ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್


ಮನದ ಮಗು ಹಠ ಮಾಡುವ ಮುನ್ನ ಬಂದುಬಿಡು
ನೊಂದು ಬಿಕ್ಕಿ ಅಳುವ ಮುನ್ನ ಬಂದುಬಿಡು
ಇರಲಿ ಮೈಲುಗಟ್ಟಲೇ ಅಂತರ ಇಬ್ಬರ ನಡುವೆ
ನೆನಪು ನರಳುತ ಮಾಸುವ ಮುನ್ನ ಬಂದುಬಿಡು
ನನಗೂ ಇದೆ ಹಗಲು ದುಡಿಯುವ ಜವಾಬ್ದಾರಿ
ಇರುಳ ಕನಸು ಸಾಯುವ ಮುನ್ನ ಬಂದುಬಿಡು
ಜೊತೆ ಬಾಳುವ ಅವಕಾಶವೇ ಇಲ್ಲ ನಮಗೆ
ಪ್ರೀತಿಯ ಎದೆಬಡಿತ ನಿಲ್ಲುವ ಮುನ್ನ ಬಂದುಬಿಡು
ವಾಣಿಯ ಈ ಜನ್ಮವೆನೋ ಕಳೆಯುವುದು ವಿರಹದಿ
ಮರುಜನ್ಮದಿ ಮತ್ಯಾರೋ ಕೈ ಹಿಡಿವ ಮುನ್ನ ಬಂದುಬಿಡು
ವಾಣಿ ಯಡಹಳ್ಳಿಮಠ



