ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಡಾ. ಸಂಗಮೇಶ ಎಸ್. ಗಣಿ
ಪುಸ್ತಕ ಸಂಗಾತಿ ಡಾ. ಸಂಗಮೇಶ ಎಸ್. ಗಣಿ ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಮೌನ ಧ್ಯಾನಗಳ ಫಲ ಮೌನೇಶ್ ರ ‘ಬಿಸಿಲೇ ಬೆಳದಿಂಗಳು’ ಬಯಲು ಸೀಮೆಯ ಬಿಸಿಲನ್ನು ಬೆಳದಿಂಗಳಾಗಿಸುವ ಆಶಯವನ್ನು ಹೊತ್ತುಕೊಂಡಿರುವ ಕವಿ ಬಡಿಗೇರ ಮೌನೇಶ್ ಅವರ ‘ಬಿಸಿಲೇ ಬೆಳದಿಂಗಳು’ ಕವನ ಸಂಕಲನವು ಮಾನವ ಕುಲದ ಬೇಗುದಿಗಳನ್ನು ಬಯಲು ಮಾಡುತ್ತಲೇ ಬಾಳಿನಲ್ಲಿ ಬೆಳದಿಂಗಳಾಗುವ ಹಂಬಲವನ್ನು ಪ್ರಕಟಿಸುತ್ತದೆ. ಬಿಸಿಲೇ ಬೆಳದಿಂಗಳಲ್ಲಿ ಒಟ್ಟು 36 ಕವಿತೆಗಳಿವೆ. ಇಲ್ಲಿ ಪ್ರೀತಿ, ಪ್ರೇಮ, ವಿರಹ, ಸ್ನೇಹ, ಅಪ್ಪ-ಅಮ್ಮ ಮಗಳು,ಮನುಷ್ಯ ಸಂಬಂಧಗಳು, ಮನುಷ್ಯನ ಮುಖವಾಡ, ಮನಸ್ಸಿನ ಸಂಕಟ, ತಲ್ಲಣ, ತಳಮಳ, ಕನಸು ಕನವರಿಕೆ, ಪರಿಸರ, ನಾಡು ನುಡಿ ಅಭಿಮಾನ, ಯುದ್ಧ, ಬುದ್ಧ, ಅಂಬೇಡ್ಕರ್, ಸ್ತ್ರೀ ಸಂವೇದನೆ, ಮನಸ್ಸಿನ ವೇದನೆ, ಸಂಕಟ, ಸಂಭ್ರಮ, ಸಂಘರ್ಷ, ಬದುಕು, ಬೆಳಕು ಎಲ್ಲವೂ ಇವರ ಕಾವ್ಯಕ್ಕೆ ವಸ್ತುಗಳಾಗಿ ಒದಗಿ ಬಂದಿವೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮುಖ್ಯ ಅವಸ್ಥೆಗಳಲ್ಲಿ ತಾರುಣ್ಯವೂ ಒಂದು ಹೊಸ ಹುರುಪು ಮತ್ತು ಕನಸು, ಕನವರಿಕೆ, ಉನ್ಮಾದ ಉದ್ವೇಗಗಳೆಲ್ಲವೂ ಇರುವ ಈ ಹಂತದಲ್ಲಿ ಜಾಗರೂಕತೆ ಅಗತ್ಯ ಎಂಬುದನ್ನು ಅರಿತ ಕವಿತಾರುಣ್ಯಸಪ್ತಸಾಗರಗಳ ದಾಟಿಮುಗಿಲ ನಕ್ಷತ್ರಗಳ ತರುವವ್ಯರ್ಥ ಕನಸಲ್ಲಅವಕಾಶ ಸಿಕ್ಕರೆಆಕಾಶಕ್ಕೆ ಏಣಿ ಹಾಕುವಸಾರ್ಥಕ ಹೊಂಗನಸು (ತಾರುಣ್ಯ) ಎಂದು ಹೇಳುತ್ತಲೇ ‘ಅದು ದೇಹ ಸಂಬಂಧಿಯಲ್ಲ ಆತ್ಮ ಮನಸುಗಳ ಬಂಧಿ, ಅಸಾಧ್ಯವ ಸಾಧ್ಯವಾಗಿಸುವ ಭಾವಾಂಬುಧಿ’ ಎನ್ನುತ್ತಾನೆ. ಅವಳಿಲ್ಲದೆ ಅವನಿಲ್ಲ. ಅವನಿಗೆ ಅವಳೇ ಎಲ್ಲ. ಅವಳೆಂದರೆ ಅವನ ಪಾಲಿಗೆ ಕವಿತೆ. ಕವಿತೆ ವ್ಯಾಖ್ಯಾನಕ್ಕೆ ಒಗ್ಗದ್ದು, ಹಾಗೆಯೇ ಅವಳೂ ಸಹ ಅರಿತಷ್ಟು ಆಳ, ಅರಿವಿಗೆ ನಿಲುಕದ ಅವಳು ನಿಗೂಢ. ಮೊದಲಲ್ಲಿ; ಅವಳೆಂದರೆಎಂದೋ ಬರೆದು ಮುಚ್ಚಿಟ್ಟ ಅನಂತ ನೆನಪುಗಳು ತುಂಬಿದ್ದ ಆತ್ಮಕಥೆಯಂತೆಸನಿಹವಿದ್ದರೂ ಕೈಗೆಟುಕದ ಕೊನೆಯಾಗದ ಖುಷಿಯಂತೆ (ಅವಳೆಂದರೆ) ಎನ್ನುವ ಕವಿಗೆ ಸನಿಹವಿದ್ದದ್ದೆಲ್ಲ ಸವಿಯಾದುದು, ಸಹ್ಯವಾದುದು. ಆತ್ಮಕಥೆಯಲ್ಲಿ ಎಲ್ಲ ವಿವರಗಳು ಆಪ್ತ, ನಿಚ್ಚಳ. ಅದೇ ರೀತಿಯಲ್ಲಿ ಆರಂಭದಲ್ಲಿ ಅವಳ ಸಾಮೀಪ್ಯ, ಸಖ್ಯ ಹಿತವಾದುದು. ಕ್ರಮೇಣ ಅವಳೆಂದರೆ ಬದುಕಿನ ಮರುಭೂಮಿಯ ಮರೀಚಿಕೆ, ಹಿಂಬಾಲಿಸುವ ನೆರಳು ಎಂಬಂತಾಗುತ್ತದೆ. ಕೊನೆಗೆ; ಅವಳೆಂದರೆಎಷ್ಟು ಬಾರಿ ಓದಿದರೂಅರಿವಿಗೆ ನಿಲುಕದಅರ್ಥವಾಗದ ಕವಿತೆಯಂತೆ (ಅದೇ) ಎಂಬುದಾಗಿ ಶರಾ ಬರೆಯುವನು. ಆತ್ಮಕಥೆ ಮತ್ತು ಕಾವ್ಯ ಪರಿಭಾಷೆಗಳಲ್ಲಿ ಪ್ರೇಮದ ಸ್ವರೂಪವನ್ನು ನಿರೂಪಿಸುವುದು ಇಲ್ಲಿ ವಿಶೇಷ. ಬದುಕಿನಲ್ಲಿ ಅವಳ ಇರುವಿಕೆ ಶ್ರಾವಣ ಮಾಸದಂತೆ ಸಂತಸ ಸಂಭ್ರಮವನ್ನು ಹೊತ್ತು ತರುತ್ತದೆ. ಧನ್ಯನಾದೆ ಮಾನ್ಯನಾದೆ ಗೆಳತಿ ನಿನ್ನ ಸನಿಹಕೆ ಇಷ್ಟು ದಿನದ ವಿರಹ ಬೇಗೆ ಎಲ್ಲ ಮರೆತೆ ಇಂದಿಗೆ (ಮತ್ತೆ ಬಂತು ಶ್ರಾವಣ) ಎನ್ನುವ ಕವಿಗೆ ಅವಳ ಸಾಮೀಪ್ಯದ ಸುಖದೊಳಗೆ ವಿರಹದ ಬೇಗೆಯಲ್ಲ ಆರಿ ತಣ್ಣಗಾಗುತ್ತದೆ. ಅವಳಿಗಾಗಿ ಪಟ್ಟ ಪಾಡು, ವೇದನೆಗಳೆಲ್ಲ ಈಗ ಮಾಯವಾಗಿದೆ. ಹಿಂದಿನದನ್ನೆಲ್ಲ ಮತ್ತೆ ಮರು ನೆನಪಿಸಿಕೊಳ್ಳುವುದು ಬೇಡ ಎಂದು ತಿಳಿದು ;ಕಳೆದ ಕಾಲದ ಮಾತದೇಕೆ ಲೆಕ್ಕವಿಲ್ಲದ ವೇದನಎಲ್ಲ ಮರೆಸಿ ಚಿಗುರಿ ನಿಂತುಮತ್ತೆ ಬಂತು ಶ್ರಾವಣ (ಅದೇ) ಎಂಬುದಾಗಿ ಹೇಳುತ್ತಾ, ಕಳೆದ ಕಾಲದ ನೆನಪುಗಳ ಗೊಡವೆಗೆ ಹೋಗದೆ ನೋವು ನಲಿವುಗಳನ್ನು ಸಮವಾಗಿ ಸ್ವೀಕರಿಸುವ ಸಮತೋಲನ ಭಾವ ಮುಖ್ಯ ಎಂಬುದನ್ನು ಅರುಹುತ್ತಾನೆ. ನೀನು ಒಲವಿನೂರಿನ ಸಿರಿಯ ತೋರಲುಕೈಹಿಡಿದು ಹೊರಟೆನಾನು ಹಿಂಬಾಲಿಸಿದೆ (ಒಲವಿನ ಹಾದಿ) ಎನ್ನುವ ಕವಿಗೆ ‘ನನ್ನ ಮೌನಕ್ಕೆ ಮಾತಾಗಿ, ಮಾತುಗಳಿಗೆ ದನಿಯಾಗಿ ಸುಂದರ ಹಾಡಾದ ಪರಿ’ ಅನನ್ಯ. ಪ್ರೇಮದ ದಾರಿಯಲ್ಲಿ ನಡೆಯುವುದೇ ಸಿಹಿಯಾದ ಅನುಭೂತಿ. ‘ಒಲವು ನಡೆಸಿದ ಈ ಹಾದಿ ಖಂಡಿತ ಕಹಿಯಲ್ಲ ಹಿತವಾಗಿ ಕಾಡುವ ಇಂಪಾದ ಹಾಡು’ ಎನಿಸುತ್ತದೆ. ಹೀಗೆ ಪ್ರೇಮದ ಪರಿಯನ್ನು ಪರಿಚಯಿಸುವ ಕವಿಗೆ ಅದೊಂದು ಸುಂದರ ಅನುಭೂತಿ. ಕಾವ್ಯದ ಸಾಮಾಜಿಕ ಪ್ರಜ್ಞೆ ಸಾಮಾಜಿಕ ಸನ್ನಿವೇಶಗಳೊಂದಿಗೆ ಸಂವಹಿಸದ ಸಾಹಿತ್ಯ ಸಾಯುತ್ತದೆ. ಈ ಹಿನ್ನೆಲೆಯಲ್ಲಿ ಕವಿ ಸಾಮಾಜಿಕ ಪ್ರಜ್ಞೆ ಮೆರೆಯುತ್ತಾನೆ. ದೇಶಕ್ಕಾಗಿ ದುಡಿಯುವ ಪ್ರಾಮಾಣಿಕ ಸೈನಿಕರ ಅಗತ್ಯತೆಯನ್ನು ಪ್ರತಿಪಾದಿಸುವುದರ ಜೊತೆಗೆ ‘ಕದನ ಬಯಸುವ ಕೇಡಿಗಳಲ್ಲ ನಾವು ದೇಶದ ಏಳ್ಗೆಗೆ ನಿಷ್ಠೆಯಿಂದ ದುಡಿವ ಶ್ರಮ ಜೀವಿಗಳು’ (ನಾವು) ಎನ್ನುವುದು ವಿಶೇಷ. ಶಾಂತಿ ಕದಡುವ ಕಿಡಿಗೇಡಿಗಳೆಲ್ಲ ನಾವುಬಂಜರೆದೆಗಳ ಮೇಲೆಶಾಂತಿಯ ಹೂ ಗಿಡಗಳ ಬೆಳೆಸುವ ಕುಶಾಗ್ರಮತಿಗಳುಜಗಕೆ ಶಾಂತಿ ಸಾರುವ ಭಾರತೀಯರು ನಾವು (ಅದೇ) ದೇಶಭಕ್ತಿ, ಅಭಿಮಾನ, ರಾಷ್ಟ್ರಪ್ರೇಮ ಎನ್ನುವುದು ಬರೀ ಮಾತು ಭಾಷಣಗಳಿಗೆ ಸೀಮಿತವಾಗದೆ ಅದು ಬದುಕಿನ ಭಾಗವಾಗಬೇಕೆಂಬ ಅದಮ್ಯ ಬಯಕೆ ಕವಿಯದು. ಸೈನಿಕರ ತ್ಯಾಗ, ಬಲಿದಾನಗಳು ಎಂದಿಗೂ ವ್ಯರ್ಥವಾಗುವುದಿಲ್ಲ. ಬದಲಾಗಿ ಸಾರ್ಥಕ ಭಾವವಾಗಿ ಜೀವ ಚೈತನ್ಯವಾಗಿ ಮನಸ್ಸಿನಾಳದಲ್ಲಿ ಜೀವಂತವಾಗಿರುತ್ತವೆ . ಹೀಗಾಗಿ ಕವಿವ್ಯರ್ಥವಾಗದು ಬಲಿದಾನ ಸಾರ್ಥಕವು ಪ್ರಾಣಾರ್ಪಣ (ಅಮರ ನಿಮ್ಮ ಜೀವನ) ಎಂದು ಹೆಮ್ಮೆ, ಅಭಿಮಾನದಿಂದ ಹೇಳುತ್ತಾನೆ. ಬಂಜರಾದ ಎದೆಗಳಲ್ಲಿ ಶಾಂತಿಯ ಹೂಗಳನ್ನು ಅರಳಿಸುವ ಮಹತ್ವಾಕಾಂಕ್ಷೆ ಪ್ರಕಟಿಸುವ ಕವಿತೆ ಹೃದಯದಲ್ಲಿ ವಿಕೃತಿ ವಿಕಾರ ವಿಲಕ್ಷಣಗಳಿಗೆ ಜಾಗವಿಲ್ಲ. ಯುದ್ಧದ ಭೀತಿಯಲ್ಲಿ ಕರಾಳ ಕತ್ತಲೆಯಲ್ಲಿ ಅಮಾಯಕರ ನೋವು, ನರಳಾಟಕ್ಕೆ ಕೊನೆ ಇರುವುದಿಲ್ಲ. ಇಂತಹ ವಿಷಮ ಗಳಿಗೆಯಲ್ಲಿಯೇ ಕವಿ ಮಾನವೀಯತೆಗಾಗಿ ಹಂಬಲಿಸುವುದು; ಅಮಾನುಷ ಹಿಂಸೆಗೆ ಸಿಕ್ಕ ಅಮಾಯಕ ಗಾಯಾಳುಗಳ ಕಂಡು ಮರುಗಿದ ಮಮತಾಮಯಿ….ಜೀವ ಕಾರುಣ್ಯದ ಮಡುವು.. (ಆರದ ದೀಪ) ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ನೆನಪಿಸುವ ಕವಿ ಈ ಕರಾಳ ಕತ್ತಲಮಯ ಜಗತ್ತಿಗೆ ಆರದ ದೀಪವಾಗಿ ಒದಗಿ ಬರಬೇಕು ಎಂದು ಆಶಿಸುತ್ತಾನೆ. ಜಾತಿ ಮತ ಪಂಗಡ ಇವೆಲ್ಲವೂ ಈ ಸಮಾಜಕ್ಕೆ ಅಂಟಿದ ರೋಗಗಳು. ಇವು ಎಂದಿಗೂ ಮನುಷ್ಯ ಬದುಕನ್ನು ನುಂಗಿ ನೀರು ಕುಡಿಯುತ್ತಿವೆ. ಆಪೋಷಣೆ ಮಾಡುತ್ತಿವೆ. ಇಡೀ ವಿಶ್ವವೇಒಂದು ಗೂಡಾದರೆ ಎಷ್ಟು ಚೆಂದ! ಕೂಡಿ ಬದುಕಿದರೆ ಅದರೊಳಗೆ ಜಗದ ಜನರಲ್ಲ ಭೇದ ವಿರದ ಹಕ್ಕಿಗಳ ಹಾಗೆ ಎಷ್ಟು ಚಂದ! (ಎಷ್ಟು ಚಂದ!) ಎಂಬುದಾಗಿ ಸೌಹಾರ್ದ, ಸಹಬಾಳ್ವೆಗೆ ಹಂಬಲಿಸುವ ಕವಿ ಸಮಾಜ, ದೇಶ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವನ್ನೂ ಸೂಚಿಸುವುದು ಹೀಗೆ; ಶೋಷಣೆ ವರ್ಣದ್ವೇಷಗಳ ಪೊರೆ ಕಳಚಿಯುದ್ಧ, ಭಯೋತ್ಪಾದನೆಗಳ ಭಯ ಬಿಡಿಸಿಧರ್ಮಾoಧತೆ, ಕೋಮುದಳ್ಳುರಿಯ ದಹಿಸಿ ಅಸಮಾನತೆಯ ತೆರೆಸರಿಸಿ ಸಮಾನತೆಯ ರೆಕ್ಕೆಗಳ ಚಾಚಿ ಸ್ವೇಚ್ಛೆಯಲಿ ಹಾರಿದರೆ ಸ್ವಚ್ಛoದ ಮುಗಿಲೆತ್ತರ ನಾವೆಲ್ಲ (ಅದೇ) ಎನ್ನುವುದು ವಿವೇಚನಾರ್ಹ. ಸಮಾಜದ ಅನೇಕ ಸಮಸ್ಯೆಗಳಿಗೆ ಬುದ್ಧ, ಬಸವ, ಪಂಪ, ಗಾಂಧೀಜಿ, ಅಂಬೇಡ್ಕರ್, ಮದ್ದಾಗಿ ಒದಗುತ್ತಾರೆ. ಈ ಬಗ್ಗೆ ಕವಿ ದಮನಿತರಿಗೆ, ದಲಿತರಿಗೆ ದನಿಯ ನೀಡಿದ ದ್ರಷ್ಟಾರಜಾತಿ ಗೋಡೆಯ ಕುಟ್ಟಿ ಕೆಡವಲು ಕರೆಯಕೊಟ್ಟ ದಿಟ್ಟ ಧೀರ ‘ತುಳಿಯುವವರ ನೆತ್ತಿಯ ಮೇಲೆ ಕಾಲಿಟ್ಟು ಬೆಳೆದೆ ಬಲು ಎತ್ತರ’ (ದಮನಿತರ ನೇಸರ) ಎಂಬುದಾಗಿ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವನು. ಅಲ್ಲದೆ ಅವರನ್ನು ‘ನೊಂದು ಬೆಂದವರೆದೆಗೆ ಭರವಸೆಯ ಬಿತ್ತಿದ ಮಾನವತೆಯ ಆಗರ..’ ಎಂಬುದಾಗಿ ಬಣ್ಣಿಸುವನು. ದೇವರನ್ನೇ ದೂರುವ ಧೈರ್ಯದಿಂದ ಪ್ರಶ್ನೆ ಮಾಡುವ ಕವಿ ಅವತರಿಸಿ ಬರುವುದಾದರೆ, ಚಳಿಗಾಳಿಗೆ ಮೈಯೊಡ್ಡಿ ದುಡಿಯುವ ಬಡವರ ಗೋಳು ನೋಡಲು ಬಾ ಎಂದು (ಅವತರಿಸಿ ಬಾ) ಕರೆಯುವುದು ಕವಿಯ ಸಾಮಾಜಿಕ ಕಳಕಳಿಯ ದ್ಯೋತಕವಾಗಿದೆ. ಗಾಂಧೀಜಿ ಅಪಮೌಲ್ಯಕ್ಕೆ ಒಳಗಾಗುತ್ತಿರುವ ಈ ಹೊತ್ತಿನಲ್ಲಿ ಕವಿ ಪ್ರಿಯ ಗಾಂಧಿ!ನೀನು ಹುಟ್ಟಿದ ದಿನ ಮಾತ್ರ ನೆನೆಯುತ್ತೇವೆ ನಿನ್ನ, ತತ್ವಸಾರವನನುಪತ್ರಿಕೆಯ ಲೇಖನಗಳಲಿ ವೇದಿಕೆಯ ಭಾಷಣಗಳಲಿ.. (ಪ್ರಿಯ ಗಾಂಧಿ) ತತ್ವಾನುಷ್ಠಾನದ ಅಗತ್ಯತೆಯನ್ನು ಮನಗಾಣಿಸುತ್ತಾರೆ. ಧರ್ಮ ಒಂದು ಬಗೆಯ ಅಫೀಮು. ಅದು ಎಲ್ಲರನ್ನೂ ಮಂಪರು ಮಾಡುತ್ತಿದೆ. ಧರ್ಮ ಮಾನವ ಒಳಿತಿಗಿರಬೇಕೆ ಹೊರತು ಕೇಡಿಗಲ್ಲ. ನಮಗೆ ಎಂಥ ಮನುಷ್ಯರ ಅಗತ್ಯವಿದೆ ಎಂಬುದನ್ನುಧರ್ಮದ ಅಫೀಮನ್ನು ತಲೆಗೇರಿಸಿಕೊಡುದ್ವೇಷದ ಕಿಡಿ ಉಗುಳುವವ್ಯಗ್ರ ಮನುಷ್ಯರಲ್ಲ ನಮಗೆ ಬೇಕಿರುವುದು…. (ನಮಗೆ ಬೇಕಿರುವುದು) ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನುಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಬುದ್ಧನಂಥ ಕರುಣಾಮಯಿಗಳ ಅವಶ್ಯಕತೆ ಇದೆ. ಎಂಬುದನ್ನು ಸಾರಿದ್ದಾನೆ. ಸಾಮರಸ್ಯದ ಬಾಳಿಗೆ ಸಹನೆ, ಸೌಹಾರ್ದತೆ ಅತ್ಯಗತ್ಯ. ಸಹನೆ, ಸೌಹಾರ್ದತೆಗಳಿಲ್ಲದ ಬರಡು ಹೃದಯದೊಳಗೆ ಹರಿದಾಡಿಹಸಿರು ಚಿಗುರಿ ಜೀವ ತುಂಬಿ ಸಮೃದ್ಧವಾಗಿ ತೊನೆಯಲು ಮನಸ್ಸು ನದಿಯಾಗಬೇಕು (ಮನಸ್ಸು ನದಿಯಾಗಬೇಕು) ತನ್ನೆಲ್ಲಾ ಮಿತಿಗಳನ್ನು ಮೀರಿಕೊಳ್ಳಲು ಮನುಷ್ಯ ನದಿಯಾಗಬೇಕು ಎಂದು ಆಶಿಸುವುದು ಬಹಳ ದೊಡ್ಡ ಮೌಲ್ಯ. ಕಾವ್ಯದಲ್ಲಿ ಜೀವನ ಜಿಜ್ಞಾಸೆ ಈ ಜೀವನವೇ ಸೋಜಿಗ ಅರ್ಥಮಾಡಿಕೊಳ್ಳಲು ಹೋದಷ್ಟು ನಿಗೂಢ. ಆದ್ದರಿಂದ ಕವಿಗೂ ಈ ಜಿಜ್ಞಾಸೆ ತೀವ್ರವಾಗಿ ಕಾಡಿದೆ.ಓ ಬದುಕೇ!ಎಷ್ಟೊಂದು ವಿಸ್ಮಯ ನಿನ್ನೊಡಲು ಆಳ ವಿಸ್ತಾರಗಳರಿಯದ ಕಡಲು! (ಓ ಬದುಕೇ! ) ಅನೇಕ ದಾರ್ಶನಿಕರು, ಸಾಧು ಸಂತರು, ಶರಣರು ಎಲ್ಲರೂ ಈ ಬದುಕಿನ ಬಗೆಯನ್ನು ಬೆದಕಿದವರೇ. ಆದರೆ ಅರ್ಥ ಮಾತ್ರ ಸಿಕ್ಕಿಲ್ಲ. ಈ ಬದುಕೇ ಅಚ್ಚರಿಯ ಆಗರ. ಮನುಷ್ಯ ಮುಖವಾಡಗಳನ್ನೇ ಹಾಕಿಕೊಂಡಿರುವುದರ ಕುರಿತು ಕಳವಳಿಸುವ ಕವಿ, ಅದನ್ನು ಕಾಳಜಿ, ಪ್ರಾಮಾಣಿಕ, ಪರಿಶುದ್ಧ ಹೃದಯದಿಂದ, ಮಾನವೀಯ ಅಂತಃಕರಣದಿಂದ ಬಾಳಬೇಕೆಂಬ ನಿಲುವನ್ನು ತಾಳುತ್ತಾನೆ. ಕರುಣೆಗಳೆಲ್ಲ ಕಕ್ಕುಲತೆಗಳೆಲ್ಲ ಮುಖವಾಡಗಳ ಗೋಸಂಬಿ ತನಕೆ ಮೋಸ ಹೋಗಿವೆನಿಷ್ಠೆ, ಪ್ರಾಮಾಣಿಕತೆಗಳು ದೆಸೆಗಟ್ಟು ಓಡುತಿವೆ ನಿಜ ಬದುಕಿಗೆಲ್ಲಿ ಬೆಲೆ (ಮುಖವಾಡದ ಬದುಕು) , ನ್ಯಾಯ, ನಿಷ್ಠೆ, ಪ್ರಾಮಾಣಿಕತೆಗಳಿಂದಲೇ ಈ ಬದುಕಿಗೆ ಬೆಲೆ ಇಲ್ಲದಿದ್ದರೆ ಅದು ನಿರರ್ಥಕವಾಗುತ್ತದೆ ಎಂಬುದನ್ನು ಕವಿ ಸ್ಪಷ್ಟಪಡಿಸಿದ್ದಾನೆ. ಈ ಜೀವನ ಅನಿಶ್ಚಿತತೆ, ಅಸ್ಥಿರತೆಗಳಿಂದ ಕೂಡಿದ್ದು, ಮನುಷ್ಯನನ್ನು ಕಂಗೆಡಿಸುತ್ತದೆ. ಆದರೆ ಧೃತಿಗೆಡದಂತೆ ಬಾಳಲು ಎಚ್ಚರಿಸುವ ಕವಿ ‘ಸೋತಷ್ಟು ಸತಾಯಿಸುವ ಬದುಕಿದು ಅತ್ತಷ್ಟು ಅಳಿಸುವ ಜಗವಿದು ಬೆದರದೆ ಬೆಚ್ಚಗೆ ಕಲ್ಲಾಗಿಸು ಎದೆಯ ತಿಳಿ ಈ ಸಮಯ ಸ್ಥಿರವಲ್ಲವೆಂಬ ನೀತಿಯ’ (ನೀರ ಮೇಲಣ ಗುಳ್ಳೆ) ಸಾರ್ವಕಾಲಿಕ ಸತ್ಯವನ್ನು ನುಡಿಯುತ್ತಾನೆ. ಬದುಕುವ ಛಲ ತುಂಬುತ್ತಾನೆ. ಅಲ್ಲದೆ ಈ ಜಗತ್ತಿನಲ್ಲಿ ವಿಚಿತ್ರ ಜನರು ಇರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾನೆ. ಕಾವ್ಯದಲ್ಲಿ ಸ್ತ್ರೀ ಚೇತನ ಈ ಸಮಾಜದಲ್ಲಿ ವೇಶ್ಯೆಯರನ್ನು ಕಾಣುವ ದೃಷ್ಟಿಯೇ ಕೀಳಾದುದು. ಮೈಮಾರಿಕೊಂಡು ಬದುಕುವ ಹೆಣ್ಣಿನ ಬಗ್ಗೆ ಮರುಕ ಪಡುವ ಕವಿ ‘ಅವಳು ಬೀದಿಯಲ್ಲರಳಿ ಮಸಣಕೆ ಶೃಂಗಾರವಾದ ಮಸಣದ ಹೂ’ ಎಂಬುದಾಗಿ ಅವಳ ದಯನೀಯ ಸ್ಥಿತಿಯನ್ನು ಅನಾವರಣ ಮಾಡಿದ್ದಾನೆ. ತಾಯಿಯು ತನ್ನ ಮಗುವನ್ನೇ ಬೆಳದಿಂಗಳು ಎಂದು ಭಾವಿಸುವ ಸಂಕಲನದ ಶೀರ್ಷಿಕೆಯುಳ್ಳ ಕವನ ‘ಬಿಸಿಲೇ ಬೆಳದಿಂಗಳು’ ಕವಿಯ ಸಂವೇದನಾಶೀಲತೆಗೆ ಸಾಕ್ಷಿ. ದುಡಿಮೆ ಮಾಡಿ ಮಗುವನ್ನು ಸಾಕುವ ಸಮಸ್ತ ತಾಯಂದಿರ ಕಷ್ಟ ಪರಂಪರೆಯನ್ನು ಕಣ್ಮುಂದೆ ತಂದು ನಿಲ್ಲಿಸುವ ಕವಿ ;ಸಿಕ್ಕತಂಗಳೆ ಮೃಷ್ಟಾನ್ನಬೀಸೋ ಗಾಳಿಯೇ ಸುವ್ವಾಲಿ ಹಕ್ಕಿಗಳುಲಿಯೇ ಗಿಲಗಿಂಚಿನಾದಬಿಸಿಲೇ ಬೆಳದಿಂಗಳವಗೆ… ( ಬಿಸಿಲೇ ಬೆಳದಿಂಗಳು ) ಪ್ರಕೃತಿಯ ಎಲ್ಲ ವ್ಯವಹಾರಗಳೂ ಮನುಷ್ಯ ಬದುಕಿನ ಭರವಸೆಯಾಗಿ ಹಾಗೂ ಪ್ರಕೃತಿ ಮಾತೆಯೇ ಪುರುಷನ ಪೋಷಣೆಗೆ ನಿಂತಿರುವುದನ್ನು ತಿಳಿಸುವ ಕವಿ ಪುರುಷ ಮತ್ತು ಪ್ರಕೃತಿ ನಡುವಿನ ನಂಟನ್ನು ತಾಯಿ ಮಗುವಿನ ಸಂಬಂಧದೊಂದಿಗೆ ಸಮೀಕರಿಸಿ ಒಂದು ರೂಪಕದ ಮೂಲಕ ಕಟ್ಟಿಕೊಟ್ಟಿರುವುದು ಗಮನಾರ್ಹ. ಮೌನ ಮತ್ತು ಧ್ಯಾನಗಳ ಮೂಲಕ ಕವಿತ್ವವನ್ನು ದಕ್ಕಿಸಿಕೊಳ್ಳುತ್ತಿರುವ ಮೌನೇಶ್ ಅವರು ಬಾಳಿನಲ್ಲಿರುವ ಬಿಸಿಲನ್ನೇ ಬೆಳದಿಂಗಳಾಗಿ ಭಾವಿಸುವ ಧನಾತ್ಮಕ ನಿಲುವು ಮತ್ತು ಆಶಯವನ್ನು ಪ್ರಕಟಿಸಿರುವುದು ವಿಶೇಷ. ಅವರಿಗೆ ಶುಭವಾಗಲಿ. ಡಾ. ಸಂಗಮೇಶ ಎಸ್. ಗಣಿಕನ್ನಡ ಪ್ರಾಧ್ಯಾಪಕರು, ಬೆಂಗಳೂರು.ಮೊಬೈಲ್ :9743171324
ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಡಾ. ಸಂಗಮೇಶ ಎಸ್. ಗಣಿ Read Post »


