ಬೆಳಕಿನ ರೋಚಕತೆ ನೀಡುವ ಬೆಳದಿಂಗಳು.
ಪುಸ್ತಕ- ಬೆಳದಿಂಗಳು
ಕವಿ- ಗುರು ಹಿರೇಮಠ
ವಿಶ್ವೃಷಿ ಪ್ರಕಾಶನ
ಬೆಲೆ-೧೨೦/-
ಗುರು ಹಿರೇಮಠ ತುಮಕೂರು ಟು ಹೊಸ್ಪೇಟ್ ಎಂದೇ ನನಗೆ ಪರಿಚಯವಾದವರು. ಮೃದು ಮಾತಿನ ಅಷ್ಟೇ ನಾಚಿಕೆ ಸ್ವಭಾವದ ಹುಡುಗ. ಯಾವಾಗ ಎದುರಿಗೆ ಸಿಕ್ಕರೂ ಒಂದು ನಗೆಯ ಹೊರತಾಗಿ ಬೇರೆ ಮಾತು ಆಡಲು ಬರುವುದೇ ಇಲ್ಲವೇನೋ ಎಂಬಷ್ಟು ಮೌನಿ. ಅವರ ಚುಟುಕುಗಳ ಸಂಕಲನ ಬೆಳದಿಂಗಳು ಓದಿದಾಗ ಅವರ ಮೌನಕ್ಕೊಂದು ಅರ್ಥ ದೊರಕಿತು ನನಗೆ. ಹೇಳಬೇಕಾದುದ್ದನ್ನೆಲ್ಲ ಚುಟುಕಾಗಿ ಮೂರು ನಾಲ್ಕು ಸಾಲುಗಳಲ್ಲಿ ಹೇಳಿ ನಿರುಮ್ಮಳವಾಗಿ ಬಿಡುವ ಗುರುವಿಗೆ ಬಹುಶಃ ಮಾತು ಮಣಭಾರ ಎನ್ನಿಸಿರಬಹುದು.. ಹೀಗಾಗಿಯೇ ಮೌನ ಸಾಮ್ರಾಜ್ಯದ ಚಕ್ರವರ್ತಿ ಅವರು. ಇಷ್ಟಾಗಿಯೂ ನಾನು ಕಂಡAತೆ ಸ್ನೇಹಿತರನ್ನು ತುಂಬಾ ನಂಬುವ ಸ್ವಭಾದ ಗುರು
ಪ್ರೀತಿಸುವವರನ್ನು ನಂಬುತ್ತೇನೆ.
ದ್ವೇಷಿಸುವವರನ್ನು ಪ್ರೀತಿಸುತ್ತೇನೆ
ಹೋಗುವ ದಾರಿಯಲ್ಲಿ
ನನ್ನೆದೆಯ ಹೂವುಗಳು ನೀವು
ಎಂದು ಬರೆದರೆ ಅದರಲ್ಲಿ ಅಚ್ಚರಿಯೇನಿದೆ? ಪ್ರೀತಿಸುವವರನ್ನು ನಂಬುವುದು ಸಹಜ. ಎಲ್ಲರೂ ತಮ್ಮನ್ನು ಪ್ರೀತಿಸುವವರನ್ನು ನಂಬಿಯೇ ನಂಬುತ್ತಾರೆ. ಅದೇನೂ ವಿಶೇಷವಲ್ಲ. ಆದರೆ ದ್ವೇಷಿಸುವವರನ್ನು ಪ್ರೀತಿಸುವುದು ಮಾತ್ರ ಬಹುದೊಡ್ಡ ವಿಷಯ. ಹಾಗೆ ದ್ವೇಷಿಸುವವರನ್ನೂ ಪ್ರೀತಿಸುವುದು ಸಾಧಾರಣ ಜನರಿಗೆ ದಕ್ಕುವ ಮಾತಲ್ಲ. ಹೀಗಾಗಿಯೇ ಈ ಪ್ರೀತಿಸುವವರನ್ನು ಹಾಗೂ ದ್ವೇಷಿಸುವವರನ್ನು ತಾನು ಹೋಗುವ ದಾರಿಯಲ್ಲಿ ಸಿಗುವ ತನ್ನೆದೆಯ ಹೂವುಗಳು ಎನ್ನುತ್ತಾರೆ.
ಬದುಕು ತೀರಾ ಚಿಕ್ಕದು. ದ್ವೇಷಿಸುವವರನ್ನು ತಿರುಗಿ ನಾವೂ ದ್ವೇಷಿಸುತ್ತಲೇ ಹೋದರೆ ಇಡೀ ಜೀವನಪೂರ್ತಿ ದ್ವೇಷಿಸುತ್ತಲೇ ಇರಬೇಕಾಗುತ್ತದೆ. ಪ್ರತಿ ಮಾತಿಗೂ ಒಂದು ಎದುರುತ್ತರ ಕೊಡುತ್ತಲೇ ಹೋದರೆ ಮಾತು ಮುಗಿಯುವುದಾದರೂ ಯಾವಾಗ? ಹೀಗಾಗಿಯೇ ದ್ವೇಷಿಸುವವರನ್ನು ಪ್ರೀತಿಸಿಬಿಟ್ಟರೆ ನಾವು ನಿರುಮ್ಮಳವಾಗಿರಬಹುದು. ಕಿuಚಿಟiಣಥಿ oಜಿ meಡಿಛಿಥಿ is ಣತಿiಛಿe bಟesseಜ ಎಂದು ಶೇಕ್ಸ್ಫೀಯರ್ ಹೇಳುತ್ತಾನೆ. ದ್ವೇಷಕ್ಕೆ ಪ್ರತಿಯಾಗಿ ದ್ವೇಷಿಸಿದರೆ ನಮ್ಮ ನಿರಾಳ ಮನಸ್ಥಿತಿಯನ್ನು ನಾವೇ ನಾಶಮಾಡಿಕೊಂಡAತೆ. ಹೀಗಾಗಿಯೇ ಜಗದ ಎಲ್ಲ ನೋವಿಗೂ ಪ್ರೀತಿಯೊಂದೇ ಔಷಧ. ಜಗದ ಎಲ್ಲ ದ್ವೇಷಕ್ಕೂ ಪ್ರೀತಿಯೇ ಮುಲಾಮು. ಕವಿಯ ಮಾನವೀಯತೆಯ ಪರಿಚಯವಾಗಲು ಈ ಎರಡು ಸಾಲು ಸಾಕು.
ನಾನು ಕಡಲೂರಿನವಳು. ಜಗದ ಸೃಷ್ಟಿ ಕಡಲಲ್ಲಿಯೇ ಆದದ್ದು ಎಂದು ಬಲವಾಗಿ ನಂಬಿದವು. ಜಗದ ಅಂತ್ಯವೂ ಕಡಲಿಂದಲೇ ಆಗುತ್ತದೆ ಎಂದೂ ಮತ್ತೆ ಮತ್ತೆ ಹೇಳುತ್ತಿರುವವಳು. ಕಡಲ ಉಪ್ಪು ನೀರು ನಮಗೆ ಅಮೃತಕ್ಕೆ ಸಮಾನ. ನಾನು ಚಿಕ್ಕವಳಿರುವಾಗಲೆಲ್ಲ ಹೊಟ್ಟೆ ಕೆಟ್ಟರೆ, ತಲೆ ನೋವು ಬಂದರೆ ಉಪ್ಪು ನೀರು ಕುಡಿಸುತ್ತಿದ್ದರು. ಒಂದೋ ವಾಂತಿಯಾಗಿ ಎಲ್ಲವೂ ಹೊಟ್ಟೆಯಿಂದ ಹೊರಹೋಗಬೇಕು, ಅಥವಾ ಉಪ್ಪುನೀರು ಎಲ್ಲವನ್ನೂ ಜೀರ್ಣಿಸಬೇಕು. ಹೀಗಾಗಿ ಎಷ್ಟೋ ಸಲ ನನ್ನ ಮಕ್ಕಳು ಚಿಕ್ಕವರಿರುವಾಗಲೂ ಉಪ್ಪುನೀರಿನ ಔಷಧವೇ ನನ್ನನ್ನು ಸಂಕಟದಿAದ ಪಾರು ಮಾಡಿದ್ದು. ನಾಲ್ಕು ತಿಂಗಳಿನ ಪುಟ್ಟ ಮಗುವನ್ನು ಕೈಲಿಟ್ಟುಕೊಂಡು ಊರಲ್ಲೇ ಗಂಜಿ ಉಂಡುಕೊAಡು ಸುಖವಾಗಿ ಶಾಲೆಗೆ ಹೋಗಿ ಬರಬಹುದಾದ ಅವಕಾಶವನ್ನು ಬಿಟ್ಟುಕೊಟ್ಟು, ಅನುದಾನಿತ ಶಾಲೆ ಬೇಡ ನನಗೆ ಎನ್ನುತ್ತ ಮನೆಯವರೆಲ್ಲ ಅಸಮಧಾನಕ್ಕೆ ಕಾರಣವಾಗಿ ಬೆಳ್ತಂಗಡಿಯ ಗೊಂಡಾರಣ್ಯವಾದ ಕೊಯ್ಯೂರಿಗೆ ಸರಕಾರಿ ನೌಕರಿ ಮಾಡುತ್ತೇನೆ ಎಂದು ಹೊರಟಿದ್ದೆ. ಏನೂ ಅರಿಯದ ಬೊಮ್ಮಟೆಯಂತಹ ಮಗು ಮಧ್ಯರಾತ್ರಿ ಎದ್ದು ಅತ್ತಾಗಲೆಲ್ಲ ನನಗೆ ತಳಮಳ. ನಾನೇ ಮದುವೆ ಆಗುವವರೆಗೂ ಅಮ್ಮನ ಹೊಟ್ಟೆಗೆ ಕೈಯ್ಯಿಟ್ಟು ಮಲುಗುತ್ತಿದ್ದವಳು. ಈಗ ಈ ಮಗುವನ್ನು ಸಂಭಾಳಿಸುವ ಅಮ್ಮನಾಗಿದ್ದೆ. ಆಗೆಲ್ಲ ನನಗೆ ನೆನಪಾಗುತ್ತಿದ್ದುದು ಒಂದೇ. ನೀರು ಬೆಚ್ಚಗೆ ಮಾಡಿ ಒಂದು ಚಿಟಿಕೆ ಉಪ್ಪು ಹಾಕಿ ಕದಡಿ ಚಮಚದಲ್ಲಿ ನಾಲ್ಕಾರು ಹನಿ ಕುಡಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ಮಗು ಅಳುವುದನ್ನು ನಿಲ್ಲಿಸಿ ಮಲಗಿದರೆ ನನಗೆ ಏನೋ ದೊಡ್ಡ ಮಹತ್ಸಾಧನೆ ಮಾಡಿದ ಸಮಾಧಾನ.
ರುಚಿ ನೀಡುವ
ಉಪ್ಪಿನಲ್ಲಿ
ಸಕಲ ಜೀವರಾಶಿಗಳ
ಕಣ್ಣೀರಿದೆ
ಆದರೆ ಇಲ್ಲಿ ಗುರು ಉಪ್ಪಿಗೆ ಬೇರೆಯದ್ದೇ ಅರ್ಥ ನೀಡಿದ್ದಾರೆ. ಉಪ್ಪುಪ್ಪಿನ ಕಣ್ಣೀರಿಗೆ ಹೋಲಿಸಿದ್ದಾರೆ. ಬದುಕಿನ ವಿವಿಧ ಅರ್ಥಗಳನ್ನು ಹಿಡಿದಿಡುವುದೇ ನಿಜವಾದ ಕವಿಯ ಸಾಧನೆ. ನಮಗೆಲ್ಲ ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂದೆನಿಸಿದರೆ ಗುರು ಉಪ್ಪನ್ನು ಕಣ್ಣೀರಿಗೆ ಸಮೀಕರಿಸಿ ಹೊಸತೇ ಆದ ಆಯಾಮವನ್ನು ನೀಡಿದ್ದಾರೆ.
ಯಶಸ್ಸು ಸುಲಭವಾಗಿ ದಕ್ಕುವಂತಹುದ್ದಲ್ಲ. ಒಂದು ಗುರಿಯನ್ನು ತಲುಪಲು ವಹಿಸಬೇಕಾದ ಶ್ರಮಕ್ಕೆ ಯಾವ ಬೆಲೆಯೂ ಇಲ್ಲ. ಯಶಸ್ಸಿಗೆ ಹತ್ತಾರು ದಾರಿಗಳಿರುವುದಿಲ್ಲ. ಬೇಗ ಹೋಗಿ ಯಶಸ್ಸನ್ನು ಪಡೆಯಲು ಯಾವ ಒಳದಾರಿಯೂ ಇರುವುದಿಲ್ಲ. ಇರುವುದು ಒಂದೇ ದಾರಿ. ಅದು ಸತತ ಪರಿಶ್ರಮ.
ಏರುವ ಎತ್ತರಕ್ಕೆ
ಒಂದೇ ದಾರಿ
ಬೀಳಲು
ನೂರು ದಾರಿ
ಆದರೆ ಯಶಸ್ಸಿನ ಶಿಖರವನ್ನು ಹತ್ತಿದರೂ ಅದರಿಂದ ಕೆಳಗೆ ಬೀಳಲು ಬೇಕಷ್ಟು ದಾರಿಗಳಿರುತ್ತವೆ. ನಮ್ಮದೇ ವ್ಯಸನಗಳು ನಮ್ಮನ್ನು ದಾರಿ ತಪ್ಪಿಸಿ ಯಶಸ್ಸಿನ ಶಿಖರದಿಂದ ಒಮ್ಮೆಲೆ ಕೆಳಗೆ ಬೀಳಿಸಬಲ್ಲದು. ನಮ್ಮ ಒಂದು ತಪ್ಪು ಹೆಜ್ಜೆಯೂ ನಮ್ಮನ್ನು ಪ್ರಪಾತದ ಕಡೆ ತಳ್ಳುವ ಚಕ್ರವಾಗಿರಬಹುದು. ಆದರೂ ಈ ಜಗತ್ತು ಪ್ರೇಮಮಯ. ಪ್ರೇಮವೊಂದಿದ್ದರೆ ಸಾಕು, ಜಗತ್ತಿನ ನೂರಾರು ಸಂಕಷ್ಟಗಳನ್ನು ಸುಲಭವಾಗಿ ಜಯಿಸಬಹುದು. ಪ್ರೇಯಸಿಯ ಒಂದು ನಗು ಇಡೀ ಜಗತ್ತನ್ನೇ ಗೆಲ್ಲುವ ಪ್ರೇರಕ ಶಕ್ತಿಯಾಗಬಲ್ಲದು.
ನಿನ್ನ ನಗು ಕಂಡ ಕ್ಷಣ
ಕಡಲಿನ ಮುತ್ತುಗಳೆಲ್ಲ
ಹೂವಾಗಿ ಅರಳಿದವು
ಎನ್ನುವ ಕವಿಯಲ್ಲಿನ ತಾಜಾ ಭಾವನೆಗಳು ನಮ್ಮನ್ನು ಜೀವನ್ಮುಖಿಯಾಗಿಸುವುದರಲ್ಲಿ ಸಂಶಯವೇ ಇಲ್ಲ. ಈ ಪ್ರೇಮದ ಪರಿಯನ್ನೊಮ್ಮೆ ಗಮನಿಸಿ.
ಯಾರೋ ನಡೆದ ದಾರಿಯಲ್ಲಿ ನಾ
ನಡೆಯುತ್ತಿದ್ದೆ
ಸುಮ್ಮನೆ
ಒಮ್ಮೆ ದಾರಿ ಬದಲಿಸಿದೆ!
ನೀ ಸಿಕ್ಕೆ
ಬದುಕು ದಕ್ಕಿತು
ಒಂದು ಪ್ರೇಮ ಬದುಕನ್ನು ನಮ್ಮ ತೆಕ್ಕೆಗೆ ನೀಡಬಲ್ಲದು ಎನ್ನುವುದಕ್ಕೆ ಸಾಕ್ಷಿಯಾಗಿರುವ ಈ ಸಾಲುಗಳನ್ನು ನೋಡಿ. ಸರಳವಾದ ಕೆಲವೇ ಶಬ್ಧಗಳಲ್ಲಿ ಈ ಭಾವ ನಮ್ಮನ್ನು ಇಡೀ ಜಗತ್ತಿನ ಪ್ರೇಮದ ರಹದಾರಿಯಲ್ಲಿ ನಿಲ್ಲಿಸುತ್ತದೆ.
ಪಡೆದದ್ದು ಇಷ್ಟೇ
ಅತ್ತ ನೀನು, ಇತ್ತ ನಾನು ದಡವಾಗಿ
ಪ್ರೀತಿಯ ನದಿ ಎಂದೂ ಬತ್ತುವುದಿಲ್ಲ
ಹೀಗಾಗಿ ಪ್ರೀತಿಯಲ್ಲಿ ಏನು ಪಡೆದೆ ಎಂದರೆ ಎಂದೂ ಬತ್ತದ ಪ್ರೀತಿಯನ್ನು ಪಡೆಯುವುದು ಮಾತ್ರ ಪ್ರೇಮದ ಕೊನೆಯ ಗುರಿಯಾಗಿರುತ್ತದೆ. ಪ್ರೇಮನದಿಯ ಎರಡು ದಡಗಳಲ್ಲಿ ಪ್ರೇಮಿಗಳಿಬ್ಬರೂ ನಿಂತುಕೊAಡರೆ ಆ ನದಿ ಎಂದಿಗೂ ಬತ್ತಬಾರದು. ಅಂತಹ ಪ್ರೇಮವನ್ನು ಪಡೆದರೆ ಜೀವನ ಸಾರ್ಥಕ ಎನ್ನುವ ಭಾವ ಕವಿಯಲ್ಲಿದೆ. ಅದಕ್ಕೆಂದೇ ಕವಿ
ಬೆಳದಿಂಗಳು ಸೋತಿದೆ
ಅವಳ ಹೆಸರಿಗೆ
ಆ ಹೆಸರಲ್ಲಿ
ನನ್ನ ಬದುಕಿನ ಉಸಿರಿದೆ
ಎನ್ನುತ್ತಾರೆ. ಪ್ರೇಮದ ಸಾಫಲ್ಯವೇ ಹಾಗೆ. ಪ್ರೇಮಿಯ ಹೆಸರನ್ನು ಜಪಿಸುತ್ತ ಅದನ್ನೇ ಉಸಿರಾಡುವುದರಲ್ಲಿಯೇ ಬದುಕಿನ ಔನತ್ಯವನ್ನು ಕಾಣುವುದು ಪ್ರತಿ ಪ್ರೇಮಿಯ ಆಶಯವಾಗಿರುತ್ತದೆ. ಹೀಗೆಂದೇ ಪ್ರೇಮದಲ್ಲಿ ಬಿದ್ದ ಕಾಲೇಜು ವಿದ್ಯಾರ್ಥಿಗಳ ನೋಟ್‌ಬುಕ್‌ನ ಕೊನೆಯ ಹಾಳೆಯನ್ನು ಗಮನಿಸಿ. ಅಲ್ಲಿ ಕೇವಲ ಪ್ರೇಮಿಯ ಹೆಸರನ್ನೇ ಸಾವಿರ ಸಲ ಬರೆದಿರುತ್ತಾರೆ. ಕವಿ ಕೂಡ ತನ್ನವಳ ಹೆಸರಿಗೆ ಬೆಳದಿಂಗಳೂ ಸೋಲುತ್ತದೆ ಎನ್ನುತ್ತಾರೆ. ಕವಿಗೂ ವಿರಹ ಕಾಡುತ್ತದೆ. ವಿರಹವಿಲ್ಲದ ಪ್ರೇಮ ಈ ಜಗದಲ್ಲಿ ಇದ್ದೀತೆ? ಪ್ರತಿ ಪ್ರೇಮಕ್ಕೂ ವಿರಹ ಕಾಡಿದರೆ ಮಾತ್ರ ಆ ಪ್ರೇಮಕ್ಕೊಂದು ಅಧಿಕೃತತೆ ದಕ್ಕಿದ ಹಾಗೆ. ಪ್ರತಿ ಪ್ರೇಮದಲ್ಲಿಯೂ ಒಂದು ಮುನಿಸಿರುತ್ತದೆ, ಜಗಳವಿರುತ್ತದೆ. ಕೊನೆಗೆ ಪ್ರೇಮಿ ಕೈಕೊಟ್ಟು ಹೋದಳೆಂದು ಪರಿತಪಿಸುವ ಉಪಖ್ಯಾನವಿರುತ್ತದೆ.
ಪ್ರೀತಿಯೊಂದಿಗೆ ಸ್ನೇಹ
ಮಾಡಿಕೊಂಡವಳು ಮೊದಲೇ
ಮೋಸದ ಜೊತೆಗೆ
ಒಪ್ಪಂದ ಮಾಡಿಕೊಂಡಿದ್ದು ತಿಳಿಯಲಿಲ್ಲ
ಎನ್ನುತ್ತ ವಿರಹದ ಮಾತನಾಡುತ್ತಾರೆ. ಬದುಕಿನ ಬಣ್ಣಗಳನ್ನು ಹಂಚಿಕೊAಡವಳು. ಬದುಕಿನಲ್ಲಿರುವ ಕಾಮನಬಿಲ್ಲನ್ನು ಬಣ್ಣಗಳನ್ನು ತನಗಾಗಿ ತಂದವಳು ಬಣ್ಣಗಳ ಜೊತೆಗೆ ಬಣ್ಣ ಬದಲಿಸಿದಳು ಎಂದು ವಿಷಾದ ಪಡುತ್ತಾರೆ.
ಬಣ್ಣಗಳ ಜೊತೆಗೆ
ಆಟವಾಡುವುದನ್ನು ಕಲಿಸಿದವಳು
ಬಣ್ಣ ಬದಲಿಸಿ ಹೋದಳು
ಆದರೂ ಮೋಸ ಮಾಡಿ ಹೋದವಳ ಬಗ್ಗೆ ಬೇಸರವಿಲ್ಲ. ಅವಳ ಮೇಲಿನ ಪ್ರೇಮ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಪ್ರೇಮವೆಂದರೆ ನಂಬಿಕೆ ಎಂದು ಮೊದಲೇ ಹೇಳಿದವರು ಈಗ ನಂಬಿಕೆಯನ್ನು ಕೊಂದವಳ ಬಗೆಗೂ ಮತ್ತದೇ ನಂಬಿಕೆ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ.
ನಂಬಿಕೆಯನ್ನು ಕೊಂದವಳ
ಜೊತೆಗೆ
ನAಬಿಕೆಯಿAದ ಬದುಕಿರುವ
ಹೆಮ್ಮೆ ನನ್ನದಾಗಲಿ
ಎನ್ನುತ್ತ ನಂಬಿಕೆಯನ್ನು ತಾನು ಕಳೆದುಕೊಳ್ಳದ ನಿಶ್ಚಯ ಮಾಡುತ್ತಾರೆ. ಪ್ರೀತಿಗಿಂತ ಮೊದಲೇ ಮೋಸವನ್ನೂ ತನ್ನೊಂದಿಗೆ ತಂದಿದ್ದಾಳೆAದು ಆರೋಪಿಸುವ ಕವಿಗೆ ಆಕೆ ತನ್ನನ್ನು ಬಿಟ್ಟು ಹೋದರೆ ಏನು ಮಾಡುವುದೆಂಬ ಭಯವಿದೆ. ಆಕೆಯನ್ನು ಕಳೆದುಕೊಳ್ಳಲಂತೂ ಸಾಧ್ಯವಿಲ್ಲ.
ಹೊರಟು ಹೋದಳು
ನನ್ನಲ್ಲಿರುವ ಬೆಳಕನ್ನು ಕೊಂದು
ಅವಳ ನೆರಳೇ
ದಾರಿ ತೋರಿಸುತ್ತಿದೆ ಕತ್ತಲೆಯಲ್ಲಿ
ಎನ್ನುತ್ತ ಅವಳ ನೆನಪು, ನೆರಳು ಜೀವನದ ಕತ್ತಲಿನಲ್ಲೂ ದಾರಿ ತೋರುವ ಬೆಳಕಾಗುವ ಕುರಿತು ತುಂಬು ನಂಬಿಕೆಯ ಮಾತನಾಡುತ್ತಾರೆ. ಒಟ್ಟಿನಲ್ಲಿ ಬದುಕು ಅವಳ ಅವಳೊಂದ ಸಾಗಬೇಕೆನ್ನುವುದು ಕವಿ ಆಶಯ.
ಎಲ್ಲವನ್ನೂ ಅಥೆಂಟಿಕ್ ಆಗಿ ಹೇಳುವ ಕವಿ ಸಾವಿನ ಬಗ್ಗೆ ಮಾತನಾಡದಿದ್ದರೆ ನಡೆದೀತು ಹೇಗೆ? ಹೀಗಾಗಿ ಬದುಕಿನ ನಶ್ವರತೆಯನ್ನು ಕತ್ತಲೆಗೆ ಹೋಲಿಸುತ್ತಾರೆ. ಕತ್ತಲೆಯ ಬದುಕು, ಬೆಳಕಿನ ಸಾವಿನ ರೂಪಕ ಇಲ್ಲ ಆಧ್ಯಾತ್ಮದ ಕೊನೆಯ ಹಂತವನ್ನು ನೆನಪಿಸುತ್ತದೆ.
ನಾನು ಕತ್ತಲೆಯಲ್ಲಿ
ಬದುಕಿದರೂ
ಸಾವು ಬೆಳಕಿನಲ್ಲಿ
ಬರಲಿ
ವ್ಯಾವಹಾರಿಕ ಜಗತ್ತನ್ನು ತೊರೆದು ಅಲೌಕಿಕ ಜಗತ್ತನ್ನು ಸಾಮಕೇತಿಕವಾಗಿ ಪ್ರತಿನಿಧಿಸುವ ಕತ್ತಲಿನ ಬದುಕು ಮತ್ತು ಬೆಳಕಿನ ಸಾವು ಸಾವಿರಾರು ವರ್ಷಗಳ ಜ್ಞಾನವನ್ನು ಕೇವಲ ನಾಲ್ಕೇ ಸಾಲಿನಲ್ಲಿ ಕಣ್ಣೆದುರು ತೆರೆದಿಡುವ ಅದ್ಭುತ ಇದು. ಅಷ್ಟಾದರೂ ನಾವು ಎಷ್ಟೊಂದು ಸಾವನ್ನು ನೋಡುತ್ತೇವೆ. ಕಣ್ಣೆದುರಿಗೇ ಅದೆಷ್ಟೋ ಜನ ಪತಪತನೆ ಉದುರಿ ಬೀಳುತ್ತಿರುವ ಕಾಲಘಟ್ಟ ಇದು. ಸಾವಿನ ಲೆಕ್ಕಾಚಾರವನ್ನು ಬೆರಳೆಣಿಕೆಯಲ್ಲಿ ಮುಗಿಸಿ, ಸಾವಿರಗಟ್ಟಲೆ ಲೆಕ್ಕದಲ್ಲಿ ಎಣಿಸುತ್ತಿರುವ ಈ ಕೊರೋನಾ ಕಾಲದಲ್ಲಿ ಯಮ ಕೂಡ ಸಾವಿಗೆ ಕಣ್ಣೀರು ಹಾಕುತ್ತಿದ್ದಾನೆಯೇ? ಗೊತ್ತಿಲ್ಲ. ಆದರೆ
ಪ್ರತಿ ಸಾವಿನ ಎದುರು
ಯಮ ಅತ್ತಿದ್ದು
ಯಾರ ಕಣ್ಣಿಗೂ
ಕಾಣಿಸಲಿಲ್ಲ
ಎನ್ನುವ ಕವಿಯ ಕಲ್ಪನೆ ಅದ್ಭುತವಾಗಿದೆ. ಇದ್ದರೂ ಇರಬಹುದು ಬಿಡಿ. ದಿನವೊಂದಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ, ಕೆಲವೊಂದು ದಿನ ಲಕ್ಷದ ಎಣಿಕೆಯಲ್ಲಿ ಸಾವಿನ ಲೆಕ್ಕಾಚಾರ ಕಂಡಿದೆ ಈ ಜಗತ್ತು. ಜನರ ಮರಣದ ಪ್ರಮಾಣ ಆ ಯಮನಿಗೂ ದಿಗಿಲು ಹುಟ್ಟಿಸಿರಬಹುದು. ಆದರೆ ಸಾವಿಗೊಂದು ಗೌರವ ಕೊಡುತ್ತಿದ್ದೇವೆಯೇ? ಅದೂ ಇಲ್ಲ. ಕೊರೋನಾದಿಂದಾಗಿ ಸಾವುಗಳೆಲ್ಲ ಕೇವಲ ಬೀದಿ ಬದಿಯ ಹೆಣಗಳಷ್ಟೇ ಆಗಿಹೋಗುತ್ತಿರುವ ಈ ದುರಂತದ ಸಮಯದಲ್ಲಿ ಸಾವನ್ನು ಕುರಿತು ಮಾತನಾಡುವುದೇ ಅಪರಾಧ ಎನ್ನಿಸಿಬಿಡುತ್ತದೆ. ಸಾವಿನ ಮಾತು ಬಿಡಿ. ಬದುಕಿರುವವರನ್ನೇ ಮುಟ್ಟಿಸಿಕೊಳ್ಳಲು ನಾವು ಹಿಂದೇಟು ಹಾಕುತ್ತಿದ್ದೇವೆ. ಪರಸ್ಪರರನ್ನು ಭೇಟಿಯಾಗಲು ಅದೆಷ್ಟು ಮುಜುಗರ ಈಗ. ಅನಾವಶ್ಯಕವಾಗಿ ನಾವೀಗ ಯಾರೊಂದಿಗೂ ಮಾತನಾಡಲಾರೆವು. ಪಕ್ಕದ ಮನೆಯವರೊಂದಿಗೆ ಹರಟೆ ಹೊಡೆಯಲಾರೆವು. ಯಾಕೆಂದರೆ ಯಾರಿಗೆ ಗೊತ್ತು, ಅವರ ಮನೆಯ ಯಾವ ಸದಸ್ಯ ಹೊರಹೋಗಿ ಕೊರೋನಾ ಅಂಟಿಸಿಕೊAಡು ಬಂದಿದ್ದಾನೆಯೋ ಎಂಬ ಭಯ. ಇದರ ನಡುವೆ ಸಾವಿರಗಟ್ಟಲೆ ಹೆಣ ಸಂಪಾದಿಸುವ ಸಾವು ಮಾತ್ರ ಥೇಟ್ ರ‍್ಯಾದಿ ಕಳೆದುಕೊಂಡ ಭಿಕಾರಿ. ಅದೆಷ್ಟೋ ಕೋಟಿಗಳ ಒಡೆಯನಾದ ಮುಂಬೈನ ಒಬ್ಬ ಕೊರೋನಾದಿಂದ ಸತ್ತ ನಂತರ ಅವನ ಹೆಣವನ್ನು ಮನೆಯ ಗೇಟಿನ ಎದುರು ಬಿಸಾಡಿ ಹೋಗಿದ್ದಂತಹ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಾಗ ಈ ಸಾವು ಅದೆಷ್ಟು ಭೀಕರ ಎನ್ನಿಸಿಬಿಟ್ಟಿದ್ದಂತೂ ಸುಳ್ಳಲ್ಲ. ಹೀಗಾಗಿ ಈ ಸಂದರ್ಭದಲ್ಲಿ
ನಾನು ಹೋದಮೇಲೆ
ಇನ್ನೂ ಇರಬೇಕಿತ್ತು
ಎನ್ನುವ ನಿಮ್ಮ ನಂಬಿಕೆಯೇ
ಸಾರ್ಥಕ ಬದುಕಿನ ಕವಿತೆ
ನಾವು ಸತ್ತ ನಂತರ ನಮ್ಮನ್ನು ಕ್ಷಣಮಾತ್ರವಾದರೂ ನೆನಪಿಸಿಕೊಂಡು ಇನ್ನೂ ಇರಬೇಕಿತ್ತು ಎಂದು ಯಾರಾದರೂ ಮನಃಪೂರ್ವಕವಾಗಿ ಅಂದುಕೊAಡರೆ ಅದೇ ದೊಡ್ಡ ಶೃದ್ಧಾಂಜಲಿ. ಇದರ ಹೊರತಾಗಿ ಮಾಡುವ ಯಾವ ಧಾರ್ಮಿಕ ಶ್ರಾದ್ಧ, ತಿಥಿಗಳೂ ನನ್ನನ್ನು ಈ ಇಹಲೋಕದಿಂದ ಮುಕ್ತಗೊಳಿಸಲಾರದು.
ಕವಿತೆ ಬರೆಯುವುದು ಎಂದರೆ ಮರ‍್ನಾಲ್ಕು ಪುಟದ ಗದ್ಯ ಕವನ ಬರೆಯುವ ನನ್ನಂಥವರಿಗೆ ನಾಲ್ಕೇ ಸಾಲಿನಲ್ಲಿ ಹೇಳಬೇಕಾದುದ್ದನ್ನೆಲ್ಲ ಓದುಗರೆದೆಗೆ ದಾಟಿಸುವುದು ಒಂದು ಅಚ್ಚರಿಯ ವಿಷಯವೇ ಸರಿ. ಕೇವಲ ಸರಳವಾದ ಆಡು ಮಾತಿನ ಪದಗಳನ್ನೇ ಬಳಸಿ ಗುರು ಬರೆದಿರುವ ಈ ಕಿರಿದರಲ್ಲಿ ಪಿರಿಯರ್ಥವಿದೆ. ಎರಡೇ ಸಾಲಿನಲ್ಲಿ ನಮ್ಮನ್ನು ಮತ್ತೆ ಮತ್ತೆ ಚಿಂತನೆಗೆ ದೂಡುವಂತಹ ಮನೋಚಿಕಿತ್ಸಕ ಶಬ್ಧ ಚಮತ್ಕಾರವಿದೆ. ಶಬ್ಧ ಚಮತ್ಕಾರವೆಂದರೆ ಯಾವುದೋ ದೊಡ್ಡದೊಡ್ಡ ಪಂಡಿತ ಯೋಗ್ಯವಾದ ಶಬ್ಧಗಳನ್ನು ಬಳಸಬೇಕು ಎನ್ನುವ ನಮ್ಮ ಸಾಂಪ್ರದಾಯಿಕ ನಂಬಿಕೆಗೆ ಏಟು ಕೊಡುವ ಈ ಬೆಳದಿಂಗಳನ್ನು ಒಮ್ಮೆ ಸ್ವತಃ ಓದಿ ಬೆಳಗುವ ಅದರ ರೋಮಾಂಚಕತೆಯನ್ನು ಅನುಭವಿಸಬೇಕು.
*******************************************************
ಲೇಖಕರ ಬಗ್ಗೆ ಎರಡು ಮಾತು:
ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು
ಪುಸ್ತಕದ ಮುಖಪುಟ ಹಾಕಬೇಕು.
ಚೆನ್ನಾಗಿದೆ ಪುಸ್ತಕ ಪರಿಚಯ
Tq u soo much sir
Beautiful….