ನಾನು,ನನ್ನ ಅನುವಾದವೂ

ಅನುಭವ

ನಾನು,ನನ್ನ ಅನುವಾದವೂ

ಸಮತಾ ಆರ್.

Translation. Concept word on blackboard background royalty free stock images

ಒಂದು ದಿನ ಸಂಜೆ ಹೀಗೇ ಸುಮ್ಮನೆ ಕುಳಿತಿರುವಾಗ ಗೆಳತಿ ಸ್ಮಿತಾಳ ಫೋನ್ ಕರೆ ಬಂತು,”ನೋಡೆ,ನನ್ನದೊಂದು ಕವನ ಇಂಗ್ಲಿಷ್ ಗೆ ಅನುವಾದ ಮಾಡಿಸಿದ್ದೇನೆ,ಓದಿ ಹೇಗಿದೆ ಹೇಳು”ಎಂದು ಹೇಳಿ ಹಿಂದೆಯೇ ವಾಟ್ಸಾಪ್ ನಲ್ಲಿ ಕನ್ನಡ ಇಂಗ್ಲಿಷ್ ಎರಡೂ ಪದ್ಯ ಕಳುಹಿಸಿದಳು.ಓದಿದಾಗ ಕನ್ನಡ ಪದ್ಯ ಇಂಗ್ಲಿಷ್  ಅನುವಾದದಲ್ಲಿ ಓದಲು ಚಂದವೆನಿಸಿ  ,ಅವಳಿಗೆ ಕರೆ ಮಾಡಿ ಹೇಳಿದೆ,ಅವಳು ಕೇಳಿ ,ತಮಾಶೆಗೆ,”ಹಾಗಾದರೆ ನನ್ನದೊಂದು ಪದ್ಯ ಕಳಿಸುವೆ, ನೀನೂ ಅನುವಾದಿಸಿ ಖುಷಿ ಪಡು”ಅಂತ ಹೇಳುವುದೇ!!

ನಾನೂ ಏನೋ ಒಂದು ಲಹರಿಯಲ್ಲಿ “ಹುಂ” ಎಂದೇನೋ ಹೇಳಿಬಿಟ್ಟೆ ,ಆದರೆ ಅವಳ ಪದ್ಯ ಬಂದು ಕುಳಿತ ಮೇಲೆಯೇ ನಿಜವಾದ ತಲೆನೋವು ಶುರುವಾಗಿದ್ದು.

 ಮೊದಲನೆಯದಾಗಿ ನಾನು ಬರಹಕ್ಕೆ ತೊಡಗಿಸಿಕೊಂಡಿದ್ದು ಕೂಡ ಆಕಸ್ಮಿಕವಾಗಿ,ಎಲ್ಲೋ ಒಂದಷ್ಟು ಲಹರಿ,ಲಲಿತ ಪ್ರಬಂಧಗಳ ಮಾತ್ರ ಬರೆದಿರುವುದು.ಓದಿದ್ದು ರಸಾಯನಶಾಸ್ತ್ರ,ಮಾಡುತ್ತಿರುವುದು ಗಣಿತ ಶಿಕ್ಷಕಿಯ ಕೆಲಸ,ಸಾಹಿತ್ಯವನ್ನು ಒಂದು ಹವ್ಯಾಸ ವೆಂಬಂತೆ ಸುಮ್ಮನೆ ನನ್ನ ಪಾಡಿಗೆ ನಾನು ಒಂದಷ್ಟು ಕನ್ನಡ ಕಥೆ,ಕಾದಂಬರಿ ಗಳ ಓದಿಕೊಂಡಿದ್ದೆ.ಕವಿತೆಗಳ ಓದು ಸ್ವಲ್ಪ ದೂರವೇ,ಏಕೆಂದರೆ ಓದಿದರೆ ಅರ್ಥವಾಗದ ಕಷ್ಟ.ಇದರ ಜೊತೆಗೆ ಇಂಗ್ಲಿಷ್ ಭಾಷೆಯ ಜೊತೆ ನಂಟು ಬೆಳದಿದ್ದು ಕೂಡ ಒಂದು ಆಕಸ್ಮಿಕವೇ.ನಾನು ವೃತ್ತಿ ಪ್ರಾರಂಭಿಸಿದ ಮೊದಲ ವರ್ಷಗಳಲ್ಲಿ ಶಾಲೆಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕರ ಕೊರತೆ ಯಿಂದಾಗಿ ,”ಹೇಗೂ ವಿಜ್ಞಾನ ದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ತನಕ ಇಂಗ್ಲಿಷ್ ನಲ್ಲೆ ಕಲಿತಿರುವುದಲ್ಲವೆ ?ನೀವೇ ಇಂಗ್ಲಿಷ್ ಪಾಠ ಮಾಡಿ “ಎಂದ  ಮುಖ್ಯ ಶಿಕ್ಷಕರ ಕೋರಿಕೆಯನ್ನು ಮನ್ನಿಸಿ   ಪ್ರಾರಂಭಿಸಿದ  ಇಂಗ್ಲಿಷ್  ಶಿಕ್ಷಕಿ ಕೆಲಸ ಸುಮಾರು ಹತ್ತು ವರ್ಷಗಳವರೆಗೆ ಎಳೆದುಕೊಂಡು ಹೋಯಿತು. ಈ ಅವಧಿಯಲ್ಲಿ ಮಕ್ಕಳಿಗೆ ಕಲಿಸುವುದರ ಜೊತೆಗೆ ನಾನೂ ಸಾಕಷ್ಟು ಕಲಿತೆ ಎಂದರೆ ತಪ್ಪಾಗಲಾರದು.ಅದರಲ್ಲೂ ಇಂಗ್ಲಿಷ್.ಪದ್ಯಗಳು, ರೈಮ್ಸ್ ಗಳ ಮಕ್ಕಳಿಗೆ ಕಲಿಸುತ್ತಾ ಕಲಿಸುತ್ತಾ ನಾನೇ ಹೆಚ್ಚು ಖುಷಿ ಪಟ್ಟಿದ್ದೇನೆ.

ಈ ಹಿನ್ನೆಲೆಯಲ್ಲಿ ಸ್ಮಿತಾ ಕೊಟ್ಟ ಪದ್ಯದ ಅನುವಾದ ಮಾಡಲು ಕುಳಿತಾಗ ಮೊದಲು ಎದುರಾದ ಪ್ರಶ್ನೆ ಸೂಕ್ತ ಪದಗಳನ್ನು ಹುಡುಕುವುದು.ಈಗ ಯಾವುದೇ ಒಂದು ಭಾಷೆಯ ಒಂದು ಪದ ತೆಗೆದುಕೊಂಡರೆ ಅದು ಬರಿ ಒಂದು ಸರಳ ನೇರ ಅರ್ಥವನ್ನೇನು ಹೊಂದಿರುವುದಿಲ್ಲ.ಅದರ ಬಳಕೆಗೆ ಅನುಗುಣವಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥ ಕೊಡುತ್ತಾ ಹೋಗುತ್ತದೆ.ಅಲ್ಲದೆ ಭಾಷೆ ಅನ್ನೋದು ಕೇವಲ ಒಂದು ಸಂಪರ್ಕ ಮಾದ್ಯಮ ಮಾತ್ರ ಅಲ್ಲ.ಒಂದು ಭಾಷೆ ಎಂದರೆ ನನಗನ್ನಿಸುವಂತೆ ಅದನ್ನಾಡುವ ಜನರ ಕಲೆ,ಸಂಸ್ಕೃತಿ, ಪರಂಪಾನುಗತವಾಗಿ ಬಂದಿರುವ ನಂಬಿಕೆ,ಆಚರಣೆಗಳು ಎಲ್ಲವೂ ಸೇರಿ ಆಗಿರುವ ಒಂದು ಜೀವಂತ ಪ್ರಕ್ರಿಯೆ ಭಾಷೆ.ಕೆಲವೊಂದು ರೂಡಿ ಆಚರಣೆಗಳು ಒಂದು ಪ್ರದೇಶ,ದೇಶ,ಇಲ್ಲವೇ ಒಂದು ನಿರ್ದಿಷ್ಟ ಜನಾಂಗಕ್ಕೆ ಸೀಮಿತವಾಗಿದ್ದು ಅವುಗಳ  ಸೂಚಿಸುವ ಪದಗಳು ,ಬೇರೊಂದು ಭಾಷೆಯನ್ನಾಡುವ,ಬೇರೆಯೇ ಪ್ರದೇಶಕ್ಕೆ ಸೇರಿರುವ, ಆ ನಿರ್ದಿಷ್ಟ ಆಚರಣೆ, ರೂಡಿಗಳು ಇರದೇ ಇರುವ ಜನರ ಭಾಷೆಯಲ್ಲಿ ಅವುಗಳ ಸೂಚಿಸುವ ಯಾವುದೇ ಪದಗಳು ಇಲ್ಲದಿರಬಹುದು. ಮೂಲಕ್ಕೆ ತೀರ ಹತ್ತಿರದ ಪದ ಬಳಸಿದರೂ ಅಪರಿಚಿತ ವೆನಿಸಬಹುದು.ಹಾಗಾಗಿ ಪದದ ಜೊತೆಗೆ ಅದಕ್ಕೆ ಸಂಬಂಧಿಸಿದ ಎಲ್ಲವನ್ನೂ ಇನ್ನೊಂದು ಭಾಷೆಯಲ್ಲಿ ಹೇಳುವುದು ಕಷ್ಟವೇ.ಉದಾಹರಣೆಗೆ ಹೇಳುವುದಾದರೆ ಸ್ಮಿತಾಳ ಒಂದು ಕವಿತೆಯಲ್ಲಿ ಕೊಡ ಅನ್ನುವ ಪದಕ್ಕೆ ಸಂವಾದಿಯಾದ ಇಂಗ್ಲಿಷ್ ಪದ ಹುಡುಕುವುದು ಬಹಳ ಕಷ್ಟವೇ ಆಯಿತು.ಬಾವಿಯಿಂದ ನೀರು ಸೇದಲು ಕೊಡ ಬಳಸುವ ಬದಲು ವಿದೇಶಗಳಲ್ಲಿ pail ಅನ್ನುವ ಬಕೆಟ್ ಆಕಾರದ ಪಾತ್ರೆ ಬಳಸುತ್ತಾರೆ.ಜ್ಯಾಕ್ ಅಂಡ್ ಜಿಲ್ ಪದ್ಯದಲ್ಲಿ ಬರುತ್ತೇ ನೋಡಿ.ಹಾಗೆ ಯಾವ ಶಬ್ದಕೋಶವನ್ನು  ಹುಡುಕಿದರೂ ಯಾವ ಪದವೂ ಸಮಾಧಾನ ತರದೆ ಕೊನೆಗೆ ಹತ್ತಿರ ಎನಿಸುವ pitcher ಬಳಸಿದ್ದಾಯಿತು.

ಹಾಗೆಯೇ ಇನ್ನೂ ಕೆಲವು ಆಚರಣೆ ಗಳ ಗಮನಿಸಿದಾಗ,ಅಯ್ಯಪ್ಪನ ವ್ರತ  ನಮ್ಮ ದೇಶದ ಒಂದು

ವಿಶಿಷ್ಟ ಆಚರಣೆ.ಶೋಭಾ ಹಿರೆಕೈ ಅವರ ಪದ್ಯದ ಅನುವಾದ ಏನೋ ಮಾಡಿದೆ,ಆದರೆ.ಅದು ಭಾರತೀಯ ರಲ್ಲದವರು ಓದಿದರೆ ಅವರಿಗೆ, ಆ ವ್ರತ ಮಾಡುವ ಕ್ರಮ,ಅದರ ಹಿನ್ನೆಲೆ,ಹಿಂದಿರುವ ವಿವಾದ ಇವುಗಳೆಲ್ಲ ಗೊತ್ತಿರದಿದ್ದರೆ ,ಕವನ ಅವರನ್ನು ಹೇಗೆ ತಲುಪೀತು?.

   ಹಾಗೆಯೇ ಸುನೀತ ರವರ ಒಂದು ಪದ್ಯದಲ್ಲಿ ಬರುವ ಪಂಚಾಯತ್ ಪದ ಕೂಡ ಕಾಡಿಸಿತು.ಬೇರೆ ಬೇರೆ ದೇಶಗಳ ಆಡಳಿತ ವ್ಯವಸ್ಥೆ ಬೇರೆ ಬೇರೆ ಹಾಗಾಗಿ ಎಲ್ಲ ಕಡೆ ಹೊಂದುವಂಥ ಪದಕ್ಕಾಗಿ ತಡಕಾಡಿ, ಕೊನೆಗೆ council ಪದ ಬಳಸಿದರೂ ನನಗೆ ಅಷ್ಟು ಸಮಾಧಾನವಿಲ್ಲ.

ಇನ್ನು “ಜಲರಾಶಿ”ಪದ ಬಂದಾಗ.ನನ್ನ ವಿಜ್ಞಾನ ಓದಿದ ತಲೆ “ಛೆ,ಕೇವಲ ಘನ ವಸ್ತುಗಳನ್ನ ಮಾತ್ರ ರಾಶಿ ಮಾಡಲು ಸಾಧ್ಯ,ದ್ರವಗಳನ್ನು ರಾಶಿ ಮಾಡಲಾದೀತೇ”ಎಂದು ಗುಮಾನಿ ಎಬ್ಬಿಸಿ,”ಪದ ಪದ ಅನುವಾದ ಬೇಡ ಬಿಡು “ಎಂದುಕೊಂಡು ಅದನ್ನು aquatic treasure ಮಾಡಿದ್ದಾಯಿತು.

ಹಾಗೆ ಇನ್ನೊಂದೆರಡು ಕವನಗಳ ಅನುವಾದಿಸುವಾಗಾ ಇಂಗ್ಲಿಷ್ ಗ್ರಾಮರ್ ಸರಿಯಿದೆಯ?ಅನ್ನುವ ಸಣ್ಣ ಗುಮಾನಿ ಬೇರೆ ಕಾಡಿ ನನ್ನ ಕೆಲವು ಇಂಗ್ಲಿಷ್ ಶಿಕ್ಷಕ ಸ್ನೇಹಿತರನ್ನು ಕೇಳಿದಾಗ ಓರ್ವ ಸ್ನೇಹಿತೆ “ಗ್ರಾಮರ್ ಬಗ್ಗೆ ಎಲ್ಲಾ ತಲೆ ಕೆಡಿಸಿಕೊಳ್ಳಬೇಡಿ,ಪದ್ಯದ ಲಯ ತಪ್ಪದ ಹಾಗೆ,ಕೇವಲ ಪದದಿಂದ ಪದ ಅನುವಾದ ಮಾಡುವ ಬದಲು ಇಡಿಯಾಗಿ ಭಾವವನ್ನು ಹಿಡಿಯುವ ಪ್ರಯತ್ನ ಮಾಡಿ”ಎಂದು ಸಲಹೆ ಕೊಟ್ಟರು.

ಅದರಂತೆ ಅನುವಾದಿಸಲು ಇರುವ ಕವನವನ್ನು ಮತ್ತೆ ಮತ್ತೆ ಓದಿಕೊಂಡು,ಅನುಮಾನ ಬಂದ ಕಡೆ ಮೂಲ ಕವಿಯ ಬಳಿಯೇ ಮಾತನಾಡಿ, ಮೊದಲಿಗೆ ಮೂಲ ಪದ್ಯ ಏನನ್ನ ಹೇಳಲು ಹೊರಟಿದೆ ಅನ್ನುವುದರ ಕಡೆಗೆ ಗಮನ ನೀಡಲು ಪ್ರಯತ್ನಿಸಿದೆ.ಅದರ ಬಳಿಕವೇ ನನ್ನ ಲಹರಿ ಉಕ್ಕಿದ ಹಾಗೆ ಅನುವಾದಿಸಿದೆ.

ಬಳಿಕ ಅನುವಾದವನ್ನು ಮತ್ತೆ ಮತ್ತೆ ಓದಿಕೊಂಡು,ಮೂಲದ ಜೊತೆಗೆ ಹೋಲಿಸಿಕೊಂಡು ಸಾಧ್ಯವಾದಷ್ಟು ತಿದ್ದಿ ತೀಡಿ ನಂತರ ಮೂಲ ಕವಿಗೆ ತೋರಿಸಿ ಅವರು ಗ್ರೀನ್ ಸಿಗ್ನಲ್ ಕೊಟ್ಟ ಬಳಿಕವೇ ಸಮಾಧಾನ.

ಕವಿತೆ ಯೊಂದನ್ನು ಅನುವಾದಿಸಲು ಕುಳಿತಾಗ ,ಗಣಿತ ಶಿಕ್ಷಕಿಯಾದ ನನಗೆ ಸಮೀಕರಣ ವೊಂದನ್ನು ಬಿಡಿಸಿದ ಹಾಗೆಯೇ ಅನ್ನಿಸುತ್ತದೆ.ಒಂದು ಸಮಸ್ಯೆ ಯನ್ನ ಅರ್ಥೈಸಿಕೊಂಡು,ಅದಕ್ಕೆ ಸೂಕ್ತ ನಿಯಮಗಳು,ಸ್ವಯಂ ಸಿದ್ಧಗಳ  ಬಳಸಿ , ಹಂತ ಹಂತವಾಗಿ ಬಿಡಿಸಿದಾಗ ಸಿಗುವ ಸಂತೋಷವೇ,ನನಗೆ ಕವಿತೆಯೊಂದನ್ನು ಅನುವಾದಿಸಿ ದಾಗ ಕೂಡ ಸಿಕ್ಕಂತಾಗುತ್ತದೆ.

ಅನುವಾದಿಸಿದ ಬಳಿಕ  ಸಂಗಾತಿಯಲ್ಲಿ ಪ್ರಕಟಗೊಂಡು ಓದಿದವರಲ್ಲಿ ಕೆಲವರು ನನ್ನನ್ನು ಸಂಪರ್ಕಿಸಿ,”ಅನುವಾದ ಚೆನ್ನಾಗಿ ಮಾಡಿದ್ದೀರಿ,ಮುಂದುವರೆಸಿ “ಎಂದು ಪ್ರೋತ್ಸಾಹಿಸಿದಾಗ ತುಂಬಾ ಖುಷಿಯಾಯಿತು.

ನಾನೆಂದೂ ಕವಿತೆ ಬರೆದವಳಲ್ಲಾ ಆದರೆ ಕವಿತೆ ಗಳ ಅನುವಾದ ಮಾಡಲು ಶುರು ಮಾಡಿದ ಬಳಿಕ ಕಾವ್ಯಕ್ಕಿರುವ ಅದ್ಭುತ ಶಕ್ತಿ ಯ ಅರಿವು ಸ್ವಲ್ಪ ಸ್ವಲ್ಪವೇ ಆಗುತ್ತಿದೆ.ಅನುವಾದದಿಂದಾಗಿ ಇನ್ನೊಬ್ಬರ ಭಾವ ಪ್ರಪಂಚದ ಒಂದು ತುಣುಕನ್ನಾದರೂ ನನ್ನದಾಗಿಸಿಕೊಳ್ಳುವ ಸಂಭ್ರಮ.ಇದೊಂದು ರೀತಿ ಕನ್ನಡದ ಪದ್ಯದಿಂದ ಬಸಿರಾಗಿ ಇಂಗ್ಲಿಷ್ ಮಗುವೊಂದನ್ನು ಹೆರುವಂತಹ ಬಾಡಿಗೆ ತಾಯಿಯ ಕೆಲಸದಂತಾಗಿ ಬಿಟ್ಟಿದೆ ನನಗೆ.

*******************************

15 thoughts on “ನಾನು,ನನ್ನ ಅನುವಾದವೂ

  1. ನಿಮ್ಮ ಅನುವಾದಿತ ಕವನಗಳ ಅಭಿಮಾನಿ ನಾನು. ಅನುವಾದ ಕ್ಲಿಷ್ಟಕರ ಕಾರ್ಯ. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು…

  2. ಸತ್ಯ… ಬಾಡಿಗೆ ತಾಯ್ತನದ ಅನುಭವದಂತೆ ಅನುವಾದ … ಚೆನ್ನಾಗಿದೆ ಈ ಸಾಲು… ಕರುಳ ಸಂಬಂಧವಾದರೂ
    ಅನ್ಯರಿಗೆ ಮಾತ್ರ ಸ್ವಂತ… ಕವಿಯಂತೆ ಆಳಕ್ಕಿಳಿಯಲಾರದ ವಿಭಿನ್ನ ಭಾವ…

  3. ಭಾವ ತುಂಬಿ. ಅನುವಾದ ಮಾಡುವಿರಿ.‌ನಿಮ್ಮ‌ ಬಗ್ಗೆ ಅಭಿಮಾನ, ಗೌರವವಿದೆ…ನನಗೆ..

  4. ನೀವೂ ಕವಿತೆಯನ್ನೂ ಬರೆಯಬಲ್ಲಿರಿ. ಚೆನ್ನಾಗಿ ಹೇಳಿರುವಿರಿ

  5. ಸಮತಾ ಆಪ್ತ ಅನಿಸಿಕೆ ,ನಮ್ಮಗಳ ಕವಿತೆಗಳು ನಿಮ್ಮಿಂದ ಇಂಗ್ಲಿಷಿಗೆ ಮರುಹುಟ್ಟು ಪಡೆದ ಖುಷಿ, ಇನ್ನೂ ಸಾಕಷ್ಟು ಬರೆಹಗಳು ಬರಲಿ ಗೆಳತಿ..ಅಭಿನಂದನೆಗಳು

Leave a Reply

Back To Top