ಬಾಗಿಲುಗಳ ಆಚೀಚೆ

ಬಾಗಿಲುಗಳ ಆಚೀಚೆ ಏನೆಲ್ಲ ಇರಬಹುದು! ಹುಟ್ಟಿದ ಭಾವನೆಗಳನ್ನೆಲ್ಲ ಹುಷಾರಾಗಿ ನಿರ್ವಹಿಸುವ ಮನಸ್ಸಿನಂತೆಯೇ ಬಾಗಿಲುಗಳು ಕೂಡಾ. ಅಗತ್ಯಕ್ಕೆ, ಅವಶ್ಯಕತೆಗೆ ಅನುಗುಣವಾಗಿ ತೆರೆದುಕೊಳ್ಳುವ ಒಂದೊಂದು ಬಾಗಿಲಿಗೂ ಅದರದೇ ಆದ ಪುಟ್ಟ ಹೃದಯವೊಂದು ಇರಬಹುದು; ಆ ಹೃದಯದ ಬಡಿತಗಳೆಲ್ಲವೂ ಮನೆಯೊಳಗಿನ ಮೌನವನ್ನೋ, ಅಂಗಡಿಗಳ ವ್ಯವಹಾರವನ್ನೋ, ಸಿನೆಮಾ ಹಾಲ್ ನ ಕತ್ತಲೆಯನ್ನೋ, ರಸ್ತೆಯೊಂದರ ವಾಹನಗಳ ವೇಗವನ್ನೋ ತಮ್ಮದಾಗಿಸಿಕೊಳ್ಳುತ್ತ ಏರಿಳಿಯುತ್ತಿರಬಹುದು. ಹೀಗೆ ಎಲ್ಲ ಪ್ರಾಪಂಚಿಕ ನೋಟ-ಅನುಭವಗಳನ್ನು ತಮ್ಮದಾಗಿಸಿಕೊಳ್ಳುವ ಬಾಗಿಲುಗಳಿಗೆ ಒಮ್ಮೊಮ್ಮೆ ಕೃಷ್ಣ-ರಾಧೆಯರ, ಶಿವ-ಪಾರ್ವತಿಯರ ಹೃದಯಗಳೂ ಅಂಟಿಕೊಂಡು ಈ ಬಾಗಿಲು ಎನ್ನುವ ವಿಸ್ಮಯದ ಜಗತ್ತು ವಿಸ್ತರವಾಗುತ್ತ ಹೋಗುತ್ತದೆ. ಅವರವರ ಕಲ್ಪನೆಗಳಿಗನುಸಾರವಾಗಿ ತೆರೆದುಕೊಳ್ಳುವ ಆ ಜಗತ್ತಿನಲ್ಲಿ ವೆಲ್ ಕಮ್ ಎಂದು ಸ್ವಾಗತಿಸುವ ಡೋರ್ ಮ್ಯಾಟ್ ನಿಂದ ಹಿಡಿದು ನೀಳವಾದ ಬಳ್ಳಿಯ ನೇಯ್ಗೆಗಳ ಫ್ಲೋರ್ ಕುಷನ್ ಗಳವರೆಗೂ ಹೊಸಹೊಸ ಸ್ಪರ್ಶಗಳು ನಿಲುಕುತ್ತವೆ; ಚುಕ್ಕಿಯಿಟ್ಟು ಎಳೆದ ರಂಗೋಲಿಯ ಸಾಲುಗಳ ಮಧ್ಯೆ ಹುಟ್ಟಿದ ಹೂವೊಂದು ಡಿಸೈನರ್ ಬ್ಲೌಸ್ ಗಳನ್ನು ಅಲಂಕರಿಸುತ್ತದೆ; ತೋರಣದೊಂದಿಗೆ ತೂಗುವ ಮಲ್ಲಿಗೆ ಮಾಲೆಯ ಗಂಧ ಗಾಳಿ ಹರಿದಲ್ಲೆಲ್ಲ ಹರಿದು ಹೃದಯಗಳನ್ನು ಅರಳಿಸುತ್ತದೆ.

          ಈ ಹೃದಯಗಳಿಗೂ ಬಾಗಿಲುಗಳಿಗೂ ಒಂದು ರೀತಿಯ ವಿಶಿಷ್ಟವಾದ ಸಂಬಂಧವಿರುವಂತೆ ಭಾಸವಾಗುತ್ತದೆ. ಈ ಸಂಬಂಧವನ್ನು ಮನುಷ್ಯ ಸಹಜವಾದ ರಾಗ-ದ್ವೇಷಗಳನ್ನೊಳಗೊಂಡ ಎಲ್ಲ ಭಾವನೆಗಳೂ ಒಂದಿಲ್ಲೊಂದು ರೂಪದಲ್ಲಿ ಸಲಹುತ್ತಿರುತ್ತವೆ. ಸಂಜೆಯ ಸಮಯದಲ್ಲೊಮ್ಮೆ ಬಾಲ್ಯವನ್ನು ಸುಂದರವಾಗಿ ರೂಪಿಸಿದ ಪ್ರೈಮರಿಯ ಅಥವಾ ಹೈಸ್ಕೂಲಿನ ಅಂಗಳದಲ್ಲಿ ಹೋಗಿ ನಿಂತರೆ ಮುಚ್ಚಿದ ಬಾಗಿಲುಗಳ ಹಿಂದಿರುವ ಅದೆಷ್ಟೋ ಬಗೆಬಗೆಯ ಭಾವನೆಗಳು ಹೃದಯವನ್ನು ತಾಕುತ್ತವೆ. ಮನೆಯಿಂದ ಶಾಲೆಯವರೆಗಿನ ದೂರವನ್ನು ಇದ್ದೂ ಇಲ್ಲದಂತಾಗಿಸಿದ ಗೆಳತಿಯರ ಗುಂಪು, ಪೇಪರಿನಲ್ಲಿ ಸುತ್ತಿ ಕಂಪಾಸು ಬಾಕ್ಸಿನಲ್ಲಿ ಭದ್ರವಾಗಿಟ್ಟಿದ್ದ ಎರಡೇ ಎರಡು ಪೆಪ್ಪರಮೆಂಟುಗಳನ್ನು ಶರ್ಟಿನ ಮಧ್ಯದಲ್ಲಿಟ್ಟು ಎಂಜಲು ತಾಗದಂತೆ ಚೂರು ಮಾಡಿ ಎಲ್ಲರಿಗೂ ಹಂಚುತ್ತಿದ್ದ ಎರಡನೇ ಕ್ಲಾಸಿನ ಹುಡುಗ, ಮಾರ್ಕ್ಸ್ ಕಾರ್ಡುಗಳಿಂದ ಹಿಡಿದು ಶಾಲೆಯ ಜಾತಕವನ್ನೆಲ್ಲ ಬಚ್ಚಿಟ್ಟುಕೊಂಡಿರುತ್ತಿದ್ದ ದೊಡ್ಡದೊಡ್ಡ ಕೀಗೊಂಚಲುಗಳ ಕಬ್ಬಿಣದ ಕಪಾಟು, ತೆರೆದ ಕಿಟಕಿಯ ಬಾಗಿಲುಗಳಿಂದ ನುಸುಳಿ ನೋಟ್ ಬುಕ್ ನ ಪುಟಗಳನ್ನು ನೆನೆಸುತ್ತಿದ್ದ ಮಳೆಹನಿಗಳು, ಹೀಗೆ ಮುಚ್ಚಿದ ಬಾಗಿಲಾಚೆಗಿನ ನೆನಪುಗಳೆಲ್ಲವೂ ವಿಧವಿಧದ ಭಾವನೆಗಳನ್ನು ಹೊತ್ತು ಅಂಗಳಕ್ಕಿಳಿಯುತ್ತವೆ. ಆ ಎಲ್ಲ ಭಾವನೆಗಳನ್ನು ಹೊತ್ತ ಹೃದಯ ಭಾರವಾಗುವುದು ಅಥವಾ ಹೃದಯದ ಭಾರವನ್ನೆಲ್ಲ ಅಂಗಳದಲ್ಲಿಳಿಸಿ ಹಗುರವಾಗುವುದು ಅವರವರ ಗ್ರಹಿಕೆಗಳನ್ನು ಅವಲಂಬಿಸಿರುವಂಥದ್ದು.

          ಈ ಗ್ರಹಿಕೆ ಎನ್ನುವುದು ಕೆಲವೊಮ್ಮೆ ಯಾವ ತರ್ಕಕ್ಕೂ ನಿಲುಕದೆ ತನ್ನ ಪಾಡಿಗೆ ತಾನು ವಿಹರಿಸುತ್ತ, ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುತ್ತದೆ. ದೇವರ ಕುರಿತಾಗಿ ಒಬ್ಬೊಬ್ಬರ ಗ್ರಹಿಕೆಯೂ ಒಂದೊಂದು ತೆರನಾದದ್ದು. ಭಕ್ತಿರಸವನ್ನೇ ಗ್ರಹಿಕೆಯ ಅಂತಸ್ಸಾರವನ್ನಾಗಿಸಿಕೊಂಡ ಭಕ್ತನೊಬ್ಬ ತನ್ನ ದೈನಂದಿನ ಚಟುವಟಿಕೆಗಳೆಲ್ಲವನ್ನೂ ಬೇಸರವಿಲ್ಲದೆ ದೇವರಿಗೆ ಅರ್ಪಿಸಬಹುದು; ತನ್ನೆಲ್ಲ ಗ್ರಹಿಕೆಗಳ ಮೇಲೆ ನಿಯಂತ್ರಣ ಸಾಧಿಸಿದವನಿಗೆ ದೇವರ ಪರಿಕಲ್ಪನೆ ಕೇವಲ ನೆಮ್ಮದಿಯ ವಿಷಯವಾಗಿರಬಹುದು; ನಾಸ್ತಿಕನಿಗೆ ದೇವರು ಎನ್ನುವುದೊಂದು ಮೂರ್ಖತನದ ಆಲೋಚನೆಯೆನ್ನಿಸಬಹುದು. ಆದರೆ ದೇವಸ್ಥಾನದ ಗರ್ಭಗುಡಿಯ ಮುಚ್ಚಿದ ಬಾಗಿಲುಗಳ ಎದುರು ನಿಂತು ಬಾಗಿಲುಗಳು ತೆರೆಯುವ ಸಮಯಕ್ಕಾಗಿ ಕಾದುನಿಂತಾಗ, ವಿಚಿತ್ರವಾದ ಭಯ-ಭಕ್ತಿಗಳೆರಡೂ ಕೂಡಿದ ಭಾವನೆಯೊಂದು ಎಲ್ಲರನ್ನೂ ಆವರಿಸಿಕೊಳ್ಳುತ್ತದೆ. ಹಾಗೆ ಕಾದುನಿಂತ ಸಮೂಹದಲ್ಲಿ ಹೊಸದಾಗಿ ಮದುವೆಯಾದ ಜೋಡಿಯೊಂದು ನಸುನಾಚಿ ನಿಂತಿರುತ್ತದೆ; ಹರಕೆ ಹೊತ್ತು ಮಗುವನ್ನು ಪಡೆದ ತಾಯಿಯೊಬ್ಬಳು ಮಗುವಿನೊಂದಿಗೆ ಕೈ ಜೋಡಿಸಿ ನಿಂತಿರುತ್ತಾಳೆ; ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ತನ್ನ ಔಷಧಿಗಳ ಕೈಚೀಲದೊಂದಿಗೆ ಕಳವಳದಲ್ಲಿಯೇ ಕಾಯುತ್ತಿರುತ್ತಾನೆ; ನಾಸ್ತಿಕನಾದ ಪತ್ರಿಕಾ ವರದಿಗಾರನೊಬ್ಬ ದೇವಸ್ಥಾನದ ಬಗ್ಗೆ ವರದಿಯೊಂದನ್ನು ಬರೆಯಲು ದೇವರ ಮುಖದರ್ಶನಕ್ಕಾಗಿ ಅದೇ ಸಾಲಿನಲ್ಲಿ ನಿಂತಿರುತ್ತಾನೆ. ಎಲ್ಲ ನಿರೀಕ್ಷೆಗಳ ಏಕೈಕ ಉತ್ತರವೆನ್ನುವಂತೆ ತೆರೆದುಕೊಳ್ಳುವ ಬಾಗಿಲುಗಳು ಎಲ್ಲರಿಗೂ ಅವರವರಿಗೆ ಬೇಕಾದ ಸಮಾಧಾನವನ್ನು ಒದಗಿಸುತ್ತವೆ. ಮುಚ್ಚಿದ ಬಾಗಿಲುಗಳ ಹಿಂದೆ ಇದ್ದ ದೇವರು ಮುಂಭಾಗದಲ್ಲಿ ಕಾಯುತ್ತಿದ್ದವರೊಂದಿಗೆ ಮುಖಾಮುಖಿಯಾಗಿ ಎಲ್ಲರ ಮನಸ್ಸಿನ ತಲ್ಲಣಗಳನ್ನೂ ತನ್ನದಾಗಿಸಿಕೊಳ್ಳುತ್ತಾನೆ.

          ಹೀಗೆ ಎಲ್ಲರ ತಲ್ಲಣಗಳನ್ನು ತಣಿಸುವ, ಕಳವಳಗಳನ್ನು ಕಡಿಮೆ ಮಾಡುವ, ಸಮಾಧಾನದ ಸಾಧನಗಳಾಗುವ ಬಾಗಿಲುಗಳು ತಮ್ಮ ಹೃದಯದ ಭಾರವನ್ನೆಂದೂ ಇನ್ನೊಬ್ಬರಿಗೆ ವರ್ಗಾಯಿಸುವುದಿಲ್ಲ. ಗಾಳಿಯೊಂದಿಗೆ ಬಾಗಿಲವರೆಗೂ ತಲುಪುವ ಮಳೆಯ ನೀರು ಒಳಗಿಳಿಯದಂತೆ ತನ್ನೆಲ್ಲ ಶಕ್ತಿಯನ್ನೂ ಬಳಸಿ ತಡೆಹಿಡಿಯುವ ಬಾಗಿಲು ಮನೆಯೊಳಗಿನ ಜೀವಗಳನ್ನು ಬೆಚ್ಚಗಿಡುತ್ತದೆ; ಕೊರೆವ ಚಳಿಯನ್ನು, ಬೇಸಿಗೆಯ ಸೆಕೆಯನ್ನು ತನ್ನದಾಗಿಸಿಕೊಂಡು ತನ್ನನ್ನು ನಂಬಿದವರ ನಂಬಿಕೆಯನ್ನು ಕಾಪಾಡುತ್ತ ದೇವನೊಬ್ಬನ ಇರುವಿಕೆಯ ಸಾಕ್ಷಾತ್ಕಾರವನ್ನು ಗಟ್ಟಿಗೊಳಿಸುತ್ತದೆ. ನಂಬಿಕೆಯ ಪರಿಕಲ್ಪನೆಯೂ ಬಾಗಿಲುಗಳೊಂದಿಗೆ ತನ್ನದೇ ಆದ ಸಂಬಂಧವನ್ನು ಬೆಳಸಿಕೊಂಡಿದೆ. ರಾತ್ರಿಯಾಯಿತೆಂದು ಕದ ಮುಚ್ಚುವ ಪ್ರತಿ ಮನಸ್ಸಿನಲ್ಲಿಯೂ ಬೆಳಗು ಮೂಡಿ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆ ಕೆಲಸ ಮಾಡಿದರೆ, ನಗರದ ಬಾಡಿಗೆ ಮನೆಯಲ್ಲಿನ ಗೃಹಿಣಿಯೊಬ್ಬಳು ಗಂಡನನ್ನು ಕೆಲಸಕ್ಕೆ ಕಳುಹಿಸಿ ಬಾಗಿಲು ಮುಚ್ಚಿ ಸಂಜೆ ಆತ ಮನೆಗೆ ಬರುವ ನಂಬಿಕೆಯಲ್ಲಿಯೇ ತರಕಾರಿ ಹೆಚ್ಚುತ್ತಾಳೆ; ಮಗುವನ್ನು ಹತ್ತಿಸಿಕೊಂಡ ಸ್ಕೂಲ್ ವ್ಯಾನಿನ ಬಾಗಿಲಿನೊಂದಿಗೆ ಮಗುವಿನ ಭವಿಷ್ಯದ ನಂಬಿಕೆಯೊಂದು ಚಲಿಸಿದರೆ, ದಿನಸಿಯಂಗಡಿಯ ಬಾಗಿಲು ತೆರೆವ ಹುಡುಗನೊಬ್ಬ ಗಿರಾಕಿಗಳನ್ನು ನಂಬಿಕೊಂಡು ಅಗರಬತ್ತಿಯನ್ನು ಹಚ್ಚುತ್ತಾನೆ; ಮಲ್ಟಿಪ್ಲೆಕ್ಸ್ ನ ಎಸಿ ಥಿಯೇಟರಿನ ಬಾಗಿಲುಗಳು ಯಾರೋ ಸಮುದ್ರದಂಚಿಗೆ ಕೂತು ಬರೆದ ಕಥೆಯನ್ನು ನಂಬಿಕೊಂಡರೆ, ಬಂಗಾರದಂಗಡಿಯ ಬಾಗಿಲುಗಳು ಇನ್ಯಾರದೋ ಮದುವೆಯನ್ನು ನಂಬಿಕೊಂಡು ತೆರೆದುಕೊಳ್ಳುತ್ತವೆ. ಹೀಗೆ ನೇರ ಸಂಬಂಧವೂ ಇಲ್ಲದ, ಪರಿಚಯವೂ ಇಲ್ಲದ ಅದೆಷ್ಟೋ ನಂಬಿಕೆಗಳನ್ನು ಬಾಗಿಲುಗಳು ಅರಿವಿಲ್ಲದೆಯೇ ಸಲಹುತ್ತಿರುತ್ತವೆ.

          ಸಂಬಂಧಗಳನ್ನು ಬಾಗಿಲುಗಳು ಪೊರೆಯುವ ರೀತಿಯೂ ವಿಶಿಷ್ಟವಾದದ್ದು. ಹೆರಿಗೆ ಆಸ್ಪತ್ರೆಯ ಮುಚ್ಚಿದ ಬಾಗಿಲುಗಳು ತೆರೆಯುತ್ತಿದ್ದಂತೆಯೇ, ಮಗುವಿನ ಅಳುವೊಂದು ಅಪ್ಪ-ಮಗುವಿನ ಸಂಬಂಧವನ್ನು ಹುಟ್ಟುಹಾಕುತ್ತದೆ. ಹಾಗೆ ಹುಟ್ಟಿದ ಸಂಬಂಧ ಮನೆಯ ಬಾಗಿಲನ್ನು ಹಾದು, ಶಾಲೆಯ ಬಾಗಿಲನ್ನು ತಲುಪಿ, ಕಾಲೇಜು-ಯೂನಿವರ್ಸಿಟಿಗಳ ಕದ ತಟ್ಟಿ, ಹೊಸಹೊಸ ಸಂಬಂಧಗಳೊಂದಿಗೆ ಬೆಸೆದುಕೊಳ್ಳುತ್ತ ಹೊಸತನವನ್ನು ಕಂಡುಕೊಳ್ಳುತ್ತದೆ. ಅಳುತ್ತಲೇ ಮಗಳನ್ನು ಗಂಡನ ಮನೆಯ ಬಾಗಿಲಿಗೆ ಕಳುಹಿಸಿಕೊಡುವ ಅಪ್ಪ, ನಗುನಗುತ್ತ ಸೊಸೆಯನ್ನು ತೆರೆದ ಬಾಗಿಲಿನಿಂದ ಸ್ವಾಗತಿಸುತ್ತಾನೆ. ಹೀಗೆ ಹೆರಿಗೆ ಆಸ್ಪತ್ರೆಯ ಬಾಗಿಲಿನಿಂದ ಹೊರಬಂದ ಮಗುವಿನ ಅಳು ಸಂತೋಷವನ್ನು ಹಂಚಿ, ಬೆಳವಣಿಗೆ-ಬದಲಾವಣೆಗಳನ್ನು ತನ್ನದಾಗಿಸಿಕೊಳ್ಳುತ್ತ, ಸಂಬಂಧಗಳಿಗೊಂದು ಹೊಸ ಸ್ವರೂಪವನ್ನು ಒದಗಿಸುತ್ತದೆ. ಆಫೀಸಿನ ಕೊಟೇಷನ್, ಪ್ರೊಜೆಕ್ಟ್ ಗಳ ಗೌಪ್ಯತೆಯನ್ನು ಕಾಪಾಡಲು ತಾವಾಗಿಯೇ ಮುಚ್ಚಿಕೊಳ್ಳುವ ಬಾಗಿಲುಗಳ ಆಚೀಚೆ ಅಕ್ಕ-ತಮ್ಮಂದಿರು, ಜೀವದ ಗೆಳತಿಯರು, ಸಿಗರೇಟಿಗೆ ಜೊತೆಯಾಗುವ ಸ್ನೇಹಿತರು ವಯಸ್ಸು ಮರೆತು ಒಂದಾಗುತ್ತಾರೆ; ಲಿವ್ ಇನ್ ಸಂಬಂಧಗಳು, ದಾಂಪತ್ಯಗಳು, ಭಗ್ನಪ್ರೇಮಗಳು ಎಲ್ಲವುಗಳಿಗೂ ಬಾಗಿಲುಗಳು ತೆರೆದ ಹೃದಯದಿಂದ ಸ್ಪಂದಿಸುತ್ತವೆ. ರೆಸ್ಟ್ ರೂಮಿನ ಮುಚ್ಚಿದ ಬಾಗಿಲುಗಳ ಹಿಂದೆ ಉದ್ದನೆಯ ಕನ್ನಡಿಯ ಮುಂದೆ ಲಿಪ್ ಸ್ಟಿಕ್ ಸರಿಮಾಡಿಕೊಳ್ಳುತ್ತ ನಿಂತ ಹುಡುಗಿಯೊಬ್ಬಳು ವೀಕೆಂಡ್ ಪಾರ್ಟಿಯ ಬಗ್ಗೆ ಯೋಚಿಸಿದರೆ, ಕ್ಯಾಂಟೀನಿನ ಅಡುಗೆಮನೆಯ ಬಾಗಿಲಿನ ಹಿಂದೆ ಮಸಾಲೆದೋಸೆ ರೆಡಿಯಾಗುತ್ತಿರುತ್ತದೆ. ಶಿಫ್ಟ್ ಮುಗಿದು ಫ್ಲೋರಿನ ಲೈಟುಗಳೆಲ್ಲ ತಾವಾಗಿಯೇ ಆರಿಹೋದ ಮೇಲೂ ಬಾಗಿಲುಗಳು ಮಾತ್ರ ಡ್ರಾದಲ್ಲಿನ ಡಾಕ್ಯುಮೆಂಟುಗಳನ್ನು, ಮೀಟಿಂಗ್ ರೂಮಿನ ಮಾತುಕತೆಗಳನ್ನು ಜತನದಿಂದ ಕಾಪಾಡುತ್ತ ಮುಂದಿನ ಪಾಳಿಗಾಗಿ ಕಾಯುತ್ತಿರುತ್ತವೆ. ಆಚೀಚೆ ಸರಿದಾಡುವ ಶಾಪಿಂಗ್ ಮಾಲ್ ನ ಗಾಜಿನ ಬಾಗಿಲುಗಳ ಹಿಂದೆ ಅತ್ತರಿನ ಬಾಟಲಿಯೊಂದು ಗಿಫ್ಟಾಗಿ ಸಂಬಂಧಗಳನ್ನು ಸಲಹಿದರೆ, ಬ್ರ್ಯಾಂಡೆಡ್ ಚಪ್ಪಲಿಯೊಂದು ಪಾದಗಳ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತದೆ; ವಿದೇಶದ ಕನಸು ಹೊತ್ತ ಕಾರ್ಪೊರೇಟ್ ಉದ್ಯೋಗಿಯೊಬ್ಬ ಟ್ರಾವೆಲ್ ಬ್ಯಾಗ್ ಖರೀದಿಸಿದರೆ, ನಿವೃತ್ತ ಪ್ರಾಧ್ಯಾಪಕರೊಬ್ಬರು ಪುಸ್ತಕದಂಗಡಿಯ ಬಾಗಿಲನ್ನು ತಲುಪುತ್ತಾರೆ. ಹೀಗೆ ಹೊಸ ಸಂಬಂಧಗಳಿಗೆ ತೆರೆದುಕೊಳ್ಳುತ್ತ, ಮುಗಿದುಹೋದ ಸಂಬಂಧಗಳ ನೆನಪುಗಳನ್ನು ನವೀಕರಿಸುತ್ತ, ಅಗತ್ಯಬಿದ್ದಾಗ ಗುಟ್ಟುಗಳನ್ನು ಕಾಪಾಡುತ್ತ, ತಮ್ಮ ಕರ್ತವ್ಯಗಳನ್ನೆಲ್ಲ ಚಾಚೂತಪ್ಪದೆ ನಿರ್ವಹಿಸುವ ಬಾಗಿಲುಗಳ ಆಚೀಚೆ ಬದುಕುಗಳು ನಿರಾಯಾಸವಾಗಿ ಕಾಲು ಚಾಚುತ್ತವೆ.

*******************

ಲೇಖಕರ ಬಗ್ಗೆ ಎರಡು ಮಾತು:

ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

One thought on “

  1. ಬಾಗಿಲು ಬಗ್ಗೆ ನಿಮ್ಮ ಭಾವನೆ ಚೆನ್ನಾಗಿದೆ ಮೇಡಂ

Leave a Reply

Back To Top