ಕವಿತೆ ಖಜಾನೆ

ಕಾವ್ಯ ಸಂಗಾತಿ

ಬಿ.ಶ್ರೀನಿವಾಸ್ ಕವಿತೆಗಳು

ಕಂಗಾಲಾಗಬೇಡಿ ಕಂಗನಾ!

ಬೆತ್ತಲಾಗುವುದೆಂದರೆ ತೋರಿಸುವುದಲ್ಲ ದೇಹ ನಿಮ್ಮಂತೆ

ತೆರೆದಿಡುವುದು ಅಂತರಂಗ
ದನಿ ಕೇಳಿಸುವುದು

ಬೆತ್ತಲಾಗುವುದೆಂದರೆ
ಮಾರಾಟವಾಗುವುದಲ್ಲ

ಬಾವುಟವಾಗುವುದು

ಮೂರೊತ್ತೂ ಮುಖವಾಡಗಳಿಗೆ
ಬಣ್ಣ ಹಚ್ಚಿದವರ ಮುಂದೆ
ಅರೆಬೆತ್ತಲೆಯ ಫಕೀರ
ಭಿಕ್ಷುಕನಂತೆ ಕಂಡಿದ್ದು ಆಶ್ಚರ್ಯವೇನಿಲ್ಲ ಬಿಡಿ

ಒಂದು ಕೆನ್ನೆಗೆ ಬಿದ್ದ ಏಟು
ಇನ್ನೊಂದು ಕೆನ್ನೆಯಲ್ಲಿ ಮೂಡೀತು ಪ್ರೀತಿಯ ಗೀಟು!

ಅಜ್ಜನ ಕೋಲು
ಬಾರುಕೋಲು ,
ರಂಟೆ,ಕುಂಟೆ, ಮಣ್ಣು ಮಸಿ
ಇವೆಲ್ಲ
ನಿಮಗೀಗ ಅರ್ಥವಾಗುವುದಿಲ್ಲ ಬಿಡಿ.


******************

ಮಳೆ ಬರುತ್ತಿರುವುದು ಎಲ್ಲಿಂದ

Can rain cause earthquakes? - Temblor.net

ಸುರಿದರೆ ಸುರಿದೇಬಿಡುತ್ತದೆ
ನಮ್ಮ-ನಿಮ್ಮಂತೆಯೆ
ಅದಕೂ ದುಃಖ
ತಡಕೊಳ್ಳಾಕ ಆಗಂಗಿಲ್ಲ!

ನೆಲಕಚ್ಚಿ ಮೊಳಕೆಯೊಡೆದಿವೆ ಉಣ್ಣುವ ಕಾಳು,
ಸುರಿಯುತ್ತಲೇ ಇದೆ ಧಾರಾಕಾರ
ಬೆಚ್ಚಿದಾತನ ಕಣ್ಣಿಂದ!

ಮೇಲೊಮ್ಮೆ ,
ಆತನ ಕಣ್ಣುಗಳನೊಮ್ಮೆ ನೋಡುವ ದಾರಿಗಾಣದ ಮಗುವೊಂದು ಕೇಳುತಿದೆ
“ಮಳೆ ಬರುತ್ತಿರುವುದು ಎಲ್ಲಿಂದ?”


Leave a Reply

Back To Top