ಬರೆಯದಿರಲಾರೆ….
ನಾಗರಾಜ ಹರಪನಹಳ್ಳಿ
ಅಕ್ಷರಗಳು ಆತ್ಮಹತ್ಯೆ ಮಾಡಿಕೊಂಡಿವೆ
ಕೆಲವರಿಗೆ ಮಾರಾಟವಾಗಿವೆ ಹಸಿ ಮಾಂಸಲ ದಂಧೆಗೆ
ಗೊತ್ತಾ ನಿನಗೆ?
ಕೆಲವೆಡೆ ಫತ್ವಾ ಇದೆ ಬೆಳಕಿಗೆ
ಇನ್ನೇನಾಗಬಹುದು??
ಪನ್ಸಾರೆ, ಕಲಬುರ್ಗಿ, ಗೌರಿ ಕೊಂದ ನಾಡಿನಲ್ಲಿ??
ಬರೆವ ಕೈಗಳ,ನಿಜದ ಮಾತಿಗೆ ಬೀಗ ಜಡಿದ ಮೇಲೆ ??
ಕೊಲೆಯಾಗಿದೆ ಅಭಿವ್ಯಕ್ತಿ!
ಗೊತ್ತಾ ನಿನಗೆ ??
ಅಮಾಸ, ಠೊಣ್ಣಿಯರ ಹಸಿವು ಹಿಂಗಿಲ್ಲ
ಸಾಕವ್ವ ಬದುಕಿನ ಜಂಜಾಟ ನಿಂತಿಲ್ಲ; ಹರಕು ಸೀರೆ ,ಮುರಿದ ಮನೆ ಕಟ್ಟಲಾಗಿಲ್ಲ
ಐತ ಪೀಂಚಲು ಬದುಕ ಕಟ್ಟಲು ಅಲೆದಾಡುತ್ತಿದ್ದಾರೆ
ಚೋಮುನ ಭೂಮಿ ಹೊಂದುವ ಕನಸು ಕನಸಾಗಿಯೇ ಇದೆ…
ನಾಡದೊರೆಯ ಕಣ್ಣು ಬದಲಾಗಿಲ್ಲ
ಹೀಗಿರುವಾಗ…
ನನಗೆ ನಾಚಿಕೆಯಾಗುತ್ತದೆ
ಮಳೆ ನದಿ ಕಾಡು ಬೆಟ್ಟ ಕಡಲು ದಂಡೆ ಕಾಮನಬಿಲ್ಲನ ಬಗ್ಗೆ ಕವಿತೆ ಬರೆದದ್ದಕ್ಕೆ…
ಇನ್ನು ಬರೆಯದಿರಲಾರೆ
ಮನುಷ್ಯರ ಸಂಚುಗಳ ಬಗ್ಗೆ
ಆತ್ಮವಂಚನೆಗಳ ಬಗ್ಗೆ
ಹಸಿದವರ ಬಗ್ಗೆ
ಬರೆಯದೇ ಇರಲಾರೆ
ಹಾಗೆ ಬರೆಯದೇ ನಾ
ಮೌನಿಯಾದರೆ ; ಅಕ್ಷರಗಳ ಯಜಮಾನಿಕೆಗೆ ಒತ್ತೆ ಇಡದೆ
ಅಕ್ಷರಗಳ ಜೊತೆ ಬದುಕುತ್ತೇನೆ
ಇಲ್ಲವೇ ……
*****************************
ಅರ್ಥಪೂರ್ಣ ಕವಿತೆ
ಮಾರ್ಮಿಕವಾದ ಕವನ
ನೇರ ಅಭಿವ್ಯಕ್ತಿಯ ಹಿಂದೆ ಕವಿಯ ಪ್ರಜ್ಞೆ ಕೆಲಸಮಾಡಿದೆ.
ಕವಿತೆ ಕೊಟ್ಟ ಪೆಟ್ಟು ಮುಟ್ಟಿ ನೋಡಿಕೊಳ್ಳುವಂತದ್ದು..
S. ಇದು ಕವಿತೆ. ಬರೆಯಬೇಕಾದ ಕವಿತೆ
ಕವಿತೆಯನ್ನು ಸಹೃದಯತೆಯಿಂದ ಓದಿದ ಕವಯಿತ್ರಿ ಶೋಭಾ ಹಿರೇಕೈ , ಸ್ಮಿತಾ ಅಮೃತರಾಜ್, ಪಾಲ್ಗುಣ ಗೌಡ್ರು, ವಿಭಾ ಪುರೋಹಿತ ಇವರಿಗೆ, ಕವಿತೆ ಪ್ರಕಟಿಸಿದ ಸಂಗಾತಿ ವೆಬ್ ಸಂಪಾದಕರಾದ ಮಧುಸೂದನ್ ಸರ್ ಗೆ ಧನ್ಯವಾದಗಳು…
ಕವಿತೆಗೆ ರೋಷ ಇರಲಿ. ಎಲ್ಲವನ್ನೂ ನೇರಾನೇರ ಹೇಳಬೇಕಿಲ್ಲ. ಇಂಥ ಒರಟುತನವೂ ಬೇಕಿಲ್ಲ. ನಿಮ್ಮ ಎಂದಿನ ಮೃದು ಭಾಷೆಯಲ್ಲೇ ಹೇಳಿ. ರೋಷಕ್ಕಿಂತ ತಣ್ಣನೆಯ ಆಕ್ರೋಶ ಹೆಚ್ಚು ಪರಿಣಾಮಕಾರಿ.. ಗಾಂಧಿ , ಬಸವ ಇದಕ್ಕೆ ಉತ್ತಮ ನಿದರ್ಶನಗಳು.ಒಮ್ಮೊಮ್ಮೆ ಇಂಥ ಭಾಷೆ frustration ಆಗಿ ಕಾಣಿಸುತ್ತದೆ.