ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಡಲಾಳ

ದೇವನೂರು ಮಹಾದೇವ

Rising Intolerance:Kannada Litterateur Devanur Mahadeva To Return ...

ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕೆಲವು ಕಥೆಗಳು ಸಾರ್ವಕಾಲಿಕ. ಈ ಕೊರೋನಾ ರಜೆಯಲ್ಲಿ ನಾನು ಓದಿದ ಈ ಕಥೆ ತನ್ನ ಒಡಲಾಳದ ಬದುಕನ್ನ ತುಂಬ ಅದ್ಭುತವಾಗಿ ಹೇಳುವ ‘ದೇವನೂರು ಮಹಾದೇವ’ ಅವರ ರಚಿತ ‘ಒಡಲಾಳ’.

ನಾನು ಚಿಕ್ಕವಳಿದ್ದಾಗ ಅಜ್ಜಿ ಮನೆ ಮೂಡಿಗೆರೆಯ ಹತ್ತಿರದ ಹೊಸಮನೆಯಲ್ಲಿ ಕೆಲಕಾಲ ಇದ್ದೆ. ನಾವು ಅವರನ್ನು ‘ಹೊಸಮನೆ ಅಜ್ಜಿ’ ಎಂದೇ ಸಂಬೋಧಿಸುತ್ತಿದ್ದದ್ದು. ಆಗ ಅಜ್ಜಿ ಅವರ ಕಷ್ಟ ಕಾಲದ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು. ಒಂದೊತ್ತಿನ ಊಟಕ್ಕೂ ಕಷ್ಟಪಡುವಂತ ಕಾಲ ಅದು. ಅವ್ರ ಮನೆಯಲ್ಲಿ ತುಂಬ ಜನ ಇದ್ರಂತೆ. ಅವ್ರ ಅಪ್ಪ, ಅಂದ್ರೆ ನನ್ನ ತಾತ. ಹಲಸಿನ ಹಣ್ಣು ಬಿಡುವ ಸಮಯದಲ್ಲಿ ಮನೆಗೆ ದಿನಾಲೂ ಹಣ್ಣು ತರುತ್ತಿದ್ದರಂತೆ.ಆ ಹಣ್ಣನ್ನು ಮಕ್ಳು ಎಷ್ಟೇ ಕೇಳಿಕೊಂಡರೂ ಆ ಕ್ಷಣ ಕಟ್ ಮಾಡದೆ,ಊಟಕ್ಕೆ ಇನ್ನೇನು ೫-೧೦ ನಿಮಿಷ ಇದೆ ಅನ್ನೋವಾಗ ಹಲಸಿನ ಹಣ್ಣನ್ನು ಕಟ್ ಮಾಡಿ ಮಕ್ಕಳಿಗೆಲ್ಲ ತಿನ್ನಲು ಕೊಡ್ತಿದ್ರಂತೆ. ಕಾರಣ ಅವರ ಉದ್ದೇಶ ಎಲ್ಲರೂ ಸ್ವಲ್ಪ ಸ್ವಲ್ಪ ಊಟ ಮಾಡಲೀ ಎಂದಾಗಿತ್ತಂತ್ತೆ.

ನನಗೆ ಈ ‘ಒಡಲಾಳ’ದ ಕಡಲೆಕಾಯಿ ತಿನ್ನುವ ಸನ್ನಿವೇಶದಲ್ಲಿ ಅದೆಲ್ಲಾ ನೆನಪಾಗುತ್ತಿತ್ತು. ಒಡಲ ಹಸಿವಿನ ಬೆಂಕಿಗೆ ಎಷ್ಟೊಂದು ದಾಹ!

ಈ ಕಥೆಯನ್ನು ಓದುವಾಗ ನಂಗೆ ನಮ್ಮೂರಿನ ಹಳ್ಳಿಯ ಚಿತ್ರಣ, ಅಲ್ಲಿನ ಜನರ ಬದುಕು ಎಲ್ಲ ಕಣ್ಮುಂದೆ ಬರುತ್ತಿತ್ತು. ಪ್ರತಿಯೊಂದು ಸಣ್ಣ ಸಣ್ಣ ಪ್ರಸಂಗವನ್ನೂ ಅಷ್ಟೇ ಅಚ್ಚುಕಟ್ಟಾಗಿ ಕಟ್ಟಿ, ಅದೇ ನಾಜೂಕಿನಿಂದ ಕಣ್ಣ ಮುಂದೆ ನಡೆಯುವಂತೆ ಲೇಖಕರು ಬರೆದಿದ್ದಾರೆ.
ಅಲ್ಲಿ ಬರೋ ‘ಸಾಕವ್ವನ ಪಾತ್ರ,ಆಕೆಯ ಅಂತ್ಹ್ಕರಣ ಮನಸೂರೆಗೊಳ್ಳುತ್ತದೆ. ಕೊನೆಗೆ ಕೋಳಿ ಸಿಗಲಿಲ್ಲ ಎಂದಾಗ ನನ್ನ ಮನಸ್ಸಿನಲ್ಲೂ ಬೇಜಾರು. ಅನನ್ಯವಾದ ಭಾಷಾ ಶೈಲಿ ತುಂಬ ಅದ್ಭುತವಾಗಿದೆ. ಬೈಗುಳಗಳು,ಶಪಿಸುವಿಕೆ ಎಲ್ಲವೂ ಅಲ್ಲಿನ ಭಾಷೆಯ ಸೊಗಡನ್ನು ಬಿಂಬಿಸುತ್ತವೆ. ವಿನೋದದ ನಡುವೆಯೂ ಕ್ರೌರ್ಯದ ಅನಾವರಣವಿದೆ.

ನಂಗೆ ಈ ಕಥೆಯ ಕೆಲವು ಪ್ರಸಂಗಗಳು ತುಂಬಾ ವಿಶೇಷವಾಗಿ ಕಾಣಿಸುತ್ತದೆ ಅಂತೇನೂ ಅನ್ನಿಸಲಿಲ್ಲ. ಯಾಕೆಂದರೆ ನಾನು ಕೂಡ ಹೆಚ್ಚು ಕಡಿಮೆ ಅದೇ ರೀತಿಯ ವಾತಾವರಣದಲ್ಲಿ ಬೆಳೆದ ಹುಡುಗಿ. ಹೆಚ್ಚೆಂದರೆ ಮಲೆನಾಡು. ಅಲ್ಲಿನ ವ್ಯಥೆ ಬೇರೆ ಆಯಾಮಗಳುಳ್ಳದ್ದು.

ಸಾಕಮ್ಮ ಬೆಳಿಗ್ಗೆ ಅವಳ ಮಕ್ಕಳು,ಸೊಸೆಯಂದಿರ ಜೊತೆ ಜಗಳವಾಡಿ, ರಾತ್ರಿ ಅದನ್ನು ಮರೆತು (ಅಥವಾ ಬಡತನ ಅಂತದ್ದನ್ನೆಲ್ಲ ಮರೆಸಿ) ಅವರೆಲ್ಲರೊಟ್ಟಿಗೆ ಕೂತು, ಕದ್ದ ಕಡಲೇಕಾಯಿಯನ್ನ ಹಂಚಿ ತಿನ್ನುತ್ತಾಳೆ. ಈ ಉದಾರತೆಯನ್ನು ನಾವು ಕಥೆಯಲ್ಲಿ ಕಾಣಬಹುದು.ಇದು ಹಳ್ಳಿಯ ಹಟ್ಟಿಗಳ ಬದುಕು.

ಈ ಕಥೆಯಲ್ಲಿ ಬರೋ ಗೌರಮ್ಮನ ಮಗ ‘ದುಪ್ಟಿಕಮೀಷ್ನರ್’ ಹೆಸರು ಇಷ್ಟವಾಯಿತು. ಈ ಹಳ್ಳಿ ಜನರು ಆಕಾರ,ಅಂದ,ಚಂದಗಳಿಗೆ ಅನುಗುಣವಾಗಿ ಅನ್ವರ್ಥ ನಾಮಗಳನ್ನು ಒಳ್ಳೆ ಇಟ್ಟಿರುತ್ತಾರೆ.ಅದರಲ್ಲಿ ಅವರದು ಪಿಎಚ್ಡಿ ಪ್ರೌಢಿಮೆ!

ಕಡ್ಲೇಕಾಯಿಯ ತಿನ್ನುವ ಪ್ರಸಂಗ ನಮಗೆ ಆಗಿನ ಬಡವರ ಬದುಕನ್ನು, ಅಲ್ಲಿನ ಕಷ್ಟಗಳನ್ನು ತುಂಬ ಚೆನ್ನಾಗಿ ಅರ್ಥೈಸುತ್ತದೆ. ‘ಒಂದೊಂತ್ತಿನ ಊಟಕ್ಕೂ ಕಷ್ಟಪಡುವಂತ ಬದುಕು ಅದು ಅಲ್ವಾ’? ಅಂತ ಅನ್ನಿಸಿತು.
ಮತ್ತೆ ಕೊನೆಯಲ್ಲಿ ಸಾಕವ್ವನ ಮನೆಗೆ ಪೋಲಿಸರು ಬಂದಾಗ, ಆ ಮುಗ್ಧ ಜನ ಭಯಪಡುವ ರೀತಿ ಓದುಗರಿಗೆ ಅವರ ಮೇಲೆ ಅನುಕಂಪ ಹುಟ್ಟಿಸುತ್ತದೆ.

ಇದು ಬರೀ ಸಾಕವ್ವನ ಮನೆ ಕತೆಯಲ್ಲ. ಇದು ಹಳ್ಳಿಗಳ ಬಹುತೇಕ ಮುಗ್ಧ ಕುಟುಂಬಗಳ ಬದುಕೂ ಹೀಗೆಯೇ ಇರುತ್ತದೆ ಎಂಬುದು ನನ್ನ ಊಹೆಗೂ ನಿಲುಕದ ವಿಚಾರ.

**************

ಶಾದ್ವಲೆ ಭಾಗ್ಯ. ಎಚ್. ಸಿ.

About The Author

Leave a Reply

You cannot copy content of this page

Scroll to Top