ಕಾಲ ಎಂದಿಗೂ ನಿಲ್ಲುವದಿಲ್ಲ

ಸ್ಮಿತಾ ಭಟ್

ಮಿಲಿಯನ್ ಗಟ್ಟಲೆ ವರ್ಷಗಳಿಂದ ಈ ಭೂಮಿಯ ಮೇಲೆ ಏನೆಲ್ಲ ಸಂಭವಿಸಿತೋ

ಇಂದಿನವರೆಗೂ ಯಾರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ಹೀಗಿತ್ತು,ಹಾಗಿತ್ತು,ಏನೋ ನಡೆದಿತ್ತು, ಎಂದು ಇತಿಹಾಸ ಪುಟಗಳಿಂದ ಅಷ್ಟೊ ಇಷ್ಟೊ ತಿಳಿಯುತ್ತೇವೆ,ಮತ್ತೊಂದಿಷ್ಟು ನಮ್ಮ ಊಹೆ.

ಕಾಲದ ಜೊತೆಗೆ ಎಲ್ಲವೂ ಉರುಳುತ್ತವೆ ಎನ್ನುವದು ನಿತ್ಯ ಸತ್ಯ.

ಸವೆದ ಹೆಜ್ಜೆಗಳ ಜಾಡು ಎಷ್ಟರ ಮಟ್ಟಿಗೆ ಇಂದು ಉಳಿದುಕೊಂಡಿದೆ.ಎಲ್ಲವೂ ಮಸುಕಾಗುತ್ತಲೇ ಹೋಗುತ್ತದೆ.

ಹೊಸ ನೀರಿಗೆ ಹಳೆಯ ನೀರು ಕೊಚ್ಚಿಹೋಗಿ ಸಮುದ್ರಸೇರಿ ಅಸ್ತಿತ್ವವನ್ನೇ ಕಳೆದುಕೊಂಡಂತೆ.

ಆಳಿದ ರಾಜ, ಕಟ್ಟಿದ ಕೋಟೆ,ಜಾರಿಯಾದ ನಿಯಮ,ತ್ಯಾಗದ ಬದುಕು,ಮಾಡಿದ ಯುದ್ಧ ಮಹಾ ಮಹಾ ರೋಗ,

ಪ್ರತಿಯೊಂದು ಅಂದರೆ ಪ್ರತೀಯೊಂದೂ

ಕಾಲ ತನ್ನ ಗರ್ಭದೊಳಗೆ ಎಲ್ಲವನ್ನೂ ಕರಗಿಸಿ ಬಿಡುತ್ತದೆ.ಮರೆಸಿ ಬಿಡುತ್ತದೆ.

ಕಾಲಕ್ಕೆ ಮಾತ್ರ ಆ ಶಕ್ತಿ ಇರುವದು.

ಇಷ್ಟೆಲ್ಲ ಗೊತ್ತಿದ್ದೂ ನಾವೇಕೆ ಪ್ರತೀ ಸಂದರ್ಭದಲ್ಲೂ ಭಯ ಬೀಳುತ್ತೇವೆಯೋ ಗೊತ್ತಿಲ್ಲ. ಇಂದು ಇದ್ದಂತೆ ನಾಳೆ ಇರಲಾರದು

ನಿತ್ಯವೂ ಬೆಳಗುವ ಸೂರ್ಯ ಹೊಸಭರವಸೆಯನ್ನಂತೂ ತರುತ್ತಾನೆ.

ಆದರೆ ಅದಕ್ಕೆ ತರೆದುಕೊಳ್ಳುವ ಮನಸ್ಥಿತಿಯಾಗಲಿ, ದಾರಿಯಾಗಲಿ ನಮಗೆ ಗೋಚರಿಸುವದೇ ಇಲ್ಲ.

ನಾಳೆ ನಮಗೇನಾಗುತ್ತದೋ,ನೌಕರಿ ಉಳಿಯುತ್ತದಾ? ಮನೆ ಖರೀದಿಸಲು ಆಗುತ್ತದಾ? ಏನೇನೋ ಕೆಲಸಗಳನ್ನು ಎತ್ತಿಟ್ಟುಕೊಂಡಿದ್ದೆ ಅದನ್ನೆಲ್ಲ ಮುಗಿಸುತ್ತೇನಾ?

ಅಕಸ್ಮಾತ್ ಸತ್ತೇ ಹೋದರೆ!?

ನಮ್ಮ ಆಲೋಚನೆಗಳು ಹೀಗೆ ಒಂದರ ಹಿಂದೊಂದು ಗಿರಕಿ ಹೊಡೆಯುತ್ತಲೇ ಹೋಗುತ್ತದೆ.

ಬೇಕು ಎಲ್ಲವೂ ಬದುಕಿರುವವರೆಗೆ ನಿಜ ಆದರೆ ಬದುಕುವದೇ ಆಸೆಗಳಿಗೆ ಅಂತಾಗಬಾರದು

ನಮ್ಮ ಸಮಯ ಯಾವ ಕ್ಷಣ ಬೇಕಾದರೂ ಮುಗಿಯಬಹುದು ಅದಕ್ಕೊಂದು ಸಿದ್ದತೆ ಸದಾ ಬೇಕು.

ಬದುಕು ನಶ್ವರ ಎಂದು ಎದ್ದು ಹೊರಟ ಬುದ್ದನನ್ನು ನಾವು ಪ್ರೀತಿಸುತ್ತೇವೆ, ಆದರೆ ಅವನ ತತ್ವಗಳನ್ನು ಮರೆಯುತ್ತೇವೆ.

ಜಗತ್ತಿಗೆ ಬರುವ ಅಪಾಯಗಳು ಇಂದು ನಿನ್ನೆಯದಲ್ಲ ಅಯಾಯಾ ಕಾಲಕ್ಕೆ ತಕ್ಕಂತೆ ಗಂಡಾಂತರಗಳು,ಅವಘಡಗಳು,

ಪ್ರಕೃತಿ ವಿಕೋಪಗಳು,ಸಾವು ನೋವುಗಳು ಸಂಭವಿಸುತ್ತಲೇ ಬಂದಿದೆ.

ಮತ್ತೆ ಹೊಸದಾಗಿ ರೂಪಗೊಂಡಿದೆ ಕೂಡಾ

ಒಮ್ಮೆ ಪ್ರಳಯ ಕಾಲ ಸನ್ನಿಹಿತ ವಾದಾಗ  ವೈವಸ್ವತ ಮನುವನ್ನು ಕುರಿತು ವಿಷ್ಣು ಹೇಳುತ್ತಾನೆ. ಸದ್ಯದಲ್ಲೇ ಮಹಾ ಪ್ರಳಯ ವೊಂದು ಸಂಭವಿಸಲಿದೆ ಒಂದು ದೊಡ್ಡ ಹಡಗನ್ನು ತೆಗೆದುಕೊಂಡು ಅದರಲ್ಲಿ ವೇದಗಳನ್ನೂ, ಕೆಲವು ಪ್ರಾಣಿಗಳನ್ನೂ,ಸಸ್ಯಗಳ ಬೀಜಗಳನ್ನೂ, ಶೇಖರಿಸಿಡು. ನೀನು ಮತ್ತು ನಿನ್ನ ಪತ್ನಿ ಅದರೊಳಗೆ ಜೀವಿಸಿ.  ಆ ಹಡಗಿನ ರಕ್ಷಣೆ ನನ್ನದು ಎನ್ನುತ್ತಾನೆ. ಒಂದು ದಿನ ಇಡೀ ಭೂಮಿಯೇ ನೀರಿನಿಂದ ತುಂಬಿ ಮಹಾಪ್ರಳಯವೊಂದು ಸಂಭವಿಸಿಯೇ ಬಿಡುತ್ತದೆ. ವಿಷ್ಣು ಮೀನಿನ ರೂಪದಲ್ಲಿ ಬಂದು ಹಡಗನ್ನು ತನ್ನ ಕೋರೆಹಲ್ಲಿಗೆ ಕಟ್ಟುವಂತೆ ಮನುವಿಗೆ ಹೇಳಿ ಪ್ರವಾಹಕ್ಕೆ ನುಚ್ಚು ನೂರಾಗುವಂತಿದ್ದ ಹಡಗಿಗೆ ರಕ್ಷಣೆ ಕೊಡುತ್ತಾನೆ.

 ವರ್ಷಗಳ ನಂತರ ಪ್ರವಾಹ ತಗ್ಗಿದ ಮೇಲೆ ಮತ್ತೆ ಸೃಷ್ಟಿಯ ಕಾರ್ಯ ನಿಧಾನವಾಗಿ ಆರಂಭವಾಗುತ್ತದೆ. ಅದೇ ಕೂಡಿಟ್ಟ ಬೀಜಗಳು ಮನುವಿನ ಸಂಸಾರ. ಅಲ್ಲಿಂದ ದ್ವಿಗುಣವಾಗುತ್ತ ದ್ವಿಗುಣವಾಗುತ್ತ  ಬಂದ ಪ್ರತೀ ಸೃಷ್ಟಿ ಬ್ರಹತ್ ಬ್ರಹ್ಮಾಂಡವೇ ಆಗಿ ನಿಲ್ಲುತ್ತದೆ.

ಸಂಪೂರ್ಣ ನಾಶ ಎನ್ನುವದು ಎಂದಿಗೂ ಅಗಿಲ್ಲ.

ಅತಿ ಆಯಿತು ಎಂದು ಅನ್ನಿಸಿದಾಗೆಲ್ಲ 

ಕಾಲಚಕ್ರದ ಸುಳಿಗೆ ಸಿಲುಕಿಸಿ ಮತ್ತೆ  ಗರ್ಭದೊಳಗೆ ಎಳೆದುಕೊಂಡೇ ಬಿಡುತ್ತದೆ ಭೂಮಿ.

ಇಂತಹದ್ದೊಂದು ಸಮತೋಲನದಿಂದಲೇ ಮಿಲಿಯನ್ ಗಟ್ಟಲೆ ವರ್ಷಗಳಿಂದಲೂ ಭೂಮಿ  ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡೇ ಬಂದಿದೆ.

ಸೃಷ್ಟಿ, ಸ್ಥಿತಿ, ಲಯ,ಗಳ ಜವಾಬ್ಧಾರಿ ಹೊತ್ತ ತ್ರಿಮೂರ್ತಿಗಳು ಒಬ್ಬರಿಗೊಬ್ಬರು ಪೂರಕವಾಗಿಯೇ ನಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಮೇಲೆ ನಮ್ಮ ಧರ್ಮ ನಿಂತಿದೆ. ಅದು ಸತ್ಯ ಕೂಡಾ ಆಗಿದೆ.

ಈಗ ಬಂದಿರುವ ಕರೋನಾ ಎಂಬ ಮಹಾಮಾರಿಯಂತ ರೋಗದಿಂದ ಜಗತ್ತೇ ನಾಶವಾಯಿತು,ಇನ್ನು ಮನುಷ್ಯ ಭೂಮಿಯ ಮೇಲ ಬದುಕುವದೇ ಅಸಾಧ್ಯ,ಹಾಗಾಯಿತು ಹೀಗಾಯಿತು ಜನರು ಖಾಲಿಯೇ ಆದರು ಎನ್ನುವಂತೆ ಭಯಬೀಳಿಸುವ ಟಿ,ವಿ ಚಾನಲ್ಗಳನ್ನು ಮೈಮೇಲೆ ಎಳೆದುಕೊಂಡು ನಾವೂ ದೆವ್ವ ಬಂದವರಂತೆ ಆಡುತ್ತಿದ್ದೇವೆ.

ಚಿಂತಾಜನಕರಾಗಿದ್ದೇವೆ.ಮಾನಸಿಕ ಅಸ್ವಸ್ಥರಾಗಿದ್ದೇವೆ.

 ಹಿಂದೊಮ್ಮೆ ನಾವೆಲ್ಲ ಪ್ರಳಯವೇ ಸಂಭವಿಸುತ್ತದೆ ಸಂಪೂರ್ಣ ಭೂಮಿಯೇ ನಾಶವಾಗುತ್ತದೆ ಎಂದು ಅದೆಷ್ಟು ಬೊಬ್ಬೆ ಹೊಡೆದು ಕೊಂಡಿಲ್ಲ ಹೇಳಿ.

ಅಯ್ಯೋ ಅಜ್ಜೀ ಇದೆಲ್ಲ ಯಾವಾಗ ಮುಗಿತದ್ಯೋ ಏನ್ ಕಥೆನೋ ಎಷ್ಟೊಂದು ಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲಾ ವಿಚಿತ್ರ ಆಗೋಯ್ತು ಜಗತ್ತೇ .ಅಂತ ಗೊಣಗುತ್ತಿದ್ದೆ.

 ಸುಮಾರು 85 ವರ್ಷದ ಅಜ್ಜಿ ಹೇಳುತ್ತಿದ್ದರು. ಅಯ್ಯೊ ಕೂಸೇ ನನ್ನ ಅಜ್ಜಿಯ ಕಾಲದಲ್ಲಿ ಇಂತಹದ್ದೇ ಒಂದು ಮಹಾ ಮಾರಿ ರೋಗ ಬಂದಿತ್ತಂತೆ. “ಗಾಂಡ್ ಗುಂದಿಗೆ” ರೋಗ ಅಂತಿದ್ರು ಅದಕ್ಕೆ.

ಊರಿಗೆ ಊರೇ ಖಾಲಿ ಅಗ್ತಿತ್ತು. ಸುಡೋಕು ಯಾರೂ ಇರ್ತಿರಲಿಲ್ಲ ಗೊತ್ತಾ!?

ಏನೂ ಔಷಧ ಇಲ್ಲದೇ ಇರೋ ಕಾಲ್ದಲ್ಲೇ ಅದನ್ನೇ ಗೆದ್ದು ಬಂದಿಲ್ವ ನಾವೆಲ್ಲ. ಮತ್ತೆ ಎಷ್ಟು ಬೆಳೆದಿದೆ ನೋಡು ಜನಸಾಗರ.ಸುಮ್ನೇ ಚಿಂತೆ ಮಾಡ್ತಾರೆ ಜನ.ಏನೂ ಆಗಲ್ಲ ಭಗವಂತಂಗೆ ಎಲ್ಲ ಗೊತ್ತಿರ್ತದೆ ಸುಮ್ಕಿರು ಅಂದ್ಬಿಟ್ಲು.

ಯಾವ ರೋಗದ ಕುರಿತು ಅಜ್ಜಿ ಮಾತಾಡಿದ್ಲು ಗೊತ್ತಿಲ್ಲ. ಅದ್ರೆ ಬಂದಿದ್ದು ಸತ್ಯ ಅದಕ್ಕೆ ಪುರಾವೆಗಳನ್ನೂ ಕೊಡುತ್ತಿದ್ರೆ ಮೈ ಜುಂ ಎಂದಿತು

ಆಗಲೇ ಅನ್ನಿಸಿದ್ದು

ಆಗಬಾರದ್ದು ಏನು ಆಗಿದೆ ಈಗ. ನಿಜ

ಜನರ ಸಾವು, ನೋವು, ಆಕ್ರಂದನ, ಮನಸನ್ನು ಘಾಸಿಗೊಳಿಸುತ್ತವೆ.

ಆದರೆ ಬದುಕಿರುವವರು ನಮ್ಮಿಂದ ಸಾದ್ಯವಾದಷ್ಟು ಮಾನವೀತೆಯಿಂದ, ವಿಧೇಯರಾಗಿ ಯೋಚಿಸಿದರೆ, ನಡೆದುಕೊಂಡರೆ ಸಾಕಲ್ಲವೇ ಇನ್ನೊಂದು ಜೀವ ತನ್ನಿಂದ ತಾನೇ ಉಸಿರಾಡುತ್ತದೆ.

ಸಾಯುವ ಪ್ರತೀ ಜೀವವನ್ನು ರಕ್ಷಿಸಲು ಯಾರಿಂದಲೂ ಸಾದ್ಯವಿಲ್ಲ ಸಾದ್ಯವಿದ್ದಷ್ಟು ಮಾಡ ಬಹುದಲ್ಲ.

ಆ ನಿಟ್ಟಿನಲ್ಲಿ ಸಾಕಷ್ಟು ಜನ ಡಾಕ್ಟರ್ ಗಳು ಪೋಲೀಸರು ದಾದಿಯರು ಕಾರ್ಮಿಕರು

ದಿನ,ರಾತ್ರಿ ಇಲ್ಲದೇ ದುಡಿಯುತ್ತಲೇ ಇದ್ದಾರೆ.

ಕೇವಲ ಅವರಷ್ಟೇ ದುಡಿದರೆ ತ್ಯಾಗ ಮಾಡಿದರೆ ಸಾಕೇ? ಪ್ರತಿಯೊಬ್ಬ ಮನುಷ್ಯನಿಗೂ ಅವನದೇ ಆದ ಕರ್ತವ್ಯಗಳಿದೆ ಅದನ್ನು ನಿಸ್ವಾರ್ಥತೆಯಿಂದ ಮಾಡಬೇಕಿದೆ.

“ಕರ್ಮಣ್ಯೇವಾ ದಿಕಾರಸ್ತೇ ಮಾ ಫಲೇಷು ಕದಾಚನ”

ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿದ್ದಾನೆ

ಫಲಾ ಫಲಗಳ ಅಪೇಕ್ಷೆ ಬೇಡಾ ಕೇವಲ ಕರ್ಮಗಳನ್ನು ಮಾಡು ಎಂದು

ಅವರವರ ಕರ್ಮಳಿಗನುಸಾರ ಬದುಕನ್ನು ಭಗವಂತ ಕರುಣಿಸಿಯೇ ಕರುಣಿಸುತ್ತಾನೆ

ಮತ್ತೇಕೆ ಭಯ.

ಆಡಂಬರವಿಲ್ಲದೇ ಜೀವಿಸುವುದ ಕಲಿಯಬೇಕಿದೆ.

ಮನುಕುಲಕ್ಕೊಂದು ಪಾಠ ಕಲಿಸಲೆಂದೇ ಈ ಕರೋನಾ ಬಂದಿದೆಯೇನೋ ಅನ್ನಿಸುತ್ತದೆ ಬಹಳ ಸಲ.

ಸುಮ್ಮನೇ ಭಯಬೀಳುವದರಲ್ಲಿ ಅರ್ಥವಿಲ್ಲ

ಒಂದಿಷ್ಟು ಜಾಗೃತೆಯಲ್ಲಿ ಜೀವಿಸಿದರೆ ಆಯಿತು.

ಮುಂದಿನದು ದೈವ ಚಿತ್ತ ಎನ್ನುವ ಮನೋ ಬಲ ತಂದುಕೊಳ್ಳಬೇಕು.

ಮನುಷ್ಯರಿಗಿಂತಲೂ ಅಬಲರಾದ, ಯಾವ ಪ್ರಾಣಿ, ಪಕ್ಷಿ ,ಮರಗಳು, ಯಾರಿಂದಲೂ ಏನನ್ನೂ ಬೇಡುವದಿಲ್ಲ, ತಮ್ಮ ತಮ್ಮ ಸ್ವಪ್ರಯತ್ನದಿಂಲೇ ಬದುಕುತ್ತವೆ.

“ಸರ್ವೆವೈಲ್ ಆಪ್ ದಿ ಫಿಟ್ಟೆಸ್ಟ್”ಎನ್ನುವ ಡಾರ್ವಿನ್  ಸಿದ್ದಾಂತ ಎಂದಿಗೂ ಸತ್ಯವೇ ಆಗಿದೆ.

ಹುಟ್ಟು ಸಾವುಗಳಿಂದ ಯಾರೂ ತಪ್ಪಿಸಿಕೊಳ್ಳಲಾರರು.

ಬಂದೊದಗಿದ ಭಯದಿಂದ ಹೊರಗೆ ಬನ್ನಿ

ವಿಷಾಲವಾಗಿ ಯೋಚಿಸಿ

ಹೊಸಬೆಳಕಿನ ಕಿರಣವೊಂದು ನಮಗಾಗಿ ಸ್ವಾಗತಿಸುತ್ತದೆ.

*************

Leave a Reply

Back To Top