ಸಮಾಜ ಸಂಗಾತಿ
ಪ್ರೊ.ರಾಜೇಶ್ವರಿ ಶೀಲವಂತ ಪುಣೆ
“ಭಾರತೀಯ ಮಕ್ಕಳ ಇಂದಿನ ನಡವಳಿಕೆ”


ಅಂದಿನ ಭಾರತೀಯ ಮಕ್ಕಳಲ್ಲಿ ಸಂಪ್ರದಾಯ ಮತ್ತು ಸಂಸ್ಕಾರ ಗುಣಗಳು ತುಂಬಿ ತುಳುಕುತ್ತಿದ್ದವು .
ಅವರಲ್ಲಿ ತಂದೆ, ತಾಯಿ, ಗುರು ಹಿರಿಯರ ಬಗ್ಗೆ ಆದರದ ಭಾವವಿತ್ತು. ಮನೆಯಲ್ಲಿ ಮಕ್ಕಳು ಎಲ್ಲರೊಂದಿಗೆ ಪ್ರೀತಿ ಸೌಹಾರ್ದತೆಯ ವಾತಾವರಣದೊಂದಿಗೆ ಸಂಭ್ರಮಿಸುತ್ತಿದ್ದರು.
ನಿಕಟ ಕುಟುಂಬದ ಬಾಂಧವ್ಯದಿಂದಾಗಿ, ಮಕ್ಕಳು ಹಂಚಿಕೊಳ್ಳುವಿಕೆ ಮತ್ತು ಸಾಮಾಜಿಕ ಹೊಂದಾಣಿಕೆಯನ್ನು ಲೀಲಾಜಾಲವಾಗಿ
ಕಲಿಯುತ್ತಿದ್ದರು.ಹೆಣ್ಣು ಮಗು ಅಭ್ಯಾಸದ ಜೊತೆ ಮನೆಗೆಲಸ ಕಲಿತರೆ ಗಂಡು ಮಗುಹೊರಗಿನ ವ್ಯವಹಾರ ಜ್ಞಾನ ಬೆಳೆಸಿಕೊಕೊಳ್ಳುತ್ತಿತ್ತು.
ಹೀಗಾಗಿ ಮದುವೆಯ ನಂತರವೂ ಅವರಿಗೆ ಮನೆಯ ಜವಾಬ್ದಾರಿ ಹೊಂದಾಣಿಕೆಯಲ್ಲಿ ಚಾತುರ್ಯವಿತ್ತು. ಆಗ ಹೆಣ್ಣು ಮಗಳು ಮದುವೆ ನಂತರ ಅತ್ತೆ ಮನೆಯಲ್ಲಿ ತನ್ನ ಉದ್ಯೋಗದ ಜೊತೆಗೆ ಸಂಸಾರಿಕ ಜೀವನವನ್ನು ಸಾಮರಸ್ಯದಿಂದ ನಿಭಾಯಿಸುತ್ತಿದ್ದಳು.ಅಂದಿನ ಪೀಳಿಗೆಯಲ್ಲಿ ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಜೊತೆಗೆ ಅವರ ಭಾವನಾತ್ಮಕ ಬೆಳವಣಿಗೆ ಹಾಗೂ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆಗೂ ಗಮನಹರಿಸುತ್ತಿದ್ದರು. ಅಂದು ಅಜ್ಜ, ಅಜ್ಜಿ ಮಕ್ಕಳಿಗೆ ಕುಟುಂಬದ ಮೌಲ್ಯಗಳನ್ನ ಮತ್ತು ಸಂಸ್ಕೃತಿಯನ್ನ ಹೇಗೆ ಕಾಪಾಡಬೇಕೆಂದು ತಿಳಿಸುತ್ತಿದ್ದರು. ಹೀಗಾಗಿ ಭಾರತದಲ್ಲಿ ಮಕ್ಕಳು ತಮ್ಮ ಹಿರಿಯರು, ಪೋಷಕರು ಮತ್ತು ಶಿಕ್ಷಕರಿಗೆ ಗೌರವ ನೀಡುತ್ತಿದ್ದರು. ಜಂಟಿ ಕುಟುಂಬದ ವ್ಯವಸ್ಥೆ ಅಥವಾ ನಿಕಟ ಕುಟುಂಬದ ಬಾಂಧವ್ಯದಿಂದಾಗಿ, ಆಗಿನ ಮಕ್ಕಳು ಹಂಚಿಕೊಳ್ಳುವಿಕೆ ಮತ್ತು ಸಾಮಾಜಿಕ ಹೊಂದಾಣಿಕೆಗಳನ್ನು ಬೆಳೆಯುತ್ತಲೇ ಕಲಿಯುತ್ತಿದ್ದರು .
ಆದರೆ ಈಗ ಆಧುನಿಕತೆಯ ಹೆಸರಿನಲ್ಲಿ ತಂತ್ರಜ್ಞಾನದ ಬಳಕೆ ಅತಿಯಾಗಿದೆ .ಭಾರತೀಯ ಮಕ್ಕಳ ಆಧುನಿಕ ತಂತ್ರಜ್ಞಾನದ ಬಳಕೆ ಅವರ ನಡವಳಿಕೆಯಲ್ಲಿಯ ಮುಖ್ಯ ಅಂಶಗಳಾದ ಕುಟುಂಬದ ಮೌಲ್ಯಗಳು ,ಸಂಸ್ಕೃತಿ, ಹಿರಿಯರು, ಪೋಷಕರು ಮತ್ತು ಶಿಕ್ಷಕರು ಇವುಗಳ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ವಿಭಕ್ತ ಕುಟುಂಬದ ವ್ಯವಸ್ಥೆ ಅಥವಾ ನಿಕಟ ಕುಟುಂಬದ ಬಾಂಧವ್ಯದ ಅಭಾವದಿಂದಾಗಿ, ಮಕ್ಕಳು ಹಂಚಿಕೊಳ್ಳುವಿಕೆ, ಹೊಂದಾಣಿಕೆಗಳಂತಹ ಜೀವನಮೌಲ್ಯಗಳನ್ನ ಕಳೆದುಕೊಳ್ಳುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳು ಆಟಿಕೆಗಳಿಗಿಂತ ಸ್ಮಾರ್ಟ್ಫೋನ್, ವಿಡಿಯೋ ಗೇಮ್ಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ.ಹಠಮಾರಿ ಸ್ವಭಾವ ಹೆಚ್ಚುತ್ತಿದೆ.ತಾವು ಕೇಳಿದ್ದು ಸಿಗದಿದ್ದರೆ ಬೇಗನೆ ಸಿಟ್ಟು ಮಾಡಿಕೊಳ್ಳುವುದು, ಹಠ ಹಿಡಿಯುವುದು ಇಂದಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.ಏಕಾಗ್ರತೆಯ ಕೊರತೆ ಕಾಣಿಸಿಕೊಳ್ಳುತ್ತಿದೆ.ಒಂದೇ ವಿಷಯದ ಮೇಲೆ ಹೆಚ್ಚು ಹೊತ್ತು ಗಮನ ಹರಿಸಲು ಕಷ್ಟಪಡುವುದು ಮತ್ತು ಬೇಗನೆ ಬೇಸರಗೊಳ್ಳುವುದು ಹೆಚ್ಚಾಗಿದೆ.
ಸಾಮಾಜಿಕ ಹೊಂದಾಣಿಕೆಯ ಕೌಶಲ್ಯಗಳ ಕೊರತೆಯಿಂದ ಮಕ್ಕಳು ಹೊರಗಡೆ ಆಟವಾಡುವುದನ್ನ ಮರೆತು ಮನೆಯಲ್ಲೇ ಕುಳಿತುಕೊಳ್ಳಲು ಇಷ್ಟಪಡುತ್ತಾರೆ. ಇತರರೊಂದಿಗೆ ಬೆರೆಯುವದೂ ದಿನೇ ದಿನೇ ಕಡಿಮೆಯಾಗುತ್ತಿದೆ.ಪೋಷಕರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದು, ಸ್ನೇಹಿತರಂತೆ ವರ್ತಿಸುವುದು ,ಅವರ ಮಾನಸಿಕ ಸಮಸ್ಯೆಗಳನ್ನು ದೂರ ಮಾಡಬಹುದು.ಅತಿಯಾದ ಟಿವಿ ಅಥವಾ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ದೈಹಿಕ ಚಟುವಟಿಕೆಗಳು, ಸೃಜನಶೀಲ ಚಟುವಟಿಕೆಗಳು,ಯೋಗ, ಧ್ಯಾನ ಮುಂತಾದವುಗಳಲ್ಲಿ ಅವರನ್ನು ತೊಡಗಿಸಬೇಕು. ಅದೇ ರೀತಿ ಮಕ್ಕಳಲ್ಲಿ ಮದುವೆ ಮಕ್ಕಳ ಪ್ರಾಮುಖ್ಯತೆ ಕೂಡ ಕಡಿಮೆಯಾಗುತ್ತಿದೆ. ಜಾಸ್ತಿ ಸಂಪಾದನೆಯ ಅಹಂ ಹೆಚ್ಚಾಗಿ ಗಂಡನ ಜೊತೆ ಕೂಡ ಹೊಂದಾಣಿಕೆ ಕಳೆದುಕೊಂಡು ವಿಚ್ಛೇದನಕ್ಕೆ ಮೊರೆ ಹೋಗುತ್ತಿರುವುದು ಬಹು ದೊಡ್ಡ ವಿಷಾದನೀಯ ಸಂಗತಿ ಕೂಡ.
ಹೇಳಿ ಆಧುನಿಕತೆ ವರವೋ ಶಾಪವೋ!!
ಪ್ರೊ. ರಾಜೇಶ್ವರಿ ಶೀಲವಂತ ಪುಣೆ



