ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ ಖಜಾನೆ
ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆಗಳು
ಧಾರಾವಾಹಿ ಆವರ್ತನ ಅದ್ಯಾಯ-43 ಗುರೂಜಿಯವರ ಧಾರ್ಮಿಕ ಕಾರ್ಯಕ್ಕೆ ಸುಂದರವಾಗಿ ರಂಗೋಲಿಯಿಟ್ಟು ಶೃಂಗಾರಗೊಂಡ ಜಾಗದಲ್ಲಿದ್ದ ದೈತ್ಯ ಮರಗಳು ತಂತಮ್ಮ ಅಂತ್ಯ ಕಾಲ ಸಮೀಪಿಸಿತೆಂಬುದನ್ನು ನೆನೆದು ಭಯ, ದುಃಖದಿಂದ ತರತರ ಕಂಪಿಸುತ್ತ ಕೆಲವುಕ್ಷಣ ಆಮ್ಲಜನಕವನ್ನು ಸ್ರವಿಸುವುದನ್ನೇ ಮರೆತು ಇಂಗಾಲವನ್ನು ಕಕ್ಕುತ್ತಿವೆಯೇನೋ ಎಂಬಂತೆ ಅಲ್ಲಿನ ಪರಿಸರವು ಒಮ್ಮೆಲೇ ಮಲೀನಗೊಂಡಿತು. ಅದರೊಂದಿಗೆ ಕಾಡಿನ ಸೆರಗಿನಲ್ಲಿದ್ದ ಸರೋವರವೂ ತಲ್ಲಣಿಸುತ್ತ, ಸ್ಫಟಿಕದಂಥ ಜಲರಾಶಿಯು ಮಂದವಾಗಿ ಮೇಲ್ಪದರದಲ್ಲಿ ಹಳದಿಮಿಶ್ರಿತ ಕೆಂಬಣ್ಣದ ದಟ್ಟ ಪದರವೊಂದು ಸೃಷ್ಟಿಯಾಗಿ ಸೇವಿಸಲಯೋಗ್ಯವಾಗಿಬಿಟ್ಟಿತು. ಗುರೂಜಿಯವರ ಚಟುವಟಿಕೆ ನಡೆಯಲಿದ್ದ ಸ್ಥಳದ ಒಂದು ಮೂಲೆಯಲ್ಲಿ ನಿಂತುಕೊಂಡು ಅವರನ್ನು ಕಾಯುತ್ತಿದ್ದ ಭೂಮಾಲಕರ ಮತ್ತು ಊರ ಭಕ್ತಾದಿಗಳ ಗುಂಪು ಅಲ್ಲಿ ಸೃಷ್ಟಿಯಾದ ವಿಷಮ ವಾತಾವರಣವನ್ನು ಕಂಡು ತೀವ್ರ ಗಾಬರಿಗೊಂಡಿತು. ಕೆಲವರಿಗೆ ಕಾಡಿಗೆ ಕಾಡೇ ನೊಂದು ರೋಧಿಸುವಂತೆಯೂ ಭಾಸವಾಗಿ ಭಯವಾಯಿತು. ಇತ್ತ ಹುಚ್ಚೆದ್ದು ಧಾವಿಸುತ್ತಿದ್ದ ಬಿರುಗಾಳಿಯು ರಪ್ಪನೆ ಜನರ ಗುಂಪಿನತ್ತ ನುಗ್ಗಿತು. ತಾನು ಬಾಚಿ ಹೊತ್ತು ತಂದಿದ್ದ ಕಸಕಡ್ಡಿ ಕಶ್ಮಲಗಳನ್ನೆಲ್ಲ ಕ್ರೋಧವೆತ್ತಂತೆ ರಪರಪನೇ ನೆರೆದವರ ಮೇಲಪ್ಪಳಿಸುತ್ತ ಸುಳಿಯಿತು. ಆ ಜನರು ಭೀತಿಯಿಂದ ದಿಕ್ಕುದೆಸೆ ತಪ್ಪಿ ಓಡುತ್ತ ಸಿಕ್ಕಸಿಕ್ಕ ಮರಗಿಡಗಳ ಮರೆಗೆ ಸರಿದು ಅಡಗಿಕೊಳ್ಳತೊಡಗಿದರು. ಅಷ್ಟರಲ್ಲಿ ಗುರೂಜಿಯವರ ತಂಡವೂ ಕಾಡಿನೊಳಗೆ ಅಡಿಯಿಟ್ಟಿತು. ಅವರನ್ನು ಕಂಡ ಬಿರುಗಾಳಿಯ ರಭಸವು ದುಪ್ಪಟ್ಟಾಗುವುದಕ್ಕೂ ನಂದಿಮರದ ದೊಡ್ಡ ಒಣ ರೆಂಬೆಯೊಂದು ಗುರೂಜಿಯವರ ನೆತ್ತಿಯ ನೇರಕ್ಕೆ ಮುರಿದು ಬೀಳುವುದಕ್ಕೂ ಸರಿಹೋಯಿತು. ಆದರೆ ಅದನ್ನು ತಟ್ಟನೆ ಗಮನಿಸಿದ ಗುರೂಜಿಯವರು ಹೌಹಾರಿ ಒಂದೇ ಉಸಿರಿಗೆ ಹಿಂದೆ ನೆಗೆದು ಅದೇ ವೇಗದಲ್ಲಿ ಹಿಂದಿರುಗಿ ಓಡಲಿದ್ದರು. ಆದರೆ ಅದು ಹೇಗೋ ಕಷ್ಟಪಟ್ಟು ಸಂಭಾಳಿಸಿಕೊಂಡು ನಿಂತರು. ಆದರೆ ಆಕ್ಷಣ ಅವರ ಗಟ್ಟಿ ಹೃದಯವನ್ನು ಯಾರೋ ಬಿರುಸಾಗಿ ತಿವಿದಂಥ ನೋವೊಂದು ಕಾಣಿಸಿಕೊಂಡಿತು. ಎದೆಯ ಭಾಗನ್ನು ರಪ್ಪನೆ ಅಮುಕಿ ಹಿಡಿದುಕೊಂಡು ಅವುಡುಗಚ್ಚಿ ನೋವು ನುಂಗಿದರು. ಬಿರುಗಾಳಿಯ ರೌದ್ರ ನರ್ತನ ತಣ್ಣಗಾಗುವವರೆಗೆ ಮರವೊಂದನ್ನು ಬಿಗಿಯಾಗಿ ಹಿಡಿದು ನಿಂತು ಸುಧಾರಿಸಿಕೊಂಡರು. ಅತ್ತ ಅಲ್ಲೊಂದು ತಮಾಷೆಯೂ ನಡೆದಿತ್ತು. ರಾಘವ ಉಟ್ಟಿದ್ದ ಬಿಳಿಯ ಪಂಚೆಯೂ ಹೆಗಲ ಮೇಲೆ ಹೆಮ್ಮೆಯಿಂದ ನೇತಾಡಿಸಿಕೊಂಡಿದ್ದ ಉತ್ತರೀಯವೂ ಬಿರುಗಾಳಿಗೆ ಸಿಲುಕಿ ಹಾರಿ ಹೋಗಿ ಮರದ ಎತ್ತರದ ಕೊಂಬೆಯೊಂದಲ್ಲಿ ನೇತಾಡುತ್ತಿದ್ದವು. ಅವನ ಅವಸ್ಥೆಯನ್ನು ಕಂಡ ಕೆಲವರಿಗೆ ಅಂಥ ಸ್ಥಿತಿಯಲ್ಲೂ ನಗು ಉಕ್ಕಿತು. ಅವರೆಲ್ಲ ಮುಸಿಮುಸಿ ನಕ್ಕಾಗ ಉಳಿದವರೂ ಜೋರಾಗಿ ನಗತೊಡಗಿದರು. ಆಗ ರಾಘವನಿಗೆ ತೀರಾ ಅವಮಾನವೆನಿಸಿತು. ಆತ ಕೂಡಲೇ ಪಂಚೆಯಿದ್ದ ಮರವೇರಲು ಮುಂದಾದ. ಆದರೆ ಮತ್ತೇನೋ ಹೊಳೆದು ಕಾರಿನತ್ತ ಓಡಿದ. ಅಲ್ಲಿದ್ದ ಹಳೆಯ ಪಂಚೆಯೊಂದನ್ನು ಉಟ್ಟುಕೊಂಡು ಹಿಂದಿರುಗಿದ. *** ದೇವರಕಾಡಿನಲ್ಲಿ ಭುಗಿಲೆದ್ದ ಬಿರುಗಾಳಿಯು ಸ್ವಲ್ಪಹೊತ್ತಿನಲ್ಲಿ ನಿಧಾನಕ್ಕೆ ಬಿಸಿಯೇರಿ ಕಾಡಿನೊಳಗಿನ ಮನುಷ್ಯ ಕ್ರಿಮಿಗಳನ್ನೆಲ್ಲ ಉಸಿರುಗಟ್ಟಿಸಿ ಹೊರಗೋಡಿಸಲೆತ್ನಿಸಿತು. ಆದರೆ ಅಷ್ಟರಲ್ಲಿ ಗೂರೂಜಿಯವರ ಮಹತ್ವಾಕಾಂಕ್ಷೆಯೂ ಜಾಗ್ರತಗೊಂಡಿದ್ದರಿಂದ ಬಿರುಗಾಳಿಯು ಮೆಲ್ಲನೆ ತನ್ನ ತೀಕ್ಷ್ಣತೆಯನ್ನು ಕಳೆದುಕೊಂಡು ಕಣ್ಮರೆಯಾಯಿತು. ಪರಿಸ್ಥಿತಿ ಶಾಂತವಾಗುತ್ತಲೇ ಗುರೂಜಿಯವರು ಜೀರ್ಣೋದ್ಧಾರದ ನಾಂದಿಗೆ ಬಂದು ಸೇರಿದ್ದ ಭಕ್ತಾದಿಗಳನ್ನುದ್ದೇಶಿಸಿ ಮಾತಾಡಲಿಚ್ಛಿಸಿದರು. ‘ಉಙಂ…ಉಙಂ…!’ ಎಂದು ಗಂಟಲು ಸರಿಪಡಿಸಿಕೊಳ್ಳುತ್ತ ಎಲ್ಲರನ್ನೂ ಎಚ್ಚರಿಸಿದರು. ಆಗ ಜನರೂ ಅಷ್ಟರವರೆಗೆ ತಮ್ಮನ್ನು ಕಾಡುತ್ತಿದ್ದ ಆತಂಕವನ್ನು ಬದಿಗೊತ್ತಿ ಗುರೂಜಿಯವರ ಮಾತುಗಳನ್ನು ಆಲಿಸತೊಡಗಿದರು. ‘ನೋಡಿ ಭಕ್ತಾದಿಗಳೇ… ಈಗ ಸ್ವಲ್ಪಹೊತ್ತಿನ ಮುಂಚೆ ಈ ಪವಿತ್ರ ಸನ್ನಿಧಿಯಲ್ಲಿ ನಡೆದ ವಿಚಿತ್ರ ಘಟನೆಗೆ ನೀವೆಲ್ಲ ಸಾಕ್ಷಿಯಾಗಿದ್ದೀರಿ ಅಂತ ಹೇಳಲು ನಮಗೆ ಸಂತೋಷವಾಗುತ್ತಿದೆ. ಯಾವ ಮಹಾಶಕ್ತಿಯನ್ನು ನಾವು ಶ್ರದ್ಧಾಭಕ್ತಿಯಿಂದ ಪೂಜಿಸಿಕೊಂಡು ಬರಲು ಇಚ್ಛಿಸಿದ್ದೇವೋ ಅದೇ ಶಕ್ತಿಯು ಇವತ್ತು ನಮಗೆಲ್ಲರಿಗೂ ಎಂಥ ವಿಶೇಷ ಸ್ವಾಗತವನ್ನು ನೀಡಿತು ಎನ್ನುವುದನ್ನು ನೀವೆಲ್ಲ ಕಣ್ಣಾರೆ ನೋಡಿರುವಿರಿ. ಆದರೂ ನಿಮಗೆ ನಾವದನ್ನು ಸ್ವಲ್ಪ ವಿವರಿಸಿ ಹೇಳಬೇಕು. ನಮ್ಮೆಲ್ಲರ ಈ ನಿರ್ಧಾರದಿಂದ ನಾಗದೇವನಿಗೆ ಆದಂಥ ಅಪರಿಮಿತ ಸಂತೋಷವು ಬಿರುಗಾಳಿಯ ರೂಪದಲ್ಲಿ ಕಾಣಿಸಿಕೊಂಡರೆ ನಂದಿಮರದ ಒಣ ಗೆಲ್ಲೊಂದು…!’ ಎಂದು ಮಾತು ನಿಲ್ಲಿಸಿದವರು, ‘ಭಕ್ತಾದಿಗಳೇ ಗಮನವಿಟ್ಟು ಕೇಳಿಸಿಕೊಳ್ಳಿ! ನಾವು ಹೇಳುತ್ತಿರುವುದು ಗಟ್ಟಿಮುಟ್ಟಾದ ಹಸಿ ಗೆಲ್ಲಿನ ಬಗ್ಗೆ ಅಲ್ಲ…, ಒಣಗಿ ಕುಂಬಾದ ಗೆಲ್ಲು! ಅದು ಒಂದುವೇಳೆ ನಾಡಿದ್ದು ಜೀರ್ಣೋದ್ಧಾರದ ಸಮಯದಲ್ಲೆಲ್ಲಾದರೂ ಮುರಿದು ಬೀಳುತ್ತಿದ್ದರೆ ಎಂಥ ಅನಾಹುತವಾಗುತ್ತಿತ್ತು ಅಂತ ನೀವೇ ಊಹಿಸಿಕೊಳ್ಳಿ! ಅಂಥ ಕುಂಬು ರೆಂಬೆಯೊಂದು ನಮ್ಮೆಲ್ಲರ ಕಣ್ಣಮುಂದೆಯೇ ಮುರಿದು ಬಿದ್ದಿರುವುದು ಇಲ್ಲಿನ ದೈವಭೂತಗಳೂ ನಮ್ಮೆಲ್ಲರ ಮೇಲೆ ಇಟ್ಟಿರುವ ಕೃಪಾಕಟಾಕ್ಷಕ್ಕೆ ಸಣ್ಣದೊಂದು ಉದಾಹರಣೆ ಎಂದೇ ತಿಳಿಯಬೇಕು. ಆದ್ದರಿಂದ ಮುಂದೆ ನಡೆಯಲಿರುವ ಮಹತ್ಕಾರ್ಯಕ್ಕೆ ಇಲ್ಲಿನ ಸರ್ವಶಕ್ತಿಗಳ ಸಂಪೂರ್ಣ ಸಹಕಾರ ನಮಗಿದೆ ಎನ್ನುವುದೇ ಈ ಘಟನೆಯ ಒಳಾರ್ಥ. ಹಾಗಾಗಿ ನಮ್ಮ ಪಾಲಿಗೆ ಇದಕ್ಕಿಂತ ಶುಭಗಳಿಗೆ ಇನ್ನೊಂದು ಬರಲಾರದು. ಆದಷ್ಟು ಬೇಗ ಕೆಲಸ ಆರಂಭಿಸುವ ಬನ್ನಿ…!’ ಎಂದು ನಗುತ್ತ ಹೇಳಿದವರು ರಾಘವನತ್ತ ತಿರುಗಿ ಮುಂದಿನ ಕಾರ್ಯಕ್ಕೆ ಅಣಿ ಮಾಡುವಂತೆ ಸಂಜ್ಞೆ ಮಾಡಿದರು. ರಾಘವನು ಕೂಡಲೇ ಜಾಗದ ಹಿರಿಯನೊಬ್ಬನನ್ನು ಕರೆದುಕೊಂಡು ನೀರು ತರಲು ಸಮೀಪದ ಮದಗದತ್ತ ಹೋದ. ಆದರೆ ಆ ಸರೋವರದ ನೀರು ಹಳದಿ ಬಣ್ಣಕ್ಕೆ ತಿರುಗಿತ್ತು. ಅಷ್ಟಲ್ಲದೇ ಯಾವುದೋ ಪ್ರಾಣಿಯೊಂದು ಸತ್ತು ಕೊಳೆತ ದುರ್ವಾಸನೆ ಬೀರುತ್ತಿದ್ದ ನೀರಿನ ಮೇಲೆ ಹಿಂಡುಹಿಂಡು ನೊಣಗಳು ಗುಂಯ್ಯಿಗುಟ್ಟುತ್ತಿದ್ದವು. ಅದನ್ನು ಕಂಡ ಆ ಹಿರಿಯನಿಗೆ ಆತಂಕವಾಯಿತು. ಎಂದೂ ಹೀಗೆ ಮಲೀನವಾಗದಿದ್ದ ನಿರ್ಮಲ ಸರೋವರಕ್ಕೆ ಇಂದೇನಾಯಿತು? ಎಂದು ಚಿಂತಿಸಿದವನು ರಾಘವನನ್ನು ತಡೆದು ಗುರೂಜಿಯವರಿಗೆ ವಿಷಯ ತಿಳಿಸಿ ಬರಲು ಸೂಚಿಸಿದ. ರಾಘವ ತಕ್ಷಣ ಹೋಗಿ ಗುರೂಜಿಯ ಕಿವಿಯಲ್ಲಿ ವಿಷಯವನ್ನರುಹಿದ. ಅದನ್ನು ಕೇಳಿದ ಗುರೂಜಿಯವರ ಮುಖವು ವಿವರ್ಣವಾಯಿತು. ಆದ್ದರಿಂದ ಅವರು ಕ್ಷಣಹೊತ್ತು ಧ್ಯಾನಮಗ್ನರಾಗಿಬಿಟ್ಟರು. ಬಳಿಕ ತಮ್ಮ ಚೀಲದಿಂದ ಮಣ್ಣಿನ ಸಣ್ಣ ಪೊಟ್ಟಣವೊಂದನ್ನು ತೆಗೆದು ಅವನ ಕೈಗಿತ್ತು,‘ಇದು ಮೂಲ ನಾಗನ ಹುತ್ತದ ಪ್ರಸಾದ. ಭಕ್ತಿಯಿಂದ ಪ್ರಾರ್ಥಿಸಿಕೊಂಡು ಮದಗಕ್ಕೆ ಚೆಲ್ಲಿ ಅದೇ ಜಾಗದ ನೀರನ್ನು ತೆಗೆದುಕೊಂಡು ಬಾ!’ ಎಂದು ಆಜ್ಞಾಪಿಸಿದರು. ರಾಘವ ಆ ಪ್ರಸಾದವನ್ನು ಕೊಂಡೊಯ್ದು ಹಾಗೆಯೇ ಮಾಡಿದ. ಆಶ್ಚರ್ಯ! ಆ ಮಣ್ಣಿನ ಪ್ರಸಾದ ಬಿದ್ದ ಜಾಗದಷ್ಟು ನೀರು ತಕ್ಷಣ ಶುದ್ಧವಾದಂತೆ ತೋರಿತು! ಇಬ್ಬರಿಗೂ ವಿಸ್ಮಯವಾಯಿತು. ಅವರು ಗುರೂಜಿಯವರ ಮಹಿಮೆಯನ್ನು ಕೊಂಡಾಡುತ್ತ ನೀರು ಹೊತ್ತುಕೊಂಡು ಹಿಂದಿರುಗಿದರು. ಹಿಂದಿರುಗಿ ಬಂದ ಹಿರಿಯ ತಾನು ಕಂಡ ವಿಚಿತ್ರವನ್ನು ಉಳಿದ ಭಕ್ತಾದಿಗಳಿಗೂ ವಿವರಿಸಿದ. ಅವರೂ ಅಚ್ಚರಿಗೊಂಡು ಭಯಭಕ್ತಿಯಿಂದ ಪುಳಕಿತರಾದರು. ಗುರೂಜಿಯವರು ಭಕ್ತಾದಿಗಳ ಸಮ್ಮುಖದಲ್ಲಿ ತಮ್ಮ ಮುಂದಿನ ಚಮತ್ಕಾರವನ್ನು ತೋರಿಸಲು ಸಿದ್ಧರಾದರು. ಕಾಡಿನ ನಡುವೆ ಪ್ರಶಸ್ತ ಸ್ಥಳವೊಂದರಲ್ಲಿ ಹೋಮ ಕುಂಡವನ್ನು ಸ್ಥಾಪಿಸಲಾಯಿತು. ಗುರೂಜಿಯವರು ತಮ್ಮೊಂದಿಗೆ ಕರೆದು ತಂದಿದ್ದ ಏಳು ಮಂದಿ ಸಹಾಯಕರೊಂದಿಗೆ ಹೋಮ ಕುಂಡದೆದುರು ಪದ್ಮಾಸೀನರಾಗಿ ಕುಳಿತು ಮಂತ್ರೋಚ್ಛರಣೆಯಲ್ಲಿ ತೊಡಗಿದರು. ಸುಮಾರು ಅರ್ಧ ಗಂಟೆಯ ಕಾಲ ವಿಶೇಷ ಹೋಮವೊಂದು ನಡೆದು ಪೂರ್ಣಾಹುತಿ ಕೊಟ್ಟು ಎದ್ದು ನಿಂತ ಗುರೂಜಿಯವರು ತಮ್ಮ ಮೈತುಂಬಾ ಇಳಿಯುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರು. ಬಳಿಕ ಮುಂದಿನ ವಿಶೇಷ ವಿಧಿಗೆ ಮುಂದಾದರು.…
ಈಗ ಆಕೆ ಇರಬೇಕಾಗಿತ್ತು….
ಸದಾ ತನ್ನ ಗುಂಗಿನಲ್ಲೆ ನನ್ನ ಹಿಡಿದಿಡುವ ಒಲವಿನ ಬಲೆ ತನ್ನುಸಿರ ಕೊನೆಯಲ್ಲೂ ನನ್ನ ಹೆಸರನೇ ಉಸುರಿದ ಆಕೆ ಈಗ ಇರಬೇಕಾಗಿತ್ತು
ಎರಡು ಕವಿತೆಗಳು
ಬುದ್ಧ ಸಾಗಿದ ದಾರಿಯಲ್ಲಿ ನಗು ಬೀಳಿಸಿಕೊಂಡು ಹೋಗಿದ್ದಾನೆ ಬನ್ನಿ,ಎತ್ತಿಟ್ಟುಕೊಳ್ಳೋಣ