ಹೆಣ್ಣುಮಕ್ಕಳ ಓದು

ಲಹರಿ

ವಸುಂಧರಾ ಕದಲೂರು

ಒಂದು ತಮಾಷೆಯ ಲಹರಿ…

    ಹೆಣ್ಣು ಮಕ್ಕಳು ಓದು ಬರಹ ಕಲಿಯೋದು ಏಕೆ? ಅವರು ಯಾವ ಸಾಮ್ರಾಜ್ಯ ಕಟ್ಟಬೇಕು? ಯಾರನ್ನ ಉದ್ಧಾರ ಮಾಡಬೇಕು? ಇವೇ ಇಂತಹವೇ ನೂರು ಪ್ರಶ್ನೆಗಳು ಹುಟ್ಟಿಕೊಳ್ತವೆ.

   ಇಂಥ ಪ್ರಶ್ನೆಗಳು ಈಗ ಹೆಚ್ಚು ಇರಲಾರದು ಬಿಡಿ. ಆದರೂ ಲೇಖನಿ ಹಿಡಿದರೂ, ಕೀಲಿಮಣೆ ಕುಟ್ಟಿದರೂ ಮುಸುರೆ ತಿಕ್ಕೋದು, ತೊಟ್ಟಿಲು ತೂಗೋದು ನಿಮಗೆ ತಪ್ಪಿದ್ದಲ್ಲ ಎಂದು ಕೊಂಕು ರಾಗ ಹಾಡುವವರಿಗೇನೂ ಕಮ್ಮಿಯಿಲ್ಲ.

   ಅಲ್ಲಾ ಇವರೇ.., ನಮ್ಮ ಮನೆ ಪಾತ್ರೆ ಪರಡೆಗಳನ್ನು ನಾವು ತೊಳೆದು ಸ್ವಚ್ಛ ಮಾಡಿಕೊಳ್ಳೋದ್ರಲ್ಲಿ ಏನು ತಪ್ಪಿದೆ ಹೇಳಿ? ಕೆಲಸಕ್ಕೆ ಹೊರಗೆ ಹೋಗಿ ಬಂದು ಮನೇಲಿ ಅಚ್ಚುಕಟ್ಟು ಮಾಡಬಾರದು ಅಂತ ಇದೆಯೇ? ಇಲ್ಲಾ ನಾಕಾರು ಅಕ್ಷರ ಕಲಿತರೆ ಮಕ್ಕಳನ್ನು ಹೆರಬಾರದು ಎಂದು ಎಲ್ಲಾದರೂ ಕಾನೂನಾಗಿದೆಯೇ?

   ಒಟ್ಟಿನಲ್ಲಿ ಜನಕ್ಕೆ ಹೇಗಿದ್ದರೂ ತಪ್ಪೇ… ಅವರಿಗೆ ಕಂಡವರನ್ನು ಮೂದಲಿಸದೇ ಇರಲಾಗದು. ಇತರರನ್ನು ಎತ್ತಾಡದೇ ಹೋದರೆ ತಿಂದದ್ದೂ ಜೀರ್ಣವಾಗದು. ಕಲಹ ಪ್ರಿಯರು ಮೊಸರಲ್ಲಿ ಕಲ್ಲು ಹುಡುಕೀ ಹುಡುಕಿ, ಅದು ಸಿಗದೇ ಹೋದಾಗ ತಾವೇ ನಾಕಾರು ಬೆಣಚು ಚೂರು ಹಾಕಿಬರುವಷ್ಟು ಮಟ್ಟಿಗೆ ಕೆಟ್ಟಿರುತ್ತಾರೆ.

  ಈಗಂತೂ ಮನೇಲಿ ಕೂರುವವರಿಗಿಂತಲೂ ಹೊರಗೆ ಒಂದಿಲ್ಲೊಂದು ಕೆಲಸಕ್ಕೆ ಹೋಗಿ ಬರುವವರೇ ಹೆಚ್ಚು. ಹಳ್ಳಿಯಿರಲಿ, ಪಟ್ಟಣವಿರಲಿ ವಿದ್ಯೆ ಕಲಿಯುವುದಕ್ಕೆ ಹಿಂದಿನಂತೆ ಅಡ್ಡಿ ಆತಂಕಗಳ ಹರ್ಡಲ್ಸ್ ಹೆಚ್ಚು ಇಲ್ಲ. ಹಾಗಾಗಿ ಹೆಣ್ಣುಮಕ್ಕಳು ವಿದ್ಯಾವತಿಯರಾಗುವ ನಾಗಾಲೋಟಕ್ಕೆ ತಡೆಯಂತೂ ಸಧ್ಯಕ್ಕಿಲ್ಲ.

   ಆದರೂ ಒಂದು ಸಂದೇಹ ಯಾವಾಗಲೂ ಕಾಡುತ್ತಿರುತ್ತದೆ.

    ಏಕೆ ಹಿಂದಿನವರು ಮಹಿಳೆಯರನ್ನು ಓದುವ, ಕಲಿಯುವ ಅಪೂರ್ವ ಅವಕಾಶಗಳಿಂದ ವಂಚಿತರನ್ನಾಗಿ ಮಾಡಿದ್ದರು ಎಂದು..?!

     ಈಗಿನಂತೆ ಸೈನ್ಸು, ಕಾಮರ್ಸು, ಆರ್ಟ್ಸು ಎಂದೆಲ್ಲಾ ಹೆಚ್ಚೇನು ಪಠ್ಯಶಾಖೆಗಳು ಇರದಿದ್ದ ಕಾಲದಲ್ಲಿ ಏನೇನಿತ್ತು ಓದಲು? ಮಹಾಕಾವ್ಯಗಳೂ, ಕತೆ- ಪುರಾಣಗಳೂ, ವೇದೋಪನಿಷತ್ತುಗಳೂ ಇವೇ ಮೊದಲಾದವು ಅಲ್ಲವೇ?

    ವೇದೋಪನಿಷತ್ತು ಕಲಿಯಲು ಅನ್ಯರಿಗೆ ನಿಷಿದ್ಧವಿದ್ದಾಗ ಪುರಾಣ ಕಾವ್ಯಗಳನ್ನಲ್ಲದೇ ವಿದ್ಯಾಕಾಂಕ್ಷಿಗಳಿಗೆ ಮತ್ತೇನು ಕಲಿಸಬೇಕಿತ್ತು? ಅಕ್ಷರಾಭ್ಯಾಸ, ಶ್ಲೋಕಾಭ್ಯಾಸ, ಸಾಮಾನ್ಯ ಲೆಕ್ಕ – ಪುಕ್ಕ ಕಲಿಯುವುದು ಬಿಟ್ಟರೆ ಉಳಿಯುವುದು ಮಹಾಕಾವ್ಯಗಳೇ…

   ಅವಾದರೂ ಎಂತಹವು..!? ಲೋಕಪ್ರಸಿದ್ಧವಾದ ರಾಮಾಯಣ – ಮಹಾಭಾರತ; ಅದರ ಉಪಕತೆ – ಪುರಾಣ…

  ಇನ್ನು ನಮ್ಮ ಹೆಣ್ಣುಮಕ್ಕಳು ಮಹಾಕಾವ್ಯಗಳನ್ನು ಓದಿ, ಅಭ್ಯಾಸ ಮಾಡಿ ತಿಳಿಯುವುದಾದರೂ ಏನಿತ್ತು ಹೇಳಿ?

ಬರಿಯ ಶಂಕೆ, ಅಪಮಾನ, ಸೇಡಿನ ಕಿಡಿ, ಮತ್ಸರ, ಶಪಥ, ತಿರಸ್ಕಾರ, ಅಪಮಾನ, ಅಗಲುವಿಕೆ, ಯುದ್ಧ, ಸಾವು, ನೋವು ಇತ್ಯಾದಿ, ಇತ್ಯಾದಿ, ಇತ್ಯಾದಿ…

    ಇಂತಹವನ್ನು ಓದುವ ಬದಲು ಮನೆವಾರ್ತೆಗಳೇ ಮುಖ್ಯ ಎಂದುಕೊಂಡು ಓದಿನತ್ತ ನಮ್ಮ ಹೆಣ್ಣುಮಕ್ಕಳು ಮುಖ ತಿರುಗಿಸಿರಲಿಕ್ಕೂ ಸಾಕು.

      ಮನೆ ಕೆಲಸ ಎಂದರೆ ಬರೀ ಅಡುಗೆ, ತೊಳಿ- ಬಳಿ ಅಲ್ಲ. ಅಡುಗೆಗೆ ಪೂರಕ ಸಾಮಾಗ್ರಿಗಳು ಇವೆಯೇ ಎಂದು ನೋಡಿಕೊಂಡು ಅವನ್ನು ಸಿದ್ಧಮಾಡಿಕೊಳ್ಳಬೇಕು. ಏನೇನು ಮಾಡಬೇಕು, ಮಳೆಗಾಲಕ್ಕೆ, ಬೇಸಿಗೆಗೆ, ಚಳಿಗೆ ಹೀಗೆ ಹವಮಾನಕ್ಕೆ ಅನುಕೂಲಕರ ಸಿದ್ಧತೆಯಾಗಿರಬೇಕು. ಹಬ್ಬ ಹರಿದಿನ ಶುಭಕಾರ್ಯ ಇತರೆ ಸಮಾರಂಭಗಳಿಗೆ ತಯಾರಿ ಮಾಡಬೇಕು. ಮಕ್ಕಳು – ಹಿರಿಯರು ಹೊರಗೆ ದುಡಿಯಲು ಹೋಗುವವರ ದೇಖರೇಖಿ ನೋಡಬೇಕು. ಬಂಧು ಬಳಗ, ಅತಿಥಿ ಅಭ್ಯಾಗತರ ಯೋಗಕ್ಷೇಮ ವಿಚಾರಿಸಿಕೊಳ್ಳಬೇಕು. ಮನೆವಾರ್ತೆ ಒಂದೇ ಎರಡೇ…!

   ಇವೇ ಇಷ್ಟೆಲ್ಲಾ ಇರುವಾಗ ಪುರಾಣ- ಕಾವ್ಯ ಓದಿಕೊಂಡು ಕೂರಲಿಕ್ಕಾಗುತ್ತಿತ್ತೇ? ಅದೇನು ಹೊಟ್ಟೆ ತುಂಬಿಸುತ್ತದೆಯೇ? ನೆತ್ತಿ ಕಾಯುತ್ತದೆಯೇ? ಹಾಗಾಗಿ ಕಲಿಯಲು ನಮ್ಮ ಹೆಣ್ಣು ಮಕ್ಕಳೂ ಅಸಡ್ಡೆ ಮಾಡಿರಬಹುದು ಬಿಡಿ.

      ಇಲ್ಲಾ ಏನಿದೆ ಇದರೊಳಗೆ ಎಂದು ಗುರುಗಳ ಗರಡಿಗೆ ಕಲಿಯಲು ಹೋದವರಿಗೆ ಹೆಣ್ಣುಗಳನ್ನು ಕಾವ್ಯದೊಳಗೆ ಇನ್ನಿಲ್ಲದಂತೆ ಅಬಲೆಯರೂ, ಹೊಟ್ಟೆಕಿಚ್ಚಿನವರೂ, ಯುದ್ಧ ಕಾರಣರೂ, ತಂದು ಹಾಕುವವರೂ, ಕಲಹ ಪ್ರಿಯರೂ ಹೀಗೆ ಚಿತ್ರಿಸಿರುವುದನ್ನು ಕಂಡು ಕೋಪಗೊಂಡು ಇದೇಕೆ ಹೀಗೆ..?! ಎಂದು ಮಾತಿನ ಚಕಮಕಿಯಾಗಿ ವಾದವಿವಾದ ತಾರಕಕ್ಕೆ ಹಚ್ಚಿಕೊಂಡಿರಬಹುದು.

     ಹಾಗಾಗಿ ಇದೆಲ್ಲಾ ಬೇಡಬಿಡು, ಚೆನ್ನಾದ ವಿಚಾರಗಳು ಕಲಿಯುವ ಸಂದರ್ಭ ಬಂದಾಗಲೇ ನಾವು ಓದುವ ಬಗ್ಗೆ ಚಿಂತಿಸೋಣ ಎಂದು ನಮ್ಮ ಹೆಣ್ಣುಮಕ್ಕಳು ವಿಚಾರ ಮಾಡಿರಬೇಕು.

  ಹಾಗಾಗಿಯೇ ಆಧುನಿಕ ವಿದ್ಯಾಭ್ಯಾಸ ಕ್ರಮ ಜಾರಿಗೆ ಬಂದು ಕಲೆ, ವಿಜ್ಞಾನ, ವಾಣಿಜ್ಯ ವಿಚಾರಗಳು ಓದುವ ರೂಢಿ ಬೆಳೆದು ಬಂದ ಮೇಲೆಯೇ ನಮ್ಮ ಹೆಣ್ಣುಮಕ್ಕಳು ಓದಿನಲ್ಲಿ ಮೇಲುಗೈ ಸಾಧಿಸಿರುವುದು…  ಇದು ನನ್ನ ಒಂದು ವಿಚಾರವಷ್ಟೇ… ಸತ್ಯಕ್ಕೆ ಹಲವು ಮಗ್ಗಲುಗಳಿವೆ.

8 thoughts on “ಹೆಣ್ಣುಮಕ್ಕಳ ಓದು

  1. ಇದು ಒಂದು ರೀತಿಯಲ್ಲಿ ಒಪ್ಪತಕ್ಕ ಆಯಾಮವೇ ವಸುಂಧರಾ.

    1. ಹೌದಲ್ವಾ… ಹಾಗೇ ಸುಮ್ಮಗೆ ಯೋಚಿಸಿದಾಗ ಹೊಳೆದದ್ದು ಸ್ಮಿತಾ…

  2. ಖಂಡಿತಾ ಅಲ್ಲಗಳೆಯುವಂತಿಲ್ಲ ನಿಮ್ಮ ಮಾತು…

  3. ಪ್ರಾಚೀನ ಕಾಲದಿಂದಲೂ ಪುರುಷ ಪ್ರಧಾನ ವ್ಯವಸ್ದೆ ಹೊಂದಿದ್ದ ನಮ್ಮ ಸಮಾಜದಲ್ಲಿ ಸ್ತ್ರೀ ಶಿಕ್ಷಣ ಪಡೆಯಬೇಕಾದರೆ ೧೨ ನೆಯ ಶತಮಾನದಿಂದ ೨೧ ನೇ ಶತಮಾನದವರೆಗಿನ ಸಮಾನತೆಯ.
    ಹೊರಾಟಗಳೊಂದಿಗೆ ಸಾಗಬೇಕಾಯಿತೇನೋ.

    1. ಹೌದು. ನಿಮ್ಮ ಮಾತು ಸತ್ಯ. ವಚನಕಾರರು ಎಲ್ಲಾ ವಿಚಾರಗಳಲ್ಲೂ ಕ್ರಾಂತಿಕಾರರೇೆೆ..

Leave a Reply

Back To Top