ಕವಿತೆ
ವಿಭಾ ಪುರೋಹಿತ್
ಚತುರ್ಮುಖ ಬ್ರಹ್ಮ
ಅವನೊಳಗೊಂದು ಕಾಣ್ದ
ಅಗೋಚರ ಮೈವೆತ್ತ ಹಾಗೆ
ಅವನಿಯೊಳಗಿನ ಜ್ಞಾನ
ಕಣ್ತೆರೆದಂತೆ
ಸುಡುವ ನೋವಿದ್ದರೂ ಎದೆಯೊಳಗೆ
ಉತ್ಸಾಹ ಉತ್ತುವದು ನಗೆಯ ಬಿತ್ತುವುದು
ಮಹಾತ್ಮ ನ ಲೀಲೆ
ನಾರಾಯಣನಿಲ್ಲದೇ ಅವನಿಯುಂಟೇ?
ಅದೃಶ್ಯದಲ್ಲಿ ಸದೃಶನಾಗಿ
ಸೋಫಾಮೇಲೆ ಕುಳಿತಿದ್ದಾನೆ
ರೇಡಿಯೋ ಕೇಳುತ್ತಿದ್ದಾನೆ
ಎರಡುತಾಸಿಗೊಮ್ಮೆ ಕಪ್ಪು ಕಾಫಿ
ಸೋಮರಸ ಸದಾ ಥರ್ಮಾಸಿನೊಳಗೆ
ಕಾಲುಮೇಲೆಕಾಲಿಟ್ಟು
ಅನುಭವದ ರೇಖೆಗಳನ್ನೆಲ್ಲ ಒತ್ತಿ
ಹಿಡಿದ ಹಸ್ತ ಊರುಗೋಲಿನ ಮೇಲೆ
ಊರಿನ ತಗಾದೆಗೆಲ್ಲ ಕಿವಿಗೊಟ್ಟು
ಎದೆಗವುಚಿ ಎಲ್ಲರಿಗೂ
ಬೀರಬಲ್ಲನ ಪರಿಹಾರ ಮಂತ್ರ
ರೆಡಿಯಾಗುತಿತ್ತು.
ಊರುಗೋಲಿನ ಸುತ್ತ ಫಿರ್ಯಾದಿಗಳು
ವಿನಂತಿಗಳು ಅಹವಾಲುಗಳಿಗೆ
ಹೊಸದಾಗಿ ತಂದ ಕಂಪ್ಯೂಟರ್
ಕೀಲಿಮಣೆ ಕಿಲಕಿಲನೆ ಬಡಿದು
ಬರೆದುಕೊಂಡೇ ಮತ್ತೆ ಕಾಫಿಗೆ
ಕೈಚಾಚುತ್ತಿತ್ತು
ಯಾರೇ ಬಂದರೂ ಯಾವಾಗ ಬಂದರೂ
ಬಿಸಿಕಾಫಿ ಜೊತೆ ಆತ್ಮೀಯತೆ ಬಿಸ್ಕತ್ತು ಗಳು
ಮನದಾಳದಿಂದ ಸಮಸ್ಯೆಗಳನು
ಹೊತ್ತು ತಂದವರ ಪಾತಾಳಗರಡಿಯಾಗುತ್ತಿತ್ತು
ನೆನಪಿನಲ್ಲಿ ಮುಳುಗಿದರೆ
ಏನೋ ಗೊತ್ತಿರದ ಕೊರಗು
ಪ್ರವರದ ಪರಿವೆಯಿಲ್ಲದಿದ್ದರೂ
ಪೂರ್ವಜನ್ಮದ ಪ್ರಪಿತಾಮಹನಂತೆ
ಧರ್ಮಕೋವಿ ಹಿಡಿದವರೂ ಬೆರಗಾಗುವಂತೆ
ಅವರ ಜನಸೇವೆ
ಸದ್ದಿಲ್ಲದೆ ಸುಮ್ಮನಾಗಿದ್ದವು
ಅವರೊಂದು ಪೂರ್ಣ ಕುಂಭ
ಜ್ಞಾನ ಗಂಗೆಯ ಅವತಾರ ಪುರುಷ
(ಧಾರವಾಡದವರೆಲ್ಲರಿಗೂ ಅಪ್ಪನೆಂದೇ ಆಪ್ತನಾಗಿದ್ದ ದಿವಂಗತ ಎನ್.ಪಿ.ಭಟ್ಟ ಅವರ ಕುರಿತು ಬರೆದಿದ್ದು)
Very nice..