ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ತರಗತಿಯ ಸನ್ನಿವೇಶ. ವಿದ್ಯಾರ್ಥಿಗಳೆಲ್ಲರೂ ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತು ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಕನ್ನಡ ಗುರುಗಳು ತರಗತಿಯ ಒಳಗೆ ಬರುತ್ತಲೇ ಸದ್ದು ನಿಂತು ಹೋಗುತ್ತದೆ. ವಿದ್ಯಾರ್ಥಿಗಳು ಎದ್ದು ನಿಂತು ‘ ನಮಸ್ಕಾರ ಗುರುಗಳೇ’ಎಂದು ವಂದಿಸಿದಾಗ, ಗುರುಗಳು ಕುಳಿತುಕೊಳ್ಳುವಂತೆ ಸನ್ನೆ ಮಾಡುತ್ತಾರೆ.)

ಮೇಷ್ಟ್ರು : ( ತರಗತಿಯೊಳಗೆ ಒಮ್ಮೆ ಕಣ್ಣಾಡಿಸಿ) ಮೋಹನ ಸದ್ಯ, ಇವತ್ತಾದರೂ ಶಾಲೆಗೆ ಬಂದೆಯಲ್ಲ, ಐದು ದಿನಗಳಿಂದ ಎಲ್ಲಿಗೆ ಹೋಗಿದ್ದೆ?

ಮೋಹನ:( ಎದ್ದು ನಿಂತು) ಸರ್, ನಮ್ಮ ಅಜ್ಜಿ ಊರಿಗೆ ಹೋಗಿದ್ದೆ ಸರ್ ಬನವಾಸಿಗೆ. ಅಲ್ಲಿಗೆ ಹೋದರೆ ಸಮಯ ಹೋಗೋದೇ ಗೊತ್ತಾಗಲ್ಲ ಸರ್.( ಹಲ್ಲು ಕಿರಿಯುವನು)

ಗಿರಿಜ: ಸರ್ , ‘ಬನವಾಸಿ’ ಪಂಪ ಕವಿ ಜನಿಸಿದ ಊರು ಅಲ್ವಾ?

ಮೇಷ್ಟ್ರು: ಹೌದು ಗಿರಿಜಾ, ಪಂಪ ಬರಿ ಕವಿಯಷ್ಠೇ ಅಲ್ಲ, ನಮ್ಮ ಕನ್ನಡದ ಆದಿಕವಿ.( ಎಂದು ಹೇಳುತ್ತಾ ಕಪ್ಪ ಹಲಗೆಯ ಮೇಲೆ ‘ಆದಿಕವಿ ಪಂಪ’ ಎಂದು ಬರೆಯುವರು). ಮೋಹನ ನಿಮ್ಮ ಊರು ಬನವಾಸಿನೇ ಅಲ್ವವೇ! ಪಂಪನ ಬಗ್ಗೆ ನಿನಗೆ ಏನು ತಿಳಿದಿದೆ ಹೇಳು ನೋಡೋಣ.

ಮೋಹನ : ಸರ್ ಪಂಪ ೧೦ನೇ ಶತಮಾನದಲ್ಲಿ ಜೀವಿಸಿದ್ದರು. ಅವರ ಕೃತಿಯ ಒಂದು ಸಾಲನ್ನು ನಮ್ಮ ಅಜ್ಜ ಯಾವಾಗಲೂ ಹೇಳುತ್ತಿರ್ತಾರೆ. ನನಗೂ ಅದು ಕಂಠ ಪಾಠ ಆಗಿಹೋಗಿದೆ ಸರ್.

ಮೇಷ್ಟ್ರು: ಯಾವುದಪ್ಪಾ ಆ ಸಾಲು?

ಮೋಹನ: ( ಆವೇಶಭರಿತವಾದ ಧ್ವನಿಯಿಂದ)
ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ”

ಮೇಷ್ಟ್ರು : ಭೇಷ್ ಭೇಷ್ ಚೆನ್ನಾಗಿ ಹೇಳಿದೆ.

ಅನನ್ಯ: ಸರ್, ನನಗೆ ಪಂಪ ಕವಿಯ ಬಗ್ಗೆ ಜಾಸ್ತಿ ತಿಳಿದುಕೊಳ್ಳಬೇಕೆಂಬ ಆಸೆ ಆಗ್ತಿದೆ. ಅವರ ಬಗ್ಗೆ ಹೇಳಿ ಸರ್.

ಮೇಷ್ಟ್ರು: ಪಂಪನ ಬಗ್ಗೆ ಹೇಳಲು ಇಡೀ ದಿನನೇ ಸಾಲದು. ಪಂಪ ಮಹಾ ಕವಿಯು ‘ಅರಿಕೇಸರಿ’ ಎಂಬ ರಾಜನ ಆಸ್ಥಾನ ಕವಿಯಾಗಿದ್ದನು. ಇವನು ಬರೆದಿರುವ ಎರಡು ಮಹಾನ್ ಕೃತಿಗಳು ‘ಅದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’
ಆದಿಪುರಾಣ’ ಇವನ‌ಮೊದಲ ಕಾವ್ಯ. ಇದು ಜೈನ ತೀರ್ಥಂಕರರ ಚರಿತ್ತೆಯನ್ನು ಒಳಗೊಂಡಿದೆ.

ಕಾವ್ಯ: ಹಾಗಾದರೆ ವಿಕ್ರಮಾರ್ಜುನ ವಿಜಯ ಅಂದ್ರೆ ಏನು ಸರ್? ವಿಕ್ರಮ್-ಬೇತಾಳ ಕತೆಯಲ್ಲಿ ಬರುವ ವಿಕ್ರಮಾನ ಕತೇನಾ?

ಮೇಷ್ಟ್ರು : ಅಲ್ಲ ಕಾವ್ಯ, ಇದೊಂದು ಮಹಾಭಾರತದ ಕಥೆ. ವಿಕ್ರಮಾರ್ಜುನ ವಿಜಯ ಅಂದರೆ ಪಾಂಡವರಲ್ಲಿ ಒಬ್ಬನಾದ ಅರ್ಜುನನ ವಿಜಯ. ಪಂಪ ಅರ್ಜುನನನ್ನು ತನ್ನ ಕಾವ್ಯದ ನಾಯಕನನ್ನಾಗಿ ಮಾಡಿಕೊಂಡನು. ಅದಕ್ಕಾಗಿ ತನ್ನ ಕಾವ್ಯವನ್ಬು ವಿಕ್ರಮಾರ್ಜುನ ವಿಜಯ ಎಂದು ಕರೆದನು. ಈ ಕೃತಿಗೆ ಇನ್ನೊಂದು ಹೆಸರೂ ಇದೆ ‘ಪಂಪ ಭಾರತಾ’ ಅಂತ.

ಶಂಕರ: ಅಲ್ಲಾ ಗುರುಗಳೇ, ಅರ್ಜುನ ಹೇಗೆ ನಾಯಕ ಆಗ್ತಾನೆ? ಯುಧಿಷ್ಠಿರ ತಾನೆ ಹಿರಿಯವನು?

ಮೇಷ್ಟ್ರು : ಹೌದು. ನೀನು ಹೇಳಿದ್ದು ಸರಿಯಾಗಿದೆ. ಆದರೆ ಇಲ್ಲಿ ಪಂಪ ಅರ್ಜುನನನ್ನು ತನ್ನ ಆಶ್ರಯದಾತನಾದ ಅರಿಕೇಸರಿ ರಾಜನ ಜೊತೆಗೆ ಹೋಲಿಕೆ ಮಾಡಿದ್ದಾನೆ. ಆದ್ದರಿಂದ ಕಾವ್ಯದ ಉದ್ದಕ್ಕೂ ಅರ್ಜುನನನ್ನು ಹೊಗಳುವ ರೀತಿ ತನ್ನ ಆಶ್ರಯದಾತನನ್ನು ಹಾಡಿ ಹೊಗಳಿದ್ದಾನೆ. ಅವನನ್ನೇ ಕೃತಿಯ ನಾಯಕನನ್ನಾಗಿ ಮಾಡಿಕೊಂಡಿದ್ದಾನೆ. “ಉಪ್ಪಿಟ್ಟವರನ್ನು ಮುಪ್ಪಿನ ತನಕ ನೆನೆ ಅಂತ ಗಾದೆ ಕೇಳಿಲ್ಲವೇ?” ಆಶ್ರಯದಾತ ಅರಿಕೇಸರಿ ಅಂದ್ರೂ ಇನ್ನಿಲ್ಲದ ಪ್ರೀತಿ ಜೊತೆಗೆ ತನ್ನ ಹುಟ್ಟೂರಾದ ಬನವಾಸಿನ ಕಂಡರೂ ಪಂಚಪ್ರಾಣ
ಆಗಲೇ ಮೋಹನ ಹೇಳಿದನಲ್ಲಾ ಆ ಸಾಲನ್ನು ಕೇಳಿದಾಗ ಇದು ಚೆನ್ನಾಗಿ ಅರ್ಥವಾಗುತ್ತದೆ..

ಮೋಹನ: ( ತಲೆ ಕೆರೆದುಕೊಳ್ಳುತ್ತಾ). ಪಂಪ ಹೇಳಿದ ಮಾತಿನ ಅರ್ಥ ಏನು ಸರ್?(ಇಡೀ ತರಗತಿ ಗಟ್ಟಿಯಾಗಿ ನಗುವುದು)

ಮೇಷ್ಟ್ರು: ಅರ್ಥ ತಿಳಿಯದೆಯೇ ಕಂಠ ಪಾಠ ಮಾಡಿದೆಯೋ? ಅದಕ್ಕೆ ಹಿರಿಯರು ಹೇಳೋದು “ಅರ್ಥ ಇಲ್ಲದ ಓದು ವ್ಯರ್ಥ” ಅಂತ. ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ”ಎಂದರೆ ಯಾರಾದರೂ ನನ್ನನ್ನು ಅಂಕುಶದಿಂದ ತಿವಿದಾಗಲೂ ನನಗೆ ಬನವಾಸಿಯ ನೆನಪಾಗುತ್ತದೆ ಎಂದು.ಅಲ್ಲದೆ
” ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್” ಎಂದು ಬನವಾಸಿಯನ್ನು ತನ್ನ ಕೃತಿಯಲ್ಲಿ ಅಲ್ಲಲ್ಲಿ ನೆನೆಯುತ್ತಾನೆ. ಮರಿದುಂಬಿಯಾಗಿ, ಕೋಗಿಲೆಯಾಗಿ ಆದರೂ ನನ್ನ ಊರಿನಲ್ಲೇ ಬನವಾಸಿಯಲ್ಲೇ ಹುಟ್ಟಬೇಕು ಎಂಬುದು ಅವನ ಮಾತಿನ ಅರ್ಥ.

ಶಂಕರ: ಇದೇನು ಪದ್ಯನೋ ಗದ್ಯಾನೋ ?

ಮೇಷ್ಟು: ಇದು ಹಳೆಗನ್ಬಡ ಮಕ್ಕಳೇ. ಚಂಪೂ ಶೈಲಿ.ಇದರಲ್ಲಿ ಪದ್ಯನೂ ಇರುತ್ತೆ, ಗದ್ಯಾನೂ ಇರುತ್ತೆ. ಎರಡೂ ಮಿಶ್ರಿತವಾದ ಶೈಲಿಯನ್ನು ಚಂಪೂ ಶೈಲಿ ಅಂತ ಕರೀತೀವಿ.

ಮಾಧುರಿ: ಇದು ತುಂಬಾ ಕಷ್ಟ ಅಲ್ಲವೇ ಸರ್?

ಮೇಷ್ಟು: ಹಾಗೇನೂ ಇಲ್ಲ ಮಾಧುರಿ. ಓದಿ ಕಲಿತರೆ ಎಲ್ಲವೂ ಸುಲಭಾನೇ. ಪಂಪ ಹಾಕಿಕೊಟ್ಟ ದಾರಿಯಲ್ಲೇ ಅವನ ಸಮಕಾಲೀನರಾದ ರನ್ನ ಮತ್ತು ಪೊನ್ನ ಕೂಡ ತಮ್ಮ ಕೃತಿಗಳನ್ನು ರಚಿಸಿದ್ದಾರೆ. ಪಂಪ, ರನ್ನ ಮತ್ತು ಪೊನ್ನರನ್ನು ‘ರತ್ನತ್ರಯರು’ ಅಂತ ಕರೆಯುತ್ತಾರೆ.

ಶಂಕರ: ಗುರುಗಳೇ ನನಗೂ ಒಮ್ಮೆ ಬನವಾಸಿಯನ್ನು ನೋಡಬೇಕೆನಿಸುತ್ತಿದೆ.

ಮೋಹನ: ಅದಕ್ಕೇನಂತೆ, ಬರುವ ಬೇಸಿಗೆ ರಜೆಯಲ್ಲಿ ನೀವೆಲ್ಲರೂ ನನ್ನ ಜೊತೆ ನಮ್ಮ ಊರಿಗೆ ಬನ್ನಿ. ನಮ್ಮ ಅಜ್ಜಿ ತಾತನಿಗೂ ಬಹಳ ಸಂತೋಷವಾಗುತ್ತದೆ. ಮಧುಕೇಶ್ವರ ದೇವಾಲಯ, ಗುಡ್ನಾಪುರ ಸರೋವರ, ರಾಣಿ ಮಹಲ್ ಮುಂತಾದ ನೋಡಬೇಕಾದ ಪ್ರೇಕ್ಷಣೀಯ ಸ್ಥಳಗಳೂ ಇವೆ.

ಮೇಷ್ಟ್ರು: ಹಾಗೇ ಆಗಲಿ ಮೋಹನ, ನಾನು ಪ್ರಾಂಶುಪಾಲರ ಜೊತೆ ಮಾತನಾಡಿ ಈ ವರ್ಷದ ಶೈಕ್ಷಣಿಕ‌ ಪ್ರವಾಸವನ್ನು ಬನವಾಸಿಗೇ ಏಪರ್ಡಿಸುವಂತೆ ವಿನಂತಿಸಿಕೊಳ್ಳುತ್ತೇನೆ. ಆ ಮಹಾನ್ ಕವಿಯ ಊರನ್ನು ಎಲ್ಲರೂ ದರ್ಶಿಸಿದಂತಾಗುತ್ತದೆ. (ಅಷ್ಟರಲ್ಲಿ ಅವಧಿ ಮುಗಿದ ಗಂಟೆ ಬಾರಿಸುತ್ತದೆ. ಗುರುಗಳು ತರಗತಿಯಿಂದ ಹೊರಗೆ ನಡೆಯುತ್ತಾರೆ. ವಿದ್ಯಾರ್ಥಿಗಳೆಲ್ಲರೂ ಎದ್ದು ನಿಂತು “ಧನ್ಯವಾದಗಳು ಗುರುಗಳೇ” ಎಂದು ವಂದಿಸುತ್ತಾರೆ


About The Author

Leave a Reply

You cannot copy content of this page

Scroll to Top