ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
“ರೂಪಾಂತರದ ಬದುಕು”


ಆಸೆಗಳು ಒಂದರ ಹಿಂದೆ ಒಂದರಂತೆ
ಇರುವೆಯ ಸಾಲುಗಳಂತೆ ನಡೆದಿರಲು
ಅಂಗಿಯ ಹಿಡಿದು ಜಗ್ಗಾಡಿದರೇನು
ಇಂಗಿತದ ಹಂಗು ತೀರುವುದೆ, ತಿಳಿಯದು
ಮೂಟೆ ಮೂಟೆ ಹಣದ ಸಂತೆಯಲ್ಲಿ
ಅರೆಬೆತ್ತಲೆಯ ನರ್ತನ
ಹರಕು ಬಟ್ಟೆ ಮುರುಕು ಜಂತಿಯ
ಮಾರಣ ಹೋಮ ನಡೆದಿಹುದು
ಸಮಯದ ಗಡಿಯಾರದಲಿ ಕಟ್ಟಿದ ಗಾಣದ ಎತ್ತುಗಳಂತಾಗಿದ್ದೇವೆ
ಮಮತೆ ಅಂತಃಕರಣ ಹೆತ್ತವರ ಒಡನಾಟಕ್ಕೆ ವಾಟ್ಸಾಪ್ ಫೋನ್ ಗಳೆ ಸಮಾಧಾನ!
ಫೇಸ್ಬುಕ್ ಇನ್ಸ್ಟಾಗ್ರಾಮ್ ಗಳ ಸಾಮಾಜಿಕ ಜಾಲತಾಣಗಳಲ್ಲಿ
ವಧು ವರಗಳ ಅನ್ವೇಷಣೆ
ಮದುವೆಗಳು ಸ್ವರ್ಗದಲ್ಲಿ ನಿರ್ಧರಿತವೆಂದ ನಿಲುವು ಸುಳ್ಳಾಗುತ್ತಿರುವುದು ದುರಂತ!
ನಿಸರ್ಗದ ಮಡಿಲು ಆಟ ಹುಡುಗಾಟದ ಬಾಲ್ಯ
ಅಜ್ಜಿಯ ನೀತಿ ಕತೆ ತಾಯಿಯ ಕೈ ತುತ್ತಿನ ಸವಿಯೂಟ
ಅಮವಾಸ್ಯೆಯ ಕತ್ತಲೆಯಲ್ಲಿ
ಬೆಳದಿಂಗಳ ಚಂದಿರನನ್ನು ಹುಡುಕಿದ ಆತಂಕ!
ಈ ರೂಪಾಂತರಗಳ ನಡುವೆ
ಸರಿದು ಹೋಗುತ್ತಿರುವ ವಯಸು
ಹರಿದು ಹೋಗುತ್ತಿರುವ ಕನಸು
ಸಿಗದ ಉತ್ತರ!!
ಮಾಜಾನ್ ಮಸ್ಕಿ



