ಹೇಳದೇ ಹೋಗದಿರು

ಗಝಲ್

ಶ್ರೀದೇವಿ ಕೆರೆಮನೆ

ಅದೆಷ್ಟೊ ಶತಮಾನಗಳಿಂದ ಕಾದಿರುವೆ ಹೇಳದೇ ಹೋಗದಿರು
ನೀ ಬರುವ ಹಾದಿಗೆ ಕಣ್ಣು ಕೀಲಿಸಿರುವೆ ಹೇಳದೇ ಹೋಗದಿರು

ಬರಿದೆ ಮತ್ತೇರದಿರು ಸುರೆಗೆಲ್ಲಿದೆ ನಿನ್ನ ಮರೆಸುವ ತಾಕತ್ತು
ದೇಹದ ಬಟ್ಟಲಿಗೆ ಮದಿರೆ ತುಂಬಿಸಿರುವೆ ಹೇಳದೇ ಹೋಗದಿರು

ಹಗಲಿರುಳೂ ಮತ್ತೇನೂ ಇಲ್ಲ ನಿನ್ನದೇ ಧ್ಯಾನ‌ದ ಹೊರತಾಗಿ
ತಲಬಾಗಿಲ ಮೆಟ್ಟಿಲಲಿ ಕಾದು ಕುಳಿತಿರುವೆ ಹೇಳದೇ ಹೋಗದಿರು

ಜೋಡಿಮಂಚದ ಬದಿಯಲ್ಲಿ ಹಚ್ಚಿಟ್ಟ ದೀಪದ ಎಣ್ಣೆ ತೀರಿದೆ
ದೇವರ ಗೂಡಿಂದ ಹಣತೆಯೊಂದ ತರುವೆ ಹೇಳದೇ ಹೋಗದಿರು

ವಿರಹ ತುಂಬಿದ ರಾತ್ರಿ ನಿದ್ದೆಯಿರದೆ ಬಲು ದೀರ್ಘವಾಗುವುದಂತೆ
ಜೋಗುಳ ಹಾಡಿ ಮಡಿಲೊಳಗೆ ಮಲಗಿಸುವೆ ಹೇಳದೆ ಹೋಗದಿರು

ಕಾಸಿದ ತುಪ್ಪವಿದೆ ಜೊತೆಗೆ ನಾನೆ ಮಾಡಿದ ಘಮಗುಡುವ ಹೋಳಿಗೆ
ಮಧುರಾತ್ರಿಗೂ ಮುನ್ನ ಮೃಷ್ಟಾನ್ನ ಸಿದ್ಧಪಡಿಸುವೆ ಹೇಳದೇ ಹೋಗದಿರು

ಕಣ್ಣು, ಕಿವಿ ಮೂಗು ನಾಲಿಗೆಗಳೆಲ್ಲವೂ ತಮ್ಮ ಕೆಲಸ ಮರೆತಿವೆ
ಮುತ್ತಿನಲ್ಲೆ ಅಮರಾವತಿಯ ಧರೆಗಿಳಿಸುವೆ ಹೇಳದೇ ಹೋಗದಿರು

ಸಿರಿ, ನಿನ್ನ ಪಾಲಿನ ಕಟ್ಟಿಗೆಯನ್ನೆಸೆದು ಬಿಡು ಅಗ್ನಿಕುಂಡದಲಿ
ಚಿತೆಗೇರುವ ಮುನ್ನ ಕಣ್ತುಂಬಿಕೊಳ್ಳುವೆ ಹೇಳದೇ ಹೋಗದಿರು

************

22 thoughts on “ಹೇಳದೇ ಹೋಗದಿರು

  1. ಬಹಳ ಅರ್ಥಗರ್ಭಿತ ಗಜಲ್‌ಮೇಡಂ… ಬಹಳ‌ ಹಿಡಿಸಿತು

    1. ತುಂಬ ಆತ್ಮೀಯ ಗಝ಼ಲ್…. ಹೇಳಿ ಹೋಗು ಕಾರಣ…

  2. ಅದ್ಬುತವಾದ ಗಜಲ್..ಪ್ರೇಮ ವಿರಹ ತೊಟ್ಟಿಕ್ಕುತ್ತಿದೆ..

  3. ಪ್ರತಿ ಸಾಲು
    ಚಿಮ್ಮುತಿದೆ ಒಲವೊಲವು

    ಗಝಲ್ ಹಿಡಿಸಿತು‌

  4. ಅದ್ಭುತವಾದ ಗಝಲ್ ತುಂಬಿದ ಕೊಡದಂತೆ ಪರಿಪೂರ್ಣ ಈ ನಿಮ್ಮ ಗಝಲ್

  5. ಬಹು ದಿನಗಳ ನಂತರ ಒಂದು ಉತ್ಕೃಷ್ಟ ಕನ್ನಡ ಗಜಲ್ ಓದಿದಂತಾಯಿತು..ತುಂಬ ಚೆನ್ನಾಗಿದೆ..ಸೂಪರ್!!

  6. ಮುತ್ತಿನಲ್ಲಿ ಅಮರಾವತಿ…. ವಾವ್ ಸೂಪರ್… ಏನೋ ವಿಶೇಷ.. . ಆದರೆ ಜೋಡಿ ಮಂಚ ಯಾಕೆ ಗೊತ್ತಾಗಲಿಲ್ಲ.. ಒಂದೆ ಸಾಕಿತ್ತಲ್ವಾ ಸಿರಿಯಮ್ಮ

  7. ಸುಂದರವಾದ ಗಜಲ್… ಹೇಳಿ ಹೋಗಬಾರದೇ ನಲ್ಲ… ನೀ ಬರುವ ದಾರಿಯಲಿ ಹಣತೆ ಹಚ್ಚಿರಿಸಿ ಯುಗಾಂತದ ವರೆಗೂ ಕಾಯಬಹುದಾದ ಸಹನೆಯ ಈ ಗೆಳತಿಗೇಕೆ ಇಂಥ ಶಿಕ್ಷೆ?

  8. ಬಹಳ ಸೊಗಸಾದ ಭಾವ ತುಂಬಿದ ಸುಂದರ ಗಜಲ್ ಮೇಡಮ್

Leave a Reply

Back To Top