ಕವಿತೆ
ಸ್ಮಿತಾ ಭಟ್
ಅಬ್ಬರಿಸಿ ಬರುವ ನಿನ್ನ ಮಾತಿನ
ಹೊಡೆತಕ್ಕೆ ಸಿಲುಕಿದ ಒಂಟಿ ದೋಣಿ
ಮತ್ತೊಂದು ಪ್ರಶಾಂತ ನಿಲುವಿಗಾಗಿ
ಯಾಕೋ ಕಾಯಬೇಕೆನಿಸುತ್ತಿಲ್ಲ
ಕೊಚ್ಚಿ ಕಾಣದಾಗಲೆಂದು ಬಯಸುತ್ತೇನೆ
ಬುಡಮೇಲಾದ ನಂಬಿಕೆಯ
ಮತ್ತೆ ಊರಿ ಅದಕ್ಕೇ ಚಿಗುರೊಡೆವ
ಸಮಯಕ್ಕಾಗಿ
ಯಾಕೋ ಕಾಯಬೇಕೆನಿಸುತ್ತಿಲ್ಲ
ಕುರುಹೂ ಇಲ್ಲದಂತೆ ನಶಿಸಿ ಹೋಗಲು ಬಯಸುತ್ತೇನೆ.
ಹೊಸದೇನೋ ಘಟಿಸುತ್ತದೆ ಎಂಬ ಬಯಕೆಯಲಿ
ಹಳೆಯ ಪೋಷಾಕುಗಳನೇ ಮತ್ತೆ ಮತ್ತೆ ಹೊದ್ದು
ಅಸತ್ಯದ ನಗುವಿನಲಿ ಯಾಕೋ ಕಾಯಬೇಕೆನಿಸುತ್ತಿಲ್ಲ
ಸಕಲವನೂ ತೊರೆದು ನಿರಾಳವಾಗಲು ಬಯಸುತ್ತೇನೆ.
ಯಾವ ಕಿಂಡಿಯೂ ಉಳಿದಿಲ್ಲ
ಕಿರಣದ ಸ್ಪರ್ಶವ ಅನುಭವಿಸಲು
ಹೊರದಾರಿಗೆ ಯಾರೋ ಬಾಗಿಲು ತರೆಯುವುದಕ್ಕಾಗಿ ಯಾಕೋ ಕಾಯಬೇಕೆನಿಸುತ್ತಿಲ್ಲ
ಗೂಡಿನ ಮಾಡು ಸರಿಸಿ ದಿಗಂತದಲಿ
ಹಂಗು ತೊರೆದು ಹಾರಲು ಬಯಸುತ್ತೇನೆ
ಆಶಾವಾದಿತನದ ಬದುಕಿಗೆ
ಚೆಲ್ಲಿದ ಬೊಗಸೆಗಳೆಲ್ಲ ಚಪ್ಪಾಳೆ ತಟ್ಟಿ ನಕ್ಕಿದೆ
ಹೊಸ ಬಯಕೆಗಳ ಹೂವು ಅರಳಲು
ಯಾಕೋ ಕಾಯಬೇಕೆನಿಸುತ್ತಿಲ್ಲ.
ಚುಕ್ಕಿಯ ದಂಡಿನಲಿ ಸೇರಿ ಸಕಲವನೂ
ನೋಡಿ ನಗಲು ಬಯಸುತ್ತೇನೆ.
********************
ಸೊಗಸು.. ಅಭಿವ್ಯಕ್ತಿ ಚಂದ
ಧನ್ಯೊಸ್ಮಿ ಮೆಡಮ್