದ ನನ್ನನ್ನು ಚಂದ್ರಾವತಿ ಬಡ್ಡಡ್ಕ ಆಗಿಸಿದ್ದು ನಮ್ಮ ಅರ್ಥಶಾಸ್ತ್ರ ಉಪನ್ಯಾಸಕರಾದ ಮಾನ್ಯ ಡಾ| ಪ್ರಭಾಕರ ಶಿಶಿಲ ಸರ್. ನಮ್ಮ ಕಾಲೇಜು ದಿನಗಳ ವೇಳೆಯಲ್ಲಿ, ಸ್ವಂತಿಕಾ ಪ್ರಕಾಶನದಿಂದ ಪುಸ್ತಕ ಪ್ರಕಟವಾಗುವ ವೇಳೆ, ಅದರ ಸದಸ್ಯರ ಪಟ್ಟಿಯಲ್ಲಿ ನಮ್ಮನ್ನೆಲ್ಲ ಸೇರಿಸಿದ್ದರು. ಅಲ್ಲಿ ನಾನು, ನನ್ನನ್ನೇ ನಾನು ಚಂದ್ರಾವತಿ ಬಡ್ಡಡ್ಕ ಅಂತ ಕಂಡು ಖುಷಿಗೊಂಡಿದ್ದೆ-ಪುಳಕಿತಳಾಗಿದ್ದೆ. ಅಲ್ಲಿಂದ ಖಾಯಂ ಆಗಿ ಬಡ್ಡಡ್ಕ ನಾನು ಹೋದಲ್ಲೆಲ್ಲ ನನ್ನ ಹೆಸರಿನ ಜೊತೆಗಿದೆ.

*

ಸದ್ರೀ ಶಿಶಿಲರ ಆತ್ಮ ಕಥನ ‘ಬೊಗಸೆ ತುಂಬಾ ಕನಸು’. ದಣಿವರಿಯದ, ದಣಿವಿಲ್ಲದ ಬರಹಗಾರರಾಗಿರುವ ಶ್ರೀಯುತರ ಈ ಕನಸನ್ನು ಇತ್ತೀಚೆಗೆ ಓದಿದಾಗ ಒಂದೆರಡು ಮಾತು ಬರಿಯೋ ತುಡಿತ ಒದ್ದುಕೊಂಡು ಬಂದಿತ್ತು. ಇನ್ನೇನೋ ಕೆಲಸಕಾರ್ಯಗಳಲ್ಲಿ ನಿರತಳಾಗಿ ಬಿದ್ದು ಹೋಗಿದ್ದರಿಂದ ಮೀನಾ-ಮೇಷಾವಾಗಿ ಇಂದಿಗೆ ಬಂದು ನಿಂತಿದೆ.

ಪುಸ್ತಕ ಬಿಡುಗಡೆಯ ಬಳಿಕ ಸುಳ್ಯದ ಶ್ರೀದೇವಿ ಪುಸ್ತಕ ಮಳಿಗೆಯಲ್ಲಿ ಪುಸ್ತಕ ಲಭ್ಯವಿದೆ ಎಂದು ಗೊತ್ತಾದ ತಕ್ಷಣ ಹೋಗಿ ಪುಸ್ತಕ ‘ಕೊಂಡು’ ತಂದಿದ್ದೆ (ಇದನ್ನು ಯಾಕೆ ಒತ್ತಿ ಹೇಳುತ್ತೇನೆಂದರೆ ಕಾಲೇಜು ದಿನಗಳಿಂದಲೇ ಅವರ ಧ್ಯೇಯವಾಕ್ಯ ‘ಪುಸ್ತಕ ಕೊಂಡು ಓದಿ’ ಕಿವಿಗೆ ಬೀಳುತ್ತಲೇ ಇತ್ತಲ್ಲ). ಹೀಗೆ ಕೊಂಡು ತಂದ ಬಳಿಕ, ಬೇರೆ ಕೆಲಸಗಳೊಂದಿಗೇ 688 ಪುಟಗಳ ಬೃಹತ್ ಪುಸ್ತಕವನ್ನು ನಾಲ್ಕೈದು ದಿನಗಳಲ್ಲಿ ಮಧ್ಯರಾತ್ರಿಯ ತನಕವೂ ಕುಳಿತು, ನಿಂತು, ಒರಗಿ, ಅಡ್ಡಬಿದ್ದು ಗಬಗಬ ಓದಿ ಮುಗಿಸಿದ್ದೆ. ಪುಸ್ತಕದಲ್ಲಿ ಬರುವ ಕೆಲವು ಪಾತ್ರಗಳನ್ನು, ಕ್ಷಣಗಳನ್ನು ನಾನು ಲೈವ್ ಆಗಿ ಕಂಡಿದ್ದೇನೆ ಮತ್ತು ಬೆರೆತಿದ್ದೇನೆ. ಇನ್ನು ಕೆಲವು ಚಿರಪರಿಚಿತ, ಮತ್ತೆ ಹಲವು ಅರೆ ಪರಿಚಿತ ಮತ್ತು ಬಹಳವು ಅಪರಿಚಿತ. ಅಗಾಧವಾದ ಈ ಪುಸ್ತಕವನ್ನು ಓದಿ ಕೆಳಗಿರಿಸಿದಾಗ ಮನದಲ್ಲಿ ನನಗೆ ಅಬ್ಬಾಬ್ಬಾ ಎಂಬ ಉದ್ಗಾರ ಹೊರಡಿಸದಿರಲಾಗಲಿಲ್ಲ. ಇದರಲ್ಲಿನ ಜೀವನ ಕಥನ ಹಾಗಿದೆ.

ಕುಂಡಪ್ಪ, ಸುಬ್ಬಪ್ಪನಾಗದೆ ಪ್ರಭಾಕರನಾಗಿ ಪ್ರಭೆಯನ್ನು ಬೀರಬೇಕು ಎಂಬ ಅವರ ಅಮ್ಮನ ಕನಸನ್ನು ನನಸಾಗಿಸಿದ್ದಾರೆ. ಅಂತೆಯೇ ಆರಂಭದಲ್ಲೇ ಹೇಳುತ್ತಾರೆ, ಅಜ್ಜಿ ನನಗೆ ಕನಸು ಕಾಣಲು ಕಲಿಸಿದರು; ನಾನು ಕನಸು ಕಾಣತೊಡಗಿದೆ. ಕನಸುಗಳನ್ನು ಸಾಕ್ಷಾತ್ಕರಿಸಲು ಯತ್ನಿಸಿದೆ. ಕನಸುಗಳಲ್ಲೇ ಜೀವಿಸಿದೆ. ಈಗಲೂ ಕನಸು ಕಾಣುತ್ತಿದ್ದೇನೆ! ಅದನ್ನೇ ನಿಮಗೆ ಕೊಡುತ್ತಿದ್ದೇನೆ, ಬೊಗಸೆ ತುಂಬಾ ಕನಸು! ಅನ್ನುತ್ತಾ ತಮ್ಮ ಬಾಲ್ಯದಿಂದ ಹಿಡಿದು ಕಳೆದ ವರ್ಷ ಪುಸ್ತಕ ಪ್ರಕಟಗೊಳ್ಳುವ ತನಕದ ತಮ್ಮ ಅಗಾಧವಾದ ಜೀವನಾನುಭವಗಳನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಬಿಕಾಂ ವಿದ್ಯಾರ್ಥಿನಿಯಾಗಿ ನೆಹರೂ ಸ್ಮಾರಕ ಮಹಾವಿದ್ಯಾಲಯಕ್ಕೆ ಸೇರುವ ಮುನ್ನ ಶಿಶಿಲ ಸರ್ ಅವರನ್ನು ನಾನು ನೋಡಿರಲಿಲ್ಲ. ಆದರೆ, ಅವರ ಬಗ್ಗೆ ಕೇಳಿದ್ದೆವು. 80ರ ದಶಕದಲ್ಲಿ ಸುಳ್ಯದಂತ ಚಿಕ್ಕ ಊರಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದ ಅವರು ಹಲವರಿಗೆ ಹಲವು ಭಾವಗಳಲ್ಲಿ ಬಿಂಬಿತವಾಗಿದ್ದರು. ಹಲವಾರು ಕೃತಿಕರ್ತ, ಯಕ್ಷಗಾನ ಪಾತ್ರಧಾರಿ ಎಲ್ಲವೂ ಆಗಿದ್ದ ಅವರ ಬಗೆಗೆ ಎನ್ನೆಂಸಿ ಸೇರುವಾಗ ಒಂದು ಬೆರಗಿತ್ತು. ಅದಲ್ಲದೆ, ನಾನು ಅ..ಆ..ಇ..ಈ ಕಲಿತ ಬಡ್ಡಡ್ಕ ಶಾಲೆಯ ಸಂಸ್ಥಾಪಕರಾದ, ಅಪ್ರತಿಮ ಈಡುಗಾರರೂ ಆಗಿದ್ದ ದಿ| ಬಡ್ಡಡ್ಕ ಅಪ್ಪಯ್ಯಗೌಡರ ಬೇಟೆಯ ಅನುಭವದ ಕುರಿತ ‘ಶಿಕಾರಿಯ ಸೀಳುನೋಟ’ ಪುಸ್ತಕ ಬರೆದಿದ್ದರು. ಹಾಗಾಗಿ ಕುತೂಹಲವೂ ಹೆಚ್ಚೇ ಇತ್ತು. ಆದರೆ, ಅವರ ಸರಳ ವ್ಯಕ್ತಿತ್ವ, ಅಂತರ ಕಾಯ್ದುಕೊಳ್ಳದೆ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅವರು ನಮಗೆ ಅಚ್ಚರಿ ಮೂಡಿಸಿದ್ದರು. ಮೇಲಿನಿಂದ ಸರಳವಾಗಿ ಕಂಡರೂ ಒಳಗಿನ ಅವರ ಗಟ್ಟಿತನ ಮತ್ತು ಕಾವು ನಿಜವಾಗಿಯೂ ಏನು ಎಂಬುದು ಪೂರ್ಣವಾಗಿ ತಿಳಿಯಬೇಕಿದ್ದರೆ ಬೊಗಸೆ ತುಂಬಾ ಕನಸನ್ನು ನಮ್ಮ ಬೊಗಸೆಯಲ್ಲಿ ಹಿಡಿದು ಓದಿಯೇ ತಿಳಿದುಕೊಳ್ಳಬೇಕು.

ಬಡತನದಲ್ಲೇ ಹುಟ್ಟಿ ಬೆಳೆದರೂ, ಕಡುಕಷ್ಟದಿಂದಾಗಿ ಹೊಟ್ಟೆಗೆ ಸಾಕಷ್ಟು ಆಹಾರವಿಲ್ಲದಿದ್ದರೂ, ಉಡಲು-ತೊಡಲು ಸರಿಯಾದ ಬಟ್ಟೆ ಇಲ್ಲದಿದ್ದರೂ, ಇದಕ್ಕೂ ಪ್ರತಿಭೆಗೂ, ಯಶಸ್ಸಿಗೂ ತಾಳಮೇಳವಿಲ್ಲ ಎಂಬುದನ್ನು ಬುದುಕಿ ತೋರಿದವರು. ಅವರ ಬಾಲ್ಯದ ಜೀವನವನ್ನು ಓದುತ್ತಿದ್ದಾಗ ಕೆಲವೆಡೆ ಗಂಟಲುಬ್ಬಿ ಬಂದಿತ್ತು. ಅರಸಿನಮಕ್ಕಿ ಶಾಲೆಯಲ್ಲಿ ಏಳನೇ ಕ್ಲಾಸು ಕಲಿಯುತ್ತಿದ್ದಾಗ ರಾತ್ರಿಯ ಸ್ಪೆಷಲ್ ಕ್ಲಾಸಿಗಾಗಿ ಅಲ್ಲೇ ಉಳಿಯುವ ಸಂದರ್ಭದಲ್ಲಿ, ಮಾವ ತಂದು ಕೊಡುತ್ತಿದ್ದ ಬುತ್ತಿಯನ್ನು ಸಮ ಪಾಲುಮಾಡಿ ಮೂರು ಹೊತ್ತಿಗೆ ಭರಿಸಿಕೊಳ್ಳಬೇಕಿತ್ತು ಎಂದು ದಾಖಲಿಸುತ್ತಾ ಹೋಗುತ್ತಾರೆ ಇಂಥ ಘಟನೆಗಳು ಬೇಕಾದಷ್ಟಿವೆ. ಕಷ್ಟಾತಿಕಷ್ಟದಿಂದಾಗಿ ಇನ್ನೇನು ಶಾಲೆ ಕಲಿಕೆ ಕೊನೆಗೊಂಡಿತು, ಕೃಷಿ ಕಾರ್ಮಿಕನಾಗಿಯೋ ಇಲ್ಲ ಟೈಲರ್ ಆಗಿಯೋ ಮುಂದುವರಿಯುವುದೇ ಮುಂದಿನ ದಾರಿ ಎಂದಾಗ, ಮತ್ತೆಲ್ಲೋ ಇನ್ನಾವುದೋ ಎಳೆಸಿಕ್ಕಿ ವಿದ್ಯೆ ಮುಂದುವರಿದಿದೆ. ಒಂದು ಹಂತದಲ್ಲಿ ಹತ್ತನೇ ಕ್ಲಾಸು ಬಳಿಕ ಕಲಿಕೆ ನಿಂತೇ ಹೋಗಿ ಅಳಿಕೆಯಲ್ಲಿ ವಲಲನಾಗಿ ಮತ್ತೆ ಬ್ರೇಕ್ ತಗೊಂಡು ಮುಂದೆ ಸಾಗಿದ್ದು ಎಲ್ಲವೂ ಅನೂಹ್ಯ

.

ಅರಸಿನಮಕ್ಕಿ ಶಾಲೆಯ ಹೆಡ್ಮಾಸ್ಟ್ರು “ಇವನು ಮುಂದೊಂದು ದಿನ ಒಂದೋ ಒಳ್ಳೆಯ ಯಕ್ಷಗಾನ ಕಲಾವಿದನಾಗುತ್ತಾನೆ ಇಲ್ಲವೇ ಸಾಹಿತಿಯಾಗುತ್ತಾನೆ” ಅಂದಿದ್ದರಂತೆ. ಅವರಂದಂತೆ, ಒಬ್ಬ ಆದರ್ಶನೀಯ ಉಪನ್ಯಾಸಕ ಹಾಗೂ ಸಾಹಿತಿ, ಕಲಾವಿದ ಎಲ್ಲವೂ ಆಗಿದ್ದಾರೆ. ಅಂತೆಯೇ, ಹಾಸನ ಕಾಲೇಜಿನಲ್ಲಿ ಒಂದು ವರ್ಷ ಉಪನ್ಯಾಸಕರಾಗಿದ್ದು, ಬೀಳ್ಕೊಳ್ಳುವ ವೇಳೆ ಅವರ ವಿದ್ಯಾರ್ಥಿನಿ ನಿಶಾ ಎಂಬವರು, “ನೀವು ಎಲ್ಲಿ ಹೋದ್ರು ಸಕ್ಸಸ್ ಆಗ್ತೀರಿ. ನಿಮ್ಮಲ್ಲಿ ಪೊಟೆನ್ಷಿಯಲ್ ಇದೆ” ಅಂದಿದ್ದರಂತೆ. ಇದನ್ನು ಅವರ ಹೆಜ್ಜೆ ಗುರುತು ಮೂಡಿದಲ್ಲೆಲ್ಲ ಕಾಣಬಹುದು.

ತರಗತಿಯಲ್ಲಿ ಅರ್ಥಶಾಸ್ತ್ರ ಹೇಳಲು ಹೊರಟರೆ ವಿದ್ಯಾರ್ಥಿಗಳನ್ನು ಸೆಳೆದು ಪಾಠಕೇಳಿಸುವ ಪರಿ ಆಕರ್ಷಣೀಯ. “ರೇಷ್ಮೆ ಹುಳು ಹಿಪ್ಪುನೇರಳೆ ಎಲೆಯನ್ನು ತಿಂದಂತೆ”. ಗ್ಯಾಪೇ ಇಲ್ಲದಂತೆ ನಿರರ್ಗಳವಾಗಿ ಪಠಿಸುತ್ತಿದ್ದರೆ, ಬೋರೇ ಆಗದಂತೆ ವಿದ್ಯಾರ್ಥಿಗಳು ಮಂತ್ರ ಮುಗ್ದರಾಗಿ ಕೇಳುತ್ತಿದ್ದರು. ಹಳ್ಳಿಗಾಡಿನ ಕನ್ನಡಶಾಲೆಗಳಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂಗ್ಳೀಷು ಬರುವುದಿಲ್ಲ ಎಂಬ ಅರಿಮೆಯನ್ನು ಹೋಗಲಾಡಿಸಲು ಅವರು ಕನ್ನಡದಲ್ಲಿ ಬರೆದ ಅರ್ಥಶಾಸ್ತ್ರ ಪುಸ್ತಕಗಳು ನೆರವಾಗಿವೆ. ಕನ್ನಡದಲ್ಲಿ ಅರ್ಥಶಾಸ್ತ್ರ ಪುಸ್ತಕಗಳನ್ನು ಬರೆದು ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಬರೆಯಲು ಪ್ರೇರೇಪಿಸಿದ್ದಾರೆ ಕೂಡ.

ಒಬ್ಬ ಅಪ್ರತಿಮ ಸಂಘಟಕ. ಇದು ಅವರ ಬಾಲ್ಯದಿಂದಲೇ ಕಂಡು ಬರುತ್ತಿದೆ. ಪ್ರೈಮರಿ ಶಾಲಾ ದಿನಗಳಲ್ಲಿ ಲಾಗ ಹಾಕಿ ಬೊಬ್ಬೆ ಹೊಡೆಯುವಾಗ, ಹೋದಲ್ಲೆಲ್ಲ ಸಮವಯಸ್ಕರನ್ನು ಕೂಡಿಸಿ ಭಜನೆ ಮಾಡುವಾಗ, ಉಜಿರೆಯ ಸಿದ್ಧವನದಲ್ಲಿ ತರಲೆಗಳನ್ನು ಮಾಡಿದಾಗ, ಸುಳ್ಯದಲ್ಲಿ ಸ್ವಂತಿಕಾ ಪ್ರಕಾಶನ, ಅಭಿನಯ ಸುಳ್ಯ, ತೆಂಕುತಿಟ್ಟು ವೇದಿಕೆಗಳಲ್ಲಿ ತೊಡಗಿಕೊಂಡಾಗ, ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಚಾರಣ, ಜಲಪಾತ, ಸೈಕಲ್ ಜಾಥ ಎಂದು ತಿರುಗಾಡಿದಾಗ, ರೋಟರಿ ಅಧ್ಯಕ್ಷರಾಗಿ ಹತ್ತು ಹಲವುಕಾರ್ಯಕ್ರಮಗಳನ್ನು ನಡೆಸಿದಾಗ… ಅಲ್ಲಲ್ಲಿ ಅವರ ನಾಯಕತ್ವದ ಗುಣ ಅನಾವರಣ ಆಗುತ್ತಲೇ ಹೋಗುತ್ತದೆ. ಅವರು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾಗಿದ್ದಾಗ ದೊಡ್ಡೇರಿಗೆ ಸಂಪರ್ಕ ಸಾಧಿಸಲು ಪಯಸ್ವಿನಿ ನದಿಗೆ ತೂಗು ಸೇತುವೆ ನಿರ್ಮಿಸಲು ಪಟ್ಟ ಬವಣೆಯನ್ನು ವಿವರಿಸಿದ್ದಾರೆ. ನದಿಗೆ ಮಾತ್ರವಲ್ಲ, ಅಂತೆಯೇ ಹಲವು ಹೃದಯಗಳಿಗೂ ಸೇತುವೆ ನಿರ್ಮಿಸಿದ ಉದಾಹರಣೆ ಇದೆ ಈ ಪುಸ್ತಕದಲ್ಲಿ. ಅವರ ಯೂರೋಪ್, ಥಾಯ್ಲೆಂಡ್ ಪ್ರವಾಸವನ್ನು ಕಣ್ಣಿಗೆ ಕಟ್ಟಿದಂತೆ ಛಾಪಿಸಿದ್ದಾರೆ. ವಿದೇಶಿ ಪ್ರವಾಸದುದ್ದಕ್ಕೂ ನಡೆದ ಘಟನೆಗಳು, ದೇಶದೇಶಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಮಾಹಿಯುಕ್ತ ಅಧ್ಯಾಯಗಳಾಗಿವೆ.

ದೇವರು ಧರ್ಮದ ಬಗ್ಗೆ ಅಭಿಪ್ರಾಯಿಸುತ್ತಾ ಸ್ವಾತಂತ್ರ್ಯ ಎಂಬುದು ದೇವರಿಗಿಂತ ದೊಡ್ಡ ಮೌಲ್ಯ ಅಂದಿದ್ದಾರೆ. ಬದುಕಿನುದ್ದಕ್ಕೂ ವೈಚಾರಿಕತೆಯನ್ನು ಪ್ರತಿಪಾದಿಸುತ್ತಾ, ಸಂಘರ್ಷವನ್ನು ಎದುರಿಸುತ್ತಾ ಸ್ವಾಂತ್ರ್ಯವನ್ನು ಸವಿಯುತ್ತಾ ಮುಂದೆ ಸಾಗಿದ್ದಾರೆ.ಅನೇಕ ವಿವಾದಗಳೂ (ವಿವಾಹವೂ ಸೇರಿದಂತೆ) ಅವರನ್ನು ಸುತ್ತಿಕೊಂಡಿದೆ. ಅವುಗಳೆಲ್ಲವನ್ನೂ ಎದುರಿಸುತ್ತಾ ನಿಭಾಯಿಸುತ್ತಾ ಸಾಗಿದ್ದಾಗಿ ಬರೆದು ಕೊಂಡಿದ್ದಾರೆ. ಪ್ರೀತಿ ಪ್ರೇಮ, ನೋವು, ತಲ್ಲಣ, ತಳಮಳ, ವಿವಾದ, ವಿಷಾದ ಎಲ್ಲವೂ ಇರುವ ಈ ಪುಸ್ತಕ ಒಂದು ಸಿಹಿ, ಕಹಿ, ಉಪ್ಪು, ಹುಳಿ, ಕಾರ, ಒಗರು ಮಿಶ್ರಿತ ರಸಪಾಕದಂತಿದೆ. ಮೂಲತ ಉಪನ್ಯಾಸಕರಾದರೂ, ಯಕ್ಷಗಾನ ಕಲಾವಿದ, ನಟ, ಸಾಹಿತಿ, ಭಾಷಣಕಾರ ಹೀಗೆ ಹಲವು ರಂಗಗಳ ಪ್ರತಿಭಾಸಂಪನ್ನ ವ್ಯಕ್ತಿತ್ವ. ಅರ್ಥಶಾಸ್ತ್ರ ಮಾತ್ರವಲ್ಲ, ಯಕ್ಷಗಾನದಲ್ಲಿನ ಅರ್ಥಗಾರಿಕೆಯೂ ಅಷ್ಟೇ ಪ್ರಖರವಾದುದು. ಅರ್ಥಶಾಸ್ತ್ರದಲ್ಲಿ 180ಕ್ಕಿಂತಲೂ ಹೆಚ್ಚು ಅರ್ಥಶಾಸ್ತ್ರದ ಕೃತಿಗಳು ಮತ್ತು ಇತರ ಸಾಹಿತ್ಯ ಕೃತಿಗಳು ಹೀಗೇ ಸುಮಾರು 250 ಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿ ಇವರಿಗಿದೆ.

ತಮಗೆ ಎದುರಾದ ಸಂಕಷ್ಟ, ತೊಂದರೆ ತಾಪತ್ರಯ, ಕಷ್ಟ ಕೋಟಲೆಗಳನ್ನೆಲ್ಲಾ ಮೆಟ್ಟಿಲಾಗಿಸಿಕೊಂಡು ಬದುಕಿನ ಏಣಿಯಲ್ಲಿ ಇವರು ಏರುತ್ತಾ ಹೋಗಿರುವುದು ಒಂದು ರೋಚಕ ಕಥನ. ಸದಾಕ್ರಿಯಾಶೀಲರು. ಅಪಘಾತವಾಗಿ ಆಸ್ಪತ್ರೆ ವಾಸಿಯಾಗಿದ್ದಾಗಲೂ ಸುಮ್ಮನಿರದೆ ಪುಸ್ತಕ ಬರೆದು ಅಲ್ಲಿಯೇ ಬಿಡುಗಡೆಗೊಳಿಸಿ ಹುಬ್ಬೇರುವಂತೆ ಮಾಡಿದವರು. ಯಾವುದೇ ಸಂಘರ್ಷವಿರಲಿ, ಎಂಥಾ ಕಷ್ಟದ, ಸಂದಿಗ್ಧದ ಪರಿಸ್ಥಿತಿಗಳಿದ್ದರೂ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಅಡೆತಡೆಯನ್ನು ಮುರಿದು ಮುಂದೆ ಸಾಗಬಹುದು ಎಂಬುದನ್ನು ಈ ಪುಸ್ತಕ ನಿರೂಪಿಸುತ್ತದೆ. ಪುಸ್ತಕ ಓದಿ ಮುಗಿಸಿದಾಗ ಒಂದು ಲವಲವಿಕೆಯ ಅನುಭೂತಿ ನಮ್ಮದಾಗುತ್ತದೆ.

ತಮ್ಮ ಏಳಿಗೆಗೆ ಕಾರಣರಾದವರನ್ನೆಲ್ಲ ಸ್ಮರಿಸುತ್ತಾರೆ. ಇವರ ಅಗಾಧವಾದ ಜ್ಞಾಪಕ ಶಕ್ತಿ ಅಚ್ಚರಿ ಹುಟ್ಟಿಸುತ್ತದೆ. ತೀರಾ ಪ್ರೈಮರಿ ಶಾಲೆಯಲ್ಲಿ ಕಲಿಯುತ್ತಿರುವಾಗ ಇದ್ದ ಸಹಪಾಠಿಗಳ ಹೆಸರೂ ಅವರ ಮಸ್ತಕದಲ್ಲಿದೆ. ಬಾಲ್ಯದಲ್ಲಿ ತಮ್ಮ ಭಾವತೀವ್ರತೆಗೆ ಸಹಭಾಗಿಯಾಗಿರುತ್ತಿದ್ದ ಕುಂಡಪ್ಪ ಎತ್ತಿನಿಂದ ಹಿಡಿದು ಅವರ ವಿದ್ಯಾರ್ಥಿಗಳ ತನಕ ಜೀವನದಲ್ಲಿ ಬಂದುಹೋದ ಎಲ್ಲರನ್ನು ಪ್ರಸ್ತಾಪಿಸಿ ಸ್ಮರಿಸಿಕೊಂಡಿದ್ದಾರೆ.

ಕೊನೆಯಲ್ಲಿ ಒಂಚೂರು ತಮಾಷೆಯನ್ನು ಮಿಕ್ಸ್ ಮಾಡಿ ಲಘುದಾಟಿಯಿಂದ ಹೇಳುವುದಾದರೇ, ಪುಸ್ತಕವನ್ನು ಓದುತ್ತಾ ಓದುತ್ತಾ ಹೋದಂತೆ ನನಗೂ ಅವರಿಗೂ ತಂಬಾ ಸಾಮ್ಯತೆ ಮತ್ತು ಅಷ್ಟೇ ವ್ಯತ್ಯಾಸಗಳಿವೆ ಎಂದು ತಿಳಿಯಿತು. ಅವರು ಬಾಲ್ಯದಲ್ಲಿ ನನ್ನಂತೆ ಬಡವರಾಗಿದ್ದರು ಮತ್ತು ಪೆದ್ದರೂ ಆಗಿದ್ದರೂ. ಆದರೆ ನಾನು ನನ್ನ ಪೆದ್ದುತನವನ್ನು ಇನ್ನೂ ಜತನದಿಂದ ಕಾಯ್ದುಕೊಂಡಿದ್ದರೆ, ಅವರು ಇದಕ್ಕೆ ವ್ಯತಿರಿಕ್ತವಾಗಿ ಬುದ್ಧಿವಂತರಾಗಿ ಮಿಂಚು ಹರಿಸಿದ್ದಾರೆ.

ಪುಸ್ತಕದುದ್ದಕ್ಕೂ, ಗಂಭೀರತೆಯೊಂದಿಗೆ, ಭಾವುಕತೆ, ತುಂಟತನ, ಪೋಲಿತನ, ಖಾಲಿತನ ಎಲ್ಲವೂ ಇದೆ. ಸರಳ ಭಾಷೆ, ಸುಲಲಿತ ನಿರೂಪಣೆಯೊಂದಿಗೆ ಓದಿಸಿಕೊಂಡು ಹೋಗುವ 29 ಅಧ್ಯಾಯಗಳನ್ನು ಹೊತ್ತ ಈ ಬೃಹತ್ ಸಂಚಿಕೆಯ ಅನುಬಂಧದಲ್ಲಿ ‘ಗುರುವುನು ಮಿಂಚಿನ ಶಿಷ್ಯುಡು’ ಎಂಬ ಅಧ್ಯಾಯವಿದೆ. ಅಲ್ಲಿ 71 ವಿದ್ಯಾರ್ಥಿಗಳ ಪ್ರಸ್ತಾಪ-ಪರಿಚಯವಿದೆ. ಇದನ್ನು ಓದಿದಾಗ ಇಲ್ಲಿ ನಾನೂ ಇರಬೇಕಿತ್ತು ಅಂತ ಅನ್ನಿಸಿದ್ದು ಸುಳ್ಳಲ್ಲ. ಅಲ್ಲಿ ಸೇರುವಂತ ಸಾಧನೆ ನನ್ನದೇನಿಲ್ಲ ಅನ್ನುವುದೂ ಅಷ್ಟೇ ಸತ್ಯ. ಆದರೂ, “ಈ ಅಧ್ಯಾಯದಲ್ಲಿ ಯಾರದಾದರೂ ನೆನಪು ಬಿಟ್ಟು ಹೋಗಿದ್ದರೆ ಅದಕ್ಕೆ ನನ್ನ ಮರೆಗುಳಿತನ ಕಾರಣ” ಎಂದಿದ್ದಾರೆ. ಅವರ ಮರೆಗುಳಿತಕ್ಕೆ ಒಂದಿಷ್ಟು ಬೆಂಕಿಹಾಕ ಅಂತ ಮನದಲ್ಲೇ ಗುರುವಿಗೇ ತಿರುಮಂತ್ರ ಹಾಕಿ ನಕ್ಕು ಸುಮ್ಮನಾದೆ (ಅವರ ವಿದ್ಯಾರ್ಥಿನಿಯಾಗಿದ್ದ ಕಾಲದ ಅಂದಿನ ಅದೇ ಸಲಿಗೆಯಲ್ಲಿ)!

*********************************************

ಚಂದ್ರಾವತಿ ಬಡ್ಡಡ್ಕ

2 thoughts on “ಬೊಗಸೆ ತುಂಬಾ ಕನಸು

Leave a Reply

Back To Top