ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ವನಜಾಕ್ಷಿ ಬೆಟ್ಟದಾಲೂರು ಅವರ ಕವಿತೆ “ಮೋಡದ ಚಪ್ಪರದ ಕೆಳಗೆ”

ಕಾವ್ಯ ಸಂಗಾತಿ ವನಜಾಕ್ಷಿ ಬೆಟ್ಟದಾಲೂರು “ಮೋಡದ ಚಪ್ಪರದ ಕೆಳಗೆ” ಒಂದು ದಿನಭೂಮಿಯ ಮೇಲೆ ನಡೆಯುತ್ತಿದ್ದ ನಾನುಹಠಾತ್ತನೆ ಆಕಾಶದ ಮಡಿಲೇರಿದೆ. ಕಿಟಕಿಯಾಚೆ ನೋಡಿದಾಗ—ಕೆಳಗೆ ಬಿಟ್ಟು ಬಂದ ಭೂಮಿಒಂದು ಹಸಿರು ನೆನಪಿನಂತೆ ದೂರವಾಗುತ್ತಿತ್ತು;ಮೇಲೆ—ಅಂತ್ಯವಿಲ್ಲದ ನೀಲಿಯೊಂದುನನ್ನ ಕಣ್ಣಿಗೆ ಕಣ್ಣಿಟ್ಟು ನಗುತ್ತಿತ್ತು. ಅಲ್ಲಿಯೇ ನೆನಪಾಯಿತು— ಚಿಕ್ಕವಳಿದ್ದಾಗಒಮ್ಮೆ ಆಕಾಶದತ್ತ ಕೈಚಾಚಿ“ನಾನೂ ಹಾರಬೇಕು”ಎಂದು ಮನಸ್ಸಿನಲ್ಲಿ ಹೇಳಿಕೊಂಡಿದ್ದೆ. ಆಗರೆಕ್ಕೆಗಳಿರಲಿಲ್ಲ. ಇಂದು ರೆಕ್ಕೆಗಳಿಲ್ಲದಿದ್ದರೂನಾನು ಹಾರುತ್ತಿದ್ದೆ! ಮನುಷ್ಯನ ಕನಸಿಗೆರೆಕ್ಕೆ ಬೇಕೇನು?ಒಂದು ಪುಟ್ಟ ಕಿಟಕಿ ಸಾಕು;ಒಂದು ವಿಮಾನ ಸಾಕು;ಆಶ್ಚರ್ಯದಿಂದ ನೋಡುವಒಂದು ಜೀವಂತ ಕಣ್ಣು ಸಾಕು. ವಿಮಾನ ಮೋಡವನ್ನು ಸೀಳಿತು. ಅದು ಮೋಡವೋ?ಬಿಳಿಯ ಬೆಟ್ಟವೋ?ಸಾಗರದ ಮೇಲೆ ಹೆಪ್ಪುಗಟ್ಟಿದ ಅಲೆಯೋ?ದೇವರು ಬಿಚ್ಚಿಟ್ಟಬೆಳ್ಳಿಯ ಹಾಸಿಗೆಯೋ? ಒಮ್ಮೆ ಅದು ಬೆಟ್ಟವಾಗಿ ಕಂಡಿತು,ಮತ್ತೊಮ್ಮೆ ಸಾಗರವಾಗಿ,ಮತ್ತೊಮ್ಮೆ ನದಿಯಂತೆಆಕಾಶದೊಳಗೆ ಹರಿಯಿತು. ಮರಗಳೆಲ್ಲ ಕೆಳಗೆಹಸಿರು ಅಕ್ಷರಗಳಾಗಿ ಕಾಣಿಸಿದವು;ಮನೆಗಳು—ಮಕ್ಕಳು ಮಣ್ಣಿನಲ್ಲಿ ಕಟ್ಟಿದಆಟದ ಬೊಂಬೆಗಳಂತೆ. ನಾನು ಮಾತ್ರಆಕಾಶದ ಪುಸ್ತಕದೊಳಗೆಒಂದು ಪುಟ್ಟ ಅಕ್ಷರ. ಮೋಡಗಳ ಮಧ್ಯೆನೀಲಿ ಮತ್ತೆ ನೀಲಿಯೇ! ಭೂಮಿಯ ಮೇಲೆಇಷ್ಟೊಂದು ನೀಲಿಯನ್ನುಎಲ್ಲಿ ಮರೆಮಾಡಿಟ್ಟಿದ್ದೀಯೆ ಆಕಾಶವೇ? ನಿನ್ನನ್ನು ಮುಟ್ಟಬೇಕೆಂದರೆಕೈ ಸಾಲದು;ಹಿಡಿಯಬೇಕೆಂದರೆಬೆರಳು ಸಾಲದು;ಕುಡಿಯಬೇಕೆಂದರೆಕಂಠ ಸಾಲದು. ನೋಡಿ ತಣಿಯಬಹುದು—ಆದರೆನಿನ್ನನ್ನು ಒಳಗೊಳ್ಳಲು ಸಾಧ್ಯವಿಲ್ಲ. ಅಷ್ಟರಲ್ಲಿಒಂದು ಮೋಡದ ಬೃಹತ್ ಚಪ್ಪರವಿಮಾನದ ಕೆಳಗೆ ಹರಡಿಕೊಂಡಿತು. ಅದರ ಮೇಲೆಸೂರ್ಯನ ಬೆಳಕು ಬಿದ್ದಿತ್ತು. ಬಿಳಿ ಮೋಡದ ಮೇಲೆಚಿನ್ನದ ಹೊಳಪು. ನನಗೆ ಅನಿಸಿತು— ಇದು ಮೋಡವಲ್ಲ;ಭೂಮಿಯ ದುಃಖಗಳನ್ನುಮೇಲಿನಿಂದ ಮುಚ್ಚಿಟ್ಟದೇವರ ಮೌನದ ಹೊದಿಕೆ. ಅದರ ಕೆಳಗೆಎಷ್ಟು ಮನೆಗಳು,ಎಷ್ಟು ಬದುಕುಗಳು,ಎಷ್ಟು ಕಣ್ಣೀರು,ಎಷ್ಟು ನಗು! ನಾವು ಮೇಲಿದ್ದೇವೆ;ಆದರೆಬದುಕು ಕೆಳಗೇ ನಡೆಯುತ್ತಿದೆ. ಒಬ್ಬ ರೈತಮಣ್ಣಿನ ಎದೆಯಲ್ಲಿ ಬೀಜ ಬಿತ್ತುತ್ತಿದ್ದಾನೆ. ಒಬ್ಬ ತಾಯಿಮಗುವಿನ ಕೈ ಹಿಡಿದು ನಡೆಯುತ್ತಿದ್ದಾಳೆ. ಒಬ್ಬ ವೃದ್ಧಮನೆಯ ಬಾಗಿಲಲ್ಲಿ ಕುಳಿತುಹಾದುಹೋಗುವವರನ್ನು ನೋಡುತ್ತಿದ್ದಾನೆ. ಒಬ್ಬ ಮಗುಆಕಾಶದತ್ತ ನೋಡಿ“ಅಲ್ಲಿ ವಿಮಾನ!”ಎಂದು ಕೈಬೀಸುತ್ತಿರಬಹುದು. ಅವನಿಗೆ ಗೊತ್ತಿಲ್ಲ— ಆ ವಿಮಾನದ ಕಿಟಕಿಯೊಳಗೆಕುಳಿತಿರುವ ಮತ್ತೊಬ್ಬ ಮಗುಅವನನ್ನೇ ನೆನಪಿಸಿಕೊಳ್ಳುತ್ತಿದೆ ಎಂದು! ಆ ಕ್ಷಣದಲ್ಲಿಆಕಾಶ ಮತ್ತು ಭೂಮಿಒಂದೇ ಕಥೆಯ ಎರಡು ಪುಟಗಳೆಂದು ತಿಳಿಯಿತು. ವಿಮಾನ ಇನ್ನೂ ಮೇಲೇರಿತು. ಮೋಡಗಳ ಹೊಟ್ಟೆಯೊಳಗೆನಾವು ಹಕ್ಕಿಗಳಂತೆ ತೇಲುತ್ತಿದ್ದೆವು. ಅಲ್ಲಿಮೇಲಿಲ್ಲ, ಕೆಳಗಿಲ್ಲ;ಹತ್ತಿರವಿಲ್ಲ, ದೂರವಿಲ್ಲ;ಕೇವಲ ನೀಲಿ— ಅದರೊಳಗೆಬಿಳಿಯ ಕನಸುಗಳು. ನಾನು ಕಣ್ಣುಮುಚ್ಚಿದೆ. ಒಮ್ಮೆನಾನು ಹಾರಬೇಕೆಂದಿದ್ದೆ. ಒಮ್ಮೆನಾನು ಹಾಡಬೇಕೆಂದಿದ್ದೆ. ಒಮ್ಮೆನನ್ನೊಳಗಿನ ಎಲ್ಲ ಗಡಿಗಳನ್ನು ದಾಟಬೇಕೆಂದಿದ್ದೆ. ಆದರೆ ಜೀವನರೆಕ್ಕೆಗಳನ್ನು ಕೊಡಲಿಲ್ಲ. ಇಂದು ತಿಳಿಯಿತು— ಜೀವನ ರೆಕ್ಕೆ ಕೊಡಲಿಲ್ಲವೆಂದಲ್ಲ;ಅದು ರೆಕ್ಕೆಗಳನ್ನುಬೇರೊಂದು ರೂಪದಲ್ಲಿ ಕೊಟ್ಟಿತ್ತು. ಕನಸಾಗಿ ಕೊಟ್ಟಿತ್ತು.ಕವಿತೆಯಾಗಿ ಕೊಟ್ಟಿತ್ತು.ಕಣ್ಣಾಗಿ ಕೊಟ್ಟಿತ್ತು. ಹೀಗಾಗಿನಾನು ಹಕ್ಕಿಯಾಗಲಿಲ್ಲ— ನನ್ನ ಕಣ್ಣುಗಳೇ ರೆಕ್ಕೆಗಳಾದವು. ವಿಮಾನ ಮೋಡವನ್ನು ದಾಟುತ್ತಿದ್ದಂತೆನನ್ನೊಳಗೂ ಏನೋ ದಾಟಿತು. ಭಯವೊಂದು ಕೆಳಗೆ ಉಳಿಯಿತು. ಆಸೆ ಮಾತ್ರಮೇಲಕ್ಕೆ ಬಂತು. ನಾನು ಆಕಾಶವನ್ನು ನೋಡಲಿಲ್ಲ— ಆಕಾಶವೇ ನನ್ನೊಳಗೆ ಇಳಿಯಿತು. ಜ್ಯೋತಿರ್ಲಿಂಗದಂತೆಕಲ್ಲಿನೊಳಗೆ ಶಕ್ತಿ ಅಡಗಿರುವಂತೆ,ಈ ನೀಲಿಯೊಳಗೂಕಾಣದ ಒಂದು ಮಹಾಶಕ್ತಿ. ಎಷ್ಟು ನೋಡಿದರೂಅನುಭವವೇ ಅನುಭವ. ಹೇಳಲು ಬಂದರೆಪದಗಳು ಬಡವಾಗುತ್ತವೆ. ವರ್ಣಿಸಲು ಕುಳಿತರೆವರ್ಣಗಳೇ ಸೋಲುತ್ತವೆ. ಆಕಾಶವನ್ನುಕವಿತೆಯಲ್ಲಿ ಹಿಡಿಯಬಹುದೇ? ಮೋಡವನ್ನುಕೈಯಲ್ಲಿ ಕಟ್ಟಬಹುದೇ? ನೀಲಿಯನ್ನುಪಾತ್ರೆಯಲ್ಲಿ ತುಂಬಬಹುದೇ? ಇಲ್ಲ. ಅದಕ್ಕೇನಾನು ಮೌನವಾಗಿ ನೋಡಿದೆ. ವಿಮಾನದ ಕಿಟಕಿಯಾಚೆಮೋಡಗಳ ಬಿಳಿ ಬೆಟ್ಟಗಳುಮತ್ತೆ ಮತ್ತೆ ಹುಟ್ಟುತ್ತಿದ್ದವು. ನನ್ನೊಳಗಿನ ಮಗುಅವುಗಳ ಮೇಲೆ ಓಡಾಡುತ್ತಿತ್ತು. ನನ್ನೊಳಗಿನ ಹಕ್ಕಿರೆಕ್ಕೆ ಬಿಚ್ಚುತ್ತಿತ್ತು. ನನ್ನೊಳಗಿನ ಕವಿಒಂದು ಮಾತು ಮಾತ್ರ ಹೇಳುತ್ತಿದ್ದ— “ಭೂಮಿಯ ಮೇಲೆ ಬದುಕುವುದು ಬದುಕು;ಆದರೆಒಮ್ಮೆ ಆಕಾಶವನ್ನು ಒಳಗಿನಿಂದ ನೋಡುವುದುಬದುಕಿನ ಅರ್ಥವನ್ನು ಬದಲಿಸುವುದು.” ವಿಮಾನ ಮುಂದಕ್ಕೆ ಸಾಗಿತು. ಮೋಡಗಳು ಹಿಂದೆ ಸರಿದವು. ಆದರೆಆ ದಿನ ಕಂಡ ಆಕಾಶಹಿಂದೆ ಸರಿಯಲಿಲ್ಲ. ಅದು ಇನ್ನೂ ನನ್ನೊಳಗಿದೆ— ಒಂದು ಅಂತ್ಯವಿಲ್ಲದ ನೀಲಿಯಾಗಿ,ಒಂದು ಬಿಳಿಯ ಮೋಡವಾಗಿ,ಒಂದು ಹಾರಲಾರದ ಹಕ್ಕಿಯ ಕನಸಾಗಿ… ಮತ್ತುವಿಮಾನ ಕಿಟಕಿಯ ಬಳಿ ಕುಳಿತುಮೊದಲ ಬಾರಿಗೆಆಕಾಶವನ್ನು ನೋಡಿದಆ ಪುಟ್ಟ ಆಶ್ಚರ್ಯವಾಗಿ. ವನಜಾಕ್ಷಿ ಬೆಟ್ಟದಾಲೂರು.(ಕಾಶಿ ಅಯೋಧ್ಯೆ ಯಾತ್ರೆ ಸಂದರ್ಭದಲ್ಲಿ ಬರೆದಿದ್ದು  ಇಂದು ಟೈಪಿಸಿದೆ)

ವನಜಾಕ್ಷಿ ಬೆಟ್ಟದಾಲೂರು ಅವರ ಕವಿತೆ “ಮೋಡದ ಚಪ್ಪರದ ಕೆಳಗೆ” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಅಪ್ರತಿಮ ಶರಣ ಘಟ್ಟಿವಾಳಯ್ಯ ಕರ್ನಾಟಕದಲ್ಲಿ ಹನ್ನೆರಡನೆಯ ಶತಮಾನದ ವಚನ ಚಳುವಳಿಯ ಘಟ್ಟಿವಾಳಯ್ಯ  ಅಗ್ರ ಪ್ರಸಿದ್ಧ ಶರಣ ಮತ್ತು ವಚನಕಾರರು. ಇವರ ಮೂಲ ಹೆಸರು ಮುದ್ದಣ. ಶರಣ ಘಟ್ಟಿವಾಳಯ್ಯನವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆ. ಬಳ್ಳಿಗಾವೆಯು ೧೨ನೆಯ ಶತಮಾನದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. ಘಟ್ಟಿವಾಳಯ್ಯನವರು ಯೌವನದಲ್ಲಿದ್ದಾಗ ಬಳ್ಳಿಗಾವೆಯ ಸಮೀಪದ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಶಿವನ ಧ್ಯಾನದಲ್ಲಿ ತೊಡಗುತ್ತಾ, ಮದ್ದಳೆಯನ್ನು ಬಾರಿಸುವ ಸೇವೆ (ಕಾಯಕ) ಮಾಡುತ್ತಿದ್ದರು.  ನಂತರದ ದಿನಗಳಲ್ಲಿ ಬೇರೆ ಕಾರಣಗಳಿಂದ ಇವರು ಕಲ್ಯಾಣಕ್ಕೆ ತೆರಳಿ ಬಸವಣ್ಣನವರ ಒಡನಾಡಿಯಾದರು. ವೈವಾಹಿಕ ಜೀವನ ಮತ್ತು ವೈರಾಗ್ಯ ಘಟ್ಟಿವಾಳಯ್ಯನವರು ಆರಂಭದಲ್ಲಿ ಮದುವೆಯಾಗಿ ಸಂಸಾರ ಹೂಡಿದ್ದರು. ಆದರೆ ಇವರ ಹೆಂಡತಿಗೆ ಇವರ ಆಧ್ಯಾತ್ಮಿಕ ಒಲವು ಮತ್ತು ಭಕ್ತಿಯ ತೀವ್ರತೆ ಇಷ್ಟವಾಗಲಿಲ್ಲ. ಅವಳು ಲೌಕಿಕ ಸುಖ ಮತ್ತು ಸಂಪತ್ತಿಗೆ ಆಸೆಪಟ್ಟು ಅನ್ಯ ಪುರುಷನ ಸಂಗ ಬೆಳೆಸಿದಳು ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದ ಆಕರಗಳು ಉಲ್ಲೇಖಿಸುತ್ತವೆ. • ವೈರಾಗ್ಯದ ಹಾದಿ:  ಹೆಂಡತಿಯ ಈ ವಿಷಮ ನಡವಳಿಕೆ ಮತ್ತು ಕೌಟುಂಬಿಕ ಕ್ಲೇಶಗಳಿಂದ ಸಂಪೂರ್ಣವಾಗಿ ಬೇಸತ್ತ ಮುದ್ದಣನು ಲೌಕಿಕ ಸಂಸಾರವನ್ನು ತೊರೆದು ತೀವ್ರ ವೈರಾಗ್ಯ ತಳೆದರು. ನಂತರ ಕಲ್ಯಾಣಕ್ಕೆ ಬಂದು ‘ಘಟ್ಟಿವಾಳಯ್ಯ’ ಎಂಬ ಹೆಸರಿನಿಂದ ಪ್ರಸಿದ್ಧ ಶರಣರಾದರು.  ಸಂಸಾರದ ವಿಷಮ ಪರಿಸ್ಥಿತಿಯಿಂದ ಬೇಸತ್ತು ಸಂಪೂರ್ಣ ವೈರಾಗ್ಯ ತಳೆದ ಇವರು ಕಲ್ಯಾಣದ ಶಿವಶರಣರ ಒಡನಾಡಿಯಾದರು. ಇವರ ಜೀವನ ಮತ್ತು ವ್ಯಕ್ತಿತ್ವದ ಪ್ರಮುಖ ವಿವರಗಳು ಇಲ್ಲಿವೆ: • ಕಾಯಕ:  ಭಕ್ತನಾಗಿ ಮದ್ದಳೆಯನ್ನು ಬಾರಿಸುತ್ತಾ, ಶಿವಾನುಭವವನ್ನು ಸಾರುವ ನರ್ತನ ಕಾಯಕವನ್ನು ಮಾಡುತ್ತಿದ್ದರು. ನರ್ತನ ಕಾಯಕದಲ್ಲಿ ತೊಡಗಿರುವಾಗಲೇ ಇವರು ಕೊನೆಯುಸಿರೆಳೆದರು ಎಂದು ಹೇಳಲಾಗುತ್ತದೆ. ಕೆಲವೊಂದು ಆಕರಗಳ ಪ್ರಕಾರ ಗಂಧ ತೇಯುವುದು ಕೂಡ ಇವರ ಕಾಯಕವಾಗಿತ್ತು. • ಅಂಕಿತನಾಮ: ಇವರ ವಚನಗಳ ಅಂಕಿತನಾಮ “ಚಿಕ್ಕಯ್ಯಪ್ರಿಯ ಸಿದ್ದಲಿಂಗ” ಅಥವಾ “ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು”. • ವಚನ ಸಾಹಿತ್ಯ: ಕನ್ನಡದಲ್ಲಿ ಇವರ ಸುಮಾರು ೧೪೭ ರಿಂದ ೧೫೦ ವಚನಗಳು ಲಭ್ಯವಾಗಿವೆ. ಇವರ ವಚನಗಳಲ್ಲಿ ತತ್ವನಿಷ್ಠೆ, ಸತ್ಯನಿಷ್ಠುರತೆ ಮತ್ತು ಸಮಾಜದ ಡೋಂಗುತನವನ್ನು ತಿದ್ದುವ ವೈರಾಗ್ಯದ ಭಾವನೆಗಳು ಎದ್ದು ಕಾಣುತ್ತವೆ. • ಪ್ರಶಂಸೆ: ಘಟ್ಟಿವಾಳಯ್ಯನವರ ಘನ ವ್ಯಕ್ತಿತ್ವವನ್ನು ಅಲ್ಲಮಪ್ರಭು, ಬಸವಣ್ಣ, ಮೋಳಿಗೆ ಮಾರಯ್ಯ ಮುಂತಾದ ಶ್ರೇಷ್ಠ ಶರಣರು ಕೊಂಡಾಡಿದ್ದಾರೆ. ಶರಣ  ಧರ್ಮದ ಪ್ರಮುಖ ಗ್ರಂಥವಾದ ‘ಶೂನ್ಯ ಸಂಪಾದನೆಯಲ್ಲಿ ಇವರಿಗಾಗಿಯೇ ಒಂದು ಪ್ರತ್ಯೇಕ ಅಧ್ಯಾಯವನ್ನು ಮೀಸಲಿಡಲಾಗಿದೆ. ಘಟ್ಟಿವಾಳಯ್ಯನವರ ಎರಡು ಪ್ರಮುಖ ವಚನಗಳು ಮತ್ತು ಅವುಗಳ ಸರಳ ವಿಶ್ಲೇಷಣೆ ಇಲ್ಲಿದೆ: ವಚನ ೧ ಅಟ್ಟು ಉಣ್ಣಬಲ್ಲವಂಗೆ ಅಡಿಗೆಯ ಹಂಗೇಕೆ? ಬೆಟ್ಟಿ ಬೆಳಗಬಲ್ಲವಂಗೆ ಕತ್ತಲೆಯ ಹಂಗೇಕೆ? ದಿಟ್ಟನಾದ ಭಕ್ತಂಗೆ ಭವದ ಹಂಗೇಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು. ವಿಶ್ಲೇಷಣೆ ಚಿಂತನೆ ಈ ವಚನದಲ್ಲಿ ಘಟ್ಟಿವಾಳಯ್ಯನವರು ಸ್ವಾವಲಂಬನೆ ಮತ್ತು ಆಧ್ಯಾತ್ಮಿಕ ದೃಢತೆಯನ್ನು ಸುಂದರವಾದ ಉಪಮೆಗಳ ಮೂಲಕ ವಿವರಿಸಿದ್ದಾರೆ. • ಸ್ವಾವಲಂಬನೆ: ತಾನೇ ಸ್ವತಃ ಅಡುಗೆ ಮಾಡಿ ಉಣ್ಣಲು ತಿಳಿದಿರುವವನಿಗೆ ಮತ್ತೊಬ್ಬರ ಅಡುಗೆಯ ಹಂಗು (ಆಶ್ರಯ) ಇರುವುದಿಲ್ಲ. ತಾನೇ ದೀಪವನ್ನು ಹಚ್ಚಿ ಬೆಳಕನ್ನು ಮೂಡಿಸಬಲ್ಲವನಿಗೆ ಕತ್ತಲೆಯ ಭಯವಾಗಲಿ ಅಥವಾ ಕತ್ತಲೆಯನ್ನು ಓಡಿಸಲು ಬೇರೆಯವರ ಸಹಾಯವಾಗಲಿ ಬೇಕಿರುವುದಿಲ್ಲ. • ಆಧ್ಯಾತ್ಮಿಕಸಂದೇಶ:  ಅದೇ ರೀತಿ, ಭಕ್ತಿಯ ಮಾರ್ಗದಲ್ಲಿ “ದಿಟ್ಟ” (ದೃಢವಾದ ನಿಷ್ಠೆ ಉಳ್ಳವನು) ಆದವನಿಗೆ ಸಂಸಾರದ ಮಾಯೆ ಅಥವಾ ಭವಬಂಧನಗಳ ಭಯವಿರುವುದಿಲ್ಲ. ತಾನೇ ಸ್ವತಃ ಅರಿವನ್ನು ಪಡೆದ ಭಕ್ತನು ಲೌಕಿಕ ಜಗತ್ತಿನ ಹಂಗಿಲ್ಲದೆ ಮುಕ್ತಿಯನ್ನು ಹೊಂದುತ್ತಾನೆ ಎಂಬುದನ್ನು ವಚನಕಾರರು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ವಚನ ೨ ಜ್ಞಾನಿಯೆಂಬೆನೆ ಕರ್ಮ ಬಿಡದು, ಭಕ್ತನೆಂಬೆನೆ ಆಶೆ ಬಿಡದು, ಯೋಗಿಯೆಂಬೆನೆ ಅಂಗ ಬಿಡದು, ಈ ಮೂವರ ನಡಾವಳಿ ಒಂದೂ ಕಾಣೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು. ವಿಶ್ಲೇಷಣೆ ಸಾರ. ಈ ವಚನದಲ್ಲಿ ಘಟ್ಟಿವಾಳಯ್ಯನವರು ಸಮಾಜದಲ್ಲಿ ಕಾಣಸಿಗುವ ಡೋಂಗುತನ ಮತ್ತು ವೈಚಾರಿಕ ಅಸ್ಥಿರತೆಯನ್ನು ತೀಕ್ಷ್ಣವಾಗಿ ವಿಮರ್ಶಿಸಿದ್ದಾರೆ. • ನಕಲಿ ವೇಷಧಾರಣೆ: ಜಗತ್ತಿನಲ್ಲಿ ತಾವೇ ‘ಜ್ಞಾನಿಗಳು’ ಎಂದು ಬೀಗುವವರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರು ಇನ್ನೂ ಲೌಕಿಕ ಕರ್ಮಗಳಲ್ಲಿಯೇ ಮುಳುಗಿರುತ್ತಾರೆ. ತಾವು ದೊಡ್ಡ ‘ಭಕ್ತರು’ ಎಂದು ತೋರ್ಪಡಿಸಿಕೊಳ್ಳುವವರ ಮನಸ್ಸಿನಲ್ಲಿ ಆಶೆ, ಆಕಾಂಕ್ಷೆಗಳು ತುಂಬಿರುತ್ತವೆ. ಇನ್ನು ತಾವೇ ‘ಯೋಗಿಗಳು’ ಎಂದು ಕರೆಯಿಸಿಕೊಳ್ಳುವವರಿಗೆ ದೇಹದ ಮೇಲಿನ ಮೋಹ (ಅಂಗಸುಖ) ಹೋಗಿರುವುದಿಲ್ಲ. • ಅಂತರಂಗದ ಶುದ್ಧಿ:  ಕೇವಲ ಬಾಹ್ಯ ವೇಷದಿಂದ ಜ್ಞಾನಿ, ಭಕ್ತ ಅಥವಾ ಯೋಗಿಯಾಗಲು ಸಾಧ್ಯವಿಲ್ಲ. ನುಡಿದಂತೆ ನಡೆಯದ ಈ ಮೂವರ ನಡವಳಿಕೆಯೂ ವ್ಯರ್ಥ ಎಂದು ಮಾರ್ಮಿಕವಾಗಿ ಹೇಳುತ್ತಾ, ಅಂತರಂಗ ಮತ್ತು ಬಹಿರಂಗದ ಶುದ್ಧಿಯೇ ನಿಜವಾದ ಧರ್ಮ ಎಂಬುದನ್ನು ಇಲ್ಲಿ ಪ್ರತಿಪಾದಿಸಿದ್ದಾರೆ. ಕಲ್ಯಾಣ ಕ್ರಾಂತಿಯ ನಂತರ ಶರಣರು ಅಲ್ಲಮ ಬಸವಣ್ಣ ಚೆನ್ನಬಸವಣ್ಣ ಯಾವ ಯಾವ ಊರಿನಲ್ಲಿ ಐಕ್ಯವಾದರು ಎಂಬುದನ್ನು ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ. ತಾನು ಕೈಕೊಂಡ ನೃತ್ಯ ಕಾಯಕದಲ್ಲಿ ನಿರತನಾಗಿದ್ದಾಗಲೇ ಬಯಲಾದನು ಎಂದು ತಿಳಿದು ಬರುತ್ತದೆ. ______________________ ಡಾ ಶಶಿಕಾಂತ ಪಟ್ಟಣ ಅಧ್ಯಕ್ಷರು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ರಾಮದುರ್ಗ ಪುಣೆ ೯೫೫೨೦೦೨೩೩೮

Read Post »

ಕಾವ್ಯಯಾನ

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ “ಮನವೆಂಬ ಮನೆಯೊಳಗೆ”

ಕಾವ್ಯ ಸಂಗಾತಿ ಡಾ. ಸುಮಂಗಲಾ ಅತ್ತಿಗೇರಿ “ಮನವೆಂಬ ಮನೆಯೊಳಗೆ” ೧ಮನವೆಂಬ ಮನೆಯಲ್ಲಿಎದ್ದು ನಿಂತಿವೆ ಗೋಡೆಗಳು! ಹೃದಯದ ಹಜಾರದಲ್ಲಿಆಗಾಗ ಎಲ್ಲ ಕೂತುಔತಣಕೂಟ ಮಾಡಿನಕ್ಕು ನಲಿಯುತ್ತಿದ್ದವಿಶಾಲ ಜಾಗವೀಗ ಪಾಲಾಗಿದೆಅವರಿಗಿಷ್ಟು ಇವರಿಗಿಷ್ಟು ಅತ್ತಕಡೆ ಇವರುಇತ್ತ ಕಡೆ ಅವರುಬಾರದಂತೆ ಎಲ್ಲರೂ ಸ್ವಯಂಕೃತವಾಗಿಅಲಿಖಿತ ನಿಯಮ ಜಾರಿಗೊಳಿಸಿಕೊಂಡಿದ್ದಾರೆ! ಮನದ ಗೋಡೆಯ ನಡುವೆಬಿರುಕು ಬಿಟ್ಟಿವೆ! ೨ಮತ್ತೆಆ ಬಿರುಕಿನ ನಡುವೆಪ್ರೀತಿ ಸ್ನೇಹಗಳಬೀಜ ಬಿತ್ತಿನಲುಮೆಯಿಂದ ನೀರೆರೆದುಹೂವು ಅರಳಿಸಬಹುದೇ? ಮತ್ತೆ ಆ ಮನೆಯಬೃಂದಾವನದ ತುಂಬಾಸ್ನೇಹದ ಬಳ್ಳಿ ಹಬ್ಬಿಹಸಿರಾಗಿ ನಳನಳಿಸಬಹುದೇ? ೩ಬಿಟ್ಟರೆ ಆದೀತು!!ವಾದ -ಪ್ರತಿವಾದಗಳರಾಗ-ದ್ವೇಷಗಳಅಸಹನೆ-ಅಸೂಹೆಗಳಮದ-ಮತ್ಸರಗಳಶುಚಿಗೊಳಿಸಿಶುಭ್ರಗೊಳಿಸಿದರಾದೀತು! ಮನವೆಂಬ ಮನೆಯೊಳಗೆಸ್ನೇಹದ ಮಂದಿರ !ಹೃದಯದ ಹಜಾರದತುಂಬ ಸೂಸುವುದುಹಿತವಾದ ಸುಂದರಸುಗಂಧದ ಗಾಳಿ  ಡಾ. ಸುಮಂಗಲಾ ಅತ್ತಿಗೇರಿ “

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ “ಮನವೆಂಬ ಮನೆಯೊಳಗೆ” Read Post »

ಇತರೆ

“ಕ ಸಾ ಪ ಅಧ್ಯಕ್ಷಗಿರಿಗೆ ಜಾಣಗೆರೆಯೇ ಸೂಕ್ತ ಗರಿ”ಹಿರಿಯೂರು ರಾಘವೇಂದ್ರ

ವ್ಯಕ್ತಿ ಸಂಗಾತಿ ಹಿರಿಯೂರು ರಾಘವೇಂದ್ರ “ಕ ಸಾ ಪ ಅಧ್ಯಕ್ಷಗಿರಿಗೆ ಜಾಣಗೆರೆಯೇ ಸೂಕ್ತ ಗರಿ” ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ  ಸ್ಥಾನಕ್ಕೆ ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಈಗಾಲೆ ಸರ್ಕಾರ ಚುನಾವಣಾಧಿಕಾರಿಯನ್ನು ನೇಮಕ ಮಾಡಿದೆ. ಮತಾದಾರರ ಪಟ್ಟಿ‌ ಪರಿಷ್ಕರಣೆ ಆಗಿ, ದಿನಾಂಕ ಘೋಷಣೆಯಷ್ಟೇ ಬಾಕಿ ಉಳಿದಿದೆ.ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಸಾಹಿತಿ, ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ವೈದ್ಯೆ ವಿಜಯಲಜ್ಷ್ಮಿ ಬಾಳೆಕುಂದ್ರೆ, ನಿವೃತ್ತ ಅಧಿಕಾರಿ ಸಿ. ಸೋಮಶೇಖರ ಮೂರು ಹೆಸರುಗಳು ಸಧ್ಯ ಚಾಲ್ತಿಯಲ್ಲಿವೆ.ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ,ಮಕ್ಕಳ ಹೃದ್ರೋಗ ತಜ್ಞೆ,‘ದೊಡ್ಡ ಪರಂಪರೆಯುಳ್ಳ‌ ಪರಿಷತ್ತಿಗೆ ಇದುವರೆವಿಗೂ ಮಹಿಳೆಯೊಬ್ಬರು ಅಧ್ಯಕ್ಷರಾಗಿಲ್ಲ, ಈ ಬಾರಿ ನನಗೆ ಅವಕಾಶ ಮಾಡಿಕೊಡಿ’ಎನ್ನುತ್ತಿದ್ದಾರೆ.ಡಾ. ಸಿ. ಸೋಮಶೇಖರ್ನಿವೃತ್ತ ಐಎಎಸ್ ಅಧಿಕಾರಿ ಆಗಿದ್ದವರು,‘ಅಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಸೇವೆ ಈ ಬಾರಿ ಆ ಸ್ಥಾನಕ್ಕೆ ನಾನೇ ಸೂಕ್ತ’ ಎಂದಿದ್ದಾರೆ.ಒಬ್ಬರು ವೈದ್ಯೆ, ಇನ್ನೊಬ್ಬರು ಸರಕಾರಿ ಅಧಿಕಾರಿಯಾಗಿ ಅಧಿಕಾರ ಚಲಾಯಿಸಿದವರು.ಇವರಿಬ್ಬರನ್ನೂ ಒಂದು ಪಕ್ಕಕ್ಕೆ ಸರಿಸಿ ಮತ್ತೊಬ್ಬರತ್ತ ಗಮನಿಸಿದರೆ ಕಂಡುಬರುವುದುಜಾಣಗೆರೆಯ ಜಾಣ ಜಾಣಗೆರೆ ವೆಂಕಟರಾಮಯ್ಯ ನವರು. ಕತೆ, ಕಾದಂಬರಿ, ವ್ಯಕ್ತಿಚಿತ್ರ, ಆತ್ಮಕತೆ ಬರೆದು, ಸಾಹಿತ್ಯ ಸೇವೆಗೆ ಹಲವು ಪ್ರಶಸ್ತಿ, ಪುರಸ್ಕಾರ ಪಡೆದವರು. ಅವರು ಪತ್ರಕರ್ತರಾಗಿ ಸೇವೆ ಸಲ್ಲಿಸಿದ  ಹಿರಿಯರು.ಕನ್ನಡ ಹಾಗೂ  ಸಮಾಜದ ಹಿತಕ್ಕಾಗಿ ಮಿತಿಮೀರಿ ತುಡಿದವರು.ದುಡಿದವರು.ಅದಕ್ಕಿಂತಲೂ ಮಿಗಿಲಾಗಿ ಎಲ್ಲ ಬಗೆಯ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕನ್ನಡವನ್ನೇ ಹಾಸಿ, ಹೊದ್ದು, ಮಗ್ಗಲು ಬದಲಿಸಿದೇ ಅಹರ್ನಿಶಿ ದುಡಿದು, ಯಾವುದೇ ಆಮಿಷಗಳಿಗೂ ತಮ್ಮ ಧ್ಯೇಯ, ನಿಷ್ಠೆ ಬದಲಿಸದೆ ಮುನ್ನುಗ್ಗುತ್ತಿರುವವರು.ಅವರಿಗೆ,‘ಕನ್ನಡವೇ ಬದುಕು.ಅವರ ಉಸಿರು ಇರುವುದೇ ಕನ್ನಡಕ್ಕಾಗಿ.ತಮ್ಮ ಕನ್ನಡ ಧ್ಯೇಯೋದ್ದೇಶಗಳನ್ನು ಅಕ್ಷರಶಃ ಅಂಕುಶವಾಗಿಸಿಕೊಂಡು ಬದುಕುತ್ತಿರುವ ಈ ಕನ್ನಡತನದ ಭೀಷ್ಮ ಜಾಣಗೆರೆ,ಕ ಸಾ ಪ ದ ಅಧ್ಯಕ್ಷ ಗಿರಿಗೆ ಅತಿ ಸೂಕ್ತ ಗರಿ.ಅವರ ಬದುಕಿನ ಗುರಿಯೇ ಕನ್ನಡ.ಅವರ ಉಸಿರೇ ಕನ್ನಡ.ಅವರ ನಡೆ ನುಡಿಯೇ ಕನ್ನಡ.ಅವರ ಭವಿಷ್ಯವೇ ಕನ್ನಡ.ಕನ್ನಡ, ಕನ್ನಡತನ ಬಿಟ್ಟು ಅವರಿಗೆ ಬೇರೊಂದು ಗೊತ್ತಿಲ್ಲ.ಬೇರೆಯೇ ಆದ ಗತ್ತು ಅವರಿಗೂ ಇಲ್ಲ.ಸರ್ಕಾರಿ ಅಧಿಕಾರಿಗಳಾಗಿ, ಮಾಜಿಯಾದವರಿಗೆ, ನಮಸ್ಕಾರಗಳನ್ನೇ ಸುತ್ತ ಮುತ್ತ ಆಲಿಸಿಕೊಂಡವರಿಗೆ, ಅಧಿಕಾರಿಗಳಾಗಿ ಅಧಿಕಾರ ಚಲಾಯಿಸಿ ಮಾತ್ರ  ಗೊತ್ತಿರುತ್ತದೆ.‘ನಿವೃತ್ತಿ’ಯ ನಂತರವಷ್ಟೇ ಅವರಿಗೆ ಕನ್ನಡದ ಕಂಪಿನ ಬಗ್ಗೆ ಒಲವು ಮೂಡಿರುತ್ತದೆ !ಆದರೆ ಸದಾ, ಸರ್ವದಾ ಕನ್ನಡಿಗರ ಜೊತೆ ಬೆರೆತು,ಅವರನ್ನು ಅರಿತು, ಅವರಿಗೆ ದುಡಿಯುವ ದುಡಿತ ಗೊತ್ತಿರುವುದಿಲ್ಲ.ಆದರೆ ‘ಜಾಣ’ಗೆರೆ ಹಾಗಲ್ಲ,ಕನ್ನಡಕ್ಕಾಗಿ ಬೀದಿಗಿಳಿದು,ಕನ್ನಡಕ್ಕಾಗಿಯೇ ಹಂಬಲಿಸಿ ,‘ಕನ್ನಡದ ಚಿತ್ರಾನ್ನವೇ ಮೃಷ್ಟಾನ್ನ’ಎಂದು ಕನ್ನಡವನ್ನೇ ಕಣ್ಣಿಗೊತ್ತಿಕೊಂಡು , ಕನ್ನಡ ಪರ ಹೋರಾಟಗಾರರ ಕಣ್ತೆರೆಸಿದವರು ಜಾಣಗೆರೆ ವೆಂಕಟರಾಮಯ್ಯ.ಅವರಿಗೆ ಕೊಡುವ ಪ್ರತಿಯೊಂದು ಓಟಿಗೂ ಸಾವಿರ, ಸಾವಿರ ನೋಟಿನ ಮೌಲ್ಯವಿರುತ್ತದೆ.ಅವರ ಗೆಲುವು ಕ ಸಾ ಪ ದ ಉದ್ದೇಶದ ನೈಜ ಗೆಲುವಾಗುತ್ತದೆ.ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧಿಕಾರ ಅನುಭವಿಸಿದ ಅಧಿಕಾರಸ್ಥರು ಬೇಡವೇ ಬೇಡ,ಕನ್ನಡದ ಪರವಾದ ನಿಜ ಸೇವಕರು ಬೇಕು,ಅದಕ್ಕಾಗಿ ಆ ಪರಮ ಪವಿತ್ರ ಸ್ಥಾನಕ್ಕೆ ಜಾಣಗೆರೆಯವರೇ ಬೇಕು ಎಂಬುದು ಕನ್ನಡಿಗರ ಆಶಯ.ಈ ಬಾರಿಯಾದರೂ ಸಾಹಿತಿ, ಕನ್ನಡಪರ ಹೋರಾಟಗಾರನನ್ನೇ ಅಧ್ಯಕ್ಷಗಿರಿಗೆ ಚುನಾಯಿಸಿ.ಜಾಣಗೆರೆಯ ಬದುಕಿನ ಜಾಡನ್ನು ಗುರುತಿಸಿ, ಗೌರವಿಸಿ, ಅಧ್ಯಕ್ಷರನ್ನಾಗಿಸಿ ಎಂಬುದು ನನ್ನೊಬ್ಬನ ಒಡಲ ಅನಿಸಿಕೆಯಲ್ಲ, ಕನ್ನಡಿಗರೆಲ್ಲರ ಪರವಾದ ನಮ್ರ ವಿನಂತಿ.ಈ ಬಾರಿಯ ಗೆಲುವು ಕನ್ನಡಿಗನ ಗೆಲುವಾಗಲಿ.ಜೈ ಭುವನೇಶ್ವರಿ. ಹಿರಿಯೂರು ರಾಘವೇಂದ್ರಲೇಖಕ, ಕಿರುತೆರೆ ಕಲಾವಿದ, ಕನ್ನಡಪರ ಚಿಂತಕ.

“ಕ ಸಾ ಪ ಅಧ್ಯಕ್ಷಗಿರಿಗೆ ಜಾಣಗೆರೆಯೇ ಸೂಕ್ತ ಗರಿ”ಹಿರಿಯೂರು ರಾಘವೇಂದ್ರ Read Post »

ಕಥಾಗುಚ್ಛ

“ನನ್ನಂತೆ ಅವಳು ಪ್ರೀತಿಸುವಳು” ಒಂದು ಮೌನ ಪ್ರೇಮಕಥೆ ಪೃಥ್ವಿರಾಜ್‌ ಟಿ.ಬಿ.

ಕಥಾ ಸಂಗಾತಿ ಪೃಥ್ವಿರಾಜ್‌ ಟಿ.ಬಿ. “ನನ್ನಂತೆ ಅವಳು ಪ್ರೀತಿಸುವಳು” ಒಂದು ಮೌನ ಪ್ರೇಮಕಥೆ ನನ್ನಂತೆ ಅವಳು ಪ್ರೀತಿಸುವಳು ಒಂದು ಮೌನ ಪ್ರೇಮಕಥೆ ಅಧ್ಯಾಯ 1 : ಅವಳೆಂದರೆ ನನಗಿಷ್ಟ ಅವಳನ್ನು ಮೊದಲ ಬಾರಿ ನೋಡಿದಾಗಲೇ ಪ್ರೀತಿಯಾಯಿತು ಎಂದು ಹೇಳಿದರೆ ಅದು ಸುಳ್ಳಾಗಬಹುದು. ಏಕೆಂದರೆ ಪ್ರೀತಿ ಕೆಲವೊಮ್ಮೆ ಮೊದಲ ನೋಟದಲ್ಲೇ ಹುಟ್ಟುವುದಿಲ್ಲ. ಒಬ್ಬರ ಮಾತು ಕೇಳುತ್ತಾ…ಅವರ ನಗು ನೋಡುತ್ತಾ…ಅವರು ಕೋಪಗೊಂಡಾಗಲೂ ಸುಂದರವಾಗಿ ಕಾಣಿಸುತ್ತಾರೆ ಎಂದು ಅನಿಸುತ್ತಾ…ನಮ್ಮ ಮಾತಿಗಿಂತ ಅವರ ಮೌನವನ್ನು ಅರ್ಥಮಾಡಿಕೊಳ್ಳಲು ಶುರುವಾದಾಗ… ಎಲ್ಲೋ ಒಂದು ಕಡೆ ಪ್ರೀತಿ ಹುಟ್ಟಿರುತ್ತದೆ. ನನ್ನ ಕಥೆಯಲ್ಲೂ ಹಾಗೆಯೇ ಆಯಿತು. ಅವಳು ನನ್ನ ಜೀವನಕ್ಕೆ ಬಂದದ್ದು ದೊಡ್ಡ ಘಟನೆ ಏನೂ ಆಗಿರಲಿಲ್ಲ. ಒಂದು ಸಾಮಾನ್ಯ ದಿನ. ಆದರೆ ಆ ಸಾಮಾನ್ಯ ದಿನವೇ ನನ್ನ ಜೀವನದ ಅತ್ಯಂತ ವಿಶೇಷ ದಿನವಾಗುತ್ತದೆ ಎಂದು ನನಗೆ ಆಗ ತಿಳಿದಿರಲಿಲ್ಲ. ಅವಳ ಜೊತೆ ಮಾತನಾಡಲು ಶುರು ಮಾಡಿದ ಮೇಲೆ ನನಗೆ ಒಂದು ವಿಚಿತ್ರವಾದ ಅಭ್ಯಾಸ ಬೆಳೆದಿತ್ತು. ಅವಳು ಆನ್‌ಲೈನ್ ಬಂದಿದ್ದಾಳಾ ಎಂದು ನೋಡುವುದು. ಅವಳ ಮೆಸೇಜ್ ಬಂದಿದೆಯಾ ಎಂದು ಫೋನ್ ನೋಡುವುದು. ಅವಳು “ಊಟ ಆಯ್ತಾ?” ಎಂದು ಕೇಳಿದರೆ, ಆ ಒಂದು ಪ್ರಶ್ನೆಯನ್ನೇ ಇಡೀ ದಿನ ನೆನಪಿಸಿಕೊಳ್ಳುವುದು. ಅವಳು ಬೇಸರದಲ್ಲಿದ್ದರೆ ನನ್ನ ಮನಸ್ಸಿಗೂ ಬೇಸರವಾಗುವುದು. ಅವಳು ಖುಷಿಯಾಗಿದ್ದರೆ ಕಾರಣವೇ ಗೊತ್ತಿಲ್ಲದೆ ನಾನೂ ನಗುವುದು. ಅದು ಸ್ನೇಹವೋ… ಅಥವಾ ಪ್ರೀತಿಯೋ… ನನಗೆ ಗೊತ್ತಿರಲಿಲ್ಲ. ಆದರೆ ಒಂದು ದಿನ ನನ್ನ ಮನಸ್ಸು ನನಗೇ ಒಂದು ಪ್ರಶ್ನೆ ಕೇಳಿತು. “ಅವಳು ನಿನ್ನ ಜೀವನದಲ್ಲಿ ಇಲ್ಲದಿದ್ದರೆ?” ಆ ಪ್ರಶ್ನೆಗೆ ಉತ್ತರ ಹುಡುಕಲು ನನಗೆ ಸಾಧ್ಯವಾಗಲಿಲ್ಲ. ಅಲ್ಲಿಯೇ ನನಗೆ ನನ್ನ ಉತ್ತರ ಸಿಕ್ಕಿತ್ತು. ನಾನು ಅವಳನ್ನು ಪ್ರೀತಿಸುತ್ತಿದ್ದೆ. ಅಧ್ಯಾಯ 2 : “ನನ್ನ ಉತ್ತರ NO ಆಗಿರಬೇಕು…” ಪ್ರೀತಿಯನ್ನು ಹೇಳಿಕೊಳ್ಳುವುದು ಸುಲಭವಲ್ಲ. ಎಷ್ಟು ಧೈರ್ಯಶಾಲಿಯಾಗಿದ್ದರೂ, ಮನಸ್ಸಿನ ಮಾತನ್ನು ಎದುರಿಗಿರುವ ವ್ಯಕ್ತಿಯ ಮುಂದೆ ಇಡುವ ಕ್ಷಣದಲ್ಲಿ ಹೃದಯ ಮಾತ್ರ ಹೆದರಿಬಿಡುತ್ತದೆ. ನಾನೂ ಹೆದರಿದ್ದೆ. ಅವಳಿಗೆ ನನ್ನ ಪ್ರೀತಿ ಹೇಳಬೇಕೆಂದು ನಿರ್ಧರಿಸಿದ ದಿನ ನನ್ನ ಕೈಯಲ್ಲಿದ್ದ ಫೋನ್ ಕೂಡ ಭಾರವಾಗಿತ್ತು. ಎಷ್ಟೋ ಬಾರಿ ಟೈಪ್ ಮಾಡಿದೆ. “ನನಗೆ ನಿನ್ನ ಮೇಲೆ ಪ್ರೀತಿ ಇದೆ…” ಅಳಿಸಿದೆ. ಮತ್ತೆ ಬರೆದೆ. “ನಿನ್ನನ್ನು ನಾನು ಇಷ್ಟಪಡುತ್ತೇನೆ…” ಮತ್ತೆ ಅಳಿಸಿದೆ. ಕೊನೆಗೆ ಏನೋ ಒಂದು ಧೈರ್ಯ ಮಾಡಿ ಅವಳಿಗೆ ಹೇಳಿದೆ. ಆದರೆ ಹೇಳುವ ಮೊದಲು ಒಂದು ಮಾತು ಹೇಳಿದ್ದೆ. “ನಾನು ಹೇಳುವುದಕ್ಕೆ ನಿನ್ನ ಉತ್ತರ NO ಆಗಿರಬೇಕು ಅಂತ ಹೇಳಿ… ನಿನಗೆ ನನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಿದ್ದೇನೆ.” ಅವಳು ಬಹುಶಃ ನನ್ನ ಮಾತಿನ ಅರ್ಥವನ್ನು ಅರ್ಥ ಮಾಡಿಕೊಂಡಿದ್ದಳು. ನಾನು ಪ್ರೀತಿಯನ್ನು ಒತ್ತಾಯವಾಗಿ ಕೇಳುತ್ತಿರಲಿಲ್ಲ. ನನ್ನ ಮನಸ್ಸಿನಲ್ಲಿದ್ದುದನ್ನು ಅವಳಿಗೆ ತಿಳಿಸುತ್ತಿದ್ದೆ. ಅವಳಿಗೆ ಉತ್ತರ ಕೊಡಲು ಸ್ವಾತಂತ್ರ್ಯವಿತ್ತು. ನಾನು ಕಾಯುತ್ತಿದ್ದೆ. ಅವಳು ಮೌನವಾಗಿದ್ದಳು. ಆ ಮೌನದೊಳಗೆ ಎಷ್ಟೋ ಮಾತುಗಳಿದ್ದವು. ನಾನು ಅವಳ ಮುಖವನ್ನು ನೋಡುತ್ತಿದ್ದೆ. ಅವಳ ಕಣ್ಣಲ್ಲಿ ಒಂದು ಭಾವನೆ ಇತ್ತು. ಅದು “ಇಲ್ಲ” ಎಂಬ ಭಾವನೆಯಂತೆ ಕಾಣಲಿಲ್ಲ. ಆದರೆ “ಹೌದು” ಎಂದು ಹೇಳುವ ಧೈರ್ಯವೂ ಇರಲಿಲ್ಲ. ಕೊನೆಗೆ ಅವಳು ಹೇಳಿದಳು— “ನಾನು ಏನು ಹೇಳಬೇಕು ಅಂತ ನನಗೆ ಗೊತ್ತಿಲ್ಲ…” ನಾನು ನಗುತ್ತಾ ಹೇಳಿದೆ— “ಪರವಾಗಿಲ್ಲ.” ಆದರೆ ಒಳಗಿನಿಂದ ನನ್ನ ಹೃದಯ ಮಾತ್ರ ಹೇಳುತ್ತಿತ್ತು— “ನನಗೆ ಗೊತ್ತು… ನಿನಗೆ ಏನು ಹೇಳಬೇಕು ಅಂತ.” ಅಧ್ಯಾಯ 3 : ಅವಳ ಮೌನದೊಳಗಿನ ಉತ್ತರ ಅವಳು ನನ್ನನ್ನು ಇಷ್ಟಪಡುತ್ತಾಳೆ ಎಂಬುದು ನನಗೆ ಗೊತ್ತಿತ್ತು. ಅವಳು ಹೇಳಿರಲಿಲ್ಲ. ಆದರೆ ಪ್ರೀತಿಗೆ ಯಾವಾಗಲೂ ಮಾತಿನ ಅವಶ್ಯಕತೆ ಇರುವುದಿಲ್ಲ. ನಾನು ಬೇಸರದಲ್ಲಿದ್ದಾಗ ಅವಳಿಗೆ ಗೊತ್ತಾಗುತ್ತಿತ್ತು. ನಾನು ಮೌನವಾಗಿದ್ದಾಗ ಅವಳು ಕೇಳುತ್ತಿದ್ದಳು— “ಏನಾಯ್ತು?” “ಏನಿಲ್ಲ” ಎಂದರೆ, “ನಿಜ ಹೇಳು…” ಎಂದು ಮತ್ತೆ ಕೇಳುತ್ತಿದ್ದಳು. ನಾನು ಊಟ ಮಾಡದೇ ಇದ್ದರೆ ಬೈಯುತ್ತಿದ್ದಳು. ನಾನು ತಡವಾಗಿ ಮನೆಗೆ ಹೋದರೆ ವಿಚಾರಿಸುತ್ತಿದ್ದಳು. ನನ್ನ ಸಣ್ಣ ಸಣ್ಣ ವಿಷಯಗಳನ್ನು ನೆನಪಿಟ್ಟುಕೊಳ್ಳುತ್ತಿದ್ದಳು. ನನ್ನ ಕನಸುಗಳ ಬಗ್ಗೆ ಕೇಳುತ್ತಿದ್ದಳು. ನಾನು ಸೋತಾಗ ಧೈರ್ಯ ಹೇಳುತ್ತಿದ್ದಳು. ನಾನು ಗೆದ್ದಾಗ ನನ್ನಿಗಿಂತ ಹೆಚ್ಚು ಖುಷಿಪಡುತ್ತಿದ್ದಳು. ಹಾಗಾದರೆ ಇದು ಏನು? ಇದು ಕೇವಲ ಸ್ನೇಹವೇ? ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಒಂದು ದಿನ ನಾನು ಅವಳಿಗೆ ಕೇಳಿದೆ— “ನಿನಗೆ ನನ್ನ ಮೇಲೆ ಇಷ್ಟ ಇದೆಯಾ?” ಅವಳು ಬಹಳ ಹೊತ್ತು ಮೌನವಾಗಿದ್ದಳು. ನಂತರ ನಿಧಾನವಾಗಿ ಹೇಳಿದಳು— “ಕೆಲವು ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದರೂ ಹೇಳಲು ಆಗುವುದಿಲ್ಲ…” ಆ ಮಾತು ನನ್ನ ಹೃದಯಕ್ಕೆ ನೇರವಾಗಿ ಬಂದು ತಾಕಿತು. ನಾನು ಮತ್ತೆ ಏನನ್ನೂ ಕೇಳಲಿಲ್ಲ. ಏಕೆಂದರೆ ಕೆಲವೊಮ್ಮೆ ಪ್ರೀತಿಸುವವನಿಗೆ ಉತ್ತರಕ್ಕಿಂತಲೂ, ಉತ್ತರ ಹೇಳಲಾಗದ ಕಾರಣವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅಧ್ಯಾಯ 4 : ಅವಳು ನನ್ನನ್ನು ಪ್ರೀತಿಸುತ್ತಿದ್ದಳು… ಆದರೆ ಹೇಳಲಿಲ್ಲ ನಮ್ಮಿಬ್ಬರ ನಡುವೆ ಪ್ರೀತಿ ಇತ್ತು. ಆದರೆ ಆ ಪ್ರೀತಿಗೆ ಒಂದು ಹೆಸರು ಇರಲಿಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವು. ಆದರೆ “ನಾವು ಪ್ರೀತಿಸುತ್ತಿದ್ದೇವೆ” ಎಂದು ಜಗತ್ತಿನ ಮುಂದೆ ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅವಳ ಮನೆಯ ಪರಿಸ್ಥಿತಿ ಬೇರೆ. ಅವರ ಮನಸ್ಸಿನಲ್ಲಿ ಕೆಲವು ಗಡಿಗಳಿದ್ದವು. ಆ ಗಡಿಗಳನ್ನು ದಾಟಿ ನನ್ನ ಕೈ ಹಿಡಿದು ನಿಲ್ಲುವಷ್ಟು ಧೈರ್ಯ ಅವಳಿಗಿರಲಿಲ್ಲ. ಆದರೆ ನನ್ನನ್ನು ಮರೆತುಬಿಡುವಷ್ಟು ಅವಳ ಹೃದಯವೂ ಕಠಿಣವಾಗಿರಲಿಲ್ಲ. ಅವಳು ನನ್ನನ್ನು ಪ್ರೀತಿಸುತ್ತಿದ್ದಳು. ನನ್ನಂತೆ. ಆದರೆ ನನ್ನ ಪ್ರೀತಿಯನ್ನು ನಾನು ಮಾತಿನಲ್ಲಿ ಹೇಳಬಹುದಾಗಿತ್ತು. ಅವಳ ಪ್ರೀತಿಗೆ ಮಾತು ಸಿಗುತ್ತಿರಲಿಲ್ಲ. ಅವಳ ಪ್ರೀತಿ ಕಣ್ಣಲ್ಲಿ ಇತ್ತು. ಅವಳ ಕಾಳಜಿಯಲ್ಲಿ ಇತ್ತು. ಅವಳ ಮೌನದಲ್ಲಿ ಇತ್ತು. ಅವಳು ನನಗೆ “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹೇಳದಿದ್ದರೂ, ಅವಳ ಪ್ರತಿಯೊಂದು ಕಾಳಜಿಯಲ್ಲೂ ಆ ಮಾತು ಕೇಳಿಸುತ್ತಿತ್ತು. ಒಂದು ದಿನ ನಾನು ಅವಳಿಗೆ ಹೇಳಿದೆ— “ನೀನು ನನ್ನನ್ನು ಪ್ರೀತಿಸುತ್ತಿದ್ದರೆ ಹೇಳು.” ಅವಳು ನನ್ನ ಕಡೆ ನೋಡಿದಳು. ಅವಳ ಕಣ್ಣಲ್ಲಿ ನೀರು ತುಂಬಿತ್ತು. ಆದರೆ ಆಕೆ ಏನೂ ಹೇಳಲಿಲ್ಲ. ನಾನು ನಿಧಾನವಾಗಿ ಹೇಳಿದೆ— “ಪರವಾಗಿಲ್ಲ… ಹೇಳಬೇಡ.” ಅವಳು ಆಶ್ಚರ್ಯದಿಂದ ನನ್ನನ್ನು ನೋಡಿದಳು. ನಾನು ಮುಂದುವರಿಸಿದೆ— “ನಿನ್ನ ಪ್ರೀತಿಯನ್ನು ಕೇಳಿಕೊಂಡು ಪಡೆಯಲು ನನಗೆ ಇಷ್ಟವಿಲ್ಲ.ನೀನು ಹೇಳಲಾಗದಿದ್ದರೂ, ನಿನ್ನ ಮನಸ್ಸನ್ನು ನಾನು ಗೌರವಿಸುತ್ತೇನೆ.” ಅವಳ ಕಣ್ಣಂಚಿನಲ್ಲಿ ಒಂದು ಹನಿ ಕಣ್ಣೀರು ಜಾರಿತು. ಅದು ಅವಳ ಉತ್ತರವಾಗಿತ್ತೋ… ಅಥವಾ ನಮ್ಮ ಕಥೆಯ ನೋವಾಗಿತ್ತೋ… ನನಗೆ ಗೊತ್ತಾಗಲಿಲ್ಲ. ಆದರೆ ಆ ದಿನ ನನಗೆ ಒಂದು ವಿಷಯ ಅರ್ಥವಾಯಿತು. ಪ್ರೀತಿ ಎಂದರೆ ಯಾರನ್ನಾದರೂ ನಮ್ಮದಾಗಿಸಿಕೊಳ್ಳುವುದು ಮಾತ್ರವಲ್ಲ.ಅವರು ನಮ್ಮವರಾಗಲು ಸಾಧ್ಯವಾಗದಾಗಲೂ, ಅವರನ್ನು ಗೌರವಿಸುವುದು. ಅಧ್ಯಾಯ 5 : ಅವಳು ನನ್ನನ್ನು ಆಯ್ಕೆ ಮಾಡಲಿಲ್ಲ… ಆದರೆ ನನ್ನನ್ನು ಕಳೆದುಕೊಳ್ಳಲೂ ಇಷ್ಟಪಡಲಿಲ್ಲ ಕಾಲ ಕಳೆದಂತೆ ನಮ್ಮ ಮಾತುಗಳು ಕಡಿಮೆಯಾದವು. ಹಿಂದಿನಂತೆ ಪ್ರತಿದಿನ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಒಂದು ವಿಚಿತ್ರವಾದ ಸಂಗತಿ ನಡೆಯುತ್ತಿತ್ತು. ನಾವು ಮಾತನಾಡದ ದಿನವೂ… ನಾವು ಒಬ್ಬರನ್ನೊಬ್ಬರು ನೆನಪಿಸಿಕೊಳ್ಳುತ್ತಿದ್ದೆವು. ಅವಳು ನನ್ನ ಸ್ಟೇಟಸ್ ನೋಡುತ್ತಿದ್ದಳು. ನಾನು ಅವಳ ಸ್ಟೇಟಸ್ ನೋಡುತ್ತಿದ್ದೆ. ಯಾರೂ ಮೆಸೇಜ್ ಮಾಡುತ್ತಿರಲಿಲ್ಲ. ಆದರೆ ಇಬ್ಬರೂ ಒಬ್ಬರನ್ನೊಬ್ಬರು ಕಾಯುತ್ತಿದ್ದೆವು. ಒಂದು ದಿನ ಅವಳಿಂದ ಮೆಸೇಜ್ ಬಂತು. “ನೀನು ನನ್ನ ಮೇಲೆ ಬೇಸರ ಮಾಡಿಕೊಂಡಿದ್ದೀಯಾ?” ನಾನು ಬಹಳ ಹೊತ್ತು ಆ ಮೆಸೇಜ್ ನೋಡಿದೆ. ನಂತರ ಬರೆದೆ— “ಇಲ್ಲ.” ಅವಳು ಮತ್ತೆ ಕೇಳಿದಳು— “ನಿಜವಾ?” “ಹೌದು.” “ಆದರೆ ಮೊದಲು ಇದ್ದ ಹಾಗೆ ಮಾತನಾಡುತ್ತಿಲ್ಲ…” ನಾನು ಉತ್ತರಿಸಿದೆ— “ನಿನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಕಲಿಯುತ್ತಿದ್ದೇನೆ.” ಅವಳು ಏನೂ ಬರೆಯಲಿಲ್ಲ. ಕೆಲವು ನಿಮಿಷಗಳ ನಂತರ ಒಂದು ಮೆಸೇಜ್ ಬಂತು. “Thank you.” ಆ ಎರಡು ಪದಗಳು ನನ್ನ ಮನಸ್ಸನ್ನು ಮುರಿದವು. ಯಾಕೆಂದರೆ ನಾನು ಅವಳಿಂದ “I love you” ಕೇಳಲು ಬಯಸಿದ್ದೆ. ಆದರೆ ಅವಳು ನನಗೆ ಕೊಟ್ಟಿದ್ದು— “Thank you.” ಅವಳು ನನ್ನ ಪ್ರೀತಿಯನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೂ, ನನ್ನ ಪ್ರೀತಿಯನ್ನು ಅವಮಾನ ಮಾಡಲಿಲ್ಲ. ಅದಕ್ಕಿಂತ ದೊಡ್ಡ ಉತ್ತರ ನನಗೆ ಇನ್ನೇನು ಬೇಕಿತ್ತು? ಅಧ್ಯಾಯ 6 : ಒಂದು ದಿನ ಅವಳು ಕೇಳಿದ ಪ್ರಶ್ನೆ ಒಂದು ಸಂಜೆ ನಾವು ಬಹಳ ಹೊತ್ತು ಮಾತನಾಡಿದೆವು. ಅವಳು ಕೇಳಿದಳು— “ನಾನು ನಿನಗೆ ಏನೂ ಕೊಡದಿದ್ದರೂ ನೀನು ನನ್ನನ್ನು ಇಷ್ಟು ಪ್ರೀತಿಸುವುದೇಕೆ?” ನಾನು ನಗುತ್ತಾ ಕೇಳಿದೆ— “ನೀನು ಏನೂ ಕೊಟ್ಟಿಲ್ಲವಾ?” ಅವಳು— “ಏನು ಕೊಟ್ಟೆ?” ನಾನು ಹೇಳಿದೆ— “ನನ್ನ ಜೀವನದಲ್ಲಿ ನಿನ್ನನ್ನು ಭೇಟಿಯಾದ ಒಂದು ಸುಂದರ ನೆನಪು ಕೊಟ್ಟಿದ್ದೀಯ.” ಅವಳು ಮೌನವಾಗಿದ್ದಳು. “ನನ್ನನ್ನು ಪ್ರೀತಿಸಬೇಕು ಅಂತ ನಾನು ನಿನ್ನನ್ನು ಕೇಳಿಲ್ಲ. ನನ್ನ ಜೊತೆ ಜೀವನ ಕಳೆಯಬೇಕು ಅಂತಲೂ ಕೇಳಿಲ್ಲ. ನೀನು ನನ್ನನ್ನು ಪ್ರೀತಿಸಲೇಬೇಕು ಅಂತಲೂ ಹೇಳಿಲ್ಲ. ನನಗೆ ಬೇಕಾಗಿರುವುದು ಒಂದೇ…” ಅವಳು ಕೇಳಿದಳು— “ಏನು?” ನಾನು ಹೇಳಿದೆ— “ನಿನ್ನ ಮನಸ್ಸಿನಲ್ಲಿ ನಾನು ಒಬ್ಬ ಒಳ್ಳೆಯ ನೆನಪಾಗಿ ಉಳಿಯಬೇಕು.” ಅವಳು ಏನೂ ಹೇಳಲಿಲ್ಲ. ಆದರೆ ಆ ದಿನ ಮೊದಲ ಬಾರಿಗೆ ಅವಳು ನನ್ನನ್ನು ಬಿಟ್ಟುಹೋಗುವ ಭಯದಿಂದ ಅತ್ತಳು. ಅಧ್ಯಾಯ 7 : ಅವಳ ಒಂದು ಮಾತು ಕೆಲವು ದಿನಗಳ ನಂತರ ಅವಳು ನನ್ನನ್ನು ಭೇಟಿಯಾದಳು. ಬಹಳ ಸಮಯದ ನಂತರ. ನಾನು ಅವಳನ್ನು ನೋಡಿದೆ. ಅದೇ ಮುಖ. ಅದೇ ಕಣ್ಣುಗಳು. ಅದೇ ನಗು. ಆದರೆ ಯಾವುದೋ ಬದಲಾಗಿತ್ತು. ಅವಳು ನನ್ನ ಎದುರು ನಿಂತು ಹೇಳಿದಳು— “ನಾನು ನಿನ್ನನ್ನು ಮರೆತಿಲ್ಲ.” ನನ್ನ ಹೃದಯ ಒಂದು ಕ್ಷಣ ನಿಂತಂತಾಯಿತು. ಅವಳು ಮುಂದುವರಿಸಿದಳು— “ನಿನ್ನನ್ನು ಪ್ರೀತಿಸುತ್ತಿಲ್ಲ ಅಂತ ನಾನು ಎಂದಿಗೂ ಹೇಳಿಲ್ಲ.” ನಾನು ಮೌನವಾಗಿದ್ದೆ. “ಆದರೆ ನಿನ್ನನ್ನು ಪ್ರೀತಿಸುತ್ತೇನೆ ಅಂತ ಹೇಳುವ ಧೈರ್ಯ ನನಗಿಲ್ಲ.” ನಾನು ಅವಳ ಕಡೆ ನೋಡಿದೆ. ಅವಳು ಕಣ್ಣೀರನ್ನು ತಡೆಯುತ್ತಾ ಹೇಳಿದಳು— “ನನ್ನ ಮನಸ್ಸಿನಲ್ಲಿ ನೀನು ಇದ್ದೀಯ.ಆದರೆ ನನ್ನ ಜೀವನದ ಎಲ್ಲ ನಿರ್ಧಾರಗಳೂ ನನ್ನ ಕೈಯಲ್ಲಿಲ್ಲ.” ಆ ಮಾತು ಕೇಳಿದ ನಂತರ ನನಗೆ ಅವಳ ಮೇಲೆ ಇನ್ನಷ್ಟು ಪ್ರೀತಿ ಹುಟ್ಟಿತು. ಏಕೆಂದರೆ ಅವಳು ನನ್ನನ್ನು ತಿರಸ್ಕರಿಸಲಿಲ್ಲ. ಅವಳು ತನ್ನ ಅಸಹಾಯಕತೆಯನ್ನು ಒಪ್ಪಿಕೊಂಡಳು. ನಾನು ಅವಳ ಕೈ ಹಿಡಿಯಬೇಕೆಂದು ಅನಿಸಿತು. ಆದರೆ ಹಿಡಿಯಲಿಲ್ಲ. ಏಕೆಂದರೆ… ಅವಳ ಕೈ ಹಿಡಿಯುವುದಕ್ಕಿಂತ, ಅವಳ ಮನಸ್ಸನ್ನು ಗೌರವಿಸುವುದು ಆ ಕ್ಷಣದಲ್ಲಿ ನನಗೆ ಮುಖ್ಯವಾಗಿತ್ತು. ಅಧ್ಯಾಯ 8 : ಅವಳು ನನ್ನಂತೆ ಪ್ರೀತಿಸುವಳು ಆ ದಿನದ ನಂತರ ನನಗೆ ನಮ್ಮ ಪ್ರೀತಿಯ ಬಗ್ಗೆ ಯಾವುದೇ ಗೊಂದಲ ಇರಲಿಲ್ಲ. ಅವಳು ನನ್ನನ್ನು ಪ್ರೀತಿಸುತ್ತಾಳೆ. ನನ್ನಂತೆ. ಬಹುಶಃ ನನ್ನಷ್ಟೇ. ಆದರೆ ಅವಳ ಪ್ರೀತಿಯ ಭಾಷೆ ಬೇರೆ. ನನ್ನ ಪ್ರೀತಿ ಮಾತಿನಲ್ಲಿ ಬರುತ್ತದೆ. ಅವಳ ಪ್ರೀತಿ ಮೌನದಲ್ಲಿ ಬರುತ್ತದೆ. ನನ್ನ ಪ್ರೀತಿ ಅವಳನ್ನು ಹುಡುಕುತ್ತದೆ. ಅವಳ ಪ್ರೀತಿ ನನ್ನನ್ನು ದೂರದಿಂದ ಕಾಪಾಡುತ್ತದೆ. ನಾನು ಅವಳನ್ನು ನನ್ನ ಜೀವನದಲ್ಲಿ ಬಯಸುತ್ತೇನೆ. ಅವಳು ನನ್ನನ್ನು ತನ್ನ ಹೃದಯದಲ್ಲಿ ಬಯಸುತ್ತಾಳೆ. ವ್ಯತ್ಯಾಸ ಇಷ್ಟೇ. ಒಂದು ದಿನ ಅವಳು ನನ್ನ ಜೀವನದ ಭಾಗವಾಗಬಹುದು. ಅಥವಾ… ಒಂದು ಸುಂದರ ನೆನಪಾಗಿ ಉಳಿಯಬಹುದು. ನನಗೆ ಗೊತ್ತಿಲ್ಲ. ಆದರೆ ಅವಳು ಯಾವ ದಾರಿಯನ್ನು ಆರಿಸಿಕೊಂಡರೂ, ನಾನು ಅವಳನ್ನು ದೂಷಿಸುವುದಿಲ್ಲ. ಏಕೆಂದರೆ ನಾನು ಅವಳನ್ನು ಪ್ರೀತಿಸಿದ್ದೇನೆ. ಅವಳು

“ನನ್ನಂತೆ ಅವಳು ಪ್ರೀತಿಸುವಳು” ಒಂದು ಮೌನ ಪ್ರೇಮಕಥೆ ಪೃಥ್ವಿರಾಜ್‌ ಟಿ.ಬಿ. Read Post »

ಕಾವ್ಯಯಾನ

ಡಾ.ಸರಸ್ವತಿ ಕಳಸದ ಅವರ ಕವಿತೆ “ಸಂಗಾತಿ”

ಕಾವ್ಯ ಸಂಗಾತಿ ಡಾ.ಸರಸ್ವತಿ ಕಳಸದ “ಸಂಗಾತಿ” ಹೋಗು ಮನಸೆ ಹೋಗುನಲ್ಲೆ ಇರುವಲ್ಲಿಗೆ ಹೋಗುಕೇಳು ಮೌನಕ್ಕೆ ಕಾರಣಕೇಳು ಇದೆಂತ ಜೀವನ//ಅವಳಿಲ್ಲದಾ ಬಾಳಿನಲ್ಲಿನಗುವಿಲ್ಲ ನಲಿವಿಲ್ಲ ಸಂತೋಷವಿಲ್ಲಾಅವಳಿಲ್ಲದಾ  ಬದುಕಿನಲ್ಲಿರವಿಚಂದ್ರರಿಲ್ಲಾ, ಹೂಕಂಪೇಯಿಲ್ಲಾಎದೆಯೇಕೋ ತಳಮಳವಾಯಿತಲ್ಲಾ //ಅವಳಿದ್ದರೇ ಬಾಳಲ್ಲಿಅಮೃತವುಂಟುಸಿರಿಸಂಪದವುಂಟುನಗೆಯ ನಗನಾಣ್ಯವುಂಟುಅವಳಿದ್ದರೇ ತಾನೇ ಎಲ್ಲಾ//ಅವಳಿಲ್ಲದ ಮನೆಯಲ್ಲಿಹೆಜ್ಜೆಗಳೇ ಇಲ್ಲಾಗೆಜ್ಜೆಗಳೇ ಇಲ್ಲಾನೆಲ ನೊಂದು ಬಿರುಕಾಯುತ್ತಲ್ಲಾ //ಅವಳಿದ್ದ ಬಾಗಿಲಲ್ಲಿಬೆಳಕುಂಟು, ರಂಗುಂಟುರಂಗೋಲಿಯುಂಟುಅವಳಿದ್ದರೆ ತಾನೆ ಎಲ್ಲಾ.. ಎಲ್ಲಾ //ಜೀವನಾಲಯದಲ್ಲಿಕಥೆಯುಂಟು! ವ್ಯಥೆಯುಂಟು!ಜೊತೆಯೂ ಉಂಟುಅವಳಿದ್ದಾ ನೌಕೆಗೆ ನೆಲೆಯುಂಟು// ಡಾ.ಸರಸ್ವತಿ ಕಳಸದ

ಡಾ.ಸರಸ್ವತಿ ಕಳಸದ ಅವರ ಕವಿತೆ “ಸಂಗಾತಿ” Read Post »

ಇತರೆ, ಶಿಕ್ಷಣ

“ಬೆರೆತು ಕಲಿಸೋಣ ಮತ್ತು ಕಲಿಯೋಣ” ನಿರಂಜನ ಕೆ ನಾಯಕ ಅವರ ಲೇಖನ

ಕಾವ್ಯ ಸಂಗಾತಿ ನಿರಂಜನ ಕೆ ನಾಯಕ “ಬೆರೆತು ಕಲಿಸೋಣ ಮತ್ತು ಕಲಿಯೋಣ” ಶಿಕ್ಷಕನೆಂದರೆ ಜ್ಞಾನದ ಕಾರಂಜಿ, ವಿದ್ಯಾರ್ಥಿಗಳು ಅದನ್ನು ಸ್ವೀಕರಿಸುವ ಪಾತ್ರೆಗಳು; ಅಂದರೆ ಶಿಕ್ಷಣವೆಂಬುದು ಕೇವಲ ‘ಒಮ್ಮುಖ ಹರಿವು’ ಎಂದೇ ನಾನು ಭಾವಿಸಿದ್ದೆ. ಆದರೆ ತರಗತಿ ಕೋಣೆಯೆಂಬ ಜ್ಞಾನದೀವಿಗೆಯೊಂದಿಗೆ ನನ್ನನ್ನು ನಾನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ, ನನ್ನ ಈ ಸಾಂಪ್ರದಾಯಿಕ ಭಾವನೆ ಎಷ್ಟು ತಪ್ಪಾಗಿತ್ತು ಎಂಬ ಸಂಪೂರ್ಣ ಅರಿವಾಯಿತು. ಒಮ್ಮೆ ತರಗತಿಯಲ್ಲಿ ಜಮೈಕಾ ದೇಶದ ಕಥೆಯೊಂದನ್ನು ವಿವರಿಸುತ್ತಿದ್ದೆ. “ಜಮೈಕಾ ಎನ್ನುವುದು ಉತ್ತರ ಅಮೆರಿಕ ಖಂಡದಲ್ಲಿರುವ ಒಂದು ಪುಟ್ಟ ದ್ವೀಪ ರಾಷ್ಟ್ರ…” ಎಂದು ನಾನು ವ್ಯಾಖ್ಯಾನಿಸುತ್ತಿದ್ದಾಗ, ವಿದ್ಯಾರ್ಥಿಯೊಬ್ಬ ತಕ್ಷಣ ಎದ್ದು ನಿಂತು, “ಸರ್, ನಾವು ದಿನವೂ ಕೇಳುವ ಪ್ರಪಂಚದ ಅತ್ಯಂತ ವೇಗದ ಓಟಗಾರ ಉಸೇನ್ ಬೋಲ್ಟ್ ಇದೇ ದೇಶದವರಲ್ಲವೇ?” ಎಂದು ಪ್ರಶ್ನಿಸಿದ. ಆ ಕ್ಷಣ ನಾನು ಆಶ್ಚರ್ಯಚಕಿತನಾದೆ! ಪಾಠದ ಭೂಗೋಳಕ್ಕೆ ಕ್ರೀಡಾಲೋಕದ ಜೀವಂತ ಉದಾಹರಣೆಯನ್ನು ಬೆಸೆಯುವ ವಿಚಾರ ನನ್ನ ತಲೆಗೆ ಹೊಳೆದೇ ಇರಲಿಲ್ಲವಲ್ಲ ಎಂದು ಅವಕ್ಕಾದೆ. ಆ ವಿದ್ಯಾರ್ಥಿಯ ಜ್ಞಾನಾಸಕ್ತಿಯನ್ನು ಪ್ರಶಂಸಿಸಿ, ತಕ್ಷಣವೇ ಅಂತರ್ಜಾಲದಲ್ಲಿ ಹುಡುಕಿ ಜಮೈಕಾದ ಧ್ವಜ ಹಿಡಿದು ಸಂಭ್ರಮಿಸುತ್ತಿರುವ ವೇಗದ ಓಟಗಾರನ ಚಿತ್ರವನ್ನು ತರಗತಿಯಲ್ಲಿ ತೋರಿಸಿದೆ. ಅದನ್ನು ಕಂಡ ಆ ವಿದ್ಯಾರ್ಥಿಗಾದ ಅಪರಿಮಿತ ಆನಂದವನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಕ್ಲಿಷ್ಟವಾದ ಪರಿಕಲ್ಪನೆಯನ್ನು ಅತ್ಯಂತ ಸುಲಭವಾಗಿ ವಿವರಿಸಲು ನೆರವಾದ ಆ ವಿದ್ಯಾರ್ಥಿಗೆ ಮನದಲ್ಲೇ ಧನ್ಯವಾದ ಸಲ್ಲಿಸಿದೆ. ಹಾಗೆಯೇ ಮತ್ತೊಮ್ಮೆ, ಪ್ರಖ್ಯಾತ ಸಸ್ಯಶಾಸ್ತ್ರಜ್ಞರೊಬ್ಬರ ಅಚ್ಚರಿ ಹುಟ್ಟಿಸುವ ವೈಜ್ಞಾನಿಕ ಪ್ರಯೋಗಗಳ ವಿವರಣೆ ನೀಡುತ್ತಿದ್ದಾಗ ಮತ್ತೊಂದು ವಿಸ್ಮಯ ಕಾದಿತ್ತು. ತರಗತಿಯಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ಉತ್ಸಾಹದಿಂದ ಎದ್ದು ನಿಂತು “ಪೊಮೇಟೋ” (Pomato) ಸಸ್ಯದ ಬಗ್ಗೆ ಹೇಳಿದಳು. “ನೆಲದ ಮೇಲೆ ಟೊಮೇಟೊ ಫಲ ನೀಡುತ್ತಾ, ಭೂಮಿಯ ಅಡಿಯಲ್ಲಿ ಆಲೂಗಡ್ಡೆಯನ್ನು ಕೊಡುವ ಕಸಿ ಸಸ್ಯವಿದು” ಎಂದು ಆಕೆ ವಿವರಿಸಿದಾಗ, ಇಡೀ ತರಗತಿ ತೆರೆದ ಕಣ್ಣುಗಳಿಂದ ಆಕೆಯನ್ನೇ ಬೆರಗಿನಿಂದ ನೋಡಿತು! ತಕ್ಷಣವೇ ಅಂತರ್ಜಾಲದಲ್ಲಿ ಹುಡುಕಿ ಆ ಸಸ್ಯದ ಚಿತ್ರವನ್ನು ತೋರಿಸಿದಾಗ, ವಿಜ್ಞಾನದ ಅಗಾಧ ಸಾಧ್ಯತೆಗಳ ಸತ್ಯದರ್ಶನ ನಮಗಾಯಿತು. “ನನ್ನ ವಿದ್ಯಾರ್ಥಿಗಳಿಗೆ ಏನೂ ತಿಳಿದಿಲ್ಲ, ನಾನೇ ತರಗತಿಯ ಸರ್ವಜ್ಞ” ಎಂಬ ಅಹಂಭಾವನೆ ಪ್ರತಿಯೊಬ್ಬ ಶಿಕ್ಷಕನಲ್ಲೂ ಸೂಕ್ಷ್ಮವಾಗಿ ಸುಳಿದು ಹೋಗುವುದುಂಟು. ಆದರೆ ನನ್ನ ತರಗತಿ ಕೋಣೆಯಲ್ಲಿ ಸಂಭವಿಸಿದ ಈ ಘಟನೆಗಳು ನನ್ನ ಆ ಭಾವನೆಯನ್ನೇ ಸಂಪೂರ್ಣವಾಗಿ ತಲೆಕೆಳಗಾಗಿಸಿದವು! ಪ್ರತಿಯೊಂದು ಮಗುವಿನ ಅಂತರಂಗದಲ್ಲೂ ಜ್ಞಾನದ ಅಪಾರ ಕೌತುಕ ಹಾಗೂ ವಿಸ್ಮಯದ ಲೋಕವೇ ಅಡಗಿರುತ್ತದೆ. ನಾವು ಕೇವಲ ಬೋಧಕರಾಗಿ ನಿಲ್ಲದೆ, ಅವರ ಕುತೂಹಲಕ್ಕೆ ಕಿವಿಗೊಡುವ ಸಹ-ಕಲಿಕೆದಾರರಾದಾಗ ಮಾತ್ರ ಶಿಕ್ಷಣವು ಪರಿಪೂರ್ಣಗೊಳ್ಳುತ್ತದೆ.ತರಗತಿಯ ನಾಲ್ಕು ಗೋಡೆಗಳ ನಡುವೆ ಶಿಕ್ಷಕ ಎಷ್ಟೋ ವಿಷಯಗಳನ್ನು ಕಲಿಯುತ್ತಾನೆ; ಮಗು ಕೇಳುವ ಒಂದು ಪುಟ್ಟ ಪ್ರಶ್ನೆ ಅಥವಾ ನೀಡುವ ಅಪರೂಪದ ಮಾಹಿತಿ ನಮಗೇ ಹೊಸ ದೃಷ್ಟಿಕೋನವನ್ನು ತೆರೆದಿಡುತ್ತದೆ.  ಶಿಕ್ಷಣ ಎಂಬುದು ಕೇವಲ ‘ಕಲಿಸುವುದು’ ಅಲ್ಲ, ಅದು ‘ಕಲಿಯುತ್ತಾ ಕಲಿಸುವ’ ಸುಂದರ ಪ್ರಕ್ರಿಯೆ. ಒಬ್ಬ ಶಿಕ್ಷಕ ತನ್ನ ಸರ್ವಜ್ಞತೆಯ ಭ್ರಮೆಯನ್ನು ಕಳಚಿಟ್ಟು, ವೃತ್ತಿಜೀವನದ ಕೊನೆಯವರೆಗೂ ಜಾಗೃತ ವಿದ್ಯಾರ್ಥಿಯಾಗಿ ಉಳಿದಾಗ ಮಾತ್ರ ಆತನ ಬೋಧನೆಗೆ ನೈಜ ಅರ್ಥ ಸಿಗುತ್ತದೆ. ಜ್ಞಾನ ಎನ್ನುವುದು ಯಾರ ಒಬ್ಬರ ಸ್ವತ್ತಲ್ಲ, ಅದು ಹಂಚಿಕೊಂಡಷ್ಟು ವಿಸ್ತಾರವಾಗುವ ಅಗಾಧ ಸಾಗರ ಎಂಬುದನ್ನು ನನ್ನ ವಿದ್ಯಾರ್ಥಿಗಳು ನನಗೆ ಪ್ರತಿದಿನವೂ ನೆನಪಿಸುತ್ತಾರೆ. ನಿರಂಜನ ಕೆ ನಾಯಕ

“ಬೆರೆತು ಕಲಿಸೋಣ ಮತ್ತು ಕಲಿಯೋಣ” ನಿರಂಜನ ಕೆ ನಾಯಕ ಅವರ ಲೇಖನ Read Post »

ಇತರೆ, ಜೀವನ

“ಬದುಕು ಎಂದರೆ ಆಯಸ್ಸಿನ ಲೆಕ್ಕವಲ್ಲ, ,,,,,,,,,? “ಜಯಶ್ರೀ. ಜೆ. ಅಬ್ಬಿಗೇರಿ

ಬದುಕಿನ ಸಂಗಾತಿ ಜಯಶ್ರೀ. ಜೆ. ಅಬ್ಬಿಗೇರಿ “ಬದುಕು ಎಂದರೆ ಆಯಸ್ಸಿನ ಲೆಕ್ಕವಲ್ಲ, ,,,,,,,,,? “ ಇಂಗ್ಲಿಷ್ ಸಾಹಿತ್ಯದ ಸುಪ್ರಸಿದ್ಧ ಲೇಖಕ ಒಲಿವರ್ ಗೋಲ್ಡ್ ಸ್ಮಿತ್ ಅವರ ‘ದಿ ವಿಕಾರ್ ಆಫ್ ವೇಕ್ ಫೀಲ್ಡ್’ ಕೃತಿಯ ಒಂದು ಸುಂದರ ರೂಪಾಂತರ ಇಲ್ಲಿದೆ. ಒಂದು ಹಳ್ಳಿಯ ಮುಗ್ಧ ಪಾದ್ರಿ ತನ್ನ ಇಡೀ ಬದುಕನ್ನು ಅರಮನೆಯಂತಹ ಭವ್ಯ ಸೌಧದಲ್ಲಲ್ಲ, ಬದಲಾಗಿ ಬಡತನದ ಸಣ್ಣ ಗುಡಿಸಲಿನಲ್ಲಿ ಕಳೆಯುತ್ತಾನೆ. ಆತನ ಆಯಸ್ಸು ಕಷ್ಟಗಳಿಂದಲೇ ತುಂಬಿತ್ತು. ಆದರೆ ಆತ ತನ್ನ ಪ್ರೀತಿ, ತ್ಯಾಗ, ಮತ್ತು ಕರುಣೆಯ ಮೂಲಕ ನೊಂದವರ ಕಣ್ಣೀರನ್ನು ಒರೆಸುತ್ತಾ ಸಾಗಿದ. ಜಗತ್ತಿನ ಕಣ್ಣಿಗೆ ಆತ ಸೋತವನಂತೆ ಕಂಡರೂ, ಬದುಕಿನ ಸಂಜೆವೇಳೆಯಲ್ಲಿ ಆತ ನಗುತ್ತಾ ಹೇಳಿದ: “ನನ್ನ ಉಸಿರಿನ ಲೆಕ್ಕ ಮುಗಿಯುತ್ತಿರಬಹುದು, ಆದರೆ ಬಡವರ ಮುಖದಲ್ಲಿ ನಾನು ಮೂಡಿಸಿದ ಕಿರುನಗೆಯ ಅನುಭವ ನನ್ನನ್ನು ಚಿರಂಜೀವಿಯನ್ನಾಗಿ ಮಾಡಿದೆ.” ಈ ಕಥೆ ನಮಗೆ ಕಲಿಸುವುದೇನೆಂದರೆ, ಬದುಕಿನ ಮೌಲ್ಯವಿರುವುದು ಕಾಯದ ಆಯಸ್ಸಿನಲ್ಲಲ್ಲ, ಚೇತನದ ಅನುಭವದ ಆಳದಲ್ಲಿ. ಕಾಲದ ಅಲೆಗಳು ನಿರಂತರವಾಗಿ ಜಾರಿಹೋಗುವ ಮರಳಿನ ಕಣಗಳಂತೆ. ಮಾನವನ ಆಯಸ್ಸು ಕೇವಲ ಒಂದು ಉಸಿರಿನ ತಂಗಾಳಿಯಷ್ಟೇ ವೇಗವಾಗಿ ಮರೆಯಾಗಬಹುದು. ಆದರೆ, ಆ ಅಲ್ಪಾವಧಿಯಲ್ಲಿ ನಾವು ಸಂಗ್ರಹಿಸುವ ಭಾವನೆಗಳ ಮುತ್ತುಗಳು ಮತ್ತು ಉತ್ತುಂಗಕ್ಕೆ ಏರುವ ಅನುಭವಗಳ ಶಿಖರವೇ ಬದುಕಿನ ನಿಜವಾದ ಅಳತೆಗೋಲು. ಬದುಕು ಎಂದರೆ ಕೇವಲ ಕ್ಯಾಲೆಂಡರಿನ ಪುಟಗಳನ್ನು ತಿರುಗಿಸುವ ಆಯಸ್ಸಿನ ಲೆಕ್ಕವಲ್ಲ; ಅದು ಚೈತ್ರಮಾಸದ ತಂಗಾಳಿಯಂತೆ ನಮ್ಮ ಅಂತರಂಗವನ್ನು ಸ್ಪರ್ಶಿಸುವ ಅನುಭವಗಳ ಅದ್ಭುತ ಮೊತ್ತ.  ಬಾಲ್ಯದ ನಿಷ್ಕಲ್ಮಶ ಮುಗ್ಧತೆ  ನಾವು ಬೆಳೆಯುತ್ತಾ ಹೋದಂತೆ ವರ್ಷಗಳ ಸಂಖ್ಯೆ ಹೆಚ್ಚುತ್ತದೆ. ಆದರೆ ನಿಜವಾದ ಬದುಕು ಅಡಗಿರುವುದು ಬಾಲ್ಯದ ಆ ದಿನಗಳಲ್ಲಿ ನಾವು ಅನುಭವಿಸಿದ ನಿಷ್ಕಲ್ಮಶ ಆನಂದದಲ್ಲಿ. ತಾಯಿಯ ಮಡಿಲಲ್ಲಿ ಮಲಗಿದಾಗ ಸಿಗುವ ಆಕಾಶದಂತಹ ನೆಮ್ಮದಿ, ಮಳೆಯ ಹನಿಯಲ್ಲಿ ಕಾಗದದ ದೋಣಿ ಬಿಟ್ಟಾಗ ಮೂಡುವ ರೋಮಾಂಚನ ಕೇವಲ ಅನುಭವದಿಂದ ಮಾತ್ರ ಸಾಧ್ಯ. ಅಬ್ರಹಾಂ ಲಿಂಕನ್ ಒಮ್ಮೆ ಹೇಳಿದ್ದರು: “ಕೊನೆಯಲ್ಲಿ ನಿಮ್ಮ ಬದುಕಿನ ವರ್ಷಗಳು ಮುಖ್ಯವಾಗುವುದಿಲ್ಲ, ಆ ವರ್ಷಗಳಲ್ಲಿ ನೀವು ಹೇಗೆ ಬದುಕಿದಿರಿ ಎಂಬುದು ಮುಖ್ಯ.”ಬೆಳಗಿನ ಮುಂಜಾನೆ ತಂಪಾದ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವಾಗ ಸಿಗುವ ಸ್ಪರ್ಶದ ಸುಖ, ಹೂವಿನ ಮೇಲೆ ಕುಳಿತ ಚಿಟ್ಟೆಯನ್ನು ನೋಡಿ ಮಗುವಿನಂತೆ ನಗುವ ಕ್ಷಣಗಳು ಬದುಕಿಗೆ ನಿಜವಾದ ಅರ್ಥ ನೀಡುತ್ತವೆ. ಕೇವಲ ವರ್ಷಗಳನ್ನು ಎಣಿಸುತ್ತಾ ಯಾಂತ್ರಿಕವಾಗಿ ಬದುಕುವ ಬದಲು, ಪ್ರತಿಯೊಂದು ಸಣ್ಣ ಅನುಭವವನ್ನೂ ಆನಂದಿಸುವುದೇ ಜೀವಂತಿಕೆಯ ಸಂಕೇತ. ನೂರು ವರ್ಷಗಳ ನೀರಸ ಆಯಸ್ಸಿಗಿಂತ, ಒಂದು ಕ್ಷಣದ ಪರಿಪೂರ್ಣ ಅನುಭವ ನಮ್ಮ ಚೇತನವನ್ನು ಜಾಗೃತಗೊಳಿಸುತ್ತದೆ. ಜಗತ್ತಿನ ಸೌಂದರ್ಯವನ್ನು ಕಣ್ಣಾರೆ ಸವಿಯುವ ಒಳಗಣ್ಣು ನಮಗಿರಬೇಕು. ಸೋಲು ಮತ್ತು ಗೆಲುವಿನ ಸಮಚಿತ್ತ  ಜೀವನ ಎಂಬ ಮಹಾಸಾಗರದಲ್ಲಿ ತರಂಗಗಳಂತೆ ಏಳುಬೀಳುಗಳು ಸಹಜ. ವ್ಯಾಪಾರದಲ್ಲೋ ಅಥವಾ ಪರೀಕ್ಷೆಯಲ್ಲೋ ಸೋತಾಗ ಮನುಷ್ಯ ತನ್ನ ಆಯಸ್ಸು ವ್ಯರ್ಥವಾಯಿತೆಂದು ಭಾವಿಸುತ್ತಾನೆ. ಆದರೆ ಆ ಸೋಲು ನೀಡುವ ಪಾಠ ಜಗತ್ತಿನ ಯಾವುದೇ ವಿಶ್ವವಿದ್ಯಾಲಯವೂ ಕಲಿಸಲಾರದು. ಹೆನ್ರಿ ಡೇವಿಡ್ ಥೋರೋ ನುಡಿದಂತೆ: “ಬದುಕಿನ ಸಂಪತ್ತು ಎಂದರೆ ನೀವು ಕರಗಿಸಿದ ಸಮಯವಲ್ಲ, ನಿಮ್ಮ ಅಂತರಂಗದ ಶ್ರೀಮಂತಿಕೆ.” ಒಬ್ಬ ಕೃಷಿಕ ಬರಗಾಲದಲ್ಲಿ ಬೆಳೆ ಒಣಗಿದಾಗ ಧೃತಿಗೆಡದೆ, ಮುಂದಿನ ಮಳೆಗೆ ಭೂಮಿಯನ್ನು ಹಸನು ಮಾಡುವ ದೃಢ ವಿಶ್ವಾಸದ ಅನುಭವವೇ ಆತನ ಶಕ್ತಿ. ದೈನಂದಿನ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ, ಸೋಲಿನ ಕಹಿಯನ್ನೇ ಯಶಸ್ಸಿನ ಸಿಹಿಯಾಗಿ ಪರಿವರ್ತಿಸುವ ಚಾಕಚಕ್ಯತೆ ನಮ್ಮದಾಗಬೇಕು. ಬದುಕು ಕೇವಲ ಉಸಿರಾಡುವ ಪ್ರಕ್ರಿಯೆಯಲ್ಲ, ಅದು ಚಂಡಮಾರುತ ಎದುರಿಸಿ ನಿಲ್ಲುವ ಹಡಗಿನ ಧೈರ್ಯ. ಅನುಭವಗಳ ಬೆಂಕಿಯಲ್ಲಿ ಬೆಂದ ಚಿನ್ನವೇ ಸಮಾಜದಲ್ಲಿ ಧ್ರುವತಾರೆಯಂತೆ ಹೊಳೆಯುತ್ತದೆ. ಸಂಬಂಧಗಳ ಸಿಹಿ–ಕಹಿ  ನಾವು ಸಮಾಜದಲ್ಲಿ ನೂರಾರು ಜನರ ಮಧ್ಯೆ ಬದುಕುತ್ತೇವೆ. ಆದರೆ ಹೃದಯಕ್ಕೆ ಹತ್ತಿರವಾದ ಸಂಬಂಧಗಳು ನೀಡುವ ಪ್ರೀತಿಯ ಅನುಭವವೇ ಬದುಕಿನ ಅಸ್ತಿತ್ವ. ಹೆಲೆನ್ ಕೆಲರ್ ಜಗತ್ತನ್ನು ನೋಡಲಾಗದಿದ್ದರೂ ಹೇಳಿದ್ದರು: “ಜಗತ್ತಿನ ಅತ್ಯಂತ ಸುಂದರವಾದ ವಿಷಯಗಳನ್ನು ಕಣ್ಣಿನಿಂದ ನೋಡಲಾಗದು, ಕೇವಲ ಹೃದಯದಿಂದ ಅನುಭವಿಸಬೇಕು.”ಕಷ್ಟದ ಸಮಯದಲ್ಲಿ ಸ್ನೇಹಿತನೊಬ್ಬ ಬಂದು ಹೆಗಲ ಮೇಲೆ ಕೈಯಿಟ್ಟು ‘ನಾನಿದ್ದೇನೆ’ ಎಂದು ಹೇಳುವ ಆ ಒಂದು ಸ್ಪರ್ಶ, ಹೆತ್ತ ತಾಯಿಯ ಮಮತೆಯ ಅಪ್ಪುಗೆ ಕೋಟಿ ರೂಪಾಯಿಗಳಿಗಿಂತ ಮಿಗಿಲಾದ ಅನುಭವ. ವೃದ್ಧಾಪ್ಯದಲ್ಲಿ ದಂಪತಿಗಳು ಒಬ್ಬರನ್ನೊಬ್ಬರು ಮೌನವಾಗಿ ನೋಡುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕುವಾಗ ಅವರ ಆಯಸ್ಸಿನ ಲೆಕ್ಕ ಕರಗಿಹೋಗುತ್ತದೆ; ಕೇವಲ ಅನುಭವಗಳ ಸಿಹಿ ಮಾತ್ರ ಉಳಿಯುತ್ತದೆ. ನಿಸ್ವಾರ್ಥ ಪ್ರೀತಿಯೇ ಬದುಕಿನ ಪರಮೋಚ್ಚ ಸತ್ಯ ಮತ್ತು ಜೀವಾಳ. ಪ್ರಕೃತಿಯ ಮಡಿಲಲ್ಲಿ ಜ್ಞಾನೋದಯಕಾಂಕ್ರೀಟ್ ಕಾಡುಗಳ ಮಧ್ಯೆ ಯಾಂತ್ರಿಕವಾಗಿ ಓಡುವ ಮನುಷ್ಯನಿಗೆ ಬದುಕಿನ ನಿಜವಾದ ಸೌಂದರ್ಯ ಗೋಚರಿಸುವುದಿಲ್ಲ. ಪ್ರಕೃತಿಯ ಮಡಿಲಿಗೆ ಹೋದಾಗ ಮಾತ್ರ ನಮ್ಮ ಅಂತರಂಗ ಪ್ರಶಾಂತವಾಗುತ್ತದೆ. “ಪ್ರಕೃತಿಯೇ ಪರಮ ಗುರು, ಅದರ ಮೌನದಲ್ಲೇ ಬದುಕಿನ ರಹಸ್ಯ ಅಡಗಿದೆ” ಎಂಬ ಹಿರಿಯರ ನಾಣ್ಣುಡಿಯಂತೆ ಪ್ರಕೃತಿಯ ಅನುಭವ ಶ್ರೇಷ್ಠವಾದುದು. ಒಂದು ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಆಕಾಶವು ಕೆಂದಾವರೆಯಂತೆ ಕಂಗೊಳಿಸುವುದನ್ನು ನೋಡುವುದು, ಕಾಡಿನ ಕೋಗಿಲೆಯ ಗಾನವನ್ನು ಆಲಿಸುವುದು ಬದುಕಿನ ಪರಮ ಸುಖ. ದಿನದ ಆಯಸ್ಸು ಕರಗುತ್ತಿದ್ದರೂ ಆ ಸಂಜೆಯ ಸೌಂದರ್ಯ ನಮ್ಮ ಮನದಲ್ಲಿ ಶಾಶ್ವತ ಮುದ್ರೆ ಒತ್ತುತ್ತದೆ. ದುಡಿಮೆಯ ತರಾತುರಿಯಲ್ಲಿ ಒಂದು ಕ್ಷಣ ನಿಂತು ನಗುವ ಹೂವನ್ನು ಸವಿಯುವ ಅನುಭವವೇ ಬದುಕಿನ ಸಂಜೀವಿನಿ. ಪ್ರಕೃತಿಯ ಪ್ರತಿಯೊಂದು ಅಣುವು ನಮಗೆ ತಾಳ್ಮೆ ಮತ್ತು ತ್ಯಾಗವನ್ನು ಮೂಕವಾಗಿಯೇ ಬೋಧಿಸುತ್ತದೆ. ಕಲೆಯ ಆರಾಧನೆ ಮತ್ತು ಸೃಜನಶೀಲತೆಸಂಗೀತ, ಸಾಹಿತ್ಯ ಮತ್ತು ಕಲೆಗಳು ಮನುಷ್ಯನಿಗೆ ಸಿಗುವ ಅತ್ಯುನ್ನತ ಅನುಭವಗಳು. ಕೇವಲ ಅನ್ನ ತಿಂದು ಬದುಕುವುದು ಮೃಗಸಮಾನ. ಆದರೆ ಕಲೆಯ ಆಸ್ವಾದನೆ ನಮ್ಮನ್ನು ದೇವತ್ವಕ್ಕೆ ಏರಿಸುತ್ತದೆ. “ಕಲೆಯಿಲ್ಲದ ಮನುಷ್ಯ ಕೊಂಬಿಲ್ಲದ ಪಶು ಇದ್ದಂತೆ” ಎಂಬ ನಾಣ್ಣುಡಿ ಇಲ್ಲಿ ಅನ್ವರ್ಥವಾಗುತ್ತದೆ. ದಿನವಿಡೀ ಕೆಲಸ ಮಾಡಿ ದಣಿದ ತಂದೆ, ಸಂಜೆ ಮನೆಗೆ ಬಂದು ಹಳೆಯ ಶಾಸ್ತ್ರೀಯ ಸಂಗೀತವನ್ನು ಆಲಿಸುವಾಗ ಆತನ ಸಕಲ ಆಯಾಸವೂ ಮಂಜಿನಂತೆ ಕರಗಿಹೋಗುತ್ತದೆ. ಆ ಸಂಗೀತ ನೀಡುವ ಆನಂದದ ಅನುಭವ ಆತನ ಆಯಸ್ಸನ್ನು ವೃದ್ಧಿಸುತ್ತದೆ. ಸೃಜನಶೀಲತೆಯು ನಮ್ಮ ಒಳಮನಸ್ಸನ್ನು ಬೆಳಗುವ ಜ್ಞಾನದ ಹಣತೆ. ಚಿತ್ರಕಲಾವಿದನೊಬ್ಬ ತನ್ನ ಕುಂಚದಿಂದ ಮೂಡಿಸುವ ಬಣ್ಣಗಳ ಸಮ್ಮಿಲನ ಕೇವಲ ಚಿತ್ರವಲ್ಲ, ಅದು ಆತನ ಆತ್ಮದ ಅಭಿವ್ಯಕ್ತಿ. ಕಲೆಯ ಸೌರಭವು ಬದುಕಿನ ಒರಟುತನವನ್ನು ಮೃದುಗೊಳಿಸಿ ಬೆಣ್ಣೆಯಂತೆ ಮಾಡುತ್ತದೆ. ಸಮಾಜ ಸೇವೆ ಮತ್ತು ತ್ಯಾಗದ ಅಮೃತ ಧಾರೆ ಸ್ವಾರ್ಥಕ್ಕಾಗಿ ಬದುಕುವವನು ಬದುಕಿದ್ದೂ ಸತ್ತಂತೆ. ಆದರೆ ಇತರರಿಗಾಗಿ ಬದುಕುವವನು ಮರಣದ ನಂತರವೂ ಚಿರಂಜೀವಿಯಾಗಿ ಉಳಿಯುತ್ತಾನೆ. “ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ” ಎಂಬ ನಾಣ್ಣುಡಿಯೇ ಬದುಕಿನ ಪರಮ ಧ್ಯೇಯವಾಗಬೇಕು. ತ್ಯಾಗದ ಮೂಲಕ ಸಿಗುವ ಆನಂದಕ್ಕೆ ಜಗತ್ತಿನಲ್ಲಿ ಬೇರೆ ಸಾಟಿಯೇ ಇಲ್ಲ.ಒಬ್ಬ ಶಿಕ್ಷಕ ತನಗೆ ಬರುವ ಅಲ್ಪ ಆದಾಯದಲ್ಲೇ ಬಡ ವಿದ್ಯಾರ್ಥಿಗೆ ಪುಸ್ತಕ ಕೊಡಿಸಿ, ಆ ಮಗುವಿನ ಕಣ್ಣಿನಲ್ಲಿ ವಿದ್ಯೆಯ ಬೆಳಕನ್ನು ನೋಡುವಾಗ ಅನುಭವಿಸುವ ತೃಪ್ತಿ ಅಪಾರ. ದಾರಿಯಲ್ಲಿ ಬಿದ್ದ ಅಪರಿಚಿತನನ್ನು ಆಸ್ಪತ್ರೆಗೆ ಸೇರಿಸಿ ಆತನ ಜೀವ ಉಳಿಸಿದಾಗ ಮೂಡುವ ಧನ್ಯತಾ ಭಾವ ಬದುಕಿನ ಶ್ರೇಷ್ಠ ಸಾಧನೆ. ಆಯಸ್ಸಿನ ಕ್ಯಾಲೆಂಡರ್ ಮುಗಿಯಬಹುದು, ಆದರೆ ನಾವು ಮಾಡಿದ ಸತ್ಕರ್ಮಗಳ ನೆನಪು ಸಮಾಜದಲ್ಲಿ ಸದಾ ಹಸಿರಾಗಿರುತ್ತದೆ. ಇತರರ ಕಣ್ಣೀರನ್ನು ಒರೆಸುವ ಕೈಗಳೇ ದೇವರ ಪವಿತ್ರ ರೂಪ. ರಾಷ್ಟ್ರಕವಿ ಕುವೆಂಪು ಅವರ ಅಮರ ಕಾವ್ಯ ಧಾರೆ “ಓ ದೇವರೆ, ನಿನ್ನೀ ಸೃಷ್ಟಿಯ ಮಾಯೆಯಲಿ,ಆಯಸ್ಸಿನ ಎಣಿಕೆಯಲಿ ಕರಗದಿರಲಿ ಮನವು.ಅನುಭವದ ಅಮೃತವನು ಜಿನುಗಿಸು ಒಡಲಲಿ,ಅದರಿಂದಲೇ ಸಾರ್ಥಕವಾಗಲಿ ಜನ್ಮವು!” ರಾಷ್ಟ್ರಕವಿ ಕುವೆಂಪು ಅವರು ಈ ಸಾಲುಗಳ ಮೂಲಕ ಅತ್ಯಂತ ಗಂಭೀರವಾದ ಸತ್ಯವನ್ನು ಬಣ್ಣಿಸಿದ್ದಾರೆ. ಮನುಷ್ಯನು ದೇವರಿನಲ್ಲಿ ಪ್ರಾರ್ಥಿಸುತ್ತಾ, “ಓ ಸೃಷ್ಟಿಕರ್ತನೇ, ಕೇವಲ ವರ್ಷಗಳನ್ನು ಎಣಿಸುತ್ತಾ ಆಯಸ್ಸನ್ನು ವ್ಯರ್ಥ ಮಾಡುವ ಮಾಯೆಗೆ ನನ್ನನ್ನು ತಳ್ಳಬೇಡ. ಬದಲಾಗಿ, ನನ್ನ ಅಂತರಂಗದಲ್ಲಿ ಜ್ಞಾನ ಮತ್ತು ಕರುಣೆಯ ಅನುಭವದ ಅಮೃತ ಧಾರೆಯನ್ನು ಜಿನುಗಿಸು. ಆ ಸತ್ತ್ವಭರಿತ ಅನುಭವಗಳಿಂದ ಮಾತ್ರವೇ ನನ್ನ ಈ ಮಾನವ ಜನ್ಮವು ಸಾರ್ಥಕತೆಯ ಶಿಖರವನ್ನು ತಲುಪಲು ಸಾಧ್ಯ” ಎಂದು ಸಾರಿದ್ದಾರೆ. ಕೊನೆಯದಾಗಿ, ಬದುಕು ಎಂಬುದು ಕೇವಲ ಉಸಿರಾಟದ ಸಂಖ್ಯೆಯಲ್ಲ, ಅದು ನಮ್ಮ ಆತ್ಮವು ಸವಿಯುವ ರಸಾನುಭವಗಳ ಅದ್ಭುತ ಕಾವ್ಯ. ಜಯಶ್ರೀ. ಜೆ. ಅಬ್ಬಿಗೇರಿ

“ಬದುಕು ಎಂದರೆ ಆಯಸ್ಸಿನ ಲೆಕ್ಕವಲ್ಲ, ,,,,,,,,,? “ಜಯಶ್ರೀ. ಜೆ. ಅಬ್ಬಿಗೇರಿ Read Post »

ಕಥಾಗುಚ್ಛ

“ಕರ್ಮದ ಫಲ” ಸಣ್ಣ ಕಥೆ, ಶ್ರೀದೇವಿ. ಮ. ಗುಮ್ಮಗೋಳ

ಕಥಾ ಸಂಗಾತಿ ಶ್ರೀದೇವಿ. ಮ. ಗುಮ್ಮಗೋಳ “ಕರ್ಮದ ಫಲ” ಅಂದು ನಾನು ಮದುವೆಯಾದ ಹೊಸ ವರುಷ.  ಮಂಗಳಗೌರಿ ವೃತ ಇಟ್ಟಕೊಂಡಿದ್ದೆ. ಪೂಜಾ ಸಾಮಗ್ರಿಗಳನ್ನು ಸಜ್ಜು ಮಾಡಿದೆ. ಟೇಬಲ್ ಮೇಲೆ ವಸ್ತ್ರ ಹಾಸ ಬೇಕಾಗಿತ್ತು. ದೇವರನ್ನು ಕೂಡಿಸುವಾಗ ಕೆಳಗೆ ಕೆಂಪ ವಸ್ತ್ರ ಹಾಕಬೇಕಂತ ನಮ್ಮಜ್ಜಿ ಹೇಳತಿದ್ಲು. ತಕ್ಷಣ ನನಗ ನನ್ನಜ್ಜಿ ಸಾಯುವ ಮುಂಚೆ ಕೊಟ್ಟ ಆ ಕೆಂಪು ರೇಷ್ಮೆ ವಸ್ತ್ರ ಹೊರಗ ತಗದೆ. ಅದರ ಮೇಲೆ ದಾರದಿಂದ ಹೊಲೆದ ಹಳದಿ ಬಣ್ಣದ ಕಮಲದ ಚಿತ್ತಾರ ಸುಂದರವಾಗಿತ್ತು.  ಅದರ ಮೇಲೆ ಹಾಗೆ ಕೈಯಾಡಿಸಿದೆ. ನನ್ನಜ್ಜಿಯ ನೆನಪು ಬಂತು. ಅದರೊಳಗಿಂದ ನನ್ನಜ್ಜಿ  “ಸೀತವ್ವ ನಿನ್ನ ಸಂಸಾರ ಚಂದ ಇರಲಿ. ನಿನ್ನ ಮದುವಿ ನೋಡು ಭಾಗ್ಯ ನನಗ ಬರಲಿಲ್ಲ. ನಾನು ಇಲ್ಲದಿದ್ದರೂ ಈ ವಸ್ತ್ರದಾಗ ನನ್ನ ಜೀವ ಐತಿ” ಸಣ್ಣಗ ಪಕ್ಕದಲ್ಲಿ ನಿಂತು ಹೇಳದಂಗಾತು. ರೇಷ್ಮೆಯ ನೂಲಿನ ಎಳೆಗಳನ್ನು ದಿಟ್ಟಿಸತೊಡಗಿದೆ. ಆ ಎಳೆಗಳು ನನ್ನ ಹಿಂದಿನ ನೆನಪುಗಳನ್ನು ಎಳೆದು ಎಳೆದು ತಂದು ಕಣ್ಮುಂದೆ ನಿಲ್ಲಿಸಿತು. ನನ್ನ ಮನ ಮದುವೆ ಮುಂಚಿನ ದಿನಗಳತ್ತ ಹೊರಳಿತು. ****************** ಅಮ್ಮ ಅಪ್ಪನಿಗೆ ಹೇಳುತ್ತಿದ್ದಳು “ರೀ… ಅತ್ತಿಯಾರಿಗೆ ಇವತ್ತ… ಊಟ ಕೊಡಾಕ ಹೋದಾಗ ಕಣ್ಣೀರು ಹಾಕ್ತಿದ್ದರು. ನಾನ ನಿನಗ… ಎಷ್ಟ ಕಷ್ಟ ಕೊಟ್ಟನಿ. ಜಗಳದೊಳಗ ಬೈ ಬಾರದನೆಲ್ಲಾ ಬೈದ್ನಿ… ಅನಬಾರದೆಲ್ಲಾ ಅಂದ್ನಿ…. ಆದರೂ ನೀ ಎನು ಮನಸಗ ಹಚ್ಚಗೊದ ನನ್ನ ಚಾಕರಿ ಮಾಡಿದಿ…. ನಾನು ಇನ್ನ ಬಾಳ ದಿವಸ ಇರುದಿಲ್ಲಾ ಅನಸಾಕ್ಕತ್ತೈತಿ ಅಂತ ಅತ್ತಿಯವರು ಹೇಳಿ ಬಾಳ ನೊಂದಕೊಂಡರು.” ಅಪ್ಪ “ಹೌದು ನನಗೂ… ಮನಸಿಗೆ ಬಾಳ ದುಃಖ ಆಗಕ್ಕತ್ತೈತಿ… ಅಪ್ಪಿಲ್ಲದ ನನ್ನನ್ನ ಒಬ್ಬಕೀನ ಸಾಕಿ ಬೆಳಿಸಿ… ಈ ಮಟ್ಟಕ ತಂದಾಳು. ಬಾಳ ಕಷ್ಟ ಪಟ್ಟಾಳು ಮಗಳ ಮದ್ವಿ ನೋಡಿಲಿ ಅಂತ… ಮನಸ ಬಯಸಾಕ್ಕತ್ತೈತಿ ಆದರ ದೇವರ ಇಚ್ಛೆ ಏನೈತೊ ಏನೋ” ಎಂದು ಹೇಳಿ ಅಪ್ಪ ಆಫೀಸಿಗೆ ಹೊರಟು ನಿಂತರು.  ನಾನು ಹಾಲ್ ನಲ್ಲಿ ಕುಳಿತು ಇದನ್ನೆಲ್ಲಾ ಕೇಳತಿದ್ದವಳಿಗೆ ನನ್ನಜ್ಜಿಯ ಬಗ್ಗೆ ಬಹಳ ಬೇಸರವೆನಿಸಿತು. ನನ್ನಜ್ಜಿಗೆ ಈಗ ತೊಂಬತ್ತು ವಯಸ್ಸು. ಹಾಸಗಿ ಹಿಡಿದು ಒಂದ ತಿಂಗಳಾಯಿತು. ಅಪ್ಪ ಇನ್ನೂ ಆರೇಳು ವರ್ಷದಾಗ ಇದ್ದಾಗನ ಅಜ್ಜ ತೀರಿಕೊಂಡನಂತೆ. ನಮ್ಮಜ್ಜಿ ಅಪ್ಪನ್ನ ಬೇರಯವರ ಮನೆ ಕಸ ಮುಸರೆ ತಿಕ್ಕಿ ಸಾಲಸೊಲ ಮಾಡಿ ಚೆನ್ನಾಗಿ ಓದಿಸಿದ್ದರಿಂದ ಅಪ್ಪನಿಗೊಂದು ಸರಕಾರಿ ಗುಮಾಸ್ತನಾಗುವ ಬಾಗ್ಯ ಸಿಕ್ಕಿತು. ನಮ್ಮಪ್ಪನಿಗೆ ನಾನೊಬ್ಬಳೆ ಮಗಳು ಡಿಗ್ರಿ ಓದ್ತಾ ಇದ್ದೆ.  ಅಜ್ಜಿ ನನಗ ಸಣ್ಣವಳಿದ್ದಾಗ ತನ್ನ ಹತ್ತಿರ ಇರುವ ಬಿಡಿಗಾಸುಗಳಿಂದ ಊರೊಳಗ ಮಾರಲಿಕ್ಕ ಬ್ಯಾಡರು ತಂದಂತಹ ಕವಳಿ ಹಣ್ಣು, ನೀರಲ ಹಣ್ಣು, ಪೇರಲ ಹಣ್ಣು ಕೊಡಸುತ್ತಿದ್ದಳು. ನಿತ್ಯವು ಹತ್ತಿರದ ಶಿವನ ಗುಡಿಗೆ ಕೈ ಹಿಡಿದು ಕರೆದು ಕೊಂಡು ಹೋಗವಳು. ದೇವರ ಬಗ್ಗೆ ಭಕ್ತಿ ಭಾವ ನನ್ನೊಳಗ ಅದ ಅಂದರ ಅದಕ್ಕ ಅಜ್ಜಿನ ಕಾರಣ. ಅವಳ ಪೂಜೆಯಲ್ಲಿ ನಾನು ನೆರವಾಗುತ್ತಿದ್ದೆ. ಪೂಜೆಯ ಪರಿಪಾಠ ಹಾಕಿದವಳು ಅವಳು.   ಅಜ್ಜಿ ಹಾಸಗಿ ಹಿಡದ ಮ್ಯಾಲ ಅವ್ವ ಅವಳ ಹೊತ್ತ ಹೊತ್ತಗೆ ಸರಿಯಾಗಿ ತಿಂಡಿ ಊಟ ಕೊಟ್ಟು ಉಪಚರಿಸುತ್ತಿದ್ದಳು. ಅವ್ವನ ಮನಸ್ಸು ಹೂವಿನಂತದು ಅಂದಕೊಂಡೆ. ಅಜ್ಜಿ ಅತ್ತಿ ಅನ್ನುವ ಅಧಿಕಾರದಲ್ಲಿ ನಮ್ಮವ್ವಗ ಬಾಯಿಗೆ ಬಂದಂಗ ಬೈದುದ್ದುಂಟು ಆದರ ಮನಸ್ಸು ಬೆಣ್ಣಯಂತದು. ಅಮ್ಮ ಅದನ್ನೆಲ್ಲಾ ಹಚ್ಚಕೊದ ಚಾಕರಿ ಮಾಡುತ್ತಿರುವದು ಆಶ್ಚರ್ಯ ಆಗಿತ್ತು. ಈಗ ಕೆಲದಿನಗಳಿಂದ ಅಜ್ಜಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಕಿವಿಯು ಮಂದವಾಗಿದ್ದವು. ಒಂದ ದಿನಾ ನಾನು ಕಾಲೇಜನಿಂದ ಮನಿಗೆ ಬಂದಾಗ ಅಮ್ಮ “ಅಜ್ಜಿ ನಿನ್ನನ್ನ ಬಾಳ ಕೇಳಾಕತಿದ್ಲು. ಸೀತವ್ವ ಬಂದ ಕೂಡಲೇ ನನ್ನ ಹತ್ತರ ಕಳಿಸು ಅಂದ್ಲು.  ಇನ್ನೇನು ಬಾಳ ದಿನಾ ಬದಕುದಲ್ಲಾ ಅಂತ ಅನಸ್ತದ. ಎನರ ಬಂಗಾರ ಬೆಳ್ಳಿ ದುಡ್ಡು ಕೂಡಿಟ್ಟದ್ದರ ಕೊಡತಾಳ ಹೋಗು”   ನನಗ ಅಮ್ಮನ ಮಾತು ಕೇಳಿ ಆಶ್ಚರ್ಯ ತಂತು. ಹಂಗಾದರ ಅಮ್ಮಾ ಇದ ಆಸೆಕ ಅಜ್ಜಿ ಚಾಕರಿ ಮಾಡಕ್ಕತ್ತಾಳು ಅನಸ್ತು.  “ಹೌದಾ ಆತು” ಎಂದು ಕೈ ಕಾಲು ಮುಖ ತೊಳೆದು ಅಜ್ಜಿಯ ಹತ್ತಿರ ಹೋಗಿ ಕುಳಿತೆ. “ಎನಜ್ಜಿ ನನ್ನ ಕೇಳ್ತಾ.. ಇದ್ದಂತಲ್ಲ ಯಾಕ….”  ಅಂದ್ನಿ.ಅವಳು ತನ್ನತ್ತರ ಇರುವ ಚೀಲ ದೊಳಗಿಂದ ಮಡಚಿದ ಒಂದು ಕೆಂಪು ರೇಶ್ಮೆ ವಸ್ತ್ರ ತಗೆದು “ನೋಡ…. ಸೀ….ತವ್ವ ನನ್ನ ಹತ್ತರ ನಿನಗ….. ಅಂತ… ಕೊ…..ಕೊ….ಡಾಕ ಯಾವ ಬೆಳ್ಳಿ ಬಂಗಾರ…. ಒಂದು ಇಲ್ಲ. ಇರೊದು… ಇದೊಂದು ನನ್ನವ್ವ ಕೊಟ್ಟ ವಸ್ತ್ರ. ಇದನ್ನ ಇಟಕೊ….. ಪಾ..ಪ ನಿಮ್ಮವ್ವ ಬಾಳ ಚಾಕರಿ ಮಾಡಿದಳು ಅವಳಿಗೆ ಏನು ಕೊಡದ ಬರಿ..ಗೈ…ಲೆ… ಹೋಗುದಾ..ತು.” ಎಂದು ತಡೆದು ತಡೆದು ಮಾತಾಡುತ ನೋವು ತೋಡಿಕೊಂಡಳು‌. ನಾನು‌ ” ಆತು ಅಜ್ಜಿ‌ ನೀ ಹಂಗೆಲ್ಲಾ ತಿಳಕೊ ಬೇಡ.  ಅದು ಅಮ್ಮನ ಕರ್ತವ್ಯ ಮಾಡಬೇಕು. ಮಾಡಿದಾಳು. ನೀ ಹಂಗೆಲ್ಲಾ ಯೋಚಿಸಬ್ಯಾಡ” ಅಂದ್ನಿ. ಅಜ್ಜಿ ನನ್ನ ಕೈ ಹಿಡಿದು ಅಳ ತೊಡಗಿದಳು. “ಸೀತವ್ವ… ನಿನ್ನ ತಲಿ ಮ್ಯಾಲ ….. ಎರಡ ಅಕ್ಕಿ…..ಕಾಳು ಹಾಕು ಬಾಗ್ಯ ….ಇ…ಲ್ಲ.”  ನನಗೂ ಮನಸ್ಸಿಗೆ ಬಹಳ ದುಃಖ ಆತು ಬರುವ ಕಣ್ಣಿರನ್ನು ಒಳಗೆ ನುಂಗಿದೆ. ನಮ್ಮವ್ವ ಅಡುಗಿ ಮನಿಯಿಂದ ನನ್ನ ಕೂಗಾಕ್ಕತ್ಲು. ನಾನು ಬಂದೆ ತಡಿ ಅಜ್ಜಿ ಅಂತ ಅವ್ವನ ಕಡೆ ಹೋದೆ. ಅವ್ವ ನೋಡಿ “ಅಜ್ಜಿಗೆ ಈ ಚಹಾ ಕೊಟ್ಟ ಬಾ. ನೀನು ಚಹಾಕುಡಿಯವಂತಿ” ಅಂತ ಹೇಳಿದಳು. ನಾನು ಅಜ್ಜಿಗೆ ಚಹಾ ಕೊಟ್ಟ ಬಂದ್ನಿ. ನಮ್ಮವ್ವ ಬಹಳ ಕುತೂಹಲದಿಂದ ‌”ಅಜ್ಜಿ ಏನ ಕೊಟ್ಲು ನಿನಗ” ಅಂತ ಕೇಳಿದಳು. ನಾನು ಟೇಬಲ್ ಮೇಲೆ ಇಟ್ಟ ರೇಷ್ಮೆ ವಸ್ತ್ರ ತಂದ ತೋರಿಸಿದೆ. ಅಜ್ಜಿ ಇದನ್ನ ಇಟ್ಟಕೊ ಅಂತ ಕೊಟ್ಟಾಳು ಅಂದಾಗ ನಮ್ಮವ್ವ “ಅಯ್ಯ ನಾ ಮಾಡಿದ ಚಾಕರಿ ಎಲ್ಲ ವ್ಯರ್ಥ ಆತು. ಏನರ ಬಂಗಾರ ಬೆಳ್ಳಿ ರೊಕ್ಕಾ ಹಂತೆಕ ಅಡಿಗಿಸಿಟ್ಟುಕೊಂಡಾಳು ಎನರ ಕೊಡತಾಳು ಅನಕೊಂಡಿದ್ನಿ ಇದನ್ನ ಕೊಟ್ಟಾಳ. ಇದೇದಕ ಬರತೇತಿ” ಅಂದ್ಲು. ನಾನು “ಬಿಡಮ್ಮ ಅಜ್ಜಿ ಬಗ್ಗೆ ಹಾಗ ಮಾತಡಬ್ಯಾಡ. ಪಾಪ ಅಜ್ಜಿ ಕಡೆ ಏನಿರಬೇಕು. ನಿನಗೂ ಗೊತ್ತಿದ್ದ ಅದ… ಅಪ್ಪ ಹೇಳುದೂ ಕೇಳಿ. ಅಪ್ಪನ್ನ ಅಜ್ಜಿ ಕಷ್ಟ ಪಟ್ಟು ಓದಸ್ಯಾಳು ಅಂತ. ಅಪ್ಪನಿಗೂ ಮಾಡಿದ ಸಾಲ ತೀರಸಾಕ, ನನ್ನ ಓದಸಾಕ ಅರ್ದ ಜೀವನ ಹೋಯಿತು. ಬಂಗಾರ, ಬದುಕಿನ ಆಸೆ ಬಿಡು. ನೀನು ನಿಸ್ವಾರ್ಥ ದಿಂದ ಸೇವೆ ಮಾಡಿದ್ದರ. ಎಲ್ಲಿಂದರ ಅದರ ಲಾಭ ನಿನಗ ಇದ್ದ ಇರ್ತದ”  ನಾನು ಮನಸ್ಸನೊಳಗ ಅಂದುಕೊಂಡೆ ಹಾಗಾದರೆ ಅವ್ವ ಇಷ್ಟ ದಿವಸ ಅಜ್ಜಿ ಚಾಕರಿ ಮಾಡಿದ್ದು ಏನೊ ಸಿಗತೈತಿ ಅನ್ನು ಆಸೆಕ. ಅವ್ವನಿಗೆ ಎಷ್ಟೊ ಒಳ್ಳೆ ಮನಸ್ಸು ಅದ ಅನ್ನಕೊಂಡಿದ್ದು ಸುಳ್ಳಾತು. ಆಮೇಲೆ ಅಮ್ಮ ಅಜ್ಜಿಯ ಕಾಳಜಿಯಲ್ಲಿ ಏನೊ ನಿರಾಶ ಭಾವ ತಾತ್ಸಾರ ಕಂಡೆ. ಅಜ್ಜಿ ಆ ಒಂದ ವಾರದ ನಂತರ ತೀರಕೊಂಡ್ಲು. ಅಮ್ಮ ತನ್ನ ಸಂಬಂಧಿಕರ ಮುಂದೆ ಆಗಾಗ ಅಜ್ಜಿಯ ಚಾಕರಿ ಮಾಡಿದ್ದು. ಅದರ ಅವಳಿಂದ ತನಗೇನು ಸಿಗಲಿಲ್ಲ ಅಂತ ತನ್ನ ಹತಾಸೆ ತೋಡಕೊತಿದ್ಲು. ನಂತರ ನನ್ನ ತಂದೆಯ ಪರಿಚಯದವರ ಮೂಲಕ ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುವ ಶ್ರೀಪಾದರ ಜೊತೆ ನನ್ನ ಮದುವೆಯಾಯಿತು. ಮದುವೆಯಾಗಿ ನಾನು ಬೆಂಗಳೂರಿಗೆ ಬಂದೆ. ******” “ಸೀತಾ.‌..ಸೀತಾ…..” ಎಂದು ಯಾರೊ ಕರೆದ ಹಾಗಾಯಿತು. ನಾನು ನನ್ನ ಹಳೆಯ ನೆನಪುಗಳಿಂದ ವಾಸ್ತವಕ್ಕೆ ಬಂದೆ.ಪಕ್ಕದ ಮನೆ ವಿಶಾಲಕ್ಷಮ್ಮನವರು ತಮ್ಮ ಮನಿ ಮಂಗವಾಳರದ ಲಕ್ಷ್ಮಿ ಪೂಜಾದ ಅರಿಷಣ ಕುಂಕಮ ಕರೆಯಲು ಬಂದಿದ್ದರು. ಬರುತ್ತೇನೆ ಎಂದು ಹೇಳಿ ಕಳಿಸಿದೆ.  ನಾನು ಬೇಗ ಬೇಗನೆ ಪೂಜೆ ಮುಗಸಬೇಕೆಂದು ನನ್ನ ಕಾರ್ಯ ದಲ್ಲಿ ತಲ್ಲೀನಳಾದೆ. ********* ಎರಡು ದಿನಗಳ ನಂತರ ಅಮ್ಮನಿಂದ ಪೋನ ಬಂತು. ಅಮ್ಮ “ಲೇ ಸೀತಾ ಅಜ್ಜಿ ಬಗ್ಗೆ ಹಾಗ ಮಾತಾಡಬಾರದಿತ್ತು. ಮೊನ್ನೆ ಅಪ್ಪನಿಗೆ ಕಪಾಟನಲ್ಲಿ ಒಂದ ರಸೀದಿ ಸಿಕ್ಕಿತು. ನಿನ್ನಜ್ಜಿ ಇಪ್ಪತ್ತ ವರಷದ ಹಿಂದ ೧೦೦೦೦ ರೂಪಾಯಿ ಪೊಸ್ಟ ಆಫಿಸನಾಗ ಇಟ್ಟಿದ್ಲಂತ ಅದೀಗ ೧ ಲಕ್ಷ ಸಮೀಪ ಆಗೇತಿ. ಇವರು ಅದರಲೇನ ನನಗೊಂದು ಬೋರಮಾಳ ಸರ ಮಾಡಸಿರು. ನೀನು ನಿಮ್ಮತ್ತಿಗೆ ಚಾಕರಿ ಮಾಡುವಾಗ ನನ್ನಂಗ ಯೊಚಿಸಬೇಡ” ಎಂದು ಖುಷಿಯಲೆ ಹೇಳಿದಳು. ನಾನು “ನೊಡಮ್ಮ ನಾನಂದಿದ್ದಿಲ್ಲಾ ನಿನ್ನ ಸೇವೆಯ ಫಲ ಸಿಗ್ತದಂತ. ಚುಲೊ ಆತು” ಎಂದು ಉಳಿದೆಲ್ಲ ಕುಶಲೊಪಚರಿ ಮಾತನಾಡಿ ಪೊನ್ ಇಟ್ಟೆ. **********  ಮನಸ್ಸು ಯೊಚಿಸತೊಡಗಿತು. ಮನಷ್ಯನಿಗೆ ಆಸೆ ಸಹಜ. ಎಷ್ಟೊ ಸಾರಿ ಬದುಕಿನ ಸಂದಿಗ್ದ ಪರಿಸ್ಥತಿಯಲ್ಲಿ ‘ಏನ ಮಾಡುದ ಬಂತಪಾ ಕರ್ಮ’ ಎಂದು ಯೊಚಿಸುತ್ತೇವೆ.  ಕರ್ಮದ ಫಲಗಳ ಮೇಲಿನ ಆಸೆಯಿಂದ ಅಂದು ಕೊಳ್ಳುತ್ತಿರುತ್ತೇವೆ.  ಆದರೆ ಆಸೆಯನ್ನು ಬದಿಗಿಟ್ಟು ಮನಸಾಕ್ಷಿಯಿಂದ ಕೆಲಸ ಮಾಡಿಬೇಕು.  ಶ್ರೀ ಕೃಷ್ಣ ಹೇಳಿದಂಗ ನಮ್ಮ ಕರ್ತವ್ಯವನ್ನು ಶ್ರದ್ದೆಯಿಂದ ಮಾಡುಬೇಕು.  ಕೆಲಸ, ಕರ್ತವ್ಯಗಳನ್ನು ಮಾಡುವದರಲ್ಲಿ ಮನಸ್ಸಿಡಬೇಕು.  ಫಲಾ ಫಲಗಳನ್ನ ದೇವರಿಗೆ ಬಿಡುಬೇಕು “ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ|| ಮಾ ಕರ್ಮಫಲ ಹೇತುರ್ಭೂ || ಮಾ ತೇ ಸಂಗೋಸ್ತ್ವ ಕರ್ಮಣಿ”  ಶ್ರೀದೇವಿ. ಮ. ಗುಮ್ಮಗೋಳ

“ಕರ್ಮದ ಫಲ” ಸಣ್ಣ ಕಥೆ, ಶ್ರೀದೇವಿ. ಮ. ಗುಮ್ಮಗೋಳ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಅವರ ಗಜಲ್ ಕತ್ತಲೆಗೊಂದಷ್ಟು ವಿಶ್ರಾಂತಿ ನೀಡೋಣ ಬಾಬೆಳಕಿಗೊಂದಷ್ಟು ಕೆಲಸವ ಕೊಡೋಣ ಬಾ ಹೊರಗೋ ಒಳಗೋ ಕತ್ತಲನ್ನ ಕಳಿಬೇಕಂತಹೊಳಪಿಗೊಂದಷ್ಟು ಹಾಡು ಹಾಡೋಣ ಬಾ ಕತ್ತಲೆ ಕವಿದಲ್ಲೆಲ್ಲ ಕವಿ ಕಂದೀಲಾಗಬೇಕಂತತಿಮಿರಕ್ಕೊಂದಷ್ಟು ತಿವಿದು ಕಾಡೋಣ ಬಾ ಎದೆಹಣತೆಯದು ಸದಾಕಾಲ ಬೆಳಗಬೇಕಂತಜತೆಯಾಗೊಂದಷ್ಟು ಹೆಜ್ಜೆಯ ಇಡೋಣ ಬಾ ನಾ ಹೆಚ್ಚು ನೀ ಹೆಚ್ಚು ಎಂಬುದೆಲ್ಲ ಹುಚ್ಚಂತಕುಡಿಯಲ್ಲೊಂದಷ್ಟು ಸೊಕ್ಕ ಸುಡೋಣ ಬಾ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

You cannot copy content of this page

Scroll to Top