‘ಬಾಳ ಬಣ್ಣ’
ವಸುಂಧರಾ ಕದಲೂರು
ಕುಸುಮಳಿಗೆ ವಿವಾಹದ ಏಳು ವರ್ಷದ ಅನಂತರ ಹುಟ್ಟಿದವನೇ ‘ಅಮರಕಿಶೋರ’. ಕುಸುಮಾಳದ್ದು ಮೂವತ್ತರ ಹರಯದಲ್ಲಾದ ವಿವಾಹ.
ತಡವಾದ ವಿವಾಹ ಜೊತೆಗೆ ತಡವಾಗಿಯೇ ಮಗು ಹುಟ್ಟಿದ್ದು. ಈ ಕಾರಣಕ್ಕೋ ಏನೋ ಮಗುವನ್ನು ಐದು ವರ್ಷ ಆಗೋವರೆಗೂ ನೆಲಕ್ಕೆ ಬಿಟ್ಟರೆಎಲ್ಲಿ ನವೆದು ಹೋಗುವುದೋ ಎಂದುಕೊಂಡು ಕೆಳಕ್ಕೆ ಬಿಡದೇ ಕಂಕುಳಲ್ಲಿಟ್ಟುಕೊಂಡು ಸಾಕಿದಳು. ಕಣ್ಣನ್ನು ರೆಪ್ಪೆಗಳು ಹೇಗೆ ಮುಚ್ಚಟೆಯಿಂದ ರಕ್ಷಿಸುತ್ತವೆಯೋ ಹಾಗೆ ಮಗನನ್ನು ನೋಡಿಕೊಳ್ಳುತ್ತಿದ್ದಳು.
ಮಗುವಿಗೆ ಹಸಿವಾಗಿ ಅದು ‘ಆ…’ ಎಂದು ಬಾಯ್ಬಿಡುವ ಮೊದಲೇ ತುಪ್ಪದಲ್ಲೇ ಅನ್ನ ಕಲಸಿ ಬಾಯಿಗಿಟ್ಟು ತಿನಿಸುತ್ತಿದ್ದಳು. ಯಾವುದಾದರೂ ಆಟದ ಸಾಮಾನು ಬೇಕೆನ್ನುತ್ತಾ ಕೈಚಾಚುವ ಮೊದಲೇ ಕೊಂಡು ಅದನ್ನವನ ಕೈಗಿತ್ತು ಸಂಭ್ರಮಿಸುತ್ತಿದ್ದಳು. ಆಕೆಯ ಪ್ರೀತಿಯಲ್ಲಿ ಶ್ರೀಮಂತಿಕೆಯ ಅದ್ದೂರಿತನ ಇಲ್ಲದಿದ್ದರೂ, ಭಾವ ತೀವ್ರತೆಯ ಆಡಂಬರಕ್ಕೇನೂ ಕೊರತೆಯಿರಲಿಲ್ಲ. ಅವಳ ವಾರಿಗೆಯಲ್ಲೇ ಹೆತ್ತವರು ತಮ್ಮ ಮಕ್ಕಳನ್ನು ಎರಡು- ಎರಡೂವರೆ ವರ್ಷಕ್ಕೇ ಮಾಂಟೆಸ್ಸರಿಗೆ ಸೇರಿಸಿದರೆ, ಈಕೆ ಮಾತ್ರ ‘ಮನೆಯೇ ಮೊದಲ ಪಾಠಶಾಲೆ’ ಎಂದು ನಂಬಿ, ‘ಅಆಇಈ’, ‘ಎಬಿಸಿಡಿ’, ‘1234’ ಗಳ ಜೊತೆಗೆ ನರ್ಸರಿ ರೈಮ್ಸ್, ದೇವರ ನಾಮ, ಶ್ಲೋಕಗಳನ್ನು ಅಮರನಿಗೆ ಕಲಿಸುತ್ತಾ, ಅವನ ತೊದಲು ಬಾಯಿಂದ ಮತ್ತೆಮತ್ತೆ ಅದನ್ನು ಹೇಳಿಸಿ, ಮುದ್ದು ಮುದ್ದು ಉಚ್ಚಾರಣೆಗಳನು ಕೇಳಿ, ಮಗನೊಡನೆ ತಾನೂ ಮತ್ತೊಂದು ಮಗುವಾಗಿ ಆಡುತ್ತಾ ಖುಷಿಪಡುತ್ತಾ ದಿನದೂಡುತ್ತಿದ್ದಳು.
ಅಮ್ಮ ಹೇಳಿಕೊಡುವ ಪಾಠಗಳನ್ನು ಕಲಿಯುವುದರಲ್ಲಿ ಚುರುಕಾಗಿದ್ದ ಅಮರನು, ಬಣ್ಣಗಳನ್ನು ಗುರುತಿಸಲು ಮಾತ್ರ ಪರದಾಡುತ್ತಿದ್ದ. ಅವನ ಈ ಸಮಸ್ಯೆ ಅರಿವಿಗೆ ಬಂದದ್ದೂ ಸಹ, ಕುಸುಮಾಳು ಅವನಿಗೆ ಕಲರ್ಸ್ಗಳ ಕುರಿತು ಪಾಠ ಮಾಡುವಾಗ. ಕಾಮನ ಬಿಲ್ಲಿನ ಬಣ್ಣಗಳ ಚಾರ್ಟನ್ನು ಗುರುತಿಸುವಾಗ ಅಮರ ಪದೇಪದೇ ವಿಫಲನಾಗುತ್ತಿದ್ದ. ಹಸಿರು, ಕೆಂಪು, ಹಸಿರು, ಹಳದಿ ಹೀಗೆ ಕೆಲವು ಛಾಯೆಯ ಬಣ್ಣಗಳನ್ನು ಗುರುತಿಸಲು ಕಷ್ಟಪಡುತ್ತಿದ್ದ. ಪದೇ ಪದೇ ತಿದ್ದಿ ಹೇಳಿಕೊಟ್ಟರೂ ಈ ಕೆಲವು ಬಣ್ಣಗಳನ್ನು ಪ್ರತ್ಯೇಕವಾಗಿ ಗುರುತಿಸಲು ಅಸಮರ್ಥನಾಗುತ್ತಿದ್ದ.
ಅಮರನು ಪದೇ ಪದೇ ತನ್ನನ್ನು ರೇಗಿಸಲು ಬೇಕೆಂದೇ ಹೀಗೆ ತುಂಟಾಟ ಮಾಡುತ್ತಿರಬಹುದಾ..? ಎಂದು ಆರಂಭದಲ್ಲಿ ನಿರ್ಲಕ್ಷಿಸಿದ್ದ ಕುಸುಮಾ, ಅದು ಆಟವಲ್ಲ, ಆತನ ಸಮಸ್ಯೆ ಎಂದು ತಿಳಿದು ಚಿಂತೆಗೆ ಒಳಗಾದಳು. ಸಮಸ್ಯೆ ಸ್ವರೂಪ ತಿಳಿಯುತ್ತಿದ್ದಂತೇ ನೇತ್ರತಜ್ಞರ ಬಳಿ ಮಗುವನ್ನು ಕರೆದುಕೊಂಡು ಹೋದಳು.
ಮಗುವಿನ ಕಣ್ಣುಗಳನ್ನು ಅತ್ಯಾಧುನಿಕ ಉಪಕರಣಗಳ ಮೂಲಕ ಪರೀಕ್ಷಿಸಿದ ನೇತ್ರತಜ್ಞರು ‘ನೋಡಿ ಕುಸುಮ, ನಿಮ್ಮ ಮಗು ಅಮರನಿಗೆ ‘ಬಣ್ಣಗುರುಡು’ತನ ಅಂದರೆ colour blindness ಇದೆ’ ಎಂದು ಸ್ಪಷ್ಟಪಡಿಸಿದರು. ವಿಷಯ ತಿಳಿದು ಆಘಾತಕ್ಕೊಳಗಾದ ಕುಸುಮಾ ತನ್ನ ಮುದ್ದು ಮಗುವಿನ ಬದುಕು ಹೀಗೆ ಬಣ್ಣಗೆಟ್ಟಿತೇ ಎಂದು ಶೋಕಿಸಿದಳು.
ಮನೋವ್ಯಥೆಯಿಂದ ದುಃಖಿಸುತ್ತಿದ್ದ ಕುಸುಮಾಳನ್ನು ಸಂತೈಸಿದ ವೈದ್ಯರು, ಆಕೆಗೆ ‘ಬಣ್ಣಗುರುಡುತನ’ದ ಬಗ್ಗೆ ಕೂಲಂಕಷವಾಗಿ ವಿವರಿಸಿ, ‘’ಕೆಲವರಿಗೆ ಇಂತಹ ಕೆಲವು ಅಪರೂಪದ ಅನುವಂಶೀಯ ಕಾಯಿಲೆಗಳು ಬರುತ್ತವೆ. ಹಾಗೆ ಬರುವುದು ಯಾರದ್ದೋ ಅಪರಾಧದಿಂದಲ್ಲ. ನೀವು ಯಾವ ರೀತಿಯಲ್ಲೂ ಅಧೀರರಾಗಬೇಡಿ’’ ಎಂದು ಧೈರ್ಯ ತುಂಬಿದರು. ಜೊತೆಗೆ ಒಂದಷ್ಟು ಸಲಹೆ ನೀಡಿ ಮನೆಗೆ ಕಳುಹಿಸಿಕೊಟ್ಟರು.
ಆಸ್ಪತ್ರೆಯಿಂದ ಮನೆಗೆ ಮರಳಿದ ಕುಸುಮಾಳಿಗೆ, ಸಮಾಧಾನವೇ ಆಗಲಿಲ್ಲ. ಮಕ್ಕಳಿಲ್ಲದೇ ಹಲವು ವರ್ಷ ಬಣ್ಣಗೆಟ್ಟಿದ್ದ ತನ್ನ ಬದುಕಿಗೆ ಉಲ್ಲಾಸದ ಹೊಸಬೆಳಕನ್ನು ತಂದುಕೊಟ್ಟ ತನ್ನ ಮುದ್ದುಕಂದನ ಬದುಕು ಹೀಗೆ ವರ್ಣಹೀನವಾಯಿತಲ್ಲಾ… ಎಂದು ರೋಧಿಸಿದಳು.
ವೈದ್ಯರ ಸಲಹೆಯಂತೆ, ನಾಕಾರು ದಿನಗಳಾದ ಮೇಲೆ ಅಮರನಿಗೆಂದು ವಿಶೇಷವಾಗಿ ಆರ್ಡರ್ಮಾಡಿಸಿದ್ದ ಹೊಸ ಕನ್ನಡಕ ತರಲು ಹೋದಾಗ, “ಡಾಕ್ಟರ್ ‘ಡೇ ವಿಸಿಟಿಂಗ್’ ಮೇಲೆ ಆಸ್ಪತ್ರೆ ರೌಂಡ್ಸ್ ಗೆ ಹೋಗಿದ್ದಾರೆ. ಪ್ಲೀಸ್ ವೇಯ್ಟ್ ಮಾಡಿ” ಎಂದು ರಿಸೆಪ್ಷನಿಸ್ಟ್ ಹುಡುಗಿ ತಿಳಿಸಿದಳು. ಡಾಕ್ಟರ್ ಬರುವುದು ತಡವೆಂದು ತಿಳಿದ ಮೇಲೆ ಕುಸುಮಾ ವೇಯಿಟಿಂಗ್ ರೂಮಿನಲ್ಲಿ ಹೋಗಿ ಕುಳಿತಳು.
ಪದೇ ಪದೇ ಮಗನ ಪರಿಸ್ಥಿತಿಯ ಬಗ್ಗೆಯೇ ಯೋಚಿಸುತ್ತಾ ಒತ್ತಿ ಬರುತ್ತಿದ್ದ ದುಃಖಕ್ಕೆ ಬಿಕ್ಕಳಿಸುತ್ತಾ ಬಾಯಿಗೆ ಕರವಸ್ತ್ರ ಅಡ್ಡ ಹಿಡಿದುಕೊಂಡು ತಲೆತಗ್ಗಿಸಿ ಕುಳಿತಿದ್ದಳು. ವೇಯ್ಟಿಂಗ್ ರೂಮಿನಲ್ಲಿ ಇವಳಂತೆೇ ಡಾಕ್ಟರರನ್ನು ಕಾಣಲು ಬಂದಿದ್ದ ಹಲವರಿದ್ದರು.
ಸಣ್ಣವಯಸ್ಸಿನವರಾಗಿದ್ದ ಒಂದು ದಂಪತಿ ಜೋಡಿಯು, ಕುಸುಮಾ ದುಃಖಿಸುವುದನ್ನು ನೋಡಿ ಹತ್ತಿರಬಂದು “ಅಳುತ್ತಿರುವುದು ಏಕೆ ?”ಎಂದು ಸಾಧಾನವಾಗಿ ಕಾರಣ ವಿಚಾರಿಸಿದರು. ಅವರ ಸಂತೈಸುವಿಕೆಯ ದನಿಯ ಮಾಂತ್ರಿಕ ಶಕ್ತಿಗೆ ಸಮಾಧಾನಗೊಂಡ ಕುಸುಮಾ ಬಿಕ್ಕಳಿಸುತ್ತಲೇ ತನ್ನ ದುಃಖದ ಕಾರಣ ತಿಳಿಸಿದಳು. ಆ ದಂಪತಿಗಳು ಆಕೆಯನ್ನು ಸಮಾಧಾನಿಸುತ್ತಾ, ‘’ನೋಡಿ, ಹೀಗೆ ಹೇಳುತ್ತಿದ್ದೇವೆಂದು ತಪ್ಪು ತಿಳಿಯಬೇಡಿ. ನಾವು ನಿಮಗಿಂತ ಸಣ್ಣವರೇ ಇರಬಹುದು. ಆದರೆ, ಬರೀ ಶೋಕಿಸುವುದರಿಂದ ಯಾವ ಪ್ರಯೋಜನವಿಲ್ಲ ಎಂದು ಮಾತ್ರ ಹೇಳಬಲ್ಲೆವು. ಸುಮ್ಮನೆ ಯೋಚಿಸುತ್ತಾ ಬೇಸರಪಡುತ್ತಾ ಕುಳಿತುಕೊಳ್ಳಬೇಡಿ. ವಿಜ್ಞಾನ ಮುಂದುವರೆದಿದೆ. ಹಲವು ಸಾಧನ- ಸಾಧ್ಯತೆಗಳಿವೆ. ನೀವು ಹೊಸ ಹುರುಪಿನಿಂದ ನಿಮ್ಮ ಮಗುವಿನ ಕನಸುಗಳಿಗೆ ಬಣ್ಣ ತುಂಬಿರಿ. ಮಗುವಿನ ಭವಿಷ್ಯವನ್ನು ವರ್ಣಹೀನ ಮಾಡಬೇಡಿ. ನಿಮ್ಮದೇನು ಅಂತಹ ದೊಡ್ಡ ಸಮಸ್ಯೆಯೇ ಅಲ್ಲ” ಎಂದು ನಿಧಾನವಾಗಿ ಸಂತೈಸಿ ತಮ್ಮ ಕುರ್ಚಿ ಬಳಿ ಮರಳಿ ಹೋದರು.
‘’ನನ್ನದೇನು ದೊಡ್ಡ ಸಮಸ್ಯೆಯಲ್ಲವಾ..?! ನನ್ನ ದುಃಖ, ಹೊಟ್ಟೆ ಸಂಕಟ ಇವರಿಗೆ ಹೇಗೆ ತಿಳಿಯಬೇಕು? ಇವರ ಬಳಿ ನಾನು ಏಕಾದರು ನನ್ನ ಮಗನ ಸಮಸ್ಯೆ ಹೇಳಿಕೊಂಡೆನೋ..?!’’ ಎಂದುಕೊಂಡು ಕುಸುಮ ತನ್ನ ನೋವಿನ ಜೊತೆಗೆ ಈಗ ಕೋಪ ಅಸಮಾಧಾನಗಳನ್ನೂ ಹೊಂದಿದವಳಾಗಿ ಕುದಿಯತೊಡಗಿದಳು.
ಅವರು ಹೋಗಿ ಕುಳಿತ ಸ್ವಲ್ಪ ಹೊತ್ತಿನಲ್ಲೇ ಅವರ ಪಕ್ಕದ ಕುರ್ಚಿಯ ಬಳಿಯಲ್ಲಿ ಇರಿಸಲಾಗಿದ್ದ ಪ್ರಾಮ್ನಲ್ಲಿ ನಿದ್ರಿಸುತ್ತಿದ್ದ ಮಗುವೊಂದು ಎದ್ದು ಕಿಟಾರನೆ ಕಿರುಚಿ ರೋಧಿಸತೊಡಗಿತು. ಕುಸುಮಾಳ ಗಮನ ಆ ಮಗುವಿನತ್ತ ಹರಿಯಿತು. ಕ್ಷಣದ ಹಿಂದೆ ಯಾರನ್ನು ‘ತನ್ನ ಸಂಕಟ ಅರಿಯಲಾಗದವರು’ ಎಂದು ಮನಸ್ಸಿನಲ್ಲೇ ಜರಿದುಕೊಂಡಳೋ ಅದು ಅವರ ಮಗುವಾಗಿತ್ತು .
ದಂಪತಿಗಳು ಆ ಮಗುವನ್ನು ನಿಧಾನವಾಗಿ ಪ್ರಾಮ್ನಿಂದ ಮೇಲೆತ್ತಿಕೊಂಡು, ಬಹಳ ನಾಜೂಕಾಗಿ ಅದರ ಬಟ್ಟೆ ಸರಿಪಡಿಸುತ್ತಾ ಮೆಲ್ಲನೆ ದನಿಯಲ್ಲಿ ಸಂತೈಸಲು ತೊಡಗಿದರು. ಮಗುವಿನ ಮುಖ ತನ್ನತ್ತ ತಿರುಗುತ್ತಲೇ ಅದನ್ನು ಕಂಡ ಕುಸುಮ ಗರಬಡಿದಂತೆ ಸ್ಥಬ್ಧಳಾದಳು!
‘ಅಮರನಿಗೆ ಕೆಲವೊಂದು ಬಣ್ಣ ಗುರುತಿಸಲು ತಿಳಿಯದಿದ್ದರೇನಂತೆ, ಕಡೇಪಕ್ಷ ಈ ಜಗತ್ತನ್ನಾದರೂ ಕಾಣುತ್ತಾನಲ್ಲಾ. ಈ ಅಮ್ಮನ ಮುಖವನ್ನಾದರೂ ನೋಡಿ ನಲಿಯುತ್ತಾನವನು. ಅವನಿಗೆ ಬಣ್ಣಗಳ ಬಗ್ಗೆ ತಿಳಿಯದಿದ್ದರೇನಂತೆ, ನನಗೆ ಅವನೇ ಕಾಮನಬಿಲ್ಲು. ನನ್ನ ಬಾಳಿಗೆ ಅವನೇ ಬಣ್ಣದೋಕುಳಿ, ಬಾಣಬಣ್ಣ’ ಎಂದು ತನ್ನ ಮನವನ್ನು ಸಂತೈಸಿಕೊಂಡಳು ಕುಸುಮ.
ಇನ್ನೂ ಅಳುತ್ತಲೇ ಇದ್ದ ಮಗುವನ್ನು ಸಂತೈಸಲು ಮನಸ್ಸಾಗಿ, ಕುಸುಮ ಅಮರನಿಗೆಂದು ಕೊಂಡಿದ್ದ ದೊಡ್ಡ ಕ್ಯಾಡ್ಬರೀಸ್ ಚಾಕ್ಲೇಟ್ ಅನ್ನು ಪರ್ಸಿನಿಂದ ತೆಗೆದು, ಅಳುತ್ತಿದ್ದ ಮಗುವಿನ ಬಳಿಗೆ ನಡೆದಳು. ಸ್ನೇಹದ ನಗೆ ಸೂಸುತ್ತಿದ್ದ ಆ ಮಗುವಿನ ಅಪ್ಪಅಮ್ಮನ ಕಣ್ಣುಗಳು ಕುಸುಮಾಳತ್ತ ತಿರುಗಿದಾಗ ಅಪಾರ ವಿಶ್ವಾಸದಲ್ಲಿ ಹೊಳೆಯುತ್ತಿದ್ದವು. ಆದರೆ, ಕಣ್ಣುಗಳಿರಬೇಕಾದ ಜಾಗದಲ್ಲಿ ಕೇವಲ ಎರಡು ಕುಳಿಗಳನ್ನು ಹೊಂದಿದ್ದ ಮಗುವನ್ನು ಅವರು ಎದೆಗವಚಿಕೊಂಡ ರೀತಿಯನ್ನು ಕಂಡಾಗ ಕುಸುಮಳಿಗೆ ‘ಎಲ್ಲಾ ತಾಯ್ತಂದೆಯರಿಗೂ ಅವರ ಮಗುವೇ ಅವರವರ ಬಾಳ ಬಣ್ಣ- ಬಾಳ ಬೆಳಕು’ ಎಂಬ ಸತ್ಯ ಅರ್ಥವಾಗಿತ್ತು.
****************************
ಮನಮುಟ್ಟುವ , ಕಣ್ತೆರೆಸುವ ..ಕತೆ
ಧನ್ಯವಾದಗಳು ಸ್ಮಿತಾ…
ತಂದೆತಾಯಿಗಿರುವ ಆತ್ಮವಿಶ್ವಾಸದ ಜ್ಞಾನ ಕುಳಿಯೇ ಮಗುವಿನ ಖಾಲಿಕುಳಿಯನ್ನು ತೇಜದಿಂದ ತುಂಬ ಬಲ್ಲದು.
ನಿಜ.
ಭಾವಪೂರ್ಣ ಕಥೆ..ನಿರೂಪಣಾ ಶೈಲಿ ಅದ್ಭುತ…
ಧನ್ಯವಾದಗಳು