ಹೊಸ ಶಿಕ್ಷಣ ನೀತಿ

ಅನುಷ್ಠಾನವಾದೀತೇ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦?

ಗಣೇಶ್ ಭಟ್ ಶಿರಸಿ

ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ನೀಡಿದ ಬೆನ್ನಲ್ಲೇ ಈ ನೀತಿಯ ಪರ ಮತ್ತು ವಿರೋಧಿ ಹೇಳಿಕೆಗಳು, ಲೇಖನಗಳು ಪ್ರಕಟವಾಗುತ್ತಿವೆ.

ಹೊಸ ಶಿಕ್ಷಣ ನೀತಿಯು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವುದರ ಜೊತೆಗೆ ಇಡೀ ರಾಷ್ಟ್ರವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆಯೆಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ.ಈ ಶಿಕ್ಷಣ ನೀತಿಯನ್ನು ಹೊಸ ಅವಿಷ್ಕಾರ, ಹೊಸ ಮನ್ವಂತರದ ಹರಿಕಾರ ನೀತಿ ಮುಂತಾಗಿ ಬಿಂಬಿಸಲಾಗುತ್ತಿದೆ. ಲಭ್ಯತೆ, ಸಮಾನತೆ, ಗುಣಮಟ್ಟ, ಉತ್ತರದಾಯಿತ್ವಗಳ ಬುನಾದಿಯ ಮೇಲೆ ಆಧರಿತ ಈ ಶಿಕ್ಷಣ ನೀತಿಯಿಂದ ಜಾಗತಿಕ ಜ್ಞಾನ ಕೇಂದ್ರ ಮತ್ತು ಶಕ್ತಿಯಾಗಿ ಭಾರತವು ಹೊರಹೊಮ್ಮಲಿದೆಯೆಂದು ಪ್ರಚಾರ ಮಾಡಲಾಗುತ್ತಿದೆ.

ಈ ಶಿಕ್ಷಣ ನೀತಿಯ ಗುರಿ ಮತ್ತು ಉದ್ದೇಶಗಳು ಉದಾತ್ತವಾಗಿವೆ ಎಂಬುದು ನಿಜ. ಆದರೆ ವಾಸ್ತವವನ್ನು ನಿರ್ಲಕ್ಷಿಸಿ ನಿಗದಿಪಡಿಸುವ ಉದ್ದೇಶಗಳು ಸಫಲವಾಗುವುದು ದೂರದ ಮಾತಷ್ಟೇ ಅಲ್ಲ, ಅವುಗಳ ನಿರೂಪಣೆಯ ಪ್ರಾಮಾಣಿಕತೆಯೇ ಪ್ರಶ್ನಾರ್ಹವಾಗುತ್ತದೆ. ೨೦೨೦ ರ ಶಿಕ್ಷಣ ನೀತಿಯನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದಾಗ, ಅದರ ಅನುಷ್ಠಾನಕ್ಕೆ ಇರುವ ತೊಡುಕುಗಳ ಅರಿವಾಗುತ್ತದೆ.

ಉದಾಹರಣೆಗಾಗಿ,ಇದು ಭಾರತೀಯ ಶಿಕ್ಷಣ ಪದ್ಧತಿಯ ಪುನರುತ್ಠಾನದ ಪ್ರಯತ್ನವೆಂದು ಹೇಳಿಕೊಳ್ಳಲಾಗಿದೆ. ಶಿಕ್ಷಣ ಕುರಿತಾದ ಭಾರತೀಯ ವ್ಯಾಖ್ಯೆ ” ಸಾ ವಿದ್ಯಾ ಯಾ ವಿಮುಕ್ತಯೇ” – ವಿದ್ಯೆ ಅಂದರೆ ಭೌತಿಕ, ಮಾನಸಿಕ, ಆದ್ಯಾತ್ಮಿಕ ಬಂಧನಗಳಿಂದ ಬಿಡುಗಡೆ. ಇದು ನಿಸರ್ಗದ ನಿಯಮವಾದ ವಿಕಾಸಕ್ಕೆ ಪೂರಕವಾದ ವಿಚಾರ.

ತಜ್ಞರ ಅಭಿಪ್ರಾಯದಂತೆ ಮೊದಲಿನ ಏಳು ವರ್ಷಗಳ ಅವಧಿಯಲ್ಲಿ ಮಗುವಿನ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಉದಾತ್ತ ಚಿಂತನೆಗಳು, ಏಕತೆಯ ಭಾವ, ಮನಸ್ಸಿನ ವಿಸ್ತಾರ, ಸಮಗ್ರತೆಯ ಕಲ್ಪನೆ, ಜೀವಜಾಲದೊಂದಿಗಿನ ಅವಿಭಾವ ಸಂಬಂಧ, ಪರಸ್ಪರ ಪ್ರೀತಿ ಮುಂತಾದವು ಮಗುವಿನ ಮನಸ್ಸಿನಲ್ಲಿ ರೂಪುಗೊಳ್ಳುವ ಅವಧಿ ೦-೭ ವರ್ಷಗಳು. ಆಟ, ಪಾಠಗಳು, ಅಷ್ಠಾಂಗ ಯೋಗ, ಧ್ಯಾನ ಪದ್ಧತಿಗಳ ಮೂಲಕ ನೈತಿಕತೆಯ ನೆಲೆಗಟ್ಟಿನ ಮೇಲೆ ಸಮಗ್ರ ವ್ಯಕ್ತಿತ್ವ ರೂಪಿಸುವುದು ಶಿಕ್ಷಣದ ಗುರಿಯಾಗಬೇಕು.

ಅಂಗನವಾಡಿ (ನರ್ಸರಿ) ಯಿಂದ ೨ ನೇ ವರ್ಗದವರೆಗಿನ ಶಿಕ್ಷಣ ಪದ್ಧತಿ ವಿಶಿಷ್ಟವಾಗಿರಬೇಕು. ಹೊಸ ಶಿಕ್ಷಣ ನೀತಿಯಲ್ಲಿ ಈ ವಯಸ್ಸಿನ ಮಕ್ಕಳ ಕಲಿಕೆಯನ್ನು ಮೊದಲನೇ ಹಂತದ ೫ ವರ್ಷಗಳೆಂದು ಗುರ್ತಿಸಲಾಗಿದೆ. ಜಾತಿ ಮತ ಪಂಥಗಳ ಭೇಧಭಾವಗಳನ್ನು, ಮೂಡನಂಬಿಕೆಗಳನ್ನು ಬಳಸಿ, ಬೆಳಸಿ ಅಧಿಕಾರಕ್ಕೆ ಅಂಟಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ಇಂತಹ ಶಿಕ್ಷಣ ನೀಡಿಕೆಯ ಅನುಷ್ಠಾನ ತರಲು ಇಚ್ಚಿಸುವುದಿಲ್ಲ. ಸರ್ವರಲ್ಲಿ ಸಮಭಾವ ಹೊಂದದೇ, ಆದ್ಯಾತ್ಮ ಮನೋಭಾವ ಮೂಡಿಸಲು ಪ್ರಯತ್ನಿಸದೇ, ಇತಿಹಾಸದ ಘಟನೆಗಳನ್ನೇ ಬಳಸಿ ಸಮಾಜದಲ್ಲಿ ದ್ವೇಷ ಅಸೂಯೆಗಳನ್ನು ಬಿತ್ತುತ್ತಿರುವ ರಾಜಕೀಯ ಪಕ್ಷವು ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯ ಪುನರುತ್ಠಾನ ಮಾಡುತ್ತೇವೆಂದು ಹೇಳಿಕೊಳ್ಳುವುದು ಆಷಾಡಭೂತಿ ನಡತೆ.ಮಗುವಿನ ತಲೆಯಲ್ಲಿ ಮಾಹಿತಿ ತುರುಕಲು ಹೊಸ ಹೊಸ ವಿಧಾನಗಳ ಬಳಕೆಯನ್ನು ಪ್ರೋತ್ಸಾಹಿಸುವುದೇ ಶಿಕ್ಷಣವಲ್ಲ.

 ಶಿಕ್ಷಣವನ್ನು ವಿವಿಧ ಹಂತದಲ್ಲಿ ಮೊಟಕುಗೊಳಿಸಿರುವ ೨ ಕೋಟಿಗೂ ಅಧಿಕ ಮಕ್ಕಳನ್ನು ಹೊಸ ಔಪಚಾರಿಕ ಶಿಕ್ಷಣ  ವ್ಯವಸ್ಥೆಗೆ  ಮರಳಿ ತರಲು ಹೊಸ ಶಿಕ್ಷಣ ನೀತಿಯಿಂದ ಸಾಧ್ಯವೆಂದು ಪ್ರತಿಪಾದಿಸಲಾಗಿದೆ. ಈ ಮಕ್ಕಳು ಶಿಕ್ಷಣ ಮುಂದುವರೆಸದಿರಲು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ದೋಷಗಳೇ ಕಾರಣವಲ್ಲ. ತಮ್ಮ ಅಥವಾ ತಮ್ಮ ಕುಟುಂಬದ ನಿರ್ವಹಣೆಗಾಗಿ ದುಡಿಯುವ ಅನಿವಾರ್ಯಯತೆಯಿಂದ ಹೆಚ್ಚಿನವರು ಶಿಕ್ಷಣ ಮುಂದುವರೆಸುವುದಿಲ್ಲ. ಶಿಕ್ಷಣ ಪದ್ಧತಿಯನ್ನೋ, ಪಠ್ಯ ಪುಸ್ತಕಗಳನ್ನೋ ಬದಲಾಯಿದೊಡನೆ ಶಿಕ್ಷಣ ಮುಂದುವರೆಸಲು ಮಕ್ಕಳು ವಾಪಾಸು ಬರುತ್ತಾರೆಂದು ವಾದಿಸುವುದು ಜನರನ್ನು ದಾರಿತಪ್ಪಿಸುವ  ಅವಾಸ್ತವಿಕ ನೆಲೆಗಟ್ಟಿನ ನಡೆ.

  ಪ್ರತಿಯೋರ್ವ ವ್ಯಕ್ತಿಗೂ ಜೀವನದ ಕನಿಷ್ಠ ಅಗತ್ಯತೆಗಳ ಪೂರೈಕೆಯ ಭದ್ರತೆಯಾದಾಗ ಮಾತ್ರ ಎಲ್ಲಾ ಮಕ್ಕಳೂ ಶಾಲೆಗೆ ಬರುತ್ತಾರೆ.ಆಹಾರ, ಬಟ್ಟೆ, ವಸತಿ, ಔಷಧೋಪಚಾರಗಳಂತೆಯೇ ಶಿಕ್ಷಣ ಕೂಡ ಜೀವನದ ಕನಿಷ್ಠ ಅಗತ್ಯತೆಯೆಂಬುದನ್ನು ಒಪ್ಪಿಕೊಂಡು, ಅವುಗಳನ್ನು  ಫಲಪ್ರದ ಉದ್ಯೋಗ ಸೃಷ್ಟಿಯ ಮೂಲಕ ಖರೀಧಿಶಕ್ತಿಯನ್ನು ನೀಡುವ ಭರವಸೆಯ ಈಡೇರಿಕೆಯಾದಾಗ ಮಾತ್ರ ಎಲ್ಲರಿಗೂ ಶಿಕ್ಷಣವೆಂಬ ಕನಸು ನನಸಾಗುತ್ತದೆ. ಸಿಕ್ಕಿದವರಿಗೆ ಸೀರುಂಡೆ ಯೆಂಬ ಆರ್ಥಿಕ ನೀತಿ, ಕೆಲವರ ಕೈಯಲ್ಲೇ ಸಂಪತ್ತು ಕ್ರೋಢಿಕರಣವಾಗುವ ಕೇಂದ್ರೀಕ್ರತ ಅರ್ಥವ್ಯವಸ್ಥೆಯಲ್ಲಿ ಈ ಪರಿವರ್ತನೆ  ಸಾಧ್ಯವಾಗದ ವಿಚಾರ. ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಅನುಷ್ಠಾನದಿಂದ ಮಾತ್ರ ಇದು ಸಾಧ್ಯ. ಬಂಡವಾಳವಾದೀ ವ್ಯವಸ್ಥೆಯನ್ನು ಪ್ರತಿಪಾದಿಸುವ ಪ್ರಸ್ತುತ ಸರ್ಕಾರದ ಈ ಘೋಷಣೆ ಜನರನ್ನು ಮರುಳುಗೊಳಿಸುವ ತಂತ್ರವಷ್ಟೇ!

 ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ೫ ನೇ ತರಗತಿವರೆಗೆ, ಸಾಧ್ಯವಾದರೆ ೮ ನೇ ತರಗತಿಯ ವರೆಗೂ ಶಿಕ್ಷಣ ನೀಡುವುದು ಉತ್ತಮ ವಿಚಾರ. ಹೊಸ ಶಿಕ್ಷಣ ನೀತಿಯಲ್ಲಿ ಇದನ್ನು ಕಡ್ಡಾಯವಾಗಿಸದೇ,  ಸಾಧ್ಯವಾದಲ್ಲಿ ಎಂಬ ಪದ ಸೇರಿಸಿರುವುದು ಪ್ರಾದೇಶಿಕ ಭಾಷಾ ಮಾಧ್ಯಮದ ಕುರಿತಾದ ಬದ್ಧತೆಯ ಕೊರತೆ.ಹಲವು ಸರ್ಕಾರಿ ಶಾಲೆಗಳಲ್ಲೇ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸಿರುವ ಈ ಸಮಯದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹದಿಂದ ಪಾಲಕರನ್ನು ಹೊರತರುವ ಪರಿಣಾಮಕಾರಿ ಪ್ರಾಮಾಣಿಕ ಕಾರ್ಯಯೋಜನೆ ಇಲ್ಲದಿರುವ ಈ ಹೊಸ ನೀತಿ, ಜನರ ಕಣ್ಣೊರೆಸುವ, ಭಾಷಾ ಚಳುವಳಿಗಳನ್ನು ದಾರಿತಪ್ಪಿಸುವ ಕುತಂತ್ರವಷ್ಟೆ.

ತ್ರಿಭಾಷಾ ಕಲಿಕೆಗೆ ಅವಕಾಶ ಒಳ್ಳೆಯದು. ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಜೊತೆಗೆ ಇನ್ನೆರೆಡು ಭಾಷೆಗಳ ಕಲಿಕೆಯನ್ನು ಕಡ್ಡಾಯವಾಗಿಸಿ ಅವುಗಳಲ್ಲಿ ಎರಡು ಭಾಷೆಗಳು ಭಾರತೀಯ ಮೂಲದವಾಗಿರಬೇಕೆಂದಿರುವುದು ಹಿಂದಿ ಮತ್ತು ಸಂಸ್ಕೃತದ ಹೇರಿಕೆಯ ಪ್ರಯತ್ನವೆಂಬ ಭಾವನೆ ಮೂಡಲು ಕಾರಣವಾಗಿದೆ.ಕರಡು ಶಿಕ್ಷಣ ನೀತಿಯಲ್ಲಿ ಕಡ್ದಾಯಗೊಳಿಸಿದ್ದ ಇಂಗ್ಲೀಷ್ ಮತ್ತು ಹಿಂದಿಯ ಕಲಿಕೆಯನ್ನು ರಾಜಕೀಯ ಒತ್ತಡಗಳಿಂದಾಗಿ ಕೈ ಬಿಟ್ಟಿದ್ದರೂ ಸಂಶಯ ದೂರವಾಗಿಲ್ಲ.  ಆಂಗ್ಲ ಭಾಷೆಯನ್ನು ಬ್ರಿಟಿಷರ ಭಾಷೆಯೆಂದು ವ್ಯಾಖ್ಯಾನಿಸುವ ಕಾಲ ಮುಗಿದಿದೆ. ಜಾಗತಿಕ ಸಂಪರ್ಕಭಾಷೆಯಾಗಿ ಇಂಗ್ಲೀಷ್ ಕಲಿಕೆ ಅನಿವಾರ್ಯವಾಗುತ್ತಿದೆ. ಇಂಗ್ಲೀಷ್ ಅನ್ನು ಭಾಷೆಯಾಗಿ ಕಲಿಯುವದಕ್ಕೂ ಕಲಿಕಾ ಮಾಧ್ಯಮವಾಗಿ ಬಳಸುವದಕ್ಕೂ ತುಂಬಾ ವ್ಯತ್ಯಾಸವಿದೆ.ಈ ಹೊಣೆಗಾರಿಕೆಯನ್ನುಹಿಂದಿ ಪ್ರಿಯ ಕೇಂದ್ರ ಸರ್ಕಾರ ನಿಭಾಯಿಸಬಲ್ಲದೆಂಬುದಕ್ಕೆ ಆಧಾರವಿಲ್ಲ.

ವೃತ್ತಿ ಆಧರಿತ ಶಿಕ್ಷಣ ನೀಡಿಕೆ,  ಹೆಚ್ಚು ಭಾಷೆಗಳನ್ನು ಕಲಿಯುವ ಅವಕಾಶ ಸೃಷ್ಟಿಸುವುದು ಉತ್ತಮ ಆಶಯಗಳು. ಆದರೆ ಇದಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಯಾರು ಭರಿಸಬೇಕು..?? ಸರ್ಕಾರಿ ಶಾಲೆಗಳಲ್ಲಿ ನೇಮಕಾತಿಗಳಿಲ್ಲ, ಖಾಸಗಿ ಶಾಲೆಗಳು ಹೆಚ್ಚುವರಿ ವೆಚ್ಚವನ್ನು ಪಾಲಕರಿಗೆ ವರ್ಗಾಯಿಸುವುದು ಸಹಜ. ಉದ್ದೇಶ ಉತ್ತಮವಾಗಿದ್ದರೂ, ಅನುಷ್ಠಾನ ವಿಧಾನ ವ್ಯವಹಾರಿಕವಾಗಿರದಿದ್ದಾಗ ಅದು ವಿಫಲಗೊಳ್ಳುತ್ತದೆ.

 ತೊಂಭತ್ತರ ದಶಕದಲ್ಲಿ ಕಾಂಗ್ರೆಸ್ ಪ್ರಾರಂಭಿಸಿದ ಖಾಸಗೀಕರಣ, ಉದಾರೀಕರಣ , ಜಾಗತೀಕರಣಗಳನ್ನುಐನ್ನಷ್ಟು ವೇಗವಾಗಿ ಅನುಷ್ಠಾನಗೊಳಿಸುತ್ತಿರುವ ಬಿಜೆಪಿಯಿಂದಾಗಿ ಉಳ್ಳವರು ಇಲ್ಲದವರ ನಡುವಿನ ಅಂತರ ಹೆಚ್ಚುತ್ತಿದ್ದು, ಶೇಕಡಾ ೧೦ ರಷ್ಟು ಜನರು ದೇಶದ ಸಂಪತ್ತಿನ ೭೦% ಗೂ ಹೆಚ್ಚಿನ ಸಂಪತ್ತಿನ ನಿಯಂತ್ರಣ ಹೊಂದಿದ್ದಾರೆ.ಕೆಲವರ ಕೈಯಲ್ಲೇ ಸಂಪತ್ತು ಕೇಂದ್ರೀಕೃತವಾಗುತ್ತಿರುವ ಇಂತಹ ಸಂಧರ್ಭದಲ್ಲಿ, ೨೦೦ ಕ್ಕೂ ಹೆಚ್ಚು ವಿದೇಶಿ ವಿಶ್ವ ವಿದ್ಯಾಲಯಗಳನ್ನು ಅವ್ಹಾನಿಸುವ ಕ್ರಮವು, ಉಳ್ಳವರಿಗೇ ಶಿಕ್ಷಣ ಪದೆಯುವ ಅವಕಾಶ ದೊರಕಿಸಿಕೊಡುವದರಿಂದ, ಸಾಮಾಜಿಕ – ಆರ್ಥಿಕ ತಾರತಮ್ಯ ಇನ್ನಷ್ಟು ಹೆಚ್ಚಲು ಅವಕಾಶವಾಗಲಿದೆ.ಆರ್ ಟಿ ಇ ಎಂಬ ವಿಫಲ ಯೋಜನೆ, ಮಧ್ಯಾನದ ಊಟ, ಬೆಳಗಿನ ತಿಂಡಿಗಳ ನೀಡಿಕೆಯಿಂದಲೇ ಎಲ್ಲರಿಗೂ ಶಿಕ್ಷಣದ ಸಮಾನ ಅವಕಾಶವೆಂಬುದು ಪೊಳ್ಳು ಘೋಷಣೆ.

೧೦+೨ ಪದ್ಧತಿಯನ್ನು ೫+೩+೩+೪ ನ್ನಾಗಿ ಬದಲಿಸುವುದೇ ಮಹತ್ತರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಈಗಾಗಲೇ ೧+೨+೫+೩+೪ ರ ಪದ್ಧತಿ ಜಾರಿಯಲ್ಲಿರುವಾಗ ಬದಲಾವಣೆಯ ಕುರಿತಾಗಿ ಡಂಗುರ ಸಾರುವುದು ಢೋಂಗಿತನ.

 ಪದವಿಗಳಿಂದ, ತರಬೇತಿಗಳನ್ನು ನೀಡುವುದರಿಂದಲೇ ಉತ್ತಮ ಶಿಕ್ಷಕರು ನಿರ್ಮಾಣವಾಗಲಾರರು. ನೈತಿಕತೆ ಆಧ್ಯಾತ್ಮಿಕತೆ, ವಿಶಾಲ ಮನೋಭಾವಗಳು ಶಿಕ್ಷಕರಿಗೆ ಅತಿ ಅಗತ್ಯ. ಉತ್ತಮ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಇದು ಅನಿವಾರ್ಯ. ಸಂಕುಚಿತ, ಸ್ವಾರ್ಥ ಮನೋಭಾವ ಬೆಳೆಸುತ್ತಿರುವ ಇಂದಿನ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ನೇತಾರರ ನಡೆ ಮಾದರಿಯಾಗಿರಬೇಕು.ಜಾತಿ,ಮತ, ಪಂಥಗಳ ಹೆಸರಿನಲ್ಲಿ ಜನರನ್ನು ಒಡೆದು,ಮೂಢನಂಬಿಕೆ ಬಿತ್ತುತ್ತಾ, ಅಧಿಕಾರದ ಗದ್ದುಗೆಯಲ್ಲಿ ಕುಳಿತಿರುವವರಿಂದ ಇದು ಸಾಧ್ಯವಾಗದು.

 ಉತ್ತಮ ಆಶಯ ಹೊಂದಿದ ಸಿದ್ಧಾಂತಗಳ ಯಶಸ್ಸು ಅಥವಾ ವೈಫಲ್ಯಕ್ಕೆ,ಅನುಷ್ಠಾನಗೊಳಿಸುವವರ ಮನೋಭೂಮಿಕೆಯೇ ಮುಖ್ಯ ಕಾರಣ. ಉತ್ತಮ ವಿಚಾರಗಳು, ಸದಾಶಯಗಳನ್ನು ಮುಂದಿಟ್ಟುಕೊಂಡು ಸಿದ್ಧಾಂತವನ್ನು ರೂಪಿಸಲಾಗುತ್ತದೆ. ಆದರೆ ಅವುಗಳನ್ನು ಅನುಷ್ಠಾನಗೊಳಿಸುವ ಕಾರ್ಯವಿಧಾನಗಳ ಬಗ್ಗೆ, ವ್ಯವಹಾರಿಕ ಸಾಧ್ಯತೆಗಳ ಕುರಿತು, ಆಷಾಡಭೂತಿ ಪ್ರತಿಪಾದಕರು ಪ್ರಾಮಾಣಿಕವಾಗಿ ಯೋಜಿಸುವುದಿಲ್ಲ; ಯೋಚಿಸುವುದೂ ಇಲ್ಲ. ತಾವು ಘನಂಧಾರಿ ಕೆಲಸ ಮಾಡುತ್ತಿದ್ದೇವೆಂದು ತೋರಿಸಿಕೊಳ್ಳುವುದೇ ಅವರ ಉದ್ದೇಶ. ಶಿಕ್ಷಣ ನೀತಿ ೨೦೨೦ ಈ ವರ್ಗಕ್ಕೇ ಸೇರಿದೆಯೆಂಬುದು ವಿಷಾದನೀಯ.

*************************

One thought on “ಹೊಸ ಶಿಕ್ಷಣ ನೀತಿ

  1. ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯನ್ನು ಅಷ್ಟು ಸುಲಭದಲ್ಲಿ ಬದಲಿಸುವುದು ಅಸಾಧ್ಯದ ಕೆಲಸ. ಮೂಲತಃ ವರ್ಣವ್ಯವಸ್ಥೆಯೇ ಪುರಾತನ ಭಾರತೀಯ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸೇತುವಾಗಿತ್ತು. ಬ್ರಿಟಿಷರ ಅಪಭ್ರಂಶ ಅರ್ಥಾಂತರವೇ ಇವತ್ತಿನ ಜಾತಿ ಪದ್ಧತಿಯಾಗಿ ಬದಲಾಗಿ ಶ್ರೇಣೀಕೃತ ಸಮಾಜವನ್ನು ಜಾತಿ ಮೂಲಕ ಕಾಣಹೊರಟದ್ದೇ ಸದ್ಯದ ದುರಂತ.

    ಪುರಾತನ ಶಿಕ್ಷಣ ಗುರುಕುಲಗಳಲ್ಲಿ ಆಯಾ ವರ್ಣದ ಕಸುಬು ಮತ್ತು ಜೀವನ ನಿರ್ವಹಣೆಯ ಗುರಿಯಾಗಿ ರೂಪುಗೊಳ್ಳುತ್ತಿತ್ತು. ಪರಸ್ಪರ ಅವಲಂಬನೆ ಇದ್ದ ಕಾಲದಲ್ಲಿ ಪರಸ್ಪರ ಗೌರವ ಮತ್ತು ಕೊಡು ಕೊಳ್ಳುವಿಕೆ ಇರಲಿಕ್ಕೇ ಬೇಕು.

    ಆದರೆ ಮೆಕಾಲೆ ಸೃಷ್ಟಿಸಿದ್ದು ಕ್ಲೆರಿಕಲ್ ಶಿಕ್ಷಣ ವ್ಯವಸ್ಥೆಯನ್ನು. ಎಲ್ಲಕ್ಕೂ ಲೆಕ್ಕ ವರದಿ ಮತ್ತು ಉಸ್ತುವಾರಿ ಕಲಿಸಿತೇ ವಿನಾ ಕಸುಬನ್ನಲ್ಲ. ಜೊತೆಗೆ ಆಸಕ್ತ ವಿಷಯದ ಅಧ್ಯಯ‌ನವನ್ನು ಕೂಡ ನಿಷೇದ ಮಾಡಿತು. ವಿಜ್ಞಾನ ಮತ್ತು ಕಲೆ ಎರಡರಲ್ಲೂ ಆಸಕ್ತಿ ಇರುವವರನ್ನು ದೂರ ಇಟ್ಟಿತು. ಆನರ್ಸ್ ಇಲ್ಲದ ಬರಿಯ ತಿಳುವಳಿಕೆಯನ್ನೇ ಜ್ಞಾನ ಎಂದು ಬಿಂಬಿಸಿದ ಕಾರಣಕ್ಕೇ ಇವತ್ತು ಪರಸ್ಪರ ಅವಲಂಬನೆಗಿಂತ ಪರಸ್ಪರ ದ್ವೇಷ ಅಸೂಯೆ ತುಂಬಿಕೊಂಡಿದೆ. ಪಠ್ಯಪುಸ್ತಕ ಆಯ್ಕೆ ಸಮಿತಿಯು ಆಯಾ ಆಳುವ ಸರ್ಕಾರದ ಹುಕುಂಗಳನ್ನು ಅಂತಃ ಪಠ್ಯವಾಗಿ ಆರಿಸುವುದು ಕೂಡ ನಿಜದ ಚರಿತೆಯನ್ನು ಮುಚ್ಚಿಟ್ಟು ತಿದ್ದಿದ ಇತಿಹಾಸವನ್ನು ಕಲಿಸುವ ಮೂಲಕ ಪರಂಪರೆಯನ್ನು ದೂರ ಇರಿಸಿ ಆವಾಹಿತ ತಿಳುವಳಿಕೆಯನ್ನು ಜ್ಞಾನವೆಂದು ಬಿಂಬಿಸಲಾಯಿತು.

    ಈ ಕುರಿತು ಸಾದ್ಯಂತವಾದ ಅಧ್ಯಯನ ಮತ್ತು ಕಠಿಣ ಕಾಯಿದೆ ಅತ್ಯಗತ್ಯ.
    ಡಿ ಎಸ್ ರಾಮಸ್ವಾಮಿ

Leave a Reply

Back To Top