ಅಂಕ(ಣ)ದ ಪರದೆ ಸರಿಯುವ ಮುನ್ನ.

ಸಂಗಾತಿ ಸಾಹಿತ್ಯ ಪತ್ರಿಕೆಯನ್ನು ಅದರ ನಿಲುವನ್ನೂ ಹಲವು ಗೆಳೆಯರು ಗಮನಿಸಿರಬಹುದು. ಸದಾ ಹೊಸ ಆಲೋಚನೆಗಳಿಗೆ ಮತ್ತು ಆಧುನಿಕ ಕಾಲದ ಸಂವೇದನೆಗೆ ವೇದಿಕೆಯಾಗಿರ ಬಯಸುವ ಸಂಗಾತಿ ಸ್ಥಾಪಿತ ಹಿತಾಸಕ್ತಿಗಳನ್ನು ಮತ್ತು ಬರಿಯ ತೋರಿಕೆಯನ್ನು  ಎಂದಿಗೂ ಎತ್ತಿಹಿಡಿದಿಲ್ಲ.

ಅವರು ಇವರು ಎಂದಲ್ಲ. ಫೇಸ್ಬುಕ್ ಈ ನಡುವೆ ಬಹುತೇಕರ ನಿರಂತರ ನಿಲುದಾಣ, ತಂಗುದಾಣ, ಹಾಗೂ ಅಭ್ಯಾಸದ ಮೈದಾನವೂ ಆಗಿದೆ. ಹಲವರನ್ನು  ಫಾಲೋ ಮಾಡುತ್ತ ಅವರ ರಚನೆಗಳನ್ನು ಗಮನಿಸಿದರೆ ದಿನದಿಂದ ದಿನಕ್ಕೆ ಪ್ರಭೃದ್ಧರಾಗುತ್ತಿರುವ ಹಲವರಿದ್ದಾರೆ. ಇನ್ನು ಒಂದೋ ಎರಡೋ ಸಂಕಲನ ತಂದೂ ಫೇಸ್ಬುಕ್ಕಲ್ಲಿ ಕ್ರಿಯಾಶೀಲರಾಗಿ ಇರುವ ಹಲವರಿದ್ದಾರೆ.

ಇಂಥ ಎಲೆ ಮರೆಯ ಪ್ರತಿಭೆಗಳನ್ನು ಅವರು ಪ್ರಕಟಿಸಿರುವ ಕವಿತೆಗಳ ಅವಲೋಕನದ ಜೊತೆಗೆ ಪರಿಚಯಿಸುವ ಇರಾದೆಯಿಂದ ಹುಟ್ಟಿದ್ದು ಈ ಅಂಕಣ “ಹೊಸ ದನಿ – ಹೊಸ ಬನಿ”. ಈ ಶೀರ್ಷಿಕೆ ಹೊಳೆದದ್ದು ಕೂಡ ಆಕಸ್ಮಿಕವೇನಲ್ಲ. ಖ್ಯಾತ ಕವಿ ಶ್ರೀ ಜಿ ಕೆ ರವೀಂದ್ರ ಕುಮಾರ್ ಬೆಂಗಳೂರು ಆಕಾಶವಾಣಿ ನಿರ್ದೇಶಕರಾಗಿ ನಿಯುಕ್ತರಾದಾಗ ಅವರ ಜೊತೆಯಾದವರು ಮತ್ತೊಬ್ಬ ಪ್ರತಿಭೆ ಡಾ.ಎನ್.ರಘು. ಅದ್ಭುತ ಸಂಗೀತ ಪ್ರತಿಭೆಯ ರಘು ಮತ್ತು ಜಿ ಕೆ ಆರ್ ಜೋಡಿ ನಾಡಿನಾದ್ಯಂತ ಇರುವ ಕವಿಗಳಿಂದ ತಿಂಗಳಿಗೊಂದು ಹೊಸ ಕವಿತೆ ಬರೆಸಿ ಅದಕ್ಕೆ ಅದ್ಭುತ ಸಂಗೀತ ಹೊಂದಿಸಿ ಭಾವಗೀತೆ ಆಗಿಸಿ ಜನಪ್ರಿಯ ಕಾರ್ಯಕ್ರಮ ಮಾಡತೊಡಗಿದರು. ಈ ಹಿಂದೆಯೂ ಆಕಾಶವಾಣಿ “ನವಸುಮ” “ತಿಂಗಳ ಹೊಸಹಾಡು” ಎಂದು ಖ್ಯಾತ ಕವಿಗಳ ರಚನೆಗಳಿಗೆ ಸಂಗೀತ ಜೋಡಿಸಿ ಹಾಡಾಗಿ ಪ್ರಸಾರ ಮಾಡುತ್ತಿತ್ತು. ಎರಡು ಬಾರಿ ನನ್ನ ಕವಿತೆಗಳಿಗೆ ಈ ಅವಕಾಶ ಸಿಕ್ಕು ನನ್ನ ಕವಿತೆಗಳೂ ಹಾಡಾಗಿ ಬಿತ್ತರವಾದುವು. ಆ ಕಾರ್ಯಕ್ರಮದ ಶೀರ್ಷಿಕೆ “ಹೊಸ ದನಿ – ಹೊಸಬನಿ” ಎಂದೇ ಆಗಿತ್ತು.

ಹೆಸರೇ ತಿಳಿಸುವಂತೆ ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ದನಿಯನ್ನು ಸೇರಿಸಿ ಆ ಕವಿಯ ಕವಿತೆಗೆ ರಾಗ ಸಂಯೋಜಿಸಿ ತಿಂಗಳ ಹಾಡಾಗಿ ಪ್ರಸಾರ ಮಾಡುತ್ತಿದ್ದ ಆ ಕಾರ್ಯಕ್ರಮ ತುಂಬ ಜನಪ್ರಿಯವೂ ಆಯಿತು. ಅದೇ ಶೀರ್ಷಿಕೆಯಲ್ಲೇ ಇವತ್ತು ಫೇಸ್ಬುಕ್ಜಿನಲ್ಲಿ ಬರೆಯುತ್ತಿರುವ ಕವಿತೆಗಳನ್ನು ಗುರ್ತಿಸಿ ತನ್ಮೂಲಕ ಕವಿಯ ಸಾಹಿತ್ಯಕ ಸಾಧನೆಯನ್ನು ಓದುಗರಿಗೆ ತಿಳಿಸುವುದು ಈ ಅಂಕಣದ ಉದ್ದೇಶ.

ಕಳೆದ ಮೂವತ್ತೈದು ವರ್ಷಗಳಿಂದಲೂ ಕವಿತೆಯ ಸಾಗಂತ್ಯದಲ್ಲಿ ಬದುಕು ಕಂಡುಕೊಂಡ ನನಗೆ ಹೊಸಕಾಲದ ಅದರಲ್ಲೂ ಹೊಸ ಮಾಧ್ಯಮಗಳಾದ ಫೇಸ್ಬುಕ್ ಮತ್ತು ವಾಟ್ಸ್ ಅಪ್ ಗುಂಪುಗಳಲ್ಲಿ ಹಾಗೇ ವೈಯುಕ್ತಿಕ ಪೇಜಲ್ಲಿ ಬರೆಯುತ್ತಿರುವ ಹಲವರ ಬಗ್ಗೆ ಖುಷಿ ಮತ್ತು ಕೆಲವರ ಬಗ್ಗೆ ಸಂತಾಪಗಳೂ ಇವೆ. ಹೊಗಳಿಕೆಗೋ ಲೈಕಿಗೋ ಅಥವ ತುಂಬ ಈಸಿಯಾದ ಇಮೋಜಿಗಳಿಗೋ ಇರುವ ಪ್ರಾಧಾನ್ಯತೆ ವಿಮರ್ಶೆಯ ನಿಜದ ಮಾತುಗಳಿಗೆ ಪ್ರೋತ್ಸಾಹಕ್ಕೆ ಹೇಳಿದ ತಿದ್ದುಪಡಿಗಳಿಗೆ ಇಲ್ಲದುದನ್ನು ಕಂಡಾಗ ಬೇಸರವೂ ಆಗಿದೆ. ಕಾವ್ಯಕೇಳಿ, ಕಾಜಾಣ, ಪದ್ಯ, ಮೊದಲಾದ ತಾಣಗಳು, ಹಾಗೇ ಅವಧಿ, ಕೆಂಡಸಂಪಿಗೆ, ಸಂಗಾತಿ, ಸಂಪದ ಮೊದಲಾದ ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕವಿತೆಗಳೂ ಇದುವರೆಗೂ ನಂಬಿದ್ದ ಸಾಹಿತ್ಯ ಚರಿತ್ರೆ ಕಟ್ಟಿಕೊಟ್ಟಿದ್ದ ಮಿತಿ ಮತ್ತು ಪಾತಳಿಯನ್ನು ವಿಸ್ತರಿಸಿ ಹಾಗೇ ಕೆಡವಿ ಹೊಸದನ್ನು ಕಟ್ಟುತ್ತಿರುವ ಈ ಕಾಲದ ಎಲ್ಲ ನಿಜ ಕವಿಗಳನ್ನೂ ಅಭಿನಂದಿಸುತ್ತೇನೆ. ಈ ಕುರಿತು ಸದ್ಯ ಅನಿಸಿದ್ದನ್ನು ವಿಸ್ತರಿಸಿ ಈ ಲೇಖನ.

ನಮ್ಮಲ್ಲಿ ಬಹಳ ಜನ ಕವಿತೆಯೆಂದರೆ ಕವಿಗೋಷ್ಠಿಯೆಂದರೆ ಮೂಗು ಮುರಿಯುತ್ತೇವೆ. ಕವಿತೆಯನ್ನು ಓದುವುದು ಅಥವ ಬರೆಯುವುದೆಂದರೆ ಮಾಡಲು ಬೇರೇನೂ ಕೆಲಸವಿಲ್ಲದವರು ಹೊಂಚಿಕೊಂಡ ಕೆಲಸವೆಂದು ಅನ್ನುವವರೂ ಇದ್ದಾರೆ. ಆದರೂ ಸಾಹಿತ್ಯ ಸಮ್ಮೇಳನಗಳ ಮುಖ್ಯ ಆಕರ್ಷಣೆಯೇ ಕವಿಗೋಷ್ಠಿಗಳಾಗಿರುವುದೂ ವಿಶೇಷವೇ. ಪಂಡಿತರಿಗಷ್ಟೇ ಕವಿತೆ ಪಾಮರರಿಗೆ ಏಕದರ ಗೊಡವೆ ಅನ್ನುವವರೂ ಇದ್ದಾರೆ. ಇನ್ನು ಕವಿಯಲ್ಲದವರು ಅಥವ ಕವಿತೆಯ ಗೊಡವೆ ಬೇಡದೆಯೂ ಕವಿತೆಯ ಜೊತೆಗೆ ಅನಿವಾರ್ಯವಾಗಿ ಬೆರೆಯುವವರೆಂದರೆ ಅದನ್ನು ಪಠ್ಯವಾಗಿ ಓದಲೇಬೇಕಿರುವ ವಿದ್ಯಾರ್ಥಿಗಳು ಮತ್ತು ಅದನ್ನವರಿಗೆ ಪಾಠ ಹೇಳಬೇಕಾದ ಗುರುತರ ಜಾವಾಬ್ದಾರಿ ಹೊಂದಿರುವ ಅಧ್ಯಾಪಕರು.

ಕವಿತೆಯನ್ನು ಪಾಠ ಮಾಡುವುದು ಎಂದರೆ ಅಧ್ಯಾಪಕರಿಗೆ ಹಿಂಜರಿಕೆ.ವರ್ಷಾವಧಿ  ಪರೀಕ್ಷೆಯಲ್ಲಿ ಕವಿತೆಗಳ ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವುದೆಂದರೆ ವಿದ್ಯಾರ್ಥಿಗಳಿಗೆ ಅಂಜಿಕೆ. ಅರ್ಥವಾಗದು ಎಂಬ ಅಂಜಿಕೆ ಹುಡುಗರಿಗೆ. ಅರ್ಥವಾಗದಿದ್ದರೆ ಎಂಬ ಅಂಜಿಕೆ ಅಧ್ಯಾಪಕರಿಗೆ. ಓದಿದ ಕವಿತೆ ಅರ್ಥವಾಗದಿದ್ದರೆ ನಮ್ಮ ಅಹಂಕಾರಕ್ಕೆ ಪೆಟ್ಟು. ಅದಕ್ಕೇ ನಮಗೆ ಕವಿತೆಯ ಉಸಾಬರಿಯೇ ಬೇಡ ಎಂದು ಮುಖ ತಿರುಗಿಸುವ ಮಂದಿ ಬಹಳ. ಕವಿತೆಯೊಂದನ್ನು ಓದಿದೊಡನೆಯೇ ಅದು ಅರ್ಥವಾಗಲೇ ಬೇಕು ಎಂದು ದಯವಿಟ್ಟು ಹಠಮಾಡಬೇಡಿ. ಕವಿತೆಯನ್ನು ಅರ್ಥದ ಗೂಟಕ್ಕೆ ಕಟ್ಟಬೇಡಿ. ಅದನ್ನು ಸುಮ್ಮನೆ ವಿಹಾರಕ್ಕೆ ಬಿಡಿ. ಅಂಗಳದಲ್ಲಿ ಆಡಬಯಸುವ ಪುಟ್ಟ ಮಗುವಿನಂತೆ ಕವಿತೆ ಆರಾಮಾಗಿ ನಿಮ್ಮ ಮನದ ಅಂಗಳದಲ್ಲಿ ಆಡಿಕೊಳ್ಳಲಿ. ಕವಿತೆಯ ಭಯವನ್ನು ಗೆಲ್ಲಲು ನಾವು ಆರಂಭದಲ್ಲಿ ಕೈಗೊಳ್ಳಬೇಕಾದ ಸುಲಭ ಉಪಾಯವಿದು.

ಸುಮ್ಮನೆ ಓದುತ್ತಾ ಹೋದರೆ, ಓದುತ್ತಲೇ ಹೋದರೆ ಹೇಗೆ ಈಗ ತಾನೇ ಓಡಾಡಲು ಪ್ರಾರಂಭಿಸಿರುವ ಮಗು ತನ್ನ ಆಟದಲ್ಲಿ ಒಂದು ಲಯ ಕಂಡೀತೋ ಹಾಗೆಯೇ ನೀವೂ ಕವಿತೆಯನ್ನು ಕಾಣಬೇಕು. ಕವಿತೆ ಹೇಗೆ ನಡೆಯುವುದು, ಹೇಗೆ ನಗುವುದು, ಹೇಗೆ ಅತಾರ್ಕಿಕವನ್ನು ಪಲುಕುವುದು ಗಮನಿಸಿ.

ಕವಿತೆ ಎಂದರೆ ಮೊದಲು ಗಮನಿಸ ಬೇಕಾದದ್ದು ಅದನ್ನು ಕವಿಯು ಹೇಗೆ ಗುನುಗುನಿಸುವ ಮಾತುಗಳನ್ನು ಹಿಡಿದು ನೇಯ್ದು ಮಾಲೆ ಮಾಡಿದ್ದಾನೆ ಎಂಬುದನ್ನು ಓದಿನ ಮೂಲಕವೇ ದಕ್ಕಿಸಿಕೊಳ್ಳಬೇಕು.

ಕವಿತೆಯ ಗ್ರಹಿಕೆ ಎಂಬುದು ಕವಿತೆಯ ಶಬ್ದ ಸಾಮಗ್ರಿಯಿಂದ ನೀವೇ ಸ್ವಂತ ಕಟ್ಟಿಕೊಂಡ ಗ್ರಹಿಕೆ ಎಂಬುದನ್ನು ಮರೆಯದಿರಿ. ಈ ಪದ್ಯದ ಇನ್ನೊಬ್ಬ ಓದುಗ ಭಿನ್ನವಾದ ಬೇರೆ ಒಂದು ಗ್ರಹಿಕೆಯನ್ನೇ ತನ್ನ ಓದಿನಿಂದ ಕಟ್ಟಿಕೊಂಡರೆ ನೀವು ಆತಂಕಗೊಳ್ಳಬೇಕಿಲ್ಲ. ಸದ್ಯಕ್ಕೆ ಇದು ನಿಮ್ಮ ಕಾವ್ಯ ಗ್ರಹಿಕೆ. ಮುಂದೆ ನಿಮ್ಮ ಓದು ಪರಿಷ್ಕಾರಗೊಂಡಂತೆ ಕವಿತೆ ಬೇರೊಂದು ವಿಭಿನ್ನವಾದ ಗ್ರಹಿಕೆಯನ್ನೇ ಕಟ್ಟಿಕೊಳ್ಳಬಲ್ಲುದು. ಕವಿತೆ ಒಂದೇ; ಆದರೆ ಅದರ ಗ್ರಹಿಕೆಗಳು ಅನಂತ. ಈ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಹೊಸ ಕಾವ್ಯಾರ್ಥಿಗಳು ತಮ್ಮ ಕಾವ್ಯ ಶೋಧವನ್ನು ಮುಂದುವರೆಸಲಿ. ಕವಿತೆಯೆಂಬುದು ನಿರಂತರ ವಿಕಸನಶೀಲವಾದ ಒಂದು ಜೈವಿಕ ಭಾಷಾನುಸಂಧಾನ ಎಂಬ ಅರಿವು ನಿಮಗಿರಲಿ. ಅದಕ್ಕಿಂತ ಮುಖ್ಯ ನಮ್ಮ ಪೂರ್ವಸೂರಿಗಳನ್ನೂ ಹಾಗೇ ಸಮಕಾಲೀನರನ್ನೂ ಎಷ್ಟು ಓದಿಕೊಂಡಿದ್ದೀರಿ ಎನ್ನುವುದು ಮುಖ್ಯ. ಸಾಹಿತ್ಯ ಚರಿತ್ರೆಯ ಅದು ನಡೆದ ಬಂದ ದಾರಿಯ ಬಗ್ಗೆ ಕೊಂಚವಾದರೂ ತಿಳುವಳಿಕೆ ನಾವು ನಡೆಯುತ್ತಿರುವ ದಾರಿಗೆ ತೋರುಬೆರಳು ಅನ್ನುವುದನ್ನು ಮರೆಯದಿರೋಣ.  ಹಲವು ಯುವ ಬರಹಗಾರರು ಪರಂಪರೆಯನ್ನು ಧ್ಯಾನಿಸದೇ ಸುಮ್ಮನೇ ಮುಂದುವರಯುತ್ತಿರುವುದನ್ನೂ ಓದಿನಿಂದ ಬಲ್ಲೆ. ನಿಜಕ್ಕೂ ಭಾಷೆಯ ಸೊಗಸು, ಅದರ ನಿರ್ಮಿತಿಯ ವಿನ್ಯಾಸ ಹಾಗೂ ಮಿತಿ ಅರ್ಥವಾಗುವುದೇ ನಿರಂತರದ ಓದಿನಿಂದ. ಅನ್ಯರನ್ನು ಓದದೇ ನಾವು ನಮ್ಮ ಕಾವ್ಯ ಬೆಳೆಯಲಾರದು.

ಸದ್ಯದ ಕಾವ್ಯ ಇನ್ನೂ ತನ್ನ ದಾರಿಯನ್ನು ಸ್ಪಷ್ಟಗೊಳಿಸಿಕೊಳ್ಳಬೇಕಿದೆ. ನವೋದಯದ ರಮ್ಯತೆ ಕಳೆದು ನವ್ಯದ ಪ್ರತಿಮೆ ರೂಪಕಗಳೂ ಸವೆದು ಬಂಡಾಯದ ದನಿ ಉಡುಗಿಹೋಗಿರುವ ಸಂದರ್ಭದಲ್ಲಿ ಕಾವ್ಯವೆಂದರೆ ಆ ಕ್ಷಣ ಅನ್ನಿಸಿದ್ದನ್ನು ತತ್ ಕ್ಷಣವೇ ಬರೆದು ಪ್ರಕಟಿಸುವ ಸಾಮಾಜಿಕ ಜಾಲತಾಣಗಳ ಪುಟಗಳಾಗಿ ಬದಲಾಗುತ್ತಿದೆ. ಇದು ಗಮನಿಸಬೇಕಾದ ಮುಖ್ಯ ಸಂಗತಿ. ಕವಿತೆ ಬರೆಯುವವರೆಂದರೆ ಅದ್ಯಾಪಕರೇ ಎಂಬ ಹುಸಿಯನ್ನು ವರ್ತಮಾನದ ಕವಿಗಳು ಅಳಿಸಿಹಾಕಿದ್ದಾರೆ. ಬದುಕಿನ ಹಲವು ಸ್ತರಗಳಿಂದ ಅನುಭವಗಳಿಂದ ಹುರಿಗೊಂಡ ಅನೇಕ ಮನಸ್ಸುಗಳು ಆಧುನಿಕ ಕಾವ್ಯ ಪ್ರಕಾರವನ್ನು ಕಟ್ಟುತ್ತಿವೆ. ತಮಗನ್ನಿಸಿದ್ದನ್ನು ನಿರ್ಭಿಡೆಯಿಂದ ಸ್ಪಷ್ಟವಾಗಿ ಹೇಳುವ ಸಿದ್ಧ ಸಾಮಗ್ರಿ ಈಕಾಲದ ಕವಿಗಳಿಗಿರುವುದು ವಿಶೇಷ.

ಹೊಸ ದನಿ- ಹೊಸ ಬನಿಯ ಮೂಲಕ ಎಲ್ಲರನ್ನೂ ಗುರುತಿಸುತ್ತೇವೆ, ಬೆನ್ನು ತಟ್ಟುತ್ತೇವೆ ಎನ್ನುವುದಷ್ಟೇ ಈ ಅಂಕಣದ ಉದ್ದೇಶವಲ್ಲ. ಆದರೆ ನಿಜಕ್ಕೂ ಚೆನ್ನಾದ ಕವಿತೆಗಳನ್ನು ಬರೆಯುತ್ತಿದ್ದರೂ ಬೇರೆ ಬೇರೆ ಕಾರಣಗಳಿಂದಾಗಿ ಪತ್ರಿಕೆಗಳಲ್ಲಿ ಅಷ್ಟಾಗಿ ಕಾಣಿಸಿ ಕೊಳ್ಳದ ಕವಿಗಳನ್ನು ಪರಿಚಯಿಸುವುದು ಮುಖ್ಯ ಉದ್ದೇಶ. ಇದರ ಜೊತೆಗೆ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಣೆಗಾಗಿ ಕಾದು ಕಾದು ಕಡೆಗೆ ಫೇಸ್ಬುಕ್ಕಲ್ಲಿ ಪ್ರಕಟಿಸಿ ಭೇಶ್ ಅನ್ನಿಸಿಕೊಂಡ ಹಲವರನ್ನು ನಾವು ಬಲ್ಲೆವು.

ಫೇಸ್ಬುಕ್ ಗೆಳೆಯಲ್ಲಿ ವಿನಂತಿ. ಸ್ಟೇಟಸ್ಸಿನಲ್ಲಿ ಎರಡು ಸಾಲು ಬರೆದೋ, ಅವರಿವರ ಸಾಲು ಎಗರಿಸಿ ತಮ್ಮದೆಂದೇ ಹೇಳುವವರು ಬೇಕಿಲ್ಲ ಉಳಿದಂತೆ ಚೆಂದಾಗಿ ಬರೆಯುತ್ತಿದ್ದೇನೆ ಅಂತ ಅನ್ನಿಸಿದವರು ಸಂಗಾತಿಗೆ ತಮ್ಮ ಹತ್ತು ಹನ್ನೆರಡು ಕವಿತೆಗಳ ಗುಚ್ಛದೊಂದಿಗೆ ನಿಮ್ಮ ಭಾವಚಿತ್ರ ಮತ್ತು ಸ್ವಪರಿಚಯದೊಂದಿಗೆ ಕಳಿಸಿ. ನಿಮ್ಮ ಕವನ ಗುಚ್ಛದಲ್ಲಿ ಫೇಸ್ಬುಕ್ಕಲ್ಲಿ ಪ್ರಕಟಿಸಿದ ದಿನಾಂಕಗಳನ್ನು ನಮೂದಿಸಿ ಅಥವ ಆ ಪದ್ಯಗಳ ಲಿಂಕ್ ಲಗತ್ತಿಸಿ. ಕವಿತೆಗಳು ಕನಿಷ್ಠ ಹದಿನೈದು- ಇಪ್ಪತ್ತು ಸಾಲಾದರೂ ಇರಲಿ.

ಪ್ರತಿ ಗುರುವಾರ ಉದ್ದೇಶಿತ ಅಂಕಣ ಪ್ರಕಟವಾಗಲು ಓದುಗರ, ಕವಿಗಳ ಸಹಕಾರವೂ ಮುಖ್ಯ.

***********************************

ಲೇಖಕರ ಬಗ್ಗೆ:

ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ.

5 thoughts on “ಅಂಕ(ಣ)ದ ಪರದೆ ಸರಿಯುವ ಮುನ್ನ.

  1. ನಿಮ್ಮ ಮಾತುಗಳು ಯುವ ಕವಿಗಳಿಗೆ ನಿಜಕ್ಕೂ ಪ್ರೇರಣಾದಾಯಾಕ ಮತ್ತು ಅಲ್ಲಲ್ಲಿ ಏನು ಮಾಡಬೇಕು ಮಾಡಬಾರದೆನ್ನುವ ಎಚ್ಚರಿಕೆ ನೀಡುವುದರ ಜೊತೆಯಲ್ಲಿ ಅವಕಾಶಗಳ ಆಗರ ಅಂತ್ಜಾಲವೆನ್ನುವ ನಿಮ್ಮ ಅನಿಸಿಕೆ ಸರಿಯಿದೆ.

  2. ನಿಜಕ್ಕೂ ನಿಮ್ಮ ಮಾತು ಅತೀ ಸೂಕ್ತವಾಗಿದೆ..
    ಪತ್ರಿಕೆಗಳಲ್ಲಿ ಪ್ರಕಟಣೆ ಸಹಜ ಕವಿಗಳಿಗೆ ನಿಜಕ್ಕೂ ಅಸಾಧ್ಯವೇ .
    ಈ ನಿಟ್ಟಿನಲ್ಲಿ ಪ್ರೋತ್ಸಾಹದ ಪ್ರಯತ್ನ ಶ್ಲಾಘನೀಯ

    1. ನಿಮ್ಮ ಮಾತುಗಳು ನಿಜಕ್ಕೂ ಉದಯೋನ್ಮುಖ ಕವಿಗಳಿಗೆ ದಾರಿದೀಪ.. ತನ್ನದೇ ಶ್ರೇಷ್ಠ ಎಂಬ ಸ್ವರತಿ ಇರುವವರನ್ನೂ ಒಮ್ಮೆ ಆತ್ಮವಿಮರ್ಶೆಗೆ ಅಚ್ಚುತ್ತದೆ. ಅದು ಅಗತ್ಯವೂ ಹೌದು. ನವಸುಮಕ್ಕೆ ನಾನೂ ಆಗಲೇ ನನ್ನ ಪದ್ಯಗಳನ್ನು ಕಳಿಸಿದ್ದೆ. ಅವು ಹಾಡಾಗಲೇಯಿಲ್ಲ. ಯುವಕವಿಗೋಷ್ಠಿಗೆ ಭಾಗವಹಿಸಿದ್ದು ನೆನಪಾಯ್ತು..

  3. ಬರೆಯುವ ಹೊಸ ತಲೆಮಾರಿಗೆ ನೀವು ತೋರುತ್ತಿರುವ ಪ್ರೋತ್ಸಾಹ ಅನನ್ಯ.ಸಂಗಾತಿಗೆ ಧನ್ಯವಾದಗಳು

    ಡಿ.ಎಸ್.ಆರ್ ಹೊಸ ಕವಿಗಳಿಗೆ ಮಾರ್ಗದರ್ಶನ ನೀಡಲೆಂದು ಆಶಿಸುತ್ತೇನೆ

  4. ಒಳ್ಳೆಯ ಪ್ರಯತ್ನ, ಸಹೃದಯರಿಂದ ಮಾತ್ರ ಇಂತಹ ರಚನಾತ್ಮಕ ಕಾರ್ಯ ಸಾಧ್ಯ. ಒಬ್ಬ ಕವಿ ಮತ್ತೊಬ್ಬ ಕವಿಯನ್ನು ಉತ್ತೇಜಿಸುವುದು ಅಪರೂಪ !

Leave a Reply

Back To Top