ಕಾವ್ಯಯಾನ
ನಗುವ ತೊಡಿಸಲೆಂದು ಶಾಲಿನಿ ಆರ್. ತಾಳ್ಮೆ ಕಳಕೋತಿದಿನಿ ದಿನದಿಂದ ದಿನಕ್ಕೆ, ಮರೆತೆನೆಂದರು ನೆನಪ ನೋವ ಎಳೆಯ ನೂಲುತಿದೆ ಗೆಳೆಯ, ಬೇಡ ಎನಗಿದು ಬೇಸರದ ಹೊದಿಕೆ ಸ್ವಚ್ಛಂದ ಹಕ್ಕಿಯಿದು ನಭದ ನೀಲಿಯಲಿ ಹಾರುವ ಬಯಕೆ, ಒಲವ ಮಳೆಯಿದು ನನಗಾಗಿ ಕಾಯುತಿದೆ, ಬಣ್ಣದ ಕುಂಚಗಳು ತುಂಟನಗೆ ಬೀರುತಿದೆ, ಅಂಕುಡೊಂಕಿನ ನವಿಲು, ಬಿಂಕ ತೋರಿಅಣಕಿಸುತಿದೆ, ಮನದ ಸಾರಂಗ ಮನಸಾರೆ ತಪಿಸುತಿದೆ, ಕಳೆದ ನೆನ್ನೆಗಳು ನಾಳೆಗಳ ಹುಡುಕುವಂತೆ ಬಾಗಿದ ಬೆನ್ನಿಗಿದು ನೋವಿನ ಕುಣಿಕೆ, ನಾ ಒಲ್ಲೆ ಗೆಳೆಯ ನಾಳೆಯ ಸೂರ್ಯನಿಗೆ ಸುಪಾರಿ ಕೊಟ್ಟು ಬಾರೋ, ನನ್ನೆದೆಯ ನೋವುಗಳ ಕೊಲ್ಲಲ್ಲೆಂದು,ನಗೆಯ ನಗವ ತೊಡಿಸಲೆಂದು… *******
ಮಕ್ಕಳ ಹಾಡು
ನಮ್ಮಯ ಬದುಕು ಮಲಿಕಜಾನ ಶೇಖ ಹಂಸಮ್ಮಾ ಬಂದಳು ಹಂಸಮ್ಮಾ ಕ್ವ್ಯಾಕ್ -ಕ್ವ್ಯಾಕ್ ಕ್ವ್ಯಾಕ್-ಕ್ವ್ಯಾಕ್ ನುಡಿಯುತ್ತಾ ಶ್ವೇತ ಬಣ್ಣ ನನ್ನದು ಹಾಲು-ಮೀನು ಕಂಡರೆ ನಾನು ಕರಿವೆ ಎಂದಳು ಮಕ್ಕಳ-ಮರಿಯನ್ನು. ಹುಂಜಪ್ಪಾ ಬಂದನು ಹುಂಜಪ್ಪಾ ಕುಕ್ಕು-ಕೂ ಕುಕ್ಕು- ಕೂ ಕೂಗುತ್ತಾ ತೆಲೆಯಲಿ ಫುಂಜ ನನ್ನದು ಹುಳವ-ಗಿಳವ ಕಂಡರೆ ನಾನು ಕರಿವೆ ಎಂದನು, ಹೆಂಡತಿ ಮಕ್ಕಳನು. ಕಾಗಣ್ಣ ಬಂದ ಕಾಗಣ್ಣ ಕಾವ್-ಕಾವ್ ಕಾವ್-ಕಾವ್ ಕಿರಚುತ್ತಾ ಕಪ್ಪು ಬಣ್ಣದು ನನ್ನದು ಅನ್ನದ ಅಗಳ ಕಂಡರೆ ನಾನು ಕರಿವೆ ಎಂದನು, ಬಂಧು-ಬಳಗವನು. ಗುಬ್ಬಕ್ಕಾ ಬಂದಳು ಗುಬ್ಬಕ್ಕಾ ಚಿಂವ್-ಚಿಂವ್ ಚಿಂವ್-ಚಿಂವ್ ಎನ್ನುತ್ತಾ ಗುಬ್ಬಿ ಗೂಡು ನನ್ನದು ವೈರಿ-ಗಿರಿಯ ಕಂಡರೆ ನಾನು ಕರಿವೆ ಎಂದಳು ಎಲ್ಲರನು. ಬೇಡಣ್ಣಾ ಬಂದಾ ಬೇಡಣ್ಣಾ ಕೂಗುತ್ತಾ ಬೈಯುತ್ತಾ ಹೊಡೆಯುತ್ತಾ ಮೋಸದ ಬಲೆಯು ನನ್ನದು ಕಾಳನು ತಿನ್ನುತ್ತಾ ಕಂಡರೆ ನಾನು ತಿನ್ನುವೆ ಬೇಯಿಸಿ ನಿಮ್ಮನ್ನು. ಹಾರುತ ಬಂದವು ಹಕ್ಕಿಗಳು ಕರಕರ ಕೊಕ್ಕನ್ನು ಕೆರೆಯುತ್ತಾ ನಮ್ಮಯ ಬದುಕು ನಮಗೆ ಬೀಡು ಸುಮ್ಮನೆ ಹೋಗೊ ಬೇಡಣ್ಣಾ ಇಲ್ಲದಿರೆ…..? ಕರಿವೆವು ನಾವು ಕೊರೋನಾ .. ಕೊರೋನಾ… *******
ಕಾವ್ಯಯಾನ
ಶ್ವೇತಾಂಬರಿ ಸಿಂಧು ಭಾರ್ಗವ್ ಕನಸು ಕಂಗಳ ಚೆಲುವೆ ನಾನು ಬರುವೆನೆಂದು ಹೋದೆ ನೀನು ಮುಗಿಲು ತುಂಬ ಬೆಳ್ಳಿ ಮೋಡ ಕರಗಿ ಬೀಳೋ ಹನಿಯ ನೋಡ ಕಂಬನಿಯ ಒರೆಸುವವರಿಲ್ಲ ಮನದ ಮಾತಿಗೆ ಕಿವಿಗಳಿಲ್ಲ ಹಾರೋ ಹಕ್ಕಿಗೂ ಇದೆ ಗೂಡು ಪ್ರೀತಿ ಹಕ್ಕಿಗಿಲ್ಲಿ ಗೂಡು ಇಲ್ಲ ಒಂಟಿ ಮನಕೆ ಜೊತೆಯಾದೆ ನೀನು ನಗುವ ನೀಡಿ ಹೋದೆಯೇನು ಮಾತು ಮರೆತ ಮನವು ನನ್ನದು ಮಾತು ಕಲಿಸಿ ನಡೆದೆ ನೀನು ಹತ್ತು ಹದಿನಾರು ಕನಸುಗಳು ಮತ್ತೆ ಮೂರು ನನಸುಗಳು ಸುತ್ತ ನಗುವ ಸುಮಗಳು ದುಂಬಿ ಮಾತ್ರ ಬರಲೇ ಇಲ್ಲ ಹೆತ್ತ ಮನೆಯ ತೊರೆದೆ ನಾನು ಹೊತ್ತು ನಡೆದೆ ಕೂಸನು ಎತ್ತ ಸಾಗಲಿ ಕತ್ತಲ ಹಾದಿಯಿದು ಮತ್ತದೇ ಒಂದು ಕವಲುದಾರಿ ಕರುಳ ಬಳ್ಳಿ ಬೆಳೆಯುತಲಿದೆ ನಡೆದು ನಡುಗಿ ಬಸವಳಿದೆ ಮುಂದೆ ಹಾದಿ ಕಾಣದೇ ಆತ್ಮವನ್ನೇ ಹಾರಿಬಿಟ್ಟೆ ಶ್ವೇತಾಂಬರಿ ಈಗ ನಾನು ಗಿರಕಿ ಹೊಡೆವ ಗರುಡಗಳು ನೀ ತಿರುಗಿ ಬರದೇ ಹೋದರೂನು ಹುಡುಕಿ ಬರುವೆ; ?? ಈಗ ಆತ್ಮ ನಾನು!! ********
ಕಾವ್ಯಯಾನ
ಗಝಲ್ ವಿನಿ ಬೆಂಗಳೂರು ಪ್ರಕೃತಿಯೇ ತಾನಾಗಿ ಸೌಂದರ್ಯ ತುಂಬಿದವಳು ತಾಯಿ ಭೂಮಿಯೇ ಅವಳಾಗಿ ಭಾರವನು ಹೊತ್ತವಳು ತಾಯಿ ಸಾವಿಗೂ ಹೆದರದೆ ಹೆರಿಗೆ ನೋವ ನುಂಗುವಳು ತಾಯಿ ಸಾವಿರ ಕನಸು ಕಂಡು ಮಗುವಿನ ಒಳಿತ ಬಯಸುವವಳು ತಾಯಿ ಭವಿಷ್ಯದ ಉತ್ತಮ ವ್ಯಕ್ತಿಯಾಗಲು ಶ್ರಮಿಸುವಳು ತಾಯಿ ಅಕ್ಷರೆ ಪ್ರೀತಿ ಮಮತೆಯ ಧಾರೆ ಎರೆದು ಬೆಳೆಸುವಳು ತಾಯಿ ತನ್ನೆಲ್ಲ ನೋವ ಮರೆತು ನಗುತ ಮುದ್ದು ಮಾಡುವವಳು ತಾಯಿ ಕಷ್ಟವೆಲ್ಲವನು ತಾನೆ ಅನುಭವಿಸುತ ತನ್ನ ಕುಡಿಗಾಗಿ ದುಡಿದವಳು ತಾಯಿ ತನ್ನೆಲ್ಲ ವಾತ್ಸಲ್ಯವನು ಉಣಿಸಿ ಬೆಳೆಸುವವಳು ತಾಯಿ ವಿಜಯಳ ಬಾಳಲಿ ಬೆಳಂದಿಗಳಂತೆ ಬೆಳಗಿದವಳು ತಾಯಿ ***********
ಕಾವ್ಯಯಾನ
ವೈರಾಣು-ಪರಮಾಣು ಉಮೇಶ್ ಮುನವಳ್ಳಿ ಕೆಟ್ಟು ಕೆರವಾದ ಮನಸ್ಥಿತಿಯ ಗುಟ್ಟು, ರಟ್ಟು! ಜತನಮಾಡಿ ಇಟ್ಟಿದ್ದು, ಹಿಡಿ ಹಿಟ್ಟು, ಹಾಲು, ಔಷಧಿ, ಸೋಪು, ಸ್ಯಾನಿಟೈಸರು. ಬೀದಿಗೆ ಬಿದ್ದಿದ್ದು, ಲಿಪ್‌ಸ್ಟಿಕ್, ಪೌಡರ, ಪೇಂಟು, ಫ್ರೆಶ್ನರು! ಗುಡಿ-ಗುಂಡಾರ, ಮಸೀದಿ, ಚರ್ಚು ಸ್ಥಬ್ದ ಅರಿವಿನ ಆಸ್ಧಾನದಲಿ ಮನಸ್ಸು ನಿಶ್ಶಬ್ದ! ತಪ್ಪಿನ ಅರಿವು, ಒಪ್ಪಿನ ಹುಡುಕಾಟ, ಒಪ್ಪತ್ತಿನ ಊಟದ ಹೊಂದಾಣಿಕೆ. ಬೆಳೆದವನ ಮಾಲು, ಮನೆ ಬಾಗಿಲಿಗೆ! ದಲ್ಲಾಳಿಗಳ ಗಲ್ಲಾಪೆಟ್ಟಿಗೆ ಲೂಟಿ. ದೂರದ ಪಯಣ, ದೂರ, ಒಬ್ಬರಿಗೊಬ್ಬರು ದೂರ ದೂರ. “ನಮ್ಮ ಹಳ್ಳಿ ಊರ ನಮಗ ಪಾಡ, ಯಾತಕವ್ವಾ ಹುಬ್ಬಳ್ಳಿ ಧಾರವಾಡ!” ನನ್ನವಳು ನನಗೆ ಚಂದ, ಓಣಿಯ ಹುಡುಗಿ ಬಲು ಅಂದ! ಮನೆಯ ಊಟ ರುಚಿ, ಶುಚಿ ಹೋಟೆಲ್ ಊಟ ಬಾಯಿರುಚಿ ನುಚ್ಚು ನೂರಾದ ಅಹಂ, ಸುರಿದ ಕಣ್ಣೀರು, ಸಿರಿವಂತನ ಎದೆಗೂಡು ಬಡವನ ಸೂರು. ಸಾವೇ ಕಲಿಸಬೇಕಿತ್ತೆ ನಮಗೆ ಆಧ್ಯಾತ್ಮದ ಪಾಠ? ‘ಹಾದಿ ಬೀದಿಗೆ ಬಿದ್ದಿಹುದು’ ಪುಸ್ತಕದ ಬದನೇಕಾಯಿ. ಕೀರ್ತಿ, ಪದವಿ, ಪಾರಿತೋಷಕ ಮಣ್ಣುಪಾಲು ಹೆಣ್ಣು – ಹೊಣ್ಣು – ಮಣ್ಣು – ‘ನಾನು’ ಬೀದಿಪಾಲು ಅನ್ನ ಹಾಕುವ ರೈತ, ಆಶ್ರಯ ನೀಡುವ ತಾಯಿ, ಕಾದುವ ಸೇನಾನಿ, ಕಾಯುವ ಪೋಲೀಸ್, ಶುಶ್ರೂಷೆ ಮಾಡುವ ದಾದಿ, ಚಿಕಿತ್ಸೆ ನೀಡುವ ವೈದ್ಯ ಶವ ಸಂಸ್ಕಾರ ಮಾಡುವ ಸ್ವಯಂ ಸೇವಕ, ಸರ್ವವೇದ್ಯ! ವೈರಾಣು ಕೊರೋನಾ ಇಂದಲ್ಲ ನಾಳೆ ಅಳಿದೀತು ‘ವ್ಯವಸ್ಥೆ’ ಸ್ಫೋಟಕ ಪರಮಾಣು ಅಳಿವುದಿನ್ಯಾವಾಗ? ************
ಕಾವ್ಯಯಾನ
ಗಝಲ್ ಎ.ಹೇಮಗಂಗಾ ಜುಲ್ ಕಾಫಿ಼ಯಾ ಗಜ಼ಲ್………….. ಜಂಜಾಟಗಳ ಒತ್ತಡವೇ ನಿಜಬದುಕೆಂದು ನೆಮ್ಮದಿಯನ್ನೇ ಮರೆತೆ ಅಜ್ಞಾನದ ಕತ್ತಲಕೂಪವೇ ಜಗತ್ತೆಂದು ಜ್ಞಾನಜ್ಯೋತಿಯನ್ನೇ ಮರೆತೆ ಎದುರಾದ ನೂರು ಸಂಕಷ್ಟಗಳು ತಾತ್ಕಾಲಿಕವೆಂಬ ಅರಿವು ಇರಬೇಕಿತ್ತು ನಿನ್ನ ದುಃಖ ವೇದನೆಯೇ ಎಲ್ಲಕಿಂತ ಮಿಗಿಲೆಂದು ನಗುವುದನ್ನೇ ಮರೆತೆ ದ್ವೇಷ ಮದ ಮತ್ಸರಗಳ ಜ್ವಾಲಾಮುಖಿ ಸುಡುವುದಿಲ್ಲವೇ ನಿನ್ನನ್ನು ? ಇತರರ ಅವನತಿಯಲ್ಲೇ ನಲಿವಿದೆಯೆಂದು ಪ್ರೀತಿಯನ್ನೇ ಮರೆತೆ ಮೂರು ದಿನದ ಬಾಳಿನಾಟದಿ ಯಾರೂ ಯಾವುದೂ ಶಾಶ್ವತವಲ್ಲ ಸ್ವಾರ್ಥ ಲಾಲಸೆಯಲ್ಲೇ ಏಳಿಗೆಯಿದೆಯೆಂದು ನಿಸ್ವಾರ್ಥವನ್ನೇ ಮರೆತೆ ಎಚ್ಚರಿಸಬೇಕಿತ್ತು ನಿನ್ನ ಮನಸ್ಸಾಕ್ಷಿ ಎಂದೂ ಕೇಡು ಬಗೆಯದಿರೆಂದು ಪರರ ಸಾವಿನಲ್ಲೇ ಸಾರ್ಥಕತೆ ಇದೆಯೆಂದು ಮಾನವತೆಯನ್ನೇ ಮರೆತೆ *************************************
ಕಾವ್ಯಯಾನ
ನೀರೊಲೆಯ ಮೇಲೆ. ಶಶಿಕಲಾ ವೀ ಹುಡೇದ ನೀರೊಲೆಯ ಮೇಲೆ. ಸೀಗೆಯ ಹೊಗರು ಸುಡುಸುಡು ನೀರು ಬೆರಕೆಯ ಬೇಡುವ ಹೊತ್ತು ಸುಣ್ಣ ನುಂಗಿದ ಹೊಗೆಸುತ್ತಿದ ಗೋಡೆಗಳ ಮೇಲೆ ನೀರ ಹನಿಗಳದೇ ಚಿತ್ತಾರ ಯಾವ ಯುದ್ಧದ ಕತೆಯ ಹೇಳುತ್ತಾವೋ ನೋಡುವ ಕಣ್ಣುಗಳಿಗೆ ಒಂದೊಂದು ರೀತಿಯ ಅರ್ಥ ಉಸಿರಾಡಲು ಒದ್ದಾಡುವ ಒಂದೇ ಒಂದು ಕಿಂಡಿಯ ಕುತ್ತಿಗೆಯ ಮಟ್ಟ ಧೂಳು ಮಸಿಯದೇ ಕಾರುಬಾರು ಹೆಸರೂ ನೆನಪಿರದ ಮುತ್ತಜ್ಜ ಬುನಾದಿ ಹಾಕಿದ ಈ ಬಚ್ಚಲು ಮನೆ ಯಾವ ವಾರಸುದಾರನ ಅವಧಿಗೆ ಏನನು ಸುಖ ಕಂಡಿದೆಯೋ ಯಾರಿಗೂ ನೆನಪಿಲ್ಲ ತಿಕ್ಕಿ ತೊಳೆಯಲು ಹೋಗಿ ಅದೆಷ್ಟು ಬಳೆಗಳು ಚೂರಾಗಿವೆಯೋ ಆ ದೇವರೇ ಬಲ್ಲ! ನೀರು ಕುಡಿದು ಲಡ್ಡಾದ ಕದ ಮುಚ್ಚಿದ ಈ ಕೋಣೆಯೊಳಗೆ ಮಾತ್ರ ಇಷ್ಟು ಹತ್ತಿರ ನಾನು ನನಗೆ ಬಯಲಿನಷ್ಟು ಬೆಳೆದು ಬೆಟ್ಟವಾಗಿ ಬೆತ್ತಲಾಗಿ ಮಲ್ಲಿಕಾರ್ಜುನನಿಗಾಗಿ ಕಾಡುಮೇಡ ಅಲೆದ ಅಕ್ಕ ಫಕ್ಕನೆ ನೆನಪಾಗುತ್ತಾಳೆ ಇದೇ ಬಚ್ಚಲಿನಲ್ಲಿ ಧರ್ಮರಾಯನ ಕೃಪೆ ತುಂಬಿದ ಸಭೆಯೊಳಗೆ ಮುಟ್ಟಾದ ಪಾಂಚಾಲಿ ಗೇಣು ಬಟ್ಟೆಯ ಕರುಣಿಸುವ ಜಾರ ಕೃಷ್ಣನ ಕೈಗಳನು ಹುಡುಕಿ ಕಣ್ಣೀರಿಡುವ ಚಿತ್ರ ಮರೆಯಾಗಲು ಇನ್ನೇಸು ದಿನ ಬೇಕು? ಸೀರೆಯ ಸೆಳೆದ ದುಶ್ಯಾಸನ ದುರುಳನೇ ಸರಿ ಆದರೆ ಒಬ್ಬನಲ್ಲ ಇಬ್ಬರಲ್ಲ ಕೋತ್ವಾಲರಂತಹ ಐವರಿರುವಾಗ ಗಂಡ ಅನ್ನುವುದಕೆ ಏನು ಅರ್ಥ ಹೇಳಿ? ಸ್ವಯಾರ್ಜಿತ ಆಸ್ತಿಯಾಗಿ ಹೋದೆ ನನ್ನ ಬೆತ್ತಲೆ ಮಾಡಲು ಹೋಗಿ ಲೋಕವೇ ಬೆತ್ತಲಾಯಿತಲ್ಲ! ಎನ್ನುವ ಪಾಂಚಾಲಿಯ ಸ್ವಗತಕ್ಕೆ ಯಾರೋ ಸ್ಪೀಕರು ಹಚ್ಚಿದ್ದಾರೆ ಅಹಲ್ಯೆಯ ಸೇರಲು ಹೋಗಿ ಇಂದ್ರ ಸಹಸ್ರಯೋನಿಯಾದದ್ದೇನೋ ಸರಿ ಅವಳೇಕೆ ಕಲ್ಲಾಗಿ ರಾಮನಿಗಾಗಿ ಕಾಯಬೇಕು? ಅಷ್ಟಕ್ಕೂ ಆ ರಾಮನೇನು ಸಾಜೋಗನೆ? ತುಳಿತುಳಿದು ಆಳಲೆಂದು ಹತ್ತತ್ತು ಅವತಾರವೆತ್ತಿ ಮತ್ತೆ ಮತ್ತೆ ಬರುತ್ತಾರಿವರು ಗಂಧರ್ವರ ರತಿಕೇಳಿ ನೋಡಿದ ರೇಣುಕೆ ತಲೆಯನ್ನೇ ಕೊಡಬೇಕಾಗಿತ್ತೆ? ನೂರೆಂಟು ಪ್ರಶ್ನೆಗಳಿವೆ ಉತ್ತರಿಸುವ ಧೀರರಾರೊ ಕಾಣೆ ಕೂಸಾಗಿ ಇದೇ ಬಚ್ಚಲಲ್ಲಿ ಮೂಗು ಹಣೆ ತಿಕ್ಕಿಸಿಕೊಂಡು ಕೆಂಪಾಗಿ ಚಿಟಿಚಿಟಿ ಚೀರಿದ್ದು ದೊಡ್ಡವಳಾದೆನೆಂದು ಹಾಲು ತುಪ್ಪ ಹಾಕಿ ಅರಿಷಿಣವ ಪೂಸಿ ಮೀಯಿಸಿದರು ಮತ್ತೆ ಇದೇ ಬಚ್ಚಲಲ್ಲಿ ಮಣೆಯ ಮೇಲೆ ಸೇಸೆ ವಧುವಾಗಿ ಮಧುವಾಗಿ ಹಣ್ಣಾಗಿ ಹೆಣ್ಣಾಗಿ ಮತ್ತೆ ದಣಿವು ಕಳೆಯಲೆಂದು ಇದೇ ಬಚ್ಚಲಿನ ಸುಡುಸುಡು ನೀರು ಮೀಯಲೆಂದು ಮೀಯಿಸಲೆಂದು ಹುಟ್ಟಿದ ಜೀವವೇ ನೀರೊಲೆಯ ನೆಂಟಸ್ತಿಕೆ ನಿನಗೆ ಕುದಿವ ನೀರಿಗೆ ಬೆರಕೆಯ ಹದ ಅಷ್ಟಕೇ ದಣಿವು ಕಳೆಯಿತೆಂದು ನಿದ್ದೆ ಮಾಡೀಯೆ ಜೋಕೆ! ಸೀತೆ ಸಾವಿತ್ರಿ ದ್ರೌಪದಿ ಅನಸೂಯೆ ಏಸೊಂದು ಮಾದರಿ ನಡುವೆ ನಿನಗಿಷ್ಟ ಬಂದದ್ದು ಆರಿಸಿಕೋ ಪರವಾಗಿಲ್ಲ ನೆನಪಿಡು ಇದು ದಿಗಂತವಿರದ ನಿರ್ಭಯದ ನಿತ್ಯ ವ್ಯವಹಾರ ಇಲ್ಲಿ ನೋವು ಚಿರಾಯುವಾಗಿದೆ ಗೆಳತಿ ಸೀಗೆಯ ಕಡುಹೊಗರು ಈಗಿಲ್ಲದಿರಬಹುದು ಕೆಂಡಸಂಪಿಗೆಯಂಥ ಬೆಂಕಿ ಈಗ ಕಾಣದಿರಬಹುದು ಮಸಿಬಳಿದು ಹುಗಿದ ಹಂಡೆ ಕಾಣೆಯಾಗಿರಬಹುದು ಝಳ ಹೆಚ್ಚುತ್ತಲೇ ಇದೆ ಹೀಗೆ ಈ ಬಚ್ಚಲು ನಮ್ಮೊಳಗಿನ ನಮ್ಮನ್ನು ತಟ್ಟಿ ಎಬ್ಬಿಸುತ್ತಲೇ ಇದೆ ಬೆಚ್ಚಿ ಬೀಳಿಸುತ್ತಲೇ ಇದೆ.. ************
ಕಾವ್ಯಯಾನ
ಪ್ರೇಮದ ಹನಿಗಳು ನಾಗರಾಜ ಹರಪನಹಳ್ಳಿ ಬಿಕೋ ಎನ್ನುವ ರಸ್ತೆಗಳ ಮಧ್ಯೆಯೂ ನಿನ್ನದೇ ಧ್ಯಾನ ಎಂದಾದರೆ ಅದೇ ಪ್ರೀತಿ ; ಮತ್ತಿನ್ನೇನು ಅಲ್ಲ… ಜನ ಮನೆ ಸೇರಿದರು ಸರ್ಕಾರದ ಆದೇಶದಿಂದ ಪ್ರೀತಿಯ ಬಂಧಿಸುವುದು ಕಷ್ಟ ಉರಿ ಬಿಸಿಲಲ್ಲೂ ಮೈತುಂಬ ಹೂ ಹೊದ್ದ ಮರ ನೆರಳ ಚೆಲ್ಲಿ ವಿರಹಿಗೆ ಸಾಂತ್ವಾನ ಹೇಳಿತು ನನ್ನ ಕೂಗಾಟ, ಚರ್ಚೆ ವಾದ ಎಲ್ಲವೂ ನಿನಗಾಗಿ ಪ್ರೇಮ ಹುಲುಮಾನವರಿಗೆ ಅರ್ಥವಾಗುವುದಿಲ್ಲ ದೂರದಿಂದ ಸಂತೈಸುವ ನೀನು ನನ್ನ ತಾಯಿ ಪ್ರೇಮಿ, ಕಡು ವ್ಯಾಮೋಹಿ ಕೊಂಚ ಅಸಮಧಾನಿ ಸಹಜ ಪ್ರೇಮಿಗೆ , ಪ್ರೇಮಿಗಳಿಗೆ ಪಕ್ಕದ ಚೆಲುವೆಯರ ಬಗ್ಗೆ ಅಸಹನೆ ,ಹೊಟ್ಟೆಕಿಚ್ಚು , ಅನುಮಾನಗಳಿರಬೇಕು ತನ್ನ ಸ್ವಾಮಿತ್ಯದ ಹಕ್ಕು ಬಿಟ್ಟುಕೊಡಲಾಗದು ಅದೇ ಪ್ರೇಮದ ಸೊಗಸು ಬಿಕೋ ಎನ್ನುವ ಬೀದಿ ಬರಡಾಗಿದೆ ಬಂಜೆಯಾಗಿದೆ ಮತ್ತೆ ಫಲವತ್ತತೆಗೆ ದಿನಗಳ ಕಾಯಬೇಕು ನಿನಗೆ ಮಕ್ಕಳು ಸಂಬಂಧಿಕರು ತೋಟ, ಗದ್ದೆ,ಮನೆ ಹಾಲು ಮಜ್ಜಿಗೆ ಹೊಟ್ಟೆ ತುಂಬಾ ರೊಟ್ಟಿ ಕೈತುಂಬ ಪ್ರೀತಿಸುವ ಜನ ಸ್ವಲ್ಪ ಯೋಚಿಸು ನನಗಾರು ಇಲ್ಲ ಇಲ್ಲಿ ಪ್ರೀತಿಸುವವರು ನಾನಿಲ್ಲಿ ಅನಾಥನಾಗಿದ್ದೇನೆ ಒಂಟಿಯಾಗಿದ್ದೇನೆ ಇಷ್ಟು ನಿನ್ನ ಮನದಲ್ಲಿ ಸುಳಿದರೂ ಸಾಕು ನಾನು ಧನ್ಯ ನಾನು ನಿನ್ನ ಪ್ರೇಮಿ ಒಲವೇ ತಪ್ಪೇ ಮಾಡದ ನನ್ನ ಮನ್ನಿಸು ನಿನ್ನ ಉಡಿಯೊಳಗಿನ ಬೆಳಕು ನಾನು ನನ್ನ ಹಣತೆ ಮಾಡಿ ನಿನ್ನ ಎದೆಯೊಳಗಿರಿಸು ಪ್ರೀತಿಯ ಎರೆದು ************
ಅನುವಾದ ಸಂಗಾತಿ
ನನ್ನ ಪ್ರಿಯ ಕವಿ ಮೂಲ: ಸರ್ಬಜೀತ್ ಗರ್ಚ ಕನ್ನಡಕ್ಕೆ:ಕಮಲಾಕರ ಕಡವೆ ಬೇಕಾದರೆ ಅವುಗಳನ್ನು ಕವಿತೆ ಎನ್ನಬೇಡಆದರೆ ಬರೆವೆಯಾದರೆ ಬರೆಜೇಬಿನ ಕತ್ತಲೆಗೆ ಬೆಳಕ ಚೆಲ್ಲದಿದ್ದರೂಕೊಂಚ ಬೆಚ್ಚಗಿರುಸುವಂತಸಾಲುಗಳನ್ನು ಹೇಗೆ ನೆಲಹಾಸಿನ ಮೇಲೆ ಬೀಳುವ ಬಿಸಿಲಕೋಲುವರ್ಷಾನುಗಟ್ಟಲೆ ಮುಚ್ಚಿದ್ದ ಕೋಣೆಗೂಹೊರಗೆ ಬೆಳಗುತ್ತಿರುವ ಸೂರ್ಯನಕಾಣುವ ತವಕವನ್ನು ಕೊಟ್ಟಂತೆ ಅಂತಹ ಸಾಲುಗಳುಜೇಬಿನಲ್ಲಿಯೇ ಇದ್ದು ಇದ್ದುಒಂದು ದಿನ ಪಕಳೆಯಾಗಿ ಬಿಡುವವು ಹಾಗೂ ಸೂರ್ಯನಾಗುವನು ಒಂದು ಗುಲಾಬಿಹರಡಿ ಅದರೊಳಗೆಲ್ಲ ತನ್ನ ಕಿರಣ ಕಾಗದ ಅಥವಾ ಜೇಬು ಇಲ್ಲದೆಯೂಅವು ದಿನದಿನವೂ ಬೆಳಗುವವುಅನುದಿನವೂ ನಗುವವು *********
ನಾನು ಓದಿದ ಪುಸ್ತಕ
ಒಡಲಾಳ ದೇವನೂರು ಮಹಾದೇವ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕೆಲವು ಕಥೆಗಳು ಸಾರ್ವಕಾಲಿಕ. ಈ ಕೊರೋನಾ ರಜೆಯಲ್ಲಿ ನಾನು ಓದಿದ ಈ ಕಥೆ ತನ್ನ ಒಡಲಾಳದ ಬದುಕನ್ನ ತುಂಬ ಅದ್ಭುತವಾಗಿ ಹೇಳುವ ‘ದೇವನೂರು ಮಹಾದೇವ’ ಅವರ ರಚಿತ ‘ಒಡಲಾಳ’. ನಾನು ಚಿಕ್ಕವಳಿದ್ದಾಗ ಅಜ್ಜಿ ಮನೆ ಮೂಡಿಗೆರೆಯ ಹತ್ತಿರದ ಹೊಸಮನೆಯಲ್ಲಿ ಕೆಲಕಾಲ ಇದ್ದೆ. ನಾವು ಅವರನ್ನು ‘ಹೊಸಮನೆ ಅಜ್ಜಿ’ ಎಂದೇ ಸಂಬೋಧಿಸುತ್ತಿದ್ದದ್ದು. ಆಗ ಅಜ್ಜಿ ಅವರ ಕಷ್ಟ ಕಾಲದ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು. ಒಂದೊತ್ತಿನ ಊಟಕ್ಕೂ ಕಷ್ಟಪಡುವಂತ ಕಾಲ ಅದು. ಅವ್ರ ಮನೆಯಲ್ಲಿ ತುಂಬ ಜನ ಇದ್ರಂತೆ. ಅವ್ರ ಅಪ್ಪ, ಅಂದ್ರೆ ನನ್ನ ತಾತ. ಹಲಸಿನ ಹಣ್ಣು ಬಿಡುವ ಸಮಯದಲ್ಲಿ ಮನೆಗೆ ದಿನಾಲೂ ಹಣ್ಣು ತರುತ್ತಿದ್ದರಂತೆ.ಆ ಹಣ್ಣನ್ನು ಮಕ್ಳು ಎಷ್ಟೇ ಕೇಳಿಕೊಂಡರೂ ಆ ಕ್ಷಣ ಕಟ್ ಮಾಡದೆ,ಊಟಕ್ಕೆ ಇನ್ನೇನು ೫-೧೦ ನಿಮಿಷ ಇದೆ ಅನ್ನೋವಾಗ ಹಲಸಿನ ಹಣ್ಣನ್ನು ಕಟ್ ಮಾಡಿ ಮಕ್ಕಳಿಗೆಲ್ಲ ತಿನ್ನಲು ಕೊಡ್ತಿದ್ರಂತೆ. ಕಾರಣ ಅವರ ಉದ್ದೇಶ ಎಲ್ಲರೂ ಸ್ವಲ್ಪ ಸ್ವಲ್ಪ ಊಟ ಮಾಡಲೀ ಎಂದಾಗಿತ್ತಂತ್ತೆ. ನನಗೆ ಈ ‘ಒಡಲಾಳ’ದ ಕಡಲೆಕಾಯಿ ತಿನ್ನುವ ಸನ್ನಿವೇಶದಲ್ಲಿ ಅದೆಲ್ಲಾ ನೆನಪಾಗುತ್ತಿತ್ತು. ಒಡಲ ಹಸಿವಿನ ಬೆಂಕಿಗೆ ಎಷ್ಟೊಂದು ದಾಹ! ಈ ಕಥೆಯನ್ನು ಓದುವಾಗ ನಂಗೆ ನಮ್ಮೂರಿನ ಹಳ್ಳಿಯ ಚಿತ್ರಣ, ಅಲ್ಲಿನ ಜನರ ಬದುಕು ಎಲ್ಲ ಕಣ್ಮುಂದೆ ಬರುತ್ತಿತ್ತು. ಪ್ರತಿಯೊಂದು ಸಣ್ಣ ಸಣ್ಣ ಪ್ರಸಂಗವನ್ನೂ ಅಷ್ಟೇ ಅಚ್ಚುಕಟ್ಟಾಗಿ ಕಟ್ಟಿ, ಅದೇ ನಾಜೂಕಿನಿಂದ ಕಣ್ಣ ಮುಂದೆ ನಡೆಯುವಂತೆ ಲೇಖಕರು ಬರೆದಿದ್ದಾರೆ. ಅಲ್ಲಿ ಬರೋ ‘ಸಾಕವ್ವನ ಪಾತ್ರ,ಆಕೆಯ ಅಂತ್ಹ್ಕರಣ ಮನಸೂರೆಗೊಳ್ಳುತ್ತದೆ. ಕೊನೆಗೆ ಕೋಳಿ ಸಿಗಲಿಲ್ಲ ಎಂದಾಗ ನನ್ನ ಮನಸ್ಸಿನಲ್ಲೂ ಬೇಜಾರು. ಅನನ್ಯವಾದ ಭಾಷಾ ಶೈಲಿ ತುಂಬ ಅದ್ಭುತವಾಗಿದೆ. ಬೈಗುಳಗಳು,ಶಪಿಸುವಿಕೆ ಎಲ್ಲವೂ ಅಲ್ಲಿನ ಭಾಷೆಯ ಸೊಗಡನ್ನು ಬಿಂಬಿಸುತ್ತವೆ. ವಿನೋದದ ನಡುವೆಯೂ ಕ್ರೌರ್ಯದ ಅನಾವರಣವಿದೆ. ನಂಗೆ ಈ ಕಥೆಯ ಕೆಲವು ಪ್ರಸಂಗಗಳು ತುಂಬಾ ವಿಶೇಷವಾಗಿ ಕಾಣಿಸುತ್ತದೆ ಅಂತೇನೂ ಅನ್ನಿಸಲಿಲ್ಲ. ಯಾಕೆಂದರೆ ನಾನು ಕೂಡ ಹೆಚ್ಚು ಕಡಿಮೆ ಅದೇ ರೀತಿಯ ವಾತಾವರಣದಲ್ಲಿ ಬೆಳೆದ ಹುಡುಗಿ. ಹೆಚ್ಚೆಂದರೆ ಮಲೆನಾಡು. ಅಲ್ಲಿನ ವ್ಯಥೆ ಬೇರೆ ಆಯಾಮಗಳುಳ್ಳದ್ದು. ಸಾಕಮ್ಮ ಬೆಳಿಗ್ಗೆ ಅವಳ ಮಕ್ಕಳು,ಸೊಸೆಯಂದಿರ ಜೊತೆ ಜಗಳವಾಡಿ, ರಾತ್ರಿ ಅದನ್ನು ಮರೆತು (ಅಥವಾ ಬಡತನ ಅಂತದ್ದನ್ನೆಲ್ಲ ಮರೆಸಿ) ಅವರೆಲ್ಲರೊಟ್ಟಿಗೆ ಕೂತು, ಕದ್ದ ಕಡಲೇಕಾಯಿಯನ್ನ ಹಂಚಿ ತಿನ್ನುತ್ತಾಳೆ. ಈ ಉದಾರತೆಯನ್ನು ನಾವು ಕಥೆಯಲ್ಲಿ ಕಾಣಬಹುದು.ಇದು ಹಳ್ಳಿಯ ಹಟ್ಟಿಗಳ ಬದುಕು. ಈ ಕಥೆಯಲ್ಲಿ ಬರೋ ಗೌರಮ್ಮನ ಮಗ ‘ದುಪ್ಟಿಕಮೀಷ್ನರ್’ ಹೆಸರು ಇಷ್ಟವಾಯಿತು. ಈ ಹಳ್ಳಿ ಜನರು ಆಕಾರ,ಅಂದ,ಚಂದಗಳಿಗೆ ಅನುಗುಣವಾಗಿ ಅನ್ವರ್ಥ ನಾಮಗಳನ್ನು ಒಳ್ಳೆ ಇಟ್ಟಿರುತ್ತಾರೆ.ಅದರಲ್ಲಿ ಅವರದು ಪಿಎಚ್ಡಿ ಪ್ರೌಢಿಮೆ! ಕಡ್ಲೇಕಾಯಿಯ ತಿನ್ನುವ ಪ್ರಸಂಗ ನಮಗೆ ಆಗಿನ ಬಡವರ ಬದುಕನ್ನು, ಅಲ್ಲಿನ ಕಷ್ಟಗಳನ್ನು ತುಂಬ ಚೆನ್ನಾಗಿ ಅರ್ಥೈಸುತ್ತದೆ. ‘ಒಂದೊಂತ್ತಿನ ಊಟಕ್ಕೂ ಕಷ್ಟಪಡುವಂತ ಬದುಕು ಅದು ಅಲ್ವಾ’? ಅಂತ ಅನ್ನಿಸಿತು. ಮತ್ತೆ ಕೊನೆಯಲ್ಲಿ ಸಾಕವ್ವನ ಮನೆಗೆ ಪೋಲಿಸರು ಬಂದಾಗ, ಆ ಮುಗ್ಧ ಜನ ಭಯಪಡುವ ರೀತಿ ಓದುಗರಿಗೆ ಅವರ ಮೇಲೆ ಅನುಕಂಪ ಹುಟ್ಟಿಸುತ್ತದೆ. ಇದು ಬರೀ ಸಾಕವ್ವನ ಮನೆ ಕತೆಯಲ್ಲ. ಇದು ಹಳ್ಳಿಗಳ ಬಹುತೇಕ ಮುಗ್ಧ ಕುಟುಂಬಗಳ ಬದುಕೂ ಹೀಗೆಯೇ ಇರುತ್ತದೆ ಎಂಬುದು ನನ್ನ ಊಹೆಗೂ ನಿಲುಕದ ವಿಚಾರ. ************** ಶಾದ್ವಲೆ ಭಾಗ್ಯ. ಎಚ್. ಸಿ.
