ವಚನ ಚಿಂತನೆ

ಚಿಂತನೆ

ಡಾ.ವೈ.ಎಂ.ಯಾಕೊಳ್ಳಿ

ಕಾಮ ಕಾಲದ ಕಾಡುವ ಮಾಯೆ

ನಳಲುಗತ್ತಲೆ ನೀನು ಮಾಯೆ

ಸಂಗ ಸುಖದಿಂದ ಹಿಂಗುವರಾರು ಇಲ್ಲ

ಬಿಗಿದ ಕುಚ,ಉರ ಮಧ್ಯವು

ಲಿಂಗಾಕಾರವು ಮಹೇಶ್ವರಗೆಯೂ ಪ್ರೀತಿಯು

ಸನ್ಮೋಹ ಅಮೃತ ಸಾರವು

ಇಳೆ ಉತ್ಪತ್ಯಕ್ಕೆ ಆಧಾರವು

ಇಂಥ‌ ಮೋಹ ಪ್ರಿಯವಾದ ಮೋಹಿನಿಯರ

ಅಗಲುವದೆಂತೋ ಕರಸ್ಥಳದ ಇಷ್ಟಲಿಂಗೇಶ್ವರಾ

ಇಡೀ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದರೂ ಒಂದು ವಿಶೇಷ ನೆಲೆಯಲ್ಲಿ‌ ನಿಲ್ಲುವ ವಚನ‌ ಇದು . ಇದನ್ನು ರಚಿಸಿದವನು ಮೆಡ್ಲೇರಿ ಶಿವಲಿಂಗನೆಂಬ ಹದಿನಾರನೆಯ ಶತಮಾನದ ವಚನಕಾರ.ಡಾ ವೀರಣ್ಣ ರಾಜೂರ ಅವರು ಸಂಪಾದಿಸಿದ ಸಂಕೀರ್ಣ ವಚನ ಸಂಪುಟ ೯ ರಲ್ಲಿ ಈತನ ೨೩ ವಚನಗಳು ದೊರಕಿವೆ.ಬಹಳ ವಿಶಿಷ್ಟವಾದ ಅಂಕಿತವನ್ನು ಈತ ಇರಿಸಿಕೊಂಡಿದ್ದಾನೆ.ಅವನ  ‘ಕರಸ್ಥಲದ ಇಷ್ಟ

 ಲಿಂಗೇಶ್ವರ’ ಎಂಬ ಅಂಕಿತವೂ ಒಂದು ವಿಶೇಷವೇ.

ಇವನ ವಚನಗಳನ್ನು‌ ಪರಿಭಾವಿಸಿದರೆ ದೊರಕಿದ ೨೩ ವಚನಗಳಲ್ಲಿ‌ ಮೂರ್ನಾಲ್ಕು ವಚನಗಳಲ್ಲಿ‌ ಮಾಯೆಯ‌‌ ಮಹಿಮೆಯನ್ನು ಬಣ್ಣಿಸುತ್ತಾನೆ. ಮಾಯೆಯ ನಿರಾಕರಣೆಗಿಂತ ಅದರ ಮಹಿಮೆಯನ್ನು‌ ಹೊಗಳುವ , ಅದನ್ನು‌ ಮೀರುವದು ಅಷ್ಟು ಸರಳವಲ್ಲ ಎಂಬ ಸರಳ ಸತ್ಯದ ನಿರ್ಧಾರ ಅವನ ವಚನಗಳಲ್ಲಿರುವದು ವಿಶೇಷವಾಗಿದೆ.‌ ಶರಣರ ಮಹತ್ವ ಇರುವದೇ ಇಲ್ಲಿ. ಸುಮ್ಮ ಸುಮ್ಮನೇ ಅವರು‌ ಮಾಯೆಯನ್ನು ಮೀರುವ  ಮಾತನಾಡುವದಿಲ್ಲ. ಅದು ಅಷ್ಟು ಸರಳವೂ ಅಲ್ಲ. ಅಂತೆಯೇ ಮೆಡ್ಲೇರಿ ಶಿವಲಿಂಗನೆಂಬ ಈ ವಚನಕಾರ  ಇಲ್ಲಿ ಮೋಹದ‌ ಮಾಯೆಯ ಸ್ವರೂಪವನ್ನು ವಿವರಿಸುತ್ತಾನೆ. ಕಾಮ ಕಾಡುವ ಮಾಯೆಯಾದರೂ ಗಂಡು ಹೆಣ್ಣುಗಳ ಸಂಗ ಸುಖದಿಂದ ಪಾರಾದವರು ಯಾರು? ಪಾರಾಗಬೇಕೆಂದು ಬಯಸಿದವರಾದರೂ ಪಾರಾಗಿದ್ದಾರೆಯೆ? ಶಿವನಾದರೂ‌ ಪಾರಾದನೇ,?ಎಂಬ ಅವನ‌ ಪ್ರಶ್ನೆ ನಿಜವಾದದ್ದಿದೆ.ಎಲ್ಲರೂ ಮಾತನಾಡುವ ವರೇ ಮೀರಿದವರು ಯಾರು? ಸರ್ವಜ್ಞ ಕವಿ

ಮಾತಿನೊಳಗೆಲ್ಲರೂ ಶುಚಿ ವೀರ ಸಾಧುಗಳು

ಎಂದು ಸುಮ್ಮನೇ ಎಚ್ಚರಿಸಿಲ್ಲ. ಆದ್ದರಿಂದಲೇ ವಚನಕಾರ

 “ಬಿಗಿದ ಕುಚವು ಉರದ ಮಧ್ಯವು ಲಿಂಗಾಕಾರವು

ಮಹೇಶ್ವರಗೂ ಪ್ರಿಯವು” ಎಂದು ಸಾಂಕೇತಿಕವಾಗಿ ಬಣ್ಣಿಸುತ್ತಾನೆ.ಇಡೀ ವಚನ ಒಂದು ಸಾಂಕೇತಿಕ ಭಾಷೆಯಲ್ಕಿಯೇ ಹೆಣೆಯಲ್ಪಟ್ಟಿರುವದು ವಿಶೇಷ.

ಅದು ಕೇವಲ ಮೋಹವನ್ನು ಉಂಟು ಮಾಡುವ ದೇಹದ  ಅಂಗ ಭಾಗ ಮಾತ್ರವಾಗಿರದೆ

‘ಸನ್ಮೋಹ ಅಮೃತಸಾರವೂ ‘ಆಗಿರುವಂತೆ ಇಳೆ ಉತ್ಪತ್ಯಕ್ಕೆ ಆಧಾರವೂಆಗಿದೆ.ಹಾಗಾಗಿ ಲೋಕದಲ್ಲಿ ಜನಿಸಿದ ಮೇಲೆ ಗಂಡು ಹೆಣ್ಣೆಂಬ ಭಾವಕ್ಕೆ ಬಂಧಿಯಾದ ಮೇಲೆ, ಇಂಥ‌ “ಮೋಹ ಪ್ರಿಯವಾದ ಮೋಹಿನಿಯರ ಅಗಲುವದೆಂತೋ‌ ಕರಸ್ಥಲದ ಇಷ್ಟಲಿಂಗೇಶ್ವರಾ! ” ಎಂದು ವಚನಕಾರ ಉದ್ಘಾರವೆತ್ತುತ್ತಾನೆ.

ಇಡೀ ವಚನ ಮಾಯೆಯ ನ್ನು ಸಂಸಾರವನ್ನು ಗಂಡು ಹೆಣ್ಣಿನ ಒಲವನ್ನು ದೂಷಿಸದೆ ಅದು ಜಗತ್ತಿಗೆ ಅಗತ್ಯ.ಅದನ್ನು ಹೊಂದುವದರಲ್ಲಿ ಯಾವ ತಪ್ಪೂ ಇಲ್ಲ.ಆದರೆ ಅಲ್ಲೊಂದು ಸಾಮಾಜಿಕ ಒಪ್ಪಿತ ದಾರ್ಮಿಕ‌ ನೀತಿ ಇರಬೇಕಾದದ್ದು ಅವಶ್ಯ ಎನ್ನುವದನ್ನು ಸೂಚ್ಯವಾಗಿ ಚಿತ್ರಿಸಿದೆ.

ಅಕ್ಕ ‘ಹಾವಿನ ಬಾಯ ಹಲ್ಲ ಕಳೆದು ಹಾವ ನಾಡಿಸ ಬಲ್ಲಡೆ ಹಾವಿನ ಸಂಗವೇ ಲೇಸ ಕಂಡಯ್ಯ’

ಎಂ ದಿರುವದಾಗಲಿ ಬಸವಣ್ಣನವರು ‘ಹೆಣ್ಣಿನಲಿ‌ ಮನವಾದಡೆ  ಮದುವೆಯಾಗುವದು’ ಎಂದಿರುವದಾಗಲಿ ಮಾಯೆಯನ್ನು ಹೊಂದಿಸಿಕೊಂಡು‌ಹೋಗುವದರಲ್ಲಿಯೇ ಮಾಯೆಯ ಗೆಲ್ಲುವ ವಿಧಾನವಿದೆ ಎಂದು ಸೂಚಿಸಿದ್ದರು ದಾಸಿಮಯ್ಯನವರು

ಬಂದುದ ಬಳಸುವಳು

ತಂದುದ ಪರಿಣಾಮಿಸುವಳು

ಬಂಧುಗಳ‌ಮರೆಸುವಳು

ಇದು‌ಕಾರಣ ದುಗ್ಳೆಯ ತಂದು ಬದುಕಿದೆನು

ಕಾಣಾ ರಾಮನಾಥಾ

ಎಂದು ತಮ್ಮ ಸ್ತ್ರೀಯನ್ನು ಸ್ತುತಿಸಿದ್ದರು.

ಹೀಗೆ ವಚನಕಾರರ ನಂತರ ವಚನಕಾರರ ಸಾಲಿನಲ್ಲಿಯೆ ಬಂದ ಶರಣರೂ ಬಸವಾದಿ ಶಿವಶರಣರು ಸಾರಿದ ಧನಾತ್ಮಕ ಚಿಂತನೆಯನ್ನು ಮುಂದುವರೆಸಿದ್ದರು ಎನ್ನುವದಕ್ಕೆ ಇಂಥ ವಚನಗಳು ಸಾಕ್ಷಿಯಾಗುತ್ತವೆ.

One thought on “ವಚನ ಚಿಂತನೆ

Leave a Reply

Back To Top