ಕೈ ಚೀಲ

ಕೈ ಚೀಲ

ಬಿ.ಶ್ರೀನಿವಾಸ

ಆ ಹುಡುಗನ ಹೆಸರಿಡಿದು ಯಾರೂ ಕರೆಯುವುದಿಲ್ಲ.
ಎಲ್ಲರೂ ಕರೆಯುವುದೇ ‘ಕೈಚೀಲ’ ಎಂದೆ.
ತನ್ನ ಕುಂಟುಗಾಲಿನಲಿ ಹೋಗುವಾಗ ಯಾರಾದರೂ “ಕೈ ಚೀಲಾ…”ಕೂಗಿದರೆ ಸಾಕು ತಕ್ಷಣ ನೋಡುತ್ತಾನೆ.ಅವನಿಗೆ ಬಹಳವೆಂದರೆ ಐದೋ ಆರೋ ವರುಷವಿದ್ದೀತು.

ಅವ್ವನ ಬಿಟ್ಟರೆ ಅವನಿಗೆ ಬೇರೆ ಜಗತ್ತು ಇಲ್ಲ.

ಬಣ್ಣದ ಸಂಜೆಗಳೆಂದರೆ ಅವನಿಗಿಷ್ಟ.

ಯಾಕೆಂದರೆ ಅವನವ್ವ ಸಂಜೆಯಾದಂತೆಲ್ಲ ಸುಂದರವಾಗಿ ಕಾಣುವಂತೆ ಅಲಂಕರಿಸಿಕೊಳ್ಳುತ್ತಾಳೆ.

ಆ ಪಾಂಡ್ಸ ಪೌಡರಿನ ಪರಿಮಳ ಸಂಜೆಗಳನ್ನು ಅರಳಿಸುತ್ತದೆ.

ಸಲೀಸಾಗಿ ಅವ್ವನ ಕೈ ಹಿಡಿದು ನಡೆಯುತ್ತಾನೆ.

ಅಷ್ಟರಲ್ಲಿ ಯಾರಾದರೂ ಕೈ..ಚೀ..ಲಾ..!ಪಿಸುಗುಟ್ಟಿದರೂ ಸಾಕು ಅವನು ಅಲ್ಲಿಗೆ ಹೋಗುತ್ತಾನೆ.

ಹೊಸ ಅಪ್ಪನನ್ನು ಕಾಣುತ್ತಾನೆ.

ಹೊಸ ಅಪ್ಪನೊಡನೆ …ಅವ್ವ ಹೇಳಿಕೊಟ್ಟ ಮಾತುಗಳನ್ನೇ ಹೇಳುತ್ತಾನೆ.

ಅವ್ವ ಖುಷಿಯಾಗಿದ್ದಾಳೆಂದು ಇವನೂ ಖುಷಿಯಿಂದ ಹುರಿದ ಬಟಾಣಿ ತಿನ್ನುತ್ತ ಕುಳಿತಿರುತ್ತಾನೆ.

ಕೈ ಚೀಲನಿಗೊಂದು ಕನಸಿತ್ತು.

ಅಷ್ಟು ಜನ ಅಪ್ಪಂದಿರನ್ನು ಗುರ್ತು ಹಿಡಿಯಲು ಸಂತೆಯಲ್ಲಿ ನೋಡಿದ ಬಣ್ಣದ ಟೋಪಿಗಳನ್ನು ತೆಗೆದಿರಿಸಿದ್ದ.

ಕೆಂಪು ಹಳದಿ ಹಸಿರು ನೀಲಿ..ಬಿಳಿ..ಖಾಕಿ…ಹೀಗೆ ತರಹೇವಾರಿ ಉಲನ್ ಟೋಪಿಗಳನ್ನು ಸಾಲಾಗಿ ಇರಿಸಿದ್ದ.

ಅವನ ಕನಸಿಗೆ ಅವಳವ್ವ ಅಡ್ಡ ಬರಲಿಲ್ಲ.

ಎಷ್ಟೊಂದು ಅಪ್ಪಂದಿರು..!

ನಾನು ಹೀಗೆ ಆಸ್ಪತ್ರೆಯಲ್ಲಿ ಮಲಗಿರುವಾಗ ಯಾಕೆ ಯಾರೊಬ್ಬರೂ ಬರುವುದಿಲ್ಲವಲ್ಲ? ಹುಡುಗನ ಹೃದಯ ಮಿಡಿಯುತ್ತಿದೆ.

ಅಲ್ಲಿ ಡಾಕ್ಟ್ರು ಅವ್ವನಿಗೇನೋ ಹೇಳುತ್ತಿದ್ದಾರೆ.

“ಲಕ್ಷಕ್ಕೊಬ್ಬರಿಗೆ ಮಾತ್ರ ಬರುವ ಕಾಯಿಲೆ…ವಾಸಿಯಾಗುವುದಿಲ್ಲ.”

ಆಕೆ ಅಲ್ಲಿಯೇ ಕುಸಿಯುತ್ತಿದ್ದಾಳೆ.

ಆ ಹುಡುಗನ ಮುಚ್ಚಿದ ಕಣ್ಣ ಪಾಪೆಯಲ್ಲಿ ಉಲನ್ ಟೊಪ್ಪಿಗೆ ಧರಿಸಿದ ಅಪ್ಪಂದಿರು ಸಾಲಾಗಿ ಬಂದು ..ಮಲಗಿದ್ದ ತನ್ನನ್ನು ನಿಧಾನಕ್ಕೆ ಎದ್ದು ಕೂಡಿಸಿ, ಮುದ್ದುಗರೆಯುತ್ತ ಬ್ರೆಡ್ಡು, ಬಿಸ್ಕತ್ತು, ಸೇಬಣ್ಣು…ತಿನ್ನಿಸುವ ಕನಸು ಕಾಣುತ್ತಾನೆ.

……ಯಾರೋ..

“ಕೈ ಚೀಲಾ..”!ಕರೆದಂತೆ ಭಾಸ

ಅವ್ವ ಕೈ ಸನ್ನೆ ಮಾಡಿ ಖುಷಿಯಿಂದ ಮೊಗ ಕಂಡಂತೆ

“ಅವ್ವಾ..ಹೊಸ ಅಪ್ಪ.. ಬರ್ತನಂತೆ…”!ಕನವರಿಸುತ್ತಲೇ ಇದ್ದಾನೆ.

ಆಕೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಳೆ.

Leave a Reply

Back To Top