ಕಾವ್ಯಯಾನ

ಅವನು ಹೆಣ್ಣಾಗಬೇಕು

ಡಾ.ಕಾತ್ಯಾಯಿನಿ ಕುಂಜಿಬೆಟ್ಟು

ಬಾಳ ನಡುಗಾಲದಲ್ಲಿ ನಿಂತಿರುವೆ
ಮುಟ್ಟು ನಿಲ್ಲುವ ಕಾಲ
ದೇಹ ಹಣ್ಣಾಗುತ್ತಿದೆ
ಮನಸ್ಸಿಗೆ ಮರುಳು ಹಿಡಿದುಬಿಟ್ಟಿದೆ

ತಲೆಕೆದರಿಕೊಂಡು ಹುಚ್ಚಿಯಂತೆ
ಹಾದಿ ಬೀದಿ ಎಲ್ಲೆಂದರಲ್ಲಿ ಸಿಕ್ಕಾಪಟ್ಟೆ ಅಲೆಯುತ್ತ
ಸಿಕ್ಕಸಿಕ್ಕ ಭಾಷೆಯಲ್ಲಿ ಸಿಕ್ಕಸಿಕ್ಕವರನ್ನೆಲ್ಲ
ಮತ್ತಿಷ್ಕದಿಂದ ಉಂಗುಷ್ಠದವರೆಗೂ
ಉಗಿಯಬೇಕೆನಿಸುತ್ತದೆ
ಕ್ಯಾಲೆಂಡರಲ್ಲಿ
ಕೆಂದಾವರೆಯ ಮೇಲೆ ನಗುತ ಕುಳಿತ
ಆ ಹಣ್ಣುಹಣ್ಣು ಮುದುಕ ಬ್ರಹ್ಮನನ್ನು
ಜುಟ್ಟು ಹಿಡಿದೆಳೆದು ನೆಲಕೆ ದಬ್ಬಿ
ನನ್ನ ಮಂತ್ರದಂಡದಿಂದ ಹೊಡೆದು
ಹೆಣ್ಣು ಶಿಶು ಮಾಡಬೇಕೆನಿಸುತ್ತದೆ
ಅವನೂ ಮೈನೆರೆದು
ತಿಂಗಳು ತಿಂಗಳು ಕರುಳು ಹಿಂಡುವ
ಹೊಟ್ಟೆನೋವಲ್ಲಿ ಕರಿನೆತ್ತರ ಕೊಳೆತ ಮೂರಿಯಲ್ಲಿ
ತಲೆಶೂಲೆಯೇರಿ ಮೂಲೆಯಲ್ಲಿ ಯಮಯಾತನೆಯನ್ನೇ ಹೊದ್ದು
ಮಂಡಿಗಳ ನಡುವೆ ತಲೆತೂರಿ
ಮುದುಡಿ ಬಿದ್ದುಕೊಳ್ಳಬೇಕು

ಸೃಷ್ಟಿ ಸುಲಭ ಎಂದುಕೊಂಡಿದ್ದಾನೆ ಅವ!
ಹೆಣ್ಣಾಗಬೇಕು!
ಗಾಳಿ ಮಳೆ ಚಳಿಯೆನ್ನದೆ ಗಭ೯ದಲ್ಲಿ
ತನ್ನ ಸೃಷ್ಟಿಯನ್ನು ತಾನೇ ಹೊತ್ತು ತಿರುಗಿ
ಬೆನ್ನುಹುರಿ ಎಲುಬು ಎಲುಬುಗಳನ್ನೇ ಸೀಳಿಕೊಂಡು ಬರುವ ಪ್ರಸವಬೇನೆ
ನಾಭಿಯಾಳಕ್ಕೆ ಕೈಹಾಕಿ ಜೀವಂತ ಕೂಸನ್ನು ಹೊರಗೆಳೆದು
ಒoದು ದೇಹವನ್ನೇ ಒಂದು ಆತ್ಮವನ್ನೇ ಎರಡು ಎರಡಾಗಿ ಸೀಳಿದಂತೆ
ದೇಹದಿಂದ ಆತ್ಮವನ್ನೇ ಹೊರಗೆಳೆದಂತೆ ಹೆರಿಗೆಯ ಯಮಯಾತನೆಯಲ್ಲಿ ಹೆತ್ತು
ಹಿಸ್ಟೀರಿಯಾವೇರಿ ಬಾಣಂತಿ ನಂಜಲ್ಲಿ
ಕತ್ತಲ ಮೂಲೆಯ ನೆತ್ತರ ಕಬ್ಬಿಣ ಮೂರಿಯಲ್ಲಿ ಅವನೂ
ಮೊಲೆಯೂಡುತ್ತ ಬಿದ್ದುಕೊಳ್ಳಬೇಕು.. ತನ್ನದೇ ದೇಹದ ತನ್ನದೇ ಆತ್ಮದ ತುಂಡಿಗೆ!
ಒಣಶುಂಠಿ ಕರಿಮೆಣಸು ಸಾರಲ್ಲೇ ಹಸಿಹಸಿ ಗಭ೯ ಮುರುಟಿಸಿಕೊಂಡು
ಮೂರು ತಿಂಗಳನ್ನು ಮೂರು ಕಾಲಗಳಂತೆ
ಲೋಕಕಾಣದೆ ನರನರ ಅನುಭವಿಸಬೇಕು
ಕೂಸಿನ ಸೀಕು ಕಾಯಿಲೆಯ ತುಂಬ
ನಿದ್ದೆಯಿರದ ಜಾಗರ ರಾತ್ರಿಗಳನ್ನು ಕಳೆದು
ಕೆಂಪು ನೇಸರನನ್ನೇ ಕಂಗಳಲ್ಲಿ ಉರಿಸಿಕೊಂಡು
ಪ್ರತಿ ನಾಳೆ ಮೂಡಬೇಕು
ಅವ ಹೆಣ್ಣಾಗಲೇಬೇಕು!

ಬಾಳ ನಡುಗಾಲದಲ್ಲಿ ನಿಂತಿರುವೆ
ಮುಟ್ಟು ನಿಲ್ಲುವ ಕಾಲ
ದೇಹ ಹಣ್ಣು ಆಗುತ್ತಿದೆ
ಮನಸ್ಸಿಗೆ ಮರುಳು ಹಿಡಿದುಬಿಟ್ಟಿದೆ
ಅವನೂ ಅನುಭವಿಸಲೇಬೇಕು
ನಡುಗಾಲವನ್ನು
ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ನಿಗಿನಿಗಿ
ಕೆರಳುವ ನರಳುವ
ಮನಸ್ಸಿನ ಒಣಗುವ ಗಭ೯ದ
ಕಿರುಚಾಟವನ್ನು

ಇವತ್ತು
ಹಿಮಾಲಯದ ಶಿಖರವನ್ನೇ ಏರಿನಿಂತಿದ್ದೇನೆ… ಯಾವ ನಿಪುಣ
ಶಿಖರಾರೋಹಿಯೂ ಏರಲಾಗದ ಶೀತಲ ಮೈ ಕೊರೆಯುವ ಎತ್ತರದಲ್ಲಿ
ಒಂಟಿ ಕಾಲಲ್ಲಿ ನಿಂತು ಬಿಟ್ಟಿದೆ ಹುಚ್ಚು ಮನಸ್ಸು!
ನಾಲ್ಕು ದಶಕಗಳಲ್ಲಿ ಒಡಲೊಳಗೇ
ಅದುಮಿಟ್ಟ ಕಡಲನ್ನು
ಭಾವದಲೆಗಳು ಭೋಗ೯ರೆವ ಮನಸ್ಸನ್ನು
ಎದೆಯೊಡೆವಂತೆ ಅತ್ತು ಕರೆದು ಕೂಗಿ ಕಿರುಚಿ ಹೊರದಬ್ಬಿ
ಅದರ ಬೆನ್ನಲ್ಲೆ ಹಾರಬೇಕು ಪ್ರಪಾತಕ್ಕೆ
ಮನದ ಹಿಂದೆಯೇ ಜಾರುತ್ತಿದೆ ದೇಹ ಆಳಕ್ಕೆ
ಆತ್ಮ ತೇಲುತ್ತಿದೆ ಎತ್ತರ ಎತ್ತರಕೆ
ಆದರೂ… ಅಯ್ಯೋ!
ಹೊಟ್ಟೆಯೊಳಗೆ ಸಟ್ಟುಗ ಹಾಕಿ ತಿರುವಿದಂತೆ!
ಅವನೂ ಹೆಣ್ಣು ಆಗಲೇ ಬೇಕು!

ಬಾಳ ನಡುಗಾಲದಲ್ಲಿ ನಿಂತಿರುವೆ
ಮನಸ್ಸಿಗೆ ಮರುಳು!
ಆವನಿಗೂ ಮರುಳು ಹಿಡಿಯಬೇಕು ನನ್ನಂತೆಯೇ!
ಆಗ… ಮರುಳಲ್ಲಿ ಮಂತ್ರದಂಡದಲ್ಲಿ ಮುಟ್ಟಿ ಮುಟ್ಟಿ
ಗಂಡಸರೆಲ್ಲರನ್ನೂ ಅವ ಹೆಣ್ಣು ಮಾಡಬಹುದು… ಹಹ್ಹ !

ದೇಹ ಹಣ್ಣು ಆಗುತ್ತಿದೆ
ಗಿಣಿ ಕಚ್ಚಿದ ಹಣ್ಣು
ಆಳ ಗಾಯ!

*********************************

8 thoughts on “ಕಾವ್ಯಯಾನ

  1. ಅದ್ಭುತ ಅಭಿವ್ಯಕ್ತಿ. ತಾಯಿಯಾಗುವುದು ಸುಲಭವಲ್ಲ..ಭೂಮಿಯ ಹೆರಿಗೆ ,ಭೂಮಿಯ ಸಹನೆ …ಅಕ್ಷರದಲ್ಲಿ ಕಟ್ಟಿದ ನಿಮಗೆ ನಮಸ್ಕಾರ.
    ಬ್ರಹ್ಮನ ಮುಖಕ್ಕೆ ತಟ್ಟಿದ್ದ ಬಂಡಾಯವನ್ನು ಗೌರವಿಸುವೆ. ಸಾಯುವ ,ಕೆಡುವ ಗಂಡರನು ಒಲೆಯೊಳಗಿಕ್ಕು ಎನ್ನುವ ಅಕ್ಕಮಹಾದೇವಿಯ ಬಂಡಾಯ ನಿಮ್ಮಲ್ಲೂ ಕಂಡಿತು. ಇದೇ ಮುನ್ನೆಲೆಗೆ ಬರಬೇಕಾದ ನಮ್ಮ ಕಾವ್ಯ ಪರಂಪರೆ….

    ಅತ್ಯುತ್ತಮ ಕವಿತೆ ಬರೆದ ನಿಮಗೆಮ,ಪ್ರಕಟಿಸಿದ ಸಂಗಾತಿಗೆ ಅಭಿನಂದನೆಗಳು..

  2. ಭೋರ್ಗರೆವ ಪ್ರವಾಹದಂತೆ ಎರಗಿ ಬರುವ
    ಈ ಕವಿತೆ ನಿಜಕ್ಕೂ ಅತ್ಯುತ್ತಮ.

  3. ಮುಟ್ಟು ನಿಲ್ಲುವ ಕಾಲದ ಸಂಕಟಕ್ಕೆ ಹೊರಹೊಮ್ಮಿದ ಭಾವದ ಮೊನಚು ಅದ್ಭುತ

  4. ನನ್ನದೇ ಧ್ವನಿ ನಿಮ್ಮ ಕವಿತೆ ರೂಪದಲ್ಲಿ ಬಂದಿದೆಯೇನೋ ಎನ್ನಿಸಿತು. ಎಲ್ಲ ಸಂಕಷ್ಟಗಳನ್ನೂ (ಎಲ್ಲ ಎಂದರೆ ಎಲ್ಲ)
    ಹೆಣ್ಣಿನ ಮಡಿಲಿಗೆ ಹಾಕಿ ಮಜಾ ನೋಡುವ ಬ್ರಹ್ಮ ಸೃಷ್ಟಿಯ ಬಗ್ಗೆ ನನ್ನಲ್ಲಿ ಹೇಳಲಾರದ- ಹೇಳತೀರದ ಕಡುಕೋಪವಿದೆ! Excellent poem ಎಂದರೆ ಪ್ರಾಯಶಃ ಪ್ರತಿಕ್ರಿಯೆ ನಾಭಿಯಿಂದ ಬಂದಂತೆನಿಸುವುದಿಲ್ಲವೇನೋ!!ಉತ್ತಮೋತ್ತಮ!! ಎರಡು ಮಾತಿಲ್ಲ..ಈ ಕವಿತೆಯ ಭಾವಾಭಿವ್ಯಕ್ತಿಗೆ ಹೃದಯಾಂತರಾಳದ ಸಲಾಮ್!! ಅದ್ಭುತ ಲಹರಿ…

  5. ಮುಟ್ಟಿನ ಸಂಕಟ ಸೃಷ್ಟಿಯ ಸಂಕಟ ಮುಟ್ಟು ನಿಲ್ಲುವಾಗಿನ ಸಂಕಟ ನಿಂತ ಸಂಕಟ ಹೆಣ್ಣತನವೆ ಕಳಚಿದ ಸಂಕಟ ಮರುಳಿನ ಸಂಕಟ ಒಂದೇ ಎರಡೇ
    ಈ ಸಂಕಟಗಳನ್ನೆಲ್ಲ ಅನುಭವಿಸಿ ಹಣ್ಣಾಗಲು ಗಂಡು ಹೆಣ್ಣಾಗಿ ಹುಟ್ಟಬೇಕು ಹೆಣ್ಣು ಹೇಗೆ ಹಣ್ಣಾಗುವಳೆಂದು ತಿಳಿಯುವುದು ಆಗಲೇ ಅರ್ಥಪೂರ್ಣ ಕವಿತೆ

  6. ಈಗ ತಾನೆ ಹನುಮಂತ ಹಾಲಗೇರಿ ಅವರ ‘ಕೆಂಗುಲಾಬಿ’ ಓದಿ ಮುಗಿಸಿದಾಗ ‘ಶಾರಿ’ಯ ಬವಣೆ ನನ್ನನ್ನು ಹಿಂಡಿ ಹಿಪ್ಪೆ ಮಾಡುವಾಗ ಎಫ್ ಬಿ ಯ ಆನ್ ಲೈನ್ ಪೇಜಲ್ಲಿ ಕಂಡಿದ್ದು ಕಾತ್ಯಾಯಿನಿ ಕುಂಜಿಬೆಟ್ಡು ಅವರ ‘ಅವನು ಹೆಣ್ಣಾಗಬೇಕು’ ಕವಿತೆ. ಇದಕ್ಕು ಮುನ್ನ ಮಂಜುನಾಥ್ ವಿ.ಎಂ.ಅವರ ‘ಅಸ್ಪೃಶ್ಯ ಗುಲಾಬಿ’ ಯೂ ಡಿಸ್ಟರ್ಬ್ ಮಾಡಿದ್ದಿದೆ. ಕಾತ್ಯಾಯಿನಿ ಅವರ ‘ಅವನು ಹೆಣ್ಣಾಗಬೇಕು’ ಹೆಣ್ಣಿನ ಅಂತರಂಗದೊಳಗೆ ಕುದಿವ ಎಸರಿನಂತೆ! ನನ್ನ ತಳಮಳ ಹೆಚ್ಚಿಸಿದ ಕವಿತೆ!
    *
    ಎಂ.ಜವರಾಜ್

Leave a Reply

Back To Top