ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-31 ಅರ್ಜುನ ಉವಾಚ ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅಸುರಾಂತಕ ಮಿತ್ರ ನಾನು ಅಸುರಪಟ್ಟಣವ ಸೇರಿದೆಆಲಿಸಿದೆ ಅಶರೀರವಾಣಿಯನ್ನು ಪರಿಪೂರ್ಣವಾಗಿ. “ಬಾಣವನ್ನು ಪ್ರಯೋಗಿಸದಿರು ಪಾರ್ಥ. ಆ ವನಿತೆಯ ಕೊಲೆಗೆ ಹೇಸದೆ ಶರವನ್ನು ತೊಡುವುದು ತರವಲ್ಲ. ಕೋಪವನ್ನು ಬಿಡು. ಪ್ರಮೀಳೆಯನ್ನು ವರಿಸು. ಮುಂದೆ ನಿನಗೆ ಒಳ್ಳೆಯದಾಗಲಿದೆ” ಎಂಬ ಧ್ವನಿಯದು ಕೇಳಿಬಂತು. ನನ್ನೊಬ್ಬನಿಗೇ ಕೇಳಿದ ಸ್ವರವಲ್ಲ. ಅಲ್ಲಿದ್ದ ಪ್ರತಿಯೊಬ್ಬರಿಗೂ ಕೇಳಿಸಿತು.ಪ್ರಯೋಗಿಸಲೆಂದು ಎತ್ತಿಹಿಡಿದಿದ್ದ ಬಾಣವನ್ನು ಇಳಿಸಿದೆ. ನನ್ನ ಜೊತೆಗಿದ್ದ ಆಪ್ತರಲ್ಲಿ ಇದರ ಬಗೆಗೆ ಚರ್ಚಿಸಿದೆ. ನಿರ್ಣಯವನ್ನು ಮಾಡಿದೆ. ಪ್ರಮೀಳೆಯನ್ನು ನನ್ನ ಬಳಿಗೆ ಕರೆಸಿಕೊಂಡೆ. ಒಪ್ಪಂದವೊAದಕ್ಕೆ ಒಳಪಡುವಂತೆ ಅವಳ ಕರಗಳನ್ನು ಹಿಡಿದುಕೊಂಡೆ. ಮನದಿಂಗಿತವನ್ನು ಹೇಳಿದೆ.“ಮರುಳುಗೊಳಿಸುವ ಮಾತು ನನ್ನದೆಂದು ಭಾವಿಸದಿರು. ಈಗ ನಾನು ನಿನ್ನನ್ನು ವರಿಸಲು ಸಾಧ್ಯವಿಲ್ಲ. ಯಾಗ ಮುಗಿಯುವವರೆಗೂ ಹೆಣ್ಣಿನ ಸಹವಾಸವನ್ನು ತೊರೆದಿರುವ ವ್ರತವನ್ನು ಪಾಲಿಸುತ್ತಿದ್ದಾನೆ ನನ್ನಣ್ಣ ಧರ್ಮಜ. ನಾನೂ ಅದೇ ವ್ರತದ ಆಚರಣೆಯಲ್ಲಿದ್ದೇನೆ. ಈಗ ನಾನು ನಿನ್ನೆಡೆಗೆ ಮನಸ್ಸು ಮಾಡಲು ಸಾಧ್ಯವಿಲ್ಲ. ಆದರೆ ಮುಂದೆ ಅಶ್ವಮೇಧ ಯಾಗ ನಡೆಯುವ ಕಾಲದಲ್ಲಿ ನಾನು ನಿನ್ನನ್ನು ಬಂದು ಸೇರುತ್ತೇನೆ. ನೀನು ಯಾಗಕ್ಕೆ ಬಂದು, ಅಲ್ಲಿ ಕೃಷ್ಣನನ್ನು ಕಂಡು, ನಿನ್ನ ದೇಹದ ವಿಷವನ್ನು ನೀಗಿಕೊಳ್ಳಬೇಕು. ಆ ಬಳಿಕ ನಾನು ನಿನ್ನ ಜೊತೆ ಸೇರಿ ಬಾಳುವುದಕ್ಕೆ ತೊಂದರೆಯಿಲ್ಲ” ಎಂದೆ, ಒಲವಿನಿಂದ.ನನ್ನ ಮಾತಿನಲ್ಲಿ ಕಪಟವಿಲ್ಲದ್ದನ್ನು ಅರ್ಥೈಸಿಕೊಂಡಳು ಪ್ರಮೀಳೆ. ನನ್ನ ಮಾತಿಗೆ ಒಪ್ಪಿಕೊಂಡಳು. ಕಟ್ಟಿಹಾಕಿದ್ದ ನಮ್ಮ ಕುದುರೆಯನ್ನು ತರಿಸಿಕೊಟ್ಟಳು. ಅವಳಿಗೆ ಆದರದ ವಿದಾಯ ಹೇಳಿ, ಸೇನೆಸಹಿತನಾಗಿ ಅಲ್ಲಿಂದ ಹೊರಟೆ. ಅವಳು ಸಂಪತ್ತನ್ನು ಜೊತೆಗಿರಿಸಿಕೊಂಡು, ವನಿತಾ ಸೈನ್ಯದ ಜೊತೆಗೆ ಹಸ್ತಿನಾವತಿಯನ್ನು ಸೇರಿಕೊಂಡಳು.ಮುಂದೆ ಹೋದಂತೆ ಹಲವು ದೇಶಗಳು ಕಂಡವು ನಮ್ಮ ಕಣ್ಣಿಗೆ. ಆನೆ, ಕುದುರೆ, ಗೋವು, ಮಹಿಷ ಮೊದಲಾದ ಪ್ರಾಣಿಸಮೂಹಗಳನ್ನು ಕಂಡೆವು. ಸೂರ್ಯ ಉದಯಿಸಿದೊಡನೆ ಜನಿಸಿ, ಮಧ್ಯಾಹ್ನದ ವೇಳೆಗೆ ಯೌವ್ವನಾವಸ್ಥೆಯನ್ನು ಪಡೆದು, ಸೂರ್ಯಾಸ್ತ ಸಮಯಕೆ ಮರಣವನ್ನಪ್ಪುವ ಅತಿಸೂಕ್ಷö್ಮ ಜೀವಿಗಳನ್ನು ನೋಡಿದೆವು, ಗಿಡಗಳ ಪೊದರುಗಳಲ್ಲಿ.ಕುದುರೆ ಮುಂದಕ್ಕೆ ಚಲಿಸಿತು. ವಿಚಿತ್ರವಾಗಿ ತೋರುತ್ತಿದ್ದ ಮನುಷ್ಯರನ್ನು ಕಂಡು ಅಚ್ಚರಿಗೊಳ್ಳುವಂತಾಯಿತು. ಚರ್ಮವನ್ನೇ ಉಡುಗೆಯಾಗಿ ಹೊಂದಿದ್ದರು ಅವರು. ಶರೀರವೆಲ್ಲಾ ವಕ್ರವಕ್ರವಾಗಿತ್ತು. ಅವರಿಗಿದ್ದದ್ದು ಒಂದೇ ಕೈ; ಒಂದೇ ಕಾಲು; ಒಂದೇ ಕಣ್ಣು. ಅವರಲ್ಲಿ ಕೆಲವರಿಗೆ ಮೂರು ಮೂರು ಕಣ್ಣುಗಳು. ಕುಬ್ಜರಾಗಿದ್ದರು. ಮೂರಡಿಯನ್ನು ಮೀರಿದ ಶರೀರವಲ್ಲ ಅವರದ್ದು. ತೀರಾ ಉದ್ದವಾದ ಮೂಗು. ನೆತ್ತಿಯ ಮೇಲೆ ಎರಡು ಕೋಡುಗಳಿದ್ದವು. ಕೆಲವರ ಮುಖ ಕತ್ತೆಯನ್ನು ಹೋಲುವಂತಿತ್ತು. ಇನ್ನೂ ಕೆಲವರು ಕುದುರೆಮುಖಿಗಳು.ವಿಚಿತ್ರವಾದ ದೇಶವಿದು ಎನಿಸಿತು ನನಗೆ. ಅಸಹ್ಯ ಭಾವ ಮೂಡಿತು. ಮರುಕ್ಷಣವೇ ಬಾಹ್ಯ ರೂಪ ಹೀಗಾದದ್ದರಲ್ಲಿ ಇವರ ತಪ್ಪೇನಿದೆ ಎನಿಸಿತು. ಎದುರಾದವರ ಚೆಲುವನ್ನು ಕಂಡು ಅವರನ್ನು ಆದರಿಸುವ, ಕುರೂಪವನ್ನು ಮೂದಲಿಸುವ ಲೋಕರೂಢಿಯ ಕ್ರಮವೊಂದಿದೆ. ಆದರೆ ಮನುಷ್ಯರೆನಿಸಿಕೊಂಡವರು ಒಳ್ಳೆಯ ಮನಸ್ಸನ್ನು ಹೊಂದಲು, ಒಳ್ಳೆಯ ಸ್ವಭಾವವನ್ನು ರೂಢಿಸಿಕೊಳ್ಳಲು ಮಾತ್ರ ಶಕ್ತರು. ಒಳ್ಳೆಯ ರೂಪವದು ಪ್ರಕೃತಿ ನಿರ್ಧರಿತವಾದದ್ದು. ಚೆಲುವೆನ್ನುವುದು ಶಾಶ್ವತವಲ್ಲ. ಹಾಗಿರುವಾಗ ಅದನ್ನು ಮುಂದಿಟ್ಟುಕೊAಡು ಸಹ್ಯ ಭಾವ ತಾಳುವುದಾಗಲೀ, ಅಸಹ್ಯವನ್ನು ಹೊಂದುವುದಾಗಲೀ ತಕ್ಕುದಲ್ಲ ಎನಿಸಿತು.ಹಾಗೆಯೇ ಮುಂದೆ ಹೋದೆವು. ಈಗ ನಮ್ಮ ಕುದುರೆ ಕಾಲಿಟ್ಟದ್ದು ಭೀಷಣ ಎನ್ನುವ ರಾಕ್ಷಸನ ಪಟ್ಟಣಕ್ಕೆ. ಮೂರು ಕೋಟಿ ಅಸುರರಿದ್ದರು ಅಲ್ಲಿ. ಅತಿಭಯಂಕರ ರೂಪ ಅವರದ್ದು. ಕ್ಷಣಕ್ಷಣವೂ ಆರ್ಭಟ. ಸಲ್ಲದ ಕೃತ್ಯಗಳೇ ಅಲ್ಲಿ ಎಲ್ಲ. ನೀಳವಾದ ದೈತ್ಯ ದೇಹವಿತ್ತು. ಶೀಘ್ರವೇ ಕೋಪಗೊಳ್ಳುತ್ತಿದ್ದರು. ಗಂಡೆದೆಯವರನ್ನೂ ಅಳುಕಿಸುವ ಘೋರ ಮುಖ ಅವರಿಗಿತ್ತು. ಮಾಯಾವಿಗಳಾಗಿದ್ದರು. ದಯೆಗೆ ಅವರೆದೆಯಲ್ಲಿ ಕಿಂಚಿತ್ ಸ್ಥಾನವೂ ಇರಲಿಲ್ಲ. ಸಂಹಾರದಲ್ಲಿಯೇ ಸಂತಸ ಕಾಣುವವರು. ಸಮರಕ್ಕೆ ಇಳಿದರೆ ಸಮಯ ಸಂದರ್ಭ ನೋಡದೆ ಹೋರಾಡುವವರು.ಹೀಗಿದ್ದ ಅಸುರರ ಪುರವನ್ನು ಆಳುತ್ತಿದ್ದ ಭೀಷಣನಿಗೆ ನಮ್ಮ ಪ್ರವೇಶದ ಸುದ್ದಿಯನ್ನು ಮುಟ್ಟಿಸಿದ್ದು ರಾಕ್ಷಸ ಪುರೋಹಿತನೆನಿಸಿದ್ದ ಮೇದೋಹೋತ. ಅವನು ಆಹಾರ ಹುಡುಕಿಕೊಂಡು ಕಾಡಿಗೆ ಬಂದಿದ್ದ. ಆ ಸಮಯದಲ್ಲಿ ನಾನು ನನ್ನ ಸೇನೆಸಹಿತ ಅದೇ ಅರಣ್ಯದಲ್ಲಿದ್ದೆ. ಅವನು ನನ್ನನ್ನು ಕಂಡ. ಕುದುರೆಯನ್ನು ನೋಡಿದ. ಸೈನಿಕರೆಡೆಗೆ ದೃಷ್ಟಿ ಹರಿಸಿದ. ಯಜ್ಞದ ಕುದುರೆಯಿದು ಅರ್ಜುನನ ರಕ್ಷೆಯಲಿ ಸೇನೆಸಹಿತವಾಗಿ ಬಂದಿದೆ ಇಲ್ಲಿಗೆ ಎನ್ನುವುದನ್ನು ಊಹಿಸಿದ. ಅವನು ನನ್ನನ್ನು ನೋಡಿದ್ದು ನನ್ನ ಅರಿವಿಗೆ ನಿಲುಕಿರಲಿಲ್ಲ ಆ ಕ್ಷಣಕ್ಕೆ.ಅವನು ತಕ್ಷಣವೇ ಹೋದದ್ದು ಭೀಷಣನ ಬಳಿಗೆ. ವಿಚಾರವನ್ನು ಅರುಹಿದ. “ಅರ್ಜುನ ಇಲ್ಲಿಗೆ ಬಂದಿದ್ದಾನೆ, ಯಾಗದ ಕುದುರೆಯನ್ನು ಜೊತೆಮಾಡಿಕೊಂಡು. ಅವನನ್ನು ಹಿಡಿದು ತಂದು ನರಮೇಧ ಯಾಗವನ್ನು ನಡೆಸು. ಅವನನ್ನು ಬಲಿಗೊಡು” ಎಂಬ ಸಲಹೆಯಿತ್ತ ಮೇದೋಹೋತ.ಭೀಷಣ ನಡೆಸುವ ನರಮೇಧ ಯಾಗಕ್ಕೆ ಪುರೋಹಿತ ತಾನಾಗಿ ಸಕಲ ಗೌರವವನ್ನೂ, ಸಮಸ್ತ ಸಂಪದವನ್ನೂ ತನ್ನದಾಗಿಸಿಕೊಳ್ಳಬೇಕೆಂಬ ಆಕಾಂಕ್ಷೆಯಿತ್ತು ಆ ಅಸುರ ಪುರೋಹಿತನಲ್ಲಿ.ಭೀಷಣ ಅವನ ಮಾತಿಗೆ ಒಪ್ಪಿಕೊಂಡ. “ನರಮೇಧ ಯಾಗಕ್ಕಾಗಿ ಈಗಲೇ ಮಂಟಪವನ್ನು ನಿರ್ಮಿಸು. ನಾನೀಗಲೇ ಹೋಗಿ ಆ ಅರ್ಜುನನನ್ನು ಎಳೆದುಕೊಂಡು ಬರುತ್ತೇನೆ” ಎಂದು ಬೊಬ್ಬೆ ಹೊಡೆದ, ಮೇದೋಹೋತನಲ್ಲಿ.ಹೀಗೆ ಭೀಷಣ ಮೇದೋಹೋತನ ಮಾತಿಗೆ ತಕ್ಷಣವೇ ಒಪ್ಪಿಕೊಳ್ಳುವುದರ ಹಿಂದೆ ಬಲವಾದ ಕಾರಣವಿತ್ತು. ಅವನು ಬಕಾಸುರನ ಮಗನಾಗಿದ್ದ. ಹಿಂದೆ ಭೀಮನಿಂದ ಮಡಿದಿದ್ದ ತಂದೆಯ ಸಾವಿನ ಸೇಡನ್ನು ಭೀಷಣ ತೀರಿಸಿಕೊಳ್ಳಬಯಸಿದ್ದು ಭೀಮ ಸೋದರನಾದ ನನ್ನನ್ನು ಕೊಲ್ಲುವುದರ ಮೂಲಕ. ಮುಕ್ಕೋಟಿ ರಾಕ್ಷಸರು ಸೇರಿಕೊಂಡರು ಅವನ ಜೊತೆಗೆ… ಡಾ.ವಿಶ್ವನಾಥ್‌ ಎನ್ ನೇರಳೆಕಟ್ಟೆ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-122 ಒಬ್ಬ ಅಮ್ಮನಕಥೆ ರುಕ್ಮಿಣಿ ನಾಯರ್ ಅಮ್ಮನ ಅನಾರೋಗ್ಯದ ಬಗ್ಗೆ ದೊಡ್ಡಕ್ಕನಿಗೆ ತಿಳಿಸುವ ಸಮಯ ವಿಷಯ ತಿಳಿದ ನಂತರ ಖಂಡಿತ ತಂಗಿ ಹೀಗೆಲ್ಲಾ ಪ್ರತಿಕ್ರಿಯಿಸಿವಳು ಎಂಬುದು ಮೊದಲೇ ತಿಳಿದಿದ್ದ ಅಕ್ಕನಿಗೆ ದುಃಖ ಉತ್ತರಿಸಿ ಬಂದರೂ, ತಾನು ಕೂಡಾ ಅಳುತ್ತಾ ಕುಳಿತರೆ, ತಂಗಿಯನ್ನು ಸಮಾಧಾನ ಪಡಿಸುವವರು ಯಾರು? ಎಂದು ಯೋಚಿಸುತ್ತಾ, ತಂಗಿಯ ತಲೆಯನ್ನು ನಿಧಾನವಾಗಿ ಸಾಂತ್ವನ ಪಡಿಸುವಂತೆ ನೇವರಿಸಿದಳು. ಅವಳು ಅತ್ತು ಸಮಾಧಾನವಾಗುವರೆಗೂ ಹಾಗೆ ನೇವರಿಸುತ್ತಾ ಏನೂ ಮಾತನಾಡದೇ ಕುಳಿತಿದ್ದಳು. ಅವಳು ಸ್ವಲ್ಪ ಸಮಾಧಾನಗೊಂಡಳು ಎಂದು ಅರಿತ ಮೇಲೆ…. “ನಿನ್ನ ನೋವು, ಸಂಕಟ ಏನೆಂದು ನನಗೆ ಅರ್ಥವಾಗುತ್ತದೆ…. ದಯವಿಟ್ಟು ನಿನ್ನನ್ನು ನೀನು ಸಮಾಧಾನಪಡಿಸಿಕೋ…. ನಾವಿಬ್ಬರೂ ಈಗ ಮಾನಸಿಕವಾಗಿ ಗಟ್ಟಿಯಾಗಬೇಕಿದೆ…. ನಮ್ಮ ಈ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಜೊತೆ ಬೇರೆ ಯಾರೂ ಇಲ್ಲ…. ಅಕ್ಕನಿಗೆ ಅವಳದಾದ ಕುಟುಂಬವಿದೆ…. ಎಲ್ಲಾ ಜವಾಬ್ದಾರಿಯನ್ನು ಅಕ್ಕನಿಗೆ ಹೊರಿಸಲು ಸಾಧ್ಯವಿಲ್ಲ…. ನಮ್ಮಿಬ್ಬರ ಕೈಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಪ್ರಯತ್ನ ಮಾಡೋಣ…. ವೈದ್ಯರು ಹೇಳಿದ್ದರು ಡಯಾಲಿಸಿಸ್ ಚಿಕಿತ್ಸೆ ಕೊಡಿಸಿದರೆ, ಅಮ್ಮ ಇನ್ನೂ ಸ್ವಲ್ಪ ದಿನ ಅಮ್ಮ ಜೀವಂತವಾಗಿರಬಹುದು…. ಅಮ್ಮನ ಎಲ್ಲಾ ನೋವು ಸಂಕಟಗಳು ಸ್ವಲ್ಪ ದಿನದ ಮಟ್ಟಿಗಾದರೂ ಸುಧಾರಿಸಬಹುದು….. ನೋಡೋಣ…ಹೇಗೆ ಎಂಬುದನ್ನು ವೈದ್ಯರಿಂದ ಕೇಳಿ ತಿಳಿದುಕೊಳ್ಳುತ್ತೇನೆ….. ಎಂದಳು. ಅಕ್ಕನ ಮಾತನ್ನು ಕೇಳಿದಾಗ ತಂಗಿಯ ಮುಖವರಳಿತು. ….”ಹಾಗೆಯೇ ಮಾಡುವ ಅಕ್ಕಾ….. ನಮ್ಮಿಂದ ಆಗಿದ್ದನ್ನು ನಾವು ಮಾಡೋಣ…. ನಮಗೆ ಆಶ್ರಯ ಕೊಟ್ಟಿರುವ ಎಸ್ಟೇಟ್ ನವರು ಮೊದಲಿಂದಲೂ ಅಮ್ಮನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ…. ಅವರು ಖಂಡಿತಾ ನಮಗೆ ಸಹಾಯ ಮಾಡುತ್ತಾರೆ… ಹಾಗಾಗಿ ನಾವು ಮಾಡಬೇಕಾಗಿದ್ದು ಏನು ಎಂಬುದನ್ನು ಕೇಳಿ ತಿಳಿದುಕೋ…. ಎಂದಳು. ಸರಿ ಎನ್ನುವಂತೆ ಅಕ್ಕ ತಯಾರಿಸಿದಳು…. “ಈಗ ಡಾಕ್ಟರ್ ರೌಂಡ್ಸ್ ಮುಗಿಸಿರುತ್ತಾರೆ…. ನಡಿ ವಾರ್ಡಿಗೆ ಹೋಗೋಣ…. ಮೊದಲು ನಿನ್ನ ಕಣ್ಣುಗಳನ್ನು ಒರೆಸಿಕೊ…. ನಮಗೆ ತಿಳಿದಿರುವ ವಿಷಯ ಅಮ್ಮನಿಗೆ ಗೊತ್ತಾಗುವುದು ಬೇಡ….. ಅಮ್ಮ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಾಳೆ… ಆದಷ್ಟೂ ಅಮ್ಮನ ಮುಂದೆ ನಾವು ಖುಷಿಯಿಂದ ಇರುವಂತೆ ನಟಿಸೋಣ…. ಇದಲ್ಲದೇ ನಮಗೆ ಬೇರೆ ದಾರಿ ಇಲ್ಲ….. ಅಮ್ಮನಿಗೆ ಈ ವಿಷಯಗಳು ತಿಳಿದರೆ, ಖಂಡಿತಾ ಪೂರ್ತಿ ಕುಸಿದು ಹೋಗುತ್ತಾಳೆ…. ನಾವೆಲ್ಲರೂ ವಿದ್ಯಾಭ್ಯಾಸ ಮುಗಿಸಿ, ಒಳ್ಳೆಯ ಕೆಲಸಕ್ಕೆ ಸೇರಿ ನಂತರ ನಾವು ಮದುವೆಯಾಗುವುದನ್ನು ನೋಡಬೇಕು…. ಖುಷಿಯಿಂದ ಮೊಮ್ಮಕ್ಕಳನ್ನು ಮುದ್ದಾಡಬೇಕು…. ಅವರೊಂದಿಗೆ ಕಾಲ ಕಳೆಬೇಕು….ಎನ್ನುವ ತನ್ನಾಸೆಯ ಮಾತುಗಳನ್ನು ಆಗಾಗ ಹೇಳುತ್ತಲೇ ಇರುತ್ತಾಳೆ…. ಅಮ್ಮನಿಗೆ ಏನೂ ಆಗಿಲ್ಲ… ಆದಷ್ಟು ಬೇಗ ಗುಣಮುಖರಾಗುತ್ತಾರೆ ಎನ್ನುವ ಆಶಯವನ್ನು ಅಮ್ಮನ ಮನಸ್ಸಿನಲ್ಲಿ ತುಂಬೋಣ…. ಯಾವುದೇ ಕಾರಣಕ್ಕೂ ತನ್ನ ಆರೋಗ್ಯ ಸ್ಥಿತಿ ಈ ರೀತಿ ಇದೆ ಎಂದು ತಿಳಿಯುವುದು ಬೇಡ….. ಎಂದು ಅಕ್ಕ ಹೇಳಿದಾಗ ‘ಸರಿ’ ಎನ್ನುವಂತೆ ತಲೆಯಾಡಿಸುತ್ತಾ ದುಪ್ಪಟ್ಟಾದಿಂದ ಕಣ್ಣುಗಳನ್ನು ಮತ್ತು ಮುಖವನ್ನು ಒರೆಸಿ, ಆದಷ್ಟೂ ತಾನು ನಗುನಗುತ್ತಿರುವಂತೆ ಇರುವ ಪ್ರಯತ್ನ ಮಾಡಿದಳು. ತಂಗಿಯನ್ನು ನೋಡಿ ಮುಗುಳ್ನಕ್ಕು ಅವಳ ಹೆಗಲ ಮೇಲೆ ಕೈ ಹಾಕುತ್ತಾ…._ ಬಾ ನಡಿ ಹೋಗೋಣ”…. ಎಂದಳು ಈಗ ನಾನು ಅತ್ತಿರೋದು ಕಾಣೋದಿಲ್ಲವಲ್ಲವೇ? ಎಂಬಂತೆ ಪ್ರಶ್ನಾರ್ಥಕವಾಗಿ ಅಕ್ಕನನ್ನು ನೋಡಿದಳು ತಂಗಿ. ‘ಇಲ್ಲ’ ಎನ್ನುವಂತೆ ತಲೆ ಆಡಿಸಿದಳು, ಇಬ್ಬರೂ ವಾರ್ಡಿಗೆ ತೆರಳಿದಾಗ, ನರ್ಸ್ ತಾಯಿಗೆ ಚುಚ್ಚುಮದ್ದನ್ನು ಚುಚ್ಚುತ್ತಿರುವುದು ಕಂಡಿತು. ಅಮ್ಮ ನೋವಿನಿಂದ ಮುಖ ಹಿಂಡಿದ್ದು ಕಂಡಾಗ, ಇಬ್ಬರ ಎದೆಯಲ್ಲೂ ಏನೋ ಹರಿತವಾದದ್ದು ಚುಚ್ಚಿದ ಅನುಭವವಾಯಿತು. ಆದರೂ ತೋರಗೊಡದೆ…. “ಅಮ್ಮಾ ….ಡಾಕ್ಟರ್ ಏನು ಹೇಳಿದರು?… ಎಂದು ಇಬ್ಬರೂ ಕೇಳಿದಾಗ…. “ಏನೂ ತೊಂದರೆ ಇಲ್ಲ….ಇನ್ನೂ ಕೆಲವು ದಿನಗಳು ನಾನು ಇಲ್ಲಿಯೇ ಇರಬೇಕೆಂದು ಹೇಳಿದ್ದಾರೆ”… ಎಂದು ಹೇಳುತ್ತಾ ಸುಮತಿ ಇಬ್ಬರೂ ಮಕ್ಕಳ ಮುಖವನ್ನು ನೋಡಿದಳು. ಮಕ್ಕಳಿಬ್ಬರ ಕಣ್ಣುಗಳು ಅತ್ತು ಊದಿಕೊಂಡಿರುವಂತೆ ಅವಳಿಗೆ ಅನಿಸಿತು….. “ಏನಾಯ್ತು ಮಕ್ಕಳೇ?…. ನಿಮ್ಮಿಬ್ಬರ ಕಣ್ಣುಗಳು ಏಕೆ ಊದಿಕೊಂಡಿವೆ?…. ಎಂದು ಕೇಳಿದಾಗ,….”ಇಲ್ಲಮ್ಮಾ…. ಹಾಗೇನೂ ಇಲ್ಲ…. ನಿನಗೆ ಹಾಗೆ ಅನಿಸಿದೆಯಷ್ಟೇ”….. ಎಂದು ತಂಗಿ ಹೇಳಿದಾಗ, …. “ನೀನು ಯಾವಾಗ ಸುಳ್ಳು ಹೇಳುವುದನ್ನು ಕಲಿತುಕೊಂಡೆ?…. ನಿಜ ಹೇಳಿ….ಅದೇನಿದ್ದರೂ ನನಗೆ ತಿಳಿಸಿ” …. ಎಂದಳು ತುಸುಕೋಪದಿಂದ. …”ಏನಿಲ್ಲಮ್ಮಾ…. ಅವಳು ಸುಳ್ಳು ಹೇಳಿಲ್ಲ…. ನಮಗೇನೂ ಆಗಿಲ್ಲ…. ನಿನಗೆ ಹಾಗೆ ಅನಿಸುತ್ತಿದೆ ಅಷ್ಟೇ….. ನಾವು ಹೊರಗೆ ಕುಳಿತಿದ್ದಾಗ ಗಾಳಿಯಲ್ಲಿ ಏನೋ ಕಸ ಬಂದು ತಂಗಿಯ ಕಣ್ಣಿಗೆ ಬಿತ್ತು…. ಅವಳು ಹಣ್ಣುಗಳನ್ನು ಉಜ್ಜಿಕೊಂಡಳು…. ಹಾಗಾಗಿ ಅವಳ ಕಣ್ಣುಗಳು ಹಾಗಿವೆ”…. ಎಂದಳು….. “ಹಾಗಾದರೆ ನಿನ್ನ ಕಣ್ಣು?”…. ತುಸು ಏರು ಧ್ವನಿಯಲ್ಲಿ ಸುಮತಿ ಪ್ರಶ್ನಿಸಿದಾಗ…. “ನಾನು ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲಮ್ಮಾ…. ಪರೀಕ್ಷೆ ಹತ್ತಿರವಾಗುತ್ತಿರುವುದರಿಂದ ರಾತ್ರಿ ಹೆಚ್ಚು ಸಮಯ ಓದುತ್ತಾ ಕುಳಿತಿದ್ದೆ… ಹಾಗಾಗಿ ನನ್ನ ಕಣ್ಣುಗಳು ಊದಿಕೊಂಡಿವೆ…. ಸುಮ್ಮನೆ ಏನೇನೋ ಆಲೋಚಿಸಿ ತಲೆಕೆಡಿಸಿಕೊಳ್ಳಬೇಡ”… ಎಂದಳು ತಂಗಿಯನ್ನು ನೋಡುತ್ತಾ. ತಂಗಿ ‘ಹೌದು’ ಎನ್ನುವಂತೆ ತಲೆ ಆಡಿಸಿದಳು. ಇಬ್ಬರೂ ಮಕ್ಕಳು ಕೊಟ್ಟ ಉತ್ತರ ಯಾಕೋ ಸರಿ ಇಲ್ಲ ಎಂದು ಸುಮತಿಗೆ ಅನಿಸಿತು. ಆದರೆ ಇನ್ನೂ ವಾದ ಮಾಡುವುದು ಬೇಡ ಎಂದು ಸುಮ್ಮನಾದಳು. ತಂಗಿ ಅಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಾಯಿ ಮತ್ತು ಅಕ್ಕನ ಜೊತೆ ಕಾಲ ಕಳೆದಳು. ಇದರ ನಡುವೆ…. “ಅಕ್ಕಾ ….ದೊಡ್ಡಕ್ಕನಿಗೆ ಅಮ್ಮನ ಅನಾರೋಗ್ಯದ ವಿಷಯ ತಿಳಿಸಿದ್ದೀಯಾ? ಎಂದು ಕೇಳಿದಳು….. “ಇಲ್ಲ ಕಣೇ…. ಹೇಳಬೇಕು…. ಒಂದು ಕೆಲಸ ಮಾಡುತ್ತೀಯಾ? ನಾವು ಇಲ್ಲಿ ಯಾವುದಾದರೂ ಹೋಟೆಲ್ನಲ್ಲಿ ಊಟ ಮಾಡಿಕೊಳ್ಳೋಣ…. ಅಮ್ಮನಿಗೆ ಆಸ್ಪತ್ರೆಯಿಂದ ಊಟ ಸಿಗುತ್ತದೆ…. ಅಮ್ಮನಿಗೆ ಊಟ ಕೊಟ್ಟು, ನಂತರ ಹೊರಗೆ ಹೋಗಿ ನಾವು ಊಟ ಮಾಡೋಣ…. ನಂತರ ನೀನು ಅಕ್ಕನ ಮನೆಗೆ ಹೋಗಿ, ಅಮ್ಮ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ ಎಂಬುದನ್ನು ತಿಳಿಸು… ಎಂದಳು. ತಂಗಿ ಸರಿ ಎನ್ನುವಂತೆ ತಲೆಯಾಡಿಸಿದಳು.

Read Post »

ಅಂಕಣ ಸಂಗಾತಿ, ವೀಣಾ-ವಾಣಿ

“ಅತಿ ಅವಸರ ಸಲ್ಲದು” ವೀಣಾ ಹೇಮಂತ್ ಗೌಡಪಾಟೀಲ

ಜೀವನ ಸಂಗಾತಿ ವೀಣಾ ಹೇಮಂತ್ ಗೌಡಪಾಟೀಲ “ಅತಿ ಅವಸರ ಸಲ್ಲದು” ಪುಟ್ಟ ಬಾಲಕ ಶಾಮ ಯಾವತ್ತೂ ಅವಸರದಲ್ಲಿಯೇ ಇರುತ್ತಿದ್ದ ಆತನಿಗೆ ಪ್ರತಿಯೊಂದು ವಿಷಯವು ತರಾತುರಿಯಲ್ಲಿ ಆಗಿಬಿಡಬೇಕು. ಅತ್ಯಂತ ವೇಗವಾದ ಇಂಟರ್ನೆಟ್ ಸೇವೆಯನ್ನು ಬಯಸುತ್ತಿದ್ದ ಆತ ಹೊಸ ಹೊಸ ಆಟದ ಸಾಮಾನುಗಳಿಗಾಗಿ ಆಶಿಸುತ್ತಿದ್ದ… ಆತನ ಅವಸರವನ್ನು ನೋಡಿದರೆ ಎಲ್ ಕೆ ಜಿ ಇರುವಾಗಲೇ ಒಂದನೇ ತರಗತಿಗೆ, 5ನೇ ತರಗತಿ ಇರಬೇಕಾದ ವ್ಯಕ್ತಿ ಇಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲು ಏರಬೇಕು ಎಂದು ತಮಾಷೆ ಮಾಡುವಷ್ಟು ಇರುತ್ತಿತ್ತು.ಯಾವುದೇ ವಿಷಯಕ್ಕೂ ವ್ಯವಧಾನ ಎಂಬ ಪದದ ಅರಿವೇ ಇರಲಿಲ್ಲ ಬಹುಶಹ ಆತನ ನಿಘಂಟಿನಲ್ಲಿ ತಾಳ್ಮೆ ಎಂಬ ಪದಕ್ಕೆ ಅರ್ಥವೇ ಇರಲಿಲ್ಲ  ಅದೊಂದು ದಿನ ಸಾಯಂಕಾಲ ಆತ ತನ್ನ ಅಜ್ಜ ಮನೆಯ ವರಾಂಡದಲ್ಲಿ ಒಂದು ಹಳೆಯದಾದ ಆದರೆ ಅತ್ಯಂತ ಕಲಾತ್ಮಕವಾದ ಕೆತ್ತನೆಯನ್ನು ಹೊಂದಿದ ಸುಂದರವಾದಪುಟ್ಟ ಪೆಟ್ಟಿಗೆಯನ್ನು ಮುಂದಿಟ್ಟುಕೊಂಡು ಕುಳಿತಿರುವುದನ್ನು ನೋಡಿದ. ಅದೊಂದು ಸಂಪೂರ್ಣ ಖಾಲಿಯಾದ ಪೆಟ್ಟಿಗೆಯಾಗಿತ್ತು. ಅಜ್ಜ ಆ ರೀತಿ ಪೆಟ್ಟಿಗೆಯ ಮುಂದೆ ಸುಮ್ಮನೆ ಕುಳಿತಿರುವುದನ್ನು ನೋಡಿ ಆತನಿಗೆ ಸೋಜಿಗವಾಯಿತು.ಅಂತೆಯೇ ತನ್ನ ಅಜ್ಜನನ್ನು ಕುರಿತು ಅಜ್ಜ… ಅದೇಕೆ ಹಾಗೆ ಖಾಲಿ ಪೆಟ್ಟಿಗೆಯ ಮುಂದೆ ಕುಳಿತು ಅದನ್ನು ನೋಡುತ್ತಿರುವಿರಿ… ಎಷ್ಟೊಂದು ಸಮಯ ಹಾಳಾಯಿತು ಅಲ್ಲವೇ? ಎಂದು ಕೇಳಿದ.ಮೊಮ್ಮಗನ ಮಾತನ್ನು ಕೇಳಿದ ಅಜ್ಜ ನಸುನಗುತ್ತ ನುಡಿದ ಇದೊಂದು ಹಳೆಯ ಖಾಲಿ ಪೆಟ್ಟಿಗೆ ಎಂದು ನೀನು ಭಾವಿಸಿರುವೆ ಅಲ್ಲವೇ ?…. ಖಂಡಿತವಾಗಿಯೂ ಇದು ಖಾಲಿ ಪೆಟ್ಟಿಗೆಯಲ್ಲ ಇದರಲ್ಲಿ ನಾನು ನನ್ನ ಚಿನ್ನದ ಟಿಕೆಟ್ಗಳನ್ನು ಇಡುತ್ತೇನೆ  ಎಂದು ಹೇಳಿದ. ಪೆಟ್ಟಿಗೆಯ ಒಳಭಾಗವನ್ನು ನಿರುಕಸಿ ನೋಡಿದ ಶಾಮ ‘ಆದರೆ ಅಜ್ಜ ಇದರಲ್ಲಿ ಏನೂ ಇಲ್ಲ’ ಎಂದು ಲಗು ಬಗೆಯಿಂದ ಹೇಳಿದ.‘ನಿನಗೆ ಪೆಟ್ಟಿಗೆ ಖಾಲಿಯಾಗಿ ಕಾಣುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ, ಕಾರಣ ನೀನು ನಿನ್ನ ಕಣ್ಣಿನಿಂದ ಪೆಟ್ಟಿಗೆಯನ್ನು ನೋಡುತ್ತಿರುವೆಯೇ ಹೊರತು ಮನಸ್ಸು ಹಾಗೂ ಹೃದಯದಿಂದ ಅಲ್ಲ ‘ ಎಂದು ಅಜ್ಜ ಒತ್ತಿ ಹೇಳಿದ.ಮತ್ತೆ ಮೊಮ್ಮಗನನ್ನು ‘ಇಲ್ಲಿ ಕುಳಿತುಕೋ ನಾನು ನಿಮಗೆ ನನ್ನ ಕೊನೆಯ ಟಿಕೆಟ್ ಅನ್ನು ನೀಡುತ್ತೇನೆ’ ಎಂದು ಅಜ್ಜ ಹೇಳಿದ​ ಆಶ್ಚರ್ಯವಾದರೂ ಮರು ಮಾತನಾಡದೆ ಅಜ್ಜ ತೋರಿದ ಸ್ಥಳದಲ್ಲಿ ಶ್ಯಾಮ ಕುಳಿತುಕೊಂಡ. ಮುಂದಿನ ಐದು ನಿಮಿಷಗಳ ಕಾಲ ಅಜ್ಜ ಏನನ್ನೂ ಹೇಳಲಿಲ್ಲ  ಹಾಗೂ ಮೊಮ್ಮಗ ಏನನ್ನು ಕೇಳಲಿಲ್ಲ. ಐದು ನಿಮಿಷ ಒಂದು ಯುಗದಂತೆ ಭಾಸವಾಯಿತು ಶಾಮನಿಗೆ… ಆದರೆ ಆ ಸಮಯದಲ್ಲಿ ಆತ ಅನಿವಾರ್ಯವಾಗಿ ಅಜ್ಜನ ಜೊತೆ ಕುಳಿತು ಹಕ್ಕಿಗಳ ಚಿಲಿಪಿಲಿ ನಾದವನ್ನು ಕೇಳಿಸಿಕೊಂಡ. ಎಲ್ಲಿಂದಲೂ ಬೀಸಿದ ತಂಗಾಳಿಗೆ ಆತನ ಮೈಯನ್ನು ಸೋಕಿ ಮೈಮನಗಳಿಗೆ ಅತ್ಯದ್ಭುತವಾದ ಸಮಾಧಾನವನ್ನು ನೀಡಿತು. ದೂರದಿಂದ ಹಾರಿ ಬಂದ ಚಿಟ್ಟೆಯೊಂದು ಹೂವಿನ ಮಕರಂದವನ್ನು ಹೀರುವುದನ್ನು ಆತ ಗಮನಿಸಿದ. ಮೊದಲು ಮೊದಲು ಆ ರೀತಿ ಸುಮ್ಮನೆ ಕುಳಿತುಕೊಳ್ಳುವುದು ಶಾಮನಿಗೆ ಹಿಂಸೆಯೆನಿಸಿತು. ತನ್ನ ಜೇಬಲ್ಲಿರುವ ಮೊಬೈಲ್ ಫೋನನ್ನು ತೆಗೆದು ನೋಡಲೇ ಎಂದು ಒಂದು ಬಾರಿ ಯೋಚಿಸಿದ ಕೂಡ… ಆದರೆ ಅಜ್ಜನ ಮುಂದೆ ಹಾಗೆ ಮಾಡಲಾರದೆ ಸುಮ್ಮನೆ ಚಡಪಡಿಸುತ್ತಾ ಕುಳಿತುಕೊಂಡ. ಅನಿವಾರ್ಯವಾಗಿಯಾದರೂ ಒಂದೆರಡು ನಿಮಿಷಗಳ ನಂತರ ಆತನ ಮನಸ್ಸು ತನ್ನಂತಾನೆ ತಹಬಂದಿಗೆ ಬಂತು. ಆತನ ಮನಸ್ಸನ್ನು ಒಂದು ಬಗೆಯ ನಿರಾಳತೆ ಆವರಿಸಿತು.ತಲೆಯೆತ್ತಿ ನೋಡಿದಾಗ ನೀಲಿ ಆಕಾಶ ಆತನ ಗಮನ ಸೆಳೆಯಿತು.ತನ್ನ ಗಮನ ಸೆಳೆದ ಆಕಾಶದತ್ತ ಕೈ ಮಾಡಿದ ಶಾಮ ಅಚ್ಚನಿಗೆ ಅದೇನು? ಎಂದು ಕೇಳಿದ….. ಅದು ಕೂಡ ಚಿನ್ನದ ಟಿಕೆಟ್ ಎಂದು ಅಜ್ಜ ಹೇಳಿದ. ಈಗ ಅವಾಕ್ಕಾಗುವ ಸರದಿ ಶಾಮನದಾಗಿತ್ತು​ನಿಜ ಶಾಮ…. ಕೆಲ ನಿಮಿಷಗಳ, ಕ್ಷಣಗಳ ಮಟ್ಟಿಗಾದರೂ ನೀನು ನೀನಾಗಿಯೇ ಇರುವ ಗಳಿಗೆ… ಅದು ನಿನ್ನ ಬದುಕಿನ ಅತ್ಯಮೂಲ್ಯವಾದ ಟಿಕೆಟ್ ಇದ್ದಂತೆ. ಬಹಳಷ್ಟು ಜನ ಸದಾ ಓಡುತ್ತಲೇ ಇರುತ್ತಾರೆ. ಓದುವುದು, ಓದು ಮುಗಿದ ಕೂಡಲೇ ನೌಕರಿ, ನೌಕರಿ ಮುಗಿದ ಕೂಡಲೇ ಮನೆ, ಮನೆಯಿಂದ ಆಫೀಸ್ ಮತ್ತೆ ವೀಕೆಂಡ್ಗಳು, ಪ್ರಮೋಷನ್ಗಳು ಮದುವೆ ಮಕ್ಕಳು ಯಶಸ್ಸು ಹೀಗೆ ಒಂದರ ಹಿಂದೆ ಒಂದರಂತೆ ಸದಾ ಓಡುತ್ತದೆ. ಈ ಓಡುವಿಕೆಯಲ್ಲಿ ಅವರು ತಮ್ಮನ್ನು ತಾವು ಕಳೆದುಕೊಳ್ಳುತ್ತಾರೆ. ಅವರ ಗಮ್ಯ ಅವರ ಕೈಗೆ ಸಿಗುವ ಮುನ್ನವೇ ಅವರು ಮತ್ತೊಂದು ಗಮ್ಯವನ್ನು ಅರಸಿ ಮುಂದೆ ಸಾಗುತ್ತಾರೆ… ಮುಂದೆ ಅವರ ಓಟಕ್ಕೆ ಯಾವುದೇ ಅರ್ಥ ಉಳಿಯುವುದಿಲ್ಲ.ಆದರೆ ಅಜ್ಜ… ಯಶಸ್ಸಿನ ಹಿಂದೆ ಓಡುವುದು ತಪ್ಪೇ ? ಸಂತೋಷವಾಗಿರಲು ಯಾವುದೇ ಯಶಸ್ಸಿನ ಅವಶ್ಯಕತೆ ಇಲ್ಲವೇ ? ಎಂದು ಶ್ಯಾಮ ಕೇಳಿದ   ಸಣ್ಣಗೆ ನಸು ನಕ್ಕು ತಲೆಯಾಡಿಸಿದ ಅಜ್ಜ ಹೀಗೆ ಹೇಳಿದ… ಸಂತೋಷವಾಗಿರಲು ಯಶಸ್ಸು ಬೇಕಾಗಿಲ್ಲ. ಅಷ್ಟಕ್ಕೂ ಯಶಸ್ಸು ಎಂಬುದು ಕೇವಲ ನೆರಳಿನಂತೆ. ಅದನ್ನು ನೀನೆಂದಿಗೂ ಹಿಡಿಯಲು ಆಗದು.ಈಗ ನನ್ನನ್ನೇ ನೋಡು. ಇದೀಗ ನನಗೆ ನಾನು ಓವರ್ ಟೈಮ್ ಮಾಡಿದ ದಿನಗಳು ನೆನಪಾಗುವುದಿಲ್ಲ. ಯಾವಾಗ ಕಾರು ಖರೀದಿಸಿದೆ ಎಂಬುದು ಕೂಡ ನೆನಪಿಲ್ಲ. ಆದರೆ ನಿನ್ನ ಅಜ್ಜಿ ಮಾಡಿದ ಸವಿರುಚಿ ಇನ್ನೂ ನನ್ನ ನಾಲಿಗೆಯಲ್ಲಿದೆ. ನಿನ್ನ ಅಜ್ಜಿಯೊಂದಿಗೆ ಒಡನಾಡಿದ ಪ್ರತಿಯೊಂದು ಮಾತುಗಳು ನನ್ನ ಮನದ ಆಳದಲ್ಲಿದೆ. ನಿನ್ನ ಅಪ್ಪ ನನ್ನ ಮಡಿಲಲ್ಲಿ ನಗುತ್ತಾ ಮಲಗಿದ ನೆನಪು ಈಗ ತಾನೇ ಎಂಬಂತೆ ಹಚ್ಚ ಹಸಿರಾಗಿದೆ.ಈ ಭೂಮಿಯ ಮೇಲೆ ಮಳೆ ಬಿದ್ದಾಗ ಅದರ ವಾಸನೆಗೆ ಮನ ಮುದಗೊಂಡಾಗ ನೆನಪುಗಳು ದಾಳಿ ಇಡುತ್ತವೆ.ಆದ್ದರಿಂದ ನಮ್ಮ ಬದುಕು ಧಾವಂತದಿಂದ ಓಡುವುದರಲ್ಲಿ ಇಲ್ಲ… ನಮ್ಮ ಬದುಕು ಇರುವುದು ನಾವು ಪ್ರಸ್ತುತ ಇರುವ ಗಳಿಗೆಯನ್ನು ನೆಮ್ಮದಿಯಿಂದ ಸವಿಯುವುದರಲ್ಲಿ ಎಂದು  ಹೇಳಿ ದೀರ್ಘವಾಗಿ ನಿಟ್ಟುಸಿರಿಟ್ಟ.ತನ್ನ ಕೈಯಲ್ಲಿರುವ ಪುಟ್ಟ ಕಲಾತ್ಮಕ ಪೆಟ್ಟಿಗೆಯನ್ನು ಶಾಮನ ಕೈಯಲ್ಲಿ ಇಡುತ್ತಾ ಅಜ್ಜ ಹೇಳಿದ… ಮಗು ಶಾಮ ಈ ಜಗತ್ತು ನಿನಗೆ ಸಾವಿರಾರು ವಸ್ತುಗಳನ್ನು ಮಾರಲು ಪ್ರಯತ್ನಿಸುತ್ತದೆ. ಅವುಗಳನ್ನು ಖರೀದಿಸಿದರೆ ಮಾತ್ರ ನೀನು ಸಂತೋಷವಾಗಿರುವೆ ಎಂಬ ನಂಬಿಕೆಯನ್ನು ನಿನ್ನಲ್ಲಿ ಹುಟ್ಟಿಸುತ್ತದೆ. ಆದರೆ.. ನಿಜ ಹೇಳಬೇಕೆಂದರೆ ನೀನು ಭೂತದ ನೆನಪಿನಲ್ಲಿ ಭವಿಷ್ಯದ ಭಯದಲ್ಲಿ ನಿನ್ನ ಬದುಕನ್ನು ಕಳೆಯಬೇಡ. ನಿನ್ನ ವರ್ತಮಾನದಲ್ಲಿಯೇ ನಿನ್ನ ಬದುಕಿದೆ ಈ ಘಳಿಗೆ ಮಾತ್ರ ನಿನ್ನದು. ಮುಂದೆಂದೂ ಸಿಗಬಹುದಾದ ಸುಖಕ್ಕೆ ನಿನ್ನ ಈ ದಿನವನ್ನು ಕಳೆದುಕೊಳ್ಳಬೇಡ. ನಿನ್ನ ಬದುಕಿನ ಪೆಟ್ಟಿಗೆಯನ್ನು ಅತ್ಯುತ್ತಮ ನೆನಪುಗಳೊಂದಿಗೆ ತುಂಬು ಉಸಿರುಗಟ್ಟುವಂತೆ ಓಡುವುದು ಖಂಡಿತ ಬೇಡ. ದೀರ್ಘವಾದ ಉಸಿರನ್ನು ನಿನ್ನ ಎದೆಯಾಳದಲ್ಲಿ ತುಂಬಿಕೊಂಡು ಅದನ್ನು ನಿಧಾನವಾಗಿ ಹೊರ ಹಾಕುತ್ತಾ ಜೀವನದ ಪ್ರತಿಯೊಂದು ಗಳಿಗೆಯನ್ನು ನಿನ್ನದಾಗಿಸಿಕೋ ಅದರ ಮಧುರವಾದ ಸವಿಯನ್ನು ಆಸ್ವಾದಿಸು  ಆಗ ಬದುಕು ನಿನಗೆ ಸದಾ ಸುಂದರವಾಗಿ ಕಾಣುತ್ತದೆ ಎಂದು ಅಜ್ಜ ಹೇಳಿದ.ಅಜ್ಜನ ಕೈಯಲ್ಲಿನ ಪೆಟ್ಟಿಗೆ ಇದೀಗ ಶಾಮನ ಕೈಗೆ ಹಸ್ತಾಂತರವಾಗಿದ್ದು ಇದೀಗ ಆತನ ಕಣ್ಣಿಗೆ ಅದು ಖಾಲಿ ಪೆಟ್ಟಿಗೆಯಾಗಿ ತೋರಲಿಲ್ಲ… ಅದು ನನಗಿರುವ ಬದುಕಿನ ಅವಕಾಶಗಳನ್ನು ತೋರುವ ಜಾದು ಪೆಟ್ಟಿಗೆಯಾಗಿ ಕಾಣಿಸಿತು.ನೋಡಿದಿರಾ ಸ್ನೇಹಿತರೆ ! ಈ ಕಥೆಯಿಂದ ನಮಗೆ ಅರಿವಾಗುವುದು ನಮ್ಮ ಬದುಕಿನಲ್ಲಿ ನಾವು ಬೆಲೆ ಕೊಡಬೇಕಾಗಿರುವುದು ಅತ್ಯುತ್ತಮ ವಸ್ತುಗಳಿಗೆ ಅಲ್ಲ… ವ್ಯಕ್ತಿಗಳಿಗೆ ಮತ್ತು ವ್ಯಕ್ತಿಗತ ಭಾವನೆಗಳಿಗೆ. ಬದುಕಿನ ಅದೆಷ್ಟೋ ಸಮಯವನ್ನು ನಾವು ಭೂತದ ಕನವರಿಕೆಯಲ್ಲಿ ಇಲ್ಲವೇ  ಭವಿಷ್ಯದ  ಚಿಂತೆಯಲ್ಲಿ ಕಳೆಯುತ್ತೇವೆ… ಈ ದಿನವನ್ನು ಜೀವಿಸಲು ಮರೆತುಬಿಡುತ್ತೇವೆ. ಎಲ್ಲರಿಗೂ ಇರುವಂತೆ ನಮಗೂ ಕೂಡ ದಿನಕ್ಕೆ 24 ಗಂಟೆಗಳು ಮಾತ್ರವೇ ಇರುತ್ತವೆ. ಶ್ರೀಮಂತನಾಗಿದ್ದ ಮಾತ್ರಕ್ಕೆ ಸಂತೋಷವಾಗಿರಲು ಸಾಧ್ಯವಿಲ್ಲ, ಎಲ್ಲಾ ಐಷಾರಾಮಗಳನ್ನು ಹೊಂದಿದ್ದವರು ಮಾತ್ರ ನೆಮ್ಮದಿಯ ನಿದ್ರೆಯನ್ನು ಮಾಡಲು ಸಾಧ್ಯವಿಲ್ಲ. ಸುಂದರವಾದ ಬದುಕನ್ನು ಸಾಗಿಸಲು ನಾವು ಮಹತ್ತರವಾದದನ್ನು ಸಾಧಿಸಬೇಕಾಗಿಲ್ಲ… ಕೇವಲ ವರ್ತಮಾನದಲ್ಲಿ ಜೀವಿಸುವುದನ್ನು ರೂಢಿಸಿಕೊಳ್ಳಬೇಕು. ಅತ್ಯಂತ ಸರಳವಾದ ಆಹಾರ ವಿಹಾರವನ್ನು ನಮ್ಮದಾಗಿಸಿಕೊಳ್ಳಬೇಕು. ಒಬ್ಬನೇ ಕುಳಿತು ಐಷಾರಾಮಿ ಹೋಟೆಲ್ ನಲ್ಲಿ  ಭೂರೀ ಭೋಜನ ಸವಿಯುವುದು  ಮನುಷ್ಯನಿಗೆ ಬೇಕಾಗಿಲ್ಲ…. ಬದಲಾಗಿ ನಿಮ್ಮನ್ನು ಅರ್ಥ ಮಾಡಿಕೊಂಡ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಸರಳವಾದ ಊಟ ಮಾಡಿದರೆ ಸಾಕು. ನಿಮ್ಮನ್ನು ಒತ್ತಡಕ್ಕೆ ಈಡು ಮಾಡುವ ಓಟದ ಸ್ಪರ್ಧೆಗಿಂತ ಸ್ನೇಹಿತರೊಂದಿಗೆ ಒಂದು ಪುಟ್ಟ ನಡಿಗೆ ಮನಸ್ಸಿಗೆ ನೆಮ್ಮದಿಯನ್ನು ತಂದುಕೊಡಬಲ್ಲದು.​ಸಂತೋಷ ಎನ್ನುವುದು ನೀವು ಅಂತಿಮವಾಗಿ ತಲುಪುವ ಗುರಿಯಲ್ಲ… ಅದು ನೀವು  ನಡೆಯುವ ಹಾದಿಯಲ್ಲಿ ಕಂಡು ಬರುವ ಎಲ್ಲಾ ಚಿಕ್ಕ ಪುಟ್ಟ ವಿಷಯಗಳನ್ನು ಆಸ್ವಾದಿಸುತ್ತಾ ಮುಂದೆ ಸಾಗುವ ಮನಸ್ಥಿತಿ. ನಿಮ್ಮ ಆಯ್ಕೆಯ ಹೆದ್ದಾರಿ ನಿಮ್ಮದಾಗಲಿ…ಏನಂತೀರಾ? ವೀಣಾ ಹೇಮಂತ್ ಗೌಡ ಪಾಟೀಲ್  ́

“ಅತಿ ಅವಸರ ಸಲ್ಲದು” ವೀಣಾ ಹೇಮಂತ್ ಗೌಡಪಾಟೀಲ Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ24 ಸವಿತಾ ದೇಶಮುಖ ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನ ಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದಮಹಾನ್‌ ಚೇತನ *ಜಯದೇವಿ ತಾಯಿಯವರ ಸಮಾಜಮುಖಿ, ಸಾಹಿತ್ಯಿಕ ಹಾಗೂ ಭಕ್ತಿಮಯ ಬದುಕು*  ಜಯದೇವಿ ತಾಯಿಯವರ ವ್ಯಕ್ತಿತ್ವವು ಕೇವಲ ಕುಟುಂಬದ ಚೌಕಟ್ಟಿನೊಳಗೆ ಸೀಮಿತವಾಗಿರಲಿಲ್ಲ.   ಸಂಸಾರದ ಹೊಣೆ ಹೊತ್ತು… ಸಿದ್ದರಾಮೇಶ್ವರರ ಶ್ರೇಷ್ಠ ಭಕ್ತಿಯಾಗಿ, ತ್ರಿಭಾಷಾ ಪಾಂಡಿತ್ಯವನ್ನು ಪಡೆದು ,ಕನ್ನಡ ಸರಸ್ವತ ಲೋಕದ ಕಣ್ಣಾಗಿ, ಕನ್ನಡಿಗರ ತಾಯಿಯಾಗಿ , ಶ್ರೇಷ್ಠ ಶಿವಶರಣಿಯಾಗಿ ಬದುಕಿ… ಜನಮನಗಳಲ್ಲಿ ಅಳಿಯದ ಛಾಪು ಮೂಡಿಸಿದ ಮುಂದಿನ ಬದುಕನ್ನು ನೋಡೋಣ ಬನ್ನಿ …… *ಸವಿಧಾನ ಜೀವನ| ನೋವು ನಾವುಗೆಲಿದು ಪಾವನ ಬದುಕಿ -ನಂದನವನಲಿದು ಬೇವು ಬೆಲ್ಲಾಗಿ ಸವಿದೇನ*|| ಎನ್ನುತ ಸಮಾಜದ ನೋವು-ನಲಿವುಗಳಿಗೆ ಸದಾ ಸ್ಪಂದಿಸುತ್ತಿದ್ದ ಜಯದೇವಿ ತಾಯಿಯವರು ಅನೇಕ ಜನಪರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಬಡವರು, ನಿರ್ಗತಿಕರು, ಮಹಿಳೆಯರು ಹಾಗೂ ಯುವಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದರು. ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಶಿಕ್ಷಣ ಮತ್ತು ಸಂಸ್ಕಾರಗಳು ಬೆಳೆಯಬೇಕು ಎಂಬ ಆಶಯದಿಂದ ಹಲವು ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ವಿಶಿಷ್ಟವಾದುದು. ಜೀವನದ ಅನುಭವಗಳು, ಭಕ್ತಿ, ಸಾಮಾಜಿಕ ಚಿಂತನೆಗಳು ಮತ್ತು ಸ್ತ್ರೀ ಸಂವೇದನೆಗಳನ್ನು ತಮ್ಮ ಕೃತಿಗಳ ಮೂಲಕ ಜನರಿಗೆ ತಲುಪಿಸಿದರು. ಅವರ ಬರಹಗಳು ಕೇವಲ ಓದಿಗಾಗಿ ಅಲ್ಲ, ಬದುಕಿಗೆ ದಾರಿದೀಪವಾಗುವಂತಿದ್ದವು. ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಅವರ ಅಪಾರ ಪ್ರೀತಿಯು ಅನೇಕ ಮೌಲಿಕ ಕೃತಿಗಳ ಸೃಷ್ಟಿಗೆ ಕಾರಣವಾಯಿತು. *ಬರದೇನೆನ್ನುವ ಭಾವ| ಬರಿತಾಯ್ತೆನಗವ್ವ ಕರೆದೇನೆನ್ನುವ ಭಕುತಿ ಬಯಲಾಯ್ತ- ತಾಯವ್ವಕೊರಗೇನೆಂಬುವ ಮನ ಮಾಯಾಯಿತು||* ಎನ್ನುತ  ಶ್ರೀ ಸಿದ್ದರಾಮೇಶ್ವರಲಿ ಅಪಾರ ಭಕ್ತಿಯ ಲೀನರಾಗಿದ್ದರು. ಭಕ್ತಿ ಎಂದರೆ ಕೇವಲ ಪೂಜೆ-ಪುನಸ್ಕಾರಗಳಲ್ಲ, ಸಮಾಜ ಸೇವೆಯೇ ನಿಜವಾದ ದೇವರ ಸೇವೆ ಎಂಬ ತತ್ವವನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು .*ಕೃಪೆ ಮಾಡಿ ಎನಗೆ | ಶ್ರೀಪಾದವ ತೋರಿದನುಉಪಮೀಸ ಬಾರದ ಸಂತಸ -ಗೊಳಿಸಿದಆ ಪರಬ್ರಹ್ಮನಿಗೆ ಶರಣೆಂಬೆ||* ಎನ್ನುವಂತೆ ಸಮಾಜ ಸೇವೆಯೇ ದೇವರ ಸೇವೆಯಂತೆ ಸ್ವೀಕರಿಸಿದರು.ಸಿದ್ದರಾಮರ ಆದರ್ಶಗಳಾದ ದಾಸೋಹ, ಕಾಯಕ, ಸಮಾನತೆ ಮತ್ತು ಮಾನವ ಪ್ರೇಮವನ್ನು ತಮ್ಮ ಬದುಕಿನ ಮೂಲಕ ಸಾಕಾರಗೊಳಿಸಲು ಪ್ರಯತ್ನಿಸಿದರು.  ಈಗ ಒಂದೊಂದಾಗಿ ತಿಳಿದುಕೊಳ್ಳೋಣ. ಅವರ ಬದುಕಿನ ಅಧ್ಯಾಯಗಳು ನಿಸ್ವಾರ್ಥ ಸೇವೆ, ಆಧ್ಯಾತ್ಮಿಕತೆ ಮತ್ತು ಜನಪರ ಕಾಳಜಿಯ ಅಮೂಲ್ಯ ಕಥನಗಳಾಗಿವೆ.ಆದರ್ಶ ಗೃಹಿಣಿ, ಸಮಾಜಸೇವಕಿ, ಸಾಹಿತಿ ಮತ್ತು ಶ್ರೇಷ್ಠ ಭಕ್ತೆಯಾಗಿ ಜಯದೇವಿ ತಾಯಿಯವರು ನಡೆಸಿದ ಬದುಕು ಬಹುಮುಖ ಸಾಧನೆಯ ಪ್ರತೀಕವಾಗಿದೆ. *ಬಿಂಕಿನ ಮಾತಿಲ್ಲ ಕೊಂಕೀನ ನುಡಿಯಲ್ಲಕಿಂಕರಳ ಕೂಗು ಕೇಳಿರಿ,- ಶರಣರಲೆಂಖಿನ ನಾ ನೋಡಿ ನಂಬೀದ* ಎನ್ನುತ ಕಿಂಕರರಲಿ ಕಿಂಕರಳಾಗಿ ಕನ್ನಡಾಂಬೆಯ   ಸೇವೆಯಲ್ಲಿ ಜನಸೇವೆಯಲ್ಲಿ ತೊಡಗಿದರು.  ೧೯೪೯ರಲ್ಲಿ ಕಲ್ಬುರ್ಗಿಯಲ್ಲಿ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ೩೨ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು* ಶ್ರೀ ಉತ್ತಂಗಿ ಚನ್ನಪ್ಪನವರು* ಅಧ್ಯಕ್ಷತೆ ವಹಿಸಿದ್ದರು. ಇಲ್ಲಿ ತಾಯಿಯವರು ಮಹಿಳಾ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿದ್ದರು. ೧೯-೨-೧೯೫೦ ರಂದು ಸೊಲ್ಲಾಪುರದಲ್ಲಿ ೩೩ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು ಇಲ್ಲಿ ಶ್ರೀ ಎಂ ಆರ್ ಶ್ರೀ ಅವರ ಅಧ್ಯಕ್ಷತೆ ವಹಿಸಿದ್ದರು. ಅಲ್ಲಿ ಮಹಿಳಾಪರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದರು. ಮುಂದೆ ೨೫-೧೨-೧೯೫೦ರಂದು ಮುಂಬೈಯಲ್ಲಿ ೩೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು ಇಲ್ಲಿ ರಾಷ್ಟ್ರಕವಿ* ಶ್ರೀ ಮಂಜೇಶ್ವರ ಗೋವಿಂದ ಪೈ *ಅವರು ಅಧ್ಯಕ್ಷತೆ ವಹಿಸಿದ್ದರು. ಇಲ್ಲಿಯೂ ಕೂಡ ಮಹಿಳೆಯರ ಸಮಾರಂಭಕ್ಕೆ ಅಧ್ಯಕ್ಷತೆ ವಹಿಸಿದ್ದರು.ಈ ಮೂರು ಸಮ್ಮೇಳನಗಳ ಮಹಿಳಾ ಗೋಷ್ಟಿಯಲ್ಲಿ ಜಯದೇವಿ ತಾಯಿಯವರು ಅಧ್ಯಕ್ಷತೆ ವಹಿಸಿದ್ದರು. ಜಯದೇವಿ ತಾಯಿಯವರ ಶಿಕ್ಷಣ ಕ್ರಾಂತಿ  ಸೊಲ್ಲಾಪುರದ ಇತಿಹಾಸದಲ್ಲೊಂದು ಸುವರ್ಣ ಅಧ್ಯಾಯ.೧೯೪೯ನೇ ವರ್ಷ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇನ್ನೂ ಕೆಲವು ವರ್ಷಗಳಷ್ಟೇ ಆಗಿದ್ದವು. ಸಮಾಜದಲ್ಲಿ ಬಡತನ, ಅಸಮಾನತೆ ಮತ್ತು ನಿರಕ್ಷರತೆ ವ್ಯಾಪಕವಾಗಿದ್ದ ಕಾಲ ಅದು. ವಿಶೇಷವಾಗಿ ಗಿರಣಿಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಕಾರ್ಮಿಕರು ಹಾಗೂ ದಲಿತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಜೀವನೋಪಾಯಕ್ಕಾಗಿ ದಿನವಿಡೀ ದುಡಿಯಬೇಕಾಗಿದ್ದ ಕಾರಣ ಅವರಿಗೆ ಶಾಲೆಯ ಮುಖವೇ ಕಾಣುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಜಯದೇವಿ ತಾಯಿಯವರು ಸಮಾಜದ ತಳಮಳವನ್ನು ಕಂಡು “ಶಿಕ್ಷಣವೇ ಬದುಕಿನ ಬೆಳಕು” ಎಂಬ ದೃಢ ನಂಬಿಕೆಯೊಂದಿಗೆ ಅವರು ಒಂದು ಮಹತ್ತರ ಸಾಮಾಜಿಕ ಚಳವಳಿಗೆ ಚಾಲನೆ ನೀಡಿದರು….. ಯಾವುದೇ ದೊಡ್ಡ ಕಟ್ಟಡವಿಲ್ಲ, ಸರ್ಕಾರದ ನೆರವಿಲ್ಲ. ಆದರೆ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಮತ್ತು ಮಾನವೀಯತೆ ಅವರಲ್ಲಿತ್ತು.ತಮ್ಮ ಮನೆಯ ಆವರಣದಲ್ಲಿಯೇ ಒಂದು ಸಣ್ಣ ಶಾಲೆಯನ್ನು ಆರಂಭಿಸುವ ಮೂಲಕ ಅವರು ಶಿಕ್ಷಣ ಯಜ್ಞಕ್ಕೆ ನಾಂದಿ ಹಾಡಿದರು. ಗಿರಣಿಯಲ್ಲಿ ದುಡಿಯುತ್ತಿದ್ದ ಸುಮಾರು ೩೦,೦೦೦ ಕಾರ್ಮಿಕರ ಕುಟುಂಬಗಳ ಮಕ್ಕಳು ಹಾಗೂ ದಲಿತ ಸಮುದಾಯದ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವ ಕನಸನ್ನು ಕಂಡರು.ಆರಂಭದಲ್ಲಿ ಕೆಲವು ಅಡೆತಡೆಗಳು ಬಂದರೂ ತಾಯಿಯವರ ಪ್ರೀತಿ, ತಾಳ್ಮೆ ಮತ್ತು ಸೇವಾ ಭಾವದಿಂದ ಆ ಪ್ರಯತ್ನ ಬೇಗನೆ ಜನಮನ ಗೆದ್ದಿತು. ನಂತರ* ಕಾರ್ಮಿಕ ಸಾಕ್ಷರತಾ ಸಮಿತಿಯ* ಸಹಯೋಗದೊಂದಿಗೆ ವಿವಿಧ ಪ್ರದೇಶಗಳಲ್ಲಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲು ಮುಂದಾದರು. ಮೊದಲಿಗೆ ೨೫ ಕೇಂದ್ರಗಳು ಆರಂಭವಾದವು.  ಕೇಂದ್ರಗಳಲ್ಲಿ ಮಕ್ಕಳ ಜೊತೆಗೆ ಅಕ್ಷರಜ್ಞಾನವಿಲ್ಲದ ಕಾರ್ಮಿಕರಿಗೂ ಓದು-ಬರಹ ಕಲಿಸಲಾಗುತ್ತಿತ್ತು. ಶಿಕ್ಷಣವನ್ನು ಸಮಾಜದ ಕೊನೆಯ ವ್ಯಕ್ತಿಗೂ ತಲುಪಿಸಬೇಕು ಎಂಬುವದು ಅವರ ಉದ್ದೇಶವಾಗಿತ್ತು. ತಾಯಿಯವರ ಪರಿಶ್ರಮ ಮತ್ತು ಜನರ ವಿಶ್ವಾಸದಿಂದ ಈ ಚಳವಳಿ ದಿನದಿಂದ ದಿನಕ್ಕೆ ವಿಸ್ತರಿಸಿತು. ೨೫ ಕೇಂದ್ರಗಳಾಗಿದ್ದವು ಮುಂದೆ ೧೨೫  ಶಿಕ್ಷಣ ಕೇಂದ್ರಗಳಾಗಿ ಬೆಳೆದವು. ಸಾವಿರಾರು ಮಕ್ಕಳು ಮತ್ತು ವಯಸ್ಕರು ಈ ಕೇಂದ್ರಗಳ ಮೂಲಕ ಅಕ್ಷರಜ್ಞಾನ ಪಡೆದರು. ಶಿಕ್ಷಣದ ಬೆಳಕು ಮನೆಮನೆಗೂ ಹರಡಿತು.ಈ ಕಾರ್ಯ  ಶಾಲೆಗಳನ್ನು ಆರಂಭಿಸಿದ ಸಾಧನೆಯೊಂದಿಗೆ….*ಅದು ಸಮಾಜ ಪರಿವರ್ತನೆಯ ಚಳವಳಿಯಾಗಿತ್ತು. * ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳಿಗೆ ಹೊಸ ಭವಿಷ್ಯಕೆ ದಾರಿ ಮಾಡಿಕೊಟ್ಟರು  ಬಡವರ ಮನೆಗಳಲ್ಲಿ ಆಶಾಕಿರಣ ಮೂಡಿಸಿದ ಪ್ರಯತ್ನವಾಗಿತ್ತು. ಅನೇಕ ಕುಟುಂಬಗಳ ಬದುಕಿನ ದಿಕ್ಕನ್ನೇ ಬದಲಿಸಿದ ಮಹಾನ ಸೇವೆಯಾಗಿತ್ತು.ಆದ್ದರಿಂದಲೇ ಜಯದೇವಿ ತಾಯಿಯವರು ಕೈಗೊಂಡ ಶೈಕ್ಷಣಿಕ ಅಭಿಯಾನ ಸೊಲ್ಲಾಪುರದ ಶೈಕ್ಷಣಿಕ ಇತಿಹಾಸದಲ್ಲೇ ಒಂದು ದಾಖಲೆಯ ಸಾಧನೆಯಾಗಿ ಗುರುತಿಸಲ್ಪಟ್ಟಿದೆ.  ಒಬ್ಬ ಮಹಿಳೆ ತನ್ನ ಮನೆಯ ಆವರಣದಲ್ಲಿ ಆರಂಭಿಸಿದ ಸಣ್ಣ ಶಿಕ್ಷಣ ಸೇವೆ ಮುಂದೆ ೧೨೫ ಕೇಂದ್ರಗಳ ಮಹಾ ಚಳವಳಿಯಾಗಿ ಬೆಳೆದು ಸಾವಿರಾರು ಜನರ ಬದುಕನ್ನು ಬೆಳಗಿಸಿತು ಎಂಬುದು ನಿಜಕ್ಕೂ ಅಪೂರ್ವ ಸಾಧನೆ.ಜಯದೇವಿ ತಾಯಿಯವರ ಈ ಕಾರ್ಯ ನಮಗೆ ಶಿಕ್ಷಣದ ಮಹತ್ವವನ್ನು ಯಾವ ರೀತಿಯಲ್ಲಿ, ಒಬ್ಬ ವ್ಯಕ್ತಿಯ ಸಂಕಲ್ಪ ಸಮಾಜದ ಇತಿಹಾಸವನ್ನೇ ಬದಲಾಯಿಸಬಲ್ಲದು ಎಂಬುದನ್ನೂ ಸಾರುತ್ತದೆ. ಅವರ ಜೀವನವು ಸೇವೆ, ತ್ಯಾಗ ಮತ್ತು ಶಿಕ್ಷಣದ ಮೂಲಕ ಸಮಾಜೋತ್ಥಾನ ಮಾಡಿದ  ಆದರ್ಶದ ಪ್ರತೀಕವಾಗಿದೆ. ಶಿಕ್ಷಣವು ಎಲ್ಲರಿಗೂ ಲಭಿಸಬೇಕು, ಸಮಾನತೆಯನ್ನು ಮೂಡಿಸಬೇಕು ಅನ್ನುವ ಉದ್ದೇಶ ಶಿಕ್ಷಣದ ತಳಹದಿಯಾಗಿರಬೇಕು ಅನ್ನುತ್ತಿದ್ದರು. *ಜಗವು ಒಂದಾಗಲಿ |ನಗುತ ಕೈಗೂಡಿಸಿರಿಬಗೆಯಲಿ ಅಣ್ಣತಮ್ಮರಂತೆ ಲೋಕದಿಹಗೆ ಎಂಬ ಭಾವ ಅಳಿಯಲಿ||* (ಮುಂದುವರೆಯುವುದು) ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-121 ಒಬ್ಬ ಅಮ್ಮನ ಕಥೆ ರುಕ್ಮಿಣಿನಾಯರ್ ಅಮ್ಮನ ಆರೋಗ್ಯದ ಸತ್ಯ ಅರಿತತಂಗಿಯ ಗೋಳಾಟ ಸ್ವಲ್ಪ ಹೊತ್ತು ಇಬ್ಬರೂ ಅಮ್ಮನ ಜೊತೆ ಮಾತನಾಡುತ್ತಾ ಕಾಲ ಕಳೆದರು. ಡಾಕ್ಟರ್ ರೌಂಡ್ಸ್ ಗೆ ಬರುವ ಹೊತ್ತಾಯ್ತು ಎಂದು ವಾರ್ಡಿನ ಆಯಾ ಕೂಗಿ ಹೇಳಿದಾಗ ಅಕ್ಕ-ತಂಗಿ ಇಬ್ಬರೂ ಹೊರಗೆ ನಡೆದರು. ಆಸ್ಪತ್ರೆಯ ಹೊರಾಂಗಣದಲ್ಲಿ ಮೆಟ್ಟಿಲ ಮೇಲೆ ಕುಳಿತು ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅಕ್ಕ ಇಷ್ಟೊಂದು ಮೌನವಾಗಿರುವುದನ್ನು ನೋಡಿ ಅಮ್ಮನ ಆರೋಗ್ಯದಲ್ಲಿ ಏನೋ ದೊಡ್ಡ ಸಮಸ್ಯೆ ಇರಬಹುದು ಎಂದು ತಂಗಿ ಊಹಿಸಿದಳು. ಆದರೂ ಅಕ್ಕ ಹೇಳುವವರೆಗೂ ಕಾಯ್ದಳು. ಸ್ವಲ್ಪ ಹೊತ್ತಿನ ನಂತರ ಅಕ್ಕನೇ ಮೌನ ಮರಿದಳು…. “ನಿನಗೆ ಗೊತ್ತು ತಾನೆ ಅಮ್ಮನಿಗೆ ಡಯಾಬಿಟಿಸ್ ಇರುವುದು…. ಅದಕ್ಕಾಗಿ ಅಮ್ಮ ನಿರಂತರವಾಗಿ ಇನ್ಸುಲಿನ್ ತೆಗೆದುಕೊಳ್ಳುತ್ತಿರುವುದು….. ಹಾಗೂ ಮೂರು ತಿಂಗಳಿಗೊಮ್ಮೆಯಾದರೂ ಆಸ್ಪತ್ರೆಗೆ ತಪಾಸಣೆಗೆ ಬರುವುದು….ಆದರೆ….. ಅದರ ಜೊತೆಗೆ ಅದ್ಯಾವಾಗ ಬಿ.ಪಿ ಬಂದು ಅಮ್ಮನ ಒಡಲನ್ನು ಸೇರಿತು ಎಂಬುದು ಅಮ್ಮನಿಗೂ ನಮಗೂ ತಿಳಿಯಲಿಲ್ಲ”…. ಎಂದು ಅಲ್ಲಿಗೆ ನಿಲ್ಲಿಸಿ, ತಂಗಿಯ ಮುಖವನ್ನು ಒಮ್ಮೆ ದಿಟ್ಟಿಸಿದಳು. ಅಚ್ಚರಿಯಿಂದ ತಂಗಿ ಅಕ್ಕನ ಮುಖವನ್ನು ನೋಡಿದಳು. ಆಗ ಅಕ್ಕ ‘ಹೌದು’ ಎನ್ನುವಂತೆ ತಲೆ ಆಡಿಸಿದಳು…. “ಮಧುಮೇಹ ಮತ್ತು ರಕ್ತದೊತ್ತಡ ಎರಡೂ ಅಣ್ಣತಮ್ಮಂದಿರು ಇದ್ದಂತೆ ಎಂದು ವೈದ್ಯರು ಹೇಳಿದರು….. ಒಂದು ಬಂದ ನಂತರ ನಿಧಾನವಾಗಿ ಮತ್ತೊಂದು ಜೊತೆಗೂಡುತ್ತದೆ ಎಂದು ಕೂಡ ಹೇಳಿದರು…. ಈಗ ನಮ್ಮ ತಾಯಿಗೆ ಇರುವ ಆರೋಗ್ಯ ಸಮಸ್ಯೆ ಗಂಭೀರವಾದದ್ದು…..  ಮಧುಮೇಹ ಹಾಗೂ ರಕ್ತದೊತ್ತಡದಿಂದಾಗಿ ನಮ್ಮ ತಾಯಿಯ ಶರೀರದ ಒಳಗಿರುವ ಅಂಗಾಂಗಗಳು, ಎಂದರೆ ಹೃದಯ, ಯಕೃತ್ತು ಮೂತ್ರಪಿಂಡಗಳು ಎಲ್ಲವೂ ಊದಿಕೊಂಡಿವೆ…. ಅವು ಸರಿಯಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿಲ್ಲ… ಹಾಗಾಗಿ ರಕ್ತ ಶುದ್ಧಿ ಆಗುತ್ತಿಲ್ಲ…. ಎಂದು ವೈದ್ಯರು ತಿಳಿಸಿದ್ದಾರೆ…. ಎಂದಳು.  ಅಕ್ಕ ಹೇಳಿದ ಸಂಗತಿಯನ್ನು ಕೇಳುತ್ತಾ ತಂಗಿಯ ಮುಖ ಬಾಡಿತು…. ಅಕ್ಕಾ ಇದಕ್ಕೆ ಔಷಧೋಪಚಾರಗಳು ಇಲ್ಲವೇ?….ಎಂದು ತಂಗಿ ಕೇಳಿದಾಗ…. ಇಲ್ಲಾ… ಕಣೇ…. ಎಂದವಳ ಧ್ವನಿ ಭಾರವಾಗಿತ್ತು…… ಯಾಕಕ್ಕಾ?…..ಅದು ಹೇಗೆ? ….ಎಂದು ಕೇಳಿದಾಗ…. ಶರೀರದ ಒಳ ಅಂಗಗಳು ವೈಫಲ್ಯವಾದರೆ ಯಾವ ಔಷಧಿಗಳೂ ಪರಿಣಾಮ ಬೀರುವುದಿಲ್ಲ… ತಾತ್ಕಾಲಿಕ ಉಪಶಮನಗಳು ದೊರೆಯುತ್ತವೆ ಅಷ್ಟೇ…. ಆದರೆ ಪೂರ್ಣವಾಗಿ ಗುಣಮುಖವಾಗುವುದಿಲ್ಲ…. ಹಾಗಾಗಿ ವೈದ್ಯರು ಹೇಳಿದರು,”…. ಎಂದು ತನ್ನ ಮಾತನ್ನು ಮುಂದುವರೆಸದೆ ಅರ್ಧಕ್ಕೇ ನಿಲ್ಲಿಸಿ, ತಂಗಿಯ ಮುಖವನ್ನೇ ತದೇಕ ಚಿತ್ತದಿಂದ ನೋಡಿದಳು.‌ ಮುಂದೆ ಮಾತು ಬಾರದೇ ಗಂಟಲು ಕಟ್ಟಿತು. ಕಣ್ಣುಗಳಲ್ಲಿ ಧುತ್ತನೇ ನೀರು ತುಂಬಿಕೊಂಡವು. ತಂಗಿಗೆ ಹೇಗೆ ಹೇಳಲಿ ಇರುವ ಸತ್ಯವನ್ನು? ಅವಳು ಖಂಡಿತಾ ಸಹಿಸಲಾರಳು. ದೇವರೇ ನನಗೊಂದಿಷ್ಟು ಶಕ್ತಿ ಕೊಡು. ನನ್ನಲ್ಲಿರುವ ಶಕ್ತಿ ಉಡುಗಿ ಹೋಗುತ್ತಿದೆ. ಇಂತಹಾ ಘೋರ ಸತ್ಯವನ್ನು ನಾನವಳಿಗೆ ಹೇಗೆ ಹೇಳಲಿ? ಎಂದು ಚಿಂತಾಕ್ರಾಂತಳಾಗಿ ಒಂದು ಕ್ಷಣ ಕಣ್ಣು ಮುಚ್ಚಿದಳು. ಕಣ್ಣುಗಳಲ್ಲಿ ತುಂಬಿದ್ದ ನೀರು ಕೆನ್ನೆಯ ಮೇಲೆ ಇಳಿಯಿತು.  ತಂಗಿಯು ಕುಳಿತಲ್ಲಿಂದ ನಿಧಾನವಾಗಿ ಎದ್ದು ಬಂದು ಅಕ್ಕನ ಕೆನ್ನೆಯ ಮೇಲೆ ಹರಿದ ಕಣ್ಣೀರನ್ನು ಒರಸಿ, ಅಕ್ಕನ ಮುಖವನ್ನು ಬೊಗಸೆಯಲ್ಲಿ ಹಿಡಿದು…”ಅಕ್ಕಾ ….ಏನಾಯ್ತು ಹೇಳು…. ಕಷ್ಟ ಸುಖ, ನೋವು ನಲಿವು, ಏನೇ ಇರಲಿ ನಾವು ಪರಸ್ಪರ ಹೇಳಿಕೊಂಡು ಮನಸ್ಸನ್ನು ಹಗುರಾಗಿಸಿಕೊಂಡಿದ್ದೇವೆ….. ಒಬ್ಬರಿಗೊಬ್ಬರು ಸದಾ ಜೊತೆಯಲ್ಲಿ ಇದ್ದೇವೆ…. ನೀನು ಇರುವ ಸ್ಥಿತಿಯನ್ನು ಕಂಡು ಪರಿಸ್ಥಿತಿಯ ಗಂಭೀರತೆ ನನಗೂ ಅರ್ಥವಾಗುತ್ತಿದೆ…. ನೀನು ಹೀಗೆ ಮಾತನಾಡದೆ ದುಃಖಿಸುತ್ತಿದ್ದರೆ ನನ್ನ ಮನ ಇನ್ನೂ ವ್ಯಾಕುಲಗೊಳ್ಳುತ್ತದೆ…. ಪರಿಸ್ಥಿತಿ ಏನೇ ಇರಲಿ ಅದನ್ನು ನಾವು ಎದುರಿಸಲೇಬೇಕು…. ದಯವಿಟ್ಟು ಏನಾಯ್ತು ಎಂದು ಹೇಳು ಅಕ್ಕಾ”…. ಎಂದು ತಂಗಿ ಹೇಳಿದಾಗ ಅವಳ ದುಃಖವು ಇನ್ನೂ ಹೆಚ್ಚಾಯಿತು. ತಂಗಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ತನ್ನ ಪಕ್ಕ ಕುಳಿತುಕೊಳ್ಳುವಂತೆ ಸನ್ನೆ ಮಾಡಿ…. “ನೀನು ಈಗ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬೇಕಾಗಿದೆ…. ವೈದ್ಯರು ಹೇಳಿದಾಗ ನನಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಅನುಭವವಾಯಿತು… ಈಗ ನಿನಗೆ ಇಂತಹ ಸಂಕಟದ ವಿಷಯವನ್ನು ಹೇಗೆ ಹೇಳಲಿ ಎಂಬುದೇ ನನ್ನ ಯೋಚನೆಯಾಗಿದೆ…. ಆದರೂ ಹೇಳದೇ ಬೇರೆ ದಾರಿ ಇಲ್ಲ”…. ಎಂದಾಗ ತಂಗಿ…._ಅದೇನೇ ಇರಲಿ ಹೇಳು” …ಎಂದಳು….. _ವೈದ್ಯರು ಹೇಳಿದರು…. ನಮ್ಮ ತಾಯಿ ಇನ್ನು ಕೇವಲ ಆರು ತಿಂಗಳಷ್ಟೇ…. ನಮ್ಮೊಂದಿಗೆ ಇರುತ್ತಾರೆ”… ಎಂದಳು.‌ ಅಕ್ಕ ಹೇಳಿದ ಮಾತು ತಂಗಿಗೆ ಸರಿಯಾಗಿ ಅರ್ಥವಾಗಲಿಲ್ಲ…. _ಬಿಡಿಸಿ ಹೇಳಕ್ಕ…. ನನಗೆ ಏನೂ ಅರ್ಥವಾಗುತ್ತಿಲ್ಲ….”ಎಂದಳು. ….”ಅಂದರೆ…. ನಮ್ಮ ತಾಯಿ ಜೀವಂತವಾಗಿರುವುದು ಇನ್ನು ಕೇವಲ ಆರು ತಿಂಗಳು ಮಾತ್ರ….. ಈ ಮಾತನ್ನು ಕೇಳಿದ ತಂಗಿ ಗರಬಡಿದಂತೆ ಅಲುಗಾಡದೆ ಹಾಗೆ ಕುಳಿತುಬಿಟ್ಟಳು. ತನ್ನ ಕಿವಿಗಳನ್ನು ತಾನೆ ನಂಬದಾದಳು. ತಾನು ಕೇಳುತ್ತಿರುವುದು ಏನು? ಅಕ್ಕ ಇದೇನು ಹೇಳುತ್ತಿದ್ದಾಳೆ? ಇದು ನಿಜವಲ್ಲ ಎಂದುಕೊಳ್ಳುತ್ತಾ, ಅಕ್ಕನ ಎರಡೂ ಭುಜಗಳನ್ನು ಹಿಡಿದು ಬಲವಾಗಿ ಅಲುಗಾಡಿಸುತ್ತಾ… “ನೀನು ಏನು ಹೇಳುತ್ತಿರುವೆ? ಸುಮ್ಮನೆ ಏನೇನೋ ಹೇಳಬೇಡ….. ಅಮ್ಮನಿಗೆ ಏನೂ ಆಗಿಲ್ಲ…. ಈಗ ನೋಡು ಸ್ವಲ್ಪ ಹೊತ್ತಿಗೆ ಮುಂಚೆ ನಮ್ಮ ಜೊತೆ ಎಷ್ಟು ಚೆನ್ನಾಗಿ ಮಾತನಾಡುತ್ತಿದ್ದಳು…. ಏನೋ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ ಅಷ್ಟೇ…. ವೈದ್ಯರು ಹಾಗೆ ಹೇಳಿರಲಿಕ್ಕಿಲ್ಲ…. ಬಹುಶಃ ನೀನು ಸರಿಯಾಗಿ ಕೇಳಿಸಿಕೊಂಡಿಲ್ಲ ಎಂದು ಅನಿಸುತ್ತದೆ…. ಇಷ್ಟು ಬೇಗ ನಮ್ಮನ್ನಗಲಿ ಅಮ್ಮ ಎಲ್ಲಿಗೂ ಹೋಗುವುದಿಲ್ಲ….. ನಿನ್ನ ವಿದ್ಯಾಭ್ಯಾಸ ಮುಗಿದು ನೀನು ಕೆಲಸಕ್ಕೆ ಸೇರಿಕೊಳ್ಳುವುದನ್ನು …. ನಾವೆಲ್ಲರೂ ಸಂತೋಷದಿಂದ ಕಳೆಯುವ ಕಾಲವನ್ನು ಅಮ್ಮ ನೋಡಬೇಕಿದೆ….. ತಂಗಿ ನವೋದಯ ವಿದ್ಯಾಲಯದಿಂದ ಈ ವರ್ಷ 10ನೇ ತರಗತಿ ಮುಗಿಸಿ, ಅವಳು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಸುವುದನ್ನು ಅಮ್ಮ ನೋಡಬೇಕಿದೆ…. ದೇವರು ಅಷ್ಟು ನಿಷ್ಕರುಣಿಯಲ್ಲ…. ವೈದ್ಯರನ್ನು ಭೇಟಿಯಾಗಿ ಮತ್ತೊಮ್ಮೆ ಕೇಳು….. ಅಮ್ಮನ ಆರೋಗ್ಯ ಸುಧಾರಿಸಲು ಏನಾದರೂ ಔಷಧೋಪಚಾರ ಇರಬಹುದೇ?….ಸ್ವಲ್ಪಕಾಲವಾದರೂ ಅಮ್ಮ ನಮ್ಮೊಟ್ಟಿಗೆ ಬದುಕಿರಲು ಅವಕಾಶವಿದೆಯೇ ಎಂದು…. ಅಕ್ಕಾ ದಯವಿಟ್ಟು ವೈದ್ಯರನ್ನು ಮತ್ತೊಮ್ಮೆ ಭೇಟಿ ಮಾಡಿ ಕೇಳು ಎಂದು ಬೆಕ್ಕಿ ಬಿಕ್ಕಿ ಅಳುತ್ತಾ ದಂಬಾಲು ಬಿದ್ದಳು. ರುಕ್ಮಿಣಿ ನಾಯರ್

Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-23 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಜಯದೇವಿ ತಾಯಿಯವರ ಜೀವನವೆಂಬ ಮಹಾಗ್ರಂಥದಲ್ಲಿ ಅವರ ಮಕ್ಕಳು ಒಂದೊಂದು ಅಮೂಲ್ಯ ಅಧ್ಯಾಯಗಳಾಗಿದ್ದರೆ…. ಮುಖ್ಯ ಪಾತ್ರಧಾರಿಯಾಗಿ ಆಗಮಿಸಿದ ಅಳಿಯ ಡಾ. ಶಂಕರಣ್ಣ ಮೂಗಿ ಸುಪ್ರೀಂ ಕೋರ್ಟಿನ ನ್ಯಾಯವಾದಿಗಳು (ನನ್ನ ತಂದೆ). ಜಯದೇವಿ ತಾಯಿಯವರ ಪಡೆದ ಹಿರಿಯ ಮಗನಾಗಿ ಪಾತ್ರವನ್ನು ವಹಿಸಿದ್ದು ಅತ್ಯಂತ ವಿಶಿಷ್ಟವಾದುದು. ತಾಯಿಯ ಬದುಕಿನ ಕಷ್ಟ-ಸುಖಗಳ ನಡುವೆ ಮಗನಾಗಿ, ತಾಯಿಯ ನೆರಳಾಗಿ, ಬೆನ್ನೆಲುಬಾಗಿ, ಮಾರ್ಗದರ್ಶಕರಾಗಿ ನಿಂತವರು.ಗಂಡನ ವಿಯೋಗದ ನಂತರ ಮನೆಯ ಜವಾಬ್ದಾರಿಗಳ  ಭಾರವು ಹೇರಿಕೊಳ್ಳಲಾರದಷ್ಟು ಭಾರವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸಿದ್ದವು…. ಆ ಸಮಯದಲ್ಲಿ “ಶಿವಯೋಗಿ ಸಿದ್ದರಾಮನು ಕಳಿಸಿಕೊಟ್ಟ ಕೈಯಾಗಿ ಶಂಕರಣ್ಣನವರು.. ಬಂದರೆಂದು” ತಾಯಿ ಯಾವಾಗಲು ಹೇಳುತಿದ್ದರು. ಡಾ. ಶಂಕ್ರಣ್ಣ. ಡಿ .ಮೂಗಿ.ಸುಪ್ರೀಂ ಕೋರ್ಟ್ ನ್ಯಾಯವಾದಿಗಳು (ಸೋವಿಯತ್ ಲ್ಯಾಂಡ್ ನೆಹರು ಅವಾರ್ಡ್ ವಿಜೇತರು) ಶಂಕರ ಮೂಗಿ ಅವರದು ಬೈಲ್ಹೊಂಗಲದ ಪ್ರತಿಷ್ಠಿತ ಮನೆತನ ಹಾಗೂ ಕಿತ್ತೂರು ಇತಿಹಾಸದ ಮೊದಲ ಇತಿಹಾಸಕಾರೆಂದು ಪ್ರಸಿದ್ಧಿಗೊಂಡ ಶ್ರೀ ದೊಡ್ಡಭಾವೆಪ್ಪ ಚನ್ನಬಸಪ್ಪ ಮೂಗಿಯವರ ಮಗನಾಗಿದ್ದರು… ಕಾರಣಾಂತರದಿಂದ ಬೈಲ್ಹೊಂಗಲವನ್ನು ಬಿಟ್ಟು ಸೊಲ್ಲಾಪುರದಲ್ಲಿ ಕೆಲಸಕ್ಕಾಗಿ ಬರಬೇಕಾದ ಸಂದರ್ಭ ಬಂತು… ಸೊಲ್ಲಾಪುರದ ಗಡಿನಾಡಿನ ಮಣ್ಣಿನಲ್ಲಿ ಕನ್ನಡದ ಕಂಪು ಹರಡುತ್ತಿದ್ದ ದಿನಗಳಲ್ಲಿ, “ಜಯದೇವಿ ತಾಯಿ” ಎಂಬ ಹೆಸರೇ ಅನೇಕರ ಹೃದಯದಲ್ಲಿ ಗೌರವದ ಸ್ಥಾನ ಪಡೆದಿತ್ತು. ಕನ್ನಡ ನಾಡು, ನುಡಿ, ಸಂಸ್ಕೃತಿಯ ಮೇಲಿನ ಅವರ ಅಪಾರ ಪ್ರೀತಿ, ಸಮಾಜಸೇವೆಯಲ್ಲಿನ ಅವರ ತ್ಯಾಗ ಮತ್ತು ಸಂಕಷ್ಟಗಳ ಎದುರು ತಲೆಬಾಗದ ಧೈರ್ಯವು ಎಲ್ಲೆಡೆ ಹರಡಿತ್ತು.ಅಂತಹ ಸಮಯದಲ್ಲಿ, “ಗಡಿನಾಡಿನಲ್ಲಿ ಜಯದೇವಿ ತಾಯಿ ಎಂಬ ಕನ್ನಡತಿ ಇದ್ದಾರೆ. ನಿಷ್ಠಾವಂತೆ, ಧೈರ್ಯವಂತೆ, ಜನರ ಕಷ್ಟಗಳಿಗೆ ಸ್ಪಂದಿಸುವ ಅಪರೂಪದ ಮಹಿಳೆ” ಎಂಬ ಮಾತುಗಳನ್ನು ಕೇಳಿದ ಶಂಕರಣ್ಣನವರ ಮನಸ್ಸಿನಲ್ಲಿ ಅವರನ್ನು ಒಮ್ಮೆ ಭೇಟಿಯಾಗಬೇಕೆಂಬ ಹಂಬಲ ಮೂಡಿತು. ಶಂಕ್ರಣ್ಣ ಮತ್ತು ಲಲ್ಲೇಶ್ವರಿಯವರ ಮದುವೆ ಸಂದರ್ಭ ಒಂದು ದಿನ ಅವರು ಜಯದೇವಿ ತಾಯಿಯವರನ್ನು ಕಾಣಲು ಬಂದರು. ಮೊದಲ ಭೇಟಿಯಲ್ಲಿಯೇ ಅವರ ಸರಳತೆ, ವಿನಯತೆ, ದೃಢ ಸಂಕಲ್ಪ ಮತ್ತು ಕನ್ನಡದ ಮೇಲಿನ ಅಭಿಮಾನ ಕಂಡು ಮಂತ್ರ ಮುಗ್ಧರಾದರು.ತಾಯಿಯವರ ಮಾತುಗಳಲಿ ಬದುಕಿನ ಅನುಭವಗಳಿದ್ದವು. ಅವರ ನಗುವಿನಲ್ಲಿ  ಸೌಮ್ಯತೆ ಇತ್ತು ದೈವಿ ಖಳೆಯಿತು …..ಸಾವಿರ ನೋವುಗಳ ಗೆದ್ದ ಆತ್ಮವಿಶ್ವಾಸವಿತ್ತು.ತಾಯಿಯವರು ಸಮಾಜದ ಏಳಿಗೆಗಾಗಿ ನಡೆಸುತ್ತಿದ್ದ ಕಾರ್ಯಗಳು, ಬಡವರ ಮತ್ತು ನಿರ್ಗತಿಕರ ಪರವಾಗಿ ತೋರಿಸುತ್ತಿದ್ದ ಕಾಳಜಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮಾಡುತ್ತಿದ್ದ ಸೇವೆಯನ್ನು ಕಂಡು ಶಂಕರಣ್ಣನವರು ತುಂಬಾ ಸಂತೋಷಪಟ್ಟರು.“ಇಂತಹ ಮಹಿಳೆಯರು ಒಂದು ಕುಟುಂಬಕ್ಕೆ‌ ಅಷ್ಟೇ ಇಡೀ ಸಮಾಜದ ಆಸ್ತಿ” ಎಂದು ಅವರು ಮನಸಾರೆ ಹೊಗಳಿದರು ಹಾಗೂ ತಾಯಿಯವರ ಕೈಜೋಡಿಸಲು ಪ್ರಾರಂಭಿಸಿದರು.ಅಂದಿನ ಭೇಟಿ  ಕನ್ನಡ ಪ್ರೀತಿ, ಸಮಾಜಸೇವೆ ಮತ್ತು ಮಾನವೀಯತೆಯ ಎರಡು ಮಹಾನ ಮನಸ್ಸುಗಳ ಸಂಗಮವಾಗಿತ್ತು.ಗಡಿನಾಡಿನಲ್ಲಿ ಕನ್ನಡದ ದೀಪವನ್ನು ಆರದಂತೆ ಕಾಪಾಡುತ್ತಿರುವ ಜಯದೇವಿ ತಾಯಿಯವರ ಜೊತೆಯಾದರು…. ಕಿರಿಯ ಮಗಳು ಲಲ್ಲೇಶ್ವರಿತಾಯಿ ಮೂಗಿ(ಲೇಖಕಿ)  ಜಯದೇವಿ ತಾಯಿಯವರ ವ್ಯಕ್ತಿತ್ವವನ್ನು ಕಂಡ ಶಂಕರಣ್ಣನವರು, “ಧೈರ್ಯ, ನಿಷ್ಠೆ ಮತ್ತು ಭಕ್ತಿ ಎಲ್ಲವು ರೂಪ ತಾಳಿದರೆ ಅದು ಜಯದೇವಿ ತಾಯಿಯವರ ರೂಪವಾಗುತ್ತದೆ” ಎಂದು ಪ್ರಶಂಸಿಸಿದ್ದರೆ ಅಚ್ಚರಿಯೇನಿಲ್ಲ. ತಾಯಿಯಲಿ ಮೂಡುತ್ತಿದ್ದ ಆತಂಕವನ್ನು ಅರ್ಥಮಾಡಿಕೊಂಡು, ಅವರ ಮನಸ್ಸಿಗೆ ಧೈರ್ಯದ ಮಾತುಗಳನ್ನು ತುಂಬುತ್ತಿದ್ದರು. ತಾಯಿಯ ಕನಸುಗಳು ಕುಸಿಯದಂತೆ, ಅವರ ಸಂಕಲ್ಪಗಳು ಮಂಕಾಗದಂತೆ ಎಚ್ಚರಿಕೆಯಿಂದ ಕಾಪಾಡುತ್ತಿದ್ದರು.ಸಾಹಿತ್ಯ ಸೇವೆಯಲ್ಲಿ ಜಯದೇವಿ ತಾಯಿಯವರು ಬೆಳಗುತ್ತಿದ್ದ ದೀಪವಾದರೆ, ಆ ದೀಪಕ್ಕೆ ಎಣ್ಣೆ ಸುರಿದು ಬೆಳಕು ಕಡಿಮೆಯಾಗದಂತೆ ನೋಡಿಕೊಂಡವರು… ಶಂಕರಣ್ಣನವರು.  ಅವರ ಹಿರಿಯ ಮಗನಂತೆ ತಾಯಿಯ ಬರಹಗಳು, ವಿಚಾರಗಳು, ಸಮಾಜಮುಖಿ ಚಿಂತನೆಗಳು ಜನರಿಗೆ ತಲುಪಲು ಬೇಕಾದ ಎಲ್ಲ ಸಹಕಾರವನ್ನು ನೀಡುತ್ತಿದ್ದರು. ತಾಯಿಯ ಪ್ರತಿಯೊಂದು ಸಾಧನೆಯನ್ನು ತಮ್ಮದೇ ಸಾಧನೆಯೆಂದು ಭಾವಿಸಿ ಹೆಮ್ಮೆಪಡುತ್ತಿದ್ದರು.ಆಸ್ತಿಯ ಸಂರಕ್ಷಣೆಯ ವಿಷಯದಲ್ಲಿಯೂ ಅವರ ಪಾತ್ರ ಅಪಾರ. ಪೂರ್ವಜರು ಕಟ್ಟಿದ ಆಸ್ತಿಯನ್ನು  ಸಂಪತ್ತು……..ಅದು ಕುಟುಂಬದ ಗೌರವ ಮತ್ತು ಪರಂಪರೆಯ ಸಂಕೇತವೆಂದು ಭಾವಿಸಿ ಅತ್ಯಂತ ಪ್ರಾಮಾಣಿಕತೆಯಿಂದ ಕಾಪಾಡಿದರು. ಅನೇಕ ಸವಾಲುಗಳು ಎದುರಾದರೂ ಧೈರ್ಯ ಕಳೆದುಕೊಳ್ಳದೆ, ವಿವೇಕದಿಂದ ಎಲ್ಲವನ್ನು ನಿರ್ವಹಿಸಿದರು. ತಾಯಿಯ  ಮಾತಿಗೆ ಓಗೊಟ್ಟು, ಬಂದ ಸಂಕಟಗಳಿಗೆ ಪರಿಹಾರವಾಗಿ ನಿಂತ ಮಗನಾದರು.ಜಯದೇವಿ ತಾಯಿಯವರ ಹೆಜ್ಜೆ ಗುರುತುಗಳು ಸಮಾಜದಲ್ಲಿ ಉಳಿಯಬೇಕೆಂಬ ಉದ್ದೇಶದಿಂದ ತಮ್ಮ ಶಕ್ತಿ, ಸಮಯ ಮತ್ತು ಜೀವನವನ್ನೇ ಸಮರ್ಪಿಸಿದ ಅಪರೂಪದ ಪಡೆದ ಪುತ್ರರಾದರು ಡಾ. ಶಂಕರಣ್ಣ ಮೂಗಿಯವರು. ತಾಯಿಯ ಜೀವನದ ರಥ ಎರಡು ಚಕ್ರಗಳ ಮೇಲೆ ಸಾಗಿದ್ದರೆ, ಒಂದು ಚಕ್ರ ತಾಯಿಯ ಅಚಲ ಸಂಕಲ್ಪವಾಗಿದ್ದರೆ, ಮತ್ತೊಂದು ಚಕ್ರ ಅವರ ಪಡೆದ ಮಗನ ನಿಸ್ವಾರ್ಥ ಸಹಕಾರವಾಗಿತ್ತು.ತಾಯಿಯ ಯಶಸ್ಸಿನ ಹಿಂದೆ ಕಾಣದ ಶಕ್ತಿಯಾಗಿ, ಮಾತಿಲ್ಲದ ತ್ಯಾಗಿಯಾಗಿ, ಅಚಲ ಬೆಂಬಲವಾಗಿ ನಿಂತ ಅವರ ಪಾತ್ರ ಸದಾ ಸ್ಮರಣೀಯ.ಅವರಂತಹ ಅಪರೂಪದ ವ್ಯಕ್ತಿ ದೊರೆತದ್ದು ನನ್ನ ಪುಣ್ಯ ವೆಂದು,…..ತಾಯಿಯವರು ಹೇಳು ವರು…ಅಂತಹ ತಾಯಿಗೆ ಸೇವೆ ಸಲ್ಲಿಸುವುದು ನನ್ನ ಭಾಗ್ಯ ಎಂದು ಶಂಕರಣ್ಣನವರು ಹೇಳುವರು…..!!! ಶಂಕರಣ್ಣನವರ ಒಡನಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಅವರ ಸರಳತೆ, ಸಜ್ಜನಿಕೆ, ಹಿರಿಯರ ಮೇಲಿನ ಗೌರವ, ಸಮಾಜದ ಬಗ್ಗೆ ಇರುವ ಕಾಳಜಿ ಹಾಗೂ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳವ ಗುಣಗಳನ್ನು ಜಯದೇವಿ ತಾಯಿಯವರು ಹತ್ತಿರದಿಂದ ಗಮನಿಸುತ್ತಿದ್ದರು.ಅವರ ಮಾತಿನಲ್ಲಿ ವಿನಯವಿತ್ತು, ನಡವಳಿಕೆಯಲ್ಲಿ ಸಂಸ್ಕಾರವಿತ್ತು, ಹೃದಯದಲ್ಲಿ ಸಾಹಿತ್ಯ ಪ್ರೇಮವಿತು.. , ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿಪ್ರಖಂಡ ಪಾಂಡಿತ್ಯವನ್ನು ಹೊಂದಿದ್ದರು ಇಂತಹ ಗುಣವಂತ ಯುವಕನನ್ನು ಕಂಡ ತಾಯಿಯವರ ಮನಸ್ಸಿನಲ್ಲಿ ಒಂದು ಆಶಯ ಮೂಡಿತು.ಒಂದು ದಿನ ಪ್ರೀತಿಯಿಂದ ಶಂಕರಣ್ಣನವರನ್ನು ಕರೆದು, “ನನ್ನ ಕಿರಿಯ ಮಗಳು ಲಲ್ಲೇಶ್ವರಿಯನ್ನು ನಿಮಗೆ ಕೊಡಲು ನನ್ನ ಮನಸ್ಸಿದೆ. ನೀವು ನಮ್ಮ ಕುಟುಂಬದ ಮಗನಾಗಬೇಕು” ಎಂದು ಹೇಳಿದರು. ತಾಯಿಯವರ ಮಾತು ಕೇಳಿದ ಶಂಕರಣ್ಣನವರ ಮುಖದಲ್ಲಿ ಸಂತಸದ ಹೊಳಪು ಮೂಡಿತು. ಅದು ಅವರಿಗೆ ಸಿಕ್ಕ ಅತ್ಯಂತ ದೊಡ್ಡ ಆಶೀರ್ವಾದವಾಗಿತ್ತು. ತಾಯಿಯವರು ಈ ವಿಷಯವನ್ನು ಲಲ್ಲೇಶ್ವರಿ ತಾಯಿಯವರ ಮುಂದೆ ಹೇಳಿದಾಗ, ತಾಯಿಯ ಮಾತೇ ದೇವರ ಮಾತು ಎಂದು ಭಾವಿಸುತ್ತಿದ್ದ ಲಲ್ಲೇಶ್ವರಿ ತಾಯಿಯವರು ವಿನಮ್ರವಾಗಿ ತಲೆಬಾಗಿದರು.*ನುಡಿಸಿದಂತೆ ನುಡೆವೆನ| ನಡಿಸಿದಂತೆ ನಡೆವೆನನೀ ಇರಿಸಿದಂತೆ ಇರುವೆನ -ನನ್ನವ್ವನಿನ್ನ ಪಾದದ ಧೂಳಿಯಾಗಿ ಹಾರೈನ||* ಎನ್ನುತ ತಮ್ಮ ಜೀವನದ ನಿರ್ಧಾರವನ್ನು ತಾಯಿಯವರ ಕೈಯಲ್ಲಿ ಇಟ್ಟಿದ್ದ ಅವರು, “ನೀವು ಹೇಳಿದಂತೆ ಆಗಲಿ ತಾಯಿ” ಎಂದು ಗೌರವದಿಂದ ಒಪ್ಪಿಗೆ ಸೂಚಿಸಿದರು. ಶುಭ ಸುದ್ದಿ ಎರಡು ಕುಟುಂಬಗಳಲ್ಲೂ ಸಂತಸದ ಅಲೆಯನ್ನು ಹರಡಿಸಿತು. ನಂತರ ಬೈಲಹೊಂಗಲದಲ್ಲಿ ಮದುವೆಯ ಸಿದ್ಧತೆಗಳು ಆರಂಭವಾದವು. ಊರಿನ ಬೀದಿಗಳು ಹಬ್ಬದ ವಾತಾವರಣದಿಂದ ಕಂಗೊಳಿಸಿದವು. ಬಂಧು-ಬಳಗ, ಸ್ನೇಹಿತರು, ಶರಣರು, ಭಕ್ತರು ಎಲ್ಲರೂ ಮದುವೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದರು. ಮದುವೆಯ ದಿನ ಬೈಲಹೊಂಗಲವೇ ಒಂದು ಪುಣ್ಯಕ್ಷೇತ್ರದಂತೆ ಕಂಗೊಳಿಸುತ್ತಿತ್ತು. ನಾದಸ್ವರದ ಮಧುರ ಸ್ವರಗಳು ಗಾಳಿಯಲ್ಲಿ ತೇಲುತ್ತಿದ್ದವು. ಮಂಗಳ ವಾದ್ಯಗಳ ಘೋಷದ ನಡುವೆ ವಧುವರರು ಕಲ್ಯಾಣ ಮಂಟಪಕ್ಕೆ ಆಗಮಿಸಿದರು. ಲಲ್ಲೇಶ್ವರಿ ತಾಯಿಯವರು ಸಾಂಪ್ರದಾಯಿಕ ವಸ್ತ್ರಾಭರಣಗಳಲ್ಲಿ ಲಕ್ಷ್ಮೀದೇವಿಯಂತೆ ಕಂಗೊಳಿಸುತ್ತಿದ್ದರು. ಶಂಕರಣ್ಣನವರು ಗಂಭೀರತೆ ಮತ್ತು ವಿನಯದ ಪ್ರತಿರೂಪವಾಗಿ ಕಾಣುತ್ತಿದ್ದರು.ಹಿರಿಯರ ಆಶೀರ್ವಾದಗಳ ನಡುವೆ ಮಂಗಳಸೂತ್ರ ಧಾರಣೆ ನಡೆದ ಕ್ಷಣದಲ್ಲಿ ಎಲ್ಲರ ಕಣ್ಣಲ್ಲೂ ಸಂತಸದ  ಮಿನುಗಿತು. ಜಯದೇವಿ ತಾಯಿಯವರ ಹೃದಯವು ಆನಂದದಿಂದ ತುಂಬಿ ತುಳುಕಿತು. ತಮ್ಮ ಮಗಳ ಜೀವನ ಒಬ್ಬ ಸಜ್ಜನನ ಕೈಯಲ್ಲಿ ಸುರಕ್ಷಿತವಾಗಿದೆ ಎಂಬ ಸಮಾಧಾನ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು.ಆ ಮದುವೆ ಕೇವಲ ಇಬ್ಬರ ಹೃದಯಗಳ…ಎರಡು ಸಂಸ್ಕಾರವಂತ ಕುಟುಂಬಗಳ , ಆದರ್ಶಗಳ ಪವಿತ್ರ ಮಿಲನವಾಗಿತ್ತು. ಬೈಲಹೊಂಗಲದ ಜನರು ಇಂದಿಗೂ ಆ ಕಲ್ಯಾಣ ಮಹೋತ್ಸವವನ್ನು ನೆನಪಿಸಿಕೊಂಡು, “ಅದು ನಿಜವಾಗಿಯೂ ದೇವರ ಅನುಗ್ರಹದಿಂದ ನಡೆದ ದಿವ್ಯ ವಿವಾಹ” ಎಂದು ಭಾವಪೂರ್ಣವಾಗಿ ಹೇಳಿಕೊಳ್ಳುತ್ತಾರೆ. ಅತಿಥಿಗಳ ಆತಿಥ್ಯವೂ ಅಷ್ಟೇ ಅದ್ದೂರಿಯಾಗಿತ್ತು. ಬಂದ ಪ್ರತಿಯೊಬ್ಬರನ್ನೂ ಗೌರವದಿಂದ ಸ್ವಾಗತಿಸಿ, ಪ್ರೀತಿಯಿಂದ ಊಟೋಪಚಾರ ಮಾಡಲಾಯಿತು. ಮದುವೆ ಮುಗಿದ ನಂತರವೂ ಹಲವಾರು ದಿನಗಳ ಕಾಲ ಬೈಲಹೊಂಗಲದ ಜನರು ಆ ವಿವಾಹದ ಬಗ್ಗೆ ಮಾತನಾಡುತ್ತಲೇ ಇದ್ದರು.“ಮದುವೆ ಅಂದರೆ ಹೀಗೆ ಇರಬೇಕು! ನಾವು ಇಂತಹ ವಿಜೃಂಭಣೆಯ ಕಲ್ಯಾಣವನ್ನು ಜೀವನದಲ್ಲಿ ನೋಡಿಲ್ಲ!” ಎಂದು ಜನರು ಹೇಳಿಕೊಳ್ಳುತ್ತಿದ್ದರು. ಆ ದಿನವನ್ನು ಕಂಡವರು ಇಂದಿಗೂ ನೆನಪಿಸಿಕೊಂಡಾಗ ಅವರ ಕಣ್ಮುಂದೆ ಹೂವಿನ ತೋರಣಗಳಿಂದ ಸಿಂಗರಿಸಲ್ಪಟ್ಟ ಬೈಲಹೊಂಗಲದ ಓಣಿ ಓಣಿಯ ತುಂಬಾ ಕಟ್ಟಿದ ಹಂದರಗಳ ನೆನಪು ಬಾರದೇ ಇರದು.. ಸತಿಪತಿಗಳ ಪವಿತ್ರ ಬಂಧವನ್ನು  ಗೌರವಿಸಿ,   ಪ್ರೀತಿ, ಕಾಳಜಿ ಮತ್ತು ಸೇವಾಭಾವದಿಂದ ನಡೆದುಕೊಂಡರು. ಸುಖದಲ್ಲೂ ದುಃಖದಲ್ಲೂ ಅವರ ನೆರಳಾಗಿ ನಿಂತು, ಪ್ರತಿಯೊಂದು ಹೆಜ್ಜೆಯಲ್ಲಿಯೂ ಜೊತೆಗಿದ್ದು, ಆದರ್ಶ ದಂಪತಿಗಳಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಿದರು.ಅವರಿಬ್ಬರ ಜೀವನವು ಪರಸ್ಪರ ತ್ಯಾಗ ಮತ್ತು ಧರ್ಮನಿಷ್ಠೆಯ ಪ್ರತೀಕವಾಗಿತ್ತು.ಜೀವನದ ಎಲ್ಲಾ ಏಳುಬೀಳುಗಳನ್ನು ಕೈಹಿಡಿದು ದಾಟಿದರು.ಅತ್ಯಂತ ವೈಶಿಷ್ಟ ಪೂರ್ಣ ಜೀವನವು ಇವರದಾಗಿತ್ತುಶಂಕ್ರಣ್ಣ ಮೂಗಿ ಹಾಗೂ ಲ‌ಲ್ಲೇಶ್ವರಿ ತಾಯಿಯವರು ಜೀವನದ ಒಂದು ಹಂತದಲ್ಲಿ ಸಂಸಾರದ ಬಂಧನಗಳನ್ನು ಮೀರಿ ಸನ್ಯಾಸತ್ವವನ್ನು ಸ್ವೀಕರಿಸಿದರು. ಆ ಬಳಿಕ ಅವರು ದಾಂಪತ್ಯ ಜೀವನದ ಭಾವನೆಗಿಂತಲೂ ಉನ್ನತವಾದ ಆಧ್ಯಾತ್ಮಿಕ ಸಂಬಂಧವನ್ನು ಅಳವಡಿಸಿಕೊಂಡರು. ಒಬ್ಬರನ್ನೊಬ್ಬರು  ತಂದೆ-ತಾಯಿಯರಂತೆ ಗೌರವದಿಂದ ಕಾಣುತ್ತಿದ್ದರು. ಲಲ್ಲೇಶ್ವರಿ ತಾಯಿಯವರು ಕೈಯಲ್ಲಿ ರುದ್ರಾಕ್ಷಿ ಕಂಕಣವನ್ನು ಕಟ್ಟಿಕೊಂಡರು.ಸಂಬಂಧದಲ್ಲಿ ಮೋಹ ಮರೆತು ಮಮತೆ, ನಿಸ್ವಾರ್ಥ ಸೇವೆಯಲಿ ತೊಡಗಿದರು. ಪರಸ್ಪರರ ಯೋಗಕ್ಷೇಮವನ್ನು ಕಾಪಾಡುತ್ತ, ತಾಯಿ ಸೇವೆಗಾಗಿ ತಮ್ಮ ಬದುಕನ್ನು ಸಮರ್ಪಿಸಿದರು.  ಅವರ ಪ್ರತಿಯೊಂದು ಹೆಜ್ಜೆಯೂ ಶರಣ ತತ್ವದ ಪ್ರತಿಬಿಂಬವಾಗಿತ್ತು.ಸನ್ಯಾಸ ಮಾರ್ಗದಲ್ಲಿ ನಡೆದು, ಭಕ್ತಿ, ಜ್ಞಾನ ಮತ್ತು ಸೇವೆಯ ಮೂಲಕ ತಮ್ಮ ಅಂತರಂಗವನ್ನು ಶುದ್ಧಗೊಳಿಸಿಕೊಂಡರು. ಅಂತಿಮವಾಗಿ ನಿರ್ವಾಣದತ್ತ ಪಯಣ ಬೆಳೆಸಿದರು. ಅವರ ಜೀವನವು ಸಂಸಾರಿಕ ಮಿತಿಯನ್ನು ದಾಟಿ, ಆತ್ಮಮದ ಶ್ರೇಷ್ಠ ಮಟ್ಟವನ್ನು ತಲುಪಿದ ಉದಾತ್ತ ಉದಾಹರಣೆಯಾಗಿದೆ. ತಾಯಿಯನ್ನೇ  ಗುರುವಾಗಿ ಸ್ವೀಕರಿಸಿ  ಶರಣರ ವೈರಾಗ್ಯವನ್ನು ಕಂಡ ಮಹಾತ್ಮರಾದರು” ಎಂದು ಭಕ್ತಿಭಾವದಿಂದ ಸ್ಮರಿಸ ಬಹುದಾಗಿದೆ.ಅವರ ಜೀವನಗಾಥೆ ಇಂದಿಗೂ ಸೇವೆ, ತ್ಯಾಗ ಮತ್ತು ಆಧ್ಯಾತ್ಮಿಕ ಸಾಧನೆಯ ಆದರ್ಶವಾಗಿ ಉಳಿದಿದೆ. *ಸತಿಪತಿಯ ಭಾವ| ತೊರೆದು ನಿರತಸತೀಶರಣ ಲಿಂಗಪತಿ ಬಾವದಿ- ರಮಿಸಿಭಕ್ತಿ ಭವನದ ವಾಸವಾದೆವು|| * ಎನ್ನುತ ನಂತರ ಬಸವಕಲ್ಯಾಣದಲ್ಲಿ ಜಯದೇವಿ ತಾಯಿಯವರೊಂದಿಗೆ ಶರಣರು ನಡೆದಾಡಿದ ಭೂಮಿಯಲ್ಲಿ ಅವರು ವಾಸವಿದ್ದು, ತಮ್ಮ ಆಧ್ಯಾತ್ಮಿಕ ಮತ್ತು ಸಾಹಿತ್ಯ ಸೇವೆಯನ್ನು ಮುಂದುವರಿಸಿದರು. *ಕರೆದ್ಧ್ಯೊದರು ಕೈಹಿಡಿದು| ಅರಮನೆ ಆಧ್ಯಾತ್ಮಚಿರ ಪರ ಪದವೀಯ ಅರಿತು ನೀಡಿ-ಪತಿದೇವ ಶರಣರ ನಿಜ ನಿವಾಸಕ್ಕೆ ಕರೆದರು ||* ಗಂಡ ಹೆಂಡಂದಿರು ಇಬ್ಬರು ಸನ್ಯಾಸತ್ವವನ್ನು ಪಡೆದು ಬಸವಭೂಮಿಯಲ್ಲಿ ನೆಲೆಸಿದರು ಸತಿಪತಿಗಳ ಜೀವನದ ಕೊನೆಯ ಅಧ್ಯಾಯವೂ ಅವರ ಬದುಕಿನಂತೆಯೇ ಸೇವೆ, ಭಕ್ತಿ ಮತ್ತು ತ್ಯಾಗದ ಸುಗಂಧದಿಂದ ತುಂಬಿಕೊಂಡಿತ್ತು. ಕಿರಿ ಮಗಳು ಮತ್ತು ಅಳಿಯನೊಂದಿಗೆ ಜಯದೇವಿ ತಾಯಿಯವರು ಅನೇಕ ವರ್ಷಗಳ ಕಾಲ ಸಮಾಜಸೇವೆ, ಶರಣ ಸಂಸ್ಕೃತಿಯ ಪ್ರಚಾರ ಮತ್ತು ಮಾನವೀಯ ಮೌಲ್ಯಗಳ ಬಿತ್ತನೆ ಮಾಡುತ್ತಾ ಬದುಕಿದರು.ಬಸವಣ್ಣನವರ ಪವಿತ್ರ ಭೂಮಿಯಾದ ಬಸವಕಲ್ಯಾಣದಲ್ಲಿ ಈ ಮಹನೀಯರು ತಮ್ಮ ಉಸಿರಿನವರೆಗೂ ಧರ್ಮದ ದಾರಿಯಲ್ಲಿ ನಡೆದರು. ಕಾಲಚಕ್ರದ ನಿಯಮದಂತೆ ದೇಹವು ಮಣ್ಣಿನಲ್ಲಿ ಲೀನವಾದರೂ, ಅವರು ಬಿತ್ತಿದ ಆದರ್ಶಗಳು ಇಂದಿಗೂ ಜೀವಂತವಾಗಿವೆ. ಬಸವಣ್ಣನವರ ಪಾವನ ಮಣ್ಣಿನಲ್ಲಿ ಈ ಮೂವರು ಮಹಾತ್ಮರು ಮಣ್ಣಲ್ಲಿ ಮಣ್ಣಾಗಿ, ಶಿವನಲ್ಲಿ ಶಿವವಾಗಿ ಲೀನರಾದರು. ಬಸವಕಲ್ಯಾಣದಲ್ಲಿ ಅವರ ಸಮಾಧಿಗಳನ್ನು ಕಾಣಬಹುದಾಗಿದೆ.ಬಸವಕಲ್ಯಾಣದಲ್ಲಿ ಅವರ ಜೀವನದ ನೆನಪುಗಳನ್ನು ಸಾರುವ ಮೂರು ಸಮಾಧಿಗಳು ಭಕ್ತರ ಕಣ್ಮನ ಸೆಳೆಯುತ್ತವೆ. ಆ ಸಮಾಧಿಗಳು  ಅವು ಅವರ ತ್ಯಾಗ, ಸೇವೆ, ಶರಣ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಜೀವಂತ ಸಾಕ್ಷಿಗಳಾಗಿವೆ.ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರ

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣರ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಶಿವಶರಣ ಮಾದಾರ ಚೆನ್ನಯ್ಯನವರು ಹನ್ನೆರಡನೆಯ ಶತಮಾನದಲ್ಲಿ ನಡೆದ ಅಭೂತಪೂರ್ವ ಕ್ರಾಂತಿ ವರ್ಗ ವರ್ಣ ಲಿಂಗ ಬೇಧ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಜಗತ್ತಿನ ಸರ್ವ ಶ್ರೇಷ್ಠ ಕ್ರಾಂತಿಯಾಗಿದೆ. ಬಸವಣ್ಣನವರ ನೇತೃತ್ವದಲ್ಲಿ ನಡೆದ ಈ ಆಂದೋಲನದಲ್ಲಿ ಸಮಾಜದ ಅತ್ಯಂತ ಕಟ್ಟ ಕಡೆಯ ಮಾದಿಗ ಸಮುದಾಯದ ಚೆನ್ನಯ್ಯನು ಪಾಲ್ಗೊಂಡಿದ್ದನು. ಶಿವಶರಣ ಮಾದಾರ ಚೆನ್ನಯ್ಯನವರು 12ನೆಯ ಶತಮಾನದ ಅತ್ಯಂತ ಪ್ರಮುಖ ಶಿವಶರಣ, ಕಾಯಕಯೋಗಿ ಹಾಗೂ ಕನ್ನಡ ಸಾಹಿತ್ಯದ ಆದ್ಯ ವಚನಕಾರರಾಗಿದ್ದಾರೆ. ಭಕ್ತಿ ಮತ್ತು ಕಾಯಕ ನಿಷ್ಠೆಗೆ ಮೇರು ಶಿಖರವಾಗಿದ್ದ ಇವರನ್ನು ಜಗದ್ಗುರು ಬಸವಣ್ಣನವರೇ ತಮ್ಮ ವಚನಗಳಲ್ಲಿ ಅತ್ಯಂತ ಪೂಜ್ಯಭಾವದಿಂದ ಕೊಂಡಾಡಿದ್ದಾರೆ.  ಮಾದಾರ ಚೆನ್ನಯ್ಯನವರ ಜೀವನ ಚರಿತ್ರೆಯ ಸಮಗ್ರ ವಿವರ ಇಲ್ಲಿದೆ: ಪರಿಚಯ ಮತ್ತು ಹಿನ್ನೆಲೆ ಕಲ್ಯಾಣಕ್ಕೆ ಬಂದ ಮೇಲೆ ಮಾದಾರ ಚೆನ್ನಯ್ಯ ಎಲ್ಲಾ ಶರಣರಿಗೂ ಅಂಬಲಿ ಮಾಡಿ ಕೊಡುತ್ತಿದ್ದರು. ಭಕ್ತಿ ಮತ್ತು ಶಿವನಿಗೆ ಅಂಬಲಿ ಉಣಿಸಿದ ಪ್ರಸಂಗ ಕಾಲ್ಪನಿಕ ಕಥೆ  ಚೆನ್ನಯ್ಯನವರು ಕಾಡಿಗೆ ಹೋಗಿ ಹುಲ್ಲು ಕೊಯ್ಯುವ ಕಾಯಕದಲ್ಲಿ ತೊಡಗಿದ್ದಾಗಲೂ ಇಷ್ಟಲಿಂಗ ಧ್ಯಾನದಲ್ಲಿ ಮಗ್ನರಾಗಿರುತ್ತಿದ್ದರು. ಅವರ ನಿಷ್ಕಲ್ಮಶ ಭಕ್ತಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗಿ, ಚೆನ್ನಯ್ಯನ ಪತ್ನಿ ತಯಾರಿಸಿದ ಅಂಬಲಿ (ರಾಗಿ ಕೂಳು) ಯನ್ನು ಪ್ರತಿದಿನ ಬಂದು ಸ್ವೀಕರಿಸುತ್ತಿದ್ದನು ಎನ್ನುವ ಪುರಾಣ  ಕಾವ್ಯಗಳು ವರ್ಣಿಸುತ್ತವೆ. ಆದರೆ ಇವುಗಳನ್ನು ತಾತ್ವಿಕ ಚಿಂತನೆಗೆ ಚೆನ್ನಯ್ಯನ ಬದ್ಧತೆ ಸೈದ್ಧಾಂತಿಕ ಸ್ಪಷ್ಟತೆ ನಿಲುವುಗಳ ಬಗ್ಗೆ ಆಶಯ ಎಂದು ಪರಿಗಣಿಸ ಬೇಕು. ಒಮ್ಮೆ ಚೋಳರಾಜನು ತಾನು ಸಿದ್ಧಪಡಿಸಿದ ಮೃಷ್ಟಾನ್ನ ಭೋಜನವನ್ನು ಶಿವನು ಸ್ವೀಕರಿಸದಿದ್ದಾಗ, ಶಿವನಿಗೆ ಕಾರಣ ಕೇಳಿದನು. ಆಗ ಶಿವನು, “ನಾನು ಪ್ರತಿದಿನ ನನ್ನ ಭಕ್ತ ಚೆನ್ನಯ್ಯನ ಅಂಬಲಿಯನ್ನು ಸವಿಯುತ್ತಿದ್ದೇನೆ, ನಿನ್ನ ರಾಜ ವೈಭವದ ಊಟಕ್ಕಿಂತ ಅವನ ಪ್ರೀತಿಯ ಕೂಳೇ ನನಗೆ ಶ್ರೇಷ್ಠ” ಎಂದು ಹೇಳಿದನು. ಈ ಮೂಲಕ ಶಿವನು ಜಗತ್ತಿಗೆ ಚೆನ್ನಯ್ಯನ ಗುಪ್ತ ಭಕ್ತಿಯನ್ನು ಪ್ರಕಟಪಡಿಸಿದನು ಎಂಬ ಪವಾಡ ಕಥೆಗಳಿವೆ. ಕಲ್ಯಾಣ ಕ್ರಾಂತಿ ಮತ್ತು ಬಸವಣ್ಣನವರ ಒಡನಾಟ ಬಸವಣ್ಣನವರ ಸಾಮಾಜಿಕ ಕ್ರಾಂತಿ ಮತ್ತು ಶರಣರ ಅನುಭವ ಮಂಟಪದ ಚಿಂತನೆಗಳಿಂದ ಆಕರ್ಷಿತರಾದ ಮಾದಾರ ಚೆನ್ನಯ್ಯನವರು ಕಲ್ಯಾಣಕ್ಕೆ (ಇಂದಿನ ಬಸವಕಲ್ಯಾಣ) ಬಂದರು. ಅಲ್ಲಿ ತಮ್ಮ ಮೂಲ ಕಾಯಕವಾದ ಪಾದರಕ್ಷೆ (ಚರ್ಮಗಾರಿಕೆ) ತಯಾರಿಕೆಯನ್ನು ಮುಂದುವರಿಸಿದರು. ಬಸವಣ್ಣನವರು ತಮ್ಮ ವಚನಗಳಲ್ಲಿ “ಎನ್ನ ದೆಸೆಯಿಂದ ಮಾದಾರ ಚೆನ್ನಯ್ಯನ ಮನೆಯು …” ಎಂದು ಹೇಳಿಕೊಳ್ಳುತ್ತಾ, ಚೆನ್ನಯ್ಯನವರನ್ನು ತಮಗಿಂತ ಶ್ರೇಷ್ಠ ಭಕ್ತರೆಂದು ಗೌರವಿಸುತ್ತಿದ್ದರು. ಮಾದಾರ ಚೆನ್ನಯ್ಯನ ಮನೆಯಲ್ಲಿ ಉಂಡ ಕಾರಣ ವೇದ ನಡುನಡುಗಿತ್ತು ಎಂದು ಹೇಳಿದ್ದಾರೆ ಬಸವಣ್ಣನವರು. ವಚನ ಸಾಹಿತ್ಯ ಮತ್ತು ವೈಚಾರಿಕತೆ ಸಮಾಜದ ಅಸಮಾನತೆ ಹಾಗೂ ಮೌಢ್ಯತೆಯ ವಿರುದ್ಧ ಧ್ವನಿ ಎತ್ತಿದ ಮಾದಾರ ಚೆನ್ನಯ್ಯನವರ ಪ್ರಮುಖ ವಚನಗಳು ಮತ್ತು ಅವುಗಳ ಭಾವಾರ್ಥಗಳು ಇಲ್ಲಿವೆ: 1. ನಡೆ ಮತ್ತು ನುಡಿಯ ಪ್ರಾಮುಖ್ಯತೆ (ಆಚಾರವೇ ಕುಲ) “ಆಚಾರವೆ ಕುಲ, ಅನಾಚಾರವೆ ಹೊಲೆ” ಎಂಬ ವಚನದಲ್ಲಿ, ಕೇವಲ ಒಳ್ಳೆಯ ಮಾತುಗಳನ್ನಾಡಿ ಕೆಟ್ಟ ನಡವಳಿಕೆ ಹೊಂದಿದ್ದರೆ ಅದುವೇ ‘ಹೊಲೆ’ (ಮೈಲಿಗೆ) ಎಂದು ಚೆನ್ನಯ್ಯನವರು ಸ್ಪಷ್ಟಪಡಿಸುತ್ತಾರೆ. ಕಾಯಕನಿಷ್ಠೆಯು ನಡೆ-ನುಡಿಯ ಸಮಾನತೆಯಲ್ಲಿದೆ ಎಂದು ಪ್ರತಿಪಾದಿಸಿ, ಆಚಾರವೇ ನಿಜವಾದ ಶ್ರೇಷ್ಠ ಕುಲ ಎಂದು ಒತ್ತಿ ಹೇಳುತ್ತಾರೆ.  2. ಸಾಮಾಜಿಕ ಸಮಾನತೆ ಮತ್ತು ಜಾತಿ ಪದ್ಧತಿಯ ಖಂಡನೆ ಸಮಾಜದಲ್ಲಿನ ಹದಿನೆಂಟು ಜಾತಿಗಳ ಭೇದವನ್ನು ತಳ್ಳಿಹಾಕುವ ಅವರು, ಮನುಷ್ಯರ ನಡುವಿನ ಅಸಮಾನತೆಯನ್ನು ಖಂಡಿಸುತ್ತಾರೆ. ಹುಟ್ಟಿನಿಂದ ಯಾರೂ ಕೀಳು ಅಥವಾ ಮೇಲಲ್ಲ, ಕಾಯಕದ ಆಧಾರದ ಮೇಲೆ ಕೇವಲ ಕೆಲಸದ ವಿಂಗಡಣೆಯಷ್ಟೇ ನಡೆದಿದೆ. ಸತ್ಯ ಮತ್ತು ಬ್ರಹ್ಮವನ್ನು ಅರಿತವನೇ ನಿಜವಾದ ಬ್ರಾಹ್ಮಣ ಎಂಬ ವಿಚಾರವನ್ನು ಇವರು ವಚನಗಳಲ್ಲಿ ಮಂಡಿಸಿದ್ದಾರೆ.  3. ಬಾಹ್ಯ ಪೂಜೆ ಮತ್ತು ಆತ್ಮಜ್ಞಾನ ದೇಹವಿರುವ ತನಕ ಕರ್ಮ-ಪೂಜೆಗಳು ಮುಖ್ಯವಾದರೂ, ನಿಜವಾದ ಮುಕ್ತಿ ಸಿಗುವುದು ಬಾಹ್ಯ ಕ್ರಿಯೆಗಳಿಂದಲೋ ಅಥವಾ ಆತ್ಮಜ್ಞಾನದಿಂದಲೋ ಎಂಬ ಜಿಜ್ಞಾಸೆಯನ್ನು ವಚನಗಳಲ್ಲಿ ವ್ಯಕ್ತಪಡಿಸುತ್ತಾರೆ. ಕಾಯದ ಕರ್ಮಕ್ಕಿಂತ ಆತ್ಮಜ್ಞಾನವೇ ಮುಖ್ಯ ಎಂಬುದನ್ನು ಒತ್ತಿಹೇಳಿ, ಭಕ್ತಿಯ ಮಾರ್ಗವನ್ನು ಪ್ರಾರ್ಥಿಸುತ್ತಾರೆ.  ವಚನಗಳ ವೈಶಿಷ್ಟ್ಯ: ಇವರ ಸಮಾಧಿ ಚಾಮರಾಜನಗರ ಜಿಲ್ಲೆಯ ತಮಿಳುನಾಡಿಗೆ ಅಂಟಿಕೊಂಡ ಕುರುಬಗಟ್ಟಿಯಲ್ಲಿ ಕಾಣ ಬಹುದು ಕರ್ನಾಟಕ ಸರ್ಕಾರವು ಇವರ ಕಾಯಕ ನಿಷ್ಠೆ ಮತ್ತು ಸಮಾಜ ಸುಧಾರಣೆಯ ನೆನಪಿಗಾಗಿ ಪ್ರತಿ ವರ್ಷ ಮಾದಾರ ಚೆನ್ನಯ್ಯ ಜಯಂತಿಯನ್ನು ಆಚರಿಸುತ್ತದೆ. ______________________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ 

Read Post »

ಅಂಕಣ ಸಂಗಾತಿ, ಗಾದೆಗಳ ಗಣಿ

ಅಂಕಣ ಸಂಗಾತಿ ಗಾದೆಗಳ ಗಣಿ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ ಮನುಷ್ಯನಿಗೆ ಹೊನ್ನಿನ ರಾಶಿ ಸಿಕ್ಕರೂ ತೃಪ್ತಿಯಾಗುವುದಿಲ್ಲ.ಭವ ಬಂಧನದ ಆಸೆ-ಆಕಾಂಕ್ಷೆಗಳು ಪೆಡಂಭೂತವಾಗಿ ಕಾಡುತ್ತದೆ ಅವನಿಗೆ.ಪ್ರತಿಷ್ಠೆ,ತೋರಿಕೆಯ ಆಸೆ ನುಸುಳುತ್ತದೆ ಅವನ ಮನದೊಳಗೆ.ನೆಮ್ಮದಿಯು ತನ್ನಲ್ಲಿದ್ದರೂ ಅತೀ ನೆಮ್ಮದಿ ಪಡೆಯಲು ಅತ್ಯಂತ ಶ್ರೀಮಂತರ ಸಂಬಂಧಗಳನ್ನು ಬೆಳೆಸಲು ಮುಂದಾಗುತ್ತಾರೆ.ಅವರು ಒಳ್ಳೆಯವರೊ….ಕೆಟ್ಟವರೊ..‌ಮನುಷ್ಯತ್ವದಲ್ಲಿದ್ದಾರೊ….ಅಥವಾ ಅಮಾನುಷತ್ವದಲ್ಲಿ ಮುಳುಗಿದ್ದಾರೊ….ಯಾವುದೂ ಅರಿಯದೆ ಕೇವಲ ಅವರ ಸಿರಿತನದ ಮನೆತನವಿದ್ದರೆ ಸಾಕು,ಸಂಬಂಧ ಬೆಳೆಸಿಬಿಡುತ್ತಾರೆ.ಬಿಳಿಯಾಗಿ ಕಾಣುವುದೆಲ್ಲಾ ಹಾಲಲ್ಲ.ವೇಗವಾಗಿ ಓಡುವ ಮನಸ್ಸಿಗೆ ಏನೆಂದೂ ಕಾಣುವುದಿಲ್ಲ.ಈಗಿನ ಕಾಲದಲ್ಲಿ ಶ್ರೀಮಂತರ ಮನೆತನಗಳಲ್ಲಿ ನಯ  ವಿನಯ ಮರೆಯಾಗಿದ್ದು  ಮದ ಮತ್ಸರ,ಕೋಪ ತಾಪಗಳು ಮತ್ತು ವಿಶ್ವಾಸ ದ್ರೋಹಗಳೆ ಹಲವು ಬಗೆಯಾಗಿರುತ್ತವೆ.ನಾವುಗಳು ನಾವೇ ಆಗಿರಬೇಕು.ಯಾಕೆಂದರೆ ಜೀವನದಲ್ಲಿ ಅನೇಕ ರೀತಿಯ ಆಯ್ಕೆಗಳಿವೆ.ಅದೆಷ್ಟೋ ಆಯ್ಕೆಗಳನ್ನು ಪಡೆಯಲು ಪ್ರಯತ್ನ ಪಡುತ್ತಲೆ ಇರುತ್ತೇವೆ.ಸಣ್ಣ ಪುಟ್ಟ ಸಂತೋಷಗಳನ್ನು ಪೂರೈಸಿಕೊಳ್ಳಲು,ಸ್ವಾರ್ಥದಿಂದ ಆದರೂ ಸಾಧಿಸಿಕೊಳ್ಳುತ್ತೇವೆ.ನಾವೇ ತೋಡಿದ ತೆಗ್ಗಿನಲಿ ಒಂದಾನೊಂದು ದಿನ ಬೀಳುತ್ತೇವೆ.ಇದು ಸತ್ಯ.ಆತುರವೆಂದರೆ ಒಂದಲ್ಲ ಎರಡಲ್ಲ.,ಹತ್ತಾರು ಕೆಲಸ ಕಾರ್ಯಗಳ ಆತುರ.ತಾಳ್ಮೆ ಎಂಬುದು  ಬಹು ದೂರ.ಮಾತಿನ ಆತುರ.,ದುಡುಕುವ ಆತುರ.,ಹತ್ತಾರು ವಿಷಯಗಳ ಆತುರ.,ಪ್ರತಿ ಕೆಲಸಕ್ಕೂ ಆತುರವಾದರೆ ಹಿತವೆನ್ನುವ ಪಲಿತಾಂಶದಲ್ಲಿ ಫೇಲು ಆಗಬಹುದು.ನಮ್ಮೆದುರಿಗೆ ಇರುವವರನ್ನು ಹಿಂದಿಕ್ಕಿ ಓಡಬೇಕು ಎನ್ನುವ ಆತುರ.ಈ ವಿಷಯದಲ್ಲಿ ನಾವುಗಳು ತುಸು ಯೋಚಿಸುವುದಿಲ್ಲ.ನಮಗೆ ನಮ್ಮ ಕೆಲಸವೇ ಬಹು ಮುಖ್ಯ.ಇನ್ನೊಬ್ಬರ ಕಷ್ಟ ಕಾರ್ಪಣ್ಯಗಳಿಂದ ನಮಗೆ ಆಗುವುದಾದರೂ ಏನಿದೆ? ಅನ್ನುವ ಸ್ವಭಾವವನ್ನು ನಾವುಗಳು ಹೊಂದಿರುತ್ತೇವೆ.ಇದೇ ಕಾರಣಕ್ಕೆ ಸೂಕ್ಷ್ಮವನ್ನು ಅರಿಯದೆ ಹೋಗುತ್ತೇವೆ.ಈ ಮಾತಿನ ಅರಿವು ಇಷ್ಟೆ. ಪ್ರಭಾವಿ ಅಥವಾ ಶ್ರೀಮಂತ ವ್ಯಕ್ತಿಗಳ ಜೊತೆ ನಿಕಟ ಸಂಬಂಧವಿದ್ದರೂ, ಅದರಿಂದ ನಮಗೆ ಯಾವುದೇ ಪ್ರಯೋಜನ ಸಿಗದ ಪರಿಸ್ಥಿತಿಯನ್ನು ವಿವರಿಸುತ್ತದೆ.  ಅಳತೆಗೆ ಸಿಗದ ನೀರನ್ನು ಹೊಂದಿರುವ ಸಮುದ್ರದ ಜೊತೆ ನಮಗೆ ಸ್ನೇಹವಿದ್ದರೂ, ನಮಗೆ ಬೇಕಾದ ಒಂದು ಸಣ್ಣ ಹಿಡಿ ಉಪ್ಪು ಸಿಗದೇ ಹೋದರೆ ಆ ಸ್ನೇಹದಿಂದ ಏನು ತಾನೇ ಪ್ರಯೋಜನ?​ ಅಧಿಕಾರ ಮತ್ತು ಪ್ರಭಾವದ ನೆರಳಿನಡಿಯಲ್ಲಿ​ನಮಗೆ ಸಮಾಜದಲ್ಲಿ ದೊಡ್ಡ ಸ್ಥಾನಮಾನ ಹೊಂದಿರುವವರು ಅಥವಾ ರಾಜಕಾರಣಿಗಳು ಪರಿಚಯವಿರಬಹುದು. ಲೋಕದ ದೃಷ್ಟಿಯಲ್ಲಿ ನಾವು ಅವರ “ಆಪ್ತರು” ಎನಿಸಿಕೊಳ್ಳಬೇಕು.ಅವರ ಜೊತೆ ನಿಕಟ ಸಂಪರ್ಕದಲ್ಲಿರಬೇಕು  ಎಂದು ಸದಾ ಬಯಸುತ್ತೇವೆ. ಆದರೆ ನಮಗೆ ಒಂದು ಸಣ್ಣ ವೈಯಕ್ತಿಕ ಕೆಲಸ ಅಥವಾ ಸಹಾಯದ ಅವಶ್ಯಕತೆ ಬಂದಾಗ, ಆ ಪ್ರಭಾವಿ ವ್ಯಕ್ತಿಗಳು ನಮಗೆ ನೆರವಾಗದಿದ್ದರೆ ಅದು “ಸಮುದ್ರದ ನೆಂಟಸ್ತಿಕೆಯಂತೆಯೇ  ಸರಿ.​ವ್ಯರ್ಥ ಪ್ರಯತ್ನ ,ವ್ಯರ್ಥ ಹೆಮ್ಮೆಪಡುವುದು ಕ್ಷೀಣಿಸುತ್ತಿದೆ .ದೊಡ್ಡವರ ಪರಿಚಯವಿದೆ ಎಂದು ಜಗತ್ತಿಗೆ ಹೇಳಿಕೊಳ್ಳುವುದು ಸುಲಭ, ಆದರೆ ಆ ಸ್ನೇಹವು  ಫಲ ನೀಡದಿದ್ದಾಗ ಅದು ಕೇವಲ ಒಂದು ಬೃಹದಾಕಾರದ  ಬಲೂನಿನಂತೆ ಎಂದೆನಿಸಿ ಬಿಡುತ್ತದೆ.​ನಿರೀಕ್ಷೆ ಮತ್ತು ವಾಸ್ತವವು ಸುಳ್ಳಾಗಿ ಟುಸ್ ಎನ್ನುವ ಮುಕ್ಭತ್ತಿಯಾಗಿಡುವುದು . ಸಮುದ್ರದ ಅಲೆಗಳು ದಡಕ್ಕೆ ಬಂದು,ಬಡಿದು ಹಿಂದಕ್ಕೆ ಹೋಗುವುದು ನೋಡಲು  ಬಹು ಸುಂದರ, ಆದರೆ ಆ ಅಲೆಗಳು ಮನೆಯ ಬಾಯಾರಿಕೆಯನ್ನು ತಣಿಸಲಾರವು. ​ ಶ್ರೀಮಂತಿಕೆ ಮತ್ತು ಬಡತನದ ನಡುವಿನ ವ್ಯತ್ಯಾಸವು ಬಹಳ ಆಳವೂ,ಅನಂತವೂ ಆಗಿದೆ.​ಶ್ರೀಮಂತ ಕುಟುಂಬಗಳಲ್ಲಿ ಅಥವಾ ದೊಡ್ಡ ಉದ್ಯಮಿಗಳ ಅಡಿಯಲ್ಲಿ ಕೆಲಸ ಮಾಡುವ ಅನೇಕರನ್ನು ನಾವು ನೋಡುತ್ತೇವೆ. ಹೊರಗಿನ ಜನರಿಗೆ ಅವರು ಬಹಳ ಅದೃಷ್ಟವಂತರು ಎಂದು ಅನಿಸುತ್ತದೆ. ಆದರೆ ಆ ಶ್ರೀಮಂತರ ಮನೆಯಲ್ಲೇ ಕೆಲಸ ಮಾಡುವವರಿಗೆ  ಸರಿಯಾದ ಸಮಯಕ್ಕೆ  ಸಂಬಳವಿಲ್ಲದೆ ಅಥವಾ ಜೀವನದ ಮೂಲಭೂತ ಸೌಕರ್ಯಗಳಿಲ್ಲದೆ ಬಡತನದಲ್ಲಿ ಬೆಂದು,ಕೊನೆಗೆ ಅಂಥವರ ಮನೆಯ ಕೆಲಸವನ್ನು ಬಿಟ್ಟು ಹೋಗುವರು. ​”ಕಲ್ಪವೃಕ್ಷದ ಕೆಳಗೆ ನಿಂತರೂ ಬೇಡಲು ಬಾಯಿಯಿಲ್ಲದಂತೆ,ಮೂಕನಾದಂತೆ., ಕೈಯಲ್ಲಿ ಪಾತ್ರೆಯಿಲ್ಲದಿದ್ದರೆ ಮಳೆ ನೀರು ಕುಡಿಯಲು ಸಾಧ್ಯವಿಲ್ಲ.” ಹಾಗೆಯೇ, ಶ್ರೀಮಂತಿಕೆಯ ಸನಿಹವಿದ್ದರೂ ಅದನ್ನು ಹಂಚಿಕೊಳ್ಳುವ ಗುಣ ಅಥವಾ ಅದನ್ನು ಪಡೆಯುವ ಯೋಗ ಎರಡೂ ಮುಖ್ಯವಾಗುತ್ತದೆ. ​ಜ್ಞಾನ ಮತ್ತು ಅನ್ವಯದ ಕೊರತೆಯಿಂದ​ಈ ಮಾತನ್ನು ಕೇವಲ ಹಣಕ್ಕೆ ಸೀಮಿತಗೊಳಿಸದೆ, ಜ್ಞಾನಕ್ಕೂ ಅನ್ವಯಿಸಬಹುದು.​ನಮ್ಮ ಮನೆಯಲ್ಲಿ ಸಾವಿರಾರು ಪುಸ್ತಕಗಳಿರಬಹುದು, ಅಥವಾ ನಮಗೆ ಮಹಾನ್ ವಿದ್ವಾಂಸರ ಪರಿಚಯವಿರಬಹುದು.​ಆದರೆ ನಾವು ಆ ಜ್ಞಾನವನ್ನು ಬಳಸಿಕೊಳ್ಳದಿದ್ದರೆ ಅಥವಾ ನಮಗೆ ಜೀವನದ ಕಷ್ಟಕಾಲದಲ್ಲಿ ಆ ವಿದ್ವಾಂಸರಿಂದ ಒಂದು ತುಸುವಾದರೂ  ಮಾರ್ಗದರ್ಶನ ಸಿಗದಿದ್ದರೆ, ಅದು ನಡುರಾತ್ರಿಯಲ್ಲಿ ಹಿಡಿದ ಕೈದೀವಿಗೆಯಂತೆ ಶೂನ್ಯವಾಗಿರುತ್ತದೆ. ​ಸಂಬಂಧಗಳಲ್ಲಿನ ಪೊಳ್ಳುತನವು​ಇಂದಿನ ಕಾಲದ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಸಾವಿರಾರು “ಸ್ನೇಹಿತರು” ಇರುತ್ತಾರೆ. ಇದು ಸಮುದ್ರದಷ್ಟು ದೊಡ್ಡ ಜಾಲವಾಗಿದೆ.ಆದರೆ ನಮಗೆ ಮಾನಸಿಕವಾಗಿ ನೋವಾದಾಗ ಅಥವಾ ಸಹಾಯದ ಹಸ್ತ ಬೇಕಾದಾಗ ಒಬ್ಬರೂ ಬಾರದಿದ್ದರೆ, ಈ ಸೋಷಿಯಲ್ ಮೀಡಿಯಾ ಸ್ನೇಹವು “ಸಮುದ್ರದ ನೆಂಟಸ್ತನಕ್ಕೆ” ಸಾಕ್ಷಿಯಾಗುತ್ತದೆ.​ಸಮುದ್ರದ ನೀರು: ತುಂಬಾ ಇದೆ, ಆದರೆ ಕುಡಿಯಲು ಯೋಗ್ಯವಲ್ಲ.​ಬಾಹ್ಯ ಸಡಗರವಿದ್ದಂತೆ.ಬರೀ ತೋರಿಕೆಗೆ ಕಡಲು.ಆ ಕಡಲಿನ ಪಕ್ಕದಲ್ಲಿ ಮನೆ ಮಾಡಿದವರಿಗೆ ಗೊತ್ತು ಸಾಧಕ ಬಾಧಕಗಳು.ಹಾಗೆನೆ ಉಳ್ಳವರ ಸಂಬಂಧಗಳಲ್ಲಿ ತೋರಿಕೆ ಜಾಸ್ತಿಯಾಗಿ ಅಂತರಂಗದ ಮಿಡಿತ ಕಡಿಮೆಯಾದಾಗ  ಇಂತಹ ಗಾದೆ ಮಾತುಗಳು ಜನ್ಮತಾಳುತ್ತವೆ ​ಈ ಮಾತು ನಮಗೆ ಎರಡು ಬಹು ಮುಖ್ಯ ಪಾಠಗಳನ್ನು ಕಲಿಸಿಕೊಡುತ್ತದೆ.​ಆತ್ಮನಿರ್ಭರತೆ ಮತ್ತು ಗುಣದ ಬೆಲೆ. ಬೇರೆಯವರ ಶ್ರೀಮಂತಿಕೆ ಅಥವಾ ಅಧಿಕಾರವನ್ನು ನೋಡಿ ನಮಗೆ ಏನೋ ಸಿಗುತ್ತದೆ ಎಂಬ ಭ್ರಮೆಯಲ್ಲಿ ಬದುಕಲು ಆಸೆಪಡುತ್ತೇವೆ. ಆ ಆಸೆಯು ಈಡೇರದಿದ್ದಾಗ ಆತ್ಮ ನಿರ್ಭರವಾಗಿ ಅವರ ಒಳ ಗುಣದ ಅರಿವು ಪ್ರತ್ಯಕ್ಷವಾದಾಗ ದೂರಾಗುತ್ತೇವೆ.    ನಮಗೆ ಬೇಕಾದ ‘ಉಪ್ಪನ್ನು’ ನಾವೇ ಸಂಪಾದಿಸಿಕೊಳ್ಳಬೇಕು.​ರಾಜರ ,ರಾಜಕಾರಿಣಿಗಳ,ಜಮೀನ್ದಾರರ ಅದೆಷ್ಟು  ಸಂಪತ್ತು ಇದ್ದರೂ ನಮಗಾಗುವದೇನು?  ಅದು ಯಾರಿಗಾದರೂ ಬಳಕೆಯಾಗುತ್ತದೆಯೇ ಎಂಬುದು ಮುಖ್ಯ. ಉಪ್ಪಿಲ್ಲದ ಊಟ ಹೇಗೆ ರುಚಿಸುವುದಿಲ್ಲವೋ, ಹಾಗೆಯೇ ಮಾನವೀಯತೆ ಇಲ್ಲದ ಮಹಾನ್ ವ್ಯಕ್ತಿಗಳ ಸ್ನೇಹವು ನಿರರ್ಥಕ.​ಸಮುದ್ರದ ಹತ್ತಿರ ವಾಸಿಸಿದರೂ ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಮಗೆ ಬಾರದಿರಲಿ. ನಾವು ಬೆಳೆಸುವ ಸ್ನೇಹವು ಕೇವಲ ಗಾತ್ರದಲ್ಲಿ “ಸಮುದ್ರದಂತೆ” ಇರದೆ, ಗುಣದಲ್ಲಿ “ಶುದ್ಧ ಜಲದಂತೆ” ಇರಲಿ. ಆಡಂಬರದ ಸಂಬಂಧಗಳಿಗಿಂತ ಕಷ್ಟಕ್ಕೆ ಬರುವ ಪುಟ್ಟ ಸಂಬಂಧವೇ ಮಿಗಿಲು. ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಇವರು (ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ) 1998 ರಿಂದ ಕೆ.ಇ.ಬಿ.ಇಲಾಖೆಯಲ್ಲಿ ಲೈನ್ ಮ್ಯಾನ್ ವೃತ್ತಿ ಪ್ರಾರಂಭ.ಪ್ರಸ್ತುತ ಗಂಗಾವತಿ ನಗರದಲ್ಲಿ ಮೀಟರ್ ರೀಡರ್ ಸೇವೆ ಸಲ್ಲಿಸುತ್ತಿದ್ದಾರೆ.ಪ್ರವೃತ್ತಿಯಲ್ಲಿ ಹವ್ಯಾಸಿ ಬರಹಗಾರರು.ಪ್ರಕಟಿತ ಪುಸ್ತಕಗಳು1)ನಾನಲ್ಲದ ನನ್ನೊಳಗೊಬ್ಬ(ಕವನ ಸಂಕಲನ)2)ನಕ್ಷತ್ರ ಗೊಂಚಲು(ಹಾಯ್ಕು ಗಳ ಸಂಕಲನ)3)ನಂಜು ನುಂಗಿದ ನಗು(ಕವನ ಸಂಕಲನ)4) ನಾಕು ತಾವಿನ ತಿರುವು(ಕವನ ಸಂಕಲನ)5)ನುಡಿದಷ್ಟೆ ನವಿರು(ವಿಮರ್ಶೆ ಕೃತಿ)ಪ್ರಶಸ್ತಿಗಳುಕವಿ ಭೂಷಣ ಪ್ರಶಸ್ತಿಅಡ್ವೈಸರ್ ಸಾಹಿತ್ಯ ಪ್ರಶಸ್ತಿ (ಮಂಡ್ಯ)ರುಕ್ಮಿಣಿ ಬಾಯಿ ಸಾಹಿತ್ಯ ಶ್ರೇಷ್ಠ ಪ್ರಶಸ್ತಿಚೆನ್ನಬಸವೇಶ್ವರ ಸಾಹಿತ್ಯ ಪ್ರಶಸ್ತಿಬೀಚಿ ಸಾಹಿತ್ಯ ಪ್ರಶಸ್ತಿರಾಜ್ಯ ಮಟ್ಟದ ಜನ್ನ ಕಾವ್ಯ ಪ್ರಶಸ್ತಿ (ಮಾಣಿಕ್ಯ ಪ್ರಕಾಶನ ಹಾಸನ)ಚೆನ್ನವೀರ ಕಣವಿ ರಾಜ್ಯ ಸಾಹಿತ್ಯ ಪ್ರಶಸ್ತಿ (ಧಾರವಾಡ)ಡಾ.ಸಿದ್ಧಲಿಂಗಯ್ಯ ರಾಜ್ಯ ಸಾಹಿತ್ಯ ಪ್ರಶಸ್ತಿ (ಬಸವನ ಬಾಗೇವಾಡಿ)ರಾಜ್ಯ ಮಟ್ಟದ ಹೊಯ್ಸಳ ಸಾಹಿತ್ಯ ಪ್ರಶಸ್ತಿ (ಹಾಸನ.ಮಾಣಿಕ್ಯ ಪ್ರಕಾಶನ)ಕವಿ ಕಾವ್ಯ ಪುರಸ್ಕಾರ (ಮಂಡ್ಯ) ರಾಜ್ಯದ ಅನೇಕ ಪ್ರತಿಷ್ಠಿತ ಸಂಘಟನೆಯಲ್ಲಿ ಕಾವ್ಯ ಕಮ್ಮಟ, ಕವಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ.ಸೇವೆಕಾವ್ಯಲೋಕ (ಗಂಗಾವತಿ )ಸಂಘಟನೆಯಲ್ಲಿ ಕಾರ್ಯದರ್ಶಿಯಾಗಿ 89 ಕವಿಗೋಷ್ಠಿಯನ್ನು ನಿರ್ವಹಣೆ ಮಾಡಿದ್ದಾರೆ.ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿಯಲ್ಲಿ 21ಕವಿಗೋಷ್ಠಿ ನಡೆಸಿದ್ದಾರೆ.ಸಿರಿಗನ್ನಡ ವೇದಿಕೆ ಗಂಗಾವತಿ ತಾಲುಕಾಧ್ಯಕ್ಷರಾಗಿ ಮೂರು ವರುಷ ಸೇವೆ ಮತ್ತು 15 ಕವಿಗೋಷ್ಠಿ ನಡೆಸಿದ್ದಾರೆ.ಶರಣ ಸಾಹಿತ್ಯ ಪರಿಷತ್ ಗಂಗಾವತಿ ಯಲ್ಲಿ ಕಾರ್ಯದರ್ಶಿಯಾಗಿ ಒಂದು ವರುಷ ಸೇವೆ ಮತ್ತು 30 ವಚನ ಶ್ರಾವಣ ನಿರ್ವಹಣೆ.ಸಧ್ಯದಲ್ಲಿಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಗಂಗಾವತಿಯ ತಾಲುಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ರಾಜ್ಯ ಮಟ್ಟದ ಕವಿ ಕಾವ್ಯ ಸಂಭ್ರಮ ಮತ್ತು ಕವಿ ಸಮ್ಮೇಳನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ.ಹಲವು ಕವಿಗೋಷ್ಠಿ ಯ ಅಧ್ಯಕ್ಷತೆ ವಹಿಸಿದ್ದಾರೆ.2019ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುದುಗಲ್ಲನಲ್ಲಿ ಏರ್ಪಡಿಸಿದ ತಾಲುಕು ಕವಿ ಸಮ್ಮೇಳನದ ಅಧ್ಯಕ್ಷರಾಗಿ, ಅಧ್ಯಕ್ಷತೆ ನಿರ್ವಹಿಸಿದ ಹೆಮ್ಮೆ.

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-29 ಅರ್ಜುನ ಉವಾಚ ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ  ಹೀಗಿದ್ದರು ಸ್ತ್ರೀರಾಜ್ಯದ ಸ್ತ್ರೀಯರು                            ನಮ್ಮ ಕುದುರೆ ಪ್ರವೇಶಿಸಿದ್ದು ಸ್ತ್ರೀರಾಜ್ಯವನ್ನು. ನಾವು ಹೊಕ್ಕದ್ದು ವನಿತಾ ಸೀಮೆಯನ್ನು. ಭಾರವನ್ನು ತಾಳಲಾರದೆ ಧರಣಿ ಕುಗ್ಗಿದೆಯೋ ಏನೋ! ತುಸು ಮುಂದೆ ಹಿಗ್ಗಿದೆಯೋ ಏನೋ! ಎಂಬಂತಿತ್ತು ಅಲ್ಲಿಯ ಭೂಮಿಯ ಸ್ವರೂಪ. ಹೀಗೆ ಏರಿಳಿತಗಳಲ್ಲಿಯೇ ಸಾಗಿದೆವು ನಾವು. ಸ್ತ್ರೀರಾಜ್ಯದ ಬಗೆಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳುತ್ತಾ ಹೋದಂತೆ ನನ್ನಲ್ಲಿ ಅಳುಕು ಮೂಡತೊಡಗಿತು. ನನ್ನ ಜೊತೆಗಿದ್ದವರೆಲ್ಲಾ ಸಂಯಮದ ಮನಸ್ಸನ್ನು ಕಾಪಾಡಿಕೊಳ್ಳದಿದ್ದರೆ ಆ ಸ್ತ್ರೀರಾಜ್ಯವನ್ನು ದಾಟಿ ಮುಂದೆ ಹೋಗುವುದು ಸಾಧ್ಯವಿಲ್ಲ ಎಂಬ ಭಯ ನನ್ನಲ್ಲಿ ಉಂಟಾಯಿತು.    ಅಲ್ಲಿದ್ದವರೆಲ್ಲಾ ನಾರಿಯರೇ. ಪುರುಷರು ಜೀವನ ನಡೆಸುವುದಕ್ಕೆ ಅಲ್ಲಿ ಅವಕಾಶವೇ ಇರಲಿಲ್ಲ. ಅಲ್ಲಿದ್ದ ಸ್ತ್ರೀಯರು ಯೌವ್ವನಾವಸ್ಥೆಯನ್ನು ಹೊಂದಿದವರು. ಮಧುಪಾನದಿಂದ ಮತ್ತೇರಿಸಿಕೊಳ್ಳುವ ಚಟವನ್ನು ಇಟ್ಟುಕೊಂಡವರು. ಚೆಲುವಿತ್ತು ಅವರಿಗೆ. ಲಾವಣ್ಯವತಿಯರಾಗಿದ್ದರು. ಬಗೆಬಗೆಯ ಕಲೆಗಳಲ್ಲಿ ಪ್ರೌಢಿಮೆಯನ್ನು ರೂಢಿಸಿಕೊಂಡಿದ್ದರು. ಹಾಡನ್ನು ಇಂಪಾಗಿ ಹಾಡುವ ಕೌಶಲ್ಯವಿತ್ತು. ನೃತ್ಯವನ್ನು ಸೊಂಪಾಗಿ ಮಾಡುವ ಪ್ರತಿಭೆಯಿತ್ತು. ಕೊಳಲನ್ನು ನುಡಿಸುತ್ತಿದ್ದರು ಕೋಗಿಲೆ ಕೊರಳಿನಿಂದ ಧ್ವನಿಸರವು ಹೊಮ್ಮಿದಂತೆ. ವೀಣೆಯನ್ನು ನುಡಿಸುತ್ತಿದ್ದರು ರಸಿಕ ಹೃದಯದಿಂದ ಸ್ವರರಸವು ಚಿಮ್ಮಿದಂತೆ. ಮಾತುಮಾತಿಗೆ ನಗುವ, ಮಾತುಮಾತಿನಲಿ ನಗಿಸುವ ವಿನೋದ ಪ್ರಜ್ಞೆಯಿತ್ತು ಅಲ್ಲಿಯ ವಿನೋದಿನಿಯರಲ್ಲಿ. ಭೋಗಾಸಕ್ತರಾಗಿದ್ದರು ಅಲ್ಲಿನ ವನಿತೆಯರು. ಹೀಗೆ ಸ್ತ್ರೀಗಣವದು, ಸ್ತ್ರೀಗುಣಗಳ ಹೊಂದಿ, ಸ್ತ್ರೀಗಡಣದಲ್ಲಿಯೇ ಬದುಕು ನಡೆಸುತ್ತಾ, ಸ್ತ್ರೀಗಣಿಯೊಂದನ್ನು ನಿರ್ಮಿಸಿತ್ತು ಈ ಭೂಮಿಯೊಳಗೆ.    ಹೀಗಿದ್ದ ವನಿತಾ ರಾಜ್ಯವನ್ನು ಪ್ರವೇಶಿಸಿ ಅಲ್ಲಿಂದ ಜೀವಂತವಾಗಿ ಹೊರಬಂದ ಪುರುಷರು ಇರಲಿಲ್ಲ. ಬಂದ ಗಂಡಸರನ್ನು ಆಕರ್ಷಿಸಿ, ಕೊನೆಗೆ ಮರಣವನ್ನೀಯುವ ಕಠೋರತೆಯಿತ್ತು ಅಲ್ಲಿನ ಹೆಂಗಳೆಯರ ಹೃದಯದಲ್ಲಿ. ಸೌಂದರ್ಯಮಯ ದೇಹವನ್ನು ಮುಂದಿಟ್ಟು ಪುರುಷರನ್ನು ಯಮಪಾಶಕ್ಕೆ ಸಿಲುಕಿಸುತ್ತಿದ್ದ ಮೋಹನಾಂಗಿಯರು ಅಲ್ಲಿನವರು.    ಬಂದ ಗಂಡಸರನ್ನು ಕಂಡು ಚೆಲ್ಲುಚೆಲ್ಲಾಗಿ ನೋಡುತ್ತಾ, ಆಸೆಯ ಕಣ್ಣೋಟ ಬೀರುತ್ತಿದ್ದರು. ಆಕರ್ಷಕವಾದ ಭಂಗಿಯಲ್ಲಿ ನಿಂತು, ಕಾಲ ಉಗುರುಗಳಿಂದ ನೆಲವನ್ನು ಕೆರೆಯುತ್ತಾ ಹುಸಿಲಜ್ಜೆಯ ಭಾವವನ್ನು ತೋರಿಸುತ್ತಿದ್ದರು. ಸರಸಗೈಯ್ಯುವ ಸಮಯದಲ್ಲಿ ದೇಹಸಿರಿಯನ್ನು ಉಣಬಡಿಸುತ್ತಾ ಗಂಡಸರಿಗೆ ಹುಚ್ಚು ಹಿಡಿದು ಅವರ ಅರಿವು ಇನ್ನಿಲ್ಲವಾಗುವ ಹಾಗೆ ಮದವನ್ನು ಏರಿಸುತ್ತಿದ್ದರು.    ಇಲ್ಲಿನ ಸ್ತ್ರೀಯೊಡನೆ ಒಮ್ಮೆ ಸರಸಕೇಳಿಗೆ ಇಳಿದ ಬಳಿಕ ಅದೇ ವಿಷಯದಲ್ಲಿ ಸಂಪೂರ್ಣ ಆಸಕ್ತನಾಗಿಬಿಡುತ್ತಿದ್ದ ಇಲ್ಲಿಗೆ ಬಂದ ಪುರುಷ. ಇಲ್ಲಿಂದ ತೆರಳಲು ಅವನಿಗೆ ಮನಸ್ಸೇ ಆಗುತ್ತಿರಲಿಲ್ಲ. ನಾನಾ ಪ್ರಕಾರದ ಕಾಮಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಈ ಬಗೆಯಲ್ಲಿಯೇ ಒಂದು ತಿಂಗಳು ಸುಖಿಸುತ್ತಿದ್ದರು. ಉತ್ತಮವಾದ ಸುಗಂಧವನ್ನು ಮೈಗೆ ಬಳಿದುಕೊಂಡು, ಸುಗಂಧ ದ್ರವ್ಯವನ್ನು ಬಾಯಿಗೆ ಹಾಕಿಕೊಂಡು, ತಾಂಬೂಲ, ಮಧುಪಾನ ಮೊದಲಾದವುಗಳ ಮೂಲಕ ಮದನಕೇಳಿಯ ಉತ್ತುಂಗ ಸೊಗವನ್ನು ಅನುಭವಿಸುತ್ತಿದ್ದರು.  ವಿಧವಿಧವಾದ ಬಗೆಯಲ್ಲಿ ಶೋಭಿಸುವ ಕುಸುಮಸಮೂಹಗಳ ಪರಿಮಳಭರಿತವಾದ ಮಕರಂದಗಳನ್ನು ಚಿನ್ನದ ಬಟ್ಟಲಲ್ಲಿ ಸುರಿಯುತ್ತಿದ್ದಳು ಹೆಣ್ಣು. ಆ ಮಕರಂದಕ್ಕೆ ತನ್ನ ತುಟಿಯ ಸಿಹಿಯನ್ನು ಸೇರಿಸುವಂತೆ ಬಟ್ಟಲಿಗೆ ಮುಖವಿಟ್ಟು ಅದನ್ನು ಸವಿಯುತ್ತಿದ್ದಳು. ಉಳಿದ ಮಕರಂದವನ್ನು ನೋಡಿ ನಗು ಬೀರುತ್ತಿದ್ದಳು. ಬಟ್ಟಲನ್ನು ಪುರುಷನ ಬಳಿಗೆ ತೆಗೆದುಕೊಂಡು ಹೋಗಿ ಬಟ್ಟಲಿನಲ್ಲಿದ್ದ ಮಕರಂದವನ್ನು ಇಬ್ಬರೂ ಹಂಚಿಕೊಂಡು ಸವಿಯುತ್ತಿದ್ದರು. ಮಕರಂದದ ಸವಿಯನ್ನು ತೊರೆದು ಇರುವವರಲ್ಲ ಎಂಬಂತೆ ಇಬ್ಬರೂ ಬಿಡದೆ ಮುಖವಿಟ್ಟು ರುಚಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಚಿನ್ನದ ಬಟ್ಟಲಲ್ಲಿ ಮೂಡಿದ ಪುರುಷನ ಬಿಂಬವನ್ನು ಆ ಹೆಣ್ಣು, ಅವಳ ಬಿಂಬವನ್ನು ಆ ಪುರುಷ ಇಬ್ಬರೂ ಕಂಡು ಅನ್ಯೋನ್ಯತೆಯ ಸಂಪ್ರೀತಿ ಭಾವ ಅವರನ್ನು ಆವರಿಸುತ್ತಿತ್ತು. ಬಟ್ಟಲಲ್ಲಿ ತುಂಬಿರುವ ಮಕರಂದ ಮುಗಿದುಹೋದರೆ ಜೊತೆಜೊತೆಗೆ ಅದನ್ನು ಸವಿಯುವ ಗಳಿಗೆಯದು ಮುಗಿದುಹೋಗುವುದು ಎಂಬ ಯೋಚನೆ ಬಂದ ಕ್ಷಣವೇ ಆತುರಾತುರವಾಗಿ ರಸವನ್ನು ಹೀರುವುದನ್ನು ನಿಲ್ಲಿಸುತ್ತಿದ್ದರು. ಬೇಕುಬೇಕೆಂದೇ ವಿಳಂಬ ಮಾಡುತ್ತಿದ್ದರು. ಜೊತೆಜೊತೆಗೆ ಸವಿವ ರಸಗಳಿಗೆಯದು ಅವರಿಗೆ ಮುದವನ್ನು ನೀಡುತ್ತಿತ್ತು.  ಮನಸೆಳೆಯುವ ರತಿಕೇಳಿಯಲ್ಲಿ ತಲ್ಲೀನರಾಗುತ್ತಿದ್ದರು. ಹೆಣ್ಣು ತನ್ನ ತುಟಿಯ ಸಿಹಿರಸವನ್ನು ಕುಡಿಸಿ ಪುರುಷನನ್ನು ತಣಿಸುತ್ತಿದ್ದರು. ಮಿಲನದಲ್ಲಿ ಮನವದು ಮುಳುಗಿಹೋಗಿ ಸುಖ ಅವರದ್ದಾಗುತ್ತಿತ್ತು. ಕಾಮಕಲೆಗಳಲ್ಲಿ ಪರಿಣತಳಾದ ಹೆಣ್ಣು ಈ ಮೂಲಕ ಉನ್ನತ ನೆಮ್ಮದಿಯನ್ನು ತನ್ನದಾಗಿಸಿಕೊಳ್ಳುತ್ತಿದ್ದಳು.  ಹಾಗಿದ್ದಾಗಲೇ ಅವಳ ಅಧರದ ಸ್ಪರ್ಶಕ್ಕೆ ಸಿಲುಕಿ ವಿಷವಾದ ಆ ಮಕರಂದ ಅವನಿಗೆ ಪ್ರಾಣಸಂಕಟವನ್ನು ಕೊಡುವ ಕಾಟವನ್ನು ಆರಂಭಿಸುತ್ತಿತ್ತು. ಇನ್ನೇನು ಮರಣ ತನ್ನನ್ನು ಬಂದು ಅಪ್ಪಿಕೊಳ್ಳುತ್ತದೆ ಎಂದು ಬೆದರಿದ ಪುರುಷ ಮಧ್ಯೆಯೇ ಕಾಮಕೇಳಿಯನ್ನು ನಿಲ್ಲಿಸಿಬಿಡುತ್ತಿದ್ದ. ತಕ್ಷಣವೇ ಅವನ ಚರಣಕ್ಕೆ ಎರಗಿ, ಒಪ್ಪಿಸುವ ನಾಟಕವನ್ನಾಡುತ್ತಿದ್ದಳು. ದೈನ್ಯತೆಯನ್ನು ತೋರಿಸುತ್ತಿದ್ದಳು. ಕರುಣೆ ನೋಟ ಹರಿಸುತ್ತಿದ್ದಳು. ಅದಕ್ಕೂ ಅವನು ಸಹಿಸದವನಾದರೆ ಬೊಬ್ಬೆ ಹೊಡೆದು ಅವನನ್ನು ಹೊಡೆಯುತ್ತಿದ್ದಳು, ಕೊಲ್ಲುತ್ತಿದ್ದಳು. ಕೈಗಳಿಂದ ಬಡಿದು ಪ್ರಾಣ ಹೋಗುವವರೆಗೂ ಅವಳು ಸುಮ್ಮನಾಗುತ್ತಿರಲಿಲ್ಲ.  ಸಂಪಿಗೆ ಹೂವಿಗೆ ಮನಸೋತು, ಅದರ ಆಸ್ವಾದನೆಗೆ ಬಂದು, ಹೂ ಬಾಡುವವರೆಗೂ ಮಕರಂದವನ್ನು ಹೀರಿಕೊಂಡಿದ್ದು, ಕೊನೆಗೆ ಅದರೊಳಗಡೆಯೇ ಸಿಲುಕಿ ಮರಣವನ್ನಪ್ಪುವ ದುಂಬಿಯಂತಹ ಸ್ಥಿತಿ ಸ್ತ್ರೀರಾಜ್ಯಕ್ಕೆ ಬಂದ ಪುರುಷರದ್ದು. ಅಲ್ಲಿಗೆ ಬಂದ ಎಲ್ಲಾ ಪುರುಷರಿಗೂ ಇದೇ ಅವಸ್ಥೆ ಒದಗಿಬರುತ್ತಿತ್ತು. ಅಲ್ಲಿದ್ದ ಎಲ್ಲಾ ಮಹಿಳೆಯರೂ ಇದೇ ತೆರದಲ್ಲಿದ್ದರು.  ಹೀಗೆ ಪುರುಷರನ್ನು ಸಾಯಿಸಿದ ಕೆಲವು ಮಹಿಳೆಯರು ತಿಂಗಳು ಕಳೆದಾಗ ಅಗ್ನಿಪ್ರವೇಶ ಮಾಡುತ್ತಿದ್ದರು. ಇನ್ನೂ ಕೆಲವರು ಹೆಣ್ಣುಮಗುವಿಗೆ ಜನ್ಮ ನೀಡುತ್ತಿದ್ದರು. ಹೀಗೆ ಅಲ್ಲಿಯ ಸ್ತ್ರೀಸಂತತಿ ಬೆಳೆಯುತ್ತಲೇ ಬಂದಿತ್ತು. ಹೀಗೆ ವಿಷಾಂಗನೆಯರಾಗಿದ್ದ ಆ ರಾಜ್ಯಕ್ಕೆ ಪ್ರಮೀಳೆ ಎನ್ನುವವಳು ಅರಸಿಯಾಗಿದ್ದಳು.  ನನ್ನ ಜೊತೆಗಿದ್ದವರನ್ನು ಎಚ್ಚರಿಸದೇ ಇದ್ದರೆ ಅಪಾಯವಾಗುತ್ತದೆ ಎನ್ನುವುದು ನನಗೆ ದೃಢವಾಗಿತ್ತು. ಇದುವರೆಗೂ ಪರಾಕ್ರಮವನ್ನಿಟ್ಟುಕೊಂಡು ಯುದ್ಧ ಹೂಡಿದ್ದ ನಾವು ಇದೀಗ ಸಂಪೂರ್ಣ ಬುದ್ಧಿವಂತಿಕೆಯಿAದ, ವಿವೇಚನೆಯಿಂದ ನಡೆದುಕೊಂಡು ಮುನ್ನಡೆಯಬೇಕಿತ್ತು. “ಇಲ್ಲಿನವರು ವಿಷಕನ್ನಿಕೆಯರು. ಕಂಡ ಕೂಡಲೇ ಆಕರ್ಷಿಸುತ್ತಾರೆ. ಅವರೆಡೆಗೆ ಮಾರುಹೋದರೆ ನಿಮ್ಮ ಆಯುಷ್ಯವನ್ನೇ ಅಪಹರಿಸಿಬಿಡುತ್ತಾರೆ. ಕಾಮಕ್ರೀಡೆಯಲ್ಲಿ ಆಸಕ್ತಿ ವಹಿಸದೆ ಬುದ್ಧಿವಂತರಾಗಿರಬೇಕು” ಎಂದು ಹೇಳಿ ಜಾಗೃತಿ ಮೂಡಿಸಿದೆ ನಮ್ಮವರಲ್ಲಿ. ಅರಸಿ ಪ್ರಮೀಳೆ ನಮ್ಮ ಕುದುರೆಯನ್ನು ಕಟ್ಟಿಹಾಕುವ ಲಕ್ಷಣ ತೋರಿತು.    ಡಾ. ವಿಶ್ವನಾಥ ಎನ್ ನೇರಳಕಟ್ಟೆ      

Read Post »

ಅಂಕಣ ಸಂಗಾತಿ, ವೀಣಾ-ವಾಣಿ

ಅಂಕಣ ಸಂಗಾತಿ ವೀಣಾ ವಾಣಿ ವೀಣಾ ಹೇಮಂತ್‌ ಗೌಡ ಪಾಟೀಲ್ ಪರಿಸರ ದಿನಾಚರಣೆ..ಒಂದು ದಿನಕ್ಕೆ ಮಾತ್ರ ಸೀಮಿತವಾಗದಿರಲಿ  ಒಂದೆರಡು ದಿನಗಳ ಹಿಂದೆ ಪರಿಸರ ದಿನಾಚರಣೆಯಿದ್ದು ಇದನ್ನು ಕಡ್ಡಾಯವಾಗಿ ಆಚರಿಸಲೇಬೇಕು ಎಂಬ ಕಾರಣಕ್ಕಾಗಿ ಬಹುತೇಕ ಎಲ್ಲಾ ಸರಕಾರಿ, ಅರೆ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಸಸಿಯನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.ಪತ್ರಿಕೆಯವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹಸಿರು ಬಣ್ಣದ ಅಕ್ಷರಗಳಲ್ಲಿ ಪತ್ರಿಕೆಯನ್ನು ಪ್ರಿಂಟ್ ಮಾಡುವ ಮೂಲಕ ತಮ್ಮ ಪರಿಸರ ಪ್ರೇಮವನ್ನು ಮೆರೆದರು.  ಇನ್ನು ಮಹಿಳಾಮಣಿಯರು ಹಸಿರು ರಂಗಿನ ದಿರಿಸುಗಳನ್ನು ಧರಿಸಿ ಪರಿಸರ ದಿನಾಚರಣೆಯನ್ನು ಆಚರಿಸಿ ಅದರ ಫೋಟೋ ತೆಗೆದು ತಮ್ಮ ವಾಟ್ಸಪ್ ಸ್ಟೇಟಸ್ ಗಳಲ್ಲಿ ಹಾಕಿಕೊಂಡು ಸಂಭ್ರಮಿಸಿದರು.  ಎಲ್ಲವೂ ಚಂದ! ನಿಜ ಪರಿಸರ ದಿನಾಚರಣೆಯನ್ನು ಕಡ್ಡಾಯವಾಗಿ ಮಾಡಲೇಬೇಕು ಎಂಬ ಅನಿವಾರ್ಯತೆ ಇಲ್ಲದೆ ಹೋದರೆ ನಾವು ಪರಿಸರಕ್ಕೆ ಏನು ಕೊಟ್ಟಿದ್ದೇವೆ ಎಂಬುದರ ಕುರಿತು ಒಂದೈದು ನಿಮಿಷ ಮನದಲ್ಲೇ ಯೋಚಿಸಿದರೆ ಶೂನ್ಯ ಫಲಿತಾಂಶ ನಮ್ಮ ಮುಂದೆ ಕಾಣಬಹುದು.ಯಾರನ್ನೂ ಹೀಯಾಳಿಸುವ, ತಮಾಷೆ ಮಾಡುವ ಅವರ ಕುರಿತು ನಿರ್ಣಾಯಾತ್ಮಕವಾಗಿ ಹೇಳಿಕೆ ಕೊಡುವ ಇಲ್ಲವೇ ಅವರ ಕ್ರಿಯೆಯನ್ನು ಹಂಗಿಸುವ ಉದ್ದೇಶ ನನಗಿಲ್ಲ…. ಆದರೂ ಕೆಲ ಸಂಗತಿಗಳನ್ನು ನಮ್ಮದೇ ನಿಲುಕಿನಲ್ಲಿ  ನಾವು ವೈಯಕ್ತಿಕವಾಗಿ ಕೈಗೊಳ್ಳುವ ನೂರೆಂಟು ಸಾಧ್ಯತೆಗಳು ಇರುವಾಗ ಆ ನಿಟ್ಟಿನಲ್ಲಿ ನಾವು ಮುಂದುವರೆದರೆ ಪರಿಸರವನ್ನು ಇನ್ನಷ್ಟು ಸಮರ್ಪಕವಾಗಿ ಉಳಿಸಿಕೊಳ್ಳಬಹುದು ಎಂಬ ಆಶಯ ನನ್ನದು. ಈಗಾಗಲೇ ಪರಿಸರ ವಿನಾಶದ ದುಷ್ಪರಿಣಾಮಗಳನ್ನು ನಾವು ನೋಡುತ್ತಿದ್ದೇವೆ . ಹಿತಕರವಾದ ಬೇಸಿಗೆ ನಮ್ಮ ಪಾಲಿಗೆ ದೂರ…. ಕುರಿಯುತ್ತಿರುವ ಝಳ, ನಮ್ಮನ್ನು ಆಹುತಿ ತೆಗೆದುಕೊಳ್ಳದಿದ್ದರೆ ಸಾಕು ಎಂಬಂತಹ ಬಿಸಿಲು ಒಂದೆಡೆ ಕಾಡುತ್ತಿದ್ದರೆ,, ಬೇಕಿರಲಿ ಬೇಡದೆ ಇರಲಿ ಧೋ ಎಂದು ಸುರಿಯುತ್ತಿರುವ ಅಕಾಲ ಮಳೆ ಅಲ್ಲಲ್ಲಿ ನೆರೆ ಹಾವಳಿಯಿಂದ ಬೆಳೆ ಮನೆಗಳನ್ನು ತನ್ನ ರುದ್ರ ನರ್ತನಕ್ಕೆ ಈಡು ಮಾಡಿ ಹಾಳುಗೆಡವುತ್ತಿದೆ…. ಬದುಕಲು ಸಾಧ್ಯವೇ ಇಲ್ಲ ಎಂಬಂತಹ ಮಾರಣಾಂತಿಕ ತೊಂದರೆಗಳಾದ ಹೃದಯ ತೊಂದರೆ, ಅಕಾಲ ಮರಣಗಳು ಚಳಿಯ ಕಾರಣದಿಂದ ಉಂಟಾಗುತ್ತಿದ್ದು, ಸಹಿಸಲಸಾಧ್ಯವಾದ ಚಳಿಯಿಂದ ಜನರು ಸಾಯುತ್ತಿರುವ ಘಟನೆಗಳನ್ನು ಕೂಡ ನಾವು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಈಗಾಗಲೇ ಪರಿಸ್ಥಿತಿ ಸಾಕಷ್ಟು ವಿಷಮಿಸಿದ್ದು ಇನ್ನೂ ಹೆಚ್ಚಿನ ಅನಾಹುತಗಳು ಉಂಟಾಗುವ ಮುನ್ನವೇ ಜಾಗೃತರಾಗಬೇಕಾದ ಪರಿಸ್ಥಿತಿ ನಮ್ಮದು ಆ ನಿಟ್ಟಿನಲ್ಲಿ ಕೆಲ ಪರಿಹಾರ ಕ್ರಮಗಳನ್ನು ನಾವು ಕೈಗೊಳ್ಳಲೇಬೇಕಾಗಿದೆ. ಅಯ್ಯೋ ! ಅದನ್ನೆಲ್ಲ ಎಲ್ಲಿ ಮಾಡೋಕಾಗುತ್ತೆ ಉಳಿದವರೆಲ್ಲ ಮಾಡ್ಲಿ ನಮ್ಮ ಕೈಲಿ ಆಗೋದಿಲ್ಲ ಎಂಬ ನಿಟ್ಟಿನಲ್ಲಿ ಜನರು ವಿಸ್ಮೃತಿಯಲ್ಲಿ ಸಿಲುಕಿದ್ದಾರೆ ಅಂತಹವರಿಗೆ ಮಾಡುವ ಮನಸ್ಸಿದ್ದರೂ ಅವಕಾಶಗಳ ಅರಿವು ಹಾಗೂ ಅನಿವಾರ್ಯತೆಯನ್ನು ಮೂಡಿಸುವುದು ಮಾತ್ರ ನನ್ನ ಉದ್ದೇಶ.ಪರಿಸರ ದಿನಾಚರಣೆ ಇರುವುದು ಕೇವಲ ಗಿಡ ಮರಗಳನ್ನು ನೀಡಲು ಮಾತ್ರವಲ್ಲ. ಪರಿಸರ ದಿನಾಚರಣೆಯ ಮುಖ್ಯ ಉದ್ದೇಶ ನಾವು ಇರುವ ಈ ಬೃಹತ್ ಬ್ರಹ್ಮಾಂಡದ ಎಲ್ಲಾ ಜೀವರಾಶಿಗಳಿಗೂ ನಮ್ಮಷ್ಟೇ ಇಲ್ಲಿ ಬದುಕುವ ಹಕ್ಕು ಇದೆ ಎಂಬುದನ್ನು ಅರಿತುಕೊಳ್ಳಲು. ಉಳಿದೆಲ್ಲ ಜೀವಿಗಳಿಗೆ ಮನುಷ್ಯನಷ್ಟು ಬುದ್ಧಿಶಕ್ತಿ ಇಲ್ಲ ನಿಜ…ಆದರೆ ಜಗತ್ತಿನ ಜೀವಸಂಕುಲಗಳಲ್ಲಿಯೇ ಅತ್ಯಂತ ಬುದ್ಧಿಶಾಲಿ ಎಂದು ಬೀಗುವ ಮನುಷ್ಯ ತಾನೇ ತೋಡಿದ ಕಂದಕಕ್ಕೆ ತಾನು ಮಾತ್ರವಲ್ಲದೆ ಇಡೀ ಜೀವ ಸಂಕುಲವನ್ನು ಹಂತ ಹಂತವಾಗಿ ತಳ್ಳಿ ಮಾರಣಾಂತಿಕ ತೊಂದರೆಯಲ್ಲಿ ಸಿಲುಕಿಸುವ ಪ್ರಕ್ರಿಯೆಗೆ ಈಗಾಗಲೇ ತೊಡಗಿದ್ದಾನೆ.ಆರಂಭದಲ್ಲಿ ಆಧುನಿಕತೆಯ ಮೆರುಗಿನಲ್ಲಿ ಬಳಸಿ ಬಿಸುಡುವ ವಸ್ತುಗಳ ಶೋಕಿಯಲ್ಲಿ,, ಬಿಗಿಯಾದ ನೀತಿ ನಿಯಮಗಳ ಅನುಷ್ಠಾನ ಇಲ್ಲದ ಕಾರಣಕ್ಕಾಗಿ ಈ ಪ್ರವಾಹ ಚಿಕ್ಕದಾಗಿದ್ದರೂ ಇದೀಗ ಬೃಹದಾಕಾರದ ಸಮಸ್ಯೆಯಾಗಿ ಉಲ್ಬಣಗೊಂಡಿದೆ.ಪ್ರತಿಯೊಂದು ಹಳ್ಳಿಯ ಗ್ರಾಮ ಪಂಚಾಯಿತಿಯಿಂದ ಹಿಡಿದು ದಿಲ್ಲಿಯವರೆಗಿನ ಮಹಾನಗರ ಪಾಲಿಕೆಗಳವರೆಗೆ ಸಮಸ್ಯೆ ಇರುವುದು ಕಸ ವಿಲೇವಾರಿ. ನೀವು ಯಾವುದೇ ಊರಿನ ಹೊರ ಭಾಗದಲ್ಲಿ ಹೋಗಿ ನೋಡಿದರೆ ರಸ್ತೆಯ ಬದಿಯಲ್ಲಿ ನೂರಾರು ಟ್ರ್ಯಾಕ್ಟರ್ ಗಳಷ್ಟು ಕಸ ಬಿದ್ದಿರುತ್ತದೆ. ಮರುಬರಕ್ಕೆ ಮಾಡಲು ಸಾಧ್ಯವಾಗದ ಪ್ಲಾಸ್ಟಿಕ್ ವಸ್ತುಗಳ ರಾಶಿ ಅಲ್ಲಿರುತ್ತದೆ. ಹರಿದು ಹೋದ ರಬ್ಬರ್ ಟಾಯರ್, ಟ್ಯೂಬ್, ಬ್ಯಾಗ್ ಗಳು, ನೀರಿನ ಬಾಟಲಿಗಳು ಪೇಸ್ಟಿನಿಂದ ಹಿಡಿದು ಬೃಹದಾಕಾರದ ತ್ಯಾಜ್ಯಗಳು ಊರ ಹೊರಗಿನಿಂದಲೇ ನಮ್ಮನ್ನು ಸ್ವಾಗತಿಸುತ್ತವೆ.ಸರ್ಕಾರ ಅದೆಷ್ಟೇ ಪ್ರಯತ್ನ ಪಟ್ಟರೂ ಸ್ವಚ್ಛ ಭಾರತ ಯೋಜನೆಯನ್ನು ಕೈಗೊಂಡು ಮನೆಗೊಂದು ಶೌಚಾಲಯವನ್ನು ನಿರ್ಮಿಸಿ ಕೊಟ್ಟರೂ ಕೂಡ 21ನೇ ಶತಮಾನದಲ್ಲಿಯು ಜನರು ಬಯಲು ಬಹಿರ್ದೆಸೆಗೆ ಹೋಗುವ ಮೂಲಕ ಪರಿಸರವನ್ನು ಹಾಳುಗೆಡವುತ್ತಿದ್ದಾರೆ.ಇನ್ನು ಚಿಕ್ಕ ಪಾನ್ ಶಾಪು ಗಳಿಂದ ಹಿಡಿದು ದೊಡ್ಡ ಮಾಲ್ಗಳವರೆಗೆ ಎಲ್ಲ ಕಡೆ ಪ್ಲಾಸ್ಟಿಕ್ನದ್ದೇ ಕಾರುಬಾರು.ಬಣ್ಣ ಬಣ್ಣದ ಒಡೆಯದ ಚಿತ್ತಾಕರ್ಷಕ ಪ್ಲಾಸ್ಟಿಕ್ ಲೋಟ, ಬಟ್ಟಲು, ಬಳಸಿ ಬಿಸುಟಬಹುದಾದ ವಸ್ತುಗಳು ಒಂದೆರಡಲ್ಲ. ಪ್ಲಾಸ್ಟಿಕ್ ವಸ್ತುಗಳನ್ನು ಮಾರುವ ಅಂಗಡಿಕಾರರು ಅಂತಿಮವಾಗಿ ಪ್ಯಾಕ್ ಮಾಡಿ ಕೊಡುವಾಗ ಮಾತ್ರ ಸರ್/ಮೇಡಂ ನಾವು ಪ್ಲಾಸ್ಟಿಕ್ ಕವರ್ ಬಳಸುವುದಿಲ್ಲ ಪೇಪರ್ ಬ್ಯಾಗ್ ನಲ್ಲಿ ಹಾಕಿ ಕೊಡೋಣವೇ ಎಂದು ಕೇಳುವುದು ವಿಪರ್ಯಾಸವಲ್ಲವೇ ? ಪರಿಸರವನ್ನು ಉಳಿಸಿ ಎಂದು ಒಕ್ಕೊರಳಿನಿಂದ ಹೋಗುವ ಎಲ್ಲಾ ಕಡೆಗಳಲ್ಲಿ ಕಣ್ಣು ಕುಕ್ಕುವ ಬಲ್ಬ್ ಗಳನ್ನು, ಟ್ಯೂಬ್ ಗಳನ್ನು ಹಾಕಿ ಸೂರ್ಯನ ಬೆಳಕಿಗೆ ಸವಾಲೊಡ್ಡುವಂತೆ ಪ್ರಕಾಶಮಾನವಾಗಿಸುವರು. ರಸ್ತೆಯ ಅಗಲೀಕರಣ ಊರನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಬೃಹದಾಕಾರದ ಕಟ್ಟಡಗಳನ್ನು ಕರುಣಿಸಿ ನಿರ್ಮಿಸುವ ಸಲುವಾಗಿ ನೂರಾರು ವರ್ಷಗಳಿಂದ ನಮಗೆ ಗಾಳಿ ನೆರಳನ್ನು ನೀಡುವುದರ ಜೊತೆಗೆ ನೂರಾರು ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿರುವ ಮರಗಳನ್ನು ಕಡಿದು ಉರುಳಿಸುವುದು ಪರಿಸರ ನಾಶವಲ್ಲದೆ ಮತ್ತಿನ್ನೇನು ? ಯಾವುದೇ ಒಂದು ಆಧುನಿಕತೆಯ ಭರಾಟೆ ತನ್ನ ಅಂತಿಮ ಹಂತದಲ್ಲಿ ತೀವ್ರ ಪರಿಣಾಮವನ್ನು ಬೀರಿದಾಗ ಉಂಟಾಗುವ ಅಲ್ಲೋಲಕಲ್ಲೋಲದಲ್ಲಿ ನಾವು ಮನುಷ್ಯ ಮಾತ್ರಠು ಯೋಚಿಸಲು ಆರಂಭಿಸುತ್ತೇವೆ.ಇವೆಲ್ಲವೂ ದೊಡ್ಡ ಮಟ್ಟದಲ್ಲಾಯಿತು… ನಮ್ಮ ಹಿರಿಯರು ನಮಗೆ ಕೊಟ್ಟ ಒಳ್ಳೆಯ ವಾತಾವರಣದ ಕೊಡುಗೆಯನ್ನು ನಾವು ಮಕ್ಕಳಿಗೆ ಉಳಿಸಿ ಕೊಡಬೇಕಾಗಿರುವುದು ನಮ್ಮದೇ ಜವಾಬ್ದಾರಿ ಆ ಜವಾಬ್ದಾರಿಯ ನಿರ್ವಹಣೆಯಲ್ಲಿ ನಾವು ಬಹುತೇಕ ಎಡವಿದ್ದೇವೆ ನಿಜ, ಆದರೆ ಮತ್ತೆ ಸಂಭಾಳಿಸಿಕೊಂಡು ನಿಲ್ಲಲೇಬೇಕಾದ ತುರ್ತು ಪರಿಸ್ಥಿತಿ ಒದಗಿದೆ. ಈ ನಿಟ್ಟಿನಲ್ಲಿ ಕನಿಷ್ಠ ಪಕ್ಷ ಸುಶಿಕ್ಷಿತರು, ನಾಗರಿಕರು ಎಂದೆನಿಸಿಕೊಂಡಿರುವ ನಾವುಗಳು ನಮ್ಮ ಮನೆಯ ಮಟ್ಟಿಗೆ ಪರಿಸರವನ್ನು ಹೇಗೆ ಕಾಯ್ದುಕೊಳ್ಳಬಹುದು ಎಂದು ನೋಡೋಣ.* ಮನೆಯಿಂದ ಹೊರಗೆ ಅಂಗಡಿಗೆಂದೇ ಹೋಗುವಾಗ ಬಟ್ಟೆಯ ಕೈ ಚೀಲಗಳನ್ನು ಒಯ್ಯುವುದು ವಿಹಿತ. ಯಾವುದೇ ಸಮಯದಲ್ಲಿಯೂ ನೀವು ಏನನ್ನಾದರೂ ಖರೀದಿಸಬಹುದು ಎಂಬ ಮನಸ್ಥಿತಿ ನಿಮ್ಮದಾಗಿದ್ದರೆ ಬಟ್ಟೆಯ ಬ್ಯಾಗ್ ನ ಜೊತೆ ಒಂದೆರಡು ಡಬ್ಬಗಳನ್ನು ಒಯ್ಯುವುದು ಒಳ್ಳೆಯದು, ಅದು ಸಾಧ್ಯವಾಗದಿದ್ದರೆ ಅಂಗಡಿಗಳಲ್ಲಿ ಕಾಗದ ಪೊಟ್ಟಣದಲ್ಲಿ ಕಟ್ಟಿಕೊಡಲು ಕೇಳಿಕೊಳ್ಳಬೇಕು. ಮೊದಮೊದಲು ಅಂಗಡಿಕಾರರು ನಿಮ್ಮನ್ನು ತಮಾಷೆ ಮಾಡಬಹುದು ಅಯ್ಯೋ! ಅದನ್ನೆಲ್ಲ ಯಾರು ಮಾಡ್ತಾರೆ ಸರ್, ಇದನ್ನೇ ತಗೊಂಡು ಹೋಗಿ ಎಂದು ನಿಮಗೆ ಅಸಡ್ಡೆಯಿಂದ ಉತ್ತರಿಸಬಹುದು… ಇದನ್ನು ಅವಮಾನ ಎಂದು ಭಾವಿಸಬೇಡಿ. ನೀವು ನಿಮ್ಮ ನಿಲುವಿಗೆ ಬದ್ಧರಾದರೆ ಮುಂದಿನ ದಿನಮಾನಗಳಲ್ಲಿ ನಿಮ್ಮನ್ನು ಮತ್ತಷ್ಟು ಜನರು ಅನುಸರಿಸಬಹುದು. ವೈಯುಕ್ತಿಕ ನೆಲೆಯಲ್ಲಿ ನಾವು ಇದನ್ನು ಖಂಡಿತವಾಗಿಯೂ ಮಾಡಲು ಸಾಧ್ಯವಿದೆ.* ಹಗಲಿನ ಹೊತ್ತಿನಲ್ಲಿ ಮನೆಯ ಕಿಟಕಿ ಬಾಗಿಲುಗಳನ್ನು ತೆರೆದು ಹೊರಗಿನಿಂದ ಬರುವ ಸೂರ್ಯನ ಬೆಳಕು ಹಾಗೂ ತಾಜಾ ಹವೆಯನ್ನು ಉಸಿರಾಡಲು ರೂಢಿಸಿಕೊಳ್ಳಬೇಕು. ಅನವಶ್ಯಕವಾಗಿ ಲೈಟ್ಗಳನ್ನು ಉರಿಸುವುದು ಬೇಕಾಗಿಲ್ಲ. ತೀರ ಅನಿವಾರ್ಯವಾದಲ್ಲಿ ಮಂದ ಬೆಳಕನ್ನು ಸೂಸುವ ಅತ್ಯಂತ ಕಡಿಮೆ ಯೂನಿಟ್ ಬಳಕೆಯಾಗುವ ನವೀಕೃತ ಮಾದರಿಯ ಬಲ್ಬ್ ಗಳನ್ನು ಬಳಸಬೇಕು.‘ಒಂದು ಯೂನಿಟ್ ಉಳಿತಾಯ ಒಂದು ಯೂನಿಟ್ ಉತ್ಪಾದನೆಗೆ ಸಮ ‘ ಎಂಬ ಮಾತು ಇಂದಿಗೂ ಚಾಲ್ತಿಯಲ್ಲಿ ಇಟ್ಟುಕೊಳ್ಳಲೇಬೇಕು. ನಮಗೆ ಉತ್ಪಾದನೆ ಮಾಡುವ ಸಾಮರ್ಥ್ಯವಿಲ್ಲ ಎಂದಾದಲ್ಲಿ ಬಳಸುವಾಗ ತುಸು ಎಚ್ಚರ ವಹಿಸುವುದು ಒಳಿತು.*ಆಹಾರವನ್ನು ಸಾಧ್ಯವಾದಷ್ಟು ತಾಜಾ ಆಗಿ ತಯಾರಿಸಿ ಸೇವಿಸಬೇಕು ಪದೇ ಪದೇ ಬಿಸಿ ಮಾಡುವುದರಿಂದ ಆಹಾರದಲ್ಲಿರುವ ಜೀವಸತ್ವಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು ಆಹಾರವು ಸತ್ವರಹಿತವಾಗುತ್ತದೆ.. ಅತಿಯಾಗಿ ಅಡುಗೆ ತಯಾರಿಸಿ ಅದನ್ನು ಚೆಲ್ಲುವುದರಲ್ಲಿ ಅರ್ಥವಿಲ್ಲ. ಪ್ರತಿದಿನವೂ ಹಳ್ಳಿಯಿಂದ ದಿಲ್ಲಿಯವರೆಗೆ ಉಣ್ಣಲು ಸಾಧ್ಯವಾಗದ ರೀತಿಯಲ್ಲಿ ಟನ್ನುಗಟ್ಟಲೆ  ಆಹಾರ ಪದಾರ್ಥಗಳು ಕಸದ ತೊಟ್ಟಿಗೆ ಸೇರುವುದರಲ್ಲಿ ನಮ್ಮ ಅಳಿಲು ಪಾಲು ಸಲ್ಲುವುದನ್ನು ತಪ್ಪಿಸಬೇಕು. ಈ ಹಿಂದೆ ಉಳಿಕೆ ಆಹಾರವು ಮನೆಯ ಕೆಲಸದವರಿಗೆ ಮರುದಿನಕ್ಕೆ, ದನ ಕರುಗಳಿಗೆ ಮುಸುರೆಯಾಗಿ ಸಾರ್ಥಕತೆಯನ್ನು ಪಡೆಯುತ್ತಿತ್ತು ಆದರೆ ಆಧುನಿಕ ಭರಾಟೆಯಲ್ಲಿ ಪಶು ಸಂಗೋಪನೆಯನ್ನು ಕೈ ಬಿಟ್ಟಿರುವ ನಾವುಗಳು ಆಹಾರವನ್ನು ನೇರವಾಗಿ ಕಸದ ತೊಟ್ಟಿಗೆ ಚೆಲ್ಲುತ್ತಿದ್ದೇವೆ. ಇಡೀ ದೇಶದಲ್ಲಿ ಒಂದು ದಿನ ಕಸದ ತೊಟ್ಟಿಗೆ ಬಿಸಾಡುವ ಆಹಾರ ಅದೆಷ್ಟೋ ಕುಟುಂಬಗಳನ್ನು ಪಾಲಿಸಬಲ್ಲದು ಎಂಬ ಸತ್ಯದ ಅರಿವು ನಮಗಿರಬೇಕು… ಉತ್ಪಾದನಾ ಸಾಮರ್ಥ್ಯವಿಲ್ಲದವರಿಗೆ ಹಾಳು ಮಾಡುವ ಹಕ್ಕಿಲ್ಲ… ಅದು ನಮ್ಮ ವೈಯಕ್ತಿಕ ದುಡ್ಡಿನಿಂದ ಖರೀದಿಸಿದ್ದಾದರೂ ಸರಿಯೇ ? ಎಂಬ ಪ್ರಜ್ಞೆಯನ್ನು ಹೊಂದಿ ಅಂತೆಯೇ ನಡೆದುಕೊಳ್ಳಬೇಕು. ಇದರಿಂದ ಮನೆಯ ಖರ್ಚಿನಲ್ಲಿ ಮಿತವ್ಯಯ ಸಾಧಿಸಬಹುದು. ಇಂಧನವನ್ನು ಉಳಿಸಬಹುದು…. ತನ್ಮೂಲಕ ಪರಿಸರದ ಸಂರಕ್ಷಣೆಗೆ ನಮ್ಮ ಪಾಲನ್ನು ಸಲ್ಲಿಸಬಹುದು.* ಈ ಹಿಂದೆ ಅಮ್ಮಂದಿರು ಕಡ್ಡಾಯವಾಗಿ ತಮ್ಮ ಬಳಿ ಕರ ವಸ್ತ್ರವನ್ನು ನ್ಯಾಪ್ಕಿನ್ ಗಳನ್ನು ಇಟ್ಟುಕೊಳ್ಳುತ್ತಿದ್ದರು. ಆದರೆ ಇದೀಗ ಬಳಸಿ ಬಿಸಾಡಬಹುದಾದ ನ್ಯಾಪ್ಕಿನ್ಗಳನ್ನು ಎಗ್ಗಿಲ್ಲದೆ ಬಳಸಿ ಎಸೆಯುತ್ತಾರೆ. ಒಂದು ದಿನಕ್ಕೆ ಸರಿ ಸುಮಾರು 37 ಸಾವಿರ ಮರಗಳನ್ನು ಕೇವಲ ಟಿಶ್ಯೂ ಪೇಪರ್ ತಯಾರಿಕೆಗೆ ಕಡಿದು ಬಳಸುತ್ತಾರೆ ಎಂದರೆ ನೀವೇ ಊಹಿಸಿಕೊಳ್ಳಿ…. ಒಂದು ವರ್ಷಕ್ಕೆ ಎಷ್ಟು ಮರಗಳ ಮಾರಣಹೋಮವಾಗುತ್ತದೆ ಎಂದು. ಪ್ರಶ್ನೆ ಇರುವುದು ಅದೇ ಪ್ರಮಾಣದಲ್ಲಿ, ಅದೇ ತುರ್ತಿನಲ್ಲಿ, ಅಷ್ಟೇ ಪ್ರಮಾಣದ ಗಿಡಗಳನ್ನು ನಾವು ಬೆಳೆಸಲು ಸಾಧ್ಯವೇ ? ಎಂಬುದು.*ನಮ್ಮ ಹೊಲಗಳಲ್ಲಿ ಹೆಚ್ಚಿನ ಬೆಳೆಯನ್ನು ಪಡೆಯಲೆಂದು ನಾವು ಬಳಸುವ ಕೀಟನಾಶಕಗಳು ನಮ್ಮ ಭೂಮಿಯ ಸತ್ವವನ್ನು ಹೀರಿಕೊಳ್ಳುತ್ತಿವೆ. ನೆಲವನ್ನು ಬಂಜರಾಗಿಸುತ್ತವೆ. ಇದರ ಪರಿಣಾಮವಾಗಿ ನಿಸ್ಸತ್ವ ಆಹಾರವನ್ನು ಸೇವಿಸುತ್ತಿರುವ ನಮ್ಮ ಯುವ ಜನಾಂಗವು ಹತ್ತು ಹಲವಾರು ಆರೋಗ್ಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿವೆ. ಸಂತಾನಹೀನತೆಯ ತೊಂದರೆ ಪ್ರಮುಖವಾಗಿ ತಲೆದೋರುತ್ತಿದೆ. ಸಾಧ್ಯವಾದಷ್ಟು ಸಾವಯವ ಗೊಬ್ಬರವನ್ನು ಬಳಕೆ ಮಾಡಿ ಸತ್ವಯುತ ಆಹಾರ ಬೆಳೆಗಳನ್ನು ಬೆಳೆದು ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಯೋಚಿಸಲೇಬೇಕು. ಈ ಹಿಂದಿನವರು ಮಾಡುವಂತೆ ಉತ್ತಮ ತಳಿಯ ಬೀಜಗಳನ್ನು ಕಾಪಿಟ್ಟುಕೊಳ್ಳುವ, ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ನಮ್ಮದಾಗಿಸಿಕೊಳ್ಳುವ ವಾರ್ಷಿಕ ಬೆಳೆಗಳ ಜೊತೆಗೆ ತರಕಾರಿ ಬೆಳೆಗಳನ್ನು ಹಣ್ಣು ಹಂಪಲುಗಳನ್ನು ಬೆಳೆಯುವ ಮೂಲಕ ಆದಾಯವನ್ನು ಸರಿ ತೂಗಿಸಬಹುದು…. ಈ ಕೆಲಸದಲ್ಲಿ ತುಸು ಶ್ರಮ ಹೆಚ್ಚಾಗಬಹುದು ಆದರೆ ನಾವು ಸಾಕುವ ಪಶುಗಳೊಂದಿಗಿನ ಒಡನಾಟ ನಮ್ಮ ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ ಪ್ರಕೃತಿಯೊಂದಿಗಿನ ಸಾಂಗತ್ಯ ಮನಸ್ಸಿಗೆ ಹಿತವಾಗಿರುತ್ತದೆ.* ಈ ಹಿಂದಿನಂತೆ ಪ್ರತಿ ಮನೆಯು ಒಂದು ಪುಟ್ಟ ಹಿತ್ತಲನ್ನು ಹೊಂದಿದ್ದು ಅಲ್ಲಿ ದಿನಬಳಕೆಯ ಹಣ್ಣು ತರಕಾರಿ ಹೂವುಗಳ ಗಿಡಗಳನ್ನು ಬೆಳೆಸಬೇಕು. ಅವಸರಕ್ಕೂ ಒದಗುವ ನೆರಳನ್ನು ಕೊಡುವ ಹಸಿರಿನಿಂದ ಕಣ್ಣು ತಂಪಾಗಿಸುವ ತಣ್ಣನೆಯ ಗಾಳಿಯನ್ನು ನೀಡುವ ಗಿಡಗಳು ಮನೆಯ ಹಿಂದೆ ಹಾಗೂ ಮುಂದೆ ಇರಲೇಬೇಕು  ನಿಸರ್ಗಕ್ಕೆ ಹತ್ತಿರವಾದ ರೀತಿಯಲ್ಲಿ ಮನೆ ಹಾಗೂ ಮನೆಗೆ ಹತ್ತಿದಂತೆ ನಿಸರ್ಗಕ್ಕೆ ಹತ್ತಿರವಾಗುವ ಕೈತೋಟ ಇದ್ದರೆ ಅದು ನಂದನವನವೇ ಸರಿ. ಮನೆಯಲ್ಲಿ ಕೂಡ ಸಾಧ್ಯವಾದಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ಕೈ ಬಿಡಬೇಕು ಸ್ವಯಂ ಪ್ರೇರಿತರಾಗಿ ಅವುಗಳನ್ನು ದೂರವಿರಿಸುವುದು ಒಳ್ಳೆಯದು. ಇನ್ನು ರಸ್ತೆಗೆ ಇಳಿದರೆ ವಿಪರೀತ ವಾಹನಗಳ ಸಂದಣಿ. ಮನೆಗೆ ನೂರು ಮೀಟರ್ ಹತ್ತಿರವಿರುವ ಅಂಗಡಿ ಮುಂಗಟ್ಟುಗಳಿಗೆ ಹೋಗಲು ಕೂಡ ಟೂ ವೀಲರ್ ಗಳನ್ನು ಬಳಸುವುದನ್ನು ನಿಲ್ಲಿಸಬೇಕು. ನಡೆಯುತ್ತಾ ಹೋಗಿ ದಿನಬಳಕೆಯ ವಸ್ತುಗಳನ್ನು ಖರೀದಿಸುವ ಮೂಲಕ ದೈಹಿಕ ಆರೋಗ್ಯದ ಜೊತೆ ಜೊತೆಗೆ ಗಾಡಿಗೆ ಬಳಸುವ ಇಂಧನದ ಖರ್ಚನ್ನು ಕೂಡ ಉಳಿಸಬಹುದು. ಮನೆಯಲ್ಲಿ

Read Post »

You cannot copy content of this page

Scroll to Top