ಕಾವ್ಯ ಸಂಗಾತಿ
ಡಾ. ಪುಷ್ಪಾವತಿ ಶಲವದಿಮಠ
“ಅರಿವಿನ ದಾರಿ ಹುಡುಕುತ”


ಇದ್ದು ಬಿಡು ಸುಮ್ಮನೆ
ಬುದ್ಧನಂತೆ ಸುಮ್ಮನಿದ್ದುಬಿಡು
ಹೊರಟು ಬಿಡು
ಈ ಜಗದ ಜಂಜಡ ಕಳೆದುಕೊಂಡು ಬಿಡು
ಹೊರಟು ಬಿಡು ನೀನು
ನಡೆವ ದಾರಿ ದೊಡ್ಡದಿದೆ
ಕಲ್ಲು ಮುಳ್ಳು ಚುಚ್ಚಬಹುದು
ರಕ್ತ ಒಸರಬಹುದು
ಮುಲಾಮು ಹಚ್ಚಿಕೋ
ಪಟ್ಟಿ ಕಟ್ಟಿಕೋ
ನಡೆಯುವುದು ಮಾತ್ರ ಬಿಡಬೇಡ
ಎಲ್ಲೂ ನಿಲ್ಲಬೇಡಾ ನಡೆಯುತ್ತಲೇ ಇದ್ದುಬಿಡು
ನಿನ್ನ ಅಂಜಿಸುವವರು
ಹೀಯಾಳಿಸುವವರು
ಅನುಮಾನಿಸುವವರು
ಹಿಂದೆಳೆಯುವವರು
ತೆಗಳುವವರು
ಬೈಯುವವರು
ನೂರೆಂಟು ಮಂದಿ ಇರಬಹುದು
ಬಿಟ್ಟು ಬಿಡು ಮಂದಿಯ ಸಹವಾಸ
ಮನದ ಮಾತು ಕೇಳು ಸಾಕು
ನಿನ್ನ ಕಷ್ಟ ಕಣ್ಣಿರಿಗೂ ಕರುಗುವರಿಲ್ಲ
ಈ ದುರ್ಬಲತೆಯ ನೀಗಲೇ ಬೇಕು ನೀನು
ನಿನಗೆ ನೀನು ಆಸರೆಯಾಗಬೇಕು
ಕಾಲ ನಿಲ್ಲುವುದಿಲ್ಲ
ನೀನು ನಿಂತರೆ ಹೇಗೆ?!
ತಳ್ಳಿಕೊಂಡೆ ಹೋಗಿಬಿಡುವುದು ಕಾಲ
ಜೊತೆಗೆ ನಿಲ್ಲುವರಿಲ್ಲ
ನಿಲ್ಲಬೇಡ ನೀನು ಓಡು ಓಡು
ಯಾರಿಗೂ ಕಾಯಬೇಡ
ಯಾರೂ ಕಾದಿಲ್ಲ ನಿನಗಾಗಿ
ಒಂಟಿ ಪಯಣವೆಂದು ಬೇಸರಸದಿರು
ದೂರದ ದಡ ಸೇರಲು
ಒಂಟಿಯಾಗಿಯೇ ನಡೆಯಬೇಕು
ನಿನ್ನ ಪಾಪ ಪುಣ್ಯಗಳ ಮೂಟೆ ಹೆಗಲಿಗೆರಿಸಿಕೊಂಡು
ನಡೆದು ಬಿಡು ಮೋಹ ಮಮಕಾರಗಳ ತೊರೆದು
ಬುದ್ಧ ಬಸವ ನಡೆಯಲಿಲ್ಲವೇ
ಅವರ ದಾರಿಯೇನು ಸಲೀಸಾಗಿತ್ತೆ?!
ಬೆಳಕಿನ ಅರಮನೆಗೆ
ನೂರಾರು ದಾರಿಗಳಿವೆಯಂತೆ
ನಡೆದು ಬಿಡು ಬೆಳಕಿನೆಡೆಗೆ
ಸವಿ ಸಗ್ಗ ಪಡೆಯಲು
ಇಹದ ಕಗ್ಗ ಬಿಡಿಸಿಕೊಳ್ಳಬೇಕು
ಬಿಡಿಸಿಕೊಂಡು ಬಿಡು
ಅಲ್ಲಮ ನಡೆದ ದಾರಿ
ಅಕ್ಕ ನಡೆದ ದಾರಿ
ನಿನ್ನೆದುರಿಗಿದೆ
ಆ ದಾರಿಗುಂಟ ನಡೆದು ಬಿಡು
ಸಿಗಬಹುದು ನಿನಗೆ
ಅರಿವಿನ ಮನೆ
ಬೆಳಕಿನ ಅರಮನೆ
ತೊರೆದು ಬಿಡು ಸಾವಿರ ಚಿಂತೆ
ಇದ್ದು ಬಿಡು ಬುದ್ಧನಂತೆ
ಹೊರಟು ಬಿಡು ಹೊರಟು ಬಿಡು
ಬಿಟ್ಟು ಅವರಿವರ ಚಿಂತೆ
ಅರಿವ ದಾರಿ ಹುಡುಕುತ
ಕನಕ ಶರೀಫರು ಮೀಟಿದ
ತಂಬೂರಿ ಮೀಟತ…..
ಡಾ. ಪುಷ್ಪಾವತಿ ಶಲವದಿಮಠ



