ಕಾವ್ಯಯಾನ

ಶ್ವೇತಾಂಬರಿ

ಸಿಂಧು ಭಾರ್ಗವ್

ಕನಸು ಕಂಗಳ ಚೆಲುವೆ ನಾನು
ಬರುವೆನೆಂದು ಹೋದೆ ನೀನು
ಮುಗಿಲು ತುಂಬ ಬೆಳ್ಳಿ ಮೋಡ
ಕರಗಿ ಬೀಳೋ ಹನಿಯ ನೋಡ

ಕಂಬನಿಯ ಒರೆಸುವವರಿಲ್ಲ
ಮನದ ಮಾತಿಗೆ ಕಿವಿಗಳಿಲ್ಲ
ಹಾರೋ ಹಕ್ಕಿಗೂ ಇದೆ ಗೂಡು
ಪ್ರೀತಿ ಹಕ್ಕಿಗಿಲ್ಲಿ ಗೂಡು ಇಲ್ಲ

ಒಂಟಿ ಮನಕೆ ಜೊತೆಯಾದೆ ನೀನು
ನಗುವ ನೀಡಿ ಹೋದೆಯೇನು
ಮಾತು ಮರೆತ ಮನವು ನನ್ನದು
ಮಾತು ಕಲಿಸಿ ನಡೆದೆ ನೀನು

ಹತ್ತು ಹದಿನಾರು ಕನಸುಗಳು
ಮತ್ತೆ ಮೂರು ನನಸುಗಳು
ಸುತ್ತ ನಗುವ ಸುಮಗಳು
ದುಂಬಿ ಮಾತ್ರ ಬರಲೇ ಇಲ್ಲ

ಹೆತ್ತ ಮನೆಯ ತೊರೆದೆ ನಾನು
ಹೊತ್ತು ನಡೆದೆ ಕೂಸನು
ಎತ್ತ ಸಾಗಲಿ ಕತ್ತಲ ಹಾದಿಯಿದು
ಮತ್ತದೇ ಒಂದು ಕವಲುದಾರಿ

ಕರುಳ ಬಳ್ಳಿ ಬೆಳೆಯುತಲಿದೆ
ನಡೆದು ನಡುಗಿ ಬಸವಳಿದೆ
ಮುಂದೆ ಹಾದಿ ಕಾಣದೇ
ಆತ್ಮವನ್ನೇ ಹಾರಿ‌ಬಿಟ್ಟೆ

ಶ್ವೇತಾಂಬರಿ ಈಗ ನಾನು
ಗಿರಕಿ ಹೊಡೆವ ಗರುಡಗಳು
ನೀ ತಿರುಗಿ‌ ಬರದೇ ಹೋದರೂನು
ಹುಡುಕಿ ಬರುವೆ; ?? ಈಗ ಆತ್ಮ ನಾನು!!

********

Leave a Reply

Back To Top