ಕಾವ್ಯ ಸಂಗಾತಿ
ಕಲ್ಪನಾ ಎಸ್ ಪಾಟೀಲ
“ಅಪ್ಪನ ಶವ ನಕ್ಕಿತಲ್ಲ.!”

ಅಪ್ಪನಿಗೆ ತನ್ನ ಮಕ್ಕಳು ಎಂದಿಗೂ
ಭಾರ ಅನಿಸಲೆ ಇಲ್ಲ.
ಅದ್ಯಾಕೋ ಅಪ್ಪ ಮಕ್ಕಳಿಗೆ
ಭಾರವಾಗಿ ಬಿಟ್ಟ…………
ಆರು ಹೆತ್ತರೂ ತನ್ನ ಮಕ್ಕಳಿಗೆ ಏನು
ಕೊರತೆಯಾಗದಂತೆ ಸಾಕಿದನಲ್ಲ
ಅದ್ಯಾಕೋ ಅಪ್ಪನ ಸಾಕೋಕೆ
ಮಕ್ಕಳಿಗೆ ಹಣದ ಕೊರತೆ ಆಯಿತಲ್ಲ……….
ಎರಡೆರಡು ತಿಂಗಳಿಗೊಮ್ಮೆ ಒಬ್ಬೊಬ್ಬರು
ಜೋಪಾನ ಮಾಡುವರಲ್ಲ
ಆಸ್ತಿಯ ಹಂಚಿಕೊಂಡಂತೆ ಅಪ್ಪನನ್ನೂ
ಸಹ ಹಂಚಿಕೊಂಡು ಬಿಟ್ಚರಲ್ಲ…………..
ಅಪ್ಪನ ಮಾನಸಿಕ ಸ್ಥಿತಿಯ ಪರಿವೆ
ಅವರಿಗೆ ಆಗಲೆ ಇಲ್ಲ
ಆದರೂ ಅಪ್ಪ ಎಲ್ಲ ಒಳಗೊಳಗೆ
ನುಂಗಿದನಲ್ಲ……………
ಹೆಂಡತಿ ಇದ್ದಾಗ ನೋಡು ನನ್ನ
ಮಕ್ಕಳನ್ನ ಅಂತಿದ್ದ ಬೀಗತಿದ್ದ
ಅವಳಿಲ್ಲದಾಗ ಆತನೆ ಕುಗ್ಗಿದ್ದ
ಹಾಸಿಗೆ ಹಿಡಿದ ದಿನದಿಂದಲೆ ನಗುವದನ್ನೆ
ನಿಲ್ಲಿಸಿದ…………
ಈಗೀಗ ನೀನ್ಯಾಕ ನನ್ನ ಒಬ್ಬಂಟಿ ಮಾಡಿ
ಹೋದೆ ಅಂತಿದ್ದ
ಎಲ್ಲದರಲ್ಲೂ ಮೊದಲೆನ್ನುವವಳು
ಸಾವಲ್ಲೂ ಮೊದಲೆ ಆದೆ…………
ನನ್ನ ಮಾತ್ರ ಎಲ್ಲವ ಅನುಭವಿಸಿ
ಬಾ ಎಂದೆ ಎನುತಿದ್ದ
ಆಗಾಗ ಹಲಬುತ್ತಿದ್ದ ಮಕ್ಕಳಿಗೆ ಇದ್ಯಾವುದರ
ಪರಿವೆ ಆಗದಂತೆ ಇದ್ದ ……..
ಇನ್ನೂ ಯಾವಾಗ ಸಾಯತಾನೋ?
ಎನ್ನುವರೆಲ್ಲ
ಅದೇನಾಸೆಯ ಇಟ್ಟುಕೊಂಡಿದ್ದ ಗೊತ್ತಿಲ್ಲ
ಅಂತು ಇಂತು ಕೊನೆಯ ಕ್ಷಣ ಬಂದಿತಲ್ಲ ……..
ಇಷ್ಟು ದಿನ ನಗದ ಅಪ್ಪ ಆದ್ರೂ ಇಂದು
ಅಪ್ಪನ ಶವ ನಕ್ಕಿತಲ್ಲ
ಮಕ್ಕಳು ಮಕ್ಕಳು ಅಂತಿದ್ದೆ ಮಕ್ಕಳಿಗಾಗಿ
ಮನೆ ಮಾಡಿದೆ………..
ಅವರಿಷ್ಟದ ಗಾಡಿ ಕೊಡಿಸಿದೆ
ನೀನೆ ಕಟ್ಟಿಸಿಕೊಟ್ಟ ಮನೆಯಲ್ಲಿ ಜಾಗವಿಲ್ಲ
ನಿನ್ನ ಅಂತಿಮ ಯಾತ್ರೆಗೆ
ದೊಡ್ಡ ದೊಡ್ಡ ಗಾಡಿಗಳಿದ್ದರೂ ಮುಕ್ತಿರಥವೆ
ಗತಿಯಾಗಿತ್ತು ನಿನ್ನ ಬಾಡಿಗೆ
ಎನ್ನುತಲೆ ಅಪ್ಪನ ಶವ ನಗತಿತ್ತು………
ಅಪ್ಪನಿಗಾಗಿ ಬಡಿದಾಡಲೆ ಇಲ್ಲ
ಅಪ್ಪನ ಹಣಕ್ಕಾಗಿ ಹೆಣದ ಮುಂದೆ
ಬಡಿದಾಡಿದರಲ್ಲ
ಆಗಲೂ ಅಪ್ಪನ ಶವ ನಗತಿತ್ತು ……..
ನನ್ನವರೆಂದವರು ಯಾರೂ
ನನ್ನವರಾಗಿರಲೆ ಇಲ್ಲ
ಅಪ್ಪನ ಜೋಪಾನ ನಾ ಮಾಡಿದೆ
ನಾ ಮಾಡಿದೆ ಎನ್ನುವರೆ ಎಲ್ಲ ……….
ಎಲ್ಲವೂ ಅಪ್ಪನ ಶವದ ಮುಂದೆ ನಡೆದಿತ್ತಲ್ಲ
ಅದೆಷ್ಟಂತ ಬಡದಾಡತಿರಿ ಅಂತ
ಕೇಳೋಕ ಆತ ಇಲ್ಲ
ಆತನ ಶವ ಮಾತ್ರ ನಗತಿತ್ತಲ್ಲ…….
ಇವರ ಕಣ್ಣೀರ ಕೂಗು ಕೇಳದಷ್ಟು
ದೂರ ಹಂಗಿನ ಮಾತು ಮನಸಿಗೆ
ಮುಟ್ಟದಂತೆ ಮಲಗಿ ಬಿಟ್ಟಿದ್ದ
ಅಪ್ಪನ ಶವ ಈಗಂತೂ ಜೋರಾಗಿ ನಗತಿತ್ತು……
ಇನ್ನ್ಯಾರ ಅಪ್ಪ ಎನ್ನುವಿರಿ? ಎರಡೆರಡು
ತಿಂಗಳಿಗೊಮ್ಮೆ ಮನೆಯಿಂದ ಮನೆಗೆ
ಊರಿಂದ ಊರಿಗೆ ಅದಾರನ್ನ
ತಂದಿರಿಸಿಕೊಳ್ಳುವಿರಿ?ಎಂದು
ಕೇಳುತಲೆ ಇತ್ತು. ಅಪ್ಪ ಶವ ನಗತಾನೆ ಇತ್ತು……….
ಬದುಕಿದ್ದಾಗಲೆ ಯಾವ ಮಾತು ಮನಸ
ಮುಟ್ಟಲೆ ಇಲ್ಲ, ತಟ್ಟಲೆ ಇಲ್ಲ
ಈಗೆಲ್ಲಿ ಮುಟ್ಟುವವು? ಯಾರ
ಮನಸ್ಸ ತಟ್ಟುವವು………….
ಕಲಹ,ಕದನ,ರೋದನ,ಸಿಟ್ಟು
ಎಲ್ಲವ ಎಲ್ಲರೂ ಶವದ ಮುಂದೆ
ಹೊರ ಹಾಕುವವರೆ ಬಿಕ್ಕಿ ಬಿಕ್ಕಿ
ಅದಾವುದಕ್ಕೋ ಅಳುವರೆಲ್ಲ…………..
ಅದ ಕೇಳೋಕೆ ಯಾರಿಗೂ ಪುರಸೊತ್ತಿಲ್ಲ
ಯಾಕಂದ್ರ ಅಲ್ಲಿದ್ದವರೆಲ್ಲ ಹೇಳತಿದ್ರಲ್ಲ
ಲಗೂಣ ಹೆಣ ಎತ್ತರಲ್ಲ, ಇವರೆಲ್ಲ ಅತ್ತರೆ
ಊರ ಜನ ನೋಡಿ ಅಯ್ಯೋ ಪಾಪ ಅಂದರಲ್ಲ…..
ಪಾಪ! ಅವರಿಗೇನ ಗೊತ್ತು, ಮಕ್ಕಳ ಸ್ವಾರ್ಥ
ದುರಾಸೆ ಅಪ್ಪನಿಗಷ್ಟೆ ಗೊತ್ತಿತ್ತಲ್ಲ
ಆತನ ಶವ ನಕ್ಕಿದ್ದು ಅವರಾರಿಗೂ ಗೊತ್ತೆ
ಆಗಲೆ ಇಲ್ಲ ………
ಅಂತು-ಇಂತು ಅಪ್ಪನ ಅಂತಿಮಯಾತ್ರೆ
ಮುಗಸಿದ್ರಲ್ಲ.

ಕಲ್ಪನಾ ಎಸ್ ಪಾಟೀಲ



