ಕಬ್ಬಿಗರ ಅಬ್ಬಿ – ಸಂಚಿಕೆ – ೨

ಚೊಕ್ಕಾಡಿಯ ಹಾಡುಹಕ್ಕಿ

ಮಹಾದೇವ ಕಾನತ್ತಿಲ

ಎರಡು ದಶಕಗಳ ಹಿಂದೆ, ಹಿಮಾಲಯದ ತಪ್ಪಲಿನ, ರಾಣೀಖೇತ್ ಎಂಬ ಜಾಗದಲ್ಲಿ, ಚಾರಣ ಮಾಡುತ್ತಿದ್ದೆ.  ಬೆಟ್ಟ ಹತ್ತುತ್ತಾ, ಓರ್ವ ಬೆಟ್ಟದ ಜೀವಿ ಜತೆಯಾದ. ಆತನ ಮನೆ ಬೆಟ್ಟದ ತುದಿಯ ಹತ್ತಿರ. ಬರೇ ಕಾಲುದಾರಿ,ಸುತ್ತೀ ಬಳಸೀ, ಮರ ಹತ್ತುವ ಲತೆಯಂತೆ ಗುಡ್ಡ ಹತ್ತುತ್ತೆ. ಆಸ್ಪತ್ರೆಗೆ ಬೇಕಾದಲ್ಲಿ ಹತ್ತಾರು ಕಿಲೋಮೀಟರ್ ದೂರ. ಆತನ ಹತ್ತಿರ, ನಾನು ಕೇಳಿದೆ, ಅನಾರೋಗ್ಯವಾದಾಗ ಏನು ಮಾಡುತ್ತೀರಿ ಅಂತ. ಆತ ಅಂದ, “ಇಧರ್ ವನಸ್ಪತಿಯೋಂ ಕೀ ಹವಾ ಹೈ, ಹಮ್ ಹಮೇಷಾ ಸ್ವಸ್ತ್ ರೆಹ್ ತೇ ಹೈ” ಅಂತ. ( ಇಲ್ಲಿ ವನಸ್ಪತಿಗಳ ಗಾಳಿ ತುಂಬಿದೆ, ನಾವು ಯಾವಾಗಲೂ ಆರೋಗ್ಯದಿಂದಿರುತ್ತೇವೆ).

ಕನ್ನಡ ಕಾವ್ಯ ಸಂದರ್ಭದಲ್ಲಿ, ಚೊಕ್ಕಾಡಿಯವರ ಕಾವ್ಯ, ಹೀಗೆಯೇ ವನಸ್ಪತಿಯ ಗಾಳಿಯ ಹಾಗೆ, ಕಾವ್ಯಲೋಕದೊಳಗೆ ಪ್ರೀತಿ ತುಂಬಿ, ಕವಿಗಳನ್ನು, ಓದುಗರನ್ನು,  ದಷ್ಟಪುಷ್ಟವಾಗಿರಿಸಿ, ಕಾವ್ಯ ಪ್ರಜ್ಞೆಗೂ ಆರೋಗ್ಯ ತುಂಬಿದ ಸತ್ವವದು. ಗಿಡಮರಗಳು ನೆಲದ ಸಾರಹೀರಿ ಬೆಳೆಯುವಂತೆಯೇ, ಕಾವ್ಯವೂ ಕವಿ ಬೆಳೆದ ನೆಲದ ಅಷ್ಟೂ ರಸ ಹೀರಿ ಘಮಘಮಿಸುತ್ತದೆ. ಬೇಂದ್ರೆಯವರ ಕವಿತೆಯಲ್ಲಿ ಧಾರವಾಡ ಫೇಡಾದ ಸಿಹಿ, ರವೀಂದ್ರನಾಥ ಟಾಗೋರ್ ಅವರ ಕವಿತೆಯಲ್ಲಿ ಹೂಗ್ಲೀ ನದಿಯ ಮೆಕ್ಜಲು ಮಣ್ಣಿನ ತತ್ವ , ಹಾಗೇ ಚೊಕ್ಕಾಡಿಯವರ ಕವಿತೆಗಳಲ್ಲಿ ವನಸ್ಪತಿಯ ‘ಹವಾ’

ಈ ಚೊಕ್ಕಾಡಿ, ಪಶ್ಚಿಮ ಘಟ್ಟಗಳ ಮಡಿಲಿನ ಪುಟ್ಟ ಊರು. ಜಗತ್ತಿನ ಅತ್ಯಂತ ವೈವಿಧ್ಯಮಯ ಜೀವಜಾಲಗಳ ತವರು, ಪಶ್ಚಿಮ ಘಟ್ಟಗಳ ಸಾಲುಗಳು ಎಂದು ಪ್ರಕೃತಿ ಸಂಶೋಧನೆ ಹೇಳಿದೆ. ಇಲ್ಲಿ ವರ್ಷದ ನಾಲ್ಕು ತಿಂಗಳು ಸುರಿವ ವರ್ಷಧಾರೆಯಿಂದ, ವ್ಯೋಮಾನಂತಕ್ಕೆ  ಬಾಯಿತೆರೆದು ಬೆಳೆದ ಅಸಂಖ್ಯ ಸಸ್ಯ ಸಂಕುಲ, ಮಣ್ಣು, ಮತ್ತು ವಾತಾವರಣದ ಜೀವ-ತೇವಾಂಶದಲ್ಲಿ ವಂಶ ಚಿಗುರಿಸುವ ಬಗೆ ಬಗೆಯ ಪ್ರಾಣಿಗಳು,  ಬಯೋಡೈವರ್ಸಿಟಿಯ ಪ್ರತೀಕವಾಗಿದೆ. ಇದೆಲ್ಲವೂ ಚೊಕ್ಕಾಡಿಯ ನೆಲದ ಗುಣ ಹೇಗೆಯೋ, ಹಾಗೇ ಕಾವ್ಯದ ಘನವೂ ಹೌದು!. ಕವಿ,ಸುಬ್ರಾಯ ಚೊಕ್ಕಾಡಿಯವರ ಕಾವ್ಯದ ಪ್ರತಿಮೆಗಳು ಈ ವನಜನ್ಯ ಜೀವಜಾಲದ ಗರ್ಭಕೋಶದಲ್ಲಿ ಬಸಿರಾದವುಗಳು. ಅವರ ಪ್ರಕೃತಿ ಎಂಬ ಕವನದ ಸಾಲುಗಳು ಇದನ್ನೇ ಧ್ವನಿಸುತ್ತೆ.

“ಹಸುರ ದಟ್ಟಣೆ , ಕೆಳಗೆ

ವಿಸ್ಮೃತಿಯ ಪ್ರತಿರೂಪದಂತೆ ಮಲಗಿದ ನೆರಳು

ಅಂತಸ್ಥಪದರದಲಿ ಬೀಜರೂಪದ ಹಾಗೆ”

 ಮರಗಿಡ ಪ್ರಾಣಿ ಪಕ್ಷಿಗಳನ್ನು ತನ್ನದೇ ಭಾಗವಾಗಿ ನೋಡುವ ಕವಿ, ತನ್ನದೇ ಒಂದು ಪುಟ್ಟ ಪ್ರಪಂಚದಲ್ಲಿ ಬದುಕುತ್ತಾನೆ. ಪ್ರಾಣಿ ಪಕ್ಷಿಗಳ ಲೋಕ ಅಮಾಯಕತೆಯ ನೇರ ಸರಳತೆಯ ಪ್ರತಿಮೆ.

ಅವರ “ಪುಟ್ಟ ಪ್ರಪಂಚ” ಹೀಗಿದೆ ನೋಡಿ

“ಮರಗಿಡ ಪ್ರಾಣಿಪಕ್ಷಿಗಳ ನನ್ನ

ಪುಟ್ಟ ಪ್ರಪಂಚದ ಒಳಗೆ ಒಮ್ಮೊಮ್ಮೆ

ಮನುಷ್ಯರೂ ನುಸುಳಿಕೊಳ್ಳುತ್ತಾರೆ ಅನಾಮತ್ತಾಗಿ- ಸುತ್ತ ಸೇರಿದ್ದ

ಮರಗಿಡ ಬಳ್ಳಿಗಳು, ಅಳಿಲು, ಗುಬ್ಬಿ, ಬೆಳ್ಳಕ್ಕಿಗಳು ಸುತ್ತ

ಮಾಯೆಯ ಬಟ್ಟೆ ನೇಯುತ್ತಿರಲು, ಅಪರಿಚಿತರಾಗಮನಕ್ಕೆ

ಗಡಬಡಿಸಿ, ಚೆಲ್ಲಾಪಿಲ್ಲಿಯಾಗುತ್ತಾವೆ. ನಾಚಿಕೆಯಿಂದ

ಮುದುಡಿಕೊಳ್ಳುತ್ತಾ, ಅವನತಮುಖಿಗಳಾಗಿ

ಕುಗ್ಗುತ್ತ, ಕುಗ್ಗುತ್ತ ಇಲ್ಲವಾಗುತ್ತಾವೆ”

ಅಂತಹ ಪ್ರಪಂಚಕ್ಕೆ ಮನುಷ್ಯ ನುಗ್ಗಿದಾಗ, ಬಟ್ಟೆ ನೇಯುತ್ತಿರುವ ಸಸ್ಯ ಪ್ರಾಣಿ ಸಂಕುಲಗಳು ಚಲ್ಲಾಪಿಲ್ಲಿಯಾಗುತ್ತವೆ. ಕುಗ್ಗುತ್ತ ಕುಗ್ಗುತ್ತ ಇಲ್ಲವಾಗುತ್ತವೆ.  ಇಲ್ಲಿ ಮನುಷ್ಯ ಅನ್ಬುವ ಪ್ರತಿಮೆ, ಆಕ್ರಮಣಕಾರಿ. ತನ್ನಷ್ಟಕ್ಕೇ, ಶಾಂತವಾಗಿ, ಮುಕ್ತವಾಗಿ ಸ್ವತಂತ್ರವಾಗಿ ಬದುಕುವ ಒಂದು ಮಲ್ಟಿಪೋಲಾರ್ ವ್ಯವಸ್ಥೆಯನ್ನು ಒಂದು ಆಕ್ರಮಣಕಾರಿ, ಯುನಿಪೋಲಾರ್ ತತ್ವ ಹೇಗೆ ನಾಶಮಾಡುತ್ತೆ,ಎಂಬ ಸಮಾಜ ತತ್ವವನ್ನು ಕವಿ ಚೊಕ್ಕಾಡಿಯ ಪುಟ್ಟ ಪ್ರಪಂಚ ತೆರೆದಿಡುತ್ತೆ.

ಒಂದು ನದಿ ಹರಿಯುತ್ತಾ ಅದರ ಪ್ರವಾಹದಲ್ಲಿ ಒಂದು ಎಲೆ ತೇಲಿ,  ವನಕವಿಗೆ ಎಲೆಯೂ  ಕವಿತೆಯಾಗುತ್ತೆ, ಹರಿಯುವ ನದಿ, ನದಿಯ ಇಕ್ಕೆಲದ ದಡಗಳು, ನದಿಯ ಪ್ರವಾಹ ಮತ್ತು ತೇಲುವ ಎಲೆ, ಇವೆಲ್ಲಾ ಕಾವ್ಯದ ಬೀಜಾಕ್ಷರಗಳು.

“ಮೇಲೆ ಆಕಾಶಕ್ಕೆ ಹಾರದೆ

ಕೆಳಗೆ ತಳಕ್ಕಿಳಿಯದೆ

ನದಿ ನಡುವೆ ತಿರುಗಣಿ ಮಡುವಿಗೆ ಸಿಲುಕಿಯೂ

ಒಳಸೇರದೆ

ಅಂಚಿನಲ್ಲೇ ಸುತ್ತು ಹಾಕುತ್ತಾ

ದಂಡೆಯ ಗುಂಟ ಚಲಿಸುತ್ತಿದೆ

ದಡ ಸೇರದೆ”

ಬದುಕು ಕಾಲದ ಪ್ರವಾಹದಲ್ಲಿ ತೇಲುತ್ತಿದೆಯೇ?, ಭಾವದ ಅಲೆಗಳಲ್ಲಿ ಕವಿ ತೇಲುತ್ತಿದ್ದಾನೆಯೇ?. ಮುಳುಗದೆ, ಆಕಾಶಕ್ಕೆ ಹಾರದೆ ದಂಡೆಯಗುಂಟ ತೇಲಿ ಸಾಗುವ ಎಲೆ, ವಾಸ್ತವ ತತ್ವವೇ, ನಿರ್ಲಿಪ್ತತೆಯೇ?  ಚೊಕ್ಕಾಡಿಯ ಹಳ್ಳಿಯ ಕವಿಗೆ ಕಾಡುಮರದೆಲೆಯೂ, ಮಹಾಕಾವ್ಯ ಬರೆಯಲು ಪತ್ರವಾಯಿತು ನೋಡಿ!

ಅವರ ಇನ್ನೊಂದು ಕವಿತೆ ಹಕ್ಕಿ ಮತ್ತು ಮರದ ಬಗ್ಗೆ ( ದ್ವಾ ಸುಪರ್ಣಾ). 

ಹಕ್ಕಿ, ಮರದ ಆಸರೆಯಲ್ಲಿ ಗೂಡುಕಟ್ಟಿ ಒಂದರೊಳಗೊಂದಾಗಿ ಜೀವಿಸುವ ವಸ್ತು ಈ ಕವಿತೆಯದ್ದು. ಜಗತ್ತಿನಲ್ಲಿ ಯಾರೂ, ಯಾವ ತತ್ವವೂ ಇಂಡಿಪೆಂಡೆಂಟ್‌ ಅಲ್ಲ, ಇಂಟರ್ಡಿಪೆಂಡೆಂಟ್ ಎಂಬ ಆಧುನಿಕ ಮ್ಯಾನೇಜ್ಮೆಂಟ್ ತತ್ವವೂ ಇದೇ.

“ಸ್ಥಗಿತ ಕಾಲದ ಆಚೆ,ಹುತ್ತ ಕಟ್ಟಿದ ಹಾಗೆ

ಮರಕ್ಕೆ ಹಕ್ಕಿಯ ರೆಕ್ಕೆ

ಎಲೆ ಮೂಡಿ ಹಕ್ಕಿ ದೇಹಕ್ಕೆ

ಹಕ್ಕಿ ಮರವಾಗಿ,ಮರವೇ ಹಕ್ಕಿಯಾಗಿ”

ಮರ ಸ್ಥಿರ ಚೇತನ, ಹಕ್ಕಿ ಚರ ಚೇತನ. ಮರ ಸ್ಥಿರ ವ್ಯವಸ್ಥೆ,  ಹಕ್ಕಿ  ಹೊಸತಿಗಾಗಿ ಚಾಚುವ ಪ್ರಯೋಗ

ಮರ ಸ್ಥಿರ ಮನಸ್ಸು, ಹಕ್ಕಿ ಗಗನಕ್ಕೆ ಲಗ್ಗೆ ಹಾಕುವ ಕನಸು. ಆದರೆ ಇವೆರಡೂ ಒಂದಕ್ಕೊಂದು ಪೂರಕವಾಗಿ ಒಂದರೊಳಗೊಂದು ಅನ್ಯೋನ್ಯವಾಗಿ ಸಹಬಾಳ್ವೆ ನಡೆಸುವ ಸಮತತ್ವ ಪ್ರಕೃತಿಯದ್ದೂ ಚೊಕ್ಕಾಡಿಯ ಕಾವ್ಯದ್ದೂ.

ನೆಲ ಹಸನು ಮಾಡಿ, ಮಗು ಬೀಜ ಬಿತ್ತಿ ಮೊಳಕೆ ಬರುವುದನ್ನು,ಬೆರಗುಗಣ್ಣಿಂದ ಕಾದು ನೋಡುತ್ತೆ, ಒಂದೊಂದಾಗಿ ಎಲೆಗಳನ್ನು, ಟಿಸಿಲೊಡೆಯುವ ಗೆಲ್ಲುಗಳನ್ನು ನೋಡಿ ಇದೇಕೆ ಹೀಗೆ ಎಂದು ಅನ್ವೇಷಣೆ ಮಾಡುತ್ತೆ. ಅಂತಹ ಒಂದು ಮಗುವಿನ ಪಕ್ಷಪಾತರಹಿತ ಮುಗ್ಧ ಅನ್ವೇಷಣೆ ಕೂಡಾ ಚೊಕ್ಕಾಡಿಯವರ ಕಾವ್ಯದ ಮೂಲಸೆಲೆ. ಅವರ ‘ಪರಿಚಯ’ ಎಂಬ ಕವಿತೆ, ಇದಕ್ಕೊಂದು ನೇರ ಉದಾಹರಣೆ.

ಈ ಕವಿತೆಯಲ್ಲಿ, ಕವಿ, ತನ್ನ ಪಕ್ಕದ ಮನೆಗೆ ಬಾಡಿಗೆಗೆ ಬಂದ ವ್ಯಕ್ತಿಯ ಮನೆಯ ಕದ ತಟ್ಟಿ, ಆತ ಯಾರು, ಎಂದು ತಿಳಿಯುವ ಮುಗ್ಧ ಪ್ರಯತ್ನ ಮಾಡುತ್ತಾನೆ. ಕವಿ ಮತ್ತು ಆ ವ್ಯಕ್ತಿಯ ಸಂಭಾಷಣೆ ಕವಿತೆಯಲ್ಲಿ  ಹೀಗೆ ಕೊನೆಯಾಗುತ್ತದೆ.

“ಪೆಚ್ಚುಪೆಚ್ಚಾಗಿ ಕೊನೆಯ ಯತ್ನವಾಗಿ ಕೇಳಿದೆ

ಸ್ವಾಮೀ, ಇಷ್ಟಕ್ಕೂ ತಾವು ಯಾರು?

ನಾನೇ? – ಅಂದ

– ನಾನೇ ನೀನೂ ಅಂದು ಫಳಕ್ಕನೆ

ಬಾಗಿಲು ಮುಚ್ಚಿದ

ಅಯ್ಯಾ , ನಾನು ಯಾರು?”

ನೀವು ಯಾರು? ಎಂದು ಶುರುವಾಗುವ ಕವಿತೆ ಕೊನೆಯಾಗುವುದು, ನಾನು ಯಾರು? ಎಂಬ ಪ್ರಶ್ನೆಯೊಂದಿಗೆ. ಈ ಕವಿತೆಯಲ್ಲಿ ಬರುವ ನಾನು, ನೀನು, ಬಾಡಿಗೆ ಮನೆ, ತಟ್ಟುವ ಕದ, ಮುಚ್ಚುವ ಬಾಗಿಲು, ಸಂವಾದ ಎಲ್ಲವೂ ಆಳಚಿಂತನೆ ಬೇಡುವ ಪ್ರತಿಮೆಗಳಲ್ಲವೇ.

ಚೊಕ್ಕಾಡಿಯವರಿಗೆ ಎಂಭತ್ತು ವರ್ಷ ತುಂಬಿ ಕೆಲವೇ ದಿನಗಳು ಕಳೆದವು. ಅಡಿ ಚೊಕ್ಕವಾಗಿದ್ದರೆ, ಶಿರ ಶುಭ್ರ, ಮನಸ್ಸು ನಿರ್ಮಲ ಎಂದು ಬದುಕಿದ, ಹಾಡುಹಕ್ಕಿ ಅವರು. ಹಳ್ಳಿಯಲ್ಲಿ ಗೂಡು ಕಟ್ಟಿ, ಪಟ್ಟಣಕ್ಕೆ, ಸಮಗ್ರ ಹೃದಯ ಪಟ್ಟಣಕ್ಕೆ, ಪ್ರೀತಿರೆಕ್ಕೆ ಬೀಸಿ ಹಾರಿ,  ರಾತ್ರೆಯೊಳಗೆ ಪುನಃ ಗೂಡು ಸೇರುವ ಮತ್ತು ತಮ್ಮ “ವನಸ್ಪತೀ ಹವಾ” ದಿಂದ ಸ್ವಸ್ಥ  ಸಾರಸ್ವತ ಲೋಕದ ವಾತಾವರಣ ನಿರ್ಮಾಣ ಮಾಡಿದ ಅವರಿಗೆ ಎಂಭತ್ತರ ಶುಭಾಶಯಗಳು.

**********

16 thoughts on “ಕಬ್ಬಿಗರ ಅಬ್ಬಿ – ಸಂಚಿಕೆ – ೨

  1. ಕವಿ ಸುಬ್ರಾಯ ಚೊಕ್ಕಾಡಿಯವರು ಕಾವ್ಯದ ಒಳಾರ್ಥಗಳು ಪ್ರತಿಯೊಬ್ಬರು ಗಮನಿಸಬೇಕಾದುದು ಅನಿವಾರ್ಯ.ಪ್ರಕೃತಿಯ ಅಂತರಂಗ ಬಲ್ಲ ಕವಿ,ಇಂದು ನಾಳೆಗಳ ಸಮಷ್ಠಿಭಾವ ಅವರಂತೆ ನಾವಾಗುವುದೆಂತೋ…..ಸುಂದರವಾಗಿ ಬರೆದಿರುವಿರಿ ಸರ್…

    1. ಶಿವಲೀಲಾ ಅವರೇ, ತುಂಬಾ ಧನ್ಯವಾದಗಳು. ಚೊಕ್ಕಾಡಿ ಅವರ ಕವಿತೆಯ ಶಕ್ತಿಯೇ ಸಾಕು, ನಮ್ಮಿಂದ, ಲೇಖನ ಬರೆಸುವುದಕ್ಕೆ.

  2. ಬರಹದ ಭಾವ ಆಹ್ಲಾದಕರ ಅನುಭವ ತಂದಿತು. ಚೆನ್ನಾದ ಬರಹ.

    1. ವಸುಂಧರಾ ಅವರೇ, ಹೃದಯದಿಂದ ಧನ್ಯವಾದಗಳು.

      ಚೊಕ್ಕಾಡಿ ಅವರ ಕವಿತೆಗಳಿಗೆ ಅರ್ಥಶಕ್ತಿಯಿದೆ. ಓದಿದಾಗ, ಅನುಭವಿಸಿದಾಗ, ಲೇಖನ ಅದರಷ್ಟಕ್ಕೇ ಬರೆಸಿಕೊಳ್ಳುತ್ತದೆ.

  3. ಕಾನತ್ತಿಲರಿಗೆ ನಮಸ್ಕಾರ. ತುಂಬಾ ಹೃದ್ಯವಾಗಿದೆ ನಿಮ್ಮ ವಿಮರ್ಶಾ ಬರಹ. ಅಕಾಡೆಮಿಕ್ ವಿಮರ್ಶೆಗಳೆಲ್ಲ ಶುಷ್ಕವಾಗುತ್ತಾ ಸಾಗುತ್ತಿರುವಾಗ ಎಷ್ಟು ಚಿಕ್ಕದಾದರೂ ಪರವಾಗಿಲ್ಲ, ನಿಮ್ಮಂತವರ ಬರಹಗಳೇ ಖುಷಿಕೊಡುತ್ತವೆ. ತೋಳ್ಪಾಡಿಯವರ ಬರಹ, ಉಪನ್ಯಾಸಗಳ ಹಾಗೆ. ನಿಮ್ಮ ಸ್ಥಿರ-ಚರ ‘ಸಿದ್ಧಾಂತ’ ಚೇತೋಹಾರಿಯಾಗಿದೆ. ಸ್ಥಾವರ-ಜಂಗಮ ಎಂದು ಬಡಿದಾಡುವ ಹುಂಬರು ಇದನ್ನು ತುರ್ತಾಗಿ ಗಮನಿಸಬೇಕಾದ ಅಗತ್ಯವಿದೆ.

  4. ಆತ್ಮೀಯ ದೇವು ಹನಹಳ್ಳಿ ಅವರೇ
    ನಿಮ್ಮ ಮಾತುಗಳು ನನಗೆ ಸದಾ ಪ್ರೇರಣೆ ನೀಡುತ್ತವೆ.
    ನಿಮ್ಮ ಪ್ರೀತಿ ನನಗೆ ಸದಾ ಇರಲಿ.
    ತುಂಬಾ ಧನ್ಯವಾದಗಳು

  5. ನಿಮ್ಮ ಬರಹ ತುಂಬ ಆಪ್ತವಾಗಿದೆ ಹೃದ್ಯವಾಗಿದೆ .ಚೊಕ್ಕಾಡಿ ಯವರನ್ನು ಹೆಚ್ಚು ಓದಿಲ್ಲ ನಾನು. ಓದುವ ಪ್ರೇರೇಪಣೆ ಸಿಕ್ಕಿದೆ ನಿಮ್ಮ ಲೇಖನದಿಂದ.
    ಧನ್ಯವಾದಗಳು

    1. ಸುಜಾತಾ ಅವರೇ, ಚೊಕ್ಕಾಡಿಯವರು ಆರು ದಶಕಗಳಿಂದ ಬರೆಯುತ್ತಿರುವ ಅಪೂರ್ವ ಕವಿ. ಕಾವ್ಯ ಅವರ ಜತೆಗೆ ಆರು ದಶಕ ಹರಿದಿದೆ
      ಅವರು ಬರೆದ ಭಾವಗೀತೆಗಳೂ ಸಾಕಷ್ಟು ಪ್ರಸಿದ್ಧ.
      ನಿಮ್ಮ ಮಾತುಗಳು ಪ್ರೋತ್ಸಾಹ ಹೊತ್ತು ತಂದಿವೆ. ಧನ್ಯವಾದಗಳು

      1. ಅವರ ಭಾವಗೀತೆಗಳನ್ನು ಕೇಳಿರುವೆ. ಕವಿತೆಗಳ ಸಾಮಾನ್ಯ ಓದು ಆಗಿದೆ. ನಾನು ಬರವಣಿಗೆಗಿಳಿದಿರುವುದು ತೀರಾ ಇತ್ತೀಚೆಗೆ . ನಂತರದ ವಿಸ್ತಾರ ಗ್ರಹಿಕೆ ರೂಪಕ ಪ್ರತಿಮೆಗಳ ಬಳಕೆ ಇವುಗಳ ಕಡೆ ಗಮನ ಕೊಡುವಂತಹ ಓದುವಿಕೆ ಆಗಿಲ್ಲ ಎಂದು ಹೇಳಿದ್ದು .

        ನಿಮ್ಮ ಸಕಾಲಿಕ ಪ್ರತಿಕ್ರಿಯೆ ತುಂಬಾ ಸಂತೋಷ ಕೊಟ್ಟಿತು ಸರ್.

        1. ಸುಜಾತಾ ರವೀಶ್ ಅವರೇ, ಕಾವ್ಯದ ಜತೆಗೆ ಹಾಕುವ ಹೆಜ್ಜೆಗಳಲ್ಲಿ ನಾವ್ಯಾರೂ ಒಬ್ಬಂಟಿಗಳಲ್ಲ. ಜತೆ ಜತೆಗೆ ಸಮಾಜದ ಪಾದಗಳು ಪದವಾಗಿ ಪದ್ಯವಾಗಿ ನಡೆಯುತ್ತವೆ. ನಿಮ್ಮ ಪ್ರತಿಕ್ರಿಯೆಗೆ ಜೀವಶಕ್ತಿಯಿದೆ. ಧನ್ಯವಾದಗಳು.

  6. ಲೇಖನ ಬಹಳ ಸಾರಪೂರ್ಣವಾಗಿದೆ. ಚೊಕ್ಕಾಡಿಯವರ ಕವಿತೆಗಳು ಸಾಮಾನ್ಯ ಪ್ರತಿಮೆಗಳಲ್ಲಿ ಅನನ್ಯ ಸಂಗತಿಗಳ ವಿವರಿಸುತ್ತವೆ.

    1. ನಾಗರೇಖಾ ಅವರೇ, ನೀವಂದಿದ್ದು ಹೌದು. ಅವರ ಕವಿತೆಗಳು ಸರಳವಾದರೂ ಸರಳರೇಖೆಗಳಲ್ಲ. ನವಿರಾಗಿ ತಿರುಗಿ ಚಿತ್ರವಾಗುವವು.
      ನಿಮ್ಮ ನಲ್ನುಡಿಗಳು ಬರೆಯಲು ಪ್ರೇರಣೆ.
      ತುಂಬಾ ಧನ್ಯವಾದಗಳು

  7. ಮಂಜಿನ ತಂಪಿನಂತೆ ನಿಮ್ಮ ಬರಹ ಚೇತೋಹಾರಿಯೂ, ಆಸಕ್ತಿದಾಯಕವಾಗಿಯೂ….ಅಧ್ಯಯನಶೀಲತೆಯಿಂದ ಅರ್ಥಪೂರ್ಣವಾಗಿಯೂ…ಇದೆ ಸರ್…. ಚೊಕ್ಕಾಡಿ ಯವರ ಕಾವ್ಯ ಕುರಿತ ಈ ಬರಹ ಬಹಳ ತಿಳಿಸಿಕೊಡುತ್ತದೆ… ಧನ್ಯವಾದಗಳು ನಿಮಗೆ

    1. ಮಮತಾ ಶಂಕರ್ ಅವರೇ,
      ನಿಮ್ಮ ಮಾತುಗಳು ಸೃಜನಶೀಲ. ಸುತ್ತಲಿನ ಚಲನಶೀಲ ತತ್ವಗಳು ಕವಿಯ ಕಾಣ್ಕೆಗೆ ಎಟಕಿ, ಹಲವು ರೂಪಗಳಲ್ಲಿ ಪ್ರತಿಫಲಿಸಿ ಹೊರಬರುತ್ತವೆ
      ಚೊಕ್ಕಾಡಿಯವರ ಕಾವ್ಯ, ಆರು ದಶಕಗಳ ಸಾಹಿತ್ಯ ಬದುಕಿನ ಸಾರ ಹೀರಿದೆ,ಬೀರಿದೆ.
      ತುಂಬಾ ಧನ್ಯವಾದಗಳು

  8. ಚೊಕ್ಕಾಡಿ ಸರ್ ರವರ ಕುರಿತು ಬಹಳ ಚೆಂದಕ್ಕೆ ಬರೆದಿರುವಿರಿ.

    1. ಸುಜಾತಾ ಅಮೃತರಾಜ್ ಅವರೇ.
      ತುಂಬಾ ಧನ್ಯವಾದಗಳು. ‌ಕವಿತೆ ಕೊಟ್ಟ ಶಕ್ತಿ, ತೋರಿಸಿದ ದಾರಿಯಲ್ಲಿ ನಡೆದೆ.
      ಹೌದು, ಚೊಕ್ಕಾಡಿಯವರು ತುಂಬಾ ಜೀವಮುಖೀ ಕವಿಗಳು.

Leave a Reply

Back To Top