ಸುಧಾರಾಣಿ ಕವಿತೆಗಳು

ಕಾವ್ಯ ಸಂಗಾತಿ

ಸುಧಾರಾಣಿ ಕವಿತೆಗಳು

ಬನ್ನಿ ಸಂತೆಗೊಗೋಣ

ಕಡಲ ಕಿನಾರೆಯಲಿ

ಮೊಗೆದ ಮೋಗೆರರ ಮೀನುರಾಶಿ

ಸಾಬಿಯ ಅಂಗಡಿ ಸೇರಿ

ಮಿನುಗುತ್ತವೆ, ಥೇಟ್

ಅರ್ಧಚಂದ್ರನ ಮಧ್ಯದ

ನಕ್ಷತ್ರದಂತೆ.

ಮತ್ತೇ ಬೇಯುತ್ತವೆ

ಅವರಿವರ ಮನೆಗಳಲಿ

ಜಾತಿ ಧರ್ಮದ ಹಂಗ ತೊರೆದು

ಹಸಿವ ತಣಿಸಿದ ದೇವರಂತೆ.

ಬೆಂಕಿಯ ಮಡಿಲಲಿ ಸುಟ್ಟ

ಮಣ್ಣು ಇಟ್ಟಿಗೆಯಾಗಿ,

ಗಟ್ಟಿಗೊಂಡಂತೆ

ಕ್ರಿಸ್ತ್ ರ ಕೇರಿಯಲೂ

ಮಸೀದಿಯ ಬುರುಜಿನಲೂ

ಗುಡಿಗೋಪುರದ ಉತ್ತುಂಗದಲೂ

ಹೊಂದಿಕೊಳ್ಳುತ್ತವೆ

ಮೌನ ಮೈದಳೆದ ತಪಸ್ವಿಯಂತೆ

ಮಣ್ಣು ಮೋಕ್ಷ ಪಡೆದು

ನಾವೋ…

ಮೀನು,ಇಟ್ಟಿಗೆಗಳಿಗಿಂತಲೂ

ಕಡುಕೀಳು

ಎಂದಾದರೂ ಮಣ್ಣು ಹೊದ್ದು

ಹೋಗುವವರು.

ಅಜರಾಮರರಂತೆ

ಮೆರೆದು ಮೊರೆಯುತ್ತೆವೆ

ಎದೆಯೊಳಗೆ ಭಿನ್ನಭೇದದ

ಕಾವ ಹೊತ್ತು

ಹಗೆಯ ಕಲ್ಲಿದ್ದಲ್ಲ

ಕೆಂಡ ನಿಗಿನಿಗಿಸಿ

ದೀಪಾವಳಿಯ ಕಿಡಿ

ಹಾರಿದರೂ

ನಮಾಜಿನ ದನಿ ಎತ್ತರಿಸಿದರೂ

ಕ್ರಿಸ್ತನ ಕಾರುಣ್ಯ ಕರೆದರೂ

ಅಲ್ಲೊಂದ ಕೇಡ ಹುಡುಕುತ್ತೆವೆ

ಈ ಕೇಡಕಿಡಿಗೆ ಹಾತೆಯಂತೆ

ಸುಟ್ಟು ಬೆಂದವರೇಷ್ಟೊ?

ಲೆಕ್ಕ ಸಿಕ್ಕಿಲ್ಲ,… ಇನ್ನೂ

ಹೆಸರುಳಿದಿತೇ?

ಸುಟ್ಟು ಬರೀ ಭಸ್ಮವಾಗುವ

ಮುನ್ನ..

ಉರಿವ ಎದೆಯೊಳಗೆ

ಕಾರುಣ್ಯದ ಮಳೆ ಸುರಿದು ತಣಿಯಲಿ,

ಕಲ್ಲಿದ್ದಲ್ಲು ಚಿಗುರಿ ಹಸಿರಾದೀತು

ಇಟ್ಟಿಗೆಯಲ್ಲೊಂದು ಹೂವ ಬಿಟ್ಟಿತು

ಮೀನುಗಳ ಸರಸಕ್ಕೆ ಸಮುದ್ರ ತುಂಬಿ

ಮೋಗೆರನ ಬಲೆ ಅಕ್ಷಯವಾದಿತು…

ಬನ್ನಿ ಆಗ ಸಂತೆಗೊಗೋಣ

ಪ್ರೇಮ ತುಂಬಿದ ಚೀಲ ಹಿಡಿದು

**********************

ನೆನಪ ಕಟ್ಟೋಣ

ಹೇಗೂ ದೂರಾಗುವವರಿದ್ದೆವೆ

ಬಾ..ಕಡಲದಂಡೆಯ ಗುಂಟ

ಒಂದಿಷ್ಟು ಹೆಜ್ಜೆ ಹಾಕೋಣ

ನಾಳೆಯ ಮಾತೇಕೆ,

ಕವಲು,ಕವಲು,

ನಿನ್ನೆಯದೇ ಬೇಕು

ನೆನೆದುಕೊಳ್ಳೊಣ

ಸಾವಿರ ಸಾವಿರ ಆಣೆಗಳು

ಸವಕಲಾಗಿದೆ,

ಚಲಾವಣೆಯಿಲ್ಲದ

ಸಂದೂಕಿನ ನಾಣ್ಯಗಳಂತೆ

ಯಾವ ವ್ಯಥೆಯ

ಕಹಾನಿಯು ಬೇಡ

ಒಂದಿಷ್ಟು ನೆನಪ ಕಟ್ಟೋಣ

ಕಾಡಿ,ಬೇಡಿ,ಮೋಹಿಸಿ

ಮುದ್ದಿಸಿದ್ದೆಲ್ಲ ನಕಾಶೆಯ

ಗೆರೆಗಳಂತಿದೆ ಎದೆಯಲಿ

ಮಾತು,ನಗು ಯಾವುದು

ಮುಗಿದಿಲ್ಲ,ಮುಗಿಯದ

ಮಾತುಗಳ ಸೊಲ್ಲೇ ಬೇಡ

ಒಂದಿಷ್ಟು ಜೊತೆ ಸಾಗೋಣ

ಅರ್ಧರ್ಧ ಹೀರುವ ಚಹಾ,

ತಾಸಿನ ಪರಿವೇ ಇಲ್ಲದೇ

ವಿಷಯವೂ ಇರದೇ

ಮಾತಾಡಿ,ಕಿತ್ತಾಡಿ ಕಳೆದ

ದಿನಗಳೆಲ್ಲ‌ ನಾಳೆಗೆ

ಪಳೆಯುಳಿಕೆಯಾಗಬಹುದು

ಬಾ ,ಒಂದಿಷ್ಟು

ಒಪ್ಪವಾಗಿಸೋಣ

ಅಲೆಅಲೆಯು

ಕೊಡುವ ಕಚಗುಳಿ,

ಅಪ್ಪಿ ಗುಯ್ ಗುಡುವ

ಆರ್ದ್ರ ಗಾಳಿ,

ನದಿ ನೀರು ಸಹ ಉಪ್ಪಾಗುವ

ಹುಚ್ಚು ಮೋಹದ ಪರಿ,

ಎಲ್ಲವನೂ ನಾಳೆಗೆ

ನಮ್ಮೊಲವಿಗೆ ಸಾಕ್ಷಿಯಾಗಿಸ

ಬೇಕಿದೆ

ನೀ ತೊರೆದಾಗಲೂ,

ನೀನಿರುವ ಭ್ರಮೆಯಲಿ

ನಾ ಬದುಕಬೇಕಿದೆ,

ಬಾ..ಸುಳ್ಳಾದರೂ ಒಂದಿಷ್ಟು

ಕನಸ ಕಟ್ಟೋಣ

********

ಪ್ರೀತಿಯೆಂದರೆ…..

Heart, Moon, Night Sky, Love, Thoughts

ಪ್ರೀತಿ ಎಂದರೆ ಹೀಗೆ ಗೆಳೆಯ

ನೀನಿರದಾಗಲೂ ನಿನ್ನೊಂದಿಗೆ

ಪಿಸುಗುಡುತ್ತಿರುವುದು

ಮೌನದಲ್ಲೇ ಮಾತನಾಡಿ

ನಿನ್ನೊಂದಿಗೆ  ಹನಿಹನಿಯಾಗಿ

ಕ್ಷಣಕ್ಷಣವೂ ಬೇರತುಕ್ಕೊಳ್ಳುವುದು

ಪ್ರೀತಿ ಎಂದರೆ ಹೀಗೆ ಗೆಳೆಯ

ನೀನಿರದ ಹಾದಿಯಲೂ

ಕಣ್ಣರಳಿಸಿ ನಿನ್ನ ಹುಡುಕುವುದು

ಕಾಣದಿದ್ದಾಗ ಮನದ ಭಾರಕ್ಕೆ

ತನ್ನನ್ನೆ ಶಪಿಸಿಕೊಳ್ಳುವುದು

ಮತ್ತೇ ನೀ ರಮಿಸಿದಂತಾಗಿ

ತುಸು ನಾಚಿಕೊಳ್ಳುವುದು

ಪ್ರೀತಿ ಎಂದರೆ ಹೀಗೆ ಗೆಳೆಯ

ಹೃದಯ ಬಡಿತದ ಗುಪ್ತಸಂಗಾತಿ

ಮನದ ಮಡಿಲ ಕಾವಿಗೆ

ಬೆಚ್ಚಗೆ  ಚಿಗುರೊಡೆವ ಹಸಿರ ಪರಿ

ಜಗದ ಬಂಧವ ಶುಷ್ಕವಾಗಿಸಿ

ನಿನ್ನ ನೆನಪಲೆ ತಾಜಾಗೊಳ್ಳುವುದು

ಪ್ರೀತಿ ಅರವಳಿಕೆ ಹೀಗೆ ಗೆಳೆಯ

ಅರಿವಿಲ್ಲದೆಯೇ ಜಾರಿಸುವುದು

ಸೋಲಿಸುವುದು,ಬಂಧಿಸುವುದು

ಕೊನೆಗೊಮ್ಮೆ ಎಲ್ಲಕೂ ಮಿಗಿಲಾಗಿ

ಆವರಿಸುವುದು ಅದೃಶ್ಯ ಗಾಳಿಯಂತೆ

ಸುಳಿದು ಉಸಿರಾಗುವುದು 


ಸುಧಾರಾಣಿ ನಾಯ್ಕ


Leave a Reply

Back To Top