ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿ ಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿ ಮಠ ಗಜಲ್ ನಿನ್ನನು ಈ ಕಂಗಳು ಮರೆಯುವ ಮುನ್ನ  ಬಂದು ಬಿಡುಕನಸುಗಳು ರೆಪ್ಪೆಯನು ತೊರೆಯುವ ಮುನ್ನ  ಬಂದು ಬಿಡು ಅದೆಷ್ಟೋ ದಿನಗಳಿಂದ ,ನಿನ್ನ ನೆನಪುಗಳನೇ ಉಸಿರಾಡುತಿರುವೆಎದೆಬಡಿತ ಈ ಎದೆಯನೇ ಕೊರೆಯುವ ಮುನ್ನ ಬಂದು ಬಿಡು ಹಗಲು ಹಗುರಾಗುತ್ತಿಲ್ಲ, ಇರುಳು ಮಗ್ಗಲು ಬದಲಿಸುತಿಲ್ಲಹಗಲಿರುಳುಗಳ ನೋವು  ಪೊರೆಯುವ ಮುನ್ನ ಬಂದು ಬಿಡು ನೀ ಬಿಟ್ಟು ಹೋದಲ್ಲಿಯೇ ನಿಂತಿರುವೆ ಇಂದಿಗೂ ನಲ್ಲಆ ಜಾಗವೂ ನಿನ್ನ ಸ್ಪರ್ಶಕಾಗಿ ಮೊರೆಯುವ ಮುನ್ನ ಬಂದು ಬಿಡು ಕನವರಿಸುತ ಕಾಯುತಿಹಳು ‘ವಾಣಿ ‘  ಕಣ್ತುಂಬಿಕೊಂಡು ದಿನವೂಬಿಸಿ ಹನಿಗಳ ಕಡಲು ಬದುಕು ಹೊರೆಯುವ ಮುನ್ನ ಬಂದು ಬಿಡು ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿ ಮಠ ಅವರ ಗಜಲ್ Read Post »

ಕಾವ್ಯಯಾನ

ಕಾವೇರಿ ಪಾಟೀಲ ಶಹಾಪುರ “ಮತ್ತೆ ಭಾವ ಚಿಗುರಿತು”

ಕಾವ್ಯ ಸಂಗಾತಿ ಕಾವೇರಿ ಪಾಟೀಲ ಶಹಾಪುರ “ಮತ್ತೆ ಭಾವ ಚಿಗುರಿತು” ಬರಿದಾಗಿದ್ದ ಎದೆಯಬರಡು ಮರದಲ್ಲಿ,ಮೌನ ಆವರಿಸಿದರೆಂಬೆ ಕೊಂಬೆಯಲ್ಲಿ,ಹಳೆಯ ನೆನಪಿನಎಲೆಯು ಉದುರಿ,ಹೊಸದೊಂದು ಆಸೆಮೂಡಿತು ಚೈತ್ರ ಚೆಲುವು. ಬಾಗಿದ ಬಾಡಿದ ಹೂವಿನಒಣಗಿದ ಗಿಡಕೆ,ಒಲವಿನ ಹನಿಗಳುತಗುಲಿದ ತಕ್ಷಣ,ನಿದ್ದೆಗೆ ಜಾರಿದಕನಸುಗಳೆಲ್ಲ,ಕಣ್ಣಿನ ಅಂಚಲಿನರ್ತಿಸದ ಕ್ಷಣ. ಕೇಳದೆ ಬಂದಆ ಭಾವ ಕನ್ನಿಕೆ,ಹೇಳದೆ ಮೂಡಿಸಿದಪ್ರೀತಿಯ ಭಾವ,ಅಲೆಯಿಲ್ಲದ ಪ್ರಶಾಂತತುಂಬಿದ ಕಡಲಲಿ,ಎದ್ದಿದೆ ಈಗ ಹೊಸದೊಂದುತೀವ್ರ ಚಲನೆ. ತುಟಿಗಳ ಮೇಲೆಮೂಡಿದೆ ನಗುವು,ಮನಸಿನ ತುಂಬೆಲ್ಲಾಹಸಿರ ಸಿರಿಯು,ಕಾಲದ ಮರೆಯಲ್ಲಿಅಡಗಿದ್ದ ಒಲವು,ಮತ್ತೆ ಚಿಗುರಿ ಅರಳಿತು ಇಂದು!ಬರುವ ನಾಳೆ ನನ್ನದು ಕಾವೇರಿ ಪಾಟೀಲ ಶಹಾಪುರ

ಕಾವೇರಿ ಪಾಟೀಲ ಶಹಾಪುರ “ಮತ್ತೆ ಭಾವ ಚಿಗುರಿತು” Read Post »

ಇತರೆ

ಶೇಕ್ರಾ ನಾಯ್ಕ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ

ಸಮ್ಮಾನ ಸಂಗಾತಿ ಶೇಕ್ರಾ ನಾಯ್ಕ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ ೨೦೨೬ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಶೇಕ್ರಾ ನಾಯ್ಕ ಅವರ ‘ಹೊಸ್ತಿಲು ಸವರಿದ ಸೆರಗು’ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿ ಪರಿಚಯ : ೧೯೮೫ ರಲ್ಲಿ ಜನಿಸಿದ ಶೇಕ್ರಾನಾಯ್ಕ ವಿಜಯನಗರ ಜಿಲ್ಲೆ ಹರಪನಹಳ್ಳಿಯವರು. ಎಂ.ಎ ಇತಿಹಾಸಮತ್ತು ಇಂಗ್ಲಿಷ್ ವಿಷಯದಲ್ಲಿ ಪದವಿ ಪಡೆದ ಇವರು ಗಂಗಾವತಿ ತಾಲೂಕು ಚಳ್ಳೂರು ಕ್ಯಾಂಪಿನಲ್ಲಿಶಾಲಾ ಶಿಕ್ಷಕನಾಗಿ ೧೯ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇಯುವಜನ ಮಹಿಳಾ ರೈತ ಕಾರ್ಮಿಕರ ಚಳುವಳಿಗಳಲ್ಲಿ ಭಾಗಿಯಾಗುತ್ತ ಬಂದ ಶೇಕ್ರಾನಾಯ್ಕ, ಕವಿತೆ,ಕಥೆ, ಪ್ರಬಂಧ ಹಾಗೂ ಕಾದಂಬರಿಗಳ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಶಿಕ್ಷಕರತ್ನ, ಉತ್ತಮಶಿಕ್ಷಕ, ವಿಜ್ಞಾನ ಪರಿಚಾಲಕ, ಪವಾಡ ರಹಸ್ಯ ತಜ್ಞ ಹಾಗೂ ನಾಡಿನ ವಿವಿಧ ಸಂಘಟನೆಗಳುಕೊಡಮಾಡುವ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ವಿಮರ್ಶಕರಾದ ಪ್ರೊ. ಕೇಶವ ಶರ್ಮಾ ಹಾಗೂಕವಿ ಪ್ರೊ. ಸುಕನ್ಯಾ ಮಾರುತಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಹೊಸ ತಲೆಮಾರಿನ ಹೊಸ ಆಲೋಚನೆಗಳು, ಹೊಸ ರೀತಿಯ ಭಾಷೆ ಶೈಲಿ ಭಾವ ಸಮೃದ್ಧಿಯನ್ನುಪರಿಚಯಿಸುವ ಈ ‘ಹೊಸ್ತಿಲು ಸವರಿದ ಸೆರಗು’ ನಮ್ಮ ಆಯ್ಕೆ ಎಂದು ತೀರ್ಪುಗಾರರುಅಭಿಪ್ರಾಯಪಟ್ಟಿದ್ದಾರೆ. ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನುಒಳಗೊಂಡಿದೆ ಎಂದು ‌ವಿಭಾಸಾಹಿತ್ಯ ಪ್ರಶಸ್ತಿಯ ಸಂಚಾಲಕಿ ಸುನಂದಾ ಕಡಮೆ‌ ತಿಳಿಸಿದ್ದಾರೆ. ನಾಗರಾಜ್‌ ಹರಪನಹಳ್ಳಿ

ಶೇಕ್ರಾ ನಾಯ್ಕ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ Read Post »

ಪುಸ್ತಕ ಸಂಗಾತಿ

“ದೇವರ ಹೆಸರಿನಲ್ಲಿ ಮನುಷ್ಯರನ್ನು ಬಲಿ ಕೊಡುವ ವ್ಯವಸ್ಥೆಯ ಕಥೆ: ಸಾಯಬಣ್ಣ ಮಾದರ ಅವರ ‘ದೇವರ ದ್ಯಾಮವ್ವ’” ಬಸವರಾಜ ರಾ ಅಗಸರ

ಪುಸ್ತಕ ಸಂಗಾತಿ ಬಸವರಾಜ ರಾ ಅಗಸರ ಸಾಯಬಣ್ಣ ಮಾದರ ಅವರ ‘ದೇವರ ದ್ಯಾಮವ್ವ’” ದೇವರ ಹೆಸರಿನಲ್ಲಿ ಮನುಷ್ಯರನ್ನು ಬಲಿ ಕೊಡುವ ವ್ಯವಸ್ಥೆಯ ಕಥೆ ಸಾಯಬಣ್ಣ ಮಾದರದೇವರ ದ್ಯಾಮವ್ವಪ್ರಕಾಶಕರುಕೆ. ಪತ್ತಾರಸಾತ್ವಿಕ ಪೌಂಡೇಶನ ವಿಜಯಪುರಪ್ರಕಾಶನ ೨೦೨೬ಬೆಲೆ::೧೫೦ಗೋಳಲೇಶ್ವರ ನಿವಾಸಸಾಯಿ ಪಾರ್ಕ್ ವಿಜಯಪುರMo .9880812722 *ಕನ್ನಡದಲ್ಲಿ ದಲಿತ ಬಂಡಾಯ ಸಾಹಿತ್ಯ ಎಂದರೆ ಕೇವಲ ಅಳಲು ಅಲ್ಲ, ಅದು ಪ್ರಶ್ನೆ ಮಾಡುವ, ಬಂಡೆದ್ದು ನಿಲ್ಲುವ, ವ್ಯವಸ್ಥೆಯ ಬುಡವನ್ನೇ ಅಲುಗಾಡಿಸುವ ಸಾಹಿತ್ಯ. ಈ ಸಾಲಿಗೆ ಸೇರುವ ಅತ್ಯಂತ ಪ್ರಮುಖ ಹೆಸರು ಸಾಯಬಣ್ಣ ಮಾದರ. ಉತ್ತರ ಕರ್ನಾಟಕದ ಮಣ್ಣಿನ ಮಗನಾದ ಸಾಯಬಣ್ಣ ಅವರ ಕಥೆಗಳಲ್ಲಿ ಬೂಟಾಟಿಕೆಯಿಲ್ಲ, ಸೋಗಲಾಡಿತನವಿಲ್ಲ. ಇರುವುದು ಕೇವಲ ಕಟು ಸತ್ಯ. ಅವರ ‘ದೇವರ ದ್ಯಾಮವ್ವ ಮತ್ತು ಇತರ ಕಥೆಗಳು’ ಕೃತಿಯ ಶೀರ್ಷಿಕೆ ಕಥೆ ‘ದೇವರ ದ್ಯಾಮವ್ವ’ ಓದಿದ ಯಾರೂ ಸುಮ್ಮನಿರಲು ಸಾಧ್ಯವಿಲ್ಲ. ಅದು ನಮ್ಮನ್ನು ನಿದ್ದೆಗೆಡಿಸುತ್ತದೆ. ಈ ಕಥೆ ಕೇವಲ ದ್ಯಾಮವ್ವಳೊಬ್ಬಳ ಕಥೆ ಅಲ್ಲ. ಇದು ಕಳೆದ 70 ವರ್ಷಗಳಿಂದ ಈ ನಾಡಿನ ಹಳ್ಳಿಗಳಲ್ಲಿ ನಡೆಯುತ್ತಿರುವ ಜಾತಿ, ಅಧಿಕಾರ, ಹಣ, ಕಾಮ ಮತ್ತು ದೇವರ ನಡುವಿನ ನಿಗೂಢ ಮತ್ತು ಕ್ರೂರ ಸಂಬಂಧದ ದಾಖಲೆ. *ಕಥೆಯ ಒಳಗೆ ಏನಿದೆ?* ಕಥೆ ಶುರುವಾಗುವುದು ಸಂಗಪ್ಪ ಮತ್ತು ಅವನ ಸುಂದರ ಹೆಂಡತಿ ಸುಂದರವ್ವನ ಸಣ್ಣ ಸಂಸಾರದಿಂದ. ಸಂಗಪ್ಪ ಮುಗ್ಧ ರೈತ. ಸುಂದರವ್ವ ತನ್ನ ಹೆಸರಿಗೆ ತಕ್ಕಂತೆ ಸುಂದರಿ. ಆದರೆ ಆಕೆಯ ಸೌಂದರ್ಯವೇ ಆಕೆಯ ಶತ್ರುವಾಗುತ್ತದೆ. ಊರಿನ ದೊಡ್ಡ ಗೌಡರ ಕಣ್ಣು ಅವಳ ಮೇಲೆ ಬೀಳುತ್ತದೆ. ಗೌಡರು ಸಂಗಪ್ಪನಿಗೆ ಸಹಾಯ ಮಾಡುವ, ಮನೆ ಕಟ್ಟಿಕೊಡುವ ನೆಪದಲ್ಲಿ ಅವನ ಮನೆಗೆ ಬರುತ್ತಾರೆ, ಕಣಕಿ ಬಣವೆಯ ಹಿಂದೆ ಸುಂದರವ್ವನ ಮೇಲೆ ಅತ್ಯಾಚಾರ ನಡೆಯುತ್ತದೆ. ಮಾರನೆ ದಿನ ಬೆಳಿಗ್ಗೆ ಸುಂದರವ್ವನ ದೇಹ ಹೊಲದಲ್ಲಿ ಬಿದ್ದಿರುತ್ತದೆ. ಆಕೆಯ ಮೈಮೇಲೆ ಬಟ್ಟೆ ಇರುವುದಿಲ್ಲ, ಸುತ್ತ ಎಂಟು ಹತ್ತು ಜನರ ಹೆಜ್ಜೆ ಗುರುತುಗಳು. ಇದು ಸಾಮೂಹಿಕ ದೌರ್ಜನ್ಯ ಎಂದು ಇಡೀ ಕೇರಿಗೆ ಗೊತ್ತಾಗುತ್ತದೆ. ಆದರೆ ಇಲ್ಲಿ ನ್ಯಾಯ ಸಾಯುತ್ತದೆ. ದೊಡ್ಡ ಗೌಡರು ಬರುತ್ತಾರೆ, ಸಂಗಪ್ಪನ ಕಾಲಿಗೆ ಬಿದ್ದು ಅಳುವವನಿಗೆ “ನಿನ್ನ ನೋಡ್ಕೋತೀನಿ” ಎನ್ನುತ್ತಾರೆ. “ರಾತ್ರಿ ಕಾಡು ಹಂದಿ ಬಂದು ಆಕೆಯ ಜೀವ ತಿಂದಿದೆ” ಎಂದು ಕಥೆ ಕಟ್ಟುತ್ತಾರೆ. ಕೇರಿಯ ಜನ ಹೆದರಿ “ಹೌದ್ರಿ” ಎನ್ನುತ್ತಾರೆ. ಸ್ಥಳದಲ್ಲೇ 50 ಸಾವಿರ ರೂಪಾಯಿ ಕೊಟ್ಟು ಹೆಣ ಸುಡಲು ಹೇಳಿ ಗೌಡರು ಕಾರು ಹತ್ತಿ ಹೋಗುತ್ತಾರೆ. 50 ಸಾವಿರಕ್ಕೆ ಒಬ್ಬ ಹೆಣ್ಣಿನ ಅತ್ಯಾಚಾರ, ಕೊಲೆ ಮುಚ್ಚಿ ಹೋಗುತ್ತದೆ. ಇದು ಕಥೆಯ ಮೊದಲ ಕೊಲೆ. ಸುಂದರವ್ವನ ನಂತರ ಸಂಗಪ್ಪನ ಬದುಕಿಗೆ ಬರುವವಳು ದ್ಯಾಮವ್ವ. ಆಕೆಯೂ ಕೂಡ ಗೌಡರ ಮನೆಯಿಂದಲೇ ಹೊರದಬ್ಬಲ್ಪಟ್ಟವಳು. ಆಕೆಯನ್ನು ‘ದೇವರ ದ್ಯಾಮವ್ವ’ ಎನ್ನುತ್ತಾರೆ, ಅಂದರೆ ದೇವದಾಸಿ ಪದ್ಧತಿಯಂತೆ ದೇವರಿಗೆ ಬಿಟ್ಟ ಹೆಣ್ಣು. ಆಕೆಯನ್ನು ಸಮಾಜ ‘ನಾಯಿ ಮುಟ್ಟಿದ ಮಡಿಕೆ’ ಎಂದು ಕಾಣುತ್ತದೆ. ಆದರೆ ಸಾಯಬಣ್ಣ ಮಾದರ ದ್ಯಾಮವ್ವಳನ್ನು ಕೇವಲ ಅನುಕಂಪದ ಪಾತ್ರವಾಗಿ ತೋರಿಸುವುದಿಲ್ಲ. ಅವಳನ್ನು ಪೂರ್ಣ ಮನುಷ್ಯಳಾಗಿ ತೋರಿಸುತ್ತಾರೆ. ದ್ಯಾಮವ್ವಳಿಗೆ ಆಸೆಗಳಿವೆ, ಕನಸುಗಳಿವೆ. “ಹರೆಯಕ್ಕೆ ಹಂದಿ ಮರಿ ಕೂಡ ಚಂದ” ಎನ್ನುವಂತೆ ಅವಳು ಗೌಡರ ಮನೆಯ ಡ್ರೈವರ್ ಧರ್ಮೇಂದ್ರನನ್ನು ಪ್ರೀತಿಸುತ್ತಾಳೆ. ಫೇರ್ ಅಂಡ್ ಲವ್ಲಿ ಕ್ರೀಮು, ಪೌಡರು ಹಚ್ಚಿಕೊಂಡು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಾಳೆ. ಪಟ್ಟಣ ನೋಡಬೇಕು, ಬುಲೆಟ್ ಬೈಕಿನಲ್ಲಿ ತಿರುಗಬೇಕು ಎಂಬ ಆಸೆ ಅವಳಿಗಿದೆ. ಈ ವರ್ಣನೆಗಳು ದ್ಯಾಮವ್ವಳನ್ನು ದೇವಿಯಿಂದ ಮತ್ತೆ ಮನುಷ್ಯಳನ್ನಾಗಿ ಮಾಡುತ್ತವೆ. ಧರ್ಮೇಂದ್ರನ ಸಂಪರ್ಕದಿಂದ ದ್ಯಾಮವ್ವಳಿಗೆ ಊರಿನಲ್ಲಿ ಹೊಸ ಅಧಿಕಾರ ಸಿಗುತ್ತದೆ. ಮೊದಲು ಮೂಗು ಮುಚ್ಚಿಕೊಂಡು ಹೋಗುತ್ತಿದ್ದ ಜನ, ಈಗ ಅವಳ ಮಾತಿಗೆ ಹೆದರುತ್ತಾರೆ. ಅವಳು ಊರಿನ ಪಂಚಾಯಿತಿಯಾಗುತ್ತಾಳೆ. ಅವಳು ಯಾರ ಪರ ನಿಲ್ಲುತ್ತಾಳೋ ಅವರಿಗೆ ನ್ಯಾಯ ಸಿಗುತ್ತದೆ. ಅವಳು ಹೇಳಿದ್ದೇ ಅಂತಿಮ. ಗೌಡರಿಂದಲೇ ಕಲಿತ ತಂತ್ರಗಾರಿಕೆಯಿಂದ ಗೌಡರನ್ನೇ ಹೆದರಿಸುವ ಮಟ್ಟಕ್ಕೆ ಬೆಳೆಯುತ್ತಾಳೆ. ಇಲ್ಲಿ ದ್ಯಾಮವ್ವ ಅಧಿಕಾರದ ಪ್ರತೀಕವಾಗುತ್ತಾಳೆ. ಆದರೆ ಅಧಿಕಾರ ಮನುಷ್ಯನನ್ನು ಹೇಗೆ ಭ್ರಷ್ಟಗೊಳಿಸುತ್ತದೆ ಎಂಬುದನ್ನು ಲೇಖಕರು ಮುಂದಿನ ಭಾಗದಲ್ಲಿ ತೋರಿಸುತ್ತಾರೆ. ದ್ಯಾಮವ್ವ ಮತ್ತು ಧರ್ಮೇಂದ್ರನ ಅನೈತಿಕ ಸಂಬಂಧಕ್ಕೆ ಸಂಗಪ್ಪ ಅಡ್ಡಿಯಾಗುತ್ತಾನೆ. ಒಂದು ರಾತ್ರಿ ಕೊಟ್ಟಿಗೆಯಲ್ಲಿ ಅವರಿಬ್ಬರ ಗುಸು ಗುಸು ಮಾತನ್ನು ಸಂಗಪ್ಪ ಕೇಳಿಸಿಕೊಳ್ಳುತ್ತಾನೆ – “ಈ ಹಾಟ್ಯಾನ ಕಿರಿಕಿರಿ ಬಹಳ ಆಗಿದೆ, ಎರಡು ಮೂರು ದಿನದಲ್ಲಿ ಕಳಿಸಿಬಿಡಬೇಕು” ಎಂದು ಅವರು ಮಾತನಾಡಿಕೊಳ್ಳುವುದನ್ನು. ಸಿಟ್ಟಿನಿಂದ ಸಂಗಪ್ಪ ಬಡಿಗೆ ತೆಗೆದುಕೊಂಡು ಹೋಗುತ್ತಾನೆ. ಅಲ್ಲಿ ನಡೆಯುವುದು ಎರಡನೇ ಕೊಲೆ. ಧರ್ಮೇಂದ್ರ ಮತ್ತು ದ್ಯಾಮವ್ವ ಸೇರಿ ಸಂಗಪ್ಪನನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಹಾಕುತ್ತಾರೆ. ಮಾರನೆ ದಿನ ಬೆಳಿಗ್ಗೆ ದ್ಯಾಮವ್ವ ರಾಗವಾಗಿ ಅಳುತ್ತಾಳೆ. ಪೊಲೀಸರ ಜೀಪು ಬರುತ್ತದೆ. ಆದರೆ ಪಿಎಸ್ಐ ಗೌಡರಿಗೆ ನಮಸ್ಕಾರ ಮಾಡುತ್ತಾನೆ. ಗೌಡರು ಪಿಎಸ್ಐಯನ್ನು ಪಕ್ಕಕ್ಕೆ ಕರೆದು ಮಾತನಾಡುತ್ತಾರೆ. ಕೇಸು ‘ರೈತ ಆತ್ಮಹತ್ಯೆ’ ಎಂದು ಫೈಲ್ ಆಗುತ್ತದೆ. ಸರ್ಕಾರದಿಂದ ಬಂದ 5 ಲಕ್ಷ ಪರಿಹಾರದ ಚೆಕ್ಕನ್ನು ಗೌಡರು ತೆಗೆದುಕೊಂಡು, ದ್ಯಾಮವ್ವಳಿಗೆ 10 ಸಾವಿರ ಕೊಟ್ಟು, ಒಂದು ಒಡೆದ ಕಪ್ ನಲ್ಲಿ ಚಹಾ ಕೊಟ್ಟು ಕಳಿಸುತ್ತಾರೆ. ಗಂಡನನ್ನು ಕೊಂದ ಹೆಣ್ಣಿಗೆ ತನ್ನ ಗಂಡನ ಸಾವಿನ ಹಣದಿಂದಲೇ 10 ಸಾವಿರ ಸಂಭಾವನೆ! ಕಥೆಯ ಕೊನೆಯ ದೃಶ್ಯ ಈ ಇಡೀ ವ್ಯವಸ್ಥೆಗೆ ಹಿಡಿದ ಕನ್ನಡಿ. ಕೆಲವು ತಿಂಗಳುಗಳ ನಂತರ ಊರಿನಲ್ಲಿ ದೇವರ ಜಾತ್ರೆ, ಗಂಗಸ್ಥಳ ನಡೆಯುತ್ತದೆ. ಜೋಗತಿಯರು ಡೊಳ್ಳು ಬಾರಿಸುತ್ತಾ ಕುಣಿಯುತ್ತಿರುತ್ತಾರೆ. ಅಲ್ಲಿಗೆ ಬರುವ ದ್ಯಾಮವ್ವ ಬೆಂಕಿ ಕುಂಡ ಹಾರಿ, “ನನಗೆ ಬ್ಯಾಟೆ ಬೇಕು, ಪಟ್ಟ ಬೇಕು” ಎಂದು ಕುಣಿಯಲು ಶುರು ಮಾಡುತ್ತಾಳೆ. ಜನ ಹೆದರಿ ಕೈಮುಗಿಯುತ್ತಾರೆ. ಆಕೆಯನ್ನು ಹಿಡಿಯುವ ನೆಪದಲ್ಲಿ ಕೆಲವರು ಆಕೆಯ ಎದೆಯನ್ನೇ ಮುಟ್ಟಿ ಆನಂದಿಸುತ್ತಾರೆ. ಜನ “ಮರುಳೋ ಜಾತ್ರೆ ಮರುಳೋ” ಎಂಬಂತೆ ಮತ್ತೆ ಆಕೆಯ ಕಾಲಿಗೆ ಬೀಳುತ್ತಾರೆ. ಮೊದಲು ಗಂಡನನ್ನು ಕೊಂದವಳು, ಈಗ ಮತ್ತೆ ದೇವಿಯಾಗುತ್ತಾಳೆ. ಲೇಖಕರು ಕೊನೆಯಲ್ಲಿ ಒಂದು ಸಾಲು ಬರೆಯುತ್ತಾರೆ – “ಕಾಲದ ಮಹಿಮೆಗೆ ಸಮಯವೇ ಕೈ ಮುಗಿಯಿತು.” *ಈ ಕಥೆ ಏಕೆ ಓದಲೇಬೇಕು?* ಈ ಕಥೆಯಲ್ಲಿ ಮೂರು ದೊಡ್ಡ ವಿಮರ್ಶೆಗಳಿವೆ. ಮೊದಲನೆಯದು, *ಜಾತಿ ವ್ಯವಸ್ಥೆಯ ವಿಮರ್ಶೆ.* ಸುಂದರವ್ವನ ಸಾವು ಕೇವಲ ಅತ್ಯಾಚಾರವಲ್ಲ, ಅದು ಜಾತಿ ದೌರ್ಜನ್ಯ. ಒಬ್ಬ ದಲಿತ ಹೆಣ್ಣಿನ ದೇಹವನ್ನು ಮೇಲ್ಜಾತಿಯ ಗಂಡಸರು ತಮ್ಮ ಆಸ್ತಿ ಎಂದು ಭಾವಿಸುವ ಮನಸ್ಥಿತಿ. ಎರಡನೆಯದು, *ಅಧಿಕಾರ ಮತ್ತು ಹಣದ ವಿಮರ್ಶೆ.* ಪೊಲೀಸ್, ಗೌಡ, ಸರ್ಕಾರಿ ಪರಿಹಾರ – ಈ ಮೂರು ಹೇಗೆ ಒಂದಾಗಿ ನ್ಯಾಯವನ್ನು ಕೊಲ್ಲುತ್ತವೆ ಎಂಬುದನ್ನು ಸಾಯಬಣ್ಣ ಅತ್ಯಂತ ನೇರವಾಗಿ ತೋರಿಸಿದ್ದಾರೆ. 50 ಸಾವಿರಕ್ಕೆ ಒಂದು ಅತ್ಯಾಚಾರ, 5 ಲಕ್ಷಕ್ಕೆ ಒಂದು ಕೊಲೆ ಮುಚ್ಚಿ ಹೋಗುತ್ತದೆ. ಮೂರನೆಯದು, *ದೇವದಾಸಿ ಪದ್ಧತಿಯ ಒಳಗಿನ ವಿಮರ್ಶೆ.* ಸಾಮಾನ್ಯವಾಗಿ ದೇವದಾಸಿಯರನ್ನು ಕೇವಲ ಸಂತ್ರಸ್ತೆಯಾಗಿ ತೋರಿಸಲಾಗುತ್ತದೆ. ಆದರೆ ಸಾಯಬಣ್ಣ ದ್ಯಾಮವ್ವಳನ್ನು ಸಂಪೂರ್ಣ ಮನುಷ್ಯಳಾಗಿ ತೋರಿಸುತ್ತಾರೆ. ಅವಳಲ್ಲೂ ಆಸೆ, ದುರಾಸೆ, ಪ್ರೀತಿ, ಕೊಲೆ ಪ್ರವೃತ್ತಿ ಇದೆ. ಅವಳನ್ನು ವ್ಯವಸ್ಥೆ ಹೇಗೆ ಬಳಸಿಕೊಳ್ಳುತ್ತದೆ ಮತ್ತು ಅವಳು ವ್ಯವಸ್ಥೆಯನ್ನು ಹೇಗೆ ಬಳಸಿಕೊಳ್ಳುತ್ತಾಳೆ ಎಂಬ ದ್ವಂದ್ವವನ್ನು ತೋರಿಸುತ್ತಾರೆ. ಸಾಯಬಣ್ಣ ಅವರ ಭಾಷೆ ಈ ಕಥೆಯ ಮತ್ತೊಂದು ಶಕ್ತಿ. ಇದು ಪುಸ್ತಕದ ಭಾಷೆ ಅಲ್ಲ, ಹೊಲದ ಬದುವಿನ ಭಾಷೆ, ದನದ ಕೊಟ್ಟಿಗೆಯ ಭಾಷೆ. ಈ ಭಾಷೆಯಲ್ಲೇ ಇಡೀ ಕಥೆಯ ಕ್ರೌರ್ಯ ಅಡಗಿದೆ. ‘ದೇವರ ದ್ಯಾಮವ್ವ’ ಕೇವಲ ಕಥೆಯಲ್ಲ, ಅದು ಒಂದು ಎಚ್ಚರಿಕೆ. ದೇವರ ಹೆಸರಿನಲ್ಲಿ, ಜಾತ್ರೆಯ ಹೆಸರಿನಲ್ಲಿ, ಭಕ್ತಿಯ ಹೆಸರಿನಲ್ಲಿ ನಾವು ಇಂದಿಗೂ ಎಷ್ಟೋ ದ್ಯಾಮವ್ವಗಳನ್ನು ಸೃಷ್ಟಿಸುತ್ತಿದ್ದೇವೆ. ಅವರನ್ನು ಮೊದಲು ಶೋಷಿಸಿ, ನಂತರ ಪೂಜಿಸುತ್ತೇವೆ. ಈ ವಿಪರ್ಯಾಸವನ್ನು ಅರ್ಥ ಮಾಡಿಕೊಳ್ಳಲು ಪ್ರತಿಯೊಬ್ಬರೂ ಈ ಕಥೆಯನ್ನು ಓದಲೇಬೇಕು. ದೇವರ ದ್ಯಾಮವ್ವ ಮತ್ತು ಇತರೆ ಕಥೆಗಳು , ಬೆಲೆ : ರೂ 150-ಲೇಖಕರ ಹೆಸರು: ಸಾಯಬಣ್ಣ ಮಾದರಸಾ: ಸಲಾದಹಳ್ಳಿ ,ತಾ: ಸಿಂದಗಿ ವಿಮರ್ಶಕರು: ಬಸವರಾಜ ರಾ ಅಗಸರ ಶಿಕ್ಷಕ ಮಕ್ಕಳ ಸಾಹಿತಿಚಿಕ್ಕಸಿಂದಗಿ – ಬಂದಾಳ9845741778

“ದೇವರ ಹೆಸರಿನಲ್ಲಿ ಮನುಷ್ಯರನ್ನು ಬಲಿ ಕೊಡುವ ವ್ಯವಸ್ಥೆಯ ಕಥೆ: ಸಾಯಬಣ್ಣ ಮಾದರ ಅವರ ‘ದೇವರ ದ್ಯಾಮವ್ವ’” ಬಸವರಾಜ ರಾ ಅಗಸರ Read Post »

ಇತರೆ

“ಭಾವಸೇತು_ಮೆಲುಕು” ಶೈಲಜ ಪ್ರಸಾದ್‌ ಅವರ ಬಾಲ್ಯದ ನೆನಪುಗಳಲ್ಲಿನ ಒಂದು ಅದ್ಯಾಯ

ನೆನಪುಗಳ ಸಂಗಾತಿ ಶೈಲಜ ಪ್ರಸಾದ್‌ ಬಾಲ್ಯದ ನೆನಪುಗಳಲ್ಲಿನ ಒಂದು ಅದ್ಯಾಯ “ಭಾವಸೇತು_ಮೆಲುಕು” ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯ  ನಿರ್ವಹಿಸುತ್ತಿದ್ದ ನಮ್ಮ ಪ್ರೀತಿಯ ತಂದೆಯವರೊಂದಿಗೆ ನಾವು ೭೦ ರ ದಶಕದಲ್ಲಿ ತರೀಕೆರೆಯಲ್ಲಿದ್ದೆವು. ಆ ಊರು ಮಲೆನಾಡಿನಲ್ಲಿತ್ತು. ಆಗ ನಾವು ೩ ಜನ ಹೆಣ್ಣುಮಕ್ಕಳಲ್ಲಿ ನಾನು ಹಾಗು ಚಿಕ್ಕಅಕ್ಕ ಹೈಸ್ಕೂಲಿನಲ್ಲಿ, ದೊಡ್ಡಕ್ಕ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ಓದುತ್ತಿದ್ದೆವು.ತುದಿಪೇಟೆ ಬಡಾವಣೆಯಲ್ಲಿ ನಮ್ಮ ಮನೆಯಿದ್ದು, ನಮ್ಮ ಶಾಲೆಗೆ ಬಹಳ ಸಮೀಪದಲ್ಲಿತ್ತು. ನನ್ನ ತಮ್ಮ ಇನ್ನು ಚಿಕ್ಕವನು, ಶಿಶುವಿಹಾರಕ್ಕೆ ಹೋಗುತ್ತಿದ್ದನು. ನಮ್ಮ ತಂದೆಗೆ ಬೆಂಗಳೂರಿನಿಂದ ವರ್ಗಾವಣೆಯಾದ್ದರಿಂದ ನಾವೆಲ್ಲರು ತರೀಕೆರೆಗೆ ಹೋಗಿದ್ದೆವು. ಅಲ್ಲಿಗೆ ಹೋದ ಹೊಸದರಲ್ಲಿ ಅಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳಲು ಹೆಣಗಾಡಿದ್ದನ್ನು ನೆನಪಿಸಿಕೊಂಡರೆ ನಗು ಬರುತ್ತದೆ.ಅಲ್ಲಿ ಪ್ರತಿ ಶುಕ್ರವಾರ “ಸಂತೆ” ನಡೆಯುತಿತ್ತು.(ಈಗಿನ ಮಕ್ಕಳಿಗೆ ಪಾಪ,ಸಂತೆಯೆಂದರೆ ಗೊತ್ತಿರುವುದು   ಸ್ವಲ್ಪ ಅನುಮಾನವೇ?)ಆಗ ಆಫೀಸಿನ ನೌಕರರಾದ ಶಂಕರಪ್ಪ ಮತ್ತು ‘ಕಂಬಳಿ’ ಅವರೊಂದಿಗೆ ನಾವು ಮಕ್ಕಳು ಏನೋ ಕುತೂಹಲದಿಂದ ಸಂತೆಗೆ ಹೋಗಿ ಇಡೀ ವಾರಕ್ಕೆ ಬೇಕಾಗುವಷ್ಟು ತರಕಾರಿ, ಹಣ್ಣುಗಳು ಇತ್ಯಾದಿ ಸಾಮಾನುಗಳನ್ನು ತರುತ್ತಿದ್ದ ನೆನಪು ಈಗಲೂ ನನಗಿದೆ.ಅಲ್ಲಿನ ಜೀವನ ಎಷ್ಟು ಸರಳ ಹಾಗೂ ಸುಂದರವಾಗಿತ್ತು ಎಂದರೆ ಈಗ ನೆನಪಿಸಿಕೊಂಡರೂ ಖುಷಿಯೆನಿಸುತ್ತದೆ.ಮಲೆನಾಡಿನ ಸೆರಗಿನಂತೆ ಇದ್ದ  ಆ ಊರು ತೀರ ಹಳ್ಳಿಯಂತಿರದೆ,ಎಲ್ಲಾ ಸೌಕರ‍್ಯಗಳೂ ಇದ್ದವು. ನಿಸರ್ಗ ಸೌಂರ‍್ಯವಂತೂ ಕಣ್ಣು ಸೆಳೆಯುವಂತಿತ್ತು.ಅಲ್ಲಿನ “ರೋಟರಿ ಕ್ಲಬ್” ಗೆ ನಮ್ಮ ತಂದೆ ಅಧ್ಯಕ್ಷರಾಗಿದ್ದರೆ, ಅಮ್ಮ “ಇನ್ನರ್ ವೀಲ್ ಕ್ಲಬ್”ನ ಸೆಕ್ರೆಟರಿಯಾಗಿದ್ದರು.ಅಲ್ಲಿ ಸಾಮಾಜಿಕ ಚಟುವಟಿಕೆಗಳು ಆಗಾಗ್ಗೆ ನಡೆಯುತ್ತಿದ್ದು, ನಾವೆಲ್ಲರೂ ತಪ್ಪದೆ ಹೋಗುತ್ತಿದ್ದೆವು.ನಮ್ಮ ಜೀವನದ ಸುವರ್ಣ ಸಮಯವದು ಎನ್ನಲಡ್ಡಿಯಿಲ್ಲ. ಅಲ್ಲಿದಾಗ ನಮ್ಮ ಜೊತೆೆಯಲ್ಲಿದ್ದ ನಮ್ಮ ಅಜ್ಜಿಯನ್ನುಕರೆದುಕೊಂಡು ನಾವೆಲ್ಲರೂ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು,ಯಾತ್ರ ಸ್ಥಳಗಳಿಗೆ ಶಾಲೆಯ ರಜಾದಿನಗಳಲ್ಲಿ ಹೋಗುತ್ತಿದ್ದೆವು. ಕೆಮ್ಮಣ್ಣುಗುಂಡಿ,ಕೂಡ್ಲಿ, ಶಿವಮೊಗ್ಗ, ಶೃಂಗೇರಿ,ಹರಿಹರ, ಬಾಣಾವರ ಇತ್ಯಾದಿ  ಊರುಗಳನ್ನು ನೋಡಿದ್ದು,ಆ ಸವಿನೆನಪು ಮನದಲ್ಲಿ ಅಚ್ಚಳಿಯಂತಿದೆ.ಇನ್ನು ಅಲ್ಲಿದ್ದ ನಮ್ಮ ಮನೆಯು ಬಡಾವಣೆಯೊಂದರಲ್ಲಿ ಇತ್ತು,ಹಾಗಾಗಿ ಗಲಾಟೆ,ಗದ್ದಲಗಳಿಲ್ಲದೆ ಪ್ರಶಾಂತವಾಗಿತ್ತು.(ಅಂದಿನ ಕಾಲವೇ ಹಾಗಿತ್ತು) ಮನೆಯ ಮುಂದಿನ ಕೈತೋಟದಲ್ಲಿ ಬಗೆಬಗೆಯ ಹೂವಿನ ಗಿಡಗಳಿದ್ದವು. ಕಣಿಗಿಲೆ, ಕಾಕಡ,ಮಲ್ಲಿಗೆ, ಜಾಜಿ, ಬಸವನಪಾದ,ಅನೇಕ ವರ್ಣದ ಸ್ಪಟಿಕ ಹಾಗೂ ಬಸಳೆ,ಮೆಂತ್ಯ ಸೊಪ್ಪು, ನಿಂಬೆ ಮತ್ತು ದಾಳಿಂಬೆ,ಬಾಳೆ ಗಿಡಗಳೂ ಇದ್ದವು. ಮನೆಯ ಹಿತ್ತಲಿನಲ್ಲಿ ದನದ ಕೊಟ್ಟಿಗೆಯೂ ಇತ್ತು! ಆದರೆ ನಾವು ಹಸುಗಳನ್ನು ಸಾಕಿಕೊಂಡಿರಲಿಲ್ಲ.ಆಗ ನಮ್ಮ ಮನೆಯಲ್ಲಿ ಬಚ್ಚಲುಮನೆ(ಈಗ ಯಾರೂ ಹೀಗೆ ಹೇಳುವುದಿಲ್ಲ) ಅಂದರೆ ಬಾತ್ರೂಮಿನಲ್ಲಿ ಇದ್ದ ‘ನೀರೊಲೆಯ’ಬಗ್ಗೆ ಹೇಳದ್ದಿದ್ದರೆ ಸ್ವಾರಸ್ಯವೇ ಇರುವುದಿಲ್ಲ. ಅಮ್ಮ/ಅಜ್ಜಿ ರಾತ್ರಿಯೇ ನೀರೊಲೆಯ ಗೂಡಿಗೆ ಮರದಹೊಟ್ಟು, ತೆಂಗಿನ ಚಿಪ್ಪು, ನಾರು…. ತುಂಬಿಸಿ ಸಿದ್ದ ಮಾಡಿಟ್ಟುಕೊಂಡಿರುತ್ತಿದ್ದರು.ಕೆಲವು ಬಾರಿ ನಮ್ಮ ಮನೆಯ ಸದಸ್ಯಳಂತಿದ್ದ ಸುಶೀಲ ಎನ್ನುವ ಮನೆಕೆಲಸದ ಯುವತಿಯೂ ಹೀಗೆ ಸಿದ್ದಮಾಡಿಡುತ್ತಿದ್ದಳು. ಬೆಳಗಿನ ಜಾವ ಅಮ್ಮ ತೆಂಗಿನ ಚಿಪ್ಪಿಗೆ ನಾರು/ಹೊಟ್ಟು ತುಂಬಿ ಚೂರು ಸೀಮೆಎ ಣ್ನಯನ್ನು ಹಾಕಿ ಒಲೆ ಹೊತ್ತಿಸುವುದನ್ನು ನಾವು ಮಕ್ಕಳು ಏನೋ ಕುತೂಹಲದಿಂದ ನೋಡುತ್ತಿದ್ದೆವು. ಹೀಗಾಗಿ ದಿನವಿಡೀ ನಮ್ಮ ಮನೆಯಲ್ಲಿ ಬಿಸಿನೀರು ಇರುತ್ತಿತ್ತು.ಬೇಸಿಗೆರಜೆಯಲ್ಲಿ ನಾವೆಲ್ಲರೂ ಗೆಳತಿಯರೊಂದಿಗೆ ಕೊಟ್ಟಿಗೆಯಲ್ಲಿ ಕುಂಟೆಬಿಲ್ಲೆ, ಕಲ್ಲಾಟ, ಅಂತಾಕ್ಷರಿ, ಕಣ್ಮುಚ್ಚಾಲೆ ಆಟಗಳನ್ನು ಆಡುತ್ತಿದ್ದೆವು. ಎಂತಹಸುಮಧುರ ಗಳಿಗೆಗಳವು. ಅಂದಿನ ದಿನಗಳನ್ನು ನೆನಪಿಸಿಕೊಂಡರೆಈಗಲೂ ಖುಷಿಯೆನಿಸುತ್ತದೆ. ಆದರೆ ಈಗ ನಮ್ಮೊಂದಿಗೆ ಅಪ್ಪ, ಅಮ್ಮ, ಅಜ್ಜಿ ಯಾರೂ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಶೈಲಜ ಪ್ರಸಾದ್

“ಭಾವಸೇತು_ಮೆಲುಕು” ಶೈಲಜ ಪ್ರಸಾದ್‌ ಅವರ ಬಾಲ್ಯದ ನೆನಪುಗಳಲ್ಲಿನ ಒಂದು ಅದ್ಯಾಯ Read Post »

ಕಾವ್ಯಯಾನ

ಪರಿಮಳ ಐವರ್ನಾಡು ಸುಳ್ಯ “ಕಾಡುತಿದೆ ಪ್ರಶ್ನೆಯೊಂದು”

ಕಾವ್ಯ ಸಂಗಾತಿ ಪರಿಮಳ ಐವರ್ನಾಡು ಸುಳ್ಯ “ಕಾಡುತಿದೆ ಪ್ರಶ್ನೆಯೊಂದು” ಕಾಡುತಿದೆ ಪ್ರಶ್ನೆಯೊಂದುಉಸಿರೇ ನಿನ್ನಲಿಪ್ರೀತಿ ಉಕ್ಕಿದರೂಉಸಿರೆತ್ತಲಿಲ್ಲವೇಕೆ ನನ್ನಲಿ ನೋಡುತ್ತಲೇ ಇದ್ದೆ ನಿನ್ನನುನಗುವಿನ ತೀರದಲಿಮುಳುಗಿತ್ತು ಪುಟ್ಟ ಹೃದಯನಿನ್ನ ಪ್ರೀತಿಯ ಆಳದಲಿ ಹೇಳದೆ ಉಳಿದ ಮಾತುಗಳುತುಟಿಯಂಚಲೇ ನಿಂತಿತ್ತುನೀ ಕೇಳುವೆಯಾ ಎಂದುಕನಸುಗಳು ಕಾದಿತ್ತು ಉಸಿರೇ ನನ್ನುಸಿರೇಬದುಕಿಗೆ ಅರ್ಥವಾಗಿದ್ದೆನಿನ್ನೊಂದು ನೋಟಕ್ಕಾಗಿನಾನೇ ಕವಿತೆಯಾದೆ ಹೃದಯ ತುಂಬಿದ ಪ್ರೀತಿಯನುಹುದುಗಿಸಿಟ್ಟೆಯಾ ನಿನ್ನೆದೆಯಲಿಹೇಳಬಾರದಿತ್ತೇ ಒಮ್ಮೆ ನನ್ನಲಿನಾನು ನಿನ್ನವನೇ ಎನ್ನುತಲಿ ಬಚ್ಚಿಟ್ಟ ಪ್ರೇಮಕೀಗ ಬೆಳ್ಳಿಹಬ್ಬವರುಷಗಳೇ ಸಂದರೂ ನೆನಪುಗಳ ಹಬ್ಬಭಿನ್ನ ಹಾದಿಯಲಿ ಜೀವನ ಯಾನಮರೆಯಲಾಗದ ಮೌನ ಗಾನ ಕಾಡುತಿದೆ ಪ್ರಶ್ನೆಯೊಂದುಉಸಿರೇ ನಿನ್ನಲಿಪ್ರೀತಿ ಉಕ್ಕಿದರೂಉಸಿರೆತ್ತಲಿಲ್ಲವೇಕೆ ನನ್ನಲಿ ಪರಿಮಳ ಐವರ್ನಾಡು ಸುಳ್ಯ

ಪರಿಮಳ ಐವರ್ನಾಡು ಸುಳ್ಯ “ಕಾಡುತಿದೆ ಪ್ರಶ್ನೆಯೊಂದು” Read Post »

ಕಾವ್ಯಯಾನ, ಗಝಲ್

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಗಜಲ್

ಕಾವ್ಯ ಸಂಗಾತಿ ಸಂತೆಬೆನ್ನೂರು ಫೈಜ್ನಟ್ರಾಜ್ ಗಜಲ್ ಒಡಲ ಈ ಉಸಿರಿನ ಒಲುಮೆ ನನ್ನದೆಂದು ಹೇಗೆ ಹೇಳಲಿಉದಿಸಿದ ಪ್ರೀತಿಯ ಬಲುಮೆ ನನ್ನದೆಂದು ಹೇಗೆ ಹೇಳಲಿ ಮಣ್ಣ ಒಳಗಿನ ಬೇರು ನೀನು ಹೂ ಕಾಣದೇ ಹೋದೆಅಮೃತ ನಿನ್ನೊಲವ ಚಿಲುಮೆ ನನ್ನದೆಂದು ಹೇಗೆ ಹೇಳಲಿ ಹೊರಡುವಾಗ ಒಂದು ಮಾತು ಹೇಳದಾದೆ ಒಲವೇಎದೆಯ ಗಾಯದ ನಲುಮೆ ನನ್ನದೆಂದು ಹೇಗೆ ಹೇಳಲಿ ಎಲ್ಲ ಮರೆತು ನಟಿಸಿ ನಕ್ಕು ಬಿಡಬಹುದು ಸುಮ್ಮನೆನೀನಿರದ ಭಾವದ ಗರಿಮೆ ನನ್ನದೆಂದು ಹೇಗೆ ಹೇಳಲಿ ದೇವರಿತ್ತ ಪ್ರಸಾದ ಎಂದೇ ಒಲವ ಕಣ್ಣಿಗೊತ್ತಿಕೊಂಡೆ ನಾನುವಿರಹದುರಿ ಚಿಮ್ಮಿಸುವ ಕುಲುಮೆ  ನನ್ನದೆಂದು ಹೇಗೆ ಹೇಳಲಿ ಕಳೆದ ರಸಗಳಿಗೆಗೆ ಕೆರೆ ಕಟ್ಟೆ ಮರದ ಎಲೆಗಳು ಸಾಕ್ಷಿ ಸಖಿಪ್ರೇಮಿಗಳಿಗಿದು ಶಾಪ ಈ ಹಿರಿಮೆ ನನ್ನದೆಂದು ಹೇಗೆ ಹೇಳಲಿ ಬೆರಳ ಬಿಡಿಸಿಕೊಂಡು ಎದ್ದು ಹೋದೆ ಶೂನ್ಯದೆಡೆಗೆ ನೀನುಫೈಜ್ ಬದುಕಿದ್ದಾನೆ ಈ ಮಹಿಮೆ ನನ್ನದೆಂದು ಹೇಗೆ ಹೇಳಲಿ ಸಂತೆಬೆನ್ನೂರು ಫೈಜ್ನಟ್ರಾಜ್ 

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಗಜಲ್ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-38 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಗಡಿಭಾಗ ಕನ್ನಡತಿಯ ಕೂಗು ನಡುನಾಡ ಅಣ್ಣಂದಿರೆ,ಗಡಿ ಭಾಗದವರಿಗಕಡಿಗಣ್ಣಿಲಿ ನೋಡಬ್ಯಾಡರಿ, ನಾವೆಲ್ಲಒಡಹುಟ್ಟೀದ ಕನ್ನಡ ಮಕ್ಕಳು* ಬೇಲೂರಿನಿಂದ ಮೈಸೂರಿನವರೆಗೆ ಅಖಂಡ ಕರ್ನಾಟಕದ ಬಗ್ಗೆ ಮಾತನಾಡುವುದು ಅಂದರೆ ಒಂದು ಸಂಧಿಗ್ಧ ಪರಿಸ್ಥಿತಿ ಉಂಟು ಮಾಡುವುದೆನ್ನುವ ಸಮಯದಲ್ಲಿ ಜಯದೇವಿ ತಾಯಿಯವರು ನಿರ್ಭೀತೆಯಿಂದ ಪ್ರಚಾರ ಮಾಡಿದ್ದನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡವು. *೨೫-೫-೧೯೫೨-ಕರ್ಮವೀರ* ೧೯೫೨ರ ಬೇಲೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟಕರಾಗಿ  ಮುಖ್ಯಮಂತ್ರಿಗಳಾದ ಕೆಂಗಲ ಹನುಮಂತಯ್ಯ ನವರು ತಮ್ಮ ಭಾಷಣದಲ್ಲಿ ಏಕೀಕರಣದ ಬಗ್ಗೆ ಒಂದು ಶಬ್ದವನ್ನೇ ಎತ್ತಲಿಲ್ಲ… ಇದರಿಂದ ಜನ ನಿರಾಶರಾಗಿದ್ದಾರೆ. ಬೇಲೂರಿನ ಸಮ್ಮೇಳನದ ಮಹಿಳಾ ಪರಿಷತ್ತಿನಲ್ಲಿ ಭಾಗವಹಿಸಿದ್ದ ಜಯದೇವಿ ತಾಯಿ ಅವರು ಕರ್ನಾಟಕದ ಗತವೈಭವವನ್ನು ಸ್ಮರಿಸಿ ಕೊಳ್ಳುತ ಸಂತೃಪ್ತರಾಗದೆ ನಾಡಿನ ಐಕ್ಯತೆಗೆ ಭದ್ಧರಾಗಬೇಕೆಂದು ಕರೆ ನೀಡಿದರು. *೨೧-೫-೧೯೫೨-ಪ್ರಜಾವಾಣಿ ವರದಿ* “ನಮ್ಮ ನಾಡಿನವರು ನಮ್ಮ  ಸಂಸ್ಕೃತಿಯವರೆಂದು ನಾನು  ಗಡಿಭಾಗವಾದ ಸೊಲ್ಲಾಪುರದಿಂದ ಮೈಸೂರಿಗೆ ಪ್ರವಾಸ ಕೈಗೊಂಡೆ,  ಆದರೆ ಇಲ್ಲಿ ಮರಾಠರಿಗಿಂತ ಹೆಚ್ಚಿನ ವಿರೋಧಕರನ್ನು ಕಂಡೆ, ಮರಾಠಿಗರು ವಿರೋಧಿಸುವುದು ಸ್ವಾಭಾವಿಕ ಆದರೆ ನಮ್ಮ ಬಗ್ಗೆ ಮೈಸೂರಿನವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ….ನಮಗೆ ಬೇರೆಯವರದು ಬೇಕಿಲ್ಲ ನಮಗೆ ಬರಬೇಕಾಗಿದ್ದನ್ನು ಉಳಿಸಿಕೊಳ್ಳೋಣ ನಮ್ಮ ಸೋಲಾಪುರ ಹೋಗುವ ಅಂಚಿನಲ್ಲಿ ಇದೆ… ಆದರೆ ಬೇಲೂರು ಹೋದಿತು… ಮೈಸೂರಿನವರು ಎಚ್ಚರದಿಂದ ಇರಲಿ ಮರಾಠಿಗರಿಗೆ ಇರುವ ತಾಯಿ ನುಡಿಯ ನಿಷ್ಠೆ ನಮ್ಮಲ್ಲಿ ಬರೆಯಿಲಿ…..!!!ಎಂದು ಅಂಗಲಾಚಿದರು. “ಕನ್ನಡಿಗರೇ ಜಾಗೃತರಾಗಿ ಸ್ವತಂತ್ರ ನಾಡವನ್ನು ಕಟ್ಟಬೇಕು ಇಲ್ಲವಾದರೆ ನಮಗೆ ಉಳಿಗಾಲವಿಲ್ಲ ಎಂದು ಜಯದೆವಿತಾಯಿಯವರು  ತಮ್ಮ ಭಾಷಣದಲ್ಲಿ ಹೇಳುತ್ತ ಕನ್ನಡಿಗರನ್ನು ಎಚ್ಚರಿಸುವ ಕಾರ್ಯ ಎಂದಿಗೂ ಮರೆಯುತ್ತಿರಲಿಲ್ಲ.  ಹೈದರಾಬಾದ ರಾಜ್ಯದ ತಳವಾಡದಲ್ಲಿ ನಡೆದ ಅಖಿಲ ಕನ್ನಡಿಗರ ಸಭೆಯಲ್ಲಿ ಹೈದರಾಬಾದಿನ ಮುಖ್ಯಮಂತ್ರಿ ಬಿ ರಾಮಕಿಶನರಾವ ಅವರು ಉದ್ಘಾಟಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯದೇವಿ ತಾಯಿ ಲಿಗಾಡೆಯವರು ಒಹಿಸಿಕೊಂಡಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಬೇಕೆಂದು ಮುಖ್ಯಮಂತ್ರಿ ಬಿ ರಾಮ ಕಿಸರಾವ ಅವರನ್ನು ಒತ್ತಾಯಿಸುವ ಮೂಲಕ ಗೊತ್ತುವಳಿಯು ಸ್ವೀಕರಿಸಲಾಯಿತು. ಕನ್ನಡ ಶಿಕ್ಷಕರು ಹೈದರಾಬಾದ ರಾಜ್ಯದಲ್ಲಿ ದೊರೆಯುವುದಿಲ್ಲ ಎನ್ನುವ ಕಾರಣಕ್ಕೆ ಜಯದೇವಿ ತಾಯಿಯವರು….ನಾಲ್ಕು ನೂರು ಜನ ಶಿಕ್ಷಕರನ್ನು ನೇಮಿಸಿದರು.ಅವರು ಮುಖ್ಯವಾಗಿ ಬೀದರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾರ್ಯ ಮಾಡುತ್ತಿದ್ದರು. ಅದೇ ಕಾಲಕ್ಕೆ ಸೊಲ್ಲಾಪುರ ಕೆಲ ಭಾಗದಲ್ಲಿ ಕನ್ನಡ ಶಾಲೆಗಳು ಪ್ರಾರಂಭವಾದವು. ಅಲ್ಲಿ ನೇಮಕರಾದ ಶಿಕ್ಷಕರ ಖರ್ಚನ್ನು ತಾಯಿಯವರೇ ವಹಿಸುತ್ತಿದ್ದರು. ೧೯೫೩ ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಮಿತಿಯಲ್ಲಿ ಪಾಸಾದ ಗೊತ್ತುವಳಿಯ ಪ್ರಕಾರ ಪ್ರಾಂತ ಪುನರ ರಚನಾ ಆಯೋಗವು ೨೯-೧೨-೫೩ ರಲ್ಲಿ ನಿಯಮಿಸಲ್ಪಟ್ಟಿತು. ಪ್ರಾಂತ ಪುನರ್ರಚನಾ ಆಯೋಗದ ಎದುರು ಸಾಕ್ಷಿಯಾಗಿ ನುಡಿಯುವ ಆಯೋಗದಲ್ಲಿ  ಜಯದೇವಿ ತಾಯಿಯವರು  ಶ್ರೇಷ್ಠ ಸದಸ್ಯರಾಗಿದ್ದರು. ಆದರೆ ಅವರ ಅನಾರೋಗ್ಯದ ಕಾರಣದಿಂದಾಗಿ ಜಯದೇವಿ ತಾಯಿಯವರಿಗೆ ದಿಲ್ಲಿಯವರೆಗೆ ಹೋಗಲಾಗಲಿಲ್ಲ .ಅದನ್ನು ತುಂಬಾ ವಿಷಾದದಿಂದ ಶ್ರೀ ನಿಜಲಿಂಗಪ್ಪನವರು ಹೇಳ್ತಾರೆ…. ತಾಯಿಯವರು ಅಲ್ಲಿಯವರಿಗೆ ಬಂದಿದ್ದರೆ ಅವರ ಉಪಸ್ಥಿತಿಯು ಅತ್ಯಂತ ಫಲದಾಯಕವಾಗಿರುತ್ತಿತ್ತು ಎಂದು ಉದ್ಗರಿಸಿದರು. ಶ್ರೀ ಕೆ.ಎಫ್ ಪಾಟೀಲ, ನಿಜಲಿಂಗಪ್ಪ, ಹಳ್ಳಿಕೇರಿ, ಕಂಠಿ ಇವರು ಯಾರೇ ಬಂದರೂ ಸೊಲ್ಲಾಪುರದಲ್ಲಿ ಜಯದೇವಿ ತಾಯಿಯವರ ಹತ್ತಿರ ಬರದೆ ಚರ್ಚಿಸದೆ ಅವರ ಸಲಹೆ ಪಡೆಯದೆ ಯಾವ ನಿರ್ಣಯ ತೆಗೆದುಕೊಳ್ಳುತ್ತಿರಲಿಲ್ಲ. ಮುಂದೆ ೧೯೫೪ ಕೆ.ಪಿ.ಸಿ.ಸಿ ಮುಂದೆ ಕರ್ನಾಟಕದ ಬೇಡಿಕೆಯನ್ನು ಮಂಡಿಸಲು ನಿಯುಕ್ತರಾದ ಉಪಸಮಿತಿಯವರು… ‘ವಿಜಾಪುರ ಜಿಲ್ಲೆಯ ಗಡಿ ಸಮಿತಿ’ ಎಂದು ಗುರುತಿಸಿದ ಎಂಟು ಜನರಲ್ಲಿ ಜಯದೇವಿ ತಾಯಿಯವರು ಪ್ರಮುಖ ರಾಗಿದ್ದರು. ಅಷ್ಟರಲ್ಲಿ ಗಡಿಭಾಗದ ಮರಾಠಿ ಮುಖಂಡರ ಗಮನವು ಗಡಿಭಾಗದ ಕನ್ನಡಿಗರ ಮೇಲೆ ಬಿತ್ತು… ಹೀಗಾಗಿ ಸೊಲ್ಲಾಪುರ ಬೆಳಗಾವಿ ನಿಪ್ಪಾಣಿ ಖಾನಾಪುರ ನಂದಗಡ ಜತ್ತ ಅಕ್ಕಲಕೋಟೆ ಅಂತಹ ಮಹತ್ವದ ಕನ್ನಡ ಪ್ರದೇಶಗಳನ್ನು ಪಡೆಯಲು ಮುಂದಾದರು ಮರಾಠಿಗರು ಸಮಿತಿ ರೂಪಿಸಿದರು.  ಮುಖ್ಯಮಂತ್ರಿ ಆಗಿದ್ದರು ಸೊಲ್ಲಾಪುರ ನಗರವನ್ನು ಒಳಗೊಂಡಿದ್ದ ಸೊಲ್ಲಾಪುರ ಕೆಲವು ತಾಲೂಕುಗಳಲ್ಲಿ ನೂರಕ್ಕೆ 90ರಷ್ಟು ಕನ್ನಡಿಗರಿಂದ ಕೂಡಿತ್ತು.. ಸೊಲ್ಲಾಪುರ ನಗರ ಮಾತ್ರ ಮಿಶ್ರ ಭಾಸಿಕರಿಂದ ಕೂಡಿತ್ತು. ಈ ಮಿಶ್ರ ನುಡಿಯಲ್ಲಿಯೇ ಕನ್ನಡಿಗರು ತೆಲುಗು ಉರ್ದು ಮರಾಠಿ ಭಾಷಿಕರು ಇದ್ದರು. ಇದರಲ್ಲಿ ಅತ್ಯಧಿಕ ಸಂಖ್ಯೆ ಕನ್ನಡಿಗರದಾಗಿತ್ತು. ಅನ್ಯ ಭಾಷಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದರು. ಈ ಕಾರಣದಿಂದ ಮರಾಠಿ ಮುಖಂಡರು ಸೊಲ್ಲಾಪುರ ತಾಲೂಕನ್ನು ಒಡೆದು ನೇರ ಮರಾಠಿ ತಾಲೂಕಿನಿಂದ ಸಣ್ಣಪುಟ್ಟ೪0 ಮರಾಠಿ ಪ್ರಾಧಾನ್ಯ ಹಳ್ಳಿಗಳನ್ನು ಸೋಲಾಪುರ ನಗರಕ್ಕೆ ಜೋಡಿಸಿದರು .ಅದಕ್ಕೆ ಉತ್ತರ ಸೋಲಾಪುರ ತಾಲೂಕ ಎಂದು ಹೆಸರಿಟ್ಟರು .ಉಳಿದ ಸೋಲಾಪುರ ಭಾಗಕ್ಕೆ ದಕ್ಷಿಣ ಸೋಲಾಪುರ ವೆಂದು ಹೆಸರಿಡಲಾಯಿತು.  ಇಂದಿಗೂ ಈ ಎರಡು ತಾಲೂಕು ಸೋಲಾಪುರ ನಗರದಲ್ಲಿ ಬೇರೆ ಬೇರೆಯಾಗಿವೆ. ಈ ವಿಂಗಡಣೆಯ ಮುಖ್ಯ ಉದ್ದೇಶ  ತಾಲೂಕನ್ನು ಘಟಕವಾಗಿ ಹಿಡಿದರೆ.. ಅನಿವಾರ್ಯವಾಗಿ ಮಹಾರಾಷ್ಟ್ರಕ್ಕೆ ಸೇರಿದರೂ ದಕ್ಷಿಣ ಸೋಲಾಪುರ ಮಾತ್ರ ಮೈಸೂರಿಗೆ ಸೇರಬೇಕು. ಈ ರೀತಿಯ ಪೂರ್ವುದೇಶದಿಂದ ನಡೆದ  ಸಮಿತಿಗಳ ಕಾರ್ಯ ಸೊಲ್ಲಾಪುರ ಕರ್ನಾಟಕದಿಂದ ಕೈತಪ್ಪಿತುವಂತೆ ಮಾಡಿದವು. *ನುಡಿ ನಾಡ ಕಟ್ಟುವಾಗ ಗಡಿಭಾಗಮರಿಬ್ಯಾಡರಿ ತೊಡಕೆ ಇಡಬೇಡಿರಿಕಡೆ ತನಕ ಬೇಡುವೆ ಸರಕಾರಕ* ಜಯದೇವಿ ತಾಯಿಯವರ ಈ ಮಾತುಗಳಲ್ಲಿ ಅಖಂಡ ಕರ್ನಾಟಕದ ಕನಸು, ಗಡಿಭಾಗದ ಕನ್ನಡಿಗರ ನೋವು ತೋಡಿಕೊಂಡರು.ಕನ್ನಡ ಭಾಷೆಯ ಆಧಾರದ ಮೇಲೆ , ಕನ್ನಡ ಮಾತನಾಡುವ ಪ್ರದೇಶಗಳನ್ನೆಲ್ಲಾ ಒಂದಾಗಿ ಸೇರಿಸಬೇಕು ಎಂಬುದು ತಾಯಿಯವರ ಆಶಯ. ನಾಡಿನ ಗಡಿಯಲ್ಲಿ ಇರುವ ಕನ್ನಡಿಗರನ್ನು ಮಾತ್ರ ಮರೆಯಬೇಡಿ. ಸೊಲ್ಲಾಪುರ, ಅಕ್ಕಲಕೋಟೆ, ಜತ್, ಮೀರಜ್, ಜಮಖಂಡಿ ಮುಂತಾದ ಗಡಿ ಪ್ರದೇಶಗಳಲ್ಲಿ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ಅಸ್ತಿತ್ವವನ್ನು ಉಳಿಸಿಕೊಂಡು ಬದುಕುತ್ತಿದ್ದಾರೆ. ಅವರನ್ನೂ ಅಖಂಡ ಕರ್ನಾಟಕದ ಭಾಗವೆಂದು ಪರಿಗಣಿಸಬೇಕು ಎಂದರು.ಗಡಿಭಾಗದ ಕನ್ನಡ ಪ್ರದೇಶಗಳು ಕರ್ನಾಟಕದೊಂದಿಗೆ ಒಂದಾಗಲು ಯಾವುದೇ ಅಡ್ಡಿ ಅಥವಾ ತೊಡಕು ಉಂಟುಮಾಡಬಾರದು. ಭಾಷೆ ಮತ್ತು ಜನರ ಹಕ್ಕಿನ ಆಧಾರದ ಮೇಲೆ ಅವರ ಆಶಯವನ್ನು ಗೌರವಿಸಬೇಕು ಎಂಬ ಆಗ್ರಹಿಸಿದರು. ಇದು ಕೇವಲ ಒಂದು ದಿನದ ಮನವಿಯಲ್ಲ. ಸರ್ಕಾರವು ಗಡಿಭಾಗದ ಕನ್ನಡಿಗರ ಸಮಸ್ಯೆಯನ್ನು ಪರಿಹರಿಸುವವರೆಗೂ, ಕೊನೆಯವರೆಗೂ ನಾನು ಈ ಬೇಡಿಕೆಯನ್ನು ಮುಂದಿಡುತ್ತೇನೆ ಎಂಬ ಜಯದೇವಿ ತಾಯಿಯವರ ಅಚಲ ಸಂಕಲ್ಪವನ್ನು  ತೋರಿದರು.ಜೀವನಚರಿತ್ರೆಯಲ್ಲಿ ಬಳಸಬಹುದಾದ ಭಾವನಾತ್ಮಕಜಯದೇವಿ ತಾಯಿಯವರು ಗಡಿಭಾಗದಲ್ಲಿ ಬದುಕುತ್ತಿದ್ದ ಕನ್ನಡಿಗರ ಪರವಾಗಿ ಕೇಳಿಬಂದ ಒಬ್ಬ ಕನ್ನಡ ತಾಯಿಯ ಹೃದಯದ ಮೊರೆಯಾಗಿತ್ತು.  ಅಖಂಡ ಕರ್ನಾಟಕದ ನಕ್ಷೆಯನ್ನು ರೂಪಿಸುವಾಗ ಅದರ ಗಡಿಯಲ್ಲಿ ನಿಂತಿರುವ ಕನ್ನಡಿಗರನ್ನು ಮರೆಯಬಾರದು ಎಂಬುದು ಅವರ ಕಳಕಳಿ. ಭಾಷೆ, ನೆಲ ಮತ್ತು ನಾಡಿನ ಬಂಧದಿಂದ ಕರ್ನಾಟಕದೊಂದಿಗೆ ಬೆಸೆದುಕೊಂಡಿದ್ದ ಜನರನ್ನು ಯಾವುದೇ ರಾಜಕೀಯ ಗಡಿರೇಖೆ ಬೇರ್ಪಡಿಸಬಾರದು ಎಂಬುದು ಅವರ ಹೋರಾಟದ ಆಶಯವಾಗಿತ್ತು. ಅದಕ್ಕಾಗಿ ಅವರು ಸರ್ಕಾರವನ್ನು ಪದೇಪದೇ ಎಚ್ಚರಿಸುತ್ತಿದ್ದರು“ಗಡಿಭಾಗವನ್ನು ಮರೆಯಬೇಡಿ ಎಂದಿದ್ದರು ಕನ್ನಡ ನಾಡನ್ನು ಕಟ್ಟುವಾಗ ಗಡಿಭಾಗ ಕನ್ನಡಿಗರನ್ನೂ ಒಳಗೊಳ್ಳುವಿಕೆಯ ಮನವಿ ಅವರ ಜೀವನದ ಕೊನೆಯವರೆಗೂ ಮುಂದುವರಿದ ಅಖಂಡ ಕರ್ನಾಟಕದ ಬದ್ಧತೆಯ ಪ್ರತಿಧ್ವನಿಯಾಗಿತ್ತು ಸವಿತಾ ದೇಶಮುಖ

Read Post »

ಕಾವ್ಯಯಾನ, ಗಝಲ್

ಡಾ ರೇಣುಕಾತಾಯಿ ಸಂತಬಾ ರೇಮಾಸಂತ  ಗಜಲ್

ಕಾವ್ಯಸಂಗಾತಿ ಡಾ ರೇಣುಕಾತಾಯಿ ಸಂತಬಾ ರೇಮಾಸಂತ  ಗಜಲ್ ಎಂಥಾ ಚೆಲುವಿ ಅದಾಳ ಈಕೀ ಹ್ಯಾಂಗ ವರ್ಣಿಸಲಿ.ಮಾತ ಮಾತಿಗೂ ನಗುವಾಕೀ ಹ್ಯಾಂಗ ಹಿಡಿದಿಡಲಿ.ll ಕಾಲಿಗೆ ಗೆಜ್ಜಿ ಕಟಗೊಂಡ ಘಲ್ ಘಲ್ ಕುಣಿಸುವಾಕೀ,ಎದ್ಯಾಗ ಪ್ರೀತಿನ ಪುಟಿಸುವಾಕೀ ಹ್ಯಾಂಗ ಮುಚ್ಚಿಡಲಿ.ll ಎಲ್ಲಾರು ಬೆರಗಣ್ಣಾಗ  ನೋಡುವಂಗ ಮಿಂಚುವಾಕೀ,ಕಂಡವರ ಮನಸ್ಸ ಕದಿಯುವಾಕೀ ಹ್ಯಾಂಗ ಸುಮ್ಮಿರಲಿ.ll ಬೆಳಕಿನ ಸೀರೆ ಉಟ್ಗೊಂಡು ಬೆಳದಿಂಗಳ ಆದಾಕೀ,ಮಂಜಿನ ಹಾಂಗ ಕರಗುವಾಕೀ ಹ್ಯಾಂಗ ಕಾಪಾಡಲಿ.ll ತಾಯಿ ದೇವಿ ಗರ್ಭಗುಡಿ ದೀಪದಂಗ ಶಾಂತ ಈಕೀ,ರಾಗದಾಗ ಇರು ಸ್ವರದಂತಾಕೀ ಹ್ಯಾಂಗ ಹಾಡಲಿ.ll ಡಾ ರೇಣುಕಾತಾಯಿ ಸಂತಬಾ ರೇಮಾಸಂತ 

ಡಾ ರೇಣುಕಾತಾಯಿ ಸಂತಬಾ ರೇಮಾಸಂತ  ಗಜಲ್ Read Post »

ಇತರೆ, ಜೀವನ

“ಹೀಗೊಂದು ಅನಿಸಿಕೆ 60ರ ಆಸು ಪಾಸು”ನಿಮ್ಮೊಂದಿಗೆ ಹಂಚಿಕೊಳ್ಳುವವರು,  ಶಶಿಕಲಾ ಚಂದ್ರಶೇಖರ್. ಶಿವಮೊಗ್ಗ

ಬದುಕಿನ ಸಂಗಾತಿ ಶಶಿಕಲಾ ಚಂದ್ರಶೇಖರ್ “ಹೀಗೊಂದು ಅನಿಸಿಕೆ 60ರ ಆಸು ಪಾಸು”  ಸ್ವಾಮಿ ನಾನು ಇಂದು ವೃತ್ತಿಯಿಂದ ನಿವೃತ್ತಿ ಹೊಂದುತ್ತಿದ್ದೇನೆ. ಹಾಗಂತ ನನಗೇನು ಮನೆಗೆ ಹೋಗೋಕೆ ಇಷ್ಟ ಇರಲಿಲ್ಲ. ಸ್ನೇಹಿತೆಯರೊಂದಿಗೆ ಆಫೀಸಿನ ಕೆಲಸ ಮಾಡುತ್ತಾ ಮಾಡುತ್ತಾ 36 ವರ್ಷ ಕಳೆದದ್ದೇ ಗೊತ್ತಾಗಲಿಲ್ಲ.ಕೆಲಸಕ್ಕೆ ಸೇರಿದ ಹೊಸದರಲ್ಲಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದ್ದೆ. ಮದುವೆ ಮಕ್ಕಳು ಗಂಡ ಸಂಸಾರ ಅಂತ ಜಂಜಾಟದಲ್ಲಿ ಬಿದ್ದ ನಂತರ ಶುರುವಾಯಿತು ನೋಡಿ. ಗಂಡನಿಗೆ ಹುಷಾರಿಲ್ಲ ರಜ ಹಾಕು, ಮಕ್ಕಳಿಗೆ ಹುಷಾರಿಲ್ಲ ರಜ ಹಾಕು, ಮಕ್ಕಳ ಶಾಲೆಯಲ್ಲಿ ಮೀಟಿಂಗ್,ಅದು ಇದು ಕಾರ್ಯಕ್ರಮಗಳು,ಅತ್ತೆಯ ಸೇವೆಗೆ, ಮಾವನ ಸೇವೆಗೆ, ಜೀವತೇಯಲಿಕೆ ಶುರುವಾದಂತೆ ಆಫೀಸಿನಲ್ಲಿ ದಕ್ಷತೆ ಕಡಿಮೆ ಆಯಿತು ಅನ್ನಿಸುತ್ತೆ . ನನ್ನ ಸ್ನೇಹಿತೆಯರು ಕೂಡ ಹೆಚ್ಚು ಕಡಿಮೆ ಅದೇ ರೀತಿಯ ದೋಣಿಯಲ್ಲಿ ಇದ್ದವರು. ಆಫೀಸಿಗೆ ಲೇಟ್ ಆದಾಗ,ಅನ್ಯ ಮನಸ್ಕಳಾಗಿ ಕೆಲಸ ಮಾಡುತ್ತಾ ತಪ್ಪು ಮಾಡಿದಾಗ,ಆಫೀಸರ್ ಕೆಂಗಣ್ಣಿಗೆ ತುತ್ತಾಗುವುದು ಕೊನೆ ಕೊನೆಗೆ ಅಭ್ಯಾಸವಾಗಿ ನನಗೆ ಅವಳು ಅಥವಾ ಇನ್ನೊಬ್ಬಳು, ಸಮಾಧಾನ ಮಾಡುವುದು ನಾನು ಅವಳಿಗೆ, ಇವಳಿಗೆ, ಸಮಾಧಾನ ಮಾಡುವುದು ಇದ್ದೇ ಇರುತ್ತಿತ್ತು. ಹೀಗೇ ಮಕ್ಕಳ ಜವಾಬ್ದಾರಿ,ಅವರ  ಮದುವೆ,ಬಸಿರು, ಬಾಣಂತನ,ಹೀಗಂತ 60 ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ಈಗ ಮಕ್ಕಳೆಲ್ಲ ಅವರವರ ಕಾಲ ಮೇಲೆ ನಿಂತಿದ್ದಾರೆ. ರೆಕ್ಕೆ ಬಲಿತ ಹಕ್ಕಿಗಳು.ತಮ್ಮ ತಮ್ಮ ಗೂಡಿನಲ್ಲಿ ಮರಿಗಳೊಂದಿಗೆ ಸುಖವಾಗಿದ್ದಾರೆ.ನಾವೀಗ ಯಾವುದೇ ನಿರ್ಬಂಧ ವಿಲ್ಲದೆ ಸೊಗಸಾಗಿ ಸೇವೆ ಸಲ್ಲಿಸಬಹುದು ಅಂದುಕೊಂಡರೆ, ಸರಕಾರವೇ ನಮ್ಮನ್ನು 60 ತುಂಬಿತು,ಕಡಿದು ಕಟ್ಟೆ ಹಾಕಿದ್ದು ಸಾಕು,ಮನೆಯಲ್ಲಿ ಇರಿ,ಅಂತ ಕಳಿಸುತ್ತಿದೆ. ತಪ್ಪಲ್ಲವೇ ಇದು.  ಹೋಗ್ಲಿ ಬಿಡಿ ಸ್ವಾಮಿ.ನಾವೀಗ ಸ್ವಚ್ಛಂದ ಪಕ್ಷಿಗಳಂತೆ ಹಾರಾಡುತ್ತಾ ಇರಬಹುದು ನಮಗೆ ಬೇಕಾದ ಊರಿಗೆ ಬೇಕಾದ ಸಮಯದಲ್ಲಿ ಬೇಕಾದಂತೆ ತಿರುಗಾಡಬಹುದು ರಜ ಕೇಳುವ  ಗೋಜೆ ಇಲ್ಲ ಅಂದುಕೊಂಡಿದ್ದೆ.ಆದರೆ….. ಆದದ್ದೇ ಬೇರೆ. ಸದ್ದಿಲ್ಲದೆ ನೆಂಟರಾದ ಸಕ್ಕರೆ ಕಾಯಿಲೆ ಬಂತು . ಅದರ ಅಣ್ಣ ಬಿ.ಪಿ.   ಬಂದು ಎರಡು ವರ್ಷ ಆಯ್ತು. ಸಾಲದ್ದಕ್ಕೆ ಮಂಡಿ ನೋವು, ಬೆನ್ನು ನೋವು. ವಾಕಿಂಗ್ ಮಾಡಬೇಕು ಅಂತ ಡಾಕ್ಟರ್ ಸುಲಭವಾಗಿ ಸಲಹೆ ಕೊಡುತ್ತಾರೆ ಕಣ್ರೀ . ಹಿಮ್ಮಡಿನೋವು ಬೇರೆ , ವಾಕಿಂಗ್ ಮಾಡಲು ಆಗಲ್ಲ. ಬಿಡಪ್ಪ ಇನ್ನುಮೇಲೆ ಮನೆಯಲ್ಲಿ ಇರ್ತೀನಿ ರುಚಿ ರುಚಿ ಆಗಿ ಮಾಡಿಕೊಂಡು ತಿನ್ನೋಣ ಅಂದ್ರೆ, ಶುಗರ್ ಬಿಪಿ ಕಾಟ. ಮಕ್ಕಳ ಮನೆಗೆ ಹೋಗಿ ಮೊಮ್ಮಕ್ಕಳನ್ನು ನೋಡಿಕೊಳ್ಳೋಣ ಎಂದರೆ ಅವರ ಜೊತೆ ಆಟ ಆಡಲಿಕ್ಕೆ ಆಗಲ್ಲ,ಎತ್ತಿಕೊಳ್ಳೋಕೂ ಆಗಲ್ಲ. ಅವರ ಹಿಂದೆ ಓಡೋಕೆ ಸಾಧ್ಯವೇ ಇಲ್ಲ. ಅವರೇನಾದರೂ ಬಿದ್ರೆ, ಅಯ್ಯೋ ಅಮ್ಮ, ಸರಿಯಾಗಿ ನೋಡಿಕೊಳ್ಳುವುದು ಅಲ್ವಾ, ಬೀಳೋ ತನಕ ಏನು ಮಾಡ್ತಾ ಇದ್ರೋ ಏನೋ ಅಂತಾರೆ, ಒಂದೊಂದೇ ಮಕ್ಕಳನ್ನು ಹೆತ್ತಿರುವ ಮಕ್ಕಳು.ಕಿವಿ   ಸರಿಯಾಗಿ ಕೇಳಲ್ಲ, ಅಂತ ಎಲ್ಲರೂ ಉಪೇಕ್ಷೆ ಮಾಡಿ ಜೋರಾಗಿಯೇ ಹೇಳ್ತಾರೆ. ‘ನಿನ್ನ ಹತ್ತಿರ ಯಾರು ಗಂಟಲು ಹರಿದುಕೊಳ್ಳುತ್ತಾರೆ ಮಾರಾಯ್ತಿ  ಅಂತಾರೆ.ಇವರು ಚಿಕ್ಕವರಿದ್ದಾಗ ನಾವೇನು ಕಮ್ಮಿ ಗಂಟಲು ಹರ್ಕೊಂಡಿದ್ವ. ಅದು ಹೇಳೋರ್ಯಾರು.      ಇಷ್ಟು ದಿನ ಆಫೀಸಿನಲ್ಲಿ ಸ್ನೇಹಿತೆಯರು ಕಷ್ಟ ಸುಖ ವಿಚಾರಿಸುತ್ತಿದ್ದರು. ಸಲಹೆ ಸೂಚನೆ ಕೊಡುತ್ತಿದ್ದರು. ಈಗ ನಮ್ಮ ದುಃಖ ದುಮ್ಮಾನಗಳನ್ನು ಕೇಳುವವರು ಯಾರು?. ಇದರ ಮೇಲೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ವಹಿಸುವ ಮಕ್ಕಳಿಂದ ಹತ್ತು ಹಲವು ರಿಸ್ಟ್ರಿಕ್ಷನ್ ಬೇರೆ.’ಖಾರ ತಿನ್ನಬೇಡ’ ‘ಉಪ್ಪು ತಿನ್ನಬೇಡ, ‘ಸಿಹಿ ತಿನ್ನಬೇಡ,’ನೀರು ಕುಡಿ ನೀರು ಕುಡಿ ನೀರು ಕುಡಿ’. ಉಪ್ಪು, ಖಾರ, ಸಿಹಿ ಎಲ್ಲಾ ಬಿಟ್ಟು…..ಈ ಸಂಭ್ರಮಕ್ಕೆ ನಾವು ಯಾಕಾದರೂ ಬದುಕಿದ್ದೇವೆಯೋ ಅನಿಸುತ್ತೆ. ಒಂದು ಕ್ಷಣ ಮಾತ್ರ ಅಷ್ಟೇ ಹಾಗನಿಸೋದು ಕಣ್ರೀ.ಸ್ಮಶಾನ ವೈರಾಗ್ಯ ಅಂತಾರಲ್ಲ ಹಾಗೆ.ನಿರಂತರ ಆ ಡಾಕ್ಟರ್, ಈ ಡಾಕ್ಟರ್,ಆ ಮಾತ್ರೆ, ಯೋಗ, ಧ್ಯಾನ, ಪ್ರಾಣಾಯಾಮ ಅಂತ ಏನೆಲ್ಲ ಕಸರತ್ತು ಮಾಡಿ ಇನ್ನೂ ಬದುಕುವ ಆಸೆ. ಬಹುಶಹ ಇದುವೇ ಜೀವನ ಅಂತ ಈಗ ಅರ್ಥ ಆಗ್ತಿದೆ. ಪೂರ್ತಿ ಅರ್ಥಮಾಡಿಕೊಳ್ಳೋಣ ಅನ್ನುವಷ್ಟರಲ್ಲಿ ಮೇಲೆ ಕುಳಿತಾನಲ್ಲ ಅವನು ತುಂಬಾ ಜಾಣ.’ ಸಾಕು ಬಾ, ನಿನ್ನ ಆಟ ಏನು ನಡೆಯದು ನನ್ನ ಮುಂದೆ,’ ಅಂತ ಕರೆದುಕೊಂಡು ಬಿಡುತ್ತಾನೆ. ಬರೋಲ್ಲ ಅನ್ನೋಕೆ ಅದೇನು ನಮ್ಮ ಮಾವನ ಮನೆನಾ, ಹೋಗಲೇಬೇಕಲ್ಲ.     ಇಷ್ಟೆಲ್ಲದರ ಮಧ್ಯ ನನಗೆ ತುಂಬಾ ಬೇಸರವಾಗಿದ್ದು ಏನು ಗೊತ್ತೆ?. ಮೊನ್ನೆ ಪೇಪರ್‌ನಲ್ಲಿ 60 ವರ್ಷದ ವಯೋ ವೃದ್ದೆಯ ಸಾವು ಎಂಬ  ವಿಚಾರ. 60 ವರ್ಷದ ಮಹಿಳೆ ಅಂದಿದ್ದರೆ ಸಾಕಾಗುತ್ತಿರಲಿಲ್ಲವೇ ‘ವಯೋ ವೃದ್ಧೆ’ ಎಂಬ ವಿಶೇಷಣದ ಅವಶ್ಯಕತೆ ಇತ್ತೇ?. ಹೆಂಗಸರಿಗೆ ಈ ವಿಶೇಷಣ ಎಷ್ಟು ಬೇಜಾರು ತರಿಸುತ್ತೆ ಅನ್ನುವ ಕಾಮನ್ ಸೆನ್ಸ್ ಇಲ್ಲವಲ್ಲ. ಸರ್ಕಾರ ಬೇರೆ ಈಗ ಹಿರಿಯ ನಾಗರಿಕರಿಗೆ ಅಂತ ಏನೇನೋ ಸವಲತ್ತು ನೀಡುತ್ತಿದೆ. ಒಂದು 10 ವರ್ಷ ಮೊದ್ಲೇನಾದ್ರೂ ಕೊಟ್ಟಿದ್ರೆ ಆ ಸವಲತ್ತುಗಳನ್ನು ಅನುಭವಿಸಿಯಾದರೂ ನೋಡಬಹುದಿತ್ತು. ಊರು ಹೋಗು ಕಾಡು ಬಾ ಅನ್ನುವಾಗ, ಸವಲತ್ತಿನ ಮುಂಡಾಮೋಚುತು  ಅಲ್ವಾ. ಒಟ್ಟಿನಲ್ಲಿ ಹಲ್ಲಿದ್ದಾಗ ಕಡ್ಲೆ  ಇಲ್ಲ, ಕಡ್ಲೆ ಇದ್ದಾಗ ಹಲ್ಲಿಲ್ಲ , ಅನ್ನೋದೇ ಜೀವನದ ನೀತಿ ಪಾಠ. ಏನಂತೀರಾ?  ಹೂ ಅಂತೀರಾ?ಹಹ್ಹಹ್ಹ ಇಲ್ಲಪ್ಪಾ ಇಲ್ಲ. ಆ ದೇವರು ನಮಗೆ ಎಷ್ಟೊಂದು ಎಂಡೋಮೆಂಟ್ ಪಾಲಿಸಿಗಳನ್ನು ಕೊಟ್ಟಿದ್ದಾನೆ ಗೊತ್ತಾ. ಹಾಗೇ ಹಿಂದಕ್ಕೆ ಹಿಂದಕ್ಕೆ ಹೋಗ್ತಾ ಬನ್ನಿ.     ನಿಮಗೆ ದೇವರು ಕೈ, ಕಾಲು, ಕಣ್ಣು, ಮೂಗು, ಬಾಯಿ, ಎಲ್ಲಾ ಅಂಗಗಳನ್ನು ನೀಡಿದ್ದಾನೆ ಅಲ್ವಾ. ನೀವೇನು ಕುಂಟರೆ,? ಕುರುಡರೆ,? ಅಥವಾ ಕೈಲಾಗದವರೇ,? ಅಲ್ಲವಲ್ಲ. ಕುಂಟರು,  ಕುರುಡರನ್ನು ನೋಡಿದಾಗ ನಾವೇ ಪುಣ್ಯವಂತರು ಅಂದುಕೊಂಡಿಲ್ಲವೇ. ಇನ್ನು ನಿಮಗೆ ಅಪ್ಪ-ಅಮ್ಮಂದಿರ ಪ್ರೀತಿ ಸಿಕ್ಕಿದೆ. ಸುಖವಾಗಿ ಅಂತಲೇ ಇಟ್ಟುಕೊಳ್ಳಿ. ಬೆಳೆದು ಓದಿ ವಿದ್ಯಾವಂತರಾಗಿದ್ದೀರಿ. ಈ ಭಾಗ್ಯ ಎಷ್ಟು ಜನರಿಗುಂಟು?. ಮೂರು ಹೊತ್ತು ಸುಖವಾಗಿ ಉಂಡು, ಉಟ್ಟು, ಬೆಳೆಯಲಿಲ್ಲವೇ? ನಾವೇ ಪುಣ್ಯವಂತರಲ್ಲವೇ?, ಜಗತ್ತಿನಲ್ಲಿ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದವರನ್ನು ನೋಡಿದಾಗ.     ಮೊದಲು ಕೆಲಸ ಸಿಕ್ಕಾಗ, ಮನವ ನರಿತು ನಡೆವ ಪತಿ/ ಪತ್ನಿ ಸಿಕ್ಕಾಗ, ಜೀವನ ಬಣ್ಣ ಬಣ್ಣವಾಗಿ ಎಷ್ಟು ಸುಂದರ ಇಂದು ಅನಿಸಲಿಲ್ಲವೇ?ನಿಮ್ಮದೇ ಕನಸಿನ ಮನೆ ನೀವು ಕಟ್ಟಿದಾಗ, ಮೊದಲು ತಾಯಿ / ತಂದೆ ಆದಾಗ,ಸ್ವರ್ಗ ಮೂರೇ ಗೇಣು ಅನಿಸಲಿಲ್ಲವೇ? ನಿಮ್ಮ ಮಗು ನಿಮ್ಮ ಮನೆ,ಮಡಿಲು ತುಂಬಿದಾಗ, ಅದರ ಲಾಲನೆ ಪಾಲನೆ ಮಾಡುತ್ತಾ ಜಗತ್ತನ್ನೇ ಮರೆಯಲಿಲ್ಲವೇ ನೀವು?. ಮಗು ಬೆಳದಂತಿಲ್ಲ ಓದು,ವಿದ್ಯಾಭ್ಯಾಸ, ಉದ್ಯೋಗ,ಮದುವೆ, ಬಸಿರು, ಬಾಣಂತನಗಳಲ್ಲಿ ಸ್ವರ್ಗ ಸುಖ ಅನುಭವಿಸಲಿಲ್ಲವೇ?….. ಅದೇ ಜೀವನವಲ್ಲವೇ!!.ವರ್ಷಗಳು ಉರುಳಿದ್ದು ಗೊತ್ತಾಗಲಿಲ್ಲ. ದೇವರು ಒಂದರ ಮೇಲೆ ಒಂದು ಸಂತಸದ ಕ್ಷಣಗಳನ್ನು ಕಲ್ಪಿಸಿಕೊಟ್ಟ. ಅದು ಹಲ್ಲು, ಕಡಲೆ, ಎರಡು ಇದ್ದ ಕಾಲವಲ್ಲವೇ.ಆಗ ನಿಮಗೆ ದೇವರಿಗೆ ಒಂದು thanks ಹೇಳೋಕು ಪುರುಸೊತ್ತಿರಲಿಲ್ಲ.    ಅವನು ತುಂಬಾ ಜಾಣ. ನಮ್ಮಂತಹ ಕೋಟಿ ಕೋಟಿ ಜನರನ್ನು ನೋಡಿದವನಲ್ಲವೇ. ಇಳಿ ವಯಸ್ಸು ಕೇವಲ ಆತನ ಸ್ಮರಣೆಗೆ ಮಾತ್ರ ಮೀಸಲು ಇಡಬೇಕೆಂದು ಬೇರೆಲ್ಲಾ ಅವಯವಗಳನ್ನು, ಒಂದೊಂದಾಗಿ (ಅಂದರೆ  ಕಣ್ಣು, ಕಿವಿ ಇತ್ಯಾದಿ ), off ಮಾಡ್ತಾ ಬರ್ತಾನೆ. ಇನ್ನಾದರೂ ನಾವು ದೇವರನ್ನು  ಜಪಿಸಬೇಕಲ್ಲವೇ?   (  ಈಗಲಾದರೂ ಜಪಿಸ್ತಾರ ಅಂತ ಟೆಸ್ಟ್ ಮಾಡ್ತಾನೆ ಮಾರಾಯ್ರೆ ). ಗಂಡ ಹೇಳಿದ್ದು ಹೆಂಡತಿಗೆ ಕೇಳಲ್ಲ. ಹೆಂಡತಿ ಹೇಳಿದ್ದು ಗಂಡನಿಗೆ ಕೇಳಲ್ಲ. ಹಾಗಾಗಿ ಅವರ ನಡುವೆ ಜಗಳವೇ ಇಲ್ಲವಲ್ಲ. ಅದಕ್ಕೆ ಅವನನ್ನ ತುಂಬಾ ಬುದ್ಧಿವಂತ ಅಂದಿದ್ದು. ಕವಿಯೊಬ್ಬರು ಹೇಳಿದಂತೆ, ಹಲ್ಲು ಹೋಗಿ ಬೆನ್ನು ಬಾಗಿ ಶರೀರ ಗೂಡಾಗುವ ಮುನ್ನ —- ನೆನೆಯೋಣ ಆ ಶಿವನನ್ನ. ಏನಂತೀರಾ?.  ಶಶಿಕಲಾ ಚಂದ್ರಶೇಖರ್. ಶಿವಮೊಗ್ಗ. ,

“ಹೀಗೊಂದು ಅನಿಸಿಕೆ 60ರ ಆಸು ಪಾಸು”ನಿಮ್ಮೊಂದಿಗೆ ಹಂಚಿಕೊಳ್ಳುವವರು,  ಶಶಿಕಲಾ ಚಂದ್ರಶೇಖರ್. ಶಿವಮೊಗ್ಗ Read Post »

You cannot copy content of this page

Scroll to Top