ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ

ಶೀಲಾ ಭಂಡಾರ್ಕರ್

Snoring Images | Free Vectors, Photos & PSD

ನಾನು ಮೊದಲ ಕವಿತೆ ಬರೆದಾಗ ಅದು ಪದ್ಯವೋ ಗದ್ಯವೋ ನನಗೇ ತಿಳಿಯಲಿಲ್ಲ. ನಾನದನ್ನು ಕವಿತೆ ಅಂದುಕೊಂಡೆ ಅಷ್ಟೇ. ಬರೆಯಬೇಕೆಂದು ಬರೆದುದಲ್ಲ ಅದು ಕಾಳಿದಾಸನ ಬಾಯಿಯಿಂದ ಆಕಸ್ಮಿಕವಾಗಿ ನಿರರ್ಗಳವಾಗಿ ಶ್ಯಾಮಲಾ ದಂಡಕದ ಮಾಣಿಕ್ಯ ವೀಣಾ ಶ್ಲೋಕ ಹೊರಹೊಮ್ಮಿದಂತೆ ನನ್ನ ಮನಸ್ಸಿನೊಳಗೆ ಕೆಲವು ಸಾಲುಗಳು ಹಾಗೆ ಹಾಗೆಯೇ ಬರಲು ಶುರುವಾದವು.

ಅಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅದೊಂದು ರಾತ್ರಿ. ಎಂದಿನಂತೆ ಅದೂ ಒಂದು ರಾತ್ರಿ. ಮಲಗಿದರೆ ನಿದ್ದೆ ಹತ್ತುತ್ತಿಲ್ಲ. ಏನೇನು ಮಾಡಿದರೂ ಪ್ರಯತ್ನ ಫಲಕಾರಿ ಆಗುತ್ತಿಲ್ಲ. ಅಂದರೆ ಕಣ್ಣು ಮುಚ್ಚಲೂ ಆಗದು, ಕಿವಿ ಬಿಚ್ಚಲೂ ಆಗದು ಅಂತಹ ಸನ್ನಿವೇಶ.

ಎಷ್ಟು ಹೊರಳಾಡಿದರೂ ನಿದ್ದೆ ಬರದೆ ಹುಚ್ಚು ಹಿಡಿಯುವುದೊಂದು ಬಾಕಿ. ಈಗಿನಷ್ಟು ಧೈರ್ಯವಿದ್ದಿದ್ದರೆ ಏನೋ ಭಯಂಕರವಾದ್ದು ಘಟಿಸುತಿತ್ತು. ನಾನೇನಾದರೂ ವಿದೇಶದಲ್ಲಿ ಜನಿಸಿದ್ದಿದ್ದರೆ ಅದೇ ವಿಷಯಕ್ಕೆ ವಿಚ್ಛೇದನವೂ ಆಗುತಿತ್ತು.

ಆದರೆ ಭಾರತ ದೇಶದಲ್ಲಿ ಜನಿಸಿದ್ದರಿಂದ, ಭಾರತೀಯ ನಾರಿಯಾಗಿ ಇನ್ನೇನೂ ಮಾಡಲು ತೋಚದೆ ಪುಂಖಾನುಪುಂಖವಾಗಿ ತಲೆಯೊಳಗೆ ಬಂದ ಸಾಲುಗಳನ್ನು ಸೇರಿಸಿ ಏನೋ ಬರೆದೆ. ಅದೇ ನಾನು ಬರೆದ ಮೊದಲ ಕವಿತೆ.

ಕವಿತೆಯ ಶೀರ್ಷಿಕೆ “ನನ್ನವರ ಗೊರಕೆ”.

ಮದುವೆಯಾದಾಗಿನಿಂದಲೂ ಇವರ ಗೊರಕೆ ಅಭ್ಯಾಸವಾಗಿದ್ದರೂ.. ಒಮ್ಮೊಮ್ಮೆ ಚಿತ್ರ ವಿಚಿತ್ರ ಸ್ವರಗಳು ಹೊರಹೊಮ್ಮುವಾಗ ಬದುಕೇ ಅಸಹನೀಯವೆನಿಸುವುದುಂಟು.

ಆ ದಿನ ಅಂತಹದ್ದೇ ಸಂದರ್ಭ.

ಮಂದ್ರದಿಂದ ಶುರುವಾಗಿ ತಾರಕಕ್ಕೇರಿ ಪಂಚಮ ಸ್ವರದಲ್ಲಿ ಕರ್ಣಕಠೋರ..

ಹಳೆಯ ಪಿಟೀಲಿನ ತುಕ್ಕು ಹಿಡಿದ ತಂತಿಯನ್ನು ಉಜ್ಜುವ ಸಂಗೀತ.

ನೀವೇ ಯೋಚಿಸಿ ನನ್ನ ಸ್ಥಿತಿ ಹೇಗಿರಬಹುದು?

ನನಗೆ ಇನ್ನೊಂದು ಆಶ್ಚರ್ಯವೆಂದರೆ ಪಕ್ಕದಲ್ಲಿ ಮಲಗಿದ ನನಗೆ ಸಹಿಸಲು ಅಸಾಧ್ಯವಾದರೆ ತಾನೇ ಹೊಡೆಯುತ್ತಿರುವ ಗೊರಕೆಯಿಂದ ಅವರಿಗೆ ಎಚ್ಚರವಾಗದು ಹೇಗೆ?

ಒಮ್ಮೊಮ್ಮೆ ಲಾರಿ ಘಟ್ಟ ಹತ್ತುವುದೂ ಇದೆ, ಒಮ್ಮೊಮ್ಮೆ ಎಣ್ಣೆ ಹಾಕದ, ತುಕ್ಕು ಹಿಡಿದ ರಾಟೆಯಿಂದ ನೀರು ಸೇದುವಂತೆ ಕೇಳಿಸುವುದೂ ಇದೆ.

ರಾತ್ರಿಯ ನೀರವತೆಯಲ್ಲಿ ಮೂಡಿ ಬಂದ ನನ್ನ ಮೊದಲ ಕವನ ಬರೆದ ಮೇಲೆ ನನ್ನೊಳಗೆ ಏನೋ ಪುಳಕ. ಜೊತೆಗೆ ಸಣ್ಣದೊಂದು ನಡುಕ.

ನನ್ನವರಿಗೇನಾದರೂ ನನ್ನ ಕವನದ ಬಗ್ಗೆ ತಿಳಿದರೆ ಆಮೇಲಿನ ಪರಿಣಾಮಗಳನ್ನು ಊಹಿಸಿ ಹೊಟ್ಟೆಯೊಳಗೇನೋ ವಿಚಿತ್ರ ಭಯ ಶುರುವಾದರೂ ಮೊದಲ ಕವನವನ್ನು ಅಳಿಸಲು ಮನಸ್ಸು ಬರಲಿಲ್ಲ.

ನೋಡಿದರೆ ನೋಡಲಿ.. ಅವರಿಗೂ ತಿಳಿಯಲಿ ಪರೋಕ್ಷವಾಗಿ ತಾನು ಒಂದು ಪಾಪದ ಪ್ರಾಣಿಗೆ ಎಂಥಾ ದೊಡ್ಡ ಹಿಂಸೆ ಕೊಡುತ್ತಿರುವೆನೆಂಬ ಅರಿವು ಮೂಡಲಿ. ಇನ್ನೂ ಏನೇನೋ ದೊಡ್ಡ ದೊಡ್ಡ ಶಬ್ದಗಳೊಂದಿಗೆ ಮನಸ್ಸಿನಲ್ಲೇ ಧೈರ್ಯ ತಂದುಕೊಳ್ಳಲು ನೋಡಿದೆ.

ಯಾಕೆಂದರೆ, ಯಾವಾಗಲಾದರೂ ಗೊರಕೆಯ ಬಗ್ಗೆ ಮಾತು ಬಂದಾಗ ನಾನು ಗೊರಕೆ ಹೊಡೆಯುವುದೇ ಇಲ್ಲ ಎಂದು ವಾದಿಸುತಿದ್ದರು. ಯಾರು ಹೇಳಿದರೂ ಒಪ್ಪಿಕೊಳ್ಳುತ್ತಿರಲಿಲ್ಲ.

ಈ ನನ್ನ ಮೊದಲ ಕವನ ಅವರ ಕಣ್ಣಿಗೆ ಯಾವತ್ತೂ ಬೀಳದಿರಲಿ, ಬಿದ್ದರೂ ನಕ್ಕು ಸುಮ್ಮನಾಗಲಿ ಎಂದು ಹರಕೆಯನ್ನೂ ಹೊತ್ತುಕೊಂಡೆ.

ಹರಕೆ ಫಲಿಸಿದೆ. ಇಂದಿನವರೆಗೆ ಅವರ ಕಣ್ಣಿಗೆ ಗೊರಕೆ ಕವನ ಬಿದ್ದಿಲ್ಲ. ಆದರೆ ಇನ್ನೂ ಗೊರಕೆ ಹೊಡೆಯುವುದು ನಿಂತಿಲ್ಲ.

ಕವಿತೆಯನ್ನು ಸ್ನೇಹಿತರ ಜೊತೆ ಹಂಚಿಕೊಂಡಾಗ ಮಾತ್ರ ಒಳ್ಳೆಯ ಪ್ರತಿಕ್ರಿಯೆ ಬಂತು. ಹೆಚ್ಚಿನವರು ತಮ್ಮ ತಮ್ಮ ಗಂಡಂದಿರ ಗೊರಕೆಯ ಬಗ್ಗೆಯೂ ಹೇಳಿಕೊಂಡರು. ನನ್ನ ಸೋದರಮಾವ ನನ್ನ ಕವಿತೆಯಿಂದ ಪ್ರಭಾವಿತನಾಗಿ ಅವರ ಹೆಂಡತಿಯ ಗೊರಕೆಯ “ನನ್ನವಳ ಗೊರಕೆ” ಎಂಬ ಕವಿತೆಯನ್ನು ಬರೆದರು.

ಮೊದಲ ಕವಿತೆಯ ಪುಳಕವನ್ನು ಕದ್ದು ಮುಚ್ಚಿಯೇ ಅನುಭವಿಸುವಂತಾಯ್ತು.

ಮನೆಗೆ ಬಂದವರ್ಯಾರಾದರೂ ನಿನ್ನ ಕವಿತೆ ಚೆನ್ನಾಗಿತ್ತು ಅನ್ನುವುದರೊಳಗೆ ಅವರಿಗೆ ಕೈ ಬಾಯಿ ಸನ್ನೆ ಮಾಡಿ ಮುಂದೆ ಮಾತನಾಡದಂತೆ ತಡೆಯುತಿದ್ದೆ.

ಮುಂದೆ ಒಮ್ಮೆ ಕೊಂಕಣಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿ ಅದೇ ಕವಿತೆಯನ್ನು ಕೊಂಕಣಿಗೆ ಭಾಷಾಂತರಿಸಿ ಓದುವಾಗ ಎರಡೆರಡು ಸಲ ನನ್ನವರು ಅಲ್ಲಿ ಇಲ್ಲದುದನ್ನು ಖಾತ್ರಿ ಮಾಡಿಕೊಂಡ ಮೇಲೆಯೇ ಓದಿದ್ದೆ.

ಏನೇ ಹೇಳಿ .. ಹೇಗೇ ಇದ್ದರೂ ಮೊದಲ ಕವಿತೆಯ ಸಂಭ್ರಮವೇ ಬೇರೆ.

*****************

16 thoughts on “ಮೊದಲ ಕವಿತೆ

  1. ಹ್ಹಹ್ಹಹ್ಹ…
    ಚೆನ್ನಾಗಿದೆ ಅನುಭವಾಮೃತ ಕವಿತೆ

  2. ಗೊರಕೆ ರಾಮಾಯಣ ತುಂಬಾ ಚೆನ್ನಾಗಿ ದೆ, ತೊರವೆ ರಾಮಾಯಣದ ಹಾಗೆ.

  3. ತಮಾಷೆಯಾಗಿದೆ… ಆ ಕವನವನ್ನು ಹಾಕಬಾರದಿತ್ತೇ ಎನಿಸಿತು..

    1. ಧನ್ಯವಾದಗಳು ಮೇಡಮ್. ನಿಮಗಾಗಿ ಆ ಕವಿತೆ.

      ನನ್ನವರ ಗೊರಕೆ
      ————–
      ಅದು ಬರಿಯ ಗೊರಕೆಯಲ್ಲ,
      ಸಪ್ತ ಸ್ವರದ ಗೊರಕೆ..
      ಮಂದ್ರದಿಂದ ತಾರಕ
      ಶೃತಿಯಲ್ಲಿ ಪಂಚಮ.

      ಒಂದು ಸಲ ಸ್ನೇಹಿತೆಯಲ್ಲಿ
      ಹೇಳಿಕೊಂಡಾಗ
      ಉಪಾಯವೊಂದನ್ನು ಸೂಚಿಸಿದಳು.
      ನಾನ್ಯಾವುದೋ ಪ್ರಯೋಗ
      ಮಾಡಲು ಹೊರಟಂತೆ
      ರಾತ್ರಿಯಾಗುವುದನ್ನೇ
      ಕಾಯುತ್ತಿದ್ದೆ.

      ಮಲಗಿದ ಸ್ವಲ್ಪ ಹೊತ್ತಲ್ಲೇ
      ಶುರುವಾಯಿತು..
      ಕರ್ಣಕಠೋರ ಸಂಗೀತ.
      ಗೆಳತಿಯ ಸಲಹೆಯಂತೆ
      ಎಚ್ಚರಿಸಿ ಮಗ್ಗುಲು ಬದಲಾಯಿಸಲು
      ಹೇಳಿದೆ. ಸ್ವಲ್ಪ ಹೊತ್ತಿನ ರಾಗದ ನಂತರ…
      ಮೌನವೇ ಮೌನ…

      ವಾಹ್!!! ಪ್ರಯೋಗ
      ಫಲಕಾರಿಯಾಯಿತು.
      ನಾಳೆ ಬೆಳಿಗ್ಗೆಯೇ
      ಅವಳಿಗೆ ಹೇಳಬೇಕು.
      ಯಾವಾಗ ಮಂಪರು ತಾಕಿತೋ

      ಇದ್ದಕ್ಕಿದ್ದ ಹಾಗೆ.. ಲಾರಿಯೊಂದು
      ಘಟ್ಟ ಹತ್ತುವ ಸದ್ದು…
      ಎಲ್ಲಿದ್ದೇನೆ ನಾನು..?
      ಊರಿಗೆ ಯಾವಾಗ ಹೋದೆ.
      ಲಾರಿಯನ್ನೇಕೆ ಹತ್ತಿದೆ..
      ಬೆಚ್ಚಿ ಎಚ್ಚರವಾಗಿ
      ನೋಡಿದರೆ..

      ನನ್ನವರೇ .. ಅವರದೇ ಗೊರಕೆ.
      ಅಯ್ಯೋ.. ಯಾರಲ್ಲಿ ಹೇಳಿಕೊಳ್ಳಲಿ
      ಈ ವ್ಯಥೆಯ!!
      ಹತ್ತಿಯ ದೊಡ್ಡ ಉಂಡೆಗಳನ್ನು
      ಕಿವಿಯಲ್ಲಿ ತುರುಕಿ,
      ತಲೆಯವರೆಗೆ ಹೊದ್ದು
      ಮಲಗಿದರೆ.

      ಇನ್ನೂ ಕೇಳಿಸುತ್ತಿದೆ
      ಹಳೆಯ ಪಿಟೀಲಿನ ತುಕ್ಕು ಹಿಡಿದ
      ತಂತಿಗಳ ಕೊರೆತ.
      ತಡೆಯಲಾರದೇ ಎಬ್ಬಿಸಿ ಹೇಳಿಯೇ ಬಿಟ್ಟೆ

      ಸುಮ್ಮನೆ ಮಲಗುವುದು ಬಿಟ್ಟು
      ಏನಿದು ನಿನ್ನ ಗೋಳು.
      ಹಗಲು ಹೊತ್ತಲ್ಲಿ ನೀನು ಕೊರೆಯುತ್ತಿಯಾ
      ಈಗ ನಾನು ಗೊರೆದರೆ ನಿಂಗೆ ಕಷ್ಟ ..
      ನಾನು ಸಹಿಸಿಕೊಂಡಿಲ್ವಾ ನಿನ್ನ..?
      ನೀನೂ ಸಹಿಸಿ ಕೋ..

      ಎರಡು ದಿನದಿಂದ
      ನಾನು ಕೊರೆಯುವುದನ್ನು
      ನಿಲ್ಲಿಸಿದ್ದೇನೆ.
      ಏನಾಗುವುದೋ ಕಾದು ನೋಡಬೇಕು.

      — ಶೀಲಾ ಭಂಡಾರ್ಕರ್.

  4. ಆಹಾ.. ಚೆಂದ ಅನುಭವ.. ಕಾವ್ಯಾತ್ಮಕವಾಗಿ ಹೇಳಿದ್ದೀರಿ ಮ್ಯಾಮ್..

  5. ನನ್ನ ಮಡದಿಯ ಗೊರಕೆಯ ಬಗ್ಗೆಯೂ ಬರೆಯಬೇಕು ನಾನು… ನಿದ್ರೆಯಲ್ಲಿ ಹೊಡೆಯುವುದಿರಲಿ, ನಿದ್ರೆ ಬರುವ ಮುನ್ನವೇ ಶುರುಮಾಡುವಳು ಹೊಡೆಯಲು ಗೊರಕೆಗಳನ್ನ!!

    1. ಹ ಹಾ… ಬರೆಯಿರಿ ಸರ್. ಆದರೆ ಅವರ ಕಣ್ಡಿಗೆ ಬೀಳದಂತೆ ನೋಡಿಕೊಳ್ಳಿ.

  6. ಶೀಲಾ, ಏನು ಬರೆದ್ರೂ ಅದೆಷ್ಟು ಚಂದ ಬರೀತೀರಿ ನೀವು

    1. ಆದರೂ ಅಕ್ಕಾ… ನಿಮ್ಮ ಹಾಗೆ ಬರೆಯಬೇಕು ನಾನು.

  7. ಕವಿತೆಯ ಬಗ್ಗೆ ಓದಲು ಚಂದ.

    ತುಂಬಾ ಆಪ್ತವಾಗಿ ಬರೆದಿದ್ದೀರಿ ನಿಮ್ಮ ಭಾವನೆಯನ್ನು, ಬವಣೆಯನ್ನು.
    ಅಂಥದೊಂದು ಗೊರಕೆ ಒಂದು ಆರೋಗ್ಯ ಸಮಸ್ಯೆ ಎಂದು ಹೆಚ್ಚಿನವರಿಗೆ ಅರಿವಿಲ್ಲ.

    ಆದರೂ ಪತಿರಾಯರ ಗೊರಕೆಯಿಂದಾಗಿ ಕವಯತ್ರಿಯಾದಿರಿ!

  8. ಆದರೂ ಸರ್ ಗೊರಕೆಯೂ ಜೀವನದಲ್ಲಿ ತಿರುವಾಗಬಹುದು ಅಂದುಕೊಂಡವರಾರು!! ಧನ್ಯವಾದಗಳು ಸರ್.

Leave a Reply

Back To Top