ಕವಿತೆ
ಅಂಗಳದ ಚಿಗುರು
ಬಿರುಕು ಬಿಟ್ಟ ಗೋಡೆಯ ಮೌನದಲಿ
ಅಜ್ಞಾತ ಹಕ್ಕಿಯ ಗೂಡೊಂದು ಮುಗಿಲ ಕೂಗುತಿತ್ತು
ಅಂಗಳ ತುಂಬಿದ ನೀರಿನ ದಡದಲಿ
ಮರಿಗಳ ಹಿಂಡು ಕಣ್ಣಾಮುಚ್ಚಾಲೆ ಆಡುತ
ಪೇಪರ ಬೋಟಿನ ಕಣ್ಣೊಳಗೆ
ಅಲೆಗಳ ಲೆಕ್ಕದಲಿ ಮೈಮರೆತವು
ಅವಳು ಬಿಡುಗಣ್ಣಲಿ
ಪಾದಕ್ಕೆರಗಿದ ಗಾಯದ ಸಲಾಕೆ ಜಾಡಿಸುತ್ತ
ಗೋಗರಿವ ಮುಳ್ಳುಗಳ ಹೃದಯದಲಿ
ಕಸಿ ತುಂಬೊ ರಸದ ಮುಲಾಮಾದಳು
ಬಿರುಕ ಗೋಡೆಗಳ ನಡುವೆ
ಬೆಸುಗೆಯ ಚಿತ್ತ ಬೆನ್ನೊಳಗ ಬಿಗಿದುಕೊಂಡು
ಹರಿವ ತೊರೆಯಲಿ ತೇಲಿ ಬರೋ ನಾವೆಯಾದಳು
ಉರಿವ ಒಲೆಗಳಲಿ ಗುಪ್ತ ಬೂದಿಯಾಗಿ
ತೇದು ತೇಗಿ ನಕ್ಷತ್ರಗಳ ನೆಲಕ್ಕಿಳಿಸಿ
ಗುಡಿಸಲು ಕಣ್ಣೊಳಗೆ
ಸದಾ ಹುಣ್ಣಿಮೆಯ ಚಂದಿರ ಚಿತ್ರಿಸಿ
ಬೆಳದಿಂಗಳ ನಕ್ಷೆಯಾದಳು ಅಂಗಳದ ಚಿಗುರಿಗೆ
*************************
ಕವಿತೆ ಚೆನ್ನಾಗಿದೆ. ಕವಿಯ ಹೆಸರು ಗೊತ್ತಾಗಲಿಲ್ಲ