ನನ್ನ ಪ್ರಿಯ ಕವಿ
ಮೂಲ: ಸರ್ಬಜೀತ್ ಗರ್ಚ
ಕನ್ನಡಕ್ಕೆ:ಕಮಲಾಕರ ಕಡವೆ
ಬೇಕಾದರೆ ಅವುಗಳನ್ನು ಕವಿತೆ ಎನ್ನಬೇಡ
ಆದರೆ ಬರೆವೆಯಾದರೆ ಬರೆ
ಜೇಬಿನ ಕತ್ತಲೆಗೆ ಬೆಳಕ ಚೆಲ್ಲದಿದ್ದರೂ
ಕೊಂಚ ಬೆಚ್ಚಗಿರುಸುವಂತ
ಸಾಲುಗಳನ್ನು
ಹೇಗೆ ನೆಲಹಾಸಿನ ಮೇಲೆ ಬೀಳುವ ಬಿಸಿಲಕೋಲು
ವರ್ಷಾನುಗಟ್ಟಲೆ ಮುಚ್ಚಿದ್ದ ಕೋಣೆಗೂ
ಹೊರಗೆ ಬೆಳಗುತ್ತಿರುವ ಸೂರ್ಯನ
ಕಾಣುವ ತವಕವನ್ನು ಕೊಟ್ಟಂತೆ
ಅಂತಹ ಸಾಲುಗಳು
ಜೇಬಿನಲ್ಲಿಯೇ ಇದ್ದು ಇದ್ದು
ಒಂದು ದಿನ ಪಕಳೆಯಾಗಿ ಬಿಡುವವು
ಹಾಗೂ ಸೂರ್ಯನಾಗುವನು ಒಂದು ಗುಲಾಬಿ
ಹರಡಿ ಅದರೊಳಗೆಲ್ಲ ತನ್ನ ಕಿರಣ
ಕಾಗದ ಅಥವಾ ಜೇಬು ಇಲ್ಲದೆಯೂ
ಅವು ದಿನದಿನವೂ ಬೆಳಗುವವು
ಅನುದಿನವೂ ನಗುವವು
*********