ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಸವೋತ್ತರ ಕಾಲದ ಶರಣರು ಮತ್ತು ಶಿವಯೋಗ ಸಾಧಕರಲ್ಲಿ ಪರಮ ಪೂಜ್ಯ ಶ್ರೀ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಕಾರ್ಯ ಅವಿಸ್ಮರಣೀಯ.ಇವರ ಕರ ಸಂಜಾತ ಹಾಗೂ ಅವರ ಪಡಿನೆರಳಿನಂತೆ ಬದುಕಿ ಬಸವ ಜಯಂತಿ ಆಚರಣೆ ಆರಂಭಿಸಿದ ಧೀಮಂತ ಶಿವಯೋಗಿ ಶ್ರೀ ಮೃತ್ಯುಂಜಯ ಸ್ವಾಮಿಗಳು.

ಕಾಶಿ ಬಿಟ್ಟು ಅಥಣಿಗೆ ಬಂದ ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳು. ಅವತ್ತಿನ ಶ್ರೇಷ್ಠ ಲಿಂಗಾಯತ ಧರ್ಮದ ಹಿರಿಯ ಸ್ವಾಮಿಗಳು ನಾಯಕನೂರಿನ ಕಾಶಿನಾಥ ಶಾಸ್ತ್ರಿಗಳು ಅವರಿಗೆ ಭೇಟಿ ಮಾಡಿ ತಾವು ಕಾಶಿಗೆ ಹೋಗ ಬೇಕೆನ್ನುವ ಪ್ರಬಲ ಇಚ್ಛೆಯನ್ನು ಮೃತ್ಯುಂಜಯ ಸ್ವಾಮಿಗಳು ವ್ಯಕ್ತ ಪಡಿಸುತ್ತ ಕಾಶಿಗೆ ಹೋಗುವ ತಯಾರಿ ಬಗ್ಗೆ ಕಾಶಿನಾಥ ಶಾಸ್ತ್ರಿಗಳನ್ನು ಕೇಳಿದರು. ಆಗ ಶ್ರೀ ಕಾಶಿನಾಥ  ಶಾಸ್ತ್ರಿಗಳು ದೂರದ ಊರಿಗೆ ಹೋಗಿ ತಿಳಿಯದ ಸಂಸ್ಕೃತ ಭಾಷೆ ಕಲಿಯುವಕ್ಕಿಂತ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಹತ್ತಿರ ವಚನ ಸಾಹಿತ್ಯ ಮತ್ತು ಶಿವಯೋಗ ಸಾಧನೆ ಮಾಡು ಎಂದು ಸಲಹೆ ನೀಡಿದರಂತೆ. 

ಅವರ ಸಲಹೆ ಮತ್ತು ವಿಚಾರದಂತೆ ಶ್ರೀ ಮೃತ್ಯುಂಜಯ ಸ್ವಾಮಿಗಳು ನೇರವಾಗಿ ಅಥಣಿಗೆ ಬಂದು ತಮ್ಮ ಅಧ್ಯಯನ ವಿದ್ಯಾಭ್ಯಾಸದ ಇಚ್ಛೆಯನ್ನು ವ್ಯಕ್ತ ಪಡಿಸಿದರು. ಆಗ ಅಥಣಿ ಶ್ರೀ ಗಳು ಇವರನ್ನು ಪರೀಕ್ಷಿಸಲೆಂದು ಬಾಲಕನತ್ತ ಹೆಚ್ಚು ಗಮನ ನೀಡದೆ ಸುಮ್ಮನಾದರು.

 ಏಕೋ ಬೇಸರಗೊಂಡ ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಲ್ಲಿರುವ ಮಠದ ಸೇವಕರನ್ನು ವಿಚಾರಿಸುತ್ತಾ, ಯಾವ ಕೆಲಸ ಮಾಡಿದರೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಪ್ರೀತಿಗೆ ಪಾತ್ರರಾಗುತ್ತೇವೆ ಎಂದು ಕೇಳಿದರು. ಆಗ ಮಠದ ಸ್ಥಳೀಯರು ಶಿವಯೋಗಿಗಳಿಗೆ ಬೆಳಿಗ್ಗೆ ಐದಕ್ಕೆದ್ದು ಮಠದ ಅಂಗಳ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸುವುದು ಅವರಿಗೆ ಪ್ರೀತಿಯ ಕೆಲಸ. ನೀನು ಬೆಳಿಗ್ಗೆ ನಾಲ್ಕಕ್ಕೆ ಎದ್ದು ಈ ಕೆಲಸ ಮಾಡಿದರೆ, ನಿನ್ನನ್ನು ಶಿವಯೋಗಿಗಳು ಶಿಷ್ಯನನ್ನಾಗಿ ಸ್ವೀಕರಿಸುವರು ಎಂದು ಸಲಹೆ ನೀಡಿದರಂತೆ. 

ಇದರಿಂದ ಪುಳುಕಿತನಾದ ಶ್ರೀ ಮೃತ್ಯುಂಜಯ ಸ್ವಾಮಿಗಳು ಬೆಳಿಗ್ಗೆ ನಾಲ್ಕಕ್ಕೆ ಎದ್ದು ಮಠದ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸಿ ಮತ್ತೆ ತಮ್ಮ ಕೋಣೆಗೆ ಹೋಗಿ ಮಲಗಿದರು. ಬೆಳಿಗ್ಗೆ ಎಂದಿನಂತೆ ಎದ್ದು ಮಠದ ಕಸ ಹೊಡೆಯಲು ಪೂಜ್ಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಇದ್ದಾಗ ಮಠವು ಸಂಪೂರ್ಣ ಸ್ವಚ್ಛವಾಗಿತ್ತು. ಹಿತ್ತಲದಲ್ಲಿ ನೀರು ಕಾಯಿಸಲು ಹೋದಾಗ 

ಅಲ್ಲಿ ಹಂಡೆಯಲ್ಲಿ ನೀರು ಬೆಂಕಿಯಾಗಿದ್ದವು. 

ಯಾರೋ ಈ ಕಾರ್ಯ ಮಾಡಿರ ಬಹುದೆಂದು ಶಿವಯೋಗಿಗಳು ಅಂದು ತಾವು ಕಾಯಕ ಮಾಡದ ಕಾರಣ ಎರಡೂ ಹೊತ್ತು  ಪ್ರಸಾದ ಸೇವಿಸದೆ ಮಲಗುತ್ತಾರೆ. ಮತ್ತೆ ಬೆಳಿಗ್ಗೆ ಶ್ರೀ ಮೃತ್ಯುಂಜಯ ಸ್ವಾಮಿಗಳು ತಮ್ಮ ಬೆಳಗಿನ ಜಾವದ ಮಠದ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸುವ ಕಾರ್ಯ ಮುಂದುವರೆಸುತ್ತಾರೆ. ಮತ್ತೆ ಎಂದಿನಂತೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ನಿರಾಸೆಯಾಗುತ್ತಾರೆ. ಮತ್ತೆ ಪ್ರಸಾದ ಸೇವಿಸದೆ ಮಠದ ಇತರ ಕಾರ್ಯ ಮಾಡುತ್ತಾ ಇಷ್ಟ ಲಿಂಗ ಪೂಜೆ ಸಲ್ಲಿಸಿ ಮಲಗುತ್ತಾರೆ.  ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಉಪವಾಸದ 

ಕೆಲಸ ಮಠದ ಯಾರಿಗೂ ಗೊತ್ತಾಗುವುದಿಲ್ಲ.

ಒಂದು ದಿನ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ಈ ಕೆಲಸ ಮಾಡುತ್ತಾರೆ ಎಂದು ನೋಡ ಬೇಕೆಂದು ರಾತ್ರಿಯಿಡಿ ಎಚ್ಚರವಿದ್ದು  ಯಾರು ಈ ಕಾರ್ಯವನ್ನು ಮಾಡುತ್ತಾರೆ ಎಂದು ನೋಡುತ್ತಾ ಕುಳಿತು ಕೊಳ್ಳುತ್ತಾರೆ. ಬೆಳಿಗ್ಗೆ ಬಾಲಕ ಮತ್ತೆ ಮಠದ ಕಸವ ಹೊಡೆಯಲು ಮುಂದಾದಾಗ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಬಾಲಕನ ಕೈಯನ್ನು ಗಟ್ಟಿಯಾಗಿ ಹಿಡಿದು ಏಕೆ ಹೀಗೆ ಅಪರಾತ್ರಿಯಲ್ಲಿ ನೀನು ಕಸವನ್ನು ಹೊಡೆಯುತ್ತಿ ಎಂದು ಗದರಿಸಿದಾಗ ಬಾಲಕ ಭಯ ಪಟ್ಟು ಜೋರಾಗಿ ಅಳತೊಡಗಿದನು. ಆಗ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳನ್ನು ಅಪ್ಪಿ ಮುದ್ದಾಡಿ ಅವರಿಗೆ ಲಿಂಗ ದೀಕ್ಷೆ ನೀಡಿ ಅಪ್ಪಟ ಬಸವ ತತ್ವ ಅಧ್ಯಯನ ಮಾಡಲು ಅವಕಾಶ ಮಾಡಿ ಕೊಡುವುದಲ್ಲದೆ. ಧಾರವಾಡದ ಡಬಗಳ್ಳಿ ಮಠದ ಉಸ್ತುವಾರಿ ನೋಡಿಕೊಳ್ಳಲು ಹೇಳುತ್ತಾರೆ. ಮುರುಘಾ ಪರಂಪರೆಯ ಶ್ರೇಷ್ಠ ಶಿವಯೋಗ ಸಾಧಕರನ್ನಾಗಿ ಮಾಡಿ ಧಾರವಾಡ ಮುಳುಗುಂದ ಮುಂತಾದ ಅನೇಕ ಮಠಗಳಲ್ಲಿ ಪೂಜ್ಯರಾದ ಶ್ರೀ ಮೃತ್ಯುಂಜಯ ಸ್ವಾಮಿಗಳು ತಮ್ಮ ಗುರು ಲಿಂಗ ಜಂಗಮ ಸೇವೆ ಸಲ್ಲಿಸಿದ ಅಪ್ರತಿಮ ಶರಣ ಸಂಸ್ಕೃತಿ ಪ್ರಚಾರಕರಾಗಿ ಪ್ರತಿಯೊಬ್ಬರಿಗೂ ಆದರಣೀಯರಾಗಿದ್ದಾರೆ. 

ಧಾರವಾಡದ ಶ್ರೀ ಮುರುಘಾ ಮಠದ ಶ್ರೀ ಮೃತ್ಯುಂಜಯ ಸ್ವಾಮಿಗಳವರು (ಮೃತ್ಯುಂಜಯ ಅಪ್ಪಗಳು) ಕರ್ನಾಟಕದ ಶರಣ ಪರಂಪರೆಯ ಉಜ್ವಲ ಚೇತನಗಳಲ್ಲೊಬ್ಬರು. ಅವರ ಜೀವನ ಚರಿತ್ರೆಯ ಅರಿತುಕೊಳ್ಳುವುದು ನಮ್ಮ ಪುಣ್ಯದ ಕೆಲಸ.

1. *ಜನನ ಮತ್ತು ಬಾಲ್ಯ*

ಜನನ: ಇವರು 1888ರ ಏಪ್ರಿಲ್ 9 ರಂದು ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಜನಿಸಿದರು.

ತಂದೆ-ತಾಯಿ: ಇವರ ತಂದೆ ಕಂತಯ್ಯ ಸ್ವಾಮಿ ಮತ್ತು ತಾಯಿ ಚೆನ್ನವೀರಮ್ಮ.

ಬಾಲ್ಯ: ಇವರ ಪೂರ್ವಾಶ್ರಮದ ಹೆಸರು ಮೃತ್ಯುಂಜಯ. ಬಾಲ್ಯದಲ್ಲೇ ಸಂಗೀತ ಮತ್ತು ಆಧ್ಯಾತ್ಮಿಕತೆಯತ್ತ ವಿಶೇಷ ಒಲವು ಹೊಂದಿದ್ದರು. 

2. *ಶಿಕ್ಷಣ ಮತ್ತು ಸನ್ಯಾಸ*

ಪ್ರಾಥಮಿಕ ಶಿಕ್ಷಣದ ನಂತರ, ಇವರು ಗದಗದ ತೋಂಟದಾರ್ಯ ಮಠದಲ್ಲಿ ಸಂಸ್ಕೃತ ಮತ್ತು ಕನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡಿದರು.

ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಪ್ರಭಾವಕ್ಕೆ ಒಳಗಾದ ಇವರು, ಅವರಿಂದ ಲಿಂಗದೀಕ್ಷೆ ಮತ್ತು ಸನ್ಯಾಸ ಸ್ವೀಕರಿಸಿದರು. 

3. ಧಾರವಾಡದ ಮುರುಘಾ ಮಠಕ್ಕೆ ಆಗಮನ (1916)

ಮೃತ್ಯುಂಜಯ ಸ್ವಾಮಿಗಳು 1916ರಲ್ಲಿ ಧಾರವಾಡದ ಮುರುಘಾ ಮಠಕ್ಕೆ ಬಂದಾಗ, ಮಠವು ಕೇವಲ ಒಂದು ಸಣ್ಣ ಕೊಠಡಿಯಂತಿದ್ದು, ಸುತ್ತಲೂ ಮುಳ್ಳಿನ ಕಂಟಿಗಳಿಂದ ಕೂಡಿತ್ತು.

ತಮ್ಮ ಸಂಕಲ್ಪಶಕ್ತಿಯಿಂದ ಪಾಳುಬಿದ್ದಿದ್ದ ಮಠವನ್ನು ಇಂದು ನಾವು ನೋಡುತ್ತಿರುವ ಭವ್ಯ ದಾಸೋಹ ಕೇಂದ್ರವಾಗಿ ಪರಿವರ್ತಿಸಿದರು. 

4. ಪ್ರಮುಖ ಕಾರ್ಯಗಳು ಮತ್ತು ಸಾಧನೆಗಳು

ತ್ರಿವಿಧ ದಾಸೋಹ: ಅನ್ನ, ಜ್ಞಾನ ಮತ್ತು ಅಧ್ಯಾತ್ಮ – ಈ ಮೂರೂ ದಾಸೋಹಗಳನ್ನು ಮಠದಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದರು.

ಉಚಿತ ಪ್ರಸಾದ ನಿಲಯ (1917): ಬಡ ವಿದ್ಯಾರ್ಥಿಗಳಿಗಾಗಿ 1917ರಲ್ಲಿ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿದರು. ಇಂದು ಈ ನಿಲಯಕ್ಕೆ 100 ವರ್ಷಗಳ ಇತಿಹಾಸವಿದ್ದು, ಸಾವಿರಾರು ಬಡ ಮಕ್ಕಳು ಇಲ್ಲಿ ಕಲಿತು ಉನ್ನತ ಹುದ್ದೆಗಳಲ್ಲಿದ್ದಾರೆ.

63 ಪುರಾತನರ ವಸತಿ ನಿಲಯ: ಶಿವಶರಣರ ನೆನಪಿಗಾಗಿ 63 ಕೊಠಡಿಗಳ ವಸತಿ ನಿಲಯವನ್ನು ನಿರ್ಮಿಸಿ, ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದರು.

ಅಖಿಲ ಭಾರತ ಶಿವಾನುಭವ ಸಂಸ್ಥೆ: ಶರಣ ತತ್ವಗಳ ಪ್ರಸಾರಕ್ಕಾಗಿ ಈ ಸಂಸ್ಥೆಯನ್ನು ಸ್ಥಾಪಿಸಿ, ನಾಡಿನಾದ್ಯಂತ ಧಾರ್ಮಿಕ ಜಾಗೃತಿ ಮೂಡಿಸಿದರು. 

5. ವ್ಯಕ್ತಿತ್ವ

ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೃತ್ಯುಂಜಯ ಅಪ್ಪಗಳು, ಯಾರೇ ಮಠಕ್ಕೆ ಬಂದರೂ ಪ್ರಸಾದ ಮಾಡದೆ ಕಳುಹಿಸುತ್ತಿರಲಿಲ್ಲ.

ಇವರು ಕೇವಲ ಧಾರ್ಮಿಕ ಗುರುವಾಗಿರದೆ, ಶಿಕ್ಷಣ ತಜ್ಞರಾಗಿ ಮತ್ತು ಸಮಾಜ ಸುಧಾರಕರಾಗಿ ನಾಡಿನ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ. 

ಬಯಲಲ್ಲಿ ಬಯಲಾದರು

 1916ರಲ್ಲಿ ಧಾರವಾಡದ ಮುರುಘಾ ಮಠಕ್ಕೆ ಆಗಮಿಸಿದ ಅವರು, ಸುಮಾರು 48 ವರ್ಷಗಳ ಕಾಲ ಮಠದ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಅನ್ನ ಮತ್ತು ಜ್ಞಾನ ದಾಸೋಹದ ಮೂಲಕ ಮಠವನ್ನು ನಾಡಿನ ಪ್ರಮುಖ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಿದರು. 

ಧಾರವಾಡದ ಮುರುಘಾ ಮಠದ ಕೀರ್ತಿಶೇಷರಾದ ಶ್ರೀ ಮೃತ್ಯುಂಜಯ ಸ್ವಾಮಿಗಳು (ಮೃತ್ಯುಂಜಯ ಅಪ್ಪಗಳು) 1964ರ ಜೂನ್ 16 ರಂದು ಲಿಂಗೈಕ್ಯರಾದರು.

ಡಾ ಡಿ ಸಿ ಪಾವಟೆ ಅವರು ಕರ್ನಾಟಕ ವಿಶ್ವ ವಿದ್ಯಾಲಯ ಸ್ಥಾಪಿಸಿ ಜ್ಞಾನ ದಾಸೋಹ ಮಾಡಿದ್ದಾರೆ. ಅವರಿಗೆ ಪೂರಕವಾಗಿ ಶ್ರೀ ಮೃತ್ಯುಂಜಯ ಸ್ವಾಮಿಗಳು ಅನ್ನ ದಾಸೋಹ ನೀಡಿ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾದರು. ಬಡ ಮಕ್ಕಳ ಶೈಕ್ಷಣಿಕ ಮತ್ತು ಆರ್ಥಿಕ ಸಂಕಷ್ಟ ನಿವಾರಿಸಿ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿ ಅವರ ಉಜ್ವಲ ಭವಿಷ್ಯದ ರೂವಾರಿಯಾದರು.

ಇವರ ನಂತರ ಪೀಠವನ್ನಲಂಕರಿಸಿದ ಶ್ರೀ ಮಹಾಂತ ಅಪ್ಪಗಳು ಮೃತ್ಯುಂಜಯ ಅಪ್ಪಗಳ ಹಾದಿಯಲ್ಲೇ ನಡೆದು ಮಠವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರು

__________________________

About The Author

2 thoughts on “ಸಾವಿಲ್ಲದ ಶರಣರು ಮಾಲಿಕೆ “ತ್ರಿವಿಧ ದಾಸೋಹ ಮೂರ್ತಿ ಶಿವಯೋಗ ಸಾಧಕ ಶ್ರೀ ಮೃತ್ಯುಂಜಯ ಸ್ವಾಮಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ”

Leave a Reply

You cannot copy content of this page

Scroll to Top