ಕಾವ್ಯ ಸಂಗಾತಿ
ಅನ್ನಪೂರ್ಣ ಸಕ್ರೋಜಿ ಪುಣೆ
“ಅತ್ಮೀಯ ಸ್ನೇಹಿತೆ”


ಹೊತ್ತು ಹೊತ್ತಿಗೆ ಸಲಹೆ ಕೊಡುವ
ನನ್ನ ಆತ್ಮ ಸ್ನೇಹಿತೆ ನೀನು
ನಿನ್ನ ಅಂತರಂಗವರಿತಾಗ ಕೊಡುವ
ನನ್ನ ಮುತ್ತಿಗೆ ಕಾಯುವೆ ನೀ//
ಒಂಟಿತನದ ಜಾತ್ರೆಯಲಿ ಕೂಡ
ಸಂಭ್ರಮಿಸುವಂತೆ ಮಾಡುವೆ
ದಿನನಿತ್ಯ ನಿನ್ನ ಜೊತೆ ಮಾತಾಡಿ
ಮಾತಿನಮಲ್ಲಿ ಮಾಡಿರುವೆ//
ರಣ ಬಿಸಿಲಿನಲ್ಲಿ ನಾ ಬೆಂದಾಗ
ಹೃದಯಕ್ಕೆ ತಂಪನೀಯುವೆ
ಮಲ್ಲಿಗೆಯ ಪರಿಮಳ ಬೀರುತ
ಕವಿಯ ಎದೆ ಅರಳಿಸುವೆ//
ಶರಣರ ಸಂತರ ಜ್ಞಾನಿಗಳೆಲ್ಲರ
ಸಾಹಿತ್ಯ ಪರಿಚಯಿಸುವೆ
ತಂತ್ರಜ್ಞಾನ ವಿಜ್ಞಾನ ಸುಜ್ಞಾನಗಳ
ಅರಿವು ಮೂಡಿಸುವೆ//
ಭಗವದ್ಗೀತೆ ಭಾಗವತ ಇತಿಹಾಸ
ವೇದಾಂತ ಉಪನಿಷತ್ತು
ಅಡುಗೆಅರಮನೆ ಸಂಗೀತ ಶಾಸ್ತ್ರ
ಓದುವಾಗಿನ ಗಮ್ಮತ್ತು//
ನಿನ್ನಲ್ಲಿಯ ಸಮಭಾವ ನನಗೆ
ತುಂಬಾ ಇಷ್ಟ ಗೆಳತಿ
ವರ್ಣ ವರ್ಗ ಲಿಂಗ ಜಾತಿ ಭೇದ
ಇಲ್ಲದ ಎಲ್ಲರ ಗೆಳತಿ //
ಕಥೆಯಾಗಿ ಕಾದಂಬರಿಯಾಗಿ
ಮನವನಾಳುತಿರುವೆ
ಅತೀ ಸಾಮಾನ್ಯ ಅನೂಳನ್ನು
ಕವಯಿತ್ರಿ ಮಾಡಿರುವೆ//
ಬದುಕಿನ ಪಾಠ ನಿತ್ಯ ಕಲಿಸುವ
ಪುಟ್ಟ ಜ್ಞಾನ ಹೊತ್ತಿಗೆ ನೀ
ಸಾಧಕರಿಗೆ ಸಾಧನೆಯಾಗುತಲಿ
ಪ್ರಖರ ಜ್ಞಾನ ದೀವಿಗೆ ನೀ//
ಅನ್ನಪೂರ್ಣ ಸಕ್ರೋಜಿ ಪುಣೆ



