ಗಝಲ್
ಎ.ಹೇಮಗಂಗಾ
ಜುಲ್ ಕಾಫಿ಼ಯಾ ಗಜ಼ಲ್…………..
ಜಂಜಾಟಗಳ ಒತ್ತಡವೇ ನಿಜಬದುಕೆಂದು ನೆಮ್ಮದಿಯನ್ನೇ ಮರೆತೆ
ಅಜ್ಞಾನದ ಕತ್ತಲಕೂಪವೇ ಜಗತ್ತೆಂದು ಜ್ಞಾನಜ್ಯೋತಿಯನ್ನೇ ಮರೆತೆ
ಎದುರಾದ ನೂರು ಸಂಕಷ್ಟಗಳು ತಾತ್ಕಾಲಿಕವೆಂಬ ಅರಿವು ಇರಬೇಕಿತ್ತು
ನಿನ್ನ ದುಃಖ ವೇದನೆಯೇ ಎಲ್ಲಕಿಂತ ಮಿಗಿಲೆಂದು ನಗುವುದನ್ನೇ ಮರೆತೆ
ದ್ವೇಷ ಮದ ಮತ್ಸರಗಳ ಜ್ವಾಲಾಮುಖಿ ಸುಡುವುದಿಲ್ಲವೇ ನಿನ್ನನ್ನು ?
ಇತರರ ಅವನತಿಯಲ್ಲೇ ನಲಿವಿದೆಯೆಂದು ಪ್ರೀತಿಯನ್ನೇ ಮರೆತೆ
ಮೂರು ದಿನದ ಬಾಳಿನಾಟದಿ ಯಾರೂ ಯಾವುದೂ ಶಾಶ್ವತವಲ್ಲ
ಸ್ವಾರ್ಥ ಲಾಲಸೆಯಲ್ಲೇ ಏಳಿಗೆಯಿದೆಯೆಂದು ನಿಸ್ವಾರ್ಥವನ್ನೇ ಮರೆತೆ
ಎಚ್ಚರಿಸಬೇಕಿತ್ತು ನಿನ್ನ ಮನಸ್ಸಾಕ್ಷಿ ಎಂದೂ ಕೇಡು ಬಗೆಯದಿರೆಂದು
ಪರರ ಸಾವಿನಲ್ಲೇ ಸಾರ್ಥಕತೆ ಇದೆಯೆಂದು ಮಾನವತೆಯನ್ನೇ ಮರೆತೆ
*************************************