ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ದಾನ..?

ರಕ್ತದಾನಕ್ಕಿಂತ  ಇನ್ನು ದಾನವಿಲ್ಲ
ನೇತ್ರದಾನಕ್ಕಿಂತ  ಬೇರೆ  ದಾನವಿಲ್ಲ..
…ಎಂಬ  ಸ್ಲೋಗನ್ನುಗಳೇ,
ರಾಶಿ  ಭಿತ್ತಿ  ಪತ್ರಗಳೇ,
ಮೈಕುಗಳ  ಗಂಟಲಲಿ
ಕೂಗುವ  ಧ್ವನಿಗಳೇ…

ಕುಡಿದು ಬಿಟ್ಟಿಹರಲ್ಲ  ನಮ್ಮ ನೆತ್ತರವನು
ಕಿತ್ತು ಬಿಟ್ಟಿಹರಲ್ಲ ನಮ್ಮ  ನೇತ್ರಗಳನು
ಮೋಸ ವಂಚನೆಯ  ಅಧಿಕಾರಿಗಳು…
ದೇಶಭಕ್ತರ ಮುಖವಾಡ  ಹಾಕಿದವರು..
ಹಗಲುಗಳ್ಳರು..ಕಾಳಧನಿಕರು..

ಹಸಿದವರ  ಕೈತುತ್ತು  ಕಸಿದುಕೊಂಡವರು,
ಗೇಣುಬಟ್ಟೆಯನೂ  ಎಳೆದುಕೊಂಡವರು,
ನಿಂತ  ನೆಲವನೇ  ಬಗೆದುಕೊಂಡವರು…

ಪ್ರಾಣವನು  ಹಣಕಾಗಿ ಪಣವ ಇಡಿಸಿಹರು,
ತ್ರಾಣವನು  ತೃಣವಾಗಿ  ಸೂಡು  ಕಟ್ಟಿಹರು..
ನಮ್ಮದೇನಿದೆ  ಇಲ್ಲಿ  ನಮ್ಮದೆಂದು..?
ಮೈಯ ಕಣದಲಿ ಇಲ್ಲ ಒಂದು  ಜಲಬಿಂದು..

ಇನ್ನೆಂಥ  ನೇತ್ರ..? ಇನ್ನೆಂಥ  ನೆತ್ತರ..?
ಕೊಡಲೇನು  ಉಳಿದಿದೆ  ನಮ್ಮ  ಹತ್ತಿರ…?????

————————-

3 thoughts on “ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ದಾನ..?

  1. ಕವಿತೆಯುದ್ದಕ್ಕೂ ಸಮಾಜದ ಹುಚ್ಚು ಕ್ರೌರ್ಯ ಮಾರ್ದನಿಸಿದೆ.

    1. ಸಮಂಜಸವಾದ ಅಭಿಪ್ರಾಯಕ್ಕೆ ಧನ್ಯವಾದ ತಮಗೆ..
      ಹಮೀದಾಬೇಗಂ ದೇಸಾಯಿ.ಸಂಕೇಶ್ವರ

Leave a Reply

Back To Top