ಬಣ್ಣದ ವೇಷ

ಕಥೆ

ಪ್ರಜ್ಞಾ ಮತ್ತಿಹಳ್ಳಿ

ನೀಲಕಮಲವೆಂದು ಚೆಂದನೆಯ ಸ್ಟಿಕ್ಕರ್ ಅಂಟಿಸಿಕೊಂಡು ಫಳಫಳ ಹೊಳೆಯುತ್ತಿದ್ದ ಸ್ಟೀಲು ತಾಟು ಢಮಾರ್ ಎಂಬ ದೊಡ್ಡ ಸಪ್ಪಳದೊಂದಿಗೆ ಗೋಡೆಗೆ ಮುಖ ಗುದ್ದಿಕೊಂಡು ನೆಲಕಪ್ಪಳಿಸುವುದು, ಅದೇ ಗೋಡೆಯ ಮೇಲೆ ನೇತಾಡುವ ಬಂಗಾರ ಬಣ್ಣದ ಗುಂಡು ಮೋರೆಯ ಗಡಿಯಾರ ಢಣ್ ಢಣ್ ಎಂದು ಒಂಭತ್ತು ಸಲ ಹೊಡೆದುಕೊಳ್ಳುವುದೂ ಏಕಕಾಲದಲ್ಲಿಯೇ ಘಟಿಸುವ ಮೂಲಕ ತಗ್ಗಿನಕೇರಿಯೆನ್ನುವ ಊರಿನಲ್ಲೇ ಹೆಚ್ಚು ತಗ್ಗಾಗಿರುವ ಆ ಕೇರಿಯಲ್ಲೊಂದು ಯುದ್ಧ ಘೋಷಣೆಯಾಗಿತ್ತು. ದುರವೀಳ್ಯವನ್ನು ತನ್ನ ಕುದಿಯುವ ಮನಸ್ಸಿನಲ್ಲಿಯೇ ತಯಾರಿಸಿಕೊಂಡ ನಾಗಲಕ್ಷ್ಮಿ ಹೆಡೆಯಾಡಿಸುವ ಘಟಸರ್ಪದಂತೆ ಧುಸ್ ಧುಸ್ ಉಸಿರು ಬಿಟ್ಟಳು. ಆದರೆ ರಣವೀಳ್ಯವನ್ನು ಇಸಿದುಕೊಳ್ಳಬೇಕಾಗಿದ್ದ ಆಕೆಯ ಎದುರು ಪಕ್ಷದ ಸೇನಾನಿ ಪದುಮಣ್ಣ ಅಂದರೆ ಆಕೆಯ ಗಂಡ ಆಸುಪಾಸಿನಲ್ಲೆಲ್ಲೂ ಇಲ್ಲದಿದ್ದ ಕಾರಣ ಬೋರಲು ಬಿದ್ದ ತಾಟಿನಿಂದ ಹೊರಬಿದ್ದು ಚೆಲ್ಲಾಪಿಲ್ಲಿಯಾದ ಅನ್ನದಗುಳಿನಷ್ಟೇ ಅನಾಥಳು ತಾನೆಂಬ ಭಾವ ಮೂಡಿದ್ದೇ ತಡ, ಅಳುಮಿಶ್ರಿತ ಕ್ರೋಧದ ಅಲೆಯೊಂದು ಅವಳ ನಾಭಿಯಾಳದಿಂದ ಹೊರಟು ಗಂಟಲಿನವರೆಗೆ ಬಂದಿತು. ಆಗ ಅವಳ ಧುಸ್ ಧುಸ್ ಸದ್ದು ಕೆಲವು ಬಿಕ್ಕುಗಳನ್ನು ಸೇರಿಸಿಕೊಂಡು ಹುಂ ಕ್ಕು ಕ್ಕು ಹುಂ ಕ್ಕು ಕ್ಕು ಎಂಬಂತಹ ವಿಚಿತ್ರ ಸಪ್ಪಳವಾಗಿ ಪರಿವರ್ತನೆ ಹೊಂದಿತು. ಅವಳ ಕೈಯಿಂದ ಬೀಸಿ ಒಗೆಯಲ್ಪಡುವ ಮೊದಲು ಪುಟ್ಟ ಪುಟ್ಟ ತುತ್ತುಗಳು ತುಂಬಿದ್ದ ತಾಟನ್ನು ಆವರೆಗೆ ಹೊತ್ತುಕೊಂಡಿದ್ದ ಟೀಪಾಯಿಯ ಮೇಲೆ ಕೂತಿದ್ದ ಮೊಬೈಲು ಈಗಷ್ಟೇ ಮುಗಿದ ಕರೆಯ ಸಲುವಾಗಿ ತನ್ನೊಳಗೆ ಹಚ್ಚಿಕೊಂಡಿದ್ದ ಬೆಳಕನ್ನು ಆರಿಸಿ ಕಪ್ಪಾಯಿತು.

       ಎಂದೂ ಯಾವ ಕಾರಣಕ್ಕೂ ಅಳು ಎಂಬ ಕ್ರಿಯೆಯನ್ನೇ ಇಷ್ಟ ಪಡದ, ಅಳುವವರ ಸಮೀಪಕ್ಕೆ ಹೋಗಲಿಕ್ಕೂ ಇಚ್ಛೆಪಡದ, ತಾನೆಂಬೋ ತಾನು ತನ್ನ ಮನೆ, ಸಂಸಾರಗಳನ್ನು ತನ್ನಿಚ್ಛೆಯಂತೆಯೇ ನಡೆಸಬಲ್ಲ ಭಯಂಕರ ತಾಕತ್ತಿನವಳೆಂದು ಬಲವಾಗಿ ನಂಬಿಕೊಂಡಿದ್ದ ನಾಗಲಕ್ಷ್ಮಿಗೆ  ತನ್ನೊಳಗೆ ಉಕ್ಕುತ್ತಿರುವ ಭಾವನೆಯನ್ನು ಹೇಗೆ ನಿರ್ವಹಿಸಬೇಕೆಂದೇ ತಿಳಿಯದಂತಾಗಿ ಆವೇಶದ ನಡುಕ ಬರತೊಡಗಿತು. ತಾನೀಗ ಸೋತಿದ್ದೇನೆಂಬ ನಿರಾಶೆ, ಗೆಲ್ಲಲಾಗಲಿಲ್ಲವೆಂಬ ಹತಾಶೆ, ತನ್ನ ಸೋಲನ್ನು ತಾನೆಂದೂ ಸ್ವೀಕರಿಸಬಾರದೆಂಬ ಹಠ ಇವೆಲ್ಲ ಕೂಡಿದ ಪ್ರಳಯಾಗ್ನಿಯಂತಹ ಬೆಂಕಿಯೊಂದು ಒಡಲಲ್ಲಿ ಹುಟ್ಟಿದ್ದೇ ತಡ, ಹಲ್ಲು ಕಡಿಯುತ್ತ, ಚಪ್ಪಲಿ ಮೆಟ್ಟಿಕೊಂಡು ಬಾಗಿಲನ್ನು ಹಾಗೇ ಮುಂದಕ್ಕೆಳೆದುಕೊಂಡು ಹೊರಟುಬಿಟ್ಟಳು. ಕೆಂಡ ಕಾರುತ್ತಿದ್ದ ಅವಳ ಕಣ್ಣೊಳಗೆ ಗಂಡ ಪದುಮಣ್ಣನ ಚಿತ್ರ ಗಿರಿಗಿರಿ ತಿರುಗುತ್ತಿತ್ತು. ಅಲ್ಲೇ ಪಕ್ಕದ ಬೀದಿಯಲ್ಲಿ ಅಟ್ಟದ ಮೇಲಿರುವ ಅವನ ಆಫೀಸಿಗೆ ನುಗ್ಗಿ, ಕೇಸಿನ ಫೈಲುಗಳನ್ನು ಸುತ್ತಲೂ ರಾಶಿ ಹಾಕಿಕೊಂಡು ಕೂತಿರುವ ಅವನನ್ನು ಹಿಡಿದು ತನ್ನ ಸಿಟ್ಟಿಳಿಯುವ ತನಕ ಬಡಿಯಲೇಬೇಕೆಂದು ರೋಷದಿಂದ ಹೆಜ್ಜೆಗಳನ್ನು ಎತ್ತೆತ್ತಿ ಇಡತೊಡಗಿದಳು. ತನ್ನನ್ನು ಕಂಡ ಕೂಡಲೇ “ಅಕ್ಕಾ ಆರಾಮಾ” ಎಂದು ಹಲ್ಲು ಕಿರಿಯುತ್ತ, “ಯಾಕಕ್ಕ ಇಷ್ಟು ಮೈ ಬಂದದಲ್ಲ, ವಾಕಿಂಗೂ ಮಾಡೂದಿಲ್ವಾ ಹೆಂಗೆ, ಡಾಕ್ಟ್ದ್ರಿಗಾದರೂ ತೋರಸ್ಕಳಿ” ಎಂದೆಲ್ಲ ಬೊಗಳೆ ಬಿಡುತ್ತ ತನ್ನ ಬಳ್ಳಿ ಮೈಯನ್ನು ವಾಲಾಡಿಸುವ ವಲ್ಲರಿಯನ್ನು ಇವತ್ತು ಬಿಡಬಾರದು. ಕತೆ ಹೇಳಲು ಭೂಮಿಗಿಳಿದ ನೀಲಿ ಮೋಡದಂತೆ ಗಾಳಿಗೆ ಹಾರಾಡುವ ಅವಳ ಅಲೆಗೂದಲನ್ನು ಮುಷ್ಟಿಯಲ್ಲಿ ಹಿಡಿದು ದರದರ ಎಳೆಯಬೇಕು. ಎಷ್ಟು ಸೊಕ್ಕು ಆ ಚೋದಿಗೆ, ತಾನು ತೆಳ್ಳಗೆ ಬೆಳ್ಳಗೆ ಸುಂದರಿಯಾಗಿದ್ದೇನೆ ಅಂತಲೇ ಇಷ್ಟು ಉರಿಯುವುದಲ್ವ ಅವಳು. ಪಟಪಟ ಇಂಗ್ಲೀಷು ಮಾತಾಡ್ತೇನೆ ಅಂತ, ರೊಯ್ಯನೆ ಗಾಡಿ ಬಿಟ್ಟುಕೊಂಡು ಬೇಕೆಂದಲ್ಲಿ ಹೋಗಬಲ್ಲೆ ಅಂತ ಪೊಗರು ತುಂಬಿಕೊಂಡಿದೆ. ಆದ್ದರಿಂದಲೇ ನನ್ನ ಗಂಡ ರಾತ್ರಿ ಒಂಭತ್ತು ಹೊಡೆದರೂ ಕೇಸು, ಕೇಸು ಅಂತ ಅವಳ ಮಗ್ಗುಲಲ್ಲಿ ಕೂತೇ ಇರಲಿಕ್ಕೆ ಸಾಯ್ತಾನೆ. ತಾನು ಫೋನು ಮಾಡಿದರೆ ಆಂ, ಊಂ ಕೇಳ್ತಾ ಇಲ್ಲ, ನೆಟ್ ವರ್ಕ ಇಲ್ಲ ಅಂತ ಫೋನು ಇಡ್ತಾನೆ, ಬೋಳಿಮಗ, ಇವತ್ತು ಅವನ ಗ್ರಾಚಾರ ಬಿಡಿಸದಿದ್ರೆ ನಾನು ಆಟಕ್ಕೊಂದೇ ವೀರಭದ್ರ ಎಂದೆನಿಸಿಕೊಳ್ಳುವ ಗಪ್ಪತಿಯ ಮಗಳೇ ಅಲ್ಲ. ಹೀಗೆಂದು ಉರಿಯುತ್ತ, ಮತ್ತೆ ಮತ್ತೆ ಕೆದರಿ ಉರಿ ಹೆಚ್ಚಿಸಿಕೊಳ್ಳುತ್ತ ಸೀರೆ ಉಟ್ಟ ಅಗ್ನಿಕುಂಡದ ಹಾಗೆ ಹೊರಟ ನಾಗಲಕ್ಷ್ಮಿ ಉರುಫ್ ನಾಗಕ್ಕ ಮೊದಲಿನಿಂದಲೂ ಸಿಟ್ಟಿನ ಸ್ವಭಾವದವಳೇ.

          ಗುಡ್ಡೇಮಠದ ಮಹಾಲಿಂಗೇಶ್ವರ ಯಕ್ಷಗಾನ ಮೇಳದಲ್ಲಿ ವೀರಭದ್ರನ ಪಾತ್ರ ಹಾಕುತ್ತಿದ್ದ ಗಪ್ಪತಿಯ ಏಕೈಕ ಮಗಳೇ ನಾಗಲಕ್ಷ್ಮಿ. ವರ್ಷದ ಎಂಟು ತಿಂಗಳು ಮೇಳದೊಂದಿಗೆ ತಿರುಗುತ್ತ ಉಳಿದ ನಾಕು ತಿಂಗಳಲ್ಲಿ ಕೊಟ್ಟೆ ಕೊನೆ, ಸೊಪ್ಪು-ಮಣ್ಣು ಎಂದು ಗೇಯುತ್ತ ಸಂಸಾರ ಮಾಡುತ್ತಿದ್ದ ಗಪ್ಪತಿಯ ಹೆಂಡತಿ ಗಂಗೆ ಮೂರು ಮಕ್ಕಳನ್ನು ಹೆತ್ತಿದ್ದಳಾದರೂ ಒಂದೂ ಉಳಿದಿರಲಿಲ್ಲ. ಕಡೆಗೆ ಯಾರೋ ಹಿರಿಯರು ನಾಗದೋಷವಿರಬಹುದೆಂದು ಸಲಹೆ ಕೊಟ್ಟ ಮೇಲೆ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಹರಕೆ ಹೇಳಿಕೊಂಡ ಮೇಲೆ ನಾಗಲಕ್ಷ್ಮಿ ಹುಟ್ಟಿದ್ದು. ಅಪರೂಪದ ಮಗಳು ಅಂತ ಅಪ್ಪ-ಅಮ್ಮ ಮುದ್ದು ಮಾಡಿದ್ದೇ ಮಾಡಿದ್ದು. ಅವಳು ಹೇಳಿದ ಮಾತನ್ನು ತೆಗೆದು ಹಾಕುತ್ತಲೇ ಇರಲಿಲ್ಲ. ಅಪ್ಪನ ಜೊತೆ ಆಟಕ್ಕೂ ಹೋಗಿ ಅವನ ವೀರಭದ್ರನ ಪಾತ್ರ ನೋಡಿ ಬರುತ್ತಿದ್ದ ನಾಗಲಕ್ಷ್ಮಿ ಮನೆಯಲ್ಲಿ ಅದೇ ಸಿಟ್ಟು-ಕೋಪ-ತಾಪಗಳನ್ನು ಅನುಕರಣೆ ಮಾಡುತ್ತಿದ್ದಳು. ತಮ್ಮ ಮಗಳು ದೈವಾಂಶ ಸಂಭೂತೆ ಅಂತಲೇ ಭಾವಿಸಿಕೊಂಡಿದ್ದ ಗಂಗೆ-ಗಣಪರು ಮಗಳಿಗೆ ಏನೆಂದರೆ ಏನೂ ಹೇಳುತ್ತಿರಲಿಲ್ಲ. ಅವರ ಕೊಂಡಾಟಗಳನ್ನೂ, ನಾಗಿಯ ಮೊಂಡಾಟ-ಭಂಡಾಟಗಳನ್ನು ಹತ್ತಿರದಿಂದ ಬಲ್ಲವರೆಲ್ಲ ಈ ನಮೂನಿ ಮಗಳನ್ನು ಬೆಳೆಸಿದ್ರೆ ನಾಳೆ ಆ ಕೂಸು ಸಂಸಾರ ಮಾಡದಾರೂ ಹೌದಾ? ಎಂದು ಮಾತಾಡಿಕೊಂಡರು. ಆಸುಪಾಸಿನಲ್ಲೆಲ್ಲೂ ಗಂಡು ಸಿಗದೇ ಗಪ್ಪತಿ ತನ್ನ ಮಗಳಿಗಾಗಿ ದೂರದ ಊರಿನ ಗಂಡುಗಳ ತಲಾಶೆಗೆ ಇಳಿದ. ಆಗ ಅವನ ಮೇಳದ ಭಾಗವತರೊಬ್ಬರು ಪದುಮಣ್ಣನ ಬಗ್ಗೆ ಹೇಳಿ ಗೋವಿನಂಥಾ ಸಾಧು ಮನುಷ್ಯ, ನಿನ್ನ ಮಗಳು ಹೇಳ್ದಾಂಗೆ ಕೇಳ್ಕಂಡು ಇರ್ತ ನೋಡು ಅಂತ ಶಿಫಾರಸು ಮಾಡಿದರು.

            ನಮ್ಮ ಪದುಮಣ್ಣ ಇದ್ದಾನಲ್ಲ ಈತ ಶಾಲೆಗೆ ಕಾಲಿಟ್ಟ ಕ್ಷಣದಿಂದ ಅಂದರೆ ತನ್ನ ನಾಲ್ಕನೆಯ ವಯಸ್ಸಿನಿಂದಲೇ ದುಡಿಯಲಾರಂಭಿಸಿದ್ದಾನೆಂದರೆ ನೀವು ನಂಬಲೇಬೇಕು. ಅವನು ಶಾಲೆಗೆ ಹೋಗುವ ಕಾಲದಲ್ಲಿ ಅಂದರೆ ಈಗೊಂದು ಮೂವತ್ತು ವರ್ಷದ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ವತಿಯಿಂದ ಪ್ರತಿ ಮದ್ಯಾಹ್ನ ಉಪ್ಪಿಟ್ಟು ಕೊಡುತ್ತಿದ್ದರು. ದೊಡ್ಡಗಾತ್ರದ ಕಾಳಿನ ಜವೆಗೋಧಿಯಿಂದ ತಯಾರಿಸಿದ ಉಪ್ಪಿಟ್ಟು ಬಿಸಿಬಿಸಿಯಾಗಿ ರುಚಿಯಾಗಿರುತ್ತಿತ್ತು. ಹಾಜರಿ ಪುಸ್ತಕದಲ್ಲಿ ನಮೂದಿಸಿದ ಹುಡುಗರ ಸಂಖ್ಯೆಗನುಗುಣವಾಗಿ ಉಪ್ಪಿಟ್ಟು ಬರುತ್ತಿತ್ತು. ಆದರೆ ನಿಜವಾಗಿಯೂ ಹಾಜರಿರುತ್ತಿದ್ದವರು ಅದರ ಅರ್ಧದಷ್ಟು ಹುಡುಗರು ಮಾತ್ರ. ಆದ್ದರಿಂದ ಹುಡುಗರು ತಮಗೆ ಸಾಕೆನ್ನಿಸುವಷ್ಟು ಉಪ್ಪಿಟ್ಟು ಹಾಕಿಸಿಕೊಳ್ಳಬಹುದಿತ್ತು. ಪದುಮಣ್ಣ ಶಾಲೆಗೆ ಕಾಲಿಟ್ಟ ದಿನವೇ ದೊಡ್ಡದೊಂದು ಪ್ಲಾಸ್ಟಿಕ್  ಕವರಿನಲ್ಲಿ ಉಪ್ಪಿಟ್ಟು ಹಾಕಿಸಿಕೊಂಡ. ಸೀದಾ ಶಾಲೆಯ ಹೊರಗೆ ಬಂದ. ಅಲ್ಲಿ ರಸ್ತೆಯ ಪಕ್ಕದ ಕಾಲುವೆಗಳನ್ನು ಅಗೆಯುವ ಕೆಲಸದಲ್ಲಿ ತೊಡಗಿರುವ ಜನರು ಕೂತಿದ್ದರು. ಅವರೆದುರು ಘಮಘಮಿಸುವ ಉಪ್ಪಿಟ್ಟು ತೋರಿಸಿದ. ತಮ್ಮ ಡಬ್ಬಿಗಳಲ್ಲಿರುವ ತಂಗಳಿಗಿಂತ ಈ ಉಪ್ಪಿಟ್ಟು ತಿನ್ನುವುದು ಬಹಳ ಉತ್ತಮವೆಂದು ಭಾವಿಸಿದ ಅವರು ಎರಡು ರೂಪಾಯಿ, ಮೂರು ರೂಪಾಯಿ ಮುಂತಾಗಿ ಹಣ ಕೊಟ್ಟು ಉಪ್ಪಿಟ್ಟು ಕೊಂಡರು. ಹೀಗೆ ಶಾಲೆಗೆ ಹೋಗತೊಡಗಿದಂದಿನಿಂದಲೇ ಗಳಿಕೆ ಮಾಡಲಾರಂಭಿಸಿದ ಅದ್ಭುತ ಪ್ರತಿಭಾರತ್ನ ಆತ. ತನಗೆ ಅಯಾಚಿತವಾಗಿ ದೊರಕಿದ ಆಹಾರದ ಗಿರಾಕಿಗಳನ್ನು ಹಲವಾರು ವ್ಯಾಪಾರಗಳಿಗೆ ಆತ ಬಳಸಿಕೊಂಡ. ಅಂದರೆ ಅವನ ಮನೆಯಲ್ಲಿ ಮಾಡಿದ ದೋಸೆ, ರೊಟ್ಟಿ, ಕಡುಬು, ಪಲ್ಯಗಳೇನಾದರೂ ಆತನಿಗೆ ಇಷ್ಟವಾಗದಿದ್ದರೆ ಬೇರೆ ಹುಡುಗರಂತೆ ಆತ ರಗಳೆ ಮಾಡುತ್ತಿರಲಿಲ್ಲ. ಸುಮ್ಮನೆ ಒಂದು ಕವರಿನಲ್ಲಿ ಹಾಕಿಕೊಂಡು ಪಾಟಿಚೀಲದಲ್ಲಿರಿಸಿಕೊಂಡು ಶಾಲೆಗೆ ಬಂದು ಮಾರಿಬಿಡುತ್ತಿದ್ದ. ಕೆಲವು ಸಲ ತನ್ನ ಪಾಲಿನ ತಿಂಡಿಗಳು ಸಾಲದೆಂದು ಅನ್ನಿಸಿದಾಗ ಅಂದರೆ ಮಾರುಕಟ್ಟೆಯ ಬೇಡಿಕೆ ಹೆಚ್ಚಿದ್ದಾಗ ಅಡಿಗೆ ಮನೆಯಲ್ಲಿ ಹರಿದ ದೋಸೆ, ಉಳಿದ ರೊಟ್ಟಿ ಇತ್ಯಾದಿಗಳನ್ನು ಎಮ್ಮೆಗೆ ಹಾಕುವುದಕ್ಕಾಗಿ ತೆಗೆದಿರಿಸುವ ಅಕ್ಕಚ್ಚು ಪಾತ್ರೆಯಿಂದ ಎಗರಿಸಿಕೊಂಡು ತನ್ನ ಸ್ಟಾಕ್ ಶಾರ್ಟೇಜು ಸರಿಪಡಿಸಿಕೊಳ್ಳುತ್ತಿದ್ದ. ಇಂತಹ ಮಾರಾಟದಿಂದ ಗಳಿಸಿದ ಹಣವನ್ನು ಅವನೆಂದೂ ಪೋಲು ಮಾಡುತ್ತಿರಲಿಲ್ಲ. ಮನೆಯ ಪುರುಷ ಸದಸ್ಯರಿಗೆ ತಿಳಿಯದಂತೆ ಮಹಿಳೆಯರು ಕೈಗೊಳ್ಳುವ ಸಾಹಸಗಳಿಗೆ ಬಂಡವಾಳದಂತೆ ಕೈಕಡ ಕೊಡುತ್ತಿದ್ದ. ಅದಕ್ಕೆ ಬದಲಾಗಿ ಆ ಹೆಂಗಸರು ತಮಗೆ ಅನುಕೂಲವಾದಾಗ ಹೆಚ್ಚಿನ ಹಣವನ್ನು ಕೊಡುವುದಲ್ಲದೇ ಹಲವು ಬಗೆಯ ತಿಂಡಿ-ತೀರ್ಥಗಳನ್ನು ಬಡ್ಡಿಯಂತೆ ಕೊಡುತ್ತಿದ್ದರು. ಹೀಗೆ ಪದುಮಣ್ಣನ ವ್ಯಾಪಾರ-ವಹಿವಾಟುಗಳು ಬಾಲ್ಯದಲ್ಲೇ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದವು. ವಿಷಯ ಇಷ್ಟೇ ಆಗಿದ್ದರೆ ಪದುಮಣ್ಣನ ಬಗ್ಗೆ ಬರೆಯಬೇಕಾಗಿರಲಿಲ್ಲ. ಅವನು ತನ್ನ ಮಾರಾಟಪ್ರತಿಭೆಯನ್ನು ಮುಂದುವರೆಸಿಕೊAಡು ಅಪ್ರತಿಮ ವ್ಯವಹಾರಸ್ಥನಾಗಿ ಟಾಟಾ, ಅಂಬಾನಿಗಳಿಗೇ ಸೆಡ್ಡು ಹೊಡೆದು ಪದ್ಮವಿಭೂಷಣ ಇತ್ಯಾದಿ ಪಡೆದುಕೊಂಡು ಸುಖವಾಗಿ ಇರಬಹುದಿತ್ತು. ಆದರೆ ಪ್ರಾಥಮಿಕಶಾಲೆ ಬಿಟ್ಟು ಹೈಸ್ಕೂಲಿಗೆ ಬರುವಷ್ಟರಲ್ಲಿ ಪದುಮಣ್ಣ ದುಡಿಮೆಯ ದಾರಿಯನ್ನೇ ಬದಲಾಯಿಸಿಕೊಂಡಿದ್ದ. ಸರಕಿನಿಂದ ಸೇವಾ ಕ್ಷೇತ್ರಕ್ಕೆ ಶಿಫ್ಟ್ ಆಗಿದ್ದ. ಅಂದರೆ ಗೂಡ್ಸ್ ಟು ಸರ್ವಿಸ್ ಸೆಕ್ಟರ್.

            ಪದುಮಣ್ಣನಿಂದ ಹಣಕಾಸಿನ ನೆರವು ತೆಗೆದುಕೊಳ್ಳುತ್ತಿದ್ದ ಹೆಂಗಸರು ಅವನನ್ನು ತಮ್ಮ ಒಳಗುಟ್ಟಿನ ಸಂಗತಿಗಳಿಗೆ ಆಪ್ತ ಸಲಹೆಗಾರನನ್ನಾಗಿ ಬಳಸಿಕೊಳ್ಳುತ್ತಿದ್ದರು. ಗಂಡಸರ ಗಮನಕ್ಕೆ ಬರದಂತೆ ಗುಟ್ಟಾಗಿ ಶೇಖರಿಸಿಕೊಂಡ ಗೋಡಂಬಿ, ದಾಲ್ಚಿನ್ನಿ, ಮುರುಗಲ ತುಪ್ಪ, ಆರಾರೋಟು, ಅರಿಶಿಣ ಪುಡಿ ಇತ್ಯಾದಿಗಳಿಗೆ ಸೂಕ್ತ ಗಿರಾಕಿಯ ಹೆಸರು ಸೂಚಿಸುವುದು, ಹೆಂಗಸರು ಮದುವೆಯಂತಹ ಕಾರ್ಯಗಳಿಗೆ ಹೋಗುವಾಗ ಎರವಲು ಚಿನ್ನ ಧರಿಸುವ ಆಸೆಪಟ್ಟರೆ ಯಾವ ಆಭರಣ ಯಾರ ಬಳಿಯಿದೆಯೆಂಬ ಮಾಹಿತಿ ನೀಡುವುದು, ಅವರ ಗುಪ್ತಧನಕ್ಕೆ ನಂಬಿಗಸ್ತ ಗಿರಾಕಿ ಹುಡುಕುವುದು ಹೀಗೆ ತನ್ನ ಹಳ್ಳಿಯ ಮಹಿಳಾ ಆರ್ಥಿಕತೆಯ ಕ್ಷೇತ್ರಕ್ಕೆ ಪದುಮಣ್ಣನದು ದೊಡ್ಡ ಕೊಡುಗೆಯಿದೆ. ಆದರೆ ಅವನ ಅಮೂಲ್ಯ ಸೇವೆಯ ಮಹತ್ವ ಅರ್ಥವಾಗದ ಅವನ ಶಿಕ್ಷಕರು ಅವನನ್ನು ಅಡ್ಡಕಸುಬಿಯೆಂದು ಅಪಮಾನಿಸಿ ಶಿಕ್ಷೆ ನೀಡುತ್ತಿದ್ದರು.

          ಕಾಲೇಜು ಮೆಟ್ಟಿಲು ಹತ್ತುವಷ್ಟರಲ್ಲಿ ಪದುಮಣ್ಣನ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತಾರಗೊಂಡಿತು. ಇನ್ನೂ ಮೊಬೈಲುಗಳು ಬಂದಿರದ ಆ ಕಾಲದಲ್ಲಿ ಮಲೆನಾಡಿನ ಕೊಂಪೆಗಳಿAದ ಸುತ್ತುವರೆದ ಪಟ್ಟಣದಲ್ಲಿ ವಾಸಿಸುತ್ತಿದ್ದ ಆತ ಯಾವುದೇ ವ್ಯಕ್ತಿಯ ಯಾವುದೇ ರೀತಿಯ ಕೆಲಸಕ್ಕೆ ಒದಗಬಲ್ಲ ಸರ್ವೀಸ್ ಪ್ರೊವೈಡರ್ ಆಗಿದ್ದ. ತಾನು ಕಾಲೇಜಿಗೆ ಹೋಗುವ ದಾರಿಯಲ್ಲಿಯೇ ಕರೆಂಟು ಬಿಲ್ಲು ಕಟ್ಟುವುದು, ಔಷಧಿ ಗುಳಿಗೆ ತರುವುದು, ಬ್ಯಾಂಕಿನಿಂದ ದುಡ್ಡು ತಂದು ಕೊಡುವುದು, ಯಾರಿಗಾದರೂ ಮನಿಯಾರ್ಡರು ಮಾಡುವುದು, ದಿನಸಿ ಸಾಮಾನು ತಂದು ಕೊಡುವುದು ಇಂತಹ ನೂರಾರು ಕೆಲಸಗಳನ್ನು ತಕರಾರೆತ್ತದೆ ಮಾಡುತ್ತಿದ್ದ. ಪ್ರತಿ ಕೆಲಸಕ್ಕೂ ಪ್ರತಿಫಲವಾಗಿ ಏನಾದರೂ ಸಿಕ್ಕೇ ಸಿಗುತ್ತಿತ್ತು. ಇಂತಿಪ್ಪ ಪದುಮಣ್ಣ ವಕೀಲಿ ಪದವಿ ಪಡೆದುಕೊಂಡು ವೃತ್ತಿ ಆರಂಭಿಸಿದ. ದಿನದ ಇಪ್ಪತ್ನಾಲ್ಕು ತಾಸು ಕೂಡ ಕಕ್ಷಿದಾರರ ಮನೆಯ ಕಡೆಗೆ ಕಾಲಾಡಿಸುತ್ತ ಇರುವ ಪ್ರವೃತ್ತಿಯಿಂದಾಗಿ ಕೇಸುಗಳು ಜೋರಾಗೇ ಸಿಗುತ್ತಿದ್ದವು. ಅವನಿಂದ ಉಪಕೃತರಾದವರೊಬ್ಬರು ತಮ್ಮ ನೆಂಟರ ಪೈಕಿಯ ಭಾಗವತರಿಗೆ ಶಿಫಾರಸು ಮಾಡಿ ಮದುವೆ ಮಾಡಿಸಿದರು. ಹಾಗೆ ಅವನ ಜೀವನದಲ್ಲಿ ಪ್ರವೇಶ ಪಡೆದುಕೊಂಡವಳು ನಾಗಲಕ್ಷ್ಮಿ. ಅರ್ಥಾತ್ ನಾಗಕ್ಕ. ಆದರೇನು ಮಾಡೋಣ. ಆ ಮದುವೆ ಮಾಡಿಸಿದವರು ಅವರಿಬ್ಬರ ಸ್ವಭಾವಗಳನ್ನು ಹೋಲಿಕೆ ಮಾಡಿ ವಿಚಾರ ಮಾಡಿರಲೇ ಇಲ್ಲ. ಹೀಗಾಗಿ ಪದುಮಣ್ಣನ ವಿರುದ್ಧ ಸ್ವಭಾವದ ನಾಗಕ್ಕ ಅವನ ಕೈ ಹಿಡಿದು ಬಂದಳು. ಅವಳೋ ಪಕ್ಕಾ ಒಂಟಿಗೂಬೆ. ಜನರ ತಲೆ ಕಂಡರೇ ಅವಳಿಗಾಗದು. ಹೊರತಿರುಗಾಟವೆಂದರೆ ಮುಖ ಸಿಂಡರಿಸುತ್ತಾಳೆ. ಸದಾಕಾಲ ಬಾಗಿಲು ಹಾಕಿಕೊಂಡು ಒಳಗೇ ಇರುವ ಮನೆಗುಬ್ಬಿ. ತಾನು-ತನ್ನ ಗಂಡ ಇಬ್ಬರೇ ರಾಜ-ರಾಣಿಯರ ಹಾಗೆ ಬದುಕಬೇಕೆಂದು ಕನಸು ಕಂಡವಳು. ಅವಳಿಗೆ ಪದುಮಣ್ಣನ ವಿಶ್ವಕುಟುಂಬಿತನ ಕಂಡು ದಿಗಿಲಾಗಿಬಿಟ್ಟಿತು. ಅವನ ಹಿಂದೆ ಹಿಂಡುಗಟ್ಟಿಕೊಂಡು ಬರುವ ಕಕ್ಷಿದಾರರನ್ನು ಗೌ ಗೌ ಎಂದು ಕೂಗಿ ಓಡಿಸಿಬಿಟ್ಟಳು. ಯಕ್ಷಗಾನ, ತಾಳಮದ್ದಲೆ, ದೇವಕಾರ್ಯ, ಊರ ಸಮಾರಾಧನೆ ಅಂತೆಲ್ಲ ಊರೊಟ್ಟಿನ ಕೆಲಸಕ್ಕಾಗಿ ದಿನಾಲೂ ಹುಡುಕಿಕೊಂಡು ಬರುವ ಪುರಬಾಂಧವರಿಗೂ ಅವಳಿಂದ ಮಂಗಳಾರತಿ ಸಿಕ್ಕಿತು. ಆದರೆ ಪದುಮಣ್ಣನ ಪಾಡು ನೋಡಿ. ಈಗ ಬಂದ ಹೆಂಡತಿಗಾಗಿ ಲಾಗಾಯ್ತಿನಿಂದ ಮಾಡಿಕೊಂಡು ಬಂದ ಜೀವನವನ್ನು ಬದಲಾಯಿಸಿಕೊಳ್ಳಲಿಕ್ಕೆ ಸಾಧ್ಯವೆ? ಅದಕ್ಕಾಗಿ ಪದುಮಣ್ಣ ಮನೆಯಿಂದಾಚೆಗೆ ಇರುವುದೇ ಜಾಸ್ತಿಯಾಯಿತು. ಹೆಂಡತಿ ಬೈಯುತ್ತಾಳೆ ಅಂತ ಅವಳಿಂದ ವಿಷಯ ಮುಚ್ಚಿಡುವುದು ಶುರುವಾಯಿತು. ಊರುಪಕಾರಕ್ಕೆ ಅಂತ ಗೊತ್ತಾದರೆ ಬೈಯುತ್ತಾಳೆ ಅಂತ ಎಲ್ಲಾದಕ್ಕೂ ಕೇಸಿಗಾಗಿ ಹೋಗುತ್ತೇನೆ ಅನ್ನತೊಡಗಿದ. ಹೆಂಡತಿಯೆದುರು ಹೇಳಿದ ಸುಳ್ಳು ಯಾವುದು, ಇರುವ ನಿಜ ಯಾವುದು ಅನ್ನುವುದೆಲ್ಲ ಕಲಸಿ ಹೋಗಿ ಅವನ ಸ್ಮರಣೆಯ ಗೊಂದಲಗಳು ಹೆಚ್ಚಾಗಿಬಿಟ್ಟವು. ಹೀಗೆ ಮದುವೆಯಾದದ್ದೇ ತಡ ಪದುಮಣ್ಣನಿಗೆ ಒಂದು ಬಗೆಯ ಮರೆವಿನಂತಹ ಗೊಂದಲದ ತೊಂದರೆ ಶುರುವಾಗಿಬಿಟ್ಟಿತು. ಮರೆವೆಂದರೆ ಪೂರಾ ಮರೆವು ಕೂಡಾ ಅಲ್ಲ. ಆದರೆ ತೀರಾ ಮುಖ್ಯ ವಿಷಯವನ್ನು ಬಿಟ್ಟು ಉಳಿದೆಲ್ಲ ಸಣ್ಣ-ಪುಟ್ಟ ವಿಷಯಗಳು ಸವಿವರವಾಗಿ ನೆನಪಲ್ಲಿ ಹಸಿರಾಗಿ ಉಳಿಯುವುದು, ಆದರೆ ಬಹು ಮುಖ್ಯವಾದ ನಿರ್ಣಾಯಕ ಅಂಶಗಳ ಮೇಲೆ ಮುಸುಕಿನದಂಥದ್ದೊಂದು ಕವಿದುಬಿಡುವುದು.

         ಅಂದರೆ ಪದುಮಣ್ಣನಿಗೆ ಕೆಲಸವೊಂದನ್ನು ವಹಿಸಲಾಗಿದೆಯೆಂದುಕೊಳ್ಳಿ. ಮೂವತ್ತೈದು ಕಿಲೋಮೀಟರ್ ಬಸ್ಸಿನಲ್ಲಿ ಪ್ರಯಾಣ ಮಾಡಿ, ಆಮೇಲೆ ಲಾಂಚು ಹತ್ತಿ ದ್ವೀಪದಂತಹ ಹಳ್ಳಿಗೆ ಹೋಗಿ ಭಾಗವತರನ್ನು ಭೆಟ್ಟಿಯಾಗಿ ತನ್ನನ್ನು ಇಂಥಿಂಥವರು ಕಳಿಸಿದ್ದಾರೆಂದೂ, ಇಷ್ಟನೇ ತಾರೀಖಿಗೆ, ಇಂಥ ಊರಲ್ಲಿರುವ, ಇಂಥ ಪ್ರಸಂಗಕ್ಕೆ ನೀವು ಬರಲಾಗುತ್ತದೆಯೇ ಎಂದು ವಿಚಾರಿಸಿಕೊಂಡು ಆಮೇಲೆ ಅವರಲ್ಲಿಯೇ ಊಟ ಮಾಡಿ, ರಾತ್ರಿಯಾದರೆ ಮಲಗಿಕೊಂಡು, ಬೆಳಿಗ್ಗೆ ಎದ್ದು ಅವರ ಕಾಲಿಗೆ ಬಿದ್ದು, ಆಶೀರ್ವಾದ ಪಡೆದು ಮತ್ತೆ ಲಾಂಚು, ಬಸ್ಸು ಎಲ್ಲಾ ಹಿಡಿದು ಊರು ಸೇರುತ್ತಾನೆ. ಕಳಿಸಿದವರಿಗೆ ತನ್ನ ಪ್ರಯಾಣದ ವಿವರವಾದ ಕತೆಯನ್ನು ಇಡೀ ದಿನ ಬೇಕಾದರೆ ಹೇಳುತ್ತಾನೆ. “ಕಡಿಗೆ ಭಾಗವತರು ಬರ‍್ತೇನೆ ಅಂದ್ರಾ? ಇಲ್ಲಾ ಅಂದ್ರಾ?” ಎಂಬ ಬೀಜ ವಾಕ್ಯದ ಪ್ರಶ್ನೆ ಬಂದೊಡನೆ ಅವನ ತಲೆ ಗೊಂದಲದ ಗೂಡಾಗುತ್ತದೆ. ಹತ್ತಿದ ಬಸ್ಸಿನ ನಂಬರಿನಿ್ದ ಹಿಡಿದು, ಪಕ್ಕ ಕೂತವನ ಶರ್ಟು ಬಣ್ಣದಿಂದ ಹಿಡಿದು, ಕಂಡಕ್ಟರನ ಬೆವರು ನಾತದಿಂದ ಹಿಡಿದು ಏನೇನು ನೆನಪಿಲ್ಲ ಹೇಳಿ ಅವನಿಗೆ? ಭಾಗವತರ ಮನೆಯ ಅಂಗಳದ ಹೂಗಿಡದ ಎತ್ತರ, ಬಣ್ಣ ಸಹ ಹೇಳಬಲ್ಲ, ರಾತ್ರಿ ಮಲಗಿದ ಮೇಲ್ಮೆತ್ತಿನ ಗೋಡೆಯ ಗಿಲಾಯಿ ಎಲ್ಲೆಲ್ಲಿ ಕೆತ್ತಿ ಯಾವ್ಯಾವ ಆಕಾರದ ಚಿತ್ರವಾಗಿದೆ ಅಂತ ಕೇಳಿದರೂ ಹೇಳಬಲ್ಲ. ಆದರೆ ಈ ಬೀಜರೂಪಿ ಪ್ರಶ್ನೆ ಮಾತ್ರ ಅವನಿಗೆ ಭಯಂಕರ ಘಟಸರ್ಪದಂತೆ ಹೆಡೆಯಾಡಿಸುತ್ತದೆ. ಹೀಗಾದದ್ದು ಒಂದೆರಡು ಬಾರಿಯಲ್ಲ. ಪ್ರತಿ ವಿಷಯದಲ್ಲಿಯೂ ಮೂಲ ಬೀಜರೂಪಿ ವಿಷಯದಲ್ಲಿ ವಿಸ್ಮರಣೆಯುಂಟಾಗುವುದು ಹಾಗೂ ಉಳಿದೆಲ್ಲ ವಿವರಗಳು ರಸವತ್ತಾಗಿ ನೆನಪುಳಿಯುವುದು ಮಾಮೂಲಾಗಿಬಿಟ್ಟಿತು. ಆತನ ವೃತ್ತಿಗೆ ಸಂಬಂಧಿಸಿದಂತೆ ಹಿಯರಿಂಗ್ ದಿನಾಂಕ ಮರೆತು ಹೋಗುತ್ತಿತ್ತು. ಹೆಂಡತಿಯ ಹುಟ್ಟಿದ ದಿನ, ಮದುವೆ ವಾರ್ಷಿಕ ದಿನ ಮರೆತು ಬೈಸಿಕೊಂಡು ಅವುಗಳನ್ನು ನೆನಪಿಡುವ ಗಡಿಬಿಡಿಯಲ್ಲಿ ಕೇಸಿನ ವಿಚಾರಣೆ ದಿನಾಂಕ ಮರೆಯುತ್ತಿದ್ದ. ಯಾವ ದಿನ ಯಾರ ವಿಚಾರಣೆಯಿದೆಯೆಂದು ಮರೆಯುತ್ತಿತ್ತು. ಲೋಕ ಅದಾಲತ್ ಇದೆಯೆಂದು ನಸುಕಿಗೇ ಎದ್ದು ತಯಾರಾಗಿ ಹೋಗುತ್ತಿದ್ದ. ಆದರೆ ಯಾವ ಕೇಸಿದೆಯೆಂದು ನೆನಪಾಗದೆ ಗಲಿಬಿಲಿಯಾಗುತ್ತಿದ್ದ. ಅವನ ಹಳ್ಳಿಯ ಸುತ್ತ ಮುತ್ತ ನಾಕೈದು ಊರುಗಳಲ್ಲಿ ಕೋರ್ಟುಗಳಿದ್ದ ನಿಮಿತ್ತ ಬೇರೆ ಬೇರೆ ಕಕ್ಷಿದಾರರ ಕೇಸುಗಳು ಬೇರೆ ಬೇರೆ ಕಡೆ ಇರುತ್ತಿದ್ದವು. ದೊಡ್ಡ ದೊಡ್ಡ ಪುಸ್ತಕಗಳನ್ನು ತೆಗೆದು ಓದಿ ಪ್ರತಿ ಕೇಸಿಗೂ ಕೂಡ ಅದ್ಭುತವಾದ ರೆಫರೆನ್ಸುಗಳನ್ನಿಟ್ಟು ವಾದ ತಯಾರು ಮಾಡುತ್ತಿದ್ದ. ಆದರೆ, ಯಾವ ದಿನ, ಯಾವ ಊರಿನ ನ್ಯಾಯಾಲಯದಲ್ಲಿ, ಯಾವ ಕೇಸಿಗೆ ಹಾಜರಾಗಬೇಕೆಂದು ನಿರ್ಣಯಿಸಲಾರದೆ ಗೊಂದಲಗೊಳ್ಳುತ್ತಿದ್ದ.

           ಪದುಮಣ್ಣನ ಮರೆವಿನ ರೋಗ ಅವನ ಮೆದುಳಿನ ಸಮಸ್ಯೆಯೋ ಅಥವಾ ಸಾವಿರಾರು ಕೆಲಸಗಳನ್ನು ಒಟ್ಟೊಟ್ಟಿಗೆ ಯೋಚಿಸುವ ಅವನ ಕಾರ್ಯಬಾಹುಳ್ಯತೆಯಿಂದ ಹುಟ್ಟಿದ ತೊಂದರೆಯೋ ಅಥವಾ ಸದಾ ಬೈಯುತ್ತಲೇ ಇರುವ ಅವನ ಹೆಂಡತಿಯ ಪಿರಿಪಿರಿಯಿಂದ ಉಂಟಾಗಿರುವ ಖಿನ್ನತೆಯೋ ಎಂದು ತೀರ್ಮಾನಿಸುವಲ್ಲಿ ಮನೋವೈದ್ಯರೂ ಸೋತರು.“ನೀವು ನಿಮ್ಮ ಜೀವನಶೈಲಿ ಬದಲಿಸಿಕೊಳ್ಳಿ” ಎಂದುಸಲಹೆ ಕೊಟ್ಟರು.“ಸಾರಿ ಸರ್” ಅಂದ. “ನಿಮ್ಮ ವೈಫ್ ಬದಲಾಯಿಸಿ” ಎನ್ನಲಿಕ್ಕೆ ಡಾಕ್ಟರ್‌ ಮಹಾಶಯರಿಗೆ ಧೈರ್ಯವಾಗಲಿಲ್ಲ. ಏಕೆಂದರೆ ನಾಗಕ್ಕ ಹುಲಿಯಂತೆ ಬದಿಗೇ ನಿಂತಿದ್ದಳು. ತಣ್ಣಗಾದ ಡಾಕ್ಟರ್ ಗುಳಿಗೆ ಬರೆದು ಚೀಟಿ ಕೈಲಿಟ್ಟು ಕಳಿಸಿಬಿಟ್ಟರು. ಈ ಸಮಯದಲ್ಲಿಯೇ ಪದುಮಣ್ಣನಿಗೆ ಹಿತೈಷಿಗಳೊಬ್ಬರು ಅಸಿಸ್ಟಂಟ್ ಇಟ್ಟುಕೊಳ್ಳಲು ಸಲಹೆ ಕೊಟ್ಟಿದ್ದು, ಹಾಗೂ ಪುತ್ತಣ್ಣನ ಮಗಳು, ಆಗಷ್ಟೇ ಎಲ್.ಎಲ್.ಬಿ. ಮುಗಿಸಿದ ವಲ್ಲರಿ ಅವನ ಜ್ಯೂನಿಯರ್ ಆಗಿ ಸೇರಿಕೊಂಡಿದ್ದು. ವಲ್ಲರಿ ಭಾರೀ ಜೋರಿನ ಹುಡುಗಿ. ಆದರೆ ಕೆಲಸದಲ್ಲಿ ಮಹಾ ಚುರುಕು. ಅವಳ ಅಪ್ಪ ಪುತ್ತಣ್ಣನದೊಂದು ಸಣ್ಣ ಅಂಗಡಿ. ನಾಲ್ಕು ಹುಡುಗಿಯರಲ್ಲಿ ವಲ್ಲರಿಯೇ ದೊಡ್ಡವಳು. ಅವಳು ಜ್ಯೂನಿಯರ್ ಆಗಿ ಸೇರಿಕೊಂಡ ಮೇಲೆ ಪದುಮಣ್ಣನಿಗೆ ಕಾಲಕಾಲಕ್ಕೆ ಕೇಸು ನಡೆಸುವುದು ಸಾಧ್ಯವಾಗತೊಡಗಿತು. ಕೇಸಿನ ಫೀ ಇಷ್ಟು ಅಂತ ಹೇಳಿ ವಲ್ಲರಿಯೇ ಕಕ್ಷಿದಾರರಿಂದ ವಸೂಲಿ ಮಾಡಿ ಅವನಿಗೆ ಕೊಡಲು ಶುರು ಮಾಡಿದ ಮೇಲೆ ಒಳ್ಳೆ ಆದಾಯವೂ ಬರತೊಡಗಿತು. ತನ್ನ ಸಂಬಳ ಇಂತಿಷ್ಟು ಅಂತ ಹೇಳಿ ನಿಗದಿ ಮಾಡಿಕೊಂಡು ತೆಗೆದುಕೊಳ್ಳುತ್ತಿದ್ದಳು. ಪಬ್ಲಿಕ್ ಪ್ರಾಸಿಕ್ಯೂಟರ್ ಆನಂದ ಹೊಸ ಕಾರು ತೆಗೆದುಕೊಂಡಾಗ ಇನ್ನು ನಿಮಗೆ ಈ ಹಳೆ ಕಾರು ಎಂತಕ್ಕೆ ಬೇಕು, ಸುಮ್ನೆ ಹರಗಣವೇಯಾ ಎಂದು ದಬಾಯಿಸಿ ಹೇಳಿ ಅವನ ಹಳೆಯ ಮಾರುತಿ ಏಟ್ ಹಂಡ್ರೆಡ್ ಪದುಮಣ್ಣನಿಗೆ ಕೊಡಿಸಿದ್ದಳು. ಅದಕ್ಕೊಂದು ರೇಟು ಹೊಂದಿಸಿ ತಿಂಗಳಿಗೆ ಇಷ್ಟು ಕೊಡುತ್ತೇವೆಂದು ಇ.ಎಮ್.ಐ ಫಿಕ್ಸು ಮಾಡಿದ್ದಳು. ಬೆಳಗ್ಗೆ ಒಂಭತ್ತಕ್ಕೆ ರೆಡಿಯಾಗಿ ಆಫೀಸಿಗೆ ಬಂದು ಬೀಗ ತೆಗೆದು ಆವತ್ತಿನ ಕೇಸು ಪೇಪರುಗಳನ್ನು ಜೋಡಿಸಿಕೊಂಡು ತನ್ನ ಹಾಗೂ ಪದುಮಣ್ಣನ ಕರಿಕೋಟು ಹಿಡಿದುಕೊಂಡು ಮನೆಗೆ ಬರುತ್ತಿದ್ದಳು. ಅವಳು ಸರ್ ಎನ್ನುತ್ತಿದ್ದಂತೆ ಪದುಮಣ್ಣ ಬಂದೇ ಎನ್ನುತ್ತ ಒಂದೇ ಹಾರಿಗೆ ಅಂಗಳಕ್ಕೆ ಜಿಗಿಯುತ್ತಿದ್ದ. ಸೂಟುಕೇಸು, ಕೋಟುಗಳನ್ನೆಲ್ಲ ಹಿಂದಿನ ಸೀಟಲ್ಲಿ ಇಟ್ಟು ತಾನು ಸ್ಟೈಲಾಗಿ ಮುಂದಿನ ಸೀಟಲ್ಲಿ ಕೂರುತ್ತಿದ್ದಳು. ಆ ಸಮಯದಲ್ಲೇನಾದರೂ ನಾಗಕ್ಕ ಹೊರಬಂದರೆ “ಎಂತಾ ತಿಂಡಿ ಮಾಡಿದ್ರಿ ಅಕ್ಕಾ, ನೀವೆಂತಕ್ಕೆ ದಿನಾ ದೋಸೆ ತಿಂತ್ರಿ? ಉದ್ದಿಗೆ ಮೈ ಬರ್ತದಂತೆ, ರೊಟ್ಟಿ-ಚಪಾತಿ ಮಾಡ್ರಿ, ಸಂಜೆ ಮುಂದೆ ವಾಕಿಂಗು ಹೋಗ್ರಿ ಅಕ್ಕಾ ಮೈ ಇಳಿತದೆ” ಎಂದು ಸಲಹೆ ಕೊಡುತ್ತಿದ್ದಳು. ತೌರುಮನೆಯ ಏಕಮೇವಾದ್ವಿತೀಯ ಕುಲದೀಪಕಿಯಾದ ನಾಗಲಕ್ಷ್ಮಿಗೆ ತನ್ನನ್ನು ಯಾರಾದರೂ ಯಾವುದಾದರೂ ವಿಷಯದಲ್ಲಿ ಮೀರಿಸುತ್ತಾರೆಂದರೆ, ಅಥವಾ ಕಡಿಮೆಯಾಗಿ ಕಾಣುತ್ತಾರೆಂದರೆ ಅದು ಸಹಿಸಿಕೊಳ್ಳುವುದು ಈ ಜನ್ಮದಲ್ಲೇ ಸಾಧ್ಯವಿಲ್ಲದ ಸಂಗತಿ. ಹೀಗೊಂದು ಚೋಟುದ್ದದ ಹುಡುಗಿ ಅದೂ ತನ್ನ ಗಂಡನಿಂದಲೇ ಸಂಬಳ ತೆಗೆದುಕೊಳ್ಳುವ, ಹಾಗೆ ಪಡೆದು ದುಡ್ಡಲ್ಲೇ ಮನೆ ನಡೆಸುವಷ್ಟು ಅನಿವಾರ್ಯತೆ ಇರುವ ಕಾಸಾಬದ್ರ ಅಂತಲೇ ತಾನು ಪರಿಗಣಿಸುವ ಪೋರಿ ತನ್ನನ್ನು ಹೇಗೋ ನೋಡುವ ವಿಚಾರವನ್ನು ಆಕೆ ಬಹಳ ಗಂಭೀರವಾಗಿಯೇ ತೆಗೆದುಕೊಂಡಳು. ಗಂಡನೊಡನೆ ಜಗಳ ಶುರು ಮಾಡಿದಳು. ತನಗೆ ನೆನಪು ಮಾಡಿಕೊಡಲಿಕ್ಕೆ ಆ ಹುಡುಗಿಯಿಂದ ಬಹಳ ಸಹಾಯವಿದೆಯೆಂದು ಪದುಮಣ್ಣ ತಿಳಿಸಿ ಹೇಳಲು ಹೋದ. “ಹೌದಪ್ಪ ಹೌದು, ನನಗೆ ಅವಮಾನ ಆದರೆ ನಿಮಗೆ ಒಳಗೊಳಗೇ ಖುಷಿಯಾಗುವುದಕ್ಕಾಗಿಯೇ ನೀವು ಆ ಕಿಸಬಾಕಿ ಪೋರಿಯನ್ನು ತಲೆ ಮೇಲೆ ಕೂಡಿಸಿಕೊಂಡೀರಿ” ಅಂತ ಕೈಲಿದ್ದ ಚಾ ಪಾತ್ರೆಯನ್ನು ರೊಯ್ಯನೆ ಅಂಗಳಕ್ಕೆ ಎಸೆದಳು. ಹೀಗೆ, ಆಗಾಗ ಬೇರೆ ಬೇರೆ ಪಾತ್ರೆ ಪರಡಿಗಳು ಅವಳ ಸಿಟ್ಟಿನ ಆವೇಶದಿಂದ ಅಂಗಳ ಸೇರುತ್ತಿದ್ದವು. ಆದ್ದರಿಂದಲೇ ಪದುಮಣ್ಣ ದಿನಾ ನಸುಕಿಗೆ ಎದ್ದು ಅಂಗಳ ಗುಡಿಸುವ ನೆಪದಲ್ಲಿ ಹಿಂದಿನ ದಿನ ಅವಳು ಹೊರಗೆ ಎಸೆದಿರಬಹುದಾದ ಸೌಟು, ಪಾತ್ರೆ, ತಾಟು, ಲೋಟಗಳನ್ನು ಹುಡುಕಿ ಒಳಗೆ ತಂದು ಮುಸುರೆ ಪಾತ್ರೆ ಜೊತೆ ಇಟ್ಟುಬಿಡುತ್ತಿದ್ದ. ಅವಳಿಗೆ ಕಾಣುವಂತೆ ಒಳತರುವಂತಿರಲಿಲ್ಲ. “ನಿಮಗೆ ಜೀವಂತ ಹೆಂಡತಿಗಿಂತ ಪಾತ್ರೆಯೇ ಹೆಚ್ಚಾಯ್ತು ನೋಡಿ, ಜೀಂವ ಇಲ್ದೆದ್ದಿದ್ದಕ್ಕೂ ಎಷ್ಟು ವಗಾತಿ ಮಾಡ್ತಿç, ಈ ಮನೆಲಿ ನಂಗೊಂದ್ ಕಿಮ್ಮತ್ತಿಲ್ಲ” ಎಂದು ಕೂಗುತ್ತಿದ್ದಳು. ಅಕ್ಕಪಕ್ಕದ ಮನೆಯವರು “ವೀರಭದ್ರನ ವೇಷ ಮಾಡೋನ ಮಗಳಲ್ದ, ಅದಕೇ ಅಷ್ಟು ಸಿಟ್ಟು ಬರ್ತದೆ, ಎಲ್ಲಾ ಸ್ಟೀಲು ಪಾತ್ರವೂ ಅಂಗಳಕ್ಕೆ ಬಂದು ಬೀಳೂದೇಯ. ಪದುಮಣ್ಣನ ಮನಿಗೋದ್ರೆ ಉಂಬುಕೊಂದು ನೆಟ್ಟಗಿನ ತಾಟು ಸಿಗೂದು ಸುಳ್ಳು. ಎಲ್ಲದೂ ನೆಗ್ಗು ಬಿದ್ದು ಸೊಟ್ಟಗಾಗಿರೂದು.” ಎಂದು ಮಾತಾಡಿಕೊಂಡು ನಗುತ್ತಿದ್ದರು. ಇತ್ತೀಚೆಗೆ ಪದುಮಣ್ಣ ಯಾವ ಊರಿಗೆ ಹೋದರೂ ಅಲ್ಲಿನ ಪೇಟೆ ಬೀದಿಯಲ್ಲಿ ಹೋಗುವಾಗ ಸ್ಟೀಲ್ ಪಾತ್ರೆಯಂಗಡಿ ಕಣ್ಣಿಗೆ ಬಿದ್ದದ್ದೇ ಥಟ್ಟನೆ ನಿಂತುಬಿಡುತ್ತಿದ್ದ. ಸೀದಾ ಒಳ ಹೋದವನೇ ಚಾ ಕುದಿಸುವ, ಸಾರು ಮಾಡುವ ಬೋಗಣಿಗಳನ್ನು. ಊಟದ ತಾಟುಗಳನ್ನು, ಗುಂಡಿ ಸೌಟುಗಳನ್ನು ಖರೀದಿಸುತ್ತಿದ್ದ. ಹೀಗೆ ಪದೇಪದೇ ಬರುವ, ಮತ್ತದೇ ಅದೇ ಪಾತ್ರೆಗಳನ್ನು ಖರೀದಿಸುವ ಗಿರಾಕಿಯನ್ನು ಕಂಡು ಅಂಗಡಿಯವರಿಗೆ ಗಲಿಬಿಲಿಯುಂಟಾದರೂ ವ್ಯಾಪಾರವಾಗುತ್ತದೆಯಂತ ಖುಷಿ ಪಡುತ್ತಿದ್ದರು. ಪದುಮಣ್ಣನದು ಮಾತ್ರ ಒಂದೇ ಒಂದು ಉಗ್ರವಾದ, ರಾಜಿಯಾಗದ ಕಂಡೀಶನ್ ಎಂದರೆ ಯಾವುದೇ ಪಾತ್ರೆಯಾದರೂ ನೀಲಕಮಲ್ ಕಂಪನಿಯದ್ದಿರಬೇಕಿತ್ತು. ಏಕೆಂದರೆ ಅದು ಸ್ವಲ್ಪ ದಪ್ಪವಾದ ಸ್ಟೀಲ್ ಆಗಿದ್ದು, ಅಷ್ಟು ಬೇಗ ನೆಗ್ಗುತ್ತಿರಲಿಲ್ಲ. ಅಂದರೆ ನಾಗಲಕ್ಷ್ಮಿ ಎರಡು ಮೂರು ಸಾರಿ ಎಸೆದ ಮೇಲೆ ವಿರೂಪಗೊಳ್ಳುತ್ತಿತ್ತು. ಕೊಳ್ಳುವಾಗ ಉಳಿದ ಜನರೆಲ್ಲ ಹಾಲು ಹಿಡಿಸ್ತದೇನ್ರೀ ಅನ್ನುವ ಮಾದರಿಯ ಪ್ರಶ್ನೆಗಳನ್ನು ಕೇಳಿದರೆ ಪದುಮಣ್ಣ ಬಿದ್ದರೆ ನೆಗ್ಗತದಾ? ಸೀಳ್ತದಾ? ಎಂಬಂತಹ ಪ್ರಶ್ನೆ ಕೇಳಿ ಅಂಗಡಿಯವರನ್ನು ಗೊಂದಲಕ್ಕೆ ತಳ್ಳುತ್ತಿದ್ದ. “ರಾಘವೇಂದ್ರ ಪಾತ್ರ ಭಂಡಾರ” ಅಂಗಡಿಯ ವಾಸುದೇವನಂತೂ ಶುಕ್ರವಾರ ಅಂಗಡಿ ತೆಗೆದ ಕೂಡಲೇ ಸಹಾಯಕ ಹುಡುಗನಿಗೆ “ಇವತ್ತು ಆ ನೀಲಕಮಲ ಗಿರಾಕಿ ಬರೂ ದಿನ ಅಲ್ಲೇನೋ, ಎರಡು ಕೌಳಗೆ, ನಾಕು ಲೋಟ, ಮೂರು ಸೌಟು ತೆಗೆದಿಟ್ಟು ಬಿಡೋ, ಕಡೆಗೆ ರಶ್ಶು ಇದ್ದಾಗ ಬಂದರೆ ಗಡಿಬಿಡಿ ಆಗೂದು ಬ್ಯಾಡಾ” ಅನ್ನುತ್ತಿದ್ದ. ಪದುಮಣ್ಣನದೇ ಊರಿನ ಕೇಶವನಿಗಂತೂ ಕಾರಣವೂ ಗೊತ್ತಿರುವುದರಿಂದ ಅವನು ಪಾತ್ರೆ ತೋರಿಸುವಾಗಲೇ ಜೋರಾಗಿ ಎಸೆದು “ನೋಡಿ ಬಿದ್ದರೂ ಏನೂ ಆಗೂದಿಲ್ಲಾ, ಸ್ಟೀಲಿನ ಗೇಜು ಚೊಲೊ ಉಂಟ್ರಿ, ನಾಕೈದು ಸಲಕ್ಕೆ ತಡ್ತ ರ‍್ತದೆ, ನಾ ಗ್ಯಾರಂಟಿ ಕೊಡ್ತೆ” ಎಂದು ಹೇಳುವಾಗ ಉಳಿದ ಗಿರಾಕಿಗಳು ಅರ್ಥವೇ ಆಗದೇ ಮಿಕಿಮಿಕಿ ನೋಡುತ್ತಿದ್ದರು. ಇದೆಂತ ಮರ‍್ರೆ, ಇವ್ರು ಚೆಂಡು-ಗುಂಪಿನ ಡು ತಕಳು ನಮೂನಿ ಮಾತಾಡ್ತಾರೆ, ಪಾತ್ರೆ ಊಟ ಮಾಡೂಕಾ, ಆಟ ಆಡೂಕಾ ಅಂತ ಗೊಂದಲಕ್ಕೆ ಬೀಳುತ್ತಿದ್ದರು.

ಗಂಡನ ಹಾಗೂ ವಲ್ಲರಿಯ ಮೇಲೆ ಸಿಟ್ಟೇರಿ ಕುದಿಯುತ್ತಿದ್ದ ನಾಗಕ್ಕ ಧುಮುಧುಮು ಅಂತ ಪಕ್ಕದ ಬೀದಿಗೆ ಬಂದಳು. ಆ ದಿವಸ ಪಕ್ಕದ ಊರಲ್ಲಿ ಅವಳ ಅಪ್ಪ ಗಪ್ಪತಿಗೆ ಸನ್ಮಾನ ಇಟ್ಟುಕೊಂಡಿದ್ದರು. ವಯಸ್ಸಾಯಿತು ಅಂತ ಅಂವ ಮ್ಯಾಳ ಬಿಟ್ಟಿದ್ದ. ಹಾಗಾಗಿ ಅವನಿಗೊಂದು ಸನ್ಮಾನ ಮಾಡಿ ಅವನಿಂದ ಕಡೆಯ ಬಾರಿಗೆ ವೀರಭದ್ರನ ವೇಷ ಮಾಡಿಸುವುದು ಅಂತ ನಿಕ್ಕಿ ಆಗಿತ್ತು. ಭರ್ಜರಿ ಪ್ರಚಾರ ನಡೆದು ಹ್ಯಾಂಡಬಿಲ್ಲು ಹಂಚಲಾಗಿತ್ತು. ಅಪ್ಪನ ಕಾರ್ಯಕ್ರಮಕ್ಕೆ ತಾವಿಬ್ಬರು ಹೋಗುವುದೇಯಾ ಅದಕ್ಕಾಗಿ ಬೇಗ ಬರಬೇಕು ಅಂತ ನಾಗಕ್ಕ ವಾರದಿಂದ ಗಂಡನಿಗೆ ತಾಕೀತು ಮಾಡಿದ್ದಳು. ಆಯ್ತು ಬರ್ತೇನೆ, ಹೋಗ್ವಾ, ಅಂದಿದ್ದ ಪದುಮಣ್ಣ ಯಥಾಪ್ರಕಾರ ಮರೆತಿದ್ದ. ವಿಷಯ ಪಲ್ಲವಿಗೆ ಗೊತ್ತಿದ್ದರೆ ನೆನಪಿಸುತ್ತಿದ್ದಳೋ ಏನೋ ಆದರೆ ತನ್ನ ಖಾಸಗಿ ವಿಷಯವನ್ನು ಆಕೆಗೆ ಸುತಾರಾಂ ಹೇಳಬಾರದೆಂಬುದು ನಾಗಕ್ಕನ ಆಜ್ಞೆಯಾಗಿತ್ತು. ಇನ್ನೂ ಬರದೇ ಇದ್ದ ಗಂಡನನ್ನು ತರಾಟೆಗೆ ತೆಗೆದುಕೊಳ್ಳಲಿಕ್ಕೆ ಧಾವಿಸಿದ ನಾಗಕ್ಕ ಆಫೀಸು ಇದ್ದ ಕಟ್ಟಡದ ಬುಡಕ್ಕೆ ಬಂದು ನಿಂತಳು. ಅದೊಂದು ಹೆಂಚಿನ ಚಾಳದ ಕಟ್ಟಡ. ಕೆಳಗೆ ಕೆಲವು ಅಂಗಡಿಗಳಿಗೆ ಹಾಗೂ ಮೇಲೆ ಎರಡು ಆಫೀಸುಗಳಿಗೆ ಬಾಡಿಗೆ ಕೊಟ್ಟಿದ್ದರು. ಮೇಲೆ ಹತ್ತಿ ಹೋಗಲಿಕ್ಕೆ ಎಡಬದಿಗೆ ಕಟ್ಟಿಗೆಯ ಏಣಿ ಮೆಟ್ಟಿಲು. ಹಿಡಿದುಕೊಳ್ಳಲಿಕ್ಕೆ ಮೇಲಿಂದ ಜೋತು ಬಿದ್ದ ಬಾವಿಹಗ್ಗ. ನಾಗಕ್ಕ ದಪದಪ ಮೆಟ್ಟಿಲು ಹತ್ತುವಾಗ ವಲ್ಲರಿಯ ಜೋರು ಜೋರು ಧ್ವನಿ ಕಿವಿಗೆ ಬೀಳುತ್ತಿತ್ತು. ಏನೋ ಮಾತಿಗೆ ಎಲ್ಲರೂ ಜೋರಾಗಿ ನಗತೊಡಗಿದ್ದರು. ಅಟ್ಟಹಾಸ ಮಾಡ್ತಾಳೆ ಈ ಕೊಮ್ಮಣಗಿತ್ತಿ ಇವಳ ಕುತ್ತಿಗೆ ಅಡಚಿ ಹಾಕ್ತೆ ಎಂದು ಕರಕರ ಹಲ್ಲು ಮಸೆಯುತ್ತ ಹತ್ತಿ ಮುಗಿದ ನಂತರದ ಪ್ಯಾಸೇಜಿಗೆ ಕಾಲಿಟ್ಟಳು. ಪಾದದ ಬುಡಕ್ಕೆ ವಲ್ಲರಿಯ ಚಪ್ಪಲಿ ಎಡವಿತು. ಉಕ್ಕಿ ಬಂದ ರೋಷಕ್ಕೆ ಜೋರಾಗಿ ಒದೆಯಲು ಹೋದಳು. ಸೊಂಯಕ್ಕನೆ ಕಾಲು ಜಾರಿ ಶರೀರದ ಜೋಲಿ ತಪ್ಪಿತು. ದಡದಡ ಉರುಳಿದ ಅವಳ ಸ್ಥೂಲಕಾಯ ಜೋರಾಗಿ ಸದ್ದು ಮಾಡಿತು. ಪದುಮಣ್ಣ, ವಲ್ಲರಿಯ ಜೊತೆಗೆ ಇಬ್ಬರು ಕಕ್ಷಿದಾರರೂ ಓಡೋಡಿ ಬಂದರು. ಎಲ್ಲರೂ ಸೇರಿ ಕಾರಲ್ಲಿ ಮಲಗಿಸಿ ಆಸ್ಪತ್ರೆಗೆ ಕರೆದೊಯ್ದರು. ದಾರಿಯುದ್ದಕ್ಕೂ ಪದುಮಣ್ಣ “ನಾಗೂ ಎಂತಾಯ್ತೆ ಮಾರಾಯ್ತಿ, ನೀ ಅಲ್ಲಿ ಯಂತಕ್ಕೆ ಬಂದಿದ್ಯೆ? ಎಂದು ಬಡಬಡಿಸುತ್ತಿದ್ದ.  ನಾಗಕ್ಕನನ್ನು ಪರೀಕ್ಷಿಸಿದ ಡಾಕ್ಟರು ಬಿ.ಪಿ. ಶುಗರ್ ಎರಡೂ ಹೆಚ್ಚಾಗಿದೆ, ತಾತ್ಕಾಲಿಕವಾಗಿ ಮಾತಾಡಲು ತೊಂದರೆಯುಂಟಾಗಿದೆ, ತಾಳ್ಮೆಯಿಂದ ಚಿಕಿತ್ಸೆ ಮಾಡಿಸಿಕೊಳ್ಳಬೇಕು, ಆರಾಮಾಗುತ್ತದೆ ಎಂದರು. ಗಾಭರಿಯಾಗಿದ್ದ ಪದುಮಣ್ಣ ವಾರ್ಡಿನಿಂದ ಹೊರಬಂದು ಕುಸು ಕುಸು ಅಳತೊಡಗಿದ. ಜೊತೆಗೆ ಬಂದಿದ್ದ ಕಕ್ಷಿದಾರರ ಪೈಕಿ ಮೊದಲಿಂದಲೂ ವಹಿವಾಟಿದ್ದ ಅನಂತ ಹೆಗಲು ತಬ್ಬಿ ಸಂತೈಸಿದ. “ಅಲ್ದಾ, ಪದುಮಣ್ಣ ಇದಕ್ಕೆಲ್ಲ ಹೆದರ್ತವನ. ಈಗಿನ ಕಾಲದಲ್ಲಿ ಬೇಕಷ್ಟು ನಮನಿ ಔಷಧ ಸಿಗ್ತಪ. ಯಾರ ಮನೆಲಿ ಜಗಳ ಇರ್ತಿಲ್ಯ, ನಮ್ಮ ಯಕ್ಷಗಾನದಲ್ಲಿ ಎರಡೇ ನಮನಿ ಪ್ರಸಂಗ ಇರ್ತು. ಕಾಳಗ ಅಥವಾ ಕಲ್ಯಾಣ. ಕಾಳಗ ಆದ ಮೇಲೆ ಕಲ್ಯಾಣ ಆಗ್ತು ಅಥವಾ ಕಲ್ಯಾಣ ಆದಮೇಲೆ ಕಾಳಗ ಆಗ್ತು.” ಅವನ ಮಾತು ಮುಗಿಯುವ ಮೊದಲೇ ಅವನ ಜೊತೆ ಬಂದಿದ್ದ ನಾಗೇಶ ಗಬಕ್ಕನೆ ಪದುಮಣ್ಣನ ಕೈ ಹಿಡಿದುಕೊಂಡ. “ವಕೀಲ್ರೆ ನಿಮಗೊಂದು ವಿಷಯ ಹೇಳ್ತೆ ಕೇಳಿ, ನಿಮ್ಮ ಹೆಂಡ್ತಿಯೊಳಗೊಬ್ಬ ಅದ್ಭುತ ನಟಿ ಇದಾಳೆ, ಆವಾಗ್ನಿಂದನೂ ನೋಡ್ತಾನೆ ಇದೇನೆ, ಅವರ ರೋಷ-ಆವೇಶ ಆಹಾ ಅದ್ಭುತರೀ, ನಂದೊಂದು ಸ್ತ್ರೀಯರ ಯಕ್ಷಗಾನ ಮೇಳ ಉಂಟು. ಎಂಟು ಕಲಾವಿದೆಯರಿದಾರೆ, ದೇಶ-ವಿದೇಶದಲ್ಲೆಲ್ಲ ಪ್ರದರ್ಶನ ಕೊಡ್ತೇವೆ, ಆದರೆ ನಾವು ಮಾಡೂದೆಲ್ಲ ಸೌಮ್ಯ ಕತೆಯಿರೂ ಪ್ರಸಂಗ. ಯಾಕಂದ್ರೆ ನಮ್ಮಲ್ಲಿ ರೌದ್ರ ರಸ ಧಾರಸಕಳೂ ತಾಕತ್ತು ಯಾರಿಗೂ ಇಲ್ಲಾಗಿತ್ತು. ಬಣ್ಣದ ವೇಷ ಮಾಡೂ ಹೆಂಗಸರು ಸಿಗೂದು ಅಪರೂಪ, ನಂಗದೇ ಕೊರಗಾಗಿತ್ತು ರ‍್ರೇ, ಇವತ್ತು ನಿಮ್ಮ ಹೆಂಡ್ತಿ ನೋಡಿ ಭಾರೀ ಖುಷಿಯಾಯ್ತು ಅಣ್ಣಾ, ನಿಮಗೆ ಸಂಭಾವನೆ ಕೇಳದಷ್ಟು ಕೊಡ್ತೆನ್ರೀ, ದಯವಿಟ್ಟು ಇಲ್ಲಾ ಅನ್ಬೇಡಿ, ನಿಮ್ಮ ಹೆಂಡ್ತೀನ ನಮ್ಮ ಮ್ಯಾಳಕ್ಕೆ ಕಳಸಕೊಡ್ಲೇ ಬೇಕ್ರಿ, ಅವರು ಬಂದರೆ ನಾವು ದಕ್ಷಯಜ್ಞ, ಭಸ್ಮಾಸುರ ಮೋಹಿನಿ ಹಿಂಗಿದ್ದೆಲ್ಲ ಪ್ರಸಂಗ ತಕಳಬಹುದ್ರಿ, ಚಪ್ಪೆ ಪ್ರಸಂಗ ಮಾಡಿ ಮಾಡಿ ನಂಗಂತೂ ರಾಶಿ ಬ್ಯಾಜಾರಾಗಿತ್ರಿ, ನಿಮ್ಮ ಕಾಲಿಗೆ ಬೀಳ್ತೆ ಮರ‍್ರೆ, ದಯವಿಟ್ಟು ಒಪ್ಗಳ್ರಿ” ಅಷ್ಟರಲ್ಲಿ ನಾಗಲಕ್ಷ್ಮಿ ಕೋಣೆಯಿಂದ ಡಣ್ ಡಣ್ ಅಂತ ಪಾತ್ರೆ ಎಸೆದ ಜೋರಾದ ಶಬ್ದ ಕೇಳಿತು.

ದೊಡ್ಡ ಗಂಟಲಿನಲ್ಲಿ ಬೈದು, ಆವೇಶದಿಂದ ಕೂಗುವುದೇ ತನ್ನ ಪ್ರಬಲ ಅಸ್ತ್ರವಾಗಿತ್ತು . ಹೀಗೆ ಮಾತು ಹೊರಬರದೇ, ತಾನು ಮಲಗಿದಲ್ಲೇ ಮಲಗಿದರೆ ಪದುಮಣ್ಣ-ವಲ್ಲರಿಯರನ್ನು ಹಿಡಿಯುವವರೇ ಇಲ್ಲೆಂಬ ಆಲೋಚನೆ ಬಂದಿದ್ದೇ ನಾಗಲಕ್ಷ್ಮಿಯ ಜೀವಕ್ಕೆ ಭುಗಿಲ್ಲನೆ ಬೆಂಕಿ ಇಟ್ಟಂತಾಯಿತು. ಚಾಚಿದ ಬಲಗೈಗೆ ನೀರಿನ ಚೊಂಬು ಸಿಕ್ಕಿದ್ದೇ ತಡ ಬೀಸಿ ಎಸೆದಳು. ಜಗ್ಗಿನಿಂದ ಸುರಿದ ನೀರು ಕಾಲುವೆಯಂತೆ ಹರಿಯುತ್ತಿತ್ತು. ಗಾಭರಿಯಿಂದ ಓಡಿ ಬಂದ ಡಾಕ್ಟರ್ ನೀರಲ್ಲಿ ಜಾರಿದವರೇ ದಢಾರನೆ ಬಿದ್ದರು. ಟಣ್ ಟಣ್ ಸದ್ದು ಮಾಡುತ್ತ ಚೊಂಬು ಮಹಡಿ ಮೆಟ್ಟಿಲುಗಳನ್ನು ಒಂದೊಂದಾಗಿ ಇಳಿಯುತ್ತ, ಪ್ರತಿ ಮೆಟ್ಟಿಲಿಗೊಮ್ಮೆ ಟಣ್ ಎಂದು ತಲೆ ಗುದ್ದಿಕೊಳ್ಳುತ್ತ ಉರುಳುತ್ತಲೇ ಇತ್ತು. ಅನಂತ ಮತ್ತು ನಾಗೇಶ ಡಾಕ್ಟ್ರನ್ನು ಎಬ್ಬಿಸಿ ಹಿಡಿದುಕೊಂಡರೆ ಪದುಮಣ್ಣ ಮಾತ್ರ ಸ್ಟೀಲು ಚೊಂಬನ್ನು ಎತ್ತಿಕೊಂಡು ಕೈಲಿ ಹಿಡಿದು ಪರೀಕ್ಷಿಸುತ್ತ “ಒಹೋ ಇದು ನೀಲಕಮಲ್ ಅಲ್ಲ, ಅದಕ್ಕೆ ಇಷ್ಟು ನೆಗ್ಗಿ ಹೋಯ್ತು, ಡಾಕ್ಟೆç ನೀವು ನೆನಪಿಟ್ಕೊಂಡು ನೀಲಕಮಲ್ ಪಾತ್ರೆ ತಗೊಳ್ರಿ, ಚೊಲೊ ಬಾಳಿಕೆ ರ‍್ತದೆ” ಎಂದ. ಬಿದ್ದ ನೋವನ್ನೂ ಮರೆಯುವಷ್ಟು ಬೆರಗು ತುಂಬಿಕೊAಡ ಡಾಕ್ಟರ್ ಪೆದ್ದುಪೆದ್ದಾಗಿ ಪದುಮಣ್ಣನನ್ನು ನೋಡುತ್ತ ನಿಂತುಕೊಂಡರು.

***************

3 thoughts on “ಬಣ್ಣದ ವೇಷ

  1. Odutta Odutta bere lokakke tagedukondu hogtade. Tumba alavagi vichara madisoke hachatade. Anwarthaka namada kathe.

  2. ಕತೆ ಚನ್ನಾಗಿದೆ .ಹಾಸ್ಯಮಯವಾಗಿದ್ದರೂ ಗಂಭೀರ ಚಿಂತನೆಗೆ ಹಚ್ಚುವದು ಸುಳ್ಳಲ್ಲ

Leave a Reply

Back To Top