ಬದುಕಿನ ಬಗ್ಗೆ ಮಾತನಾಡುವಾಗಲೆಲ್ಲ ನನಗೆ ಕರ್ಟನ್ನುಗಳು ನೆನಪಾಗುತ್ತವೆ; ಬದುಕಿನ ಪ್ರತಿಯೊಂದು ಅಧ್ಯಾಯವೂ ಬೇರೆಬೇರೆ ಬಣ್ಣ-ವಿನ್ಯಾಸಗಳನ್ನು ಹೊತ್ತ ಸುಂದರವಾದ ಕರ್ಟನ್ನಿನಂತೆ ಭಾಸವಾಗುತ್ತದೆ. ಕಿಟಕಿಗಳೇ ಇಲ್ಲದ ಮನೆಯಲ್ಲಿ ಬೆಳಕಿಗೊಂದು ಅವಕಾಶವನ್ನು ಒದಗಿಸುವುದಾದರೂ ಹೇಗೆ; ಹಾಗೆ ಕಿಟಕಿಯೊಂದು ಒದಗಿಸಿದ ಅವಕಾಶವನ್ನು ಸ್ವಂತದ್ದಾಗಿಸಿಕೊಳ್ಳಲಿಕ್ಕೆ ಕರ್ಟನ್ನುಗಳ ಸೃಷ್ಟಿಯೂ ಆಗಿರಬೇಕು! ಬೆಳಕಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕಿಟಕಿ, ಕಿಟಕಿಯೊಂದಿಗೆ ಸಾಮರಸ್ಯವನ್ನು ಬೆಳೆಸಿಕೊಳ್ಳುವ ಕರ್ಟನ್ನು ಎಲ್ಲವೂ ಸೇರಿ ಬದುಕಿಗೊಂದು ಸ್ವಂತಿಕೆ, ಜೊತೆಗಿಷ್ಟು ಬಣ್ಣಗಳು ಲಭ್ಯವಾಗಿದ್ದಿರಬೇಕು. ದುಃಸ್ವಪ್ನಗಳನ್ನೆಲ್ಲ ದೂರವಾಗಿಸುವ ಬೆಳಕು ಕಿಟಕಿಯನ್ನು ಸ್ಪರ್ಶಿಸುವ ಸಮಯಕ್ಕೆ ಸರಿಯಾಗಿ ಕಣ್ತೆರೆವ ಕರ್ಟನ್ನಿನ ಎಲೆ, ಹೂವು, ಹಣ್ಣು, ಹಕ್ಕಿಗಳೆಲ್ಲವೂ ಮುಂಜಾವಿಗೊಂದು ಹೊಸ ಬಗೆಯ ಸೊಬಗನ್ನು ಒದಗಿಸುತ್ತವೆ. ಎಳೆಬಿಸಿಲಿಗೆ ತಿಳಿಹಸಿರು ಬಣ್ಣವನ್ನು ಮೈಗೆ ಮೆತ್ತಿಕೊಳ್ಳುವ ಎಲೆಯೊಂದು ಮುಸ್ಸಂಜೆಗೆ ಅಚ್ಚಹಸಿರಾಗಿ, ಬೀದಿದೀಪದ ಬೆಳಕಿಗೆ ಹಳದಿಯೂ ಆಗಿ ಬಣ್ಣಗಳ ಹೊಸ ಜಗತ್ತನ್ನೇ ನಮ್ಮೆದುರು ತೆರೆದಿಡುತ್ತದೆ; ಎಲೆಗಳ ಸಂದಿಯಲ್ಲಡಗಿರುವ ಪುಟ್ಟ ಹಕ್ಕಿಯೊಂದು ಬಣ್ಣದ ರೆಕ್ಕೆಗಳನ್ನು ತೊಟ್ಟು ಸದ್ದಿಲ್ಲದೇ ಮನೆತುಂಬ ಹಾರಾಡುವ ಸಂಭ್ರಮವನ್ನು ಕಟ್ಟಿಕೊಡುವ ಕರ್ಟನ್ನು ಪ್ರತಿದಿನದ ಬೆಳಗಿಗೊಂದು ಹೊಸತನದ ಅನುಭವವನ್ನು ಒದಗಿಸುತ್ತದೆ.
ಬದುಕು ತನ್ನದಾಗಿಸಿಕೊಳ್ಳುವ ಅನುಭವಗಳ ಪಟ್ಟಿಯಲ್ಲಿ ಬಾಲ್ಯವೆನ್ನುವುದೊಂದು ಸುಂದರ ಅನುಭವ. ಹೋದಲ್ಲೆಲ್ಲ ಹಿಂಬಾಲಿಸುತ್ತಿದ್ದ ಪಾಟಿಚೀಲದಿಂದ ಹಿಡಿದು ದೊಡ್ಡಪ್ಪ ಅಂಗಳದಲ್ಲಿ ಬಿಡಿಸುತ್ತಿದ್ದ ರಂಗೋಲಿಯವರೆಗೆ ಘಟಿಸಿದ ಎಲ್ಲ ಚಿಕ್ಕಪುಟ್ಟ ಸಂಗತಿಗಳೂ ಅದ್ಯಾವುದೋ ಕ್ಷಣದಲ್ಲಿ ಅಚ್ಚರಿಗಳಾಗಿ ರೂಪಾಂತರಗೊಂಡು ಬದುಕಿಗೊಂದು ಹೊಸತನವನ್ನು ದೊರಕಿಸಿಕೊಡುತ್ತವೆ. ಪಾಟಿಚೀಲದ ಜಿಪ್ ನೊಂದಿಗೆ ನೇತಾಡುತ್ತಿದ್ದ ಕೀಚೈನ್ ಮೇಲಿದ್ದ ಪುಟ್ಟ ನಾಯಿಮರಿಯೊಂದಿಗಿನ ಗೆಳೆತನ ಪ್ರೈಮರಿ, ಹೈಸ್ಕೂಲು ಎಲ್ಲ ಮುಗಿದಮೇಲೂ ಬಾಲ್ಯದ ನೆನಪುಗಳೊಂದಿಗೆ ನಂಟು ಬೆಳೆಸಿಕೊಳ್ಳುತ್ತದೆ. ಒಮ್ಮೆಯೂ ಸ್ನಾನಮಾಡಿಸಿ ಕೋಲ್ಡ್ ಕ್ರೀಮ್ ಹಚ್ಚದಿದ್ದರೂ ಚಳಿಗಾಲದಲ್ಲಿಯೂ ತನ್ನ ಸೌಂದರ್ಯವನ್ನು ಕಳೆದುಕೊಳ್ಳದ ನಾಯಿಮರಿ, ಸನ್ ಸ್ಕ್ರೀನ್ ಲೋಷನ್ ಇಲ್ಲದೇ ಬಣ್ಣವನ್ನೂ ಕಾಪಾಡಿಕೊಂಡು, ಮಳೆಗಾಲದಲ್ಲಿ ಪಾಟಿಚೀಲದೊಂದಿಗೆ ತಾನೂ ಮಳೆಯಲ್ಲಿ ನೆನೆಯುತ್ತ ಕೊಳೆಯನ್ನೆಲ್ಲ ತೊಳೆದುಕೊಳ್ಳುತ್ತಿತ್ತು. ಪಾರ್ಲರ್ ಶಾಂಪೂವಿನಿಂದ ತಲೆಗೂದಲನ್ನು ತೊಳೆದುಕೊಳ್ಳುವಾಗಲೆಲ್ಲ, ಅರ್ಥವಾಗದ ಗಣಿತದ ಲೆಕ್ಕಾಚಾರವನ್ನು ಸಹನೆಯಿಂದ ಸಹಿಸಿಕೊಂಡು ಪರೀಕ್ಷೆಯ ಭಯವನ್ನು ಕಡಿಮೆ ಮಾಡಿದ ನಾಯಿಮರಿಯ ಪ್ರೇಮವನ್ನು ನೆನೆದು ಅಚ್ಚರಿಗೊಳ್ಳುತ್ತಲೇ ಇರುತ್ತೇನೆ.
ಅಂತಹ ಸೋಜಿಗಗಳಲ್ಲಿ ದೊಡ್ಡಪ್ಪ ಅಂಗಳದಲ್ಲಿ ಬಿಡಿಸುತ್ತಿದ್ದ ರಂಗೋಲಿಯೂ ಸೇರಿಕೊಂಡಿದೆ. ಹಬ್ಬಗಳಲ್ಲೋ, ದೇವರಕಾರ್ಯಗಳಲ್ಲೋ ದೊಡ್ಡಪ್ಪ ತನ್ನ ರಂಗೋಲಿ ತಟ್ಟೆಯೊಂದಿಗೆ ಅಂಗಳಕ್ಕೆ ಹಾಜರಾದರೆ ಕೇರಿಯ ಮಕ್ಕಳೆಲ್ಲ ಅವನ ಸುತ್ತ ನೆರೆಯುತ್ತಿದ್ದೆವು. ಯಾವ ಪೂರ್ವತಯಾರಿ-ಯೋಜನೆಗಳೂ ಇಲ್ಲದೇ ಮನಸ್ಸಿಗೆ ತೋಚಿದ ರಂಗೋಲಿಯನ್ನು ಬಿಡಿಸುತ್ತಿದ್ದ ದೊಡ್ಡಪ್ಪ ಅಂಗಳದಲ್ಲೊಂದು ಹೊಸ ಲೋಕವನ್ನೇ ಸೃಷ್ಟಿ ಮಾಡುತ್ತಿದ್ದ. ಬೆಟ್ಟದ ತುದಿಯಲ್ಲಿ ತನ್ನಪಾಡಿಗೆ ತಾನು ಗರಿಬಿಚ್ಚಿ ನಿಂತಿರುತ್ತಿದ್ದ ನವಿಲು, ಅದರ ಪಕ್ಕದಲ್ಲೇ ಹುಲ್ಲು ತಿನ್ನುತ್ತಾ ಆಚೀಚೆ ಓಡುತ್ತಿದ್ದ ಮೊಲ, ಕೊಟ್ಟಿಗೆಯಿಂದ ತಪ್ಪಿಸಿಕೊಂಡು ಬಂದು ಅಂಗಳದ ತುಂಬಾ ಹೆಜ್ಜೆಗುರುತು ಮೂಡಿಸುತ್ತಿದ್ದ ಆಕಳಕರು, ಆಗಷ್ಟೇ ಅರಳಿದ ಕೆಂಪು ದಾಸವಾಳ, ಹೂವಿನ ಮೊಗದ ಮುದ್ದು ಬಾಲಕೃಷ್ಣ ಹೀಗೆ ಪ್ರಕೃತಿಯೇ ರಂಗೋಲಿಯಾಗಿ ಹೊಸಹೊಸ ರೂಪ-ಬಣ್ಣಗಳನ್ನು ಧರಿಸುತ್ತಿತ್ತು. ರಂಗೋಲಿಯ ಒಂದೊಂದು ಎಳೆಯೂ ಎಲ್ಲೋ ಆರಂಭವಾಗಿ ಇನ್ನೆಲ್ಲೋ ಮುಗಿಯುತ್ತ ನವಿಲುಗರಿಯಾಗಿ, ಮೊಲದ ಕಿವಿಯಾಗಿ, ಕರುವಿನ ಕುತ್ತಿಗೆಯ ಗಂಟೆಯಾಗಿ, ಕೊಳಲಾಗಿ ಅಂಗಳಕ್ಕಿಳಿಯುವುದೊಂದು ಸೋಜಿಗದ ಸಂಗತಿಯಾಗಿತ್ತು. ದೊಡ್ಡಪ್ಪನಿಗೆ ರಂಗೋಲಿ ಬಿಡಿಸುವುದನ್ನು ಕಲಿಸಿಕೊಟ್ಟವರಿರಲಿಲ್ಲ; ಇಷ್ಟೇ ಜಾಗವನ್ನು ರಂಗೋಲಿಗೆ ಮೀಸಲಾಗಿಡಬೇಕು ಎನ್ನುವ ಯಾವ ಇತಿಮಿತಿಗಳೂ ಅವನ ತಲೆಯಲ್ಲಿ ಇರುತ್ತಿರಲಿಲ್ಲ. ಸಿಕ್ಕಿದ ಅವಕಾಶವನ್ನೆಲ್ಲ ಮುಕ್ತ ಮನಸ್ಸಿನಿಂದ ಬಳಸಿಕೊಳ್ಳುತ್ತ, ಪ್ರಕೃತಿಯಿಂದಲೇ ಪಾಠ ಕಲಿತು ಜೀವನಪ್ರೀತಿಯನ್ನು ಚಿತ್ರಿಸುತ್ತ ಮಕ್ಕಳ ಬದುಕಿಗೊಂದಿಷ್ಟು ಬೆರಗು ಬೆರೆಸಿದ ದೊಡ್ಡಪ್ಪ ಪ್ರಕೃತಿ ಕರುಣಿಸಿದ ಅಚ್ಚರಿಗಳಲ್ಲಿ ಒಂದಾಗಿ ಉಳಿದುಕೊಂಡಿದ್ದಾನೆ.
ಪ್ರಕೃತಿ ತನ್ನ ಮಡಿಲಿನಲ್ಲಿ ಸಲಹುವ ವಿಸ್ಮಯಗಳನ್ನು, ಕ್ಲಾಸ್ ರೂಮು-ಫೀಸುಗಳಿಲ್ಲದೇ ಕಲಿಸಿಕೊಡುವ ಪಾಠಗಳನ್ನು ಥಿಯರಿಗಳನ್ನಾಗಿಸಿ ಪುಸ್ತಕಗಳಲ್ಲಿ ಹಿಡಿದಿಡಲಾಗದು. ಬೇಸಿಗೆಯ ದಿನಗಳಲ್ಲಿ ಎಲ್ಲೋ ನೆಲಕ್ಕೆ ಬಿದ್ದ ಬೀಜವೊಂದು ಗಾಳಿಯೊಂದಿಗೆ ಹಾರುತ್ತಾ ಇನ್ನೆಲ್ಲೋ ತಲುಪಿ, ಮೊದಲಮಳೆಗೆ ಮೊಳಕೆಯೊಡೆಯುವ ಸೃಷ್ಟಿಯ ವಿಸ್ಮಯ ಅನುಭವಕ್ಕೆ ಮಾತ್ರವೇ ದಕ್ಕುವಂಥದ್ದು. ಇಂತಹ ಅನನ್ಯ ಅನುಭವಗಳ ಸಾಲಿನಲ್ಲಿ ಕೇಸರಿಬಣ್ಣದ ಕೇತಕಿಯ ಕಣವೂ ಸೇರಿಕೊಂಡಿದೆ. ಚಳಿಗಾಲದ ಹೂವಿನ ಸೀಸನ್ ಮುಗಿದು ಬೀಜಗಳೆಲ್ಲ ನೆಲಕ್ಕೆ ಉದುರಿ ಗಿಡವೂ ಒಣಗಿಹೋದಮೇಲೆ ಮಲ್ಲಿಗೆಯನ್ನೋ, ಜಾಜಿಯನ್ನೋ ಅರಸುತ್ತ ಪ್ರಕೃತಿಸಹಜವೆಂಬ ಮನಸ್ಥಿತಿಯಲ್ಲಿ ನಾವೆಲ್ಲ ಕೇತಕಿಯನ್ನು ಮರೆತುಹೋಗುತ್ತಿದ್ದೆವು. ಅಂಗಳದಲ್ಲೋ, ಭತ್ತದ ಕಣಗಳಲ್ಲೋ ಬಿದ್ದಿರುತ್ತಿದ್ದ ಬೀಜಗಳೂ ಬಿಸಿಲಿಗೆ ಒಣಗುತ್ತ, ಗಾಳಿಯಲ್ಲಿ ಹಾರುತ್ತಾ ಮಾಯವಾಗಿಬಿಡುತ್ತಿದ್ದವು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಅಷ್ಟೂ ದಿನ ಮಾಯವಾಗಿದ್ದ ಬೀಜಗಳೆಲ್ಲ ಮೊಳಕೆಯೊಡೆದು, ಹತ್ತಿಪ್ಪತ್ತು ದಿನಗಳಲ್ಲಿ ಮೈತುಂಬ ಎಲೆಗಳನ್ನು ಹೊತ್ತು ಚಿಗುರಿಬಿಡುತ್ತಿದ್ದವು. ಜಾಸ್ತಿ ಮಳೆಯಾದ ವರ್ಷಗಳಲ್ಲಿ ಕೊಳೆತುಹೋಗದೇ, ಕಡಿಮೆ ಮಳೆಗೆ ಬಾಡಿಹೋಗದೇ ಜೀವ ಕಾಪಾಡಿಕೊಳ್ಳುತ್ತಿದ್ದ ಕೇತಕಿಯ ಗಿಡಗಳು ಜೀವನಪ್ರೀತಿಯನ್ನು ಉಳಿಸಿ ಬೆಳಸಿಕೊಂಡು ಹೋಗುವ ಕ್ರಿಯೆಯೊಂದರ ಕಣ್ಣೆದುರಿಗಿನ ಉದಾಹರಣೆಗಳಂತಿದ್ದವು. ಗುಂಪುಗುಂಪಾಗಿ ಹುಟ್ಟಿ, ಜೊತೆಯಾಗಿ ಬೆಳೆದು, ಕಿತ್ತೆಸೆದರೂ ಬೇಸರಿಸದೇ ಬೇರುಬಿಟ್ಟು, ಮೈತುಂಬ ಹೂವರಳಿಸಿ ಕೇಸರಿ-ಹಳದಿ ಬಣ್ಣಗಳ ಕಣವೊಂದನ್ನು ಸೃಷ್ಟಿಮಾಡಿಬಿಡುತ್ತಿದ್ದವು. ನಾಜೂಕು ಎಸಳುಗಳ ಕೇತಕಿ ಹೂವನ್ನು ಸ್ಪರ್ಶಿಸಿದಾಗಲೆಲ್ಲ, ಪ್ರಕೃತಿ ತನ್ನೊಳಗೆ ಬಚ್ಚಿಟ್ಟುಕೊಂಡ ವಿಸ್ಮಯವೊಂದು ಅಂಗೈಯೊಳಗೆ ದೊರಕಿದ ರೋಮಾಂಚನ ನನ್ನದಾಗುತ್ತಿತ್ತು. ವರ್ಷದಲ್ಲಿ ಒಂದೇ ತಿಂಗಳು ಕೈಗೆ ಸಿಗುತ್ತಿದ್ದ ಕೇತಕಿಯ ಹೂಗಳು ಕರ್ಟನ್ನಿನ ಮೇಲೂ ಇರಬಾರದಿತ್ತೇ ಎಂದುಕೊಳ್ಳುತ್ತಿದ್ದೆ.
ಆಗೆಲ್ಲ ಕರ್ಟನ್ನುಗಳೆಂದರೆ ಅಮ್ಮನ ಹಳೆಯ ಸೀರೆಗಳು. ಹಳತಾದ ಸೀರೆಗಳಲ್ಲಿ ಇರುವುದರಲ್ಲೇ ಒಳ್ಳೆಯ ಸೀರೆಯೊಂದು ಕರ್ಟನ್ನಿನ ಅವತಾರ ತೊಟ್ಟು ಬಾಗಿಲುಗಳನ್ನೂ, ಕಿಟಕಿಗಳನ್ನೂ ಆವರಿಸಿಕೊಳ್ಳುತ್ತಿತ್ತು. ಬಾಳೆಹಣ್ಣನ್ನೋ, ಬಿಸ್ಕಿಟನ್ನೋ ತಿಂದಾದ ಮೇಲೆ ಅರ್ಜಂಟಿಗೆ ಕೈ ಒರೆಸಿಕೊಳ್ಳುವ ಟವೆಲ್ ಆಗಿಯೂ ಆಗಾಗ ಕರ್ಟನ್ನು ಬಳಕೆಯಾಗುತ್ತಿತ್ತು. ಸೀರೆಯೊಂದು ಕರ್ಟನ್ನಾಗಿ ರೂಪಾಂತರ ಹೊಂದಿದ ಸ್ವಲ್ಪ ದಿನಗಳಲ್ಲಿಯೇ ಅದರ ಮೇಲಿದ್ದ ಹೂವು, ಮಾವಿನಕಾಯಿ, ವೀಣೆ, ನವಿಲಿನ ಚಿತ್ರಗಳೆಲ್ಲ ಮಾಸಿಹೋಗುತ್ತಿದ್ದವು. ಆದರೂ ಈ ಸೀರೆಯ ಇದೇ ಜಾಗದಲ್ಲಿ ಇಂಥದ್ದೇ ಚಿತ್ರವಿತ್ತು ಎನ್ನುವ ವಿವರ ಮಾತ್ರ ಕರಾರುವಕ್ಕಾಗಿ ಎಲ್ಲರ ಜ್ಞಾಪಕದಲ್ಲೂ ಇರುತ್ತಿತ್ತು. ಹೀಗೆ ಬದುಕಿನ ಒಂದು ಬಹುಮುಖ್ಯ ಭಾಗವೇ ಆಗಿಹೋಗುತ್ತಿದ್ದ ಕರ್ಟನ್ನಿನ ಮೇಲಿನ ಮೋಹ ಎಷ್ಟಿತ್ತೆಂದರೆ, ಅಮ್ಮ ಹೊಸ ಸೀರೆ ಖರೀದಿಸಿದಾಗಲೆಲ್ಲ ಇದು ಕರ್ಟನ್ನಾಗಿ ಬದಲಾಗಲು ಸೂಕ್ತವೋ ಅಲ್ಲವೋ ಎನ್ನುವ ಚರ್ಚೆಗಳೂ ನಡೆಯುತ್ತಿದ್ದವು. ಸೀರೆಯ ಜಾಗವನ್ನು ಬ್ರ್ಯಾಂಡೆಡ್ ಕರ್ಟನ್ನುಗಳು ತಮ್ಮದಾಗಿಸಿಕೊಂಡಮೇಲೂ, ಅವುಗಳೆಡೆಗಿನ ಸೆಳೆತ ಮಾತ್ರ ಹಾಗೆಯೇ ಉಳಿದುಕೊಂಡಿದೆ. ದಿನ ಬೆಳಗಾದರೆ ಕರ್ಟನ್ನಿನ ಮೇಲೆ ಅರಳುವ ಬಣ್ಣಬಣ್ಣದ ಹೂಗಳ ನಡುವೆ ಕೇತಕಿಯ ಬೀಜವೂ ಮೊಳಕೆಯೊಡೆಯುತ್ತಿರಬಹುದೆನ್ನುವ ನಿರೀಕ್ಷೆಯೊಂದು ಪ್ರತೀ ಬೆಳಗನ್ನೂ ಸುಂದರವಾಗಿಸುತ್ತದೆ.
***************************
ಲೇಖಕರ ಬಗ್ಗೆ ಎರಡು ಮಾತು:
ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
Nice medam
Beautiful
Very Good Anjana well written
ಕರ್ಟನ್ ಬೆಸೆದ ಬಾವುಕ ಬಂಧ ಸುಂದರ