ಪಿಂಜರ್

ಶೋಷಣೆಗೊಳಗಾಗಿ ಅಸ್ಥಿಪಂಜರಗಳಾಗುವ ಹೆಣ್ಣುಮಕ್ಕಳ ಕಥೆ

ಅಮೃತಾ ಪ್ರೀತಮ್

ಪಿಂಜರ್
ಮೂಲ : ಅಮೃತಾ ಪ್ರೀತಮ್
ಕನ್ನಡಕ್ಕೆ : ಎಲ್.ಸಿ.ಸುಮಿತ್ರಾ
ಪ್ರ : ಅಂಕಿತ ಪುಸ್ತಕ
ಪ್ರ.ವರ್ಷ :೨೦೦೬
ಬೆಲೆ : ರೂ.೬೦
ಪುಟಗಳು : ೧೦೪

         ದೇಶ ವಿಭಜನೆಯ ಕಾಲದಲ್ಲಿ  ಶೋಷಣೆಗೊಳಗಾದ ಅಮಾಯಕ ಹೆಣ್ಣು ಮಕ್ಕಳ ಕರುಣ ಕಥೆಯಿದು. ಪೂರೋ ಎನ್ನುವವಳು ಇಲ್ಲಿ ಕಥಾ ನಾಯಕಿ.

      ತನ್ನ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರನಿರುವ ಒಂದು ಸುಖಿ ಕುಟುಂಬದಲ್ಲಿ ಹಾಯಾಗಿ ಬೆಳೆದ ಹುಡುಗಿ ಪೂರೊ. ಸೌಮ್ಯ ಸ್ವಭಾವದವಳೂ ವಿಧೇಯಳೂ ಆದ ಅವಳು ತಾಯಿ ತಂದೆಯರ ಮುದ್ದಿನ ಮಗಳು. ತಾಯ್ತಂದೆಯರು ಅವಳಿಗಾಗಿ ನೋಡಿಟ್ಟ ರಾಮಚಂದನನ್ನು ಮದುವೆಯಾಗುವ ಕನಸು ಕಾಣುತ್ತಿರುತ್ತಾಳೆ. ಅಷ್ಟರಲ್ಲಿ ಸಂಭವಿಸುತ್ತದೆ ಆ ದುರ್ಘಟನೆ. ಪೂರೋಳ ಮಾವನಿಂದಾದ ಒಂದು ಅನ್ಯಾಯಕ್ಕೆ ಪ್ರತೀಕಾರವಾಗಿ ಒಂದು ಮುಸ್ಲಿಂ ಕುಟುಂಬವು ರಷೀದನೆಂಬ ಅವರ ಯುವಕನನ್ನು ಪೂರೋಳನ್ನು ಬಲಾತ್ಕಾರವಾಗಿ ಎತ್ತಿ ಹಾಕಿಕೊಂಡು ಬರಲು ನಿರ್ಬಂಧಿಸುತ್ತದೆ. ಇಲ್ಲಿಂದಾಚೆ ಅವಳ ಜೀವನ ಸೂತ್ರ ಕಡಿದ ಗಾಳಿಪಟವಾಗುತ್ತದೆ. ರಷೀದನು ಅವಳ ಮೇಲೆ ಲೈಂಗಿಕ ಅತ್ಯಾಚಾರ ಮಾಡುವುದಿಲ್ಲವಾದರೂ ಪೂರೋ ಮಾನಸಿಕ ಹಿಂಸೆ ಅನುಭವಿಸುತ್ತಾಳೆ.

   ಪೂರೋ ಹೇಗೋ ಒದ್ದಾಡಿ ರಷೀದನ ಬಂಧನದಿಂದ ತಪ್ಪಿಸಿಕೊಂಡು ತನ್ನ ಮನೆಗೆ ಓಡಿ ಬರುತ್ತಾಳೆ. ಆದರೆ ಇಲ್ಲಿ ಅವಳಿಗೆ ಮತ್ತೊಂದು ಆಘಾತ ಕಾದಿರುತ್ತದೆ. ಬೇರೊಂದು ಧರ್ಮದವರಿಂದ ಒಯ್ಯಲ್ಪಟ್ಟು ಅವರ ಜತೆಗೆ ಕೆಲವು ದಿನಗಳನ್ನು ಕಳೆದವಳ ಪಾವಿತ್ರ್ಯವನ್ನು   ಶಂಕಿಸಿ ಅವಳ ತಂದೆ ಅವಳನ್ನು ಸ್ವೀಕರಿಸುವುದಿಲ್ಲ. ತನ್ನ ಮಾನವನ್ನು ಕಳೆದುಕೊಂಡ ಅವಳಿಗೆ ಇನ್ನು ಮದುವೆಯೂ ಆಗಲಾರದೆಂದು ತಂದೆ ಅವಳನ್ನು ತಿರಸ್ಕರಿಸುತ್ತಾನೆ. ಬೇರೆ ದಾರಿ ಕಾಣದೆ ಅವಳು ರಷೀದನ ಜತೆಗೆ ಜೀವಿಸಲು ತಿರುಗಿ ಹೋಗುತ್ತಾಳೆ. ರಷೀದ ತಾನು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಾನೆ. ಆದ್ದರಿಂದ ಪ್ರಾಯಶ್ಚಿತ್ತವಾಗಿ ಅವಳನ್ನು ಸ್ವೀಕರಿಸಿ ಅವಳಿಗೊಂದು ಬದುಕು ಕೊಡಲು ಸಿದ್ಧನಾಗುತ್ತಾನೆ. ಆದರೆ ಅವಳ ಹೆಸರನ್ನು ಮಾತ್ರ ಹಮೀದಾ ಎಂದು ಬದಲಾಯಿಸುತ್ತಾನೆ. ಹೀಗೆ ಪೂರೋ ತನ್ನ ಅಸ್ಮಿತೆಯನ್ನೇ ಕಳೆದುಕೊಂಡು ಬದುಕ ಬೇಕಾಗುತ್ತದೆ. ಸ್ವಾಭಿಮಾನಿಯೂ ಸಂವೇದನಾಶೀಲೆಯೂ ಆದ ಪೂರೋಗೆ ಇದು ಅಸಹನೀಯವೆನ್ನಿಸುತ್ತದೆ.

  ಪೂರೋಳ ಹಾಗೆಯೇ ಪಿತೃ ಸಂಸ್ಕೃತಿಯ ಅಸಮಾನ ಧೋರಣೆಯಿಂದಾಗಿ  ಸ್ಥಾನ ಭ್ರಷ್ಟರಾಗಿ ಬೇರೆ ಬೇರೆ ರೀತಿಯಿಂದ ಅನ್ಯಾಯಕ್ಕೊಳಗಾದ ಲಾಜೋ, ಟಾರೋ ಮತ್ತು ಕಮ್ಮೋ ಎಂಬ ಇನ್ನು ಮೂವರು ಹೆಣ್ಣುಮಕ್ಕಳೂ ಈ ಕಾದಂಬರಿಯಲ್ಲಿದ್ದಾರೆ.ಹೆಣ್ಣಿನ ಬೆತ್ತಲೆ ಮೆರವಣಿಗೆ, ಲೈಂಗಿಕ ದೌರ್ಜನ್ಯಗಳಂತಹ ಕ್ರೌರ್ಯ ಪ್ರದರ್ಶನದ ಚಿತ್ರಣಗಳೂ ಇಲ್ಲಿವೆ.

      ಹೆಣ್ಣು ಗಂಡಿನ ಆಕ್ರಮಣಕ್ಕೊಳಗಾಗಿ ಅವನಿಂದ ಇಷ್ಟ ಬಂದಂತೆ ಬಳಸಲ್ಪಡಬಹುದೆನ್ನುವ  ಸಮಾಜದ ಅಮಾನವೀಯ ನಿಲುವನ್ನು ಇಲ್ಲಿ ಪರೋಕ್ಷವಾಗಿ ಖಂಡಿಸಲಾಗಿದೆ.  ಸಂಸ್ಕೃತಿ, ಧರ್ಮ ಹಾಗೂ ಸಾಮಾಜಿಕ ನಿಯಮಗಳನ್ನು ಕಾಪಾಡಿಕೊಳ್ಳುವ ನೆಪದಲ್ಲಿ  ಸ್ತೀ ಯರಿಗೆ ನೀಡುವ ದೈಹಿಕ ಹಾಗೂ ಮಾನಸಿಕ ಹಿಂಸೆಗಳನ್ನು, ಆ ಯಾತನೆಗಳನ್ನು ಸಹಿಸಲಾರದೆ ಒದ್ದಾಡುತ್ತ ಅಸಹಾಯಕರಾಗುವ ಸ್ತ್ರೀ ಯರ ದಾರುಣ ಪರಿಸ್ಥಿತಿಯನ್ನೂ ಈ ಕಾದಂಬರಿ ಯಥಾವತ್ತಾಗಿ ಸ್ವಲ್ಪವೂ ಉತ್ಪ್ರೇ.ಕ್ಷೆಯಿಲ್ಲದೆ ಚಿತ್ರಿಸುತ್ತದೆ.ದೇಶ ವಿಭಜನೆಯ ಕಾಲದಲ್ಲಿ ನಡೆದ ಪೂರೋಳಂತಹ ಸಾವಿರಾರು ಹೆಣ್ಣುಮಕ್ಕಳು ಅನುಭವಿಸಿದ ನರಕ ಯಾತನೆ ಇಲ್ಲಿ ಭೀಭತ್ಸ ರೂಪವನ್ನು ತಾಳಿದೆ.

   ಕನ್ನಡ ಅನುವಾದದ ಭಾಷಾ ಶೈಲಿ ತುಂಬಾ ಸುಂದರವಾಗಿದ್ದು ಒಂದೇ ಓಟಕ್ಕೆ ಓದಿಸಿಕೊಂಡು ಹೋಗುತ್ತದೆ..

*************************************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

One thought on “

  1. ಒಂದ ಒಳ್ಳೆಯ ಕಾದಂಬರಿಯನ್ನು ಆಪ್ತವಾಗಿ ಪರಿಚಯಿಸಿದ್ದೀರಿ.ವಂದನೆಗಳು.

Leave a Reply

Back To Top