ಪ್ರೇಮದ ಹನಿಗಳು

ನಾಗರಾಜ ಹರಪನಹಳ್ಳಿ
ಬಿಕೋ ಎನ್ನುವ ರಸ್ತೆಗಳ
ಮಧ್ಯೆಯೂ ನಿನ್ನದೇ ಧ್ಯಾನ
ಎಂದಾದರೆ
ಅದೇ ಪ್ರೀತಿ ;
ಮತ್ತಿನ್ನೇನು ಅಲ್ಲ…
ಜನ ಮನೆ ಸೇರಿದರು
ಸರ್ಕಾರದ ಆದೇಶದಿಂದ
ಪ್ರೀತಿಯ ಬಂಧಿಸುವುದು ಕಷ್ಟ
ಉರಿ ಬಿಸಿಲಲ್ಲೂ ಮೈತುಂಬ
ಹೂ ಹೊದ್ದ ಮರ
ನೆರಳ ಚೆಲ್ಲಿ
ವಿರಹಿಗೆ ಸಾಂತ್ವಾನ ಹೇಳಿತು

ನನ್ನ ಕೂಗಾಟ, ಚರ್ಚೆ
ವಾದ ಎಲ್ಲವೂ ನಿನಗಾಗಿ
ಪ್ರೇಮ ಹುಲುಮಾನವರಿಗೆ
ಅರ್ಥವಾಗುವುದಿಲ್ಲ
ದೂರದಿಂದ ಸಂತೈಸುವ
ನೀನು ನನ್ನ ತಾಯಿ
ಪ್ರೇಮಿ, ಕಡು ವ್ಯಾಮೋಹಿ
ಕೊಂಚ ಅಸಮಧಾನಿ
ಸಹಜ
ಪ್ರೇಮಿಗೆ , ಪ್ರೇಮಿಗಳಿಗೆ
ಪಕ್ಕದ ಚೆಲುವೆಯರ ಬಗ್ಗೆ
ಅಸಹನೆ ,ಹೊಟ್ಟೆಕಿಚ್ಚು ,
ಅನುಮಾನಗಳಿರಬೇಕು
ತನ್ನ ಸ್ವಾಮಿತ್ಯದ ಹಕ್ಕು
ಬಿಟ್ಟುಕೊಡಲಾಗದು
ಅದೇ ಪ್ರೇಮದ ಸೊಗಸು
ಬಿಕೋ ಎನ್ನುವ ಬೀದಿ
ಬರಡಾಗಿದೆ ಬಂಜೆಯಾಗಿದೆ
ಮತ್ತೆ ಫಲವತ್ತತೆಗೆ ದಿನಗಳ ಕಾಯಬೇಕು

ನಿನಗೆ ಮಕ್ಕಳು ಸಂಬಂಧಿಕರು
ತೋಟ, ಗದ್ದೆ,ಮನೆ
ಹಾಲು ಮಜ್ಜಿಗೆ
ಹೊಟ್ಟೆ ತುಂಬಾ ರೊಟ್ಟಿ
ಕೈತುಂಬ ಪ್ರೀತಿಸುವ ಜನ
ಸ್ವಲ್ಪ ಯೋಚಿಸು
ನನಗಾರು ಇಲ್ಲ ಇಲ್ಲಿ
ಪ್ರೀತಿಸುವವರು
ನಾನಿಲ್ಲಿ ಅನಾಥನಾಗಿದ್ದೇನೆ
ಒಂಟಿಯಾಗಿದ್ದೇನೆ
ಇಷ್ಟು ನಿನ್ನ ಮನದಲ್ಲಿ ಸುಳಿದರೂ ಸಾಕು
ನಾನು ಧನ್ಯ
ನಾನು ನಿನ್ನ ಪ್ರೇಮಿ
ಒಲವೇ
ತಪ್ಪೇ ಮಾಡದ ನನ್ನ ಮನ್ನಿಸು
ನಿನ್ನ ಉಡಿಯೊಳಗಿನ ಬೆಳಕು ನಾನು
ನನ್ನ ಹಣತೆ ಮಾಡಿ
ನಿನ್ನ ಎದೆಯೊಳಗಿರಿಸು
ಪ್ರೀತಿಯ ಎರೆದು
************