ಎ.ಕೆ.ರಾಮಾನುಜನ್ ಅವರ ಆಯ್ದ
ಪ್ರಬಂಧಗಳು
ಎ.ಕೆ.ರಾಮಾನುಜನ್ ಅವರ ಆಯ್ದ ಪ್ರಬಂಧಗಳು
ಅನುವಾದ : ಓ.ಎಲ್. ನಾಗಭೂಷಣÀ ಸ್ವಾಮಿ
ಅನುವಾದ : ಓ.ಎಲ್. ನಾಗಭೂಷಣÀ ಸ್ವಾಮಿ
ಪ್ರ: ಮನೋಹರ ಗ್ರಂಥಮಾಲಾ
ಪ್ರ.ವರ್ಷ :೨೦೧೨
ಬೆಲೆ : ರೂ.೨೦೦.೦೦
ಪುಟಗಳು: ೩೫೦
ಕನ್ನಡದವರೇ ಆಗಿದ್ದರೂ ಇಂಗ್ಲಿಷ್‌ನಲ್ಲೇ ತಮ್ಮ ಪ್ರಮುಖ ಸಾಹಿತ್ಯ ಕೃತಿಗಳನ್ನು ರಚಿಸಿದ ಎ.ಕೆ.ರಾಮಾನುಜನ್ ಅವರು ಸಾಹಿತ್ಯ, ಭಾಷೆ, ಸಂಸ್ಕೃತಿ ಚಿಂತನೆ, ತೌಲನಿಕ ಅಧ್ಯಯನ ಮೊದಲಾದ ಹಲವಾರು ಮಹತ್ವದ ವಿಚಾರಗಳ ಕುರಿತಾಗಿ ಬರೆದ ಪ್ರಬಂಧಗಳನ್ನು ಓ.ಎಲ್. ನಾಗಭೂಷಣ ಸ್ವಾಮಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತೀಯ ಚಿಂತನಾಕ್ರಮ, ಮುನ್ನೂರು ರಾಮಾಯಣ : ಐದು ನಿದರ್ಶನಗಳು, ಭಾಷಾಂತರದ ಕುರಿತು ಮೂರು ಚಿಂತನೆಗಳು, ಮಹಾಭಾರತದಲ್ಲಿ ಪುನರುಕ್ತಿ ಎಂಬ ಪ್ರಬಂಧಗಳು ಭಾರತೀಯ ಸಾಹಿತ್ಯಗಳ ಬಹುಮುಖತೆಯನ್ನುಹಾಗೂ ಬಹುಪಠ್ಯಗಳ ಲಭ್ಯತೆಯನ್ನುತಿಳಿಸುತ್ತವೆ. ‘ಅಲ್ಲಮ ಕವಿತೆ ಯಾಕೆ ಒಗಟಲ್ಲ’ ಎಂಬ ಪ್ರಬಂಧವು ಅಲ್ಲಮನ ಅನುಭಾವಿ ಕವಿತೆಗಳ ಕುರಿತು ಚರ್ಚಿಸುತ್ತದೆ.
ಮಹಾದೇವಿಯಕ್ಕ, ಬಂಗಾಳಿ ಭಕ್ತಿ ಕವಿ ಗೋವಿಂದ ದಾಸ, ಇಂಗ್ಲಿಷಿನ ಜಾನ್ ಡನ್ ಕವಿಯ ಹೋಲಿ ಸಾನೆಟ್ಸ್ ಸರಣಿಯ ೧೪ನೆಯ ಕವಿತೆ, ಮತ್ತು ಜಾರ್ಜ್ ಹರ್ಬರ್ಟ್ ಕವಿಯ ‘ಲವ್’ಎಂಬ ನಾಲ್ಕು ಕವಿತೆಗಳ ಮೂಲಕ ‘ಭಕ್ತಿ ವೈವಿಧ್ಯ’ಎಂಬ ಪ್ರಬಂಧದಲ್ಲಿ ಭಕ್ತಿಕಾವ್ಯದ ಕುರಿತಾದ ಚರ್ಚೆ ಮಾಡುತ್ತಾರೆ. ‘ಹೂಬಿಡುವ ಮರ’ ಎಂಬ ಒಂದು ಕಥೆಯ ಮೂಲಕ ಹೆಣ್ಣು ಕೇಂದ್ರಿತ ಕಥೆಗಳ ಕೆಲವು ಲಕ್ಷಣಗಳನ್ನು ಚರ್ಚಿಸುತ್ತಾರೆ. ಭಾರತೀಯ ಮಹಾಕಾವ್ಯಗಳ ಕಥೆಗಳಿಗಿಂತ ಭಿನ್ನವಾದ ಸಂಸ್ಕೃತಿಯು ಕಲ್ಪಿಸಿರುವ ಪರ್ಯಾಯ ಸಾಧ್ಯತೆಗಳನ್ನು ಒಳಗೊಂಡಿರುವ ಹೆಂಗಸರ ಕಥೆಗಳನ್ನು ತಮ್ಮ ಕ್ಷೇತ್ರಕಾರ್ಯದ ಟಿಪ್ಪಣಿಗಳಿಂದ ಆಯ್ದು ಹೇಳುತ್ತಾರೆ. ತಮ್ಮ ಬಾಲ್ಯದಲ್ಲಿ ಅಡುಗೆ ಮನೆಯಲ್ಲಿ ಅಜ್ಜಿ, ಅತ್ತೆ, ಅಡುಗೆಯವರ ಬಾಯಿಂದ ಕೇಳಿದ ಕಥೆಗಳನ್ನೂ ಅವರ ದನಿಗಳನ್ನೂ ಕುರಿತು ‘ಕತೆ ಹೇಳುವುದು’ ಅನ್ನುವ ಪ್ರಬಂಧದಲ್ಲಿ ನಿರೂಪಿಸುತ್ತಾರೆ. ‘ಕನ್ನಡ ಜಾನಪದದ ಎರಡು ವಲಯಗಳು’ಎಂಬ ಪ್ರಬಂಧದಲ್ಲಿ ಕನ್ನಡ ಜಾನಪದದ ಪ್ರಕಾರ ಮತ್ತು ವ್ಯವಸ್ಥೆ, ಖಾಸಗಿ ಮತ್ತು ಸಾರ್ವಜನಿಕ ಕತೆಗಳು, ಕಥೆಗಾರರು, ಅಜ್ಜಿಕತೆ ಮತ್ತು ಪುರಾಣ, ಜಾನಪದ ಪುರಾಣ ಮತ್ತು ಪ್ರಾಚೀನ ಪುರಾಣಗಳು, ಗ್ರಾಮದೇವತೆ, ಎರಡು ಬಗೆಯ ಭಾರತೀಯ ದೇವತೆಗಳು, ಆಚರಣೆ ಮತ್ತು ರಂಗಭೂಮಿಗಳ ಕುರಿತಾದ ವಿಸ್ತಾರವಾದ ವಿವರಣೆಗಳಿವೆ. ‘ಸ್ಪೀಕಿಂಗ್ ಆಫ್ ಶಿವ’ ಅನ್ನುವ ಕೊನೆಯ ಪ್ರಬಂಧದಲ್ಲಿ ವೀರಶೈವ ಧಾರ್ಮಿಕ ಚಳುವಳಿಯ ರೂವಾರಿ ಬಸವಣ್ಣನ ‘ಉಳ್ಳವರು ಶಿವಾಲಯವ ಮಾಡುವರು’ ಎಂಬ ವಚನವನ್ನೆತ್ತಿಕೊಂಡು ಪ್ರತಿರೋಧ ಚಳುವಳಿಯ ಆಶಯ ಹಾಗೂ ವೈರುಧ್ಯಗಳ ಕುರಿತಾದ ಚರ್ಚೆಯಿದೆ. ರಾಮಾನುಜನ್ ಅವರ ಸುದೃಢ ಸಹಜ ಮತ್ತು ಸುಲಲಿತವಾದ ಇಂಗ್ಲಿಷ್ ಬರವಣಿಗೆಯಿಂದ ಅಷ್ಟೇ ಸಶಕ್ತವಾಗಿ ಅನುವಾದವೂ ಬಂದಿದೆ.
ರಾಮಾನುಜನ್ ಅವರ ಚಿಂತನೆಗಳು ಇಂದಿನ ಕನ್ನಡದ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾದವುಗಳು. ಸಾಹಿತ್ಯ-ಸಂಸ್ಕೃತಿಯ ವಿದ್ಯಾರ್ಥಿಗಳು ಓದಲೇ ಬೇಕಾದವುಗಳು. ಹೊಸ ತಲೆಮಾರಿನ ಕನ್ನಡದ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಿದ ಈ ಕೃತಿ ಬಹಳ ಉಪಯುಕ್ತ.
,
***************************************
ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ