ಶೈಲಜಾ ಹಾಸನ್
ತಣ್ಣಗೆ ಗಾಳಿ ಬೀಸಿದಂತಾಗಿ ಮಾಧವಿ ನಡುಗಿದಳು. ಕೆರೆ ಏರಿ ಮೇಲೆ ಕುಳಿತಿದ್ದರಿಂದ ಕೆರೆಯ ಮೇಲಿಂದ ಹಾದು ಬರುತ್ತಿದ್ದ ಗಾಳಿ ಎದೆ ನಡುಗಿಸುವಂತಿತ್ತು. ಚಳಿ ಆಗುತ್ತಿದ್ದರೂ ಮಾಧವಿಗೆ ಮನೆಗೆ ಹೋಗುವ ಮನಸ್ಸು ಇರಲಿಲ್ಲ. ಏರಿ ಮೇಲೆ ಕುಳಿತು ಸಾಕಾದ ಮಾಧವಿ ನಿಧಾನವಾಗಿ ಕೆಳಗಿಳಿದು ನೀರಿಗೆ ಕಾಲು ಇಳಿಬಿಟ್ಟು ಚಪ್ಪಡಿ ಮೇಲೆ ಕುಳಿತಳು. ಕಾಲುಗಳೆರಡನ್ನು ನೀರಿನಲ್ಲಿ ಆಡಿಸುತ್ತಾ ಕಾಲಬೆರಳನ್ನು ಕಚ್ಚಲು ಬರುತ್ತಿದ್ದ ಮೀನುಗಳೊಡನೆ ಆಟವಾಡತೊಡಗಿದಳು. ಕೆಲವು ನಿಮಿಷಗಳಷ್ಟೆ ಆ ಆಟವೂ ಮುದ ನೀಡದೆ ಕಾಲುಗಳನ್ನು ಎತ್ತಿಕೊಂಡು ಮೇಲೆ ಇರಿಸಿಕೊಂಡಳು.
ಬಾನಿನಲ್ಲಿ ಬೆಳ್ಳಕ್ಕಿಗಳು ಸಾಲಾಗಿ ಶಿಸ್ತಿನ ಸಿಪಾಯಿಗಳಂತೆ ಹೋಗುತ್ತಿರುವುದನ್ನು ಕಂಡು ಎದ್ದು ನಿಂತವಳೇ “ಬೆಳ್ಳಿಕ್ಕಿ, ಬೆಳ್ಳಕ್ಕಿ ನನ್ನ ಉಂಗುರ ಕೊಡ್ತಿನಿ ನಿನ್ನ ಉಂಗುರ ಕೊಡು” ಎಂದು ಕೂಗಿದಳು. ಯಾರಾದರೂ ಕೇಳಿಸಿಕೊಂಡರೇನೊ ಎಂದು ತಟ್ಟನೆ ನಾಚಿ ಸುತ್ತಲೂ ನೋಡಿದಳು. ಸ್ವಲ್ಪವೇ ದೂರದಲ್ಲಿ ಬಟ್ಟೆಗೆ ಸೋಪು ಹಚ್ಚುತ್ತಿದ್ದ ಶಾಮಣ್ಣನ ಸೊಸೆ ” ಏನೇ ಮಾಧವಿ, ಉಂಗುರ ಕೇಳಿದಿಯಾ ಬೆಳ್ಳಕ್ಕಿಯಾ, ಸ್ವಲ್ಪ ದಿನ ಇರು, ಬೆಳ್ಳಕ್ಕಿಯಂತೆ ಮದ್ವೆ ಗಂಡು ಹಾರಿ ಬಂದು ಚಿನ್ನದುಂಗುರ ತೊಡಿಸುತ್ತಾನೆ.” ಎನ್ನುತ್ತಾ ನಕ್ಕಳು.
“ಥೂ ಹೋಗಕ್ಕ, ನಾನು ಚಿನ್ನದ ಉಂಗುರನೇ ಹಾಕಳಲ್ಲ, ಅದರಲ್ಲೂ ಮದ್ವೆ ಗಂಡು ತೊಡಿಸುತ್ತಾನೆ ಅಂದ್ರೆ ನಂಗೆ ಬೇಡವೇ ಬೇಡಾ” ಮೂತಿ ಉಬ್ಬಿಸಿದಳು.
“ನೀನು ಬೇಡ ಅಂದ್ರೆ ನಿಮ್ಮಪ್ಪ ಕೇಳುತ್ತಾರಾ, ಆಗ್ಲೆ ಗಂಡು ಹುಡುಕುತ್ತಾ ಇದ್ದಾರೆ. ಈ ವರ್ಷವೇ ನಿಂಗೆ ಮದ್ವೆ ಕಣೇ” ಮಾಧವಿಯನ್ನು ರೇಗಿಸಿದಳು.
” ಥೂ ಎಲ್ಲಿಹೋದರೂ ಮದ್ವೆ ವಿಷಯನೇ, ಮೊದ್ಲು ನೀನು ಬಟ್ಟೆ ಒಗೆಯಕ್ಕ” ಸಿಡಾರನೇ ಸಿಡುಕಿ ಅಲ್ಲಿಂದ ಎದ್ದು ಮನೆಯತ್ತ ಹೊರಟಳು.
ಮನೆಗೆ ಹೊಗಲು ಮನಸ್ಸಾಗದೆ ಸೀದಾ ತೋಪಿನೊಳಗೆ ಹೆಜ್ಜೆ ಹಾಕಿ ಅಲ್ಲಿದ್ದ ಅವಳ ಮೆಚ್ಚಿನ ಮಾವಿನ ಮರವೇರಿ ಕುಳಿತುಕೊಂಡಳು. ಮರದಲ್ಲಿನ ಮಾವಿನ ಕಾಯಿಗಳು ಬಲಿತು ಮಾವಿನ ಸುವಾಸನೆ ಸುತ್ತಲೂ ವ್ಯಾಪಿಸಿತ್ತು. ಆ ವಾಸನೆಗೆ ಅರೆ ಕ್ಷಣ ಮೂಗರಳಿಸಿ ಕಂಪನ್ನು ಒಳಗೆಳೆದುಕೊಂಡಳು. ಮನೆಯೊಳಗೆ ರಾಶಿ ರಾಶಿ ಹಣ್ಣು ಬಿದ್ದಿದ್ದರೂ ತಿನ್ನುವ ಮನಸ್ಸಾಗಿರಲಿಲ್ಲ. ಮನದೊಳಗೆ ಕೊರೆಯುತ್ತಿದ್ದ ಸ್ಕೂಟಿ ವಿಷಯವೇ ಬೃಹದಾಕಾರವಾಗಿ ಎದ್ದು ಕುಣಿಯ ತೊಡಗಿತು. ಹೊಸ ಸ್ಕೂಟಿ ಓಡಿಸುತ್ತಾ ಕಾಲೇಜಿನ ದಾರಿ ಹಿಡಿದು ತಾನು ಹೋಗುತ್ತಿದ್ದರೆ ಎಲ್ಲರ ದೃಷ್ಟಿಯೂ ನನ್ನ ಮೇಲೆಯೇ, ಸ್ಕೂಟಿಯಿಂದ ಹೆಮ್ಮೆಯಿಂದ ಇಳಿದು ಸ್ಟಾಂಡಿನಲ್ಲಿ ನಿಲ್ಲಿಸಿ, ಬ್ಯಾಗ್ ತೆಗೆದುಕೊಂಡು ಹೆಗಲಿಗೇರಿಸಿಕೊಂಡು ಕ್ಲಾಸಿನೊಳಗೆ ಹೋಗುತ್ತಿದ್ದರೆ….ರೇ… ರಾಜ್ಯದಲ್ಲಿ ಮುಳುಗಿಹೋಗಿರುವಾಗಲೇ ಅಪ್ಪನ ಕೂಗು ” ಮಾಧವಿ, ಎಲ್ಲಿದ್ದಿಯಾ, ಕತ್ತಲೆ ಆಗ್ತಾ ಇದೆ, ಈ ತೋಪಿನಲ್ಲಿ ಕುಳಿತು ಕೊಂಡು ಏನು ಮಾಡ್ತಾ ಇದ್ದಿಯಾ,ಎದ್ದು ಬಾ ಮನೆಗೆ” ಅಪ್ಪನ ಜೋರು ಧ್ವನಿ ಕೇಳಿಸಿದಾಗ ಅತ್ತ ತಿರುಗಿ ” ಈ ಅಪ್ಪಾ ಇನ್ನೂ ಸ್ವಲ್ಪ ಹೊತ್ತು ಸುಮ್ಮನಿರಬಾರದಿತ್ತಾ, ನನ್ನ ಕನಸು ಅರ್ಧಕ್ಕೆ ನಿಂತು ಹೋಯಿತು ಎಂದು ಬೈಯ್ದುಕೊಳ್ಳುತ್ತಾ ಮರದಿಂದ ಒಂದೇ ಸಲಕ್ಕೆ ಧುಮುಕಿದಳು.
ತೋಪಿನಿಂದ ಮನೆ ಒಂದು ಕೂಗಳತೆ ಅಂತರ. ಮಗಳು ಕೆರೆ ಏರಿ ಅಥವಾ ತೋಪು ಇವೆರಡು ಜಾಗದಲ್ಲಿಯೇ ಇರುತ್ತಾಳೆ ಅಂತ ಗೊತ್ತಿದ್ದ ಕೇಶವ ಕೆರೆ ಬಳಿ ಮಾಧವಿ ಇಲ್ಲ ಅಂತ ತಿಳಿದು ಕೊಂಡು ತೋಪಿನಲ್ಲಿಯೇ ಇರ ಬೇಕೆಂದು ಕೂಗು ಹಾಕಿದ್ದ.
ಮುಖ ದುಮ್ಮಿಸಿಕೊಂಡೇ ಮನೆಯೊಳಗೆ ಬಂದ ಮಾಧವಿ ಯಾರೊಂದಿಗೂ ಮಾತನಾಡದೆ ಕುರ್ಚಿ ಮೇಲೆ ಕುಳಿತು ಕೊಂಡಳು. ಮಗಳ ಮುದ್ದು ಮುಖ ನೋಡಿದ ವೇದಾ “ಮಾಧವಿ, ಊಟಾ ಮಾಡು ಬಾರೆ” ಕಕ್ಕುಲಾತಿಯಿಂದ ಕರೆದಳು. ಮಧ್ಯಾಹ್ನವೂ ಊಟಾ ಮಾಡದೆ ಹಸಿದಿರುವ ಮಗಳ ಬಗ್ಗೆ ಅಂತಃಕರಣದಿಂದ ಕರೆದಳು. ಮಾಧವಿ ಅಮ್ಮನ ಮುಖವನ್ನು ದುರು ದುರು ನೋಡುತ್ತಾ ತಟ್ಟನೆ ಎದ್ದವಳೇ ರೂಮಿನತ್ತ ನಡೆದು ಧಡಾರನೇ ಬಾಗಿಲು ತೆರೆದು ಒಳನಡೆದು ಬಿಟ್ಟಳು.
“ನೋಡ್ರಿ, ನೋಡ್ರಿ ಅವಳು ಹೇಗಾಡ್ತಾ ಇದ್ದಾಳೆ. ಬೆಳಗ್ಗೆಯಿಂದಲೂ ಏನೂ ತಿಂದಿಲ್ಲ. ಮಧ್ಯಾಹ್ನವೂ ಊಟಾ ಮಾಡಿಲ್ಲ.ಇವಳು ಹೀಗೆ ಹಸ್ಕೊಂಡಿದ್ರೆ ಹೇಗ್ರಿ ನನ್ನ ಗಂಟಲಲ್ಲಿ ಅನ್ನ ಇಳಿಯುತ್ತೆ” ವೇದಾ ನೊಂದುಕೊಂಡಳು.
“ನೋಡು ವೇದಾ, ಅವಳೇನೇ ಹಟ ಮಾಡಿದ್ರೂ ನಾನೂ ಅವಳನ್ನ ಕಾಲೇಜಿಗೆ ಕಳಿಸಲ್ಲ.ಸ್ಕೂಟಿಯನ್ನೂ ಕೊಡಿಸಲ್ಲ.ಅವಳು ಅಷ್ಟು ದೂರ ಗಾಡಿ ಓಡಿಸಿಕೊಂಡು ಕಾಲೇಜಿಗೆ ಹೋಗೋದನ್ನ ನನ್ನ ಕೈಲಿ ನೋಡೋಕೆ ಆಗಲ್ಲ ತಿಳಿತಾ.ನಾಳೆ ಗಂಡಿನ ಕಡೆಯವರು ಬರ್ತಾ ಇದ್ದಾರೆ. ಅವರ ಮುಂದೆ ರಾಮಾಯಣ ಮಾಡದೆ ಮರ್ಯಾದೆಯಿಂದ ಇರೋ ಹಾಗೆ ನಿನ್ನ ಮಗಳಿಗೆ ಬುದ್ದಿಹೇಳು.” ನಿರ್ಧಾರಿತವಾಗಿ ಕೇಶವ ನುಡಿದನು.
“ನಿಮ್ಮ ಅಪ್ಪ ಮಗಳ ಮಧ್ಯೆ ನನ್ನ ಸಂಕಟ ಕೇಳೊರು ಯಾರು? ಅವಳುಕಾಲೇಜಿಗೆ ಹೋಕ್ತಿನಿ ಅಂತ ಹಟ ಮಾಡ್ತಾಳೆ, ನೀವು ಮದ್ವೆ ಮಾಡ್ತಿನಿ ಅಂತ ಹಟ ಮಾಡ್ತಿರಾ, ನಾನು ಯಾರ ಕಡೆಗೆ ಹೇಳಲಿ. ಏನಾದ್ರೂ ಮಾಡಿ ಕೊಳ್ಳಿ, ನನ್ನ ಮಾತನ್ನ ಯಾರು ಕೇಳುತ್ತಿರಿ” ಜೋರಾಗಿಯೇ ಗೊಣಗಾಡುತ್ತಾ ಅಡುಗೆ ಮನೆ ಹೊಕ್ಕಳು. ಮಾಧವಿ ತನ್ನ ಹಟ ಬಿಡಲಿಲ್ಲ. ಅಂದು ಯಾರೂ ಮನೆಯಲ್ಲಿ ಊಟಾ ಮಾಡಲಿಲ್ಲ.
ಬೆಳಗ್ಗೆಯಿಂದಲೆ ಕೇಶವ ಸಡಗರದಿಂದ ಓಡಾಡುತ್ತಿದ್ದ. ಗಂಡಿನವರು ಬೆಳಗ್ಗೆ ಹನ್ನೊಂದು ಗಂಟೆಗೆ ಬರುತ್ತಾರೆ ಎಂದು ತಿಳಿಸಿದ್ದರಿಂದ ವೇದಳಿಗೆ ಬಂದವರಿಗೆ ತಿಂಡಿ ಮಾಡಿ ಸಿದ್ದವಾಗಿರಲು ತಿಳಿಸಿದ. ಮಗಳ ಕೋಪವನ್ನು ಲೆಕ್ಕಕ್ಕೆ ತೆಗೆದು ಕೊಳ್ಳದೆ ಪಾಪ ಅದು ಮಗು ಅದಕ್ಕೇನು ತಿಳಿಯುತ್ತದೆ. ಕಾಲೇಜು, ಸ್ಕೂಟಿ ಅಂತ ಕುಣಿಯುತ್ತೆ, ಬಂದ ವರ ಒಪ್ಪಿಕೊಂಡರೆ ಮದುವೆಯಾಗಿ ಅವನ ಪ್ರೀತಿಯಲ್ಲಿ ಎಲ್ಲವನ್ನು ಮರೆಯುತ್ತಾಳೆ. ನಮಗೆ ತಾನೇ ಯಾರಿದ್ದಾರೆ, ಇರುವ ಒಬ್ಬಳೆ ಮಗಳು ಓದು, ಕಾಲೇಜು ಅಂತ ಯಾಕೆ ಕಷ್ಟ ಪಡ ಬೇಕು ಅನ್ನೋವ ಧೋರಣೆಯಲ್ಲಿ ಕೇಶವನಿದ್ದ.ವೇದಳಿಗೂ ಗಂಡನ ರೀತಿ ಸರಿ ಎನಿಸಿದರೂ ಮಾಧವಿಗೆ ಮದುವೆ ಇಷ್ಟವಿಲ್ಲವಿರುವುದು, ಅವಳಿಗೆ ಮುಂದೆ ಓದಲು ಆಸೆ ಇರುವುದು, ಬಸ್ಸಿನ ಸೌಕರ್ಯ ಇಲ್ಲದಿರುವ ಈ ಊರಿನಿಂದ ಪ್ರತಿ ದಿನ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗಲು ಮಗಳು ಬಯಸಿರುವುದು ಗೊತ್ತಿದ್ದ ವೇದ ಮಗಳ ಮನಸ್ಸನ್ನೂ ನೋಯಿಸಲಾರಳು. ಗಂಡನನ್ನು ಎದಿರು ಹಾಕಿಕೊಳ್ಳಲಾರಳು. ಇಬ್ಬರ ಮಧ್ಯೆ ಯಾರಿಗೂ ಹೇಳಲಾರದೆ ಒದ್ದಾಡಿ ಹೋಗುತ್ತಿದ್ದಾಳೆ.
ಅಮ್ಮನ ಬಲವಂತಕ್ಕೆ ಗಂಡಿನ ಮುಂದೆ ಕುಳಿತಿದ್ದ ಮಾಧವಿಯ ಮುದ್ದು ಮುಖಕ್ಕೆ ಮದುವೆಯ ಗಂಡು ಕ್ಲೀನ್ ಬೈಲ್ಡ್ ಆಗಿಬಿಟ್ಟಿದ್ದ. ನಾಳೆನೇ ಮದ್ವೆ ಅಂದರೂ ತಾಳಿ ಕಟ್ಟೊಕೆ ಸಿದ್ದವಾಗಿಬಿಟ್ಟ. ಆದರೆ ಮಾಧವಿ ಮಾತ್ರಾ ಕತ್ತೆತ್ತಿಯೂ ಹುಡುಗನತ್ತ ನೋಡಿರಲಿಲ್ಲ.
ಹುಡುಗ ತಂದೆ ” ಏನಮ್ಮ ನಮ್ಮ ಹುಡುಗ ಒಪ್ಪಿಗೆಯೇ ನಿನಗೆ, ಈಗ್ಲೇ ಸರಿಯಾಗಿ ನೋಡಿಕೊಂಡು ಬಿಡು, ಆಮೇಲೆ ನೋಡಿಲ್ಲ ಅಂತ ಹೇಳಬೇಡ” ಕತ್ತು ಬಗ್ಗಿಸಿ ಕುಳಿತಿದ್ದ ಮಾಧವಿಯನ್ನು ಕೇಳಿದರು.
ಆಗಾ ಮಾಧವಿ ತಟ್ಟನೆ ” ಒಪ್ಗೆ ಇಲ್ಲ. ನನಗೆ ಮದ್ವೆ ಆಗೋಕೆ ಇಷ್ಟ ಇಲ್ಲ. ನಮ್ಮ ಅಪ್ಪನ ಬಲವಂತಕ್ಕೆ ಇಲ್ಲಿ ಕೂತಿದೀನಿ” ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಟ್ಟಳು. ಮನದೋಳಗಿನ ನಿರಾಶೆ, ಆಕ್ರೋಷ ತರಿಸಿ ಮಾಧವಿಗೆ ಹಾಗೆ ನುಡಿಯುವಂತೆ ಮಾಡಿ ಬಿಟ್ಟಿತ್ತು. ಈ ಅನಿರೀಕ್ಷಿತ ಘಟನೆಯಿಂದ ತಬ್ಬಿಬ್ಬಾದ ಗಂಡಿನವರು ದುರ್ದಾನ ತೆಗೆದುಕೊಂಡವರಂತೆ ಪೆಚ್ಚಾಗಿ ಬಿಟ್ಟರು.
ಹುಡುಗನ ತಂದೆ ಎದ್ದು ನಿಂತು ಕೇಶವನತ್ತ ತಿರುಗಿ ” ಅಲ್ಲ ಸ್ವಾಮಿ, ಹುಡುಗನನ್ನು ಕರೆಸುವ ಮುಂಚೆ ನಿಮ್ಮ ಮಗಳ ಒಪ್ಪಿಗೆ ತೆಗೆದು ಕೊಳ್ಳ ಬಾರದಿತ್ತೆ. ಹುಡುಗಿಗೆ ಮದ್ವೆ ಇಷ್ಟ ಇಲ್ಲ ಅಂದ ಮೇಲೆ ಹುಡುಗಿ ನೋಡಿ ಏನು ಪ್ರಯೋಜನ, ನಮ್ಮ ಸಮಯವೂ ಹಾಳೂ, ನಿಮ್ಮ ಸಮಯವೂ ಹಾಳೂ, ನಾವಿನ್ನೂ ಹೊರಡುತ್ತೆವೆ, ಮೊದ್ಲೂ ನಿಮ್ಮ ಹುಡುಗಿಗೆ ನಡವಳಿಕೆ ಕಲಿಸಿ, ಆಮೇಲೆ ಮದುವೆ ಮಾಡುವಿರಂತೆ” ಅಂತ ವ್ಯಂಗ್ಯವಾಗಿ ನುಡಿದು ನಡೀರಿ ಹೋಗೋಣ ಅಂತ ತನ್ನವರೊಂದಿಗೆ ಹೊರಟು ನಿಂತರು.
” ದಯವಿಟ್ಟು ಕ್ಷಮಿಸಿ ಸ್ವಾಮಿ, ನನ್ನ ಮಗಳು ಇನ್ನೂ ಚಿಕ್ಕವಳು. ಏನೋ ಗೊತ್ತಾಗದೆ ಮಾತಾಡಿ ಬಿಟ್ಟಿದ್ದಾಳೆ. ನಾನು ಆಮೇಲೆ ಅವಳಿಗೆ ಬುದ್ದಿ ಹೇಳುತ್ತೆನೆ. ನೀವು ಬೇಸರ ಮಾಡಿ ಕೊಳ್ಳ ಬೇಡಿ. ಎಲ್ಲಾ ಹೆಣ್ಣು ಮಕ್ಕಳು ಮೊದ್ಲು ಮೊದ್ಲು ಮದ್ವೆ ಬೇಡಾ ಅಂತಾ ತಾನೇ ಹೇಳೊದು, ಅವಕ್ಕೇನು ಗೊತ್ತಾಗುತ್ತೆ. ನಾವು ಕೊಂಚ ತಿಳಿಸಿ ಹೇಳಿದ್ರೆ ಒಪ್ಪಿಕೊಂಡು ಮದ್ವೆ ಆಗಿ ಸಂಸಾರ ಮಾಡ್ತರೆ. ದಯವಿಟ್ಟು ನೀವು ಕುಳಿತು ಕೊಳ್ಳಿ. ಅನುನಯದಿಂದ ಕೇಶವ ಅವರ ಕೋಪ ಇಳಿಸಲು ನೋಡಿದ.
ಅದ್ಯಾವುದಕ್ಕೂ ಜಗ್ಗದ ಅವರು “ಯಜಮಾನ್ರೆ , ಬಲವಂತಾಗಿ ನಿಮ್ಮ ಮಗಳನ್ನ ಸೊಸೆ ಮಾಡಿಕೊಳ್ಳುವ ದರ್ದು ನಮಗೇನು ಇಲ್ಲ. ನನ್ನ ಮಗನಿಗೆ ಹೆಣ್ಣುಕೊಡಲು ಕ್ಯೂ ನಿಂತಿದ್ದಾರೆ, ಹೆಚ್ಚು ಮಾತು ಬೇಡಾ, ನಾವಿನ್ನು ಬರ್ತಿವಿ” ಅಂದವರೆ ಮತ್ಯಾವುದಕ್ಕೂ ಅವಕಾಶ ಕೊಡದೆ ತಮ್ಮವರನ್ನು ಏಳಿಸಿಕೊಂಡು ಹೋಗಿಯೇ ಬಿಟ್ಟಾಗ ಅವಮಾನ ತಾಳದೆ ಕೇಶವ ಕುಸಿದು ಕುಳಿತರೆ, ವೇದಾ ಬಾಯಿಗೆ ಸೆರಗುಹಚ್ಚಿ ಬಿಕ್ಕಳಿಸಿದಳು.
ಮಾಧವಿ ಮಾತ್ರ ಏನೂ ಆಗದವಳಂತೆ ಎದ್ದು ರೂಮಿನೊಳಗೆ ಹೋಗಿ ಬಟ್ಟೆ ಬದಲಿಸಿ ನೈಟ್ ಡ್ರಸ್ ಧರಿಸಿದಳು. ಗಂಡಿನವರು ಹೋಗಿದ್ದು ಒಳ್ಳೆಯದೇ ಆಯಿತು ಎಂದು ಕೊಂಡು ಹಾಯಾಗಿ ಹಾಸಿಗೆ ಮೇಲೆ ಉರುಳಿಕೊಂಡಳು. ಅಲ್ಲಿವರೆಗೂ ಕಾಡದಿದ್ದ ಹಸಿವು ಈಗಾ ಧುತ್ತನೆ ಕಾಡಿತು, ಹೊಟ್ಟೆ ಹಸಿವು ಹೆಚ್ಚಾಗಿ ನೆನ್ನೆಯಿಂದ ತಿನ್ನದೆ ಇದ್ದದ್ದು ಈಗಾ ಕಾಡಲು ತೊಡಗಿದಾಗ ಎದ್ದು ಅಡುಗೆ ಮನೆಗೆ ಹೋಗಿ ಗಂಡಿನವರಿಗೆ ಮಾಡಿದ್ದ ಉಪ್ಪಿಟ್ಟು, ಕೇಸರಿಭಾತನ್ನು ತಟ್ಟೆಗೆ ತುಂಬಿಕೊಂಡು ಹಾಲಿಗೆ ಬಂದು ಕುಳಿತು ಗಭ ಗಭನೆ ತಿನ್ನ ತೊಡಗಿದಳು.
ಗಂಡಿನವರಿಗೆ ಅವಮಾನ ಮಾಡಿ ಏನೂ ಆಗದವಳಂತೆ ಅವರಿಗಾಗಿ ಮಾಡಿದ್ದ ತಿಂಡಿಯನ್ನು ತಿನ್ನುತ್ತಿರುವ ಮಗಳನ್ನು ನೋಡಿ ಕೇಶವನಿಗೆ ಪಿತ್ತ ಕೆರಳಿತು.ಅಷ್ಟು ಒಳ್ಳೆಯ ಸಂಬಂಧವನ್ನು ತಾನೇ ಕೈಯಾರೆ ದೂರ ತಳ್ಳಿದ ಮಗಳ ಮೇಲೆ ಮೊದಲೆ ಕ್ರೋಧ ಉಕ್ಕಿತ್ತು. ಈಗಾ ಆ ಕ್ರೋಧ ಮತ್ತಷ್ಟು ಹೆಚ್ಚಾಗಿ ಆವೇಶದಿಂದ ಮಗಳ ಬಳಿ ಬಂದವನೇ “ಹಾಳಾದವಳೆ ನಮ್ಮ ಹೊಟ್ಟೆ ಹುರಿಸೋಕೆ ಹುಟ್ಟಿದ್ದಿಯಾ. ಒಬ್ಳೆ ಮಗಳು ಅಂತ ಮುದ್ದು ಮಾಡಿ ಬೆಳೆಸಿದ್ದಕ್ಕೆ ಒಳ್ಳೆ ಉಡುಗರೆ ಕೊಟ್ಟು ಬಿಟ್ಟೆ ನೀನು,ಯಾಕಾದ್ರೂ ನನ್ನ ಮಗಳಾಗಿ ಹುಟ್ಟಿದ್ಯೆ” ಎಂದು ಬೈಯುತ್ತಾ ಅವಳು ತಿನ್ನುತ್ತಿದ್ದ ತಟ್ಟೆಯನ್ನು ಕಿತ್ತೆಸೆದು ಮಗಳ ಬೆನ್ನಿಗೆ ದಪ ದಪನೇ ಗುದ್ದಿದ.
ಅಪ್ಪನ ಈ ಅನಿರೀಕ್ಷಿತ ಧಾಳಿಯಿಂದ ಕಂಗೆಟ್ಟು ಮಾಧವಿ ಜೋರಾಗಿ ಅಳತೊಡಗಿದಳು. ಅಪ್ಪನ ಹೊಡೆತ ಇದೇ ಮೊದಲು, ಈ ಆವೇಶ ರೋಷವೂ ಅವಳು ಕಂಡದ್ದು ಇದೇ ಮೊದಲು. ದಿಗ್ಭ್ರಾಂತಳಾಗಿ ಹೋದಳು ಮಾಧವಿ. ಅಪ್ಪ ಕೊಟ್ಟ ಏಟಿಗಿಂತ ಮನಸ್ಸಿಗೆ ನೋವಾಗಿದ್ದು ಅವನ ಮಾತುಗಳಿಂದ. ಮತ್ತಷ್ಟು ಹೊಡೆಯುವ ಉಮೇದಿನಲ್ಲಿದ್ದ ಕೇಶವನನ್ನು ತಡೆಯುತ್ತಾ ವೇದಾ “ಏನಾಯ್ತು ನಿಮಗೆ, ಯಾಕೀಗೆ ಆಡ್ತಾ ಇದ್ದಿರಾ, ಅವಳಂತೂ ಚಿಕ್ಕವಳು, ಗೊತ್ತಾಗದೆ ಏನೋ ಮಾತಾಡಿ ಬಿಟ್ಟಳು. ಅದನ್ನೆ ಆ ಗಂಡಿನವರು ದೊಡ್ಡದು ಮಾಡಿ ಬಿಟ್ಟರು. ಅಂಥ ಮನೆಗೆ ಮಗಳನ್ನು ಕೊಟ್ಟರೆ ಮುಂದೆ ಬಾಳಿಸುತ್ತಾರಾ, ಅವರ ನಿಜವಾದ ಬಣ್ಣ ಈಗ್ಲೆ ಗೊತ್ತಾಗಿದ್ದು ಒಳ್ಳೆಯದಾಯ್ತು. ನೀವು ಅದಕ್ಕಾಗಿ ಮಗೂನಾ ಹೊಡಿಬೇಡಿ, ನನ್ನಾಣೆ” ಅನ್ನುತ್ತಾ ಬಂದು ಮಗಳನ್ನು ರಕ್ಷಿಸಿಕೊಂಡಳು. ಪತ್ನಿಯ ವಿರೋಧ ಕಂಡು ಹಿಮ್ಮೆಟ್ಟಿದ ಕೇಸವ ತಪ್ತನಾಗಿ “ಹಾಳಾಗಿ ಹೋಗಿ ಇಬ್ಬರೂ” ಅಂತ ಪೂತ್ಕರಿಸಿ ಹೊರನಡೆದು ಬಿಟ್ಟ.
“ಮಾಧವಿ, ನೀನ್ಯಾಕೆ ಗಂಡಿನವರ ಮುಂದೆ ಅಂಗೆಲ್ಲ ಮಾತಾಡಿದೆ. ನಿಮ್ಮಪ್ಪ ನೋಡು ಹೇಗೆ ಕೋಪ ಮಾಡಿಕೊಂಡಿದ್ದಾರೆ. ಯಾವತ್ತು ಒಂದು ಮಾತನ್ನೂ ಬೈಯದೆ ಇದ್ದವರು ನಿನ್ನ ಮೇಲೆ ಕೈ ಮಾಡಿದ್ರು ಅಂದ್ರೆ ಅವರಿಗೆ ಅದೆಷ್ಟು ಕೋಪ ಬಂದಿದೆ ಅಂತ ಅರ್ಥ ಮಾಡಿಕೊ, ಅವರಿಗೆ ಅದೆಷ್ಟು ಅವಮಾನ ಆಗಿದೆ. ಯಾಕೆ ಹೀಗೆ ಹೊಟ್ಟೆ ಉರಿಸುತ್ತಿಯಾ. ನಾವೇನು ನಿಂಗೆ ಕೆಟ್ಟದನ್ನು ಮಾಡ್ತಾ ಇದ್ದಿವೇನೇ, ಇರೋಳೊ ನೀನೊಬ್ಳೆ ಮಗಳು, ನಿನಗೆ ಒಳ್ಳೆಯದಾಗಲಿ ಅಂತ ತಾನೆ ಅಷ್ಟು ಒಳ್ಳೆ ಸಂಬಂಧ ಹುಡುಕಿದ್ದು. ನೀನು ಬಂದವರ ಮುಂದೆ ನನಗೆ ಮದ್ವೆ ಇಷ್ಟ ಇಲ್ಲ ಅಂದ್ರೆ ಯಾರು ನಿನ್ನ ಮದ್ವೆ ಆಗ್ತರೆ, ಅದು ಎಲ್ಲರಿಗೂ ಗೊತ್ತಾದರೆ ನಿನ್ನ ನೋಡೋಕೆ ಈ ಮನೆಗೆ ಯಾರು ಬರ್ತಾರೆ.ನೀನು ಓದಿ ಏನಾಗ ಬೇಕಾಗಿದೆ, ನಿನ್ನ ಅಷ್ಟು ದೂರ ಕಾಲೇಜಿಗೆ ಕಳಿಸಲು ನಮಗೆ ಇಷ್ಟ ಇಲ್ಲಾ. ಹಾಸ್ಟಲಿಗೆ ಸೇರಿಸಿ ಯಾವ ಧೈರ್ಯದಿಂದ ಇರಲಿ ಹೇಳು. ಸ್ಕೂಟಿಲಿ ಹೋಗ್ತಿನಿ ಅಂತಿಯಾ, ದಿನಾ ಅಷ್ಟು ದೂರ ಗಾಡಿಲಿ ಓಡಾಡ್ತಾ ಇದ್ದರೆ ನಾವು ನೆಮ್ಮದಿಯಾಗಿ ಇರೋಕೆ ಸಾಧ್ಯಾನಾ, ನೀನು ಓದಿ ಯಾರನ್ನ ಉದ್ದಾರ ಮಾಡಬೇಕಾಗಿದೆ. ನಿನ್ನಂದಲೆ ಮನೆ ರಣ ರಂಗವಾಗುತ್ತಿದೆ.ಸಾಕಾಗಿ ಹೋಯ್ತು ನಂಗೆ. ದಿನೆ ದಿನೇ ನಿನ್ನ ರಾಮಾಯಣ ಜಾಸ್ತಿ ಆಗ್ತಾ ಇದೆ. ಸಾಕಪ್ಪ ಸಾಕು, ಮಕ್ಕಳಿಲ್ಲ ಅಂತ ಬೇಡಿ ಬೇಡಿ ನಿನ್ನ ಪಡೆದಿದ್ದಕ್ಕೆ ಯಾಕೆ ಹೀಗೆ ಹಿಂಸೆ ಕೊಡ್ತಾ ಇದ್ದೀಯಾ” ಅಳುತ್ತಲೇ ಮಾತು ಮುಗಿಸಿದಳು. ಮಗಳ ವರ್ತನೆಯಿಂದ ವೇದಾ ಕೂಡಾ ಬೇಸತ್ತಿದ್ದಳು. ಆದರೆ ಗಂಡಾ ಮಗಳ ಮೇಲೆ ಕೈ ಮಾಡಿದ್ದು ಸ್ವಲ್ಪವೂ ಸರಿಕಂಡಿರಲಿಲ್ಲ. ಮಗಳು ಮಾಡಿದ್ದು ತಪ್ಪು, ಗಂಡಾ ಮಾಡಿದ್ದೂ ತಪ್ಪೇ, ಹಾಗಾಗಿ ಇಬ್ಬರಿಗೂ ಬೈಯ್ದು ತಾನೂ ನೊಂದು ಕೊಂಡಳು.
ಎಂದೂ ಹೊಡೆಯದ ಅಪ್ಪಾ ಹೊಡೆದದ್ದು, ಅಮ್ಮ ನೊಂದು ಮಾತಾಡಿದ್ದು, ಎಲ್ಲದಕ್ಕಿಂತ ಹೆಚ್ಚಾಗಿ ತಾನು ಓದಲು ಕಾಲೇಜಿಗೆ ಹೋಗುವಂತಿಲ್ಲ,ಸ್ಕೂಟಿ ಏರಿ ಕಾಲೇಜಿಗೆ ಹೋಗುವ ತನ್ನ ಕನಸು ನನಸಾಗಲು ಸಾಧ್ಯವೇ ಇಲ್ಲ ಅನ್ನೊ ಸತ್ಯ ಮಾಧವಿಯನ್ನು ಮಾನಸಿಕವಾಗಿ ಕುಗ್ಗಿಸಿ ಬಿಟ್ಟಿತು. ಜೊತೆಗೆ ತನ್ನೇಲ್ಲಾ ಗೆಳತಿಯರು ನಲಿದಾಡುತ್ತಾ ಕಾಲೇಜಿಗೆ ಹೋಗುತ್ತಿದ್ದರೆ ಅವರೆಲ್ಲರಿಗಿಂತ ಬುದ್ದಿವಂತೆಯಾದ, ಹೆಚ್ಚು ಅಂಕಗಳಿಸಿದ ತಾನು ಈ ಚಿಕ್ಕ ವಯಸ್ಸಿಗೆ ಮದುವೆಯಾಗಿ ಗಂಡನ ಮನೆಗೆ ಹೋಗಿ ಸಂಸಾರ ಮಾಡ ಬೇಕಾ. ತನ್ನೇಲ್ಲ ಆಸೆಗಳನ್ನು ಈಡೇರಿಸುತ್ತಿದ್ದ ಅಪ್ಪ ಯಾಕೆ ಈ ವಿಷಯದಲ್ಲಿ ಹಟ ಹಿಡಿಯುತ್ತಿದ್ದಾರೆ. ತನ್ನ ಮದ್ವೆ ಮಾಡಿ ಕಳಿಸಿ ಬಿಡೋದೇ ಅವರ ಗುರಿಯಾ. ಅಪ್ಪನ ಮಾತು ಕೇಳಲಿಲ್ಲ ಅಂತ
ನನ್ನ ಮೇಲೆ ಕೈ ಮಾಡೋಕೊ ಹಿಂಜರಿಯಲಿಲ್ಲ. ಅಪ್ಪ ಇನ್ನೂ ಯಾವ ಕಾಲದಲ್ಲಿ ಇದ್ದಾರೆ. ಪ್ರತಿಯೊಂದು ಹೆಣ್ಣು ಓದಿ ತನ್ನ ಕಾಲ ಮೇಲೆ ನಿಲ್ಲ ಬೇಕು ಅನ್ನೊ ಕಾಲದಲ್ಲೂ ಅಪ್ಪ ನನ್ನ ಮದ್ವೆ ಮಾಡೋಕೆ ಹೊರಟಿದ್ದರಲ್ಲ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಜ್ವರವೇ? ಅತ್ತೆ ಆ ಕಾಲದಲ್ಲಿ ಯಾರನ್ನೊ ಮೆಚ್ಚಿ ಓಡಿ ಹೋಗಿ ಮದುವೆಯಾದರೆಂದು ನನಗೆ ಈ ಶಿಕ್ಷೆ
ಕೊಡುತ್ತಿದ್ದಾರೆಯೇ? ಅಷ್ಟಕ್ಕೂ ಅತ್ತೆ ತಾವು ಮೆಚ್ಚಿದವರೊಂಡನೆ ಮದ್ವೆಯಾಗಿ ಎಷ್ಟು ಸುಖವಾಗಿ ಬಾಳುತ್ತಾ ಇದ್ದಾರೆ. ಅವರಿಗೇನು ಕಡಿಮೆಯಗಿದೆ. ಇವತ್ತಿಗೂ ಅಪ್ಪ ತಮ್ಮ ತಂಗಿಯನ್ನು ಮನೆಗೆ ಸೇರಿಸಿಲ್ಲ. ನಂಗೇನು ಆ ವಿಷಯ ಗೊತ್ತಿಲ್ಲವೇ, ಅಪ್ಪ ನನಗೆ ಗೊತ್ತಿಲ್ಲ ಅಂತ ಅಂದು ಕೊಂಡಿದ್ದಾರೆ. ನಾನೂ ಕೂಡಾ ಹಾಗೇ ಆಗಿ ಬಿಡುತ್ತೆನೆ ಅಂತ ಅವರಿಗೆ ಆತಂಕ,ಭಯ ಇರಬಹುದು. ಆದರೆ ಅಪ್ಪನ ಬಗ್ಗೆ ಎಲ್ಲಾ ಗೊತ್ತಿರುವ ನಾನು ಅತ್ತೆ ಹಾದಿ ಹಿಡಿಯುತ್ತೆನಾ, ನನಗೆ ಓದು ಅಷ್ಟೆ ಮುಖ್ಯ. ನಾನು ಓದ ಬೇಕು. ತುಂಬಾ ಓದ ಬೇಕು. ಓದಿ ಒಂದು ಒಳ್ಳೆಯ ಕೆಲಸಕ್ಕೆ ಸೇರ ಬೇಕು, ದೊಡ್ಡ ಅಧಿಕಾರಿ ಆಗ ಬೇಕುಅನ್ನೊದು ನನ್ನ ಆಸೆ, ಗುರಿ. ಆದ್ರೆ ಯಾರು ನನ್ನ ಓದಿಸುತ್ತಾರೆ, ಈ ಅಪ್ಪ ಅಮ್ಮ ಇಬ್ರೂ ನಂಗೆ ಮದ್ವೆ ಮಾಡ್ಲೆ ಬೇಕು ಅಂತ ಹಟ ಹಿಡಿದಿದ್ದಾರೆ. ನಾನೂ ಏನೂ ಹೇಳಿದರೂ, ಎಷ್ಟು ಹಟ ಹಿಡಿದರೂ ನನ್ನ ಮಾತನ್ನು ಕೇಳಲ್ಲ. ಅವ್ರ ಮಾತನ್ನ ಕೇಳಲಿಲ್ಲ ಅಂತ ಅಪ್ಪ ಹೊಡೆಯೋಕೂ ಹಿಂದೆ ಮುಂದೆ ನೋಡಲಿಲ್ಲ. ಇನ್ನೂ ನನ್ನ ಅಸೆ ಈಡೇರಿಸುತ್ತಾರಾ, ನಾಳೆ ಬಲವಂತಾಗಿ ನನ್ನ ಮದ್ವೆ ಮಾಡೇ ಮಾಡುತ್ತಾರೆ. ಮದ್ವೆ ಆಗಲೇ ಬಾರದು ಅಂತ ಅಲ್ಲ, ಆದರೆ ಈಗ ಬೇಡ ಅಷ್ಟೆ. ನಾನು ಓದಿ ಕೆಲಸಕ್ಕೆ ಸೇರಿ ನಂತರ ನನ್ನ ಮನಸ್ಸಿಗೆ ಮೆಚ್ಚುವಂತವನು ಸಿಕ್ಕಾಗ ಮದುವೆ ಆಗುತ್ತೆನೆ, ಆದರೆ ಈಗ ಮಾತ್ರ ನಾನು ಓದಲೆ ಬೇಕು. ಅದರೆ ಅದು ಸಾಧ್ಯವೇ, ನನ್ನೇಲ್ಲ ಆಸೆಗಳೂ ಆಸೆಗಳಾಗಿಯೇ….ಕನಸುಗಳೂ ಕನಸುಗಳಾಗಿಯೇ…. ಉಳಿದು ಬಿಡುತ್ತವೆಯೇ…..ಚಿಂತಿಸುತ್ತ, ನಿರಾಶೆಯಿಂದ ಕಂಗೆಡುತ್ತ ಮಾಧವಿ ನರಳಿದಳು,ಕೊರಗಿದಳು. ಆಲೋಚನೆ ಮಾಡುತ್ತ ಮಾಡುತ್ತಾ ಏನನಿಸಿತೊ ಧಿಗ್ಗನೆ ಮೇಲೆದ್ದಳು. ಸರಸರನೇ ನಡೆಯುತ್ತಾ ಕೆರೆಯ ಹತ್ತಿರ ಬಂದವಳೇ ಧುಮಿಕಿಯೇ ಬಿಟ್ಟಳು. ಬದುಕುವ ಆಸೆಯೇ ಅವಳಲ್ಲಿ ಈಗಾ ಉಳಿದಿರಲಿಲ್ಲ.
ಅಲ್ಲಿಯೇ ಇದ್ದ ದನ ಕಾಯುತ್ತಿದ್ದವರು ಕೆರೆಗೆ ಬಿದ್ದ ಮಾಧವಿಯನ್ನು ನೋಡಿ ಕಿರುಚಿಕೊಂಡು ಕೆರೆಯ ಬಳಿ ಓಡಿ ಬಂದರು. ಅವರಲ್ಲೊಬ್ಬ ಕೆರೆಗೆ ಧುಮುಕಿ ಈಜುತ್ತಾ ಮಾಧವಿಯನ್ನು ಸಮೀಪಿಸಿ ಅವಳನ್ನು ಎಳೆದುಕೊಂಡು ದಡಕ್ಕೆ ತಂದು ಹಾಕಿದನು. ಮಾಧವಿ ಕೆರೆಗೆ ಬಿದ್ದ ಸುದ್ದಿ ತಿಳಿದು ಇಡೀ ಊರೇ ಕೆರೆಯ ಬಳಿ ಜಮಾಯಿಸಿತು. ಚೆನ್ನಾಗಿ ನೀರು ಕುಡಿದಿದ್ದ ಮಾಧವಿಯನ್ನು ಮುಖ ಕೆಳಗೆ ಮಾಡಿ ಮಲಗಿಸಿ ಬೆನ್ನನ್ನು ಒತ್ತಿ ಒತ್ತಿ ಕುಡಿದಿದ್ದ ನೀರನ್ನು ಕಕ್ಕಿಸಿದರು. ಮಾಧವಿಯಾ ಅದೃಷ್ಟ ಚೆನ್ನಾಗಿತ್ತು. ಸಾವಿನ ದವಡೆಯಿಂದ ಪಾರಾಗಿದ್ದಳು.
ವಿಷಯ ತಿಳಿದ ಕೇಶವ, ವೇದಾ ಬಾಯಿ ಬಾಯಿ ಬಡೆಯುತ್ತಾ ಓಡಿ ಬಂದರು. ತಮ್ಮ ಮಗಳು ಹೀಗೆ ಮಾಡ ಬಹುದೆಂದು ಕನಸಿನಲ್ಲಿಯೂ ನೆನಸದವರಿಗೆ ಆಘಾತವಾಗಿತ್ತು. ಮಗಳಿಗೆ ಮದುವೆ ಮಾಡಿ ಅವಳು ಸುಖವಾಗಿರುವುದನ್ನು ಕಾಣ ಬೇಕು ಅಂತ ಹಂಬಲಿಸುತ್ತಿದ್ದವರಿಗೆ, ಅವಳು ಮಸಣ ಸೇರುವ ನಿರ್ಧಾರ ಮಾಡಿದ್ದು ಸಿಡಿಲೆರಗಿದಂತಾಗಿತ್ತು. ವಿಷಯ ತಿಳಿದಕ್ಷಣ ಮಗಳು ಕೈ ಬಿಟ್ಟೇ ಹೋದಳೆಂದು ಭಾವಿಸಿ ಗೋಳೊ ಎಂದು ಎದೆ ಬಡಿದು ಕೊಂಡು ಅಳ ಹತ್ತಿದರು. ಮಗಳು ಉಸಿರಾಡುತ್ತಿರುವುದನ್ನು ಕಂಡು ತಾವು ಅವಳ ಪಕ್ಕದಲ್ಲಿ ಕುಸಿದು “ಮಾಧವಿ, ಮಾಧವಿ, ಎಂತ ಕೆಲ್ಸ ಮಾಡಿಕೊಂಡು ಬಿಡುತ್ತಿದ್ದಿಯೇ” ಜೋರಾಗಿ ಅತ್ತರು. ಕೈ ಬಿಟ್ಟೇ ಹೋದಳೆಂದು ಭಾವಿಸಿದ್ದ ಮಗಳು ಬದುಕಿದ್ದು ಅವಳು ಹುಟ್ಟಿದಾಗ ಅದೆಷ್ಟು ಸಂತೋಷ ಆಗಿತ್ತೊ ಅಷ್ಟೆ ಸಂತೋಷ ಆಗಿತ್ತು ಇಬ್ಬರಿಗೂ. ಕೇಶವನಿಗೆ ಮಗಳು ಸಾವಿನ ಮನೆ ತಟ್ಟಿ ಬಂದಿದ್ದು, ದೊಡ್ಡ ಅನಾಹುತದಿಂದ ಪಾರಾಗಿದ್ದು ,ಮಗಳು ಕಣ್ಣ ಮುಂದೆ ಇದ್ದರೆ ಅಷ್ಟೆ ಸಾಕು ಅನ್ನೊ ಮನಸ್ಥಿತಿ ತಲುಪಿ ಅವನ ಮನ ಪರಿವರ್ತನೆಗೆ ಕಾರಣ ವಾಯ್ತು. ಮಗಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕೇಶವ ” ಮಗಳೇ ನನ್ನ Pಕ್ಷಮಿಸಿ ಬಿಡು ತಾಯಿ, ಬಲವಂತವಾಗಿ ನಿನ್ನ ಮದ್ವೆ ಮಾಡೊ ಪ್ರಯತ್ನ ಮಾಡಲ್ಲ. ನಿನ್ನಷ್ಟದಂತೆ ಕಾಲೇಜಿಗೆ ಹೋಗು. ನಿನಗೆ ನಾಳೆನೇ ಸ್ಕೂಟಿ ಕೊಡಿಸುತ್ತೆನೆ. ಆದ್ರೆ ಸಾಯೋ ಪ್ರಯತ್ನ ಮಾತ್ರ ಮಾಡಬೇಡ. ನೀನು ಸತ್ತು ನಮ್ಮನ್ನೂ ಸಾಯಿಸ ಬೇಡಾ” ಮಗಳ ಮುಖ ಹಿಡಿದು ಬಿಕ್ಕಳಿಸಿದನು.
“ನೀನು ಸತ್ತರೆ ನಾವು ಬದುಕಿರುತ್ತೆವಾ ಮಾಧವಿ, ನೀನೇ ನಮ್ಮ ಜೀವಾ ಅಲ್ಲವಾ, ಎಂಥ ಕೆಲಸ ಮಾಡ್ಕಂಡು ಬಿಡ್ತಿದ್ದೆ. ಕಾಲೇಜಿಗೆ ಹೋಗೊ ವಿಚಾರನಾ ನೀನು ಇಷ್ಟೊಂದು ಗಂಭೀರವಾಗಿ ತಗೊಂಡುದ್ದಿಯಾ ಅಂತ ನಮ್ಗೆ ಗೊತ್ತಾಗಲೆ ಇಲ್ಲಾ, ನಿಮ್ಮಪ್ಪ ಬೇಡಾ ಅಂದ್ರೂ ನಾನು ಓದಿಸುತ್ತೆನೆ, ನಿಂಗೆ ಮದ್ವೆ ಬೇಡಾ ಅಂದ್ರೆ ಬೇಡ್ವೆ ಬೇಡಾ ಬಿಡು. ನಮ್ಮ ಕಣ್ಮಂದೆ ನೀನು ಇದ್ದರೆ ಸಾಕು ನಮಗೆ, ಆಯ್ತು ಮಗಳೇ, ಆದ್ರೆ ನಮ್ಮನ್ನ ಬಿಟ್ಟು ಹೋಗೊ ನಿರ್ಧಾರ ಮಾತ್ರ ಯಾವತ್ತು ಮಾಡ ಬೇಡ” ಮಗಳನ್ನು ತಬ್ಬಿ ವೇದಾ ಅತ್ತಳು.
ನಿಧಾನವಾಗಿ ಎದ್ದು ಕುಳಿತ ಮಾಧವಿಗೆ ಅಪ್ಪ ಅಮ್ಮ ಇಬ್ಬರೂ ತನ್ನನ್ನು ಕಾಲೇಜಿಗೆ ಕಳಿಸಲು ಮತ್ತು ತನ್ನಾಸೆಯಂತೆ ಸ್ಕೂಟಿ ಕೊಡಿಸಲು ಒಪ್ಪಿದ್ದು ಖುಷಿ ಒಂದೆಡೆ ಅದರೆ, ಅವರ ದುಃಖ ನೋಡಿ ಮತ್ತೊಂದಡೆ ದುಃಖ ಉಕ್ಕಿ ಬಂದು, ಅಯ್ಯೊ ನಾನೆಂಥ ಕೆಲ್ಸ ಮಾಡಿಕೊಂಡು ಬಿಡ್ತಿದ್ದೆ. ಕ್ಷಣದ ಆವೇಶದಲ್ಲಿ ದುಡುಕಿ ಅವರಿಬ್ಬರನ್ನು ಎಂತಾ ಕೂಪಕ್ಕೆ ತಳ್ಳಿ ಬಿಡ್ತಿದ್ದೆ. ನಾನು ಸತ್ತು ಹೋಗಿದ್ರೆ ಅಪ್ಪ ಅಮ್ಮ ಖಂಡಿತಾ ಬದುಕ್ತಾ ಇರಲಿಲ್ಲ. ನನ್ನ ಅವಿವೇಕಕ್ಕೆ ಹೆತ್ತವರನ್ನೂ ಬಲಿಯಾಗಿಸಿ ಬಿಡುತ್ತಿದ್ದೆ. ದೇವರೇ ನನ್ನ ಬದುಕಿಸಿ ಈ ಸತ್ಯನಾ ಅರ್ಥ ಮಾಡಿಸಿದ್ದಾನೆ. ನಾನು ಯಾವತ್ತು ಹೇಡಿಯಂತೆ ನಡ್ಕೊಳ್ಳಲ್ಲ ಅಂತ ಮನಸ್ಸಿನಲ್ಲಿ ಅಂದುಕೊಂಡು “ಸಾರಿ ಅಪ್ಪ, ಸಾರಿ ಅಮ್ಮ, ನನ್ನ ಕ್ಷಮಿಸಿ, ದುಡುಕಿ ಬಿಡುತ್ತಿದ್ದೆ. ಇನ್ಯಾವತ್ತೂ ಇಂಥ ಕೆಲ್ಸ ಮಾಡಲ್ಲ. ತಪ್ಪಾಯ್ತಪ್ಪ, ತಪ್ಪಾಯ್ತಮ್ಮ” ಅಪ್ಪ ಅಮ್ಮ ಇಬ್ಬರನ್ನೂ ಬೇಡಿಕೊಂಡಳು. ಅಲ್ಲಿದ್ದ ಊರಿನವರಿಗೂ ಅನಿರೀಕ್ಷಿತ ಪ್ರಕರಣ ಸುಖಾಂತ್ಯಾ ಕಂಡಿದ್ದು ಕಂಡು ನೆಮ್ಮದಿಯಾ ಉಸಿರು ಬಿಟ್ಟರು.
ಎನ್.ಶೈಲಜಾ ಹಾಸನ
ಕಥೆಯಲ್ಲಿ ಇನ್ನೂ ಸ್ವಲ್ಪ ಬಲವಾದ ಅಂಶ ಇರಬೇಕಿತ್ತು ಅನ್ನಿಸಿತು.ಕಥೆಯ ಹಂದರ ಚೆನ್ನಾಗಿದೆ. ಒಳಹುಗಳು ಜಾಸ್ತಿ ಆಯಿತು ಅನ್ನಿಸಿತು.ಕಥೆ ಚನ್ನಾಗಿದೆ.
ಧನ್ಯವಾದಗಳು
ಸುಂದರ ಕತೆ
ಆರಾಮಾಗಿ ಓದಿಸಿಕೊಂಡು ಹೋಯ್ತು..
ಧನ್ಯವಾದಗಳು
ಶೈಲಜಾ ಕಥೆ ಸರಳವಾಗಿ ಚನ್ನಾಗಿ ಮೂಡಿ ಬಂದಿದೆ