ಸ್ಮಿತಾ ಭಟ್
ಈ ದಿನ ಹೊಸದೊಂದು ಕವಿತೆಗೆ ಮುನ್ನುಡಿಯಾದರೂ ಬರೆಯಲೇ ಬೇಕು
ಮುನ್ನೆಡೆಗೆ ಬರುವ ಹಲವು ವಿಚಾರಗಳ ನಡುವೆಯೂ .
ಅರೇ,!ಎಷ್ಟು ಚಂದದ ಸಾಲೊಂದು ಹುಟ್ಟಿದೆ
ಈ ಕೊಗಿಲೆಯ ಉಯಿಲಿಗೆ
ಇಂದು ಹುರುಪಿದೆ ನೊಡು.
ಸುತ್ತುವ ಸಾಲುಗಳಿಗೀಗ
ಹೊಸ ಭಾವಗಳ ಅಲಂಕಾರ
ಉಪಹಾರದ ಗಡಿಬಿಡಿಯಲ್ಲಿ
ಉಪಯೋಗಿಸಲಾಗದೇ ಉಳಿದೇ ಬಿಡುತ್ತದೆ.
ಮೈಮುರಿದು ಏಳುವಾಗಿನ ತೀವ್ರತೆಗೆ
ತಿಂಡಿ ಪಾತ್ರೆಗಳ ಗಲಬರಿಸುವಾಗ ಸ್ವಲ್ಪ ಕುಂದಾಗಿದೆ.
ಸ್ನಾನದ ಮನೆಯಲ್ಲಿ ಮತ್ತೆ ನೆನಪಾಗುವ
ಅದೇ ಸಾಲುಗಳ ಮುಂದುವರಿದ ಭಾಗ
ಕನ್ನಡಿಯ ಮುಂದೆ ಕರಗಿ,
ಅಡುಗೆ ಮನೆಯಿಂದ
ಸೀದಿದ ವಾಸನೆಯೊಂದು
ಮೂಗಿಗೆ ರಾಚಿ,
ಮುದ್ದಾದ ಸಾಲುಗಳೆಲ್ಲ ಈಗ ಕಮಟು.
ಸಿಡಿಮಿಡಿಯ ಮನಸು
ಇಳಿವ ಕಣ್ಣಾಲಿಗಳನೂ ತಡೆದು ಎದೆಯೊಳಗೊಂದು ಕಾರ್ಮೋಡ-
ಕರಗಿಸಲೊಂದು ಸಮಾಧಾನ.
ಇರಲಿ ರಾತ್ರಿಯವರೆಗೂ ಸಮಯವಿದೆ
ಏನಾದರೊಂದು ಗೀಚಲೇ ಬೇಕು.
ದಿನದ ಕಟ್ಟ ಕಡೆಯ ದೋಸೆ ಹಿಟ್ಟಿನ ಹದ ಮುಗಿಸಿ
ಬಿಡುಗಡೆಯ ನಿಟ್ಟುಸಿರು
ಮುದಗೊಂಡ ಮಂದ ಬೆಳಕಿನಲಿ
ಲಹರಿಗೆ ಬಂದ ಸಾಲು ತಡಕಾಡ ಹೋದರೆ
ಹೆಪ್ಪು ಹಾಕಿದ ಪಾತ್ರೆಯ ಧಡಾರ್ ಎಂಬ ಸದ್ದು
ಸಿಕ್ಕ ಸಾಲನ್ನೂ ಬೆಕ್ಕು ಕದ್ದು
ಕೈಗೂ ಸಿಗದೇ ಓಟ ಕಿತ್ತಿದೆ.
ರಾತ್ರಿ ಕೈ ಮೀರುತ್ತಿದೆ,
ಬೆಳಿಗ್ಗೆ ಬೇಗ ಏಳಬೇಕಿದೆ,
ಮನಸು ದೇಹ ಎರಡರದೂ
ಕಳ್ಳ ಪೋಲೀಸ್ ಆಟ.
ನಾಳೆ ನೋಡೋಣ ಎನ್ನುವಲ್ಲಿಗೆ ಕವಿತೆ ಪೂರ್ಣಗೊಳ್ಳುತ್ತದೆ.
**********
ಪ್ರತೀ ಗೃಹಿಣಿಯ ತೊಳಲಾಟದ ಬಗೆ ಹೀಗೆಯೇ ಏನೋ… ಬರಹಕ್ಕೆ ಮಾತ್ರವಲ್ಲ, ಭಾವನೆ ಹಂಚಿಕೊಳ್ಳಲು ಸಮಯ ಹೊಂದಿಸಲಾಗದೇನೋ… ಕವಿತೆ ಚೆನ್ನಾಗಿದೆ..
ಚೆನ್ನಾಗಿದೆ
ಕವಿತೆಯ ಭಾವ ಚೆನ್ನಾಗಿದೆ.
ಭಾಷೆಯತ್ತ ತುಸು ಗಮನ ಬೇಕಿತ್ತು.
ಬಹಳ ಚಂದ ಕವಿತೆ