ವೈರಾಣು-ಪರಮಾಣು
ಉಮೇಶ್ ಮುನವಳ್ಳಿ
ಕೆಟ್ಟು ಕೆರವಾದ ಮನಸ್ಥಿತಿಯ ಗುಟ್ಟು, ರಟ್ಟು!
ಜತನಮಾಡಿ ಇಟ್ಟಿದ್ದು, ಹಿಡಿ ಹಿಟ್ಟು, ಹಾಲು, ಔಷಧಿ, ಸೋಪು, ಸ್ಯಾನಿಟೈಸರು.
ಬೀದಿಗೆ ಬಿದ್ದಿದ್ದು, ಲಿಪ್‌ಸ್ಟಿಕ್, ಪೌಡರ, ಪೇಂಟು, ಫ್ರೆಶ್ನರು!
ಗುಡಿ-ಗುಂಡಾರ, ಮಸೀದಿ, ಚರ್ಚು ಸ್ಥಬ್ದ
ಅರಿವಿನ ಆಸ್ಧಾನದಲಿ ಮನಸ್ಸು ನಿಶ್ಶಬ್ದ!
ತಪ್ಪಿನ ಅರಿವು, ಒಪ್ಪಿನ ಹುಡುಕಾಟ,
ಒಪ್ಪತ್ತಿನ ಊಟದ ಹೊಂದಾಣಿಕೆ.
ಬೆಳೆದವನ ಮಾಲು, ಮನೆ ಬಾಗಿಲಿಗೆ!
ದಲ್ಲಾಳಿಗಳ ಗಲ್ಲಾಪೆಟ್ಟಿಗೆ ಲೂಟಿ.
ದೂರದ ಪಯಣ, ದೂರ,
ಒಬ್ಬರಿಗೊಬ್ಬರು ದೂರ ದೂರ.
“ನಮ್ಮ ಹಳ್ಳಿ ಊರ ನಮಗ ಪಾಡ,
ಯಾತಕವ್ವಾ ಹುಬ್ಬಳ್ಳಿ ಧಾರವಾಡ!”
ನನ್ನವಳು ನನಗೆ ಚಂದ,
ಓಣಿಯ ಹುಡುಗಿ ಬಲು ಅಂದ!
ಮನೆಯ ಊಟ ರುಚಿ, ಶುಚಿ
ಹೋಟೆಲ್ ಊಟ ಬಾಯಿರುಚಿ
ನುಚ್ಚು ನೂರಾದ ಅಹಂ, ಸುರಿದ ಕಣ್ಣೀರು,
ಸಿರಿವಂತನ ಎದೆಗೂಡು ಬಡವನ ಸೂರು.
ಸಾವೇ ಕಲಿಸಬೇಕಿತ್ತೆ ನಮಗೆ ಆಧ್ಯಾತ್ಮದ ಪಾಠ?
‘ಹಾದಿ ಬೀದಿಗೆ ಬಿದ್ದಿಹುದು’ ಪುಸ್ತಕದ ಬದನೇಕಾಯಿ.
ಕೀರ್ತಿ, ಪದವಿ, ಪಾರಿತೋಷಕ ಮಣ್ಣುಪಾಲು
ಹೆಣ್ಣು – ಹೊಣ್ಣು – ಮಣ್ಣು – ‘ನಾನು’ ಬೀದಿಪಾಲು
ಅನ್ನ ಹಾಕುವ ರೈತ, ಆಶ್ರಯ ನೀಡುವ ತಾಯಿ,
ಕಾದುವ ಸೇನಾನಿ, ಕಾಯುವ ಪೋಲೀಸ್,
ಶುಶ್ರೂಷೆ ಮಾಡುವ ದಾದಿ, ಚಿಕಿತ್ಸೆ ನೀಡುವ ವೈದ್ಯ
ಶವ ಸಂಸ್ಕಾರ ಮಾಡುವ ಸ್ವಯಂ ಸೇವಕ, ಸರ್ವವೇದ್ಯ!
ವೈರಾಣು ಕೊರೋನಾ ಇಂದಲ್ಲ ನಾಳೆ ಅಳಿದೀತು
‘ವ್ಯವಸ್ಥೆ’ ಸ್ಫೋಟಕ ಪರಮಾಣು ಅಳಿವುದಿನ್ಯಾವಾಗ?
************
- ಉಮೇಶ ಮುನವಳ್ಳಿ